Wednesday, November 2, 2011

ಕನ್ನಡ ಕಂದಮ್ಮಗಳ ಕಷ್ಟಕಾರ್ಪಣ್ಯಗಳು ಮತ್ತು ಪರಿಹಾರೋಪಾಯಗಳು

ಕನ್ನಡ ಕಂದಮ್ಮಗಳ ಕಷ್ಟಕಾರ್ಪಣ್ಯಗಳು ಮತ್ತು ಪರಿಹಾರೋಪಾಯಗಳು

ನಾಡಿನ ಸಮಸ್ತ ಓದುಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು!


ಈ ಹಿಂದೆ ನವಂಬರ್ ಒಂದನೇ ತಾರೀಕು ಬರಬರುತ್ತಿದ್ದಂತೆಯೇ ನಮ್ಮ ಮೈಯ್ಯಲ್ಲೆಲ್ಲಾ ಒಂದು ರೀತಿಯ ಪುಳಕ ಉಕ್ಕುತ್ತಿತ್ತು. ನಮ್ಮ ಹೃದಯ ‘ಲಬ್ ಡಬ್’ ಎನ್ನುವುದನ್ನು ಬಿಟ್ಟು ‘ಕನ್ನಡ ಕನ್ನಡ’ ಎಂದು ಹೊಡೆದುಕೊಳ್ಳುತ್ತಿದ್ದವು. ದುರದೃಷ್ಟವಶಾತ್ ಇತ್ತೀಚಿನ ವರ್ಷಗಳಲ್ಲಿ ಈ ಹುರುಪು ಗಮನೀಯವಾಗಿ ಇಳಿಮುಖವಾಗುತ್ತಿರುವುದನ್ನೂ ನೀವು ಗಮನಿಸುತ್ತಿರಬಹುದು. ಚೌತಿಯಲ್ಲಿ ಗಣಪತಿಯನ್ನು ಕೂರಿಸಲು ಇರುವ ಉತ್ಸಾಹವೂ ರಾಜ್ಯೋತ್ಸವದಂದು ಇಲ್ಲದಾಗಿದೆಯಲ್ಲ? ನೋಡುನೋಡುತ್ತಿದ್ದಂತೆಯೇ ಕನ್ನಡ ಕಣ್ಮಣಿಗಳು ಕನ್ನಡದಿಂದ ವಿಮುಖರಾಗುತ್ತಿರುವರಲ್ಲ, ಇದಕ್ಕೆ ಕಾರಣಗಳೇನು ಎಂಬುದನ್ನು ಕಂಡುಹಿಡಿದು, ಇದಕ್ಕೆ ಪರಿಹಾರೋಪಾಯಗಳೇನಾದರೂ ಇರಬಹುದೇ ಎಂಬ ಬಗ್ಗೆ ನಾನು ಆಲೋಚಿಸಿದ್ದೇನೆ. ನನ್ನ ಪ್ರಕಾರ ಹೀಗೆ ಕನ್ನಡಕ್ಕೆ ಕೊಡಲಿ ಪೆಟ್ಟು ಬಿದ್ದಿರುವುದು ನಮ್ಮ ಇಂಗ್ಲೀಷ್ ವ್ಯಾಮೋಹದಿಂದಲೇ ಅನ್ನಿಸುತ್ತದೆ. ಎಲ್ಲಿ ನೋಡಿದರಲ್ಲಿ ಇಂಗ್ಲೀಷ್ ಶಾಲೆಗಳು, ಪೋಷಕರಲ್ಲಿ ತಮ್ಮ ಮಕ್ಕಳಿಗೆ ಅದೇ ಶಾಲೆಗಳಿಗಲ್ಲಿ ಸೀಟು ಗಿಟ್ಟಿಸಿ ಕೊಡಬೇಕೆಂಬ ತವಕ, ಅದಕ್ಕಾಗಿ ಸಾಲ ಮಾಡಿದರೂ ಅಡ್ಡಿಯಿಲ್ಲವೆಂಬ ಹತಾಶೆ... ಏನಾಗುತ್ತಿದೆ? ಇದು ಹೀಗೇ ಮುಂದುವರಿದರೆ ಕನ್ನಡ ಭುವನೇಶ್ವರಿಯ ಗತಿಯೇನು?

ವಿದ್ಯೆ ಅಂದರೆ ಈವತ್ತು ಇಂಗ್ಲೀಷ್ ಶಾಲೆಗಳಲ್ಲಿ ಮಕ್ಕಳು ಏನನ್ನು ಕಲಿಯುತ್ತಾರೋ ಅದೇ ಎಂದಾಗಿದೆ! ಹೀಗಾಗಿ ವಿದ್ಯೆ ಶ್ರೀಮಂತರ, ಬಲಿತವರ, ಅಲ್ಪರ, ಅಲ್ಪಸಂಖ್ಯಾತರ ಪಾಲಾಗುತ್ತಿದೆ. ಇಂಗ್ಲಿಷ್ ಶಾಲೆಗಳಿಗೆ ಪರವಾನಗಿ ಪಡೆದು ಹಣ ಮಾಡಿಕೊಳ್ಳುತ್ತಿರುವವರೂ ಅವರೇ! ಕರುನಾಡಿನ ಬೆನ್ನೆಲುಬಾಗಿರುವ ಹಳ್ಳಿಯ ಮಕ್ಕಳು ಏನಾಗಬೇಕು? ಇತ್ತೀಚೆಗೆ ನೋಡಿದರೆ ಕರ್ನಾಟಕದ ಸರ್ಕಾರಕ್ಕೂ ಈ ವಿಚಾರದಲ್ಲಿ ದಿಗಿಲು ಹತ್ತಿರುವಂತಿದೆ. ಎಲ್ಲಿ ತನ್ನ ಮಣ್ಣಿನ ಮಕ್ಕಳೂ ಇಂಗ್ಲಿಷ್ ಕಲಿತು ಬುದ್ಧಿವಂತರಾಗಿ ಬಿಡುತ್ತಾರೋ, ಎಲ್ಲಿ ಕೆಲಸವನ್ನು ಹುಡುಕಿಕೊಂಡು ಕರ್ನಾಟಕವನ್ನು ಬಿಟ್ಟು ಓಡಿಬಿಡುತ್ತಾರೋ, ಹೀಗೆ ಕರ್ನಾಟಕವೇ ಖಾಲಿಯಾಗಿ ಕೊನೆಗೆ ಎಲ್ಲಿ ತಾವೆಲ್ಲ ಮಣ್ಣು ತಿನ್ನಬೇಕಾಗುತ್ತದೋ ಎಂದು ಆಲೋಚಿಸಿ ಕಂಡಕಂಡಲ್ಲಿ ಕನ್ನಡ ಶಾಲೆಗಳನ್ನು ತೆರೆದು, ಎಲ್ಲರಿಗೂ ಬಿಟ್ಟಿ ಊಟ, ಬಟ್ಟೆ, ಪುಸ್ತಕ, ಅಲ್ಲದೆ ಮಲಗಲು ವಸತಿ ಒದಗಿಸಿ, ಖನ್ನಡವನ್ನು ಖಡ್ಡಾಯ ಮಾಡಿ ಉಳಿದವರು ಎಲ್ಲಾದರೂ ಹಾಳಾಗಿ ಹೋಗಲಿ, ಆರಕ್ಕೆ ಕನಿಷ್ಟ ನಾಲ್ಕು ಕೋಟಿಯಷ್ಟದರೂ ಹಳ್ಳಿಗಳಲ್ಲಿ ಜನ ಓಟು ಕೊಡಲು ಉಳಿದರೆ ಸಾಕು ಎಂದು ಆಲೋಚಿಸುತ್ತಿದ್ದಾರೆ.

ಎರಡೂವರೆ ಸಾವಿರ ವರ್ಷಗಳು, ಅಂದರೆ ಸುಮಾರು ಹನ್ನೆರಡು ಸಾವಿರ ತಲೆಮಾರುಗಳು, ಕನ್ನಡದ ಮಕ್ಕಳಿಗೆ ಕಲಿಯಲು ಯಾವುದೇ ತಂಟೆ ತಕರಾರುಗಳು ಇದ್ದಿಲ್ಲ. ಅದು ಇದ್ದಕ್ಕಿದ್ದಂತೆ ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿದೆ! ಇಷ್ಟಕ್ಕೂ ಕನ್ನಡದಲ್ಲಿಲ್ಲದ್ದು ಇಂಗ್ಲೀಷಿನಲ್ಲೇನಿದೆ? ನಮ್ಮ ಮಕ್ಕಳು ‘ಅ’ ಕಲಿಯುವುದಕ್ಕೆ ಮುಂಚೆಯೇ ‘ಎ’ ಕಲಿಯುತ್ತವಲ್ಲ, ಏನಿದರ ಮರ್ಮ? ಕನ್ನಡದಲ್ಲಾದರೆ ಒಂದೊಂದು ಅಕ್ಷರವನ್ನೂ ಬಳಪ-ಸ್ಲೇಟು ಸವೆಯುವವರೆಗೂ, ಕೈ ನೋವು ಬರುವವರೆಗೂ ತೀಡಿ-ತಿದ್ದಿ ಕಲಿಯಬೇಕು. ಅಡ್ಡಂಬಡ್ಡ, ಸೊಟ್ಟಸೊಟ್ಟ, ಸುರುಳಿಸುರುಳಿಯಾಕಾರದ ಅಕ್ಷರಗಳು, ಜೊತೆಗೆ ಐವತ್ತು ಅಕ್ಷರಗಳ ಮೇಲೆ-ಕೆಳಗೆ, ಅಕ್ಕ-ಪಕ್ಕ ಬಾಲಗಳು, ಕೊಂಬುಗಳು, ಒತ್ತುಗಳು... ಕನ್ನಡವನ್ನು ಕಲಿಯಲು ಯಾಕಿಷ್ಟು ಕಷ್ಟಕರವಾಗಿ ಮಾಡಿದರು? ಪ್ಯೂರ್ ಕಮ್ಯುನಿಸ್ಟರ ಭಾಷೆಯಲ್ಲಿ ಹೇಳಬೇಕೆಂದರೆ, ಇದು ನಿಸ್ಸಂಶಯವಾಗಿ ದಲಿತರು, ಕಾರ್ಮಿಕರು ಮತ್ತು ತುಳಿತಕ್ಕೊಳಗಾದವರು ಎಲ್ಲಿ ವಿದ್ಯೆ ಕಲಿತು ಬಂಡವಾಳಶಾಹಿಗಳಾಗಿ ಬಿಡುತ್ತಾರೋ ಎಂದು ಬೂರ್ಜ್ವಾಗಳು ಮಾಡಿಕೊಂಡ ಪುರೋಹಿತಶಾಹೀ ವ್ಯವಸ್ಥೆ! (ಅವರ ಪದಭಂಡಾರದ ಎಲ್ಲಾ ಪದಗಳನ್ನೂ ಬಳಸಿದ್ದೇನೆಂದು ಭಾವಿಸುತ್ತೇನೆ)

ಆದರೆ ಇಂಗ್ಲಿಷ್ ಎಷ್ಟು ಸುಲಭ! ಆಹಾ! ಎಂಥ ಚೆಂದ! ಚುಟುಕಾದ, ಮುದ್ದಾದ ಇಪ್ಪತ್ತಾರು ಅಕ್ಷರಗಳು! ಒಂದು ಸಾರಿ ನೋಡಿದರೇ ಸಾಕು, ತಲೆಯಲ್ಲಿ ನಿಂತುಬಿಡುತ್ತದೆ! ಇದನ್ನು ಭಾರತಕ್ಕೆ ಕಲಿಸಿದ ಆ ಆಂಗ್ಲರು ಎಷ್ಟು ಚತುರರು! ಅವರು ಅಷ್ಟು ಕಷ್ಟಪಟ್ಟು ಕಂಡುಹಿಡಿಯದೇ ಹೋಗಿದ್ದರೆ ಪಂಚ ದ್ರಾವಿಡ ಭಾಷೆಗಳು ಇವೆಯೆಂದು ನಮಗೆ ತಿಳಿಯುತ್ತಿತ್ತೇ? ಈವತ್ತು ಪರಿಶುದ್ಧ ದ್ರಾವಿಡರು ಎಲ್ಲಿದ್ದಾರೆ ಸ್ವಾಮಿ?

ಸಾವಿರಾರು ವರ್ಷಗಳ ಹಿಂದೆ ಆರ್ಯರು ನಮ್ಮ ದೇಶದ ಮೇಲೆ ಧಾಳಿಮಾಡಿದಾಗ, ಭಾರತದ ಆ ತುದಿಯಲ್ಲಿ ಅಪ್ಪಳಿಸಿದ ಸುನಾಮಿಯ ಅಲೆಗೆ ಕೊಚ್ಚಿಕೊಂಡು ಬಂದು ಈ ತುದಿಯಲ್ಲಿ ಮುಮ್ಮೂಲೆ ಪಾಲಾಗಿ ಬಿದ್ದಿರುವರಲ್ಲ ಆ ತಮಿಳರೇ ಅಲ್ಲವೆ ನಿಜ ದ್ರಾವಿಡರು! ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಲು ತಮಿಳರೇ ಅಲ್ಲವೆ ನಮಗೆಲ್ಲ ಪ್ರೇರಕರು! ಅಲ್ಲಿಯ ಮಕ್ಕಳು ತಮಿಳು ಮತ್ತು ಇಂಗ್ಲಿಷ್ ಭಾಷೆಗಳನ್ನು ಸರಿಸಮಾನವಾಗಿ ಕಲಿಯುತ್ತಿದ್ದಾರೆಂದರೆ ಅದಕ್ಕೊಂದು ಭರ್ಜರಿಯಾದ ಕಾರಣ ಇದ್ದೇ ಇದೆ. ಅದೇನೆಂದರೆ ಎಲ್ಲರೂ ತಮಿಳನ್ನು ಸುಲಭವಾಗಿ ಕಲಿಯಲು, ಅವರು ಆ ಭಾಷೆಯಲ್ಲಿ ಮಾಡಿದ ಮಾರ್ಪಾಡುಗಳು! ಆದ್ದರಿಂದ ನಮ್ಮ ಭಾಷೆಯನ್ನು ಮೂಲಭೂತವಾಗಿ ಪರಿಷ್ಕರಿಸುವ ಕಾಲ ಕೂಡಿಬಂದಿದೆ.

ಒಂದು ಭಾಷೆಯನ್ನು ಹೀಗೆ ಮ್ಯುಟೇಶನ್‌ಗೆ ಒಳಪಡಿಸಬೇಕಾದರೆ ಮೊದಲಿಗೆ ಆ ಭಾಷೆಯ ವರ್ಣಮಾಲೆಯನ್ನು ಸರಳೀಕರಣಗೊಳಿಸಬೇಕು. ಇದು ನಮ್ಮ ಮೊದಲ ಹೆಜ್ಜೆ. ನೀವು ನರ್ಸರಿ ಶಾಲೆ ಪಾಸು ಮಾಡಿದ ಮೇಲೆ, ನಮ್ಮ ವರ್ಣಮಾಲೆಯನ್ನು ಯಾವಾಗಲಾದರೂ ಕಣ್ಣೆತ್ತಿ ನೋಡಿದ್ದೀರಾ? ಬರೋಬ್ಬರಿ ಐವತ್ತು ಅಕ್ಷರಗಳು! ಅವಷ್ಟೇ ಕಲಿತರೆ ಸಾಕೆ? ಅದಾದ ಮೇಲೆ ಕಾಗುಣಿತ, ಒತ್ತಕ್ಷರಗಳು. ಒಟ್ಟು ಅಂದಾಜು ಆರು ನೂರ ಅರವತ್ತೆರಡು ವಿವಿಧ ಶೈಲಿಗಳ ಕಲೆಸು ಮೇಲೋಗರ. ಅದರಲ್ಲಿ ಯಾವ ಉಪಯೋಗಕ್ಕೂ ಬಾರದ ಸವಕಲು ಅಕ್ಷರಗಳೇ ಹೆಚ್ಚು! ಹಿಪ್ಪಿಗಳಂತೆ ತಲೆಗೂದಲು, ಗಡ್ಡ ಬೆಳೆದು ಕನ್ನಡದಲ್ಲಿ ಕಸವೇ ಹೆಚ್ಚಾಗಿ ಹೋಗಿದೆ. ಇದನ್ನು ಟ್ರಿಮ್ ಮಾಡಬೇಕೆಂದರೆ ಬರೇ ಕತ್ತರಿ-ಚಾಕು ಸಾಲದು, ಕೊಡಲಿಯೇ ಬೇಕು!

ನಾವು ಸ್ವರಗಳಿಂದ ಶುರು ಮಾಡೋಣ. ಅ, ಆ, ಇ, ಈ, ಉ, ಊ, ಋ, ೠ, ಎ, ಏ, ಐ, ಒ, ಓ, ಔ, ಅಂ, ಅಃ .... ಇವುಗಳಲ್ಲಿ ಋ ಮತ್ತು ೠ ಈಗಾಗಲೇ ಬಹಳ ಚರ್ಚೆಗೊಳಗಾಗಿ ಅಸ್ಪೃಶ್ಯ ಸ್ಥಾನವನ್ನು ಗಳಿಸಿವೆ. ಇನ್ನು ಅಯ್, ಅವ್, ಅಮ್, ಅಹ ಇವು ನನ್ನ ಪ್ರಕಾರ ಶುದ್ಧ ಸ್ವರಗಳೇ ಅಲ್ಲ. ಅಂದಮೇಲೆ ಅವುಗಳನ್ನು ನಿಸ್ಸಂಕೋಚವಾಗಿ ಕೈಬಿಡಬಹುದು. ಹೀಗಾಗಿ ನಮಗೆ ಉಳಿಯುವುದು ಹತ್ತು ಸ್ವರಗಳು ಮಾತ್ರ!

ಇನ್ನು ವ್ಯಂಜನಗಳ ಭಾಗ್ಯ. ಢಂ-ಭಂ, ಛಟ್-ಫಟ್, ಮುಂತಾದ ಉದ್ಗಾರ-ಉದ್ಘೋಷಗಳನ್ನು ಬಿಟ್ಟರೆ ಕನ್ನಡದಲ್ಲಿ ಮಹಾಪ್ರಾಣಗಳಿರುವ ಎಲ್ಲಾ ಪದಗಳೂ ಸಂಸ್ಕೃತಮೂಲದಿಂದಲೇ ಬಂದಿವೆ. ಸರಳವಾಗಿ, ಸೌಮ್ಯವಾಗಿ, ಶ್ವಾಸಕೋಶಗಳಿಗೆ ಹೆಚ್ಚು ಶ್ರಮವಾಗದಂತೆ ಕಲಿಯಬೇಕಾದರೆ ಈ ಮಹಾಪ್ರಾಣಿಗಳನ್ನು ದೂರ ಮಾಡಬೇಕು. ಮಕ್ಕಳ ಹಾರ್ಟಿಗೂ ಒಳ್ಳೆಯದು! ಆದ್ದರಿಂದ ಕನ್ನಡ ವರ್ಣಮಾಲೆಯಿಂದ ಖ, ಘ, ಛ, ಮುಂತಾದ ಅಕ್ಷರಗಳನ್ನು ಸಾರಾಸಗಟಾಗಿ ಕಿತ್ತುಹಾಕಬಹುದು. ಇದರಿಂದ ವ್ಯಂಜನಗಳ ಸಂಖ್ಯೆ ಏಕಾಏಕಿ ಅರ್ಧದಷ್ಟಾಗಿ ಬಿಡುತ್ತದೆ. ಉಳಿದಂತೆ ಙ, ಞ ಗಳು ಹೇಳಿ-ಕೇಳಿ ಯೂಸ್‌ಲೆಸ್ ಅಕ್ಷರಗಳು. ಅವಕ್ಕೆ ಹೆಚ್ಚು ಮಾತಿಲ್ಲದೆ ಗೇಟ್‌ಪಾಸ್ ಕೊಡಬಹುದು! ಇನ್ನು ‘ನ’ ಮತ್ತು ‘ಣ’ ತೆಗೆದುಕೊಳ್ಳೋಣ. ಕಲಿಯುವ ಹಸುಳೆಗಳು ಣ ಎನ್ನಲು ಹೇಳಿದರೆ ನ ಎನ್ನುವುದಿಲ್ಲವೆ? ‘ಬಣ್ಣ’ ಎಂದರೆ ‘ಬನ್ನ’ ಎಂದು ಹೇಳುವುದಿಲ್ಲವೆ? ಣ..ಣ..ಣ.. ಎಂದು ಹೇಳಲು ಆಗ್ರಹಿಸಿದರೆ ಯಾವ ಮಗುವಿಗೆ ತಾನೇ ಕಲಿಯುವ ಆಸಕ್ತಿಯಿರುತ್ತದೆ? ಹಾಗಾಗಿ ನಾವು ‘ಣ’ವನ್ನೂ ಕನ್ನಡ ವರ್ಣಮಾಲೆಯಿಂದ ತೆಗೆದುಹಾಕಬಹುದು. ಅಂತೂ ಈ ಪ್ರಕ್ರಿಯೆಯ ನಂತರ ನಮಗೆ ಉಳಿಯುವ ವ್ಯಂಜನಗಳು ಹನ್ನೆರಡು!

ಕೊನೆಯಲ್ಲಿ ಯ, ರ, ಲ, ವ, ಶ, ಷ, ಸ, ಹ, ಳ. ಇವುಗಳಲ್ಲಿ ‘ಶ’ ಮತ್ತು ‘ಷ’ಗಳು ಮಕ್ಕಳ ನಾಲಿಗೆಯ ಮೇಲೆ ಹೊರಳುವುದೇ ಕಷ್ಟ. ಈ ಅಕ್ಷರಗಳಿಗೆ ಬದಲಾಗಿ ‘ಸ’ ಒಂದನ್ನೇ ಬಳಸಬಹುದಾಗಿದೆ. ನಾವು ಹಿಂದೆ ವಿಶ್ಲೇಷಿಸಿದ ನ-ಣ ಪ್ರಮೇಯ ‘ಲ’ ಮತ್ತು ‘ಳ’ಗೂ ಅನ್ವಯಿಸುತ್ತದೆ. ಅಲ್ಲದೆ ಮೂಲ ಸಂಸ್ಕೃತದಲ್ಲೂ, ಗಮ್ಯ ಇಂಗ್ಲೀಷಿನಲ್ಲೂ ಇಲ್ಲದ ಳ ಕನ್ನಡಕ್ಕೇಕೆ? ಅದ್ದರಿಂದ ಳ ಬದಲು ಲವನ್ನು ಮಾತ್ರ ಉಳಿಸಿಕೊಳ್ಳಬಹುದು.

ಇದಾದ ಮೇಲೆ ನಿಮಗೆ ಒಂದು ಪ್ರಾಕ್ಟಿಕಲ್ ಪ್ರಯೋಗ: ನಿಮ್ಮ ಅಂಗೈಯನ್ನು ಬಾಯಿಯ ಮುಂದೆ ಹಿಡಿದು ಒಂದು ಸಾರಿ ಜೋರಾಗಿ ‘ಹ’ ಎಂದು, ನಂತರ ಉಸಿರೆಳೆದುಕೊಳ್ಳಿ. ಮೂಗಿಗೆ ಮಣ್ಣಿನ ವಾಸನೆ ಬಂತೆ? ಬರಲಿಲ್ಲ, ಅಲ್ಲವೆ? ಮತ್ತೊಂದು ಬಾರಿ ಪ್ರಯತ್ನಿಸಿ. ನೀವೆಷ್ಟೇ ಸಾರಿ ಪ್ರಯತ್ನಿಸಿದರೂ ‘ಹ’ಕ್ಕೆ ಮಣ್ಣಿನ ವಾಸನೆಯಿಲ್ಲ! ನೀವೇನೇ ಹೇಳಿ, ನಮ್ಮ ಅಳ್ಳಿಯ ಐಕಳು ಅಸು ಆಲನ್ನು ಕುಡಿದು ಆಡು ಆಡ್ಕೊಂಡು, ಆಟಾಡ್ಕೊಂಡು ಇದ್ದರೇ ಚೆನ್ನ ಅಲ್ಲವೆ? ಹೀಗಿರುವಾಗ ‘ಹ’ವನ್ನೂ ಬಿಟ್‌ಹಾಕಿ! ಇಷ್ಟೆಲ್ಲ ಪ್ರಯತ್ನದಿಂದ ನಮಗೆ ಉಳಿಯುವುದು ಯ, ರ, ಲ, ವ, ಸ.

ಕೊನೆಗೆ ಎಣ್ಣಿಸಿ: ಅ ಆ ಇ ಈ ಉ ಊ ಎ ಏ ಒ ಓ, ಕ ಗ ಚ ಜ ಟ ಡ ತ ದ ನ ಪ ಬ ಮ, ಯ ರ ಲ ವ ಸ. ಕನ್ನಡ ವರ್ಣಮಾಲೆಯಲ್ಲಿ ನೈಜ ಗುಣವುಳ್ಳ ಅಕ್ಷರಗಳು ಇಪ್ಪತ್ತೇಳು! ಬರೇ ಇಪ್ಪತ್ತೇಳು. ಇದು ಇಂಗ್ಲೀಷಿಗಿಂತ ಒಂದೇ ಅಕ್ಷರ ಹೆಚ್ಚು! ಪರವಾಗಿಲ್ಲ ಬಿಡಿ, ಕನ್ನಡ ಭಾಷೆ ಹೀಗೇ ‘ಬೆಳೆದರೆ’ ಇಂಗ್ಲೀಷನ್ನೂ ಮೀರುವ ಕಾಲ ದೂರವಿಲ್ಲ.

ಅಕ್ಷರಗಳ ಸಂಖ್ಯೆ ಕಡಿಮೆ ಮಾಡಿದ್ದಾಯಿತು. ಆದರೆ ಡೊಂಕು-ಸೊಂಕಾದ, ಉರುಟು-ಸುರುಳಿಗಳಿರುವ ಅಕ್ಷರಗಳನ್ನು ಕನ್ನಡ ಕಂದಮ್ಮಗಳು ಹೇಗೆ ಕಲಿತಾವು? ಅದಕ್ಕೊಂದು ಸುಲಭೋಪಾಯವನ್ನು ಕಂಡು ಹಿಡಿದಿದ್ದೇನೆ. ಎಲ್ಲಾ ಇಪ್ಪತ್ತೇಳು ಅಕ್ಷರಗಳನ್ನೂ ಒಂದೊಂದು ಸಣ್ಣ ಹಾಳೆಯಲ್ಲಿ ಬರೆದು, ಒಟ್ಟಿಗೆ ಪೇರಿಸಿ ಒಂದು ಟೇಬಲ್ಲಿನ ಮೇಲಿಡಿ. ಅದರ ಮೇಲೆ ಒಂದು ಕಾಟನ್ ಕರವಸ್ತ್ರವನ್ನು ಹರಡಿ ಮುಚ್ಚಿ. ನಿಮ್ಮ ಮನೆಯ ಇಸ್ತ್ರಿ ಪೆಟ್ಟಿಗೆಯನ್ನು ಕೆಂಪಗೆ ಕಾಯಿಸಿ ಅದರಿಂದ ಶಕ್ತಿ ಬಿಟ್ಟು ಒತ್ತಿ ಕನ್ನಡ ಅಕ್ಷರಗಳನ್ನು ಇಸ್ತ್ರಿ ಮಾಡಿ. ಈಗ ನೋಡಿ! ಕನ್ನಡದ ವರ್ಣಮಾಲೆ ಇಂಗ್ಲೀಷಿನ ಅಕ್ಷರಗಳಂತೆ ಹೇಗೆ ಮುದ್ದು ಮುದ್ದಾಗಿ ಒಣ ಕಡ್ಡಿಗಳ ಹಾಗೆ ಮೆರೆಯುತ್ತಿವೆ!

ಇನ್ನು ಬಿಡಿ. ಯಾವ ಮಗುವೂ ಇಂಗ್ಲೀಷನ್ನು ತಲೆಯೆತ್ತಿಯೂ ನೋಡುವುದಿಲ್ಲ. ಕಲಿಯಲು ಸುಲಭವಾದ, ಯಾವುದೇ ಕಷ್ಟವಿಲ್ಲದೆ ನೆನಪಿನಲ್ಲಿಟ್ಟುಕೊಳ್ಳಬಹುದಾದ ಮಿನಿ ಕನ್ನಡ ನಮ್ಮದಾಗುವ ಕಾಲ ದೂರವಿಲ್ಲ.

ಮತ್ತೊಮ್ಮೆ ನಿಮಗೆಲ್ಲ ರಾಜ್ಯೋತ್ಸವದ ಶುಭಾಶಯಗಳು.

ಜೈ ಭುವನೇಶ್ವರಿ! ಸಿರಿಗನ್ನಡಮ್ ಗೆಲ್ಗೆ!