Wednesday, March 11, 2026

ನನ್ನ ಎನ್‌ಸಿಸಿ ದಿನಗಳು

 ನನ್ನ ಎನ್‌ಸಿಸಿ ದಿನಗಳು

ನಾನು ಹೈಸ್ಕೂಲು ಓದಿದ್ದು ಮೈಸೂರಿನ ಮಹಾಜನ ಪ್ರೌಢಶಾಲೆಯಲ್ಲಿ. ಅಲ್ಲಿ ನೌಕಾದಳದ ಎನ್‌ಸಿಸಿ ಘಟಕವಿತ್ತು. ಹಾಗಾಗಿ ಹೈಸ್ಕೂಲಿನಿಂದಲೇ ನಾನೊಬ್ಬ ಎನ್‌ಸಿಸಿ ಕೆಡೆಟ್ (ಕನ್ನಡದಲ್ಲಿ ಹೇಳುವುದಾದರೆ, ಯುವ ಸೈನಿಕ!)

ಪ್ರತಿ ಶನಿವಾರ ಬೆಳಿಗ್ಗೆ ಏಳು ಗಂಟೆಗೆ ಅವರು ಕೊಟ್ಟ ಯೂನಿಫಾರ್ಮ್ ಧರಿಸಿಕೊಂಡು ಶಾಲೆಗೆ ಹೋಗಬೇಕಿತ್ತು. ಅವರ ಲೆಕ್ಕದಲ್ಲಿ ಅದು ನಮಗೆ ಶಿಸ್ತಿನ ಪಾಠ; ಆದರೆ ಅದು ನಮಗೆ ಶಿಕ್ಷೆ! ಪಕ್ಕದ ಮನೆಯಲ್ಲಿಯೇ ಇದ್ದ ಜಗದೀಶನೂ ನನ್ನೊಂದಿಗೇ ಬರುತ್ತಿದ್ದ. ಶನಿವಾರ ಬೆಳಿಗ್ಗೆ ಹೊತ್ತಿಗೆ ಮುಂಚೆ ಅವನು ಬಂದು ನನ್ನನ್ನು ಎಬ್ಬಿಸುತ್ತಿದ್ದ ಅಥವಾ ನಾನು ಹೋಗಿ ಅವನನ್ನು ಎಬ್ಬಿಸುತ್ತಿದ್ದೆ.

ಇದಾದ ಮೇಲೆ ಪಿಯುಸಿಯನ್ನು ಬೆಂಗಳೂರಿನ ಬಸವನಗುಡಿಯ ನ್ಯಾಶನಲ್ ಕಾಲೇಜಿನಲ್ಲಿ ಓದಿದೆ. ಆ ಕಾಲೇಜಿನಲ್ಲಿಯೂ ನೌಕಾದಳದ ಎನ್‌ಸಿಸಿ ಘಟಕವೇ ಇದ್ದುದರಿಂದ ಅದನ್ನೇ ಆರಿಸಿಕೊಂಡೆ. ಆ ಕಾಲದಲ್ಲಿ ನೌಕಾದಳದ ಎನ್‌ಸಿಸಿ ಯೂನಿಫಾರ್ಮ್ ಎಂದರೆ, ಬಿಳಿ ಬಣ್ಣದ ಚಡ್ಡಿ, ಶರ್ಟು, ಬೆಲ್ಟ್ ಮತ್ತು ಶೂಗಳು. ತಿಂಗಳಿಗೆ ಒಂದು ಬಾರಿ ನಮ್ಮ ಬಟ್ಟೆ ಒಗೆದುಕೊಳ್ಳಲು ಒಂದು ತುಂಡು ಸೋಪು ಮತ್ತು ಶೂಗಳಿಗೆ ಒಂದು ಡಬ್ಬಿ ಪಾಲಿಶ್ ಕೊಡುತ್ತಿದ್ದರು. ಮರದ ಕೊರಡಿನಂತಿರುತ್ತಿದ್ದ ಆ ಸೋಪನ್ನು ಯಾವ ಕಾರ್ಖಾನೆಯಲ್ಲಿ ತಯಾರಿಸುತ್ತಿದ್ದರೋ! ಎಷ್ಟು ಉಜ್ಜಿದರೂ ನೊರೆ ಬರುತ್ತಿರಲಿಲ್ಲ; ನೀರಿನಲ್ಲಿಯೇ ಒಂದು ವಾರ ನೆನೆಸಿಟ್ಟರೂ ಒಂದಿಷ್ಟೂ ಮೆತ್ತಗೆ ಆಗುತ್ತಿರಲಿಲ್ಲ! ಅದರೊಂದಿಗೆ ಹೆಣ ಭಾರದ ಶೂಗಳು! ಅವೆಲ್ಲವನ್ನೂ ಹೊತ್ತುಕೊಂಡು ಮಾರ್ಚ್ ಮಾಡಬೇಕಿತ್ತು. 

  ನೇವಲ್ ವಿಂಗ್‌ನ ಪ್ರಮುಖ ಅಂಶಗಳು:                                                                                                                                                              ಎನ್‌ಸಿಸಿ ನೇವಲ್ ವಿಂಗ್ ಯುವಕರಲ್ಲಿ ಶಿಸ್ತು, ದೇಶಭಕ್ತಿ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ತ್ರಿ-ಸೇವಾ ಸಂಘಟನೆಯ (ಆರ್ಮಿ, ನೇವಿ, ಏರ್ ಫೋರ್ಸ್) ಒಂದು ಭಾಗವಾಗಿದೆ. ನೇವಲ್ ವಿಂಗ್ ಕೆಡೆಟ್‌ಗಳು ಈಜು, ನೌಕಾಯಾನ, ದೋಣಿ ಚಾಲನೆ, ಮತ್ತು ರಿಗ್ಗಿಂಗ್ ಮುಂತಾದ ವಿಶೇಷ ತರಬೇತಿಗಳನ್ನು ಪಡೆಯುತ್ತಾರೆ.                                                                                           ಸ್ಥಾಪನೆ: ಭಾರತದಲ್ಲಿ ಎನ್‌ಸಿಸಿ ನೇವಲ್ ವಿಂಗ್ ಜುಲೈ ೧೯೫೨ ರಲ್ಲಿ ಸ್ಥಾಪನೆಯಾಯಿತು.                                                                   ತರಬೇತಿ: ಸೈದ್ಧಾಂತಿಕ ತರಬೇತಿಯೊಂದಿಗೆ ಕಡಲ ಚಟುವಟಿಕೆಗಳು, ಶಸ್ತ್ರಾಸ್ತ್ರ ತರಬೇತಿ, ಮತ್ತು ನಾಯಕತ್ವದ ತರಬೇತಿ ನೀಡಲಾಗುತ್ತದೆ.                                                                                                                                                                                             ಕರ್ನಾಟಕದಲ್ಲಿ: ಕರ್ನಾಟಕದಲ್ಲಿ ೮ ಕರ್ನಾಟಕ ನೇವಲ್ ಯೂನಿಟ್ ಮತ್ತು ಬೆಂಗಳೂರಿನಲ್ಲಿ 'ಎ' ಗ್ರೂಪ್‌ನ ಅಡಿಯಲ್ಲಿ ನೇವಲ್ ಸಬ್ ಯೂನಿಟ್‌ಗಳು ಕಾರ್ಯನಿರ್ವಹಿಸುತ್ತವೆ.                                                                                                                                   ಅವಕಾಶಗಳು: ಕೆಡೆಟ್‌ಗಳು ರಾಷ್ಟ್ರೀಯ ಮಟ್ಟದ ಶಿಬಿರಗಳಲ್ಲಿ ಪಾಲ್ಗೊಳ್ಳಬಹುದು.                                                                            ಪ್ರಯೋಜನಗಳು: 'ಸಿ' ಪ್ರಮಾಣಪತ್ರ ಪಡೆದವರು ಸೇನಾ ವಿಶೇಷÀ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು.                                                            ಈ ವಿಭಾಗವು ಕೆಡೆಟ್‌ಗಳಲ್ಲಿ ಶಿಸ್ತು ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡುತ್ತದೆ.

ನಮ್ಮ ಎಲ್ಲ ಎನ್‌ಸಿಸಿ ತರಬೇತಿ ಅಧಿಕಾರಿಗಳೂ ಹಿಂದಿ ಪಂಡಿತರಾಗಿದ್ದರು. ಅವರು ಹೇಳುತ್ತಿದ್ದ ಮಾತುಗಳು ನಮಗೆ ಸಂಪೂರ್ಣವಾಗಿ ಅರ್ಥವಾಗುತ್ತಿರಲಿಲ್ಲ. ಅವರ ಹಾವಭಾವವನ್ನು ಗಮನಿಸಿ ಅಥವಾ ಉಳಿದವರು ಮಾಡುತ್ತಿದ್ದುದನ್ನು ನೋಡಿ ನಾವೂ ಹೆಜ್ಜೆ ಹಾಕುತ್ತಿದ್ದೆವು! ಸಾವಧಾನ್, ವಿಶ್ರಾಮ್, ಎಡ-ಬಲಕ್ಕೆ, ಹಿಂದಕ್ಕೆ ತಿರುಗುವುದು, ಮಾರ್ಚ್ ಮಾಡುವುದು, ಮುಂತಾದ ಆದೇಶಗಳೆಲ್ಲ ಒಂದು ವ್ಯವಸ್ಥಿತ ಕ್ರಮದಲ್ಲಿಯೇ ಇರುತ್ತಿದ್ದವು. ಹಾಗಾಗಿ ಆ ಆಫೀಸರ್‌ಗಳು ಅತ್ಯಂತ ಕಠೋರ ಮತ್ತು ಏರುಧ್ವನಿಯಲ್ಲಿ ‘ಪ್ಲಟೂನ್! ಪೀಛೇ.Ã.Ã .. .. ಮುಡ್!!’ ಎಂದು ನಮಗೆ ಕಮಾಂಡ್ ಕೊಟ್ಟರೆ, ಒಂದಿಷ್ಟೂ ಅರ್ಥವಾಗದಿದ್ದರೂ ಏನು ಮಾಡಬೇಕೆಂದು ತಿಳಿಯುತ್ತಿತ್ತು! 

ಇವಲ್ಲದೆ ಭಾರತೀಯ ನೌಕಾಪಡೆಯ ವಿವಿಧ ರೀತಿಯ ಕವಾಯಿತು, ಸ್ವರಕ್ಷಣೆಯ ವಿಧಾನಗಳು, ಯುದ್ಧನೌಕೆಗಳ ಪರಿಚಯ, ಕೈಸನ್ನೆಗಳು, ಮುಂತಾದ ಅನೇಕ ತರಬೇತಿಗಳನ್ನು ನಮಗೆ ನೀಡಿದ್ದರು.  

ಈ ಅತ್ಯಗತ್ಯ ಹಾಗೂ ಮುಖ್ಯವಾದ ತರಬೇತಿಗಳೊಂದಿಗೆ ನಮಗೆ ಇನ್ನೂ ಕೆಲವು ವಿಶೇಷವಾದ ಕೌಶಲ್ಯಗಳನ್ನೂ ಕಲಿಸಿದರು. ಬೆಂಗಳೂರಿನ ಅಲಸೂರು ಕೆರೆಯಲ್ಲಿ ದೋಣಿ ನಡೆಸುವ ಶಿಕ್ಷಣವೂ ಅದರಲ್ಲಿ ಸೇರಿತ್ತು. ಎನ್‌ಸಿಸಿ ತರಬೇತಿಯಿಂದಾಗಿ ಮೊದಲ ಬಾರಿಗೆ ನಾನು ದೋಣಿ ಹುಟ್ಟು ಹಾಕುವುದನ್ನು ಕಲಿತೆ. ಅದೊಂದು ರೋಮಾಂಚನಕಾರಿ ಅನುಭವ!

ಎನ್‌ಸಿಸಿ ಕೆಡೆಟ್‌ಗಳಿಗೆÀ ರೈಫಲ್ ಶೂಟಿಂಗ್ ಕಲಿಸಿದ್ದು ಎನ್‌ಸಿಸಿ ತರಬೇತಿಯ ಮತ್ತೊಂದು ಮರೆಯಲಾಗದ ಅನುಭವ. ರೈಫಲ್‌ಗಳನ್ನು ಹಿಡಿದು, ಮಾರ್ಚ್ ಮಾಡುವುದನ್ನು ಕಾಲೇಜಿನ ಮೈದಾನದಲ್ಲಿಯೇ ಕಲಿತಿದ್ದೆವು. ಮಣ ಭಾರದ ರೈಫಲ್ ಮತ್ತು ಶೂಗಳನ್ನು ಹೊತ್ತುಕೊಂಡು ನಡೆಯುವುದೇ ಸಾಹಸದ ಮಾತು!

ರೈಫಲ್ ಶೂಟಿಂಗ್ ತರಬೇತಿಯ ದಿನ ಸುಮಾರು ಮೂವತ್ತು ಎನ್‌ಸಿಸಿ ಕೆಡೆಟ್‌ಗಳನ್ನು ಅವರ ವಾಹನದಲ್ಲಿ, ಬಹುಶಃ ನಂದಿ ಬೆಟ್ಟದ ತಪ್ಪಲಿಗೆ, ಕರೆದುಕೊಂಡು ಹೋದರು. ಮೊದಲಿಗೆ ಪ್ರತಿಯೊಬ್ಬ ಕೆಡೆಟ್‌ಗೂ ಒಂದೊAದು ಚರ್ಮದ ಚಾದರ, ಮರಳು ಹೊಟ್ಟಿನ ದಿಂಬು, ರೈಫಲ್, ಜೊತೆಗೆ ಐದು ಲೈವ್‌ಬುಲೆಟ್‌ಗಳಿದ್ದ ಒಂದೊAದು ಮ್ಯಾಗಜೀನ್ ಕೊಟ್ಟರು. ಒಂದು ಬಾರಿಗೆ ಹತ್ತು ಕೆಡೆಟ್‌ಗಳು ಚಾದರವನ್ನು ಹಾಸಿಕೊಂಡು ಅದರ ಮೇಲೆ ಕಾಲು ನೀಡಿ ಮಲಗಬೇಕು. ಸುಮಾರು ಮುನ್ನೂರು ಅಡಿ ದೂರದಲ್ಲಿ ಹತ್ತು ಗುರಿಚಕ್ರಗಳನ್ನು ಇರಿಸಲಾಗಿತ್ತು.

ನಂತರ ಕ್ರಮಬದ್ಧವಾಗಿ, ಸ್ಟೆಪ್ ಬೈ ಸ್ಟೆಪ್, ಕಮಾಂಡ್ ಕೊಟ್ಟಂತೆಲ್ಲ, ೧. ನಾವು ಗುಂಡು ಮದ್ದು ಇದ್ದ ಮ್ಯಾಗಜೀನ್‌ನ್ನು ಚೇಂಬರ್‌ಗೆ ತುಂಬಬೇಕು. ೨. ರೈಫಲ್‌ನ ಬ್ಯಾರಲ್‌ನ್ನು ಮರಳು ಹೊಟ್ಟಿನ ದಿಂಬಿನ ಮೇಲಿಡಬೇಕು. ೩. ರೈಫಲ್‌ನ ಬುಡವನ್ನು ನಮ್ಮ ಬಲ ಭುಜಕ್ಕೆ ಭದ್ರವಾಗಿ ಆನಿಸಿಕೊಂಡು ಗ್ರಿಪ್‌ನಲ್ಲಿ ಹಿಡಿದುಕೊಳ್ಳಬೇಕು. ೪. ಗುರಿಚಕ್ರಕ್ಕೆ ಗುರಿ ಇಡಬೇಕು. ೫. ‘ಶೂಟ್’ ಎಂದು ಕಮಾಂಡ್ ಕೊಟ್ಟೊಡನೆ ಎಲ್ಲರೂ ಬಂದೂಕಿನ ಕುದುರೆಯನ್ನು ಎಳೆಯಬೇಕು. ಪ್ರತಿಯೊಂದು ಹಂತದಲ್ಲಿಯೂ ಆಫೀಸರ್‌ಗಳು ಹಿಂದಿನಿAದ ನಮಗೆ ಅವರ ಉದ್ದನಾದ ಕೋಲಿನಿಂದ ಚುಚ್ಚಿ-ತಟ್ಟಿ ಎಚ್ಚರಿಸಿ, ಸರಿಪಡಿಸುತ್ತಿದ್ದರು.

ಅಲ್ಲಿಯವರೆಗೆ ನಮ್ಮ ಎಲ್ಲ ತರಬೇತಿ ಮಂತ್ರಗಳೂ ಸುಸೂತ್ರವಾಗಿಯೇ ಸಾಗಿದವು. ನಾನಂತೂ ಬಹಳ ಉತ್ಸುಕತೆಯಿಂದ ಟ್ರಿಗರ್ ಎಳೆಯುವುದನ್ನೇ ಕಾಯುತ್ತಿದ್ದೆ. ಮೊಟ್ಟ ಮೊದಲ ಬಾರಿ ಢಂ ಎಂದು ಗುಂಡು ಹಾರಿದೊಡನೆ ನನ್ನ ಮೆದುಳಿನಲ್ಲಿ ಇದ್ದಕ್ಕಿದ್ದಂತೆ ಮಿಂಚು ಕಂಡಿತು. ಕಿವಿಯಲ್ಲಿ ಕುಂಞ್ ಎಂಬ ಶಬ್ದವೂ ಕೇಳಿದಂತಾಯಿತು. ನನ್ನ ಬಲಭುಜಕ್ಕೆ ಯಾರೋ ಬಾರುಕೋಲಿನಿಂದ ರಭಸದಿಂದ ಹೊಡೆದಂತೆ ತೋರಿತು. ನಾನು ಮಲಗಿದ್ದ ಚಾದರ ಜರಕ್ಕನೆ ಅರ್ಧ ಅಡಿ ಹಿಂದಕ್ಕೆ ಸರಿಯಿತು. ಇವಿಷ್ಟೂ ಕ್ಷಣಾರ್ಧದಲ್ಲಿ ನಡೆದುಹೋದವು! 

ರಿಕಾಯ್ಲ್, ಎಂಬುದನ್ನು ಕನ್ನಡದಲ್ಲಿ ‘ಹಿಂದೊದೆ’ ಎಂದು ಧಾರಾಳವಾಗಿ ಕರೆಯಬಹುದು! ಒಂದು ಗುಂಡು ಹೊಡೆದರೆ ಈ ರೀತಿಯ ರಿಕಾಯ್ಲ್, ಆಗುವುದೆಂದು ಎನ್‌ಸಿಸಿ ಆಫೀಸರ್‌ಗಳು ಈ ಮೊದಲೇ ನಮಗೆಲ್ಲ ಸಾಕಷ್ಟು ಬಾರಿ ಎಚ್ಚರ ಹೇಳಿದ್ದರೂ, ಮಿಂಚಿನ ವೇಗದಲ್ಲಿ ನಡೆದು ಹೋದ ಸಂಭವಗಳು ನನಗೆ ನೋವಿನೊಂದಿಗೆ ಗಾಬರಿಯೂ ಆಗಿತ್ತು.

ನಾನು ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕಿದೆ:                                                                                                                                                ಒಂದು ಗುಂಡುಮದ್ದಿನ ಭಾರ = ೧೦ ಗ್ರಾಂ                                                                                                                                          ಚಾದರದ ಮೇಲೆ ಮಲಗಿದ್ದ ನಮ್ಮ ಒಟ್ಟು ಭಾರ (ರೈಫಲ್ ಮತ್ತು ಶೂ ಸೇರಿ) = ೫೦ ಕಿಲೋಗ್ರಾಂ                                                        ಬುಲೆಟ್ ಸಾಧಿಸಿದ ದೂರ = ~ ೧೦೦೦ ಮೀಟರ್                                                                                                                                      ಹಾಗಾಗಿ ಘರ್ಷಣಾರಹಿತ ನೆಲದಲ್ಲಿ, ಚಾದರದ ರಿಕಾಯ್ಲ್ ದೂರ = ೨೦ ಸೆಂಮೀ!                                                                                  ಇಂಗ್ಲೇAಡಿನಲ್ಲಿ ಓದಿದ ನ್ಯೂಟನ್‌ನ ಕಾಲೇಜಿನಲ್ಲಿ ಎನ್‌ಸಿಸಿ ಇದ್ದಿರಲಾರದು. ಇದ್ದಿದ್ದರೆ ಆತ ತನ್ನ ಮೂರನೆ ನಿಯಮಕ್ಕೆ ರೈಫಲ್ ಶೂಟಿಂಗ್‌ನ್ನೇ ಉದಾಹರಣೆಯಾಗಿ ಕೊಡುತ್ತಿದ್ದ. ನ್ಯೂಟನ್ ಎಂತಹ ಅದೃಷ್ಟವಂತ!

ರೈಫಲ್‌ನಲ್ಲಿ ಇನ್ನೂ ನಾಲ್ಕು ಗುಂಡುಮದ್ದುಗಳು ಬಾಕಿ ಇದ್ದವಲ್ಲ! ಅಧಿಕಾರಿಗಳ ಘರ್ಜನೆಗೆ ಅನುಗುಣವಾಗಿ ಅವುಗಳನ್ನೂ ಹಾರಿಸುವುದರೊಳಗೆ ನನಗೆ ಸಾಕುಸಾಕಾಗಿ ಹೋಯಿತು. ಎಲ್ಲವೂ ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ ಮತ್ತೊಂದು ಕಮಾಂಡ್ ಕೊಟ್ಟರು. ಅದೇನೆಂದರೆ, ನಾವು ಹತ್ತೂ ಕೆಡೆಟ್‌ಗಳೂ ಓಡಿಕೊಂಡು ಹೋಗಿ, ಗುರಿಚಕ್ರದ ಸಮೀಪದಲ್ಲಿ ಬಿದ್ದಿರುವ, ನಾವು ಹಾರಿಸಿದ ಐದೈದು ಗುಂಡಿನ ಬುಲೆಟ್‌ನ್ನು ಹೆಕ್ಕಿಕೊಂಡು ಬರಬೇಕು! ನಮ್ಮೊಂದಿಗೆ ಇಬ್ಬರು ಅಧಿಕಾರಿಗಳೂ ಬಂದು, ನಾವು ಹೊಡೆದ ಗುಂಡುಗಳಲ್ಲಿ ಎಷ್ಟು ಬುಲೆಟ್‌ಗಳು ಗುರಿ ತಟ್ಟಿವೆ ಎಂದು ಬರೆದುಕೊಂಡರು. ಮೊದಲ ಹತ್ತು ಮಂದಿಯಲ್ಲಿ ಇಬ್ಬರು ಕೆಡೆಟ್‌ಗಳು ಐದಕ್ಕೆ ಐದು ಗುರಿ ಸಾಧಿಸಿದ್ದರು. ಅವರಲ್ಲಿ ನಾನೂ ಒಬ್ಬ! 

ಎಲ್ಲರೂ ಹಿಂದಿರುಗಿದೆವು. ಬಲ ಭುಜದ ನೋವಿನ ಜೊತೆಗೆ ಮಂಡಿ ನೋವು, ಕಾಲು ನೋವು ಸೇರಿಕೊಂಡು ಬಹಳ ಕಾಡುತ್ತಿತ್ತು. ಈ ರೈಫಲ್ ಟ್ರೆöÊನಿಂಗ್ ಒಂದು ಸಾರಿ ಮುಗಿದು, ಮನೆ ಸೇರಿದರೆ ಸಾಕು ಎನ್ನಿಸಿಬಿಟ್ಟಿತು. ನಾವು ಹಿಂದೆ ನಿಂತು ನೋಡುತ್ತಿರುವಂತೆ ಉಳಿದ ಇಪ್ಪತ್ತು ಕೆಡೆಟ್‌ಗಳೂ ಅದೇ ಕ್ರಮದಲ್ಲಿ ತಲಾ ಐದೈದು ಗುಂಡುಗಳನ್ನು ಹಾರಿಸಿ ಮೈ ಕೈ ಕಾಲು ನೋವು ತರಿಸಿಕೊಂಡರು. ಕೆಲವರಿಗಂತೂ ಮೈಯಲ್ಲಿ ಕೆಲವು ಕಡೆ ತರಚಿ ಗಾಯವೂ ಆಗಿತ್ತು! ಯಾರೂ ಕೂಡ ಸರಿಯಾಗಿ ಗುರಿಯಿಟ್ಟು ಹೊಡೆದೇ ಇರಲಿಲ್ಲ.

ಕೊನೆಯಲ್ಲಿ ನನ್ನನ್ನೂ ಸೇರಿಸಿ, ಟಾರ್ಗೆಟ್‌ಗೆ ಗುರಿಯಿಟ್ಟು ಹೊಡೆದ ಐದೇ ಐದು ಕೆಡೆಟ್‌ಗಳನ್ನು ಸಾಲಾಗಿ ನಿಲ್ಲಿಸಿದರು. ಒಬ್ಬ ಅಧಿಕಾರಿ ನಮ್ಮೆöÊವರನ್ನೂ ಉದ್ದೇಶಿಸಿ, ನೀವು ಎನ್‌ಸಿಸಿಯಲ್ಲಿ ಇದೇ ರೀತಿ ತರಬೇತಿ ಪಡೆದು, ಇದೇ ರೀತಿ ಗುರಿ ಸಾಧಿಸುತ್ತಾ ಹೋದರೆ, ನಿಮಗೆ ಭಾರತದ ಸೈನ್ಯದಲ್ಲಿ ಒಳ್ಳೆಯ ಭವಿಷ್ಯವಿದೆ; ಭಾರತಾಂಬೆಯ ಸೇವೆ ಸಲ್ಲಿಸಲು ನೀವೆಲ್ಲ ಇಂದಿನಿAದಲೇ ಟೊಂಕಕಟ್ಟಿ ನಿಲ್ಲಬೇಕು ಎಂದು ನಮ್ಮನ್ನು ಹೊಗಳಿದರು. ಉಳಿದವರೆಲ್ಲ ಜೋರಾಗಿ ಚಪ್ಪಾಳೆ ತಟ್ಟಿದರು. ನನಗಂತೂ ಅಲ್ಲಿಯೇ ವೀರಚಕ್ರ ಗಳಿಸಿದಷ್ಟು ಸಂತೋಷವಾಗಿತ್ತು!

ಇದಾದ ಮೇಲೆ ನಾವು ಐದು ಮಂದಿಗೆ ವಿಶೇಷ ಬಹುಮಾನ ಘೋಷಿಸಿದರು. ಎಲ್ಲರ ಕೈಗೆ ಇನ್ನೊಮ್ಮೆ ಐದು ಗುಂಡುಗಳಿದ್ದ ಒಂದೊAದು ಮ್ಯಾಗಜಿನ್ ಕೊಟ್ಟರು. ಎಲ್ಲರ ಸಮ್ಮುಖದಲ್ಲಿ ನಾವು ಪುನಃ ಚಾದರದ ಮೇಲೆ ಮಲಗಿ, ಪುನಃ ಅದೇ ಅಧಿಕಾರಿಗಳ ಕಮಾಂಡ್‌ಗಳಿಗೆ ಅನುಸಾರವಾಗಿ, ಮತ್ತೊಮ್ಮೆ ಐದು ಸುತ್ತು ಗುಂಡು ಹಾರಿಸಿದೆವು! ಈ ಬಾರಿ ಯದ್ವಾತದ್ವಾ ಹೊಡೆದದ್ದರಿಂದ ಅವುಗಳಲ್ಲಿ ಒಂದಾದರೂ ಬುಲೆಟ್ ಗುರಿ ತಲುಪಿರಲಿಲ್ಲ! ಶುರುವಿನಲ್ಲಿ ಬಹುಮಾನವನ್ನು ಘೋಷಿಸಿದ್ದರೆ, ನಾವು ಯಾರೂ ಮೊದಲ ಸುತ್ತಿನಲ್ಲಿಯೇ ಗುರಿನೋಡುವ ಉಸಾಬರಿಗೆ ಹೋಗುತ್ತಿರಲಿಲ್ಲವೇನೋ!

ಮೊದಲೇ ನನ್ನ ಮೈಕೈಕಾಲು ನೋವಿನಿಂದ ನಜ್ಜುಗುಜ್ಜಾಗಿ ಸಾಕುಸಾಕಾಗಿ ಹೋಗಿತ್ತು. ಜೊತೆಗೆ ರೈಫಲ್‌ನ ಬಟ್ ಭುಜಕ್ಕೆ ಉಜ್ಜಿ ಉಜ್ಜಿ ಗಾಯವೂ ಆಗಿತ್ತು. ಎಲ್ಲದರಿಂದ ಸುಧಾರಿಸಿಕೊಳ್ಳಲು ಒಂದು ವಾರವೇ ಬೇಕಾಯಿತು! ಎನ್‌ಸಿಸಿಯಲ್ಲಿ ನಾನು ಎಷ್ಟೇ ಪರಿಪಾಡಲು ಪಟ್ಟಿರÀಲಿ, ಆ ದಿನಗಳು ನನ್ನ ಮನಃಪಟಲದಲ್ಲಿ ಸದಾ ಹಸಿರಾಗಿಯೇ ಇರುತ್ತವೆ.                                                                                                                                    (ಕೃತಕ ಬುದ್ಧಿಮತ್ತೆ ಬಳಸಿ ರಚಿಸಿದ ಚಿತ್ರ)

                                                                                                                                                                    ಬುಧವಾರ, ೧೧ ಮಾರ್ಚ್ ೨೦೨೬


No comments: