Friday, October 30, 2009

ಕನ್ನಡ ಭಾಷೆಯ ಹೆಗ್ಗಳಿಕೆ

ಕನ್ನಡ ಸಾಹಿತ್ಯ ಪರಿಷತ್ತು, ವೀರಾಜಪೇಟೆ

ದಿನಾಂಕ ೧೭.೧೨.೨೦೦೭ರಂದು ವೀರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಸಂತ ಅನ್ನಮ್ಮ ಪ್ರೌಢಶಾಲೆಯ ದ್ವಿಶತಮಾನೋತ್ಸವ ಭವನದಲ್ಲಿ ನಡೆದ ದತ್ತಿ ಉಪನ್ಯಾಸದ ಪಠ್ಯರೂಪ.

ಕನ್ನಡ ಭಾಷೆಯ ಬೆಳವಣಿಗೆ: ಭೂತ, ವರ್ತಮಾನ ಮತ್ತು ಭವಿಷ್ಯ
ಡಾ. ಎಸ್ ವಿ ನರಸಿಂಹನ್

“ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್|
ಭಾವಿಸಿದ ಜನಪದಂ ವಸುಧಾವಲಯ ವಿಲೀನ ವಿಶದ ವಿಷಯ ವಿಶೇಷಂ||”


ಕಾರ್ಯಕ್ರಮದ ಅಧ್ಯಕ್ಷಸ್ಥಾನವನ್ನು ವಹಿಸಿರುವ ನನ್ನ ಮಿತ್ರರೂ ಆದ ಶ್ರೀ ರಘುನಾಥ ನಾಯ್ಕ್‌ರವರೆ, ಸಾನಿಧ್ಯವನ್ನು ವಹಿಸಿರುವ ಪೂಜ್ಯರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜೀಯವರೆ, ಈ ಉಪನ್ಯಾಸವನ್ನು ತಯಾರಿಸಲು ಮಾಹಿತಿಯನ್ನೊದಗಿಸಿ ಸಹಾಯ ಮಾಡಿದ ಶ್ರೀ ಕೇಶವ ಭಟ್ಟರೆ, ದತ್ತಿ ದಾನಿಗಳಾದ ಶ್ರೀ ಕುಮಾರ್‌ರವರೆ, ಮಿತ್ರರಾದ ಎಂ. ಎಸ್. ಪೂವಯ್ಯ, ದೇವರ್ ಸರ್, ಶಿಕ್ಷಣಾಧಿಕಾರಿ ಶ್ರೀ ಮಲ್ಲೇಸ್ವಾಮಿ, ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಿಲ್ಡ್ರೆಡ್ ಗೋನ್ಸಲ್ವಿಸ್‌ರವರೆ, ಪತ್ರಿಕಾ ಪ್ರತಿನಿಧಿಗಳೆ, ಮಾಧ್ಯಮದ ಮಿತ್ರರೆ, ಹಾಗೂ ನೆರೆದಿರುವ ಎಲ್ಲ ಕನ್ನಡಾಭಿಮಾನಿಗಳೆ,

ಪ್ರಸ್ತಾವನೆ
ದಕ್ಷಿಣದ ಕಾವೇರಿ ನದಿಯಿಂದ ಹಿಡಿದು ಉತ್ತರದ ಗೋದಾವರಿ ನದಿಯವರೆಗೆ ಹರಡಿದ್ದ ಕರ್ನಾಟಕ ದೇಶ, ವಸುಧೆಯಲ್ಲಿಯೇ ಅಂದರೆ ಈ ಭೂಮಿಯ ಮೇಲೇ ಒಂದು ವಿಶಿಷ್ಟ ಸ್ಥಾನವನ್ನು ಪಡೆದಿತ್ತು ಎಂದು ಕನ್ನಡದಲ್ಲಿ ನಮಗೆ ದೊರಕಿರುವ ಮೊಟ್ಟಮೊದಲ ಗ್ರಂಥವಾದ ಕವಿರಾಜಮಾರ್ಗದಲ್ಲಿ ತಿಳಿದು ಬರುತ್ತದೆ. ಕ್ರಿ. ಶ. ೮೧೪ ಅಂದರೆ ಒಂಭತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟ ಅರಸ ನೃಪತುಂಗ ಮಹಾರಾಜನ ಆಸ್ಥಾನ ಕವಿ ಶ್ರೀವಿಜಯ ಬರೆದಿರುವ ಈ ಗ್ರಂಥದಲ್ಲಿ ಕನ್ನಡನಾಡಿನ, ಕನ್ನಡಿಗರ, ಕನ್ನಡ ಭಾಷೆಯ ಬಗ್ಗೆ ಸವಿವರವಾದ ವರ್ಣನೆಯಿದೆ. ಕನ್ನಡಿಗರ ಬಗ್ಗೆ ಅವನಿಗೆ ಎಷ್ಟು ಅಭಿಮಾನ, ಹೆಮ್ಮೆ ಎಂದರೆ, ಮುಂದುವರಿದು ಆತ ಹೇಳುತ್ತಾನೆ:
“ಪದನರಿದು ನುಡಿಯಲುಂ ನುಡಿದುದನರಿದಾರಯಲುಂ ಆರ್ಪರಾ ನಾಡವರ್ಗಳ್|
ಚದುರರ್ ನಿಜದಿಂ ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್||”


ಯಾವುದೇ ವಿಷಯವನ್ನೂ ವಿಶೇಷವಾಗಿ ಅಧ್ಯಯನ ಮಾಡದೇ ಚರ್ಚೆ ಮಾಡುವ ಸಾಮರ್ಥ್ಯ ಕನ್ನಡಿಗರಿಗಿದೆ ಎನ್ನುತ್ತಾನೆ. ೧೨೦೦ ವರ್ಷಗಳ ನಂತರವೂ ಈ ಅಭಿಮಾನ ಹಾಗೇ ಉಳಿದಿದೆ. ಏಕೆಂದರೆ, ಈವತ್ತು ಯಾವ ಕನ್ನಡದ ಕೃತಿಯನ್ನೂ ರಚಿಸದ, ಯಾವ ವಿಶೇಷ ಕನ್ನಡ ಪಾಂಡಿತ್ಯವನ್ನೂ ಪಡೆಯದ, ಸಾಮಾನ್ಯನಾದ ನನ್ನನ್ನು ಕನ್ನಡ ಭಾಷೆಯ ಬಗ್ಗೆ ಅಧಿಕೃತ ಉಪನ್ಯಾಸ ಮಾಡಲು ಕರೆಸಿರುತ್ತಾರೆ! ಈ ಕಾರ್ಯಕ್ಕೆ ನನ್ನನ್ನು ಮಾತ್ರವಲ್ಲ, ಇಲ್ಲಿ ಯಾರನ್ನಾದರೂ ಕರೆಸಬಹುದಿತ್ತು. ಯಾವ ಕನ್ನಡಿಗನೂ ಈ ಕೆಲಸವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಎಂಬುದು ಅವರ ಧೃಢ ನಂಬಿಕೆ; ಅವರ ಅಭಿಮಾನ ಅಂಥದ್ದು!

ಕನ್ನಡದಲ್ಲಿ ದೊರಕಿರುವ ಗ್ರಂಥಗಳಲ್ಲೆಲ್ಲ ಕವಿರಾಜಮಾರ್ಗವೇ ಮೊದಲಿನದು ಎಂದರೂ ಅದಕ್ಕಿಂತ ಮುಂಚೆ ಕ್ರಿ. ಶ. ೪೫೦ರಲ್ಲಿಯೇ ಬೇಲೂರಿನ ಹತ್ತಿರವಿರುವ ಹಲ್ಮಿಡಿ ಎಂಬಲ್ಲಿ ಒಂದು ಶಾಸನ ಸಿಕ್ಕಿದೆ. ಕದಂಬರ ದೊರೆ ಮಯೂರವರ್ಮ ಹಲ್ಮಿಡಿ ಎಂಬ ಗ್ರಾಮವನ್ನು ದತ್ತಿ ಕೊಟ್ಟ ವಿಚಾರ ಈ ಶಾಸನದಲ್ಲಿದೆ. ಅಂದರೆ, ಐದನೇ ಶತಮಾನದಲ್ಲಿಯೇ ಕನ್ನಡ ಬಳಕೆಯಲ್ಲಿತ್ತು. ಏನಿಲ್ಲವೆಂದರೂ ಅದಕ್ಕೂ ಸಾವಿರ ವರ್ಷಗಳ ಹಿಂದೆಯೇ ಕನ್ನಡ ಭಾಷೆ ಬಳಕೆಯಲ್ಲಿತ್ತುಎಂದು ಊಹಿಸಬಹುದು.

ವಸುಧೆಯಲ್ಲಿಯೇ ಕನ್ನಡಕ್ಕಿರುವ ಈ ವಿಶೇಷತೆ ಏನು? ವಿಶಿಷ್ಟತೆ ಎಂಥದ್ದು? ಎಂಬುದನ್ನು ವಿಶ್ಲೇಷಿಸೋಣ.

ಕನ್ನಡ ವರ್ಣಮಾಲೆ

ಯಾವುದೇ ಭಾಷೆಯನ್ನು ನಾವು ಕಲಿಯಬೇಕಾದರೂ ಮೊದಲಿಗೆ ಅದರ ವರ್ಣಮಾಲೆಯನ್ನು ಕಲಿಯುತ್ತೇವೆ. ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಐವತ್ತು ಅಕ್ಷರಗಳಿವೆ. ಸ್ವರಗಳು ಅ ಆ ಇ ಈ ಉ ಊ ... .. ಒ ಓ ಔ ಹೀಗೆ ೧೬: ೧೪ + ಅನುಸ್ವರ (ಅ೦) ಮತ್ತು ವಿಸರ್ಗ(ಅಃ). ವ್ಯಂಜನಗಳು ಕ ಖ ಗ ಘ ಯಿಂದ ಪ ಫ ಬ ಭ ಮವರೆಗೆ ೨೫ + ಯ ರ ಲ ವ .. ಳ ವರೆಗೆ ೯. ಒಟ್ಟು ೩೪. ಪ್ರತಿ ವ್ಯಂಜನವನ್ನು ಸ್ವರಗಳೊಂದಿಗೆ ಸೇರಿಸಿ ಕಾಗುಣಿತ, ಕ ಕಾ ಕಿ ಕೀ ತಯಾರಿಸಿಕೊಂಡಿದ್ದೇವೆ.

ಈ ವ್ಯಂಜನಗಳಲ್ಲಿ ಮೊದಲಿಗೆ ೫ ಅಕ್ಷರಗಳ ಐದು ವರ್ಗಗಳನ್ನು ನೋಡುತ್ತೇವೆ. ಇವು ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ ಮತ್ತು ಪ ವರ್ಗ. ಇವುಗಳಲ್ಲಿ ಒಂದೊಂದು ವರ್ಗದ ಉಚ್ಛರಣೆಯ ಧ್ವನಿಯೂ ನಮ್ಮ ನಾಲಿಗೆ, ಬಾಯಿ, ಒಸಡು ಮತ್ತು ತುಟಿಗಳ ನಡುವೆ ಚಲನೆಯನ್ನು ಆಧರಿಸಿದೆ. ಕ ಚ ಟ ತ ಪ ಎಂದು ಹೇಳುವಾಗ ನಮ್ಮ ನಾಲಿಗೆ ಮೇಲ್ದವಡೆಯ ಹಿಂದಿನಿಂದ ಮುಂದಕ್ಕೆ ಚಲಿಸುವುದನ್ನು ಗಮನಿಸಿ. ಕೊನೆಗೆ ಈ ಯಾವುದೇ ವರ್ಗಕ್ಕೂ ಸೇರದ ಅಕ್ಷರಗಳಾದ ಯ ರ ಲ ವ ಶ ಷ ಸ ಹ ಳ ಗಳನ್ನು ಸೇರಿಸಲಾಗಿದೆ. ಹೀಗೆ ಕನ್ನಡದ ಅಕ್ಷರಮಾಲೆಯನ್ನು ಸಂಪೂರ್ಣವಾಗಿ ವೈಜ್ಞಾನಿಕ ತಳಹದಿಯ ಮೇಲೆ ವಿನ್ಯಾಸಗೊಳಿಸಲಾಗಿದೆ. ಇದು ಇನ್ನಾವುದೇ ದೇಶದ ಭಾಷೆಯಲ್ಲಿಲ್ಲ.

ಸಂಸ್ಕೃತದ ತಳಹದಿ
ಭಾರತೀಯ ಭಾಷೆಗಳಿಗೆಲ್ಲ ಸಂಸೃತವೇ ಮೂಲ. ವರ್ಣಮಾಲೆ, ವ್ಯಾಕರಣ, ಛಂದಸ್ಸು ಎಲ್ಲವೂ ನಾವು ಸಂಸ್ಕೃತದಿಂದಲೇ ಪಡೆದಿದ್ದೇವೆ. ಹಾಗಾಗಿ ಸಂಸ್ಕೃತ ಎಲ್ಲ ಭಾಷೆಗಳಿಗೂ ಮಾತೃಸ್ಥಾನದಲ್ಲಿದೆ. ಸಂಸ್ಕೃತದ ಒಂದು ಸ್ವಾರಸ್ಯವೇನೆಂದರೆ, ಅದರ ಎಲ್ಲ ಪದಗಳೂ ಸ್ವರಧಾತುವಿನಿಂದ ಹುಟ್ಟಿದ್ದು ಎನ್ನುತ್ತಾರೆ. ಜ ಎಂದರೆ ಜನ್ಮ, ಜನನ, ಹುಟ್ಟುವುದು. ಜಲಜ, ನೀರಜ ಎಂದರೆ ನೀರಿನಲ್ಲಿ ಹುಟ್ಟಿದ್ದು.. ಕಮಲ; ಹಾಗೆಯೇ ಗ ಎಂದರೆ ಗಮನ, ಚಲನೆ. ಭುಜಗ, ಎಂದರೆ ಭುಜದ ಮೇಲೆ ಚಲಿಸುವ ವಸ್ತು...... ಪನ್ನಗ, ಉರಗ, ಹಾವು. ಪನ್ನಗಶಯನ, ಪನ್ನಗಾರಿವಾಹನ (ವಿಷ್ಣು) ಹೀಗೆ ಸ್ವರಗಳನ್ನು ಒಂದಕ್ಕೊಂದು ಸೇರಿಸಿ ಹೊಸ ಪದಸಂಕೀರ್ಣವನ್ನು ಪಡೆಯಬಹುದು. ಈ ಹೊಸ ಪದಗಳು ಸ್ವವಿವರಣಾತ್ಮಕ ಪದಗಳಾಗಿರುತ್ತವೆ ಅಂದರೆ, self-explainatory words.

ಇದು ಇಂಗ್ಲೀಷಿನಲ್ಲೂ ಇದೆ. ಇಂಗ್ಲೀಷ್ ಭಾಷೆಯಲ್ಲಿ ಪದಜೋಡಣೆ ಸುಲಭವಲ್ಲ, ಆದ್ದರಿಂದ ಅವರು ಗ್ರೀಕ್ ಅಥವಾ ಲ್ಯಾಟೀನ್ ಭಾಷೆಯನ್ನು ಬಳಸಿ ಹೊಸದಾಗಿ ಲಕ್ಷಾಂತರ ಪದಗಳನ್ನು ತಮ್ಮ ಪದಭಂಡಾರಕ್ಕೆ ಸೇರಿಸಿಕೊಂಡಿದ್ದಾರೆ. ಅದರಲ್ಲೂ ವೈಜ್ಞಾನಿಕ ಕ್ಷೇತ್ರದಲ್ಲಿ ಈ ಬೆಳವಣಿಗೆ ವ್ಯಾಪಕವಾಗಿ ಕಂಡುಬರುತ್ತದೆ. Dysdiadochokinesis, sphygmomanometer, ಇವೆಲ್ಲ ಉದಾಹರಣೆಗಳು.

ಇತರ ಭಾಷೆಯ ಪದಗಳನ್ನು ತಮ್ಮದಾಗಿಸಿಕೊಳ್ಳುವ ಪರಿಪಾಠ ಎಲ್ಲ ಭಾಷೆಗಳಲ್ಲೂ ಇದೆ. ಈ ಕೊಟ್ಟು-ಕೊಳ್ಳುವ ಸಂಪ್ರದಾಯ ಭಾಷೆಗಳ ಬೆಳವಣಿಗೆಗೆ ಅತಿ ಮುಖ್ಯ. ದಕ್ಷಿಣ ಭಾರತದ ಭಾಷೆಗಳನ್ನು ಗಮನಿಸಿದರೆ ಸಂಸ್ಕೃತ ಪದಪ್ರಯೋಗದ ಲಾಭವನ್ನು ನಾವು ಪಡೆದಷ್ಟು ಇನ್ನಾವುದೇ ಭಾಷೆಯೂ ಪಡೆದಿಲ್ಲ. ಇಂದು ಕನ್ನಡದಲ್ಲಿರುವ ಎಲ್ಲ ಮಹಾಪ್ರಾಣದ ಪದಗಳಿಗೂ ಮೂಲ ಸಂಸ್ಕೃತವೇ!

ಸಂಸ್ಕೃತವನ್ನೂ ಮೀರಿದ ಬೆಳವಣಿಗೆ
ಸಂಸ್ಕೃತದ ತಳಹದಿಯ ಮೇಲೆ ಕನ್ನಡ ನಿಂತಿದ್ದರೂ ಸಂಸ್ಕೃತದಲ್ಲಿಲ್ಲದ ಹಲವು ವಿಶೇಷತೆಗಳು ಕನ್ನಡದಲ್ಲಿವೆ. ಅದನ್ನೂ ಮೀರಿದ ಬೆಳವಣಿಗೆ ಕಂಡಿದೆ ಎಂದು ನನಗೆ ಅನ್ನಿಸುತ್ತದೆ. ಏಕೆಂದರೆ ಸಂಸ್ಕೃತದಲ್ಲಿಲ್ಲದ ಹಲವು ಅಕ್ಷರಗಳು ಕನ್ನಡದಲ್ಲಿವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅವು ಯಾವುವೆಂದರೆ,
೧. ಕನ್ನಡದ ಸ್ವರಗಳಲ್ಲಿ ಎ, ಏ ಐ, ಒ, ಓ ಔ.. ಇದೆಯಲ್ಲ, ಅದರಲ್ಲಿ ಎ ಮತ್ತು ಒ ಹೃಸ್ವ ಸ್ವರಗಳು ಸಂಸ್ಕೃತದಲ್ಲಿಲ್ಲ. ಸಂಸ್ಕೃತದಲ್ಲಿ ಏ, ಐ, ಓ ಔ ಇಷ್ಟೇ. ಎಲ್ಲಿ, ಏನಾಯ್ತು?, ಬೆಕ್ಕಿಗೆ ಬೇಲಿ ಏಕೆ? ಒಬ್ಬ ಓಡಿಬಂದ, ಒನಕೆ ಓಬವ್ವ, ಕೋಳೂರ ಕೊಡಗೂಸು, ಇವುಗಳಲ್ಲೆಲ್ಲ ಎ, ಏ ಮತ್ತು ಒ, ಓ ಪ್ರಯೋಗಗಳಿವೆ.

೨. ನಿಮಗೆ ಅಚ್ಚರಿಯಾಗಬಹುದು: ಳ ಕನ್ನಡದ್ದು! ನಲ= ನಳ, ಕಮಲ= ಕಮಳ, ಸ್ಥಲ= ಸ್ಥಳ ಹೀಗೆ ಸಂಸ್ಕೃತ ಪದಗಳನ್ನು ಕನ್ನಡದಲ್ಲಿ ಬಳಸುತ್ತೇವೆ. "ಲಳಯೋ ನ ಭೇದಃ" ಎಂದು ಸಂಸ್ಕೃತದಲ್ಲಿ ಸೂತ್ರವನ್ನೆ ಕೊಟ್ಟಿದ್ದಾರೆ. ಇದು ಸಂಸ್ಕೃತಕ್ಕೆ ಅನ್ವಯಿಸಬಹುದು. ಆದರೆ, ಕನ್ನಡದಲ್ಲಿ ಲ ಬೇರೆ, ಳ ಬೇರೆ. ಉದಾ: ಹುಲಿ- ಹುಳಿ, ಹಲ್ಲಿ- ಹಳ್ಳಿ, ಹಲಸು- ಹಳಸು.

೩. ಎರಡು ಅಕ್ಷರಗಳು ಕನ್ನಡದಲ್ಲಿದ್ದವು. ಆದರೆ ಈಗ ಕೈಬಿಟ್ಟಿದೇವೆ. ಅವು ಹಳೆಗನ್ನಡದಲ್ಲಿ ವ್ಯಾಪಕವಾಗಿ ಕಾಣುವ ಱ ಮತ್ತು ೞ ಅಕ್ಷರಗಳು. ಕುಱಿತೋದದೆಯುಂ, ಅಱಿತುಕೋ ಎಂಬಲ್ಲಿ ಱ ನ್ನು ಬಳಸುತ್ತಿದ್ದರು. ಅರಿ ಬೇರೆ ಅಱಿ ಬೇರೆ. ಹಾಗೆಯೇ ೞ ಅಕ್ಷರ: ಪೞ್ತಿ= ಪತ್ತಿ= ಹತ್ತಿ, ಫಲಂ= ಪೞಂ= ಪಣ್= ಹಣ್ಣು. ಬಹುಶಃ ನಾಲಿಗೆಯನ್ನು ಹೊರಳಿಸಿ ಉಚ್ಛರಿಸಲು ಕಷ್ಟಕರವೆಂದೋ ಏನೋ ಆ ಅಕ್ಷರಗಳು ಬಳಕೆಯಲ್ಲಿಲ್ಲ.

ಇಂದು ನಾವು ಇವಲ್ಲದೆ, ಪದಗಳ ಅಂತ್ಯದಲ್ಲಿ ಅನುಸ್ವರಗಳನ್ನೂ, ಅರ್ಧಾಕ್ಷರಗಳನ್ನು ಕೈಬಿಟ್ಟಿದ್ದೇವೆ. ತಿಳಿದುಂ, ಅವನುಂ ಹಾಗೆಯೇ ಮೇಣ್, ಕೇಳ್, ಎಂಬ ಪ್ರಯೋಗಗಳು ಈವತ್ತು ಕನ್ನಡದಲ್ಲಿಲ್ಲ.

ಮತ್ತೂ ಕೆಲವು ವೈಶಿಷ್ಟ್ಯಗಳು
ನಿಮಗೆ ಆಶ್ಚರ್ಯವಾಗಬಹುದು: ಭಾರತದ ಇನ್ನಾವುದೇ ಭಾಷೆಯಲ್ಲಿಯೂ ಅಂಕೆಗಳಿಲ್ಲ. ಎಲ್ಲರೂ ದೇವನಾಗರಿಯಲ್ಲಿ ಅಂಕೆಗಳನ್ನು ಬಳಸಿದರೆ, ಕನ್ನಡಕ್ಕೆ ತನ್ನದೇ ಆದ ಅಂಕೆಗಳಿವೆ! ಕನ್ನಡದ ಅಂಕಿಗಳು, ೧ ೨ ೩ ೪ ೫ ೬ ೭ ೮ ೯ ೦. ಇವುಗಳಲ್ಲಿಯೂ ೧- ಗ ಒತ್ತು, ೨- ತ ಒತ್ತು, ೩- ನ ಒತ್ತು, ೪- ಳ ಒತ್ತು, ೬- ಮ ಒತ್ತು, ಹೀಗೆ ಇವು ಕನ್ನಡದ ಒತ್ತಕ್ಷರಗಳು.ಕೊನೆಗೆ ಸೊನ್ನೆ ಬಹು ವಿಶೇಷವಾದ ಸಂಖ್ಯೆ. ಇದನ್ನು ಎಲ್ಲರೂ ವೃತ್ತಾಕಾರದ ಚಿಹ್ನೆಯಿಂದಲೇ ಗುರುತಿಸುತ್ತಾರೆ. ಸೊನ್ನೆ ಗಣಿತ ಲೋಕಕ್ಕೆ ಭಾರತ ದೇಶದ ಕೊಡುಗೆ ಎಂದು ನಮ್ಮ ದೇಶದ ಕಮ್ಯುನಿಸ್ಟರನ್ನೂ ಸೇರಿ, ಪ್ರಪಂಚದಾದ್ಯಂತ ಎಲ್ಲರೂ ಒಪ್ಪಿದ್ದಾರೆ. ಸೊನ್ನೆ ಎನ್ನುವುದು ಶೂನ್ಯದ ಸಂಕೇತ. ಅದು ಪರಿಪೂರ್ಣತೆ, ನಿರಂತರತೆ ಹಾಗೂ ಅನಂತತೆಯ ಸಂಕೇತವೂ ಹೌದು.

ಇನ್ನು ಕನ್ನಡದಲ್ಲಿ ಒತ್ತಕ್ಷರಗಳನ್ನು ಬಳಸುವ ಕ್ರಮವನ್ನು ನೀವು ಗಮನಿಸಬೇಕು. ಇದು ವಿಶಿಷ್ಟವೋ ವೈಚಿತ್ರ್ಯವೋ ನೀವೇ ಹೇಳಬೇಕು. ಸಕ್ಕರೆ, ಅಮ್ಮ, ಬಟ್ಟೆ ಇವು ಸಜಾತಿಯ ಒತ್ತಕ್ಷರಗಳಿಗೆ ಉದಾಹರಣೆಗಳು. ಕ ಗೆ ಕ ಒತ್ತು, ಮ ಗೆ ಮ ಒತ್ತು ...... ಹೀಗೆ. ಆದರೆ ಸಂಯುಕ್ತಾಕ್ಷರ ಅಥವಾ ವಿಜಾತಿಯ ಒತ್ತಕ್ಷರಗಳನ್ನು ನೋಡಿ: ಹೆಚ್ಚಿನ ಸಂಯುಕ್ತಾಕ್ಷರಗಳು ಸಂಸ್ಕೃತ ಪದಗಳೇ ಆಗಿವೆ. ರೇಷ್ಮೆ ಎಂಬುದು ರೇ+ಷ್+ಮೆ. ಇಲ್ಲಿ ಉಳಿದ ಭಾಷೆಯವರು ಇದ್ದದ್ದನ್ನು ಇದ್ದ ಹಾಗೇ ಬರೆದರೂ ಕನ್ನಡದಲ್ಲಿ ನಾವು ರೇ+ಷೆ ಬರೆದು ಅದಕ್ಕೆ ಮ ಒತ್ತು ಕೊಡುತ್ತೇವೆ! ಕ್ಷೀಣ ಎಂಬಲ್ಲಿ ಕ್+ಷೀ+ಣ ಎನ್ನುವುದನ್ನು ಕೀ ಗೆ ಷ ಒತ್ತು+ಣ ಬರೆಯುತ್ತೇವೆ. ಏಕೆ ಹೀಗೆ?

ನ್ಯೂನತೆಗಳು
ಕನ್ನಡ ಭಾಷೆಯನ್ನು ನಾವು ಇಷ್ಟೊಂದು ಸಂಪದ್ಭರಿತವಾದ ಭಾಷೆ ಎಂದು ಹೇಳಿದರೂ ಕೆಲವು ನ್ಯೂನತೆಗಳೂ ಇವೆಯೇನೋ ಎಂದು ನನಗೆ ಅನ್ನಿಸುತ್ತದೆ. ಏಕೆಂದರೆ ಕೆಲವು ಧ್ವನಿಗಳು ಇನ್ನೂ ನಮ್ಮ ಕನ್ನಡದಲ್ಲಿಲ್ಲ. ಆ ಧ್ವನಿಗಳನ್ನು ಕನ್ನಡ ಅಕ್ಷರರೂಪದಲ್ಲಿ ಬರೆಯಲು ನಮಗೆ ಲಿಪಿಗಳ ಕೊರತೆ ಕಂಡುಬರುತ್ತದೆ. ಪ್ರಪಂಚದಲ್ಲಿ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ತೀವ್ರಗತಿಯ ಅಭಿವೃದ್ಧಿಯನ್ನು ಕಾಣುತ್ತಿದ್ದೇವೆ. ಅದರಲ್ಲೂ ಆಧುನಿಕ ವಿಜ್ಞಾನದ ಚಟುವಟಿಕೆಗಳು ಬೆಳೆದು ಅಭಿವೃದ್ಧಿಸುತ್ತಿರುವುದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ. ಅಲ್ಲಿಯ ಭಾಷೆಗಳು ವಿಜ್ಞಾನದ ಭಾಷೆಯನ್ನು ಸಮರ್ಥವಾಗಿಯೂ, ಸ್ವಾಭಾವಿಕವಾಗಿಯೂ ಅಭಿವ್ಯಕ್ತಿಸಬಲ್ಲವು; ಅವು ಸಾಹಿತ್ಯದ ಇತರ ಪ್ರಕಾರಗಳಾದ ಕತೆ-ಕಾದಂಬರಿ, ವಿಚಾರಸಾಹಿತ್ಯಗಳನ್ನು ಬರೆಯುವಷ್ಟೇ ಸುಲಭ ಮತ್ತು ಸಹಜಕ್ರಿಯೆ ಆಗಿವೆ.

ಇಂಗ್ಲಿಷ್ ಭಾಷೆಗೂ ಭಾರತದ ಯಾವುದೇ ಭಾಷೆಗೂ ಜ್ಞಾತಿಸಂಬಂಧವಿಲ್ಲ. ಅದು ಪೂರ್ಣ ಪರಕೀಯ ಭಾಷೆ. ಹೀಗಾಗಿ ಇಲ್ಲಿ ಕೊಡು-ಕೊಳ್ಳುವ ಪ್ರಕ್ರಿಯೆ ಹಲವಾರು ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟಿದೆ. ವಿದ್ಯಾರ್ಥಿಗಳಿಗೆ ತಾಯಿನುಡಿಯಲ್ಲಿಯೇ ಸಮಸ್ತ ಶಿಕ್ಷಣವೂ ಒದಗಬೇಕೆಂಬುದು ಎಲ್ಲರೂ ಒಪ್ಪತಕ್ಕ ವಿಚಾರ. ಆದರೆ ಕನ್ನಡ ಪಠ್ಯಪುಸ್ತಕ ರಚನಾಕಾರ್ಯದಲ್ಲಿ ಮತ್ತು ಅನುವಾದಕಾರ್ಯಗಳಲ್ಲಿ ವಿಜ್ಞಾನದ ಪಾರಿಭಾಷಿಕ ಪದಗಳನ್ನು ನೇರವಾಗಿ ಆಂಗ್ಲಭಾಷೆಯಲ್ಲಿಯೇ ಬರೆಯಬೇಕಾಗಿರುವ ಅನಿವಾರ್ಯ ಸಂದಿಗ್ಧತೆಯೂ ಇದೆ.

ಆಂಗ್ಲ ಭಾಷೆಯ ಪದಗಳನ್ನು ಕನ್ನಡದಲ್ಲಿ ಬರೆಯಬೇಕಾದ ಪ್ರಮೇಯ ಬಂದಾಗ, ಐದು ವಿಶೇಷ ಸಂದರ್ಭಗಳಲ್ಲಿ ಜಟಿಲ ಸನ್ನಿವೇಶವನ್ನು ನಾವು ಎದುರಿಸುತ್ತೇವೆ. ಕನ್ನಡ ವರ್ಣಮಾಲೆಯಲ್ಲಿ ಇಲ್ಲದೆ ಇರುವ ಐದು ಸ್ವರಗಳು ಇಂಗ್ಲಿಷಿನಲ್ಲಿವೆ. ಇವುಗಳಲ್ಲಿ ಎರಡು ಪ್ರಕರಣಗಳಿಗೆ ನಾವು ಈಗಾಗಲೇ ಉತ್ತರ ಕಂಡುಹಿಡಿದುಕೊಂಡಿರುತ್ತೇವೆ. ಅವು ಯಾವುವೆಂದರೆ, Fingerprints ಎಂದು ಬರೆಯುವಾಗ ನಾವು ಉಪಯೋಗಿಸುವ ‘F’ ಮತ್ತು Zebra ಎನ್ನುವಾಗ ನಾವು ಉಪಯೋಗಿಸುವ ‘Z’. ಇಲ್ಲಿ ನಾವು ‘ಫ’ದ ಕೆಳಗೆ ಮತ್ತು ‘ಜ’ದ ಕೆಳಗೆ ಚುಕ್ಕೆಗಳನ್ನಿರಿಸಿ ಫ ಮತ್ತು ಜ ಅಕ್ಷರಗಳನ್ನು ತಯಾರು ಮಾಡಿಕೊಂಡಿದ್ದೇವೆ. ಈ ಅಕ್ಷರಗಳು ಈಗ ವ್ಯಾಪಕವಾಗಿ ಚಾಲ್ತಿಯಲ್ಲಿಯೂ ಇದ್ದು ಅವು ಕನ್ನಡದ ಸ್ವಾಭಾವಿಕ ವ್ಯಂಜನಗಳೇ ಆಗಿಬಿಟ್ಟಿವೆ. ಜೂ, ಜೀಬ್ರಾ ಎಂಬಲ್ಲಿನ ಜ ಮತ್ತು ಫ್ರೆಂಡ್, ಫ್ರೂಟ್ ಎಂಬಲ್ಲಿನ ಫ. ಇವು ಕನ್ನಡ ವರ್ಣಮಾಲೆಯಲ್ಲಿಲ್ಲದಿದ್ದರೂ ಓದುತ್ತ ಓದುತ್ತ ನಮ್ಮದಾಗಿಸಿಕೊಂಡುಬಿಟ್ಟಿದ್ದೇವೆ.

ಅರ್ಧಸ್ವರಗಳು

ಈ ಎರಡು ಅಕ್ಷರಗಳೊಂದಿಗೆ ನಮಗೆ ಇನ್ನೂ ಅವಶ್ಯವಿರುವ ಮೂರು ವಿಶೇಷ ಸ್ವರಗಳಿವೆ. ನಾನೀಗ ಹೇಳಲಿರುವುದು ಈ ಮೂರು ಅಕ್ಷರಗಳ ಬಗ್ಗೆ. ಇವುಗಳನ್ನು ಅರ್ಧಸ್ವರಗಳೆಂದೂ ನಾವು ಕರೆಯಬಹುದು. ಇಂಗ್ಲಿಷ್‌ನ man, pot ಮತ್ತು earth ಎಂಬಲ್ಲಿ ಬರುವ á, ŏ ಮತ್ತು é ಸ್ವರಗಳು. ಉದಾಹರಣೆಗೆ and ಎಂಬ ಆಂಗ್ಲ ಪದವನ್ನು ಕನ್ನಡದಲ್ಲಿ ಲೇಖಿಸಬೇಕಾದರೆ ಅದನ್ನು ಅಂಡ್, ಆಂಡ್, ಏಂಡ್ ಅಥವಾ ಆ೦ಡ್ ಎಂದು ಬರೆಯಬೇಕಾಗುತ್ತದೆ. ಯಾವುದೂ ಮೂಲ ‘and’ಗೆ ಸಮಾನವಾಗುವುದಿಲ್ಲ. ಹಾಗೆಯೇ shop ಎಂಬ ಆಂಗ್ಲಪದವನ್ನು ಶಾಪ್ ಅಥವಾ ಶೋಪ್ ಎಂದು ಬರೆಯುತ್ತೇವೆ.

ಈ ಮೂರು ಅರ್ಧಸ್ವರಗಳು ಆಡುಭಾಷೆಯಲ್ಲಿ, ಅದರಲ್ಲೂ ಉತ್ತರ ಕರ್ನಾಟಕದ ಕನ್ನಡದಲ್ಲಿ, ಅಲ್ಲದೆ ಕನ್ನಡ ಲಿಪಿಯನ್ನು ಅಧಿಕೃತವಾಗಿ ತಮ್ಮದಾಗಿಸಿಕೊಂಡಿರುವ ತುಳು, ಕೊಡವ, ಕೊಂಕಣಿ ಭಾಷೆಗಳಲ್ಲಿ ವ್ಯಾಪಕ ಬಳಕೆ ಕಂಡುಬರುತ್ತದೆ. ಇವು ಅನುಕ್ರಮವಾಗಿ ಯಾವುವೆಂದರೆ, ಆ ಸ್ವರದ ಅರ್ಧ "ಆ॑", ಆ ಮತ್ತು ಎ ಸ್ವರಗಳ ಅರ್ಧಸ್ವರ "ಆ", ಹಾಗೂ ಆ ಮತ್ತು ಒ ಸ್ವರಗಳ ಅರ್ಧಸ್ವರ "ಆ". ಇವುಗಳಿಗೆ ಬಳಕೆಯಲ್ಲಿರುವ ಕನ್ನಡ ಲಿಪಿಯಲ್ಲಿ ತಕ್ಕ ಅಕ್ಷರಗಳಿಲ್ಲ. ನಿಘಂಟುಗಳಲ್ಲಿ ಇವುಗಳನ್ನು ಕೆಲವು ಚಿಹ್ನೆಗಳಿಂದ ಗುರುತಿಸುತ್ತೇವೆ. ಆದರೆ ಅವು ನಿಘಂಟುಗಳಿಗೆ ಮಾತ್ರ ಸೀಮಿತವಾಗಿವೆ. ಕೆಳಗಿನ ಉದಾಹರಣೆಗಳನ್ನು ನೋಡಿ:
ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ ಕೋಡಗನ ಕೋಳಿ ನುಂಗಿತ್ತ
ಸಂತ ಶಿಶುನಾಳ ಶರೀಫರ ಈ ಗೀತೆಯಲ್ಲಿ ನುಂಗಿತ್ತ ಎನ್ನುವಾಗ ತ್ತ॑ ಮತ್ತು ವ್ವ॑ ಇವುಗಳ ಉಚ್ಛರಣೆಯಲ್ಲಿ "ಆ॑" ಪ್ರಯೋಗವನ್ನು ಕಾಣಬಹುದು. ಅದೇ ರೀತಿ ಬರ್ತಾನ॑, ಹೋಗ್ತಾನ .. .. ..

ನೀ ಹೀಂಗ ನೋಡಿದರ ನನ್ನ, ನಾ ತಿರುಗಿ ಹಾಂಗ ನೋಡಲೇ ನಿನ್ನ? ಇದು ದ. ರಾ. ಬೇಂದ್ರೆಯವರ ಕೃತಿಯ ಒಂದು ಸಾಲು. ಇಲ್ಲಿ ಹ್ಯಾಂಗ, ಹೇಂಗ ಇವಾವುವೂ ಮೂಲ "ಆ" ಗೆ ಸಮನಾಗುವುದಿಲ್ಲ.

ಕೊಡವ ಭಾಷೆಯ ಒಂದು ಸಂಭಾಷಣೆ ಗಮನಿಸಿ: ‘ನೀ ಎಕ್ಕ ಪೋಪ॑?’ ‘ನಾನ್ ನಾರಾಚೆ ಪೋಪಿ.’ ‘ಬೋಂಡ, ತಿಂಗಳಾಚೆ ಪೋ.’ ಇನ್ನು ಈ ಭಾಷೆಯಲ್ಲಿ ಮಗ-ಮಗಳು ಎನ್ನುವುದನ್ನು ಮೋಂವ, ಮೋವ ಎನ್ನುತ್ತಾರೆ. ಇಲ್ಲೆಲ್ಲ ಈ ಮೂರು ಅರ್ಧಸ್ವರಗಳ ಬಳಕೆ ಎದ್ದು ಕಾಣುತ್ತವೆ.

Transphonetic ಭಾಷೆಯೆಂಬ ಹೆಗ್ಗಳಿಕೆಯುಳ್ಳ ಕನ್ನಡದಲ್ಲಿ ಹೇಳುವುದೊಂದು, ಬರೆಯುವುದೊಂದು ಆಗಬಾರದಲ್ಲ!
ಇಲ್ಲಿ ನಾನು ಬಹು ಸರಳವಾದ ಉದಾಹರಣೆಗಳನ್ನು ನೀಡಿದ್ದೇನೆ. ಆದರೆ ನಮಗೆ ಸಮಸ್ಯೆ ಎದುರಾಗುವುದು ಒಂದು ಪ್ರೌಢ ಪ್ರಬಂಧ, ಅದರಲ್ಲೂ ವಿಜ್ಞಾನ ಲೇಖನವನ್ನು, ಬರೆಯುವಾಗ.

ಸಾಧಾರಣವಾಗಿ ನಾವು ಅಂತಹ ಸಂದರ್ಭಗಳಲ್ಲಿ ಆ ಆಂಗ್ಲಪದವನ್ನು ಕನ್ನಡದಲ್ಲಿ ಬರೆದು, ಆವರಣದಲ್ಲಿ ಅದನ್ನೇ ಇಂಗ್ಲಿಷಿನಲ್ಲಿಯೂ ಬರೆದು ಮುಂದುವರೆಯುವ ಪದ್ಧತಿಯನ್ನು ಅನುಸರಿಸುತ್ತೇವೆ. ಉದಾಹರಣೆಗೆ Paracetamol ಎಂಬ ಔಷಧಿಯ ಹೆಸರನ್ನು ಬರೆಯಬೇಕಾದಲ್ಲಿ ಪ್ಯಾರಾಸಿಟಮೋಲ್ ಎಂದು ಕನ್ನಡದಲ್ಲಿ ಬರೆದು, ಅದನ್ನು ಓದುಗರು ಸರಿಯಾಗಿ ಅರ್ಥಮಾಡಿಕೊಂಡರೋ ಇಲ್ಲವೋ ಎಂಬ ಸಂಶಯದಿಂದ ಅದನ್ನು ಆವರಣದಲ್ಲಿ ಇಂಗ್ಲಿಷಿನಲ್ಲಿಯೂ ಬರೆಯುತ್ತೇವೆ.

ಆದ್ದರಿಂದ ಈ ಮೂರು ಅರ್ಧಸ್ವರಗಳಿಗೆ ಸೂಕ್ತವಾದ ಲಿಪಿಯನ್ನು ನಾವು ಸಿದ್ಧಪಡಿಸಲೇಬೇಕಾದ ಸಮಯ ಬಂದಿದೆ. ಕನ್ನಡಕ್ಕೆ ಅವಶ್ಯವಿರುವ ಇಂತಹ ಬದಲಾವಣೆಗಳನ್ನು ಮಾಡಿ ಪ್ರಚಾರ ಪಡಿಸಿದಲ್ಲಿ ಕೊನೆಗೆ ಮುಂದೊಂದು ದಿನ ಯಾವುದೇ ಇಂಗ್ಲಿಷ್ ಅಕ್ಷರವನ್ನೂ ಬಳಸದೆ, ಸಂಪೂರ್ಣ ಕನ್ನಡದಲ್ಲಿ ಒಂದು ಪ್ರಬುದ್ಧ ಲೇಖನವನ್ನು ಸಿದ್ಧಪಡಿಸಬಹುದು.

ಧ್ವನಿಭಂಡಾರ
ನಾನು ಹೇಳಿದ ಮೂರು ಅರ್ಧಸ್ವರಗಳು ಕೊಡವ, ತುಳು ಮತ್ತು ಕೊಂಕಣಿ ಭಾಷೆಗಳಲ್ಲಿ ಹೇರಳವಾಗಿವೆ. ಅಂತಹ ಸನ್ನಿವೇಶಗಳಲ್ಲೆಲ್ಲಾ ಅರ್ಧಸ್ವರಗಳ ಪ್ರಯೋಗ ಅವಶ್ಯವೆನಿಸುತ್ತದೆ ಮತ್ತು ಆಗೆಲ್ಲಾ ಈ ಭಾಷೆಗಳ ಬರವಣಿಗೆ ತಡವರಿಸುತ್ತದೆ. ಕನ್ನಡಕ್ಕೆ ಸಂಸ್ಕೃತ ಹೇಗೆ ಮಾತೃಸ್ಥಾನದಲ್ಲಿದೆಯೋ ಹಾಗೆ ಕೊಡವ, ತುಳು ಮತ್ತು ಕೊಂಕಣಿ ಭಾಷೆಗಳಿಗೆ ಕನ್ನಡ ಮಾತೃಸ್ಥಾನದಲ್ಲಿದೆ. ಇಂತಹ ಸಂದಿಗ್ಧ ಸಂದರ್ಭಗಳಲ್ಲಿ ಇವು ಕನ್ನಡದತ್ತ ಸಹಾಯ ಯಾಚಿಸುತ್ತದೆ ಎನ್ನಿಸುವುದಿಲ್ಲವೇ?

ಇವಲ್ಲದೆ, ಉತ್ತರ ಕರ್ನಾಟಕದಿಂದ ಹಿಡಿದು ದಕ್ಷಿಣದವರೆಗೂ ಇರುವ ನೂರಾರು ಗ್ರಾಮ್ಯಭಾಷೆಗಳಲ್ಲಿ ಕೂಡ ಈ ಐದು ಸ್ವರಪ್ರಯೋಗಗಳೂ ಯಥೇಚ್ಛವಾಗಿ ಬರುತ್ತವೆ. ಪ್ರಕೃತ ಆಧುನಿಕ ಲೇಖಕರಲ್ಲನೇಕರು ಗ್ರಾಮ್ಯಭಾಷೆಯಲ್ಲಿಯೇ ಲೇಖನಗಳನ್ನೂ, ಕತೆಗಳನ್ನೂ ಬರೆಯುವುದನ್ನು ಈಗ ನಾವು ಕಾಣುತ್ತಿದ್ದೇವೆ. ಇಂತಹ ಎಲ್ಲ ಸಂದರ್ಭಗಳಲ್ಲಿಯೂ ಅರ್ಧಸ್ವರ ಪ್ರಯೋಗಗಳಿಗೆ ಹೇರಳ ಅವಕಾಶಗಳಿವೆ. ಆಗೆಲ್ಲ ಸೂಕ್ತ ಅಕ್ಷರಕ್ಕೆ ತಡಕಾಡುವಂತಾಗುತ್ತದೆ.
ಹೀಗಾಗಿ ನಾವು ಕನ್ನಡದಲ್ಲಿ ಈ ಮೂರು ಅರ್ಧಸ್ವರಗಳನ್ನು ಸೇರಿಸಿಕೊಂಡು ಅವುಗಳಿ ಸೂಕ್ತ ಲಿಪಿಯನ್ನು ರೂಪಿಸಿಕೊಂಡುಬಿಟ್ಟರೆ, ಉಚ್ಚರಿಸಬಹುದಾದ ಎಲ್ಲ ಧ್ವನಿಗಳನ್ನೂ ಅಕ್ಷರರೂಪದಲ್ಲಿ ಬರೆಯುವಂತಹ ಸಾಮರ್ಥ್ಯ ಕನ್ನಡಕ್ಕೆ ಬರುತ್ತದೆ. ಕನ್ನಡದಲ್ಲಿನ ಈ ಧ್ವನಿಭಂಡಾರ ಮತ್ತು ಈ ವಿಶೇಷತೆ ಪ್ರಪಂಚದ ಇನ್ನಾವುದೇ ಭಾಷೆಗೂ ಇಲ್ಲ!

ಗರಿಷ್ಠ ಅಕ್ಷರಗಳೋ ಕನಿಷ್ಠ ಅಕ್ಷರಗಳೋ?
ಒಂದು ಕ್ಷಣ ಮೃತಭಾಷೆ, ಪುರೋಹಿತಶಾಹೀಭಾಷೆ ಎಂತೆಲ್ಲ ಬುದ್ಧಿಜೀವಿಗಳಿಂದ ಕರೆಸಿಕೊಂಡಿರುವ ಸಂಸ್ಕೃತವನ್ನು ಬದಿಗಿಟ್ಟು ಕನ್ನಡವನ್ನೇ ಕುರಿತು ಆಲೋಚಿಸೋಣ. ಕನ್ನಡದಂಥಹ ಭಾಷೆಗೆ, ಅಥವಾ ಯಾವುದೇ ಒಂದು ಭಾಷೆಗೆ, ಐವತ್ತಂಕ್ಕಿಂತ ಹೆಚ್ಚು ವರ್ಣಾಕ್ಷರಗಳು ಬೇಕೇ? ಕನ್ನಡ ಭಾಷೆಯ ಔನ್ನತ್ಯವನ್ನು ನಾವು ತಿಳಿದುಕೊಳ್ಳಬೇಕಾದಲ್ಲಿ ಇತರ ಭಾಷೆಗಳೊಂದಿಗೆ ತುಲನಾತ್ಮಕ ದೃಷ್ಟಿಯಿಂದ ನೋಡಬೇಕಾಗುತ್ತದೆ.

ಮೊದಲಿಗೆ ನಮಗೆ ಚಿರಪರಿಚಿತವಾದ ಇಂಗ್ಲೀಷ್: ಬರೇ ೨೬ ಅಕ್ಷರಗಳಿಂದಲೇ ಪ್ರಪಂಚದಲ್ಲಿಯೇ ಅತಿ ಹೆಚ್ಚು, ಅಂದರೆ ಸುಮಾರು ಎರಡು ಲಕ್ಷಕ್ಕೂ ಹೆಚ್ಚು, ಪದಭಂಡಾರವನ್ನು ಹೊಂದಿದ ಭಾಷೆ ಇದು. ಆದರೆ ಈ ಭಾಷೆಯ ವರ್ಣಮಾಲೆಗೆ ಯಾವುದೇ ಕ್ರಮವಿಲ್ಲ. ಕೇವಲ ಐದೂವರೆ ಸ್ವರಗಳು, ಅಸಂಬದ್ಧ ವ್ಯಂಜನಮಾಲೆ, ಇವುಗಳಲ್ಲಿ V ಮತ್ತು W ಎರಡೂ ಒಂದೇ! (ಇಲ್ಲಿ ‘ಡಬಲ್ ಯು’ ಏನಿದು?) ಇಂಗ್ಲೀಷಿನಲ್ಲಿ ಆ ಭಾಷೆಯ ಎಲ್ಲ ಪದಗಳ ಅಕ್ಷರ ಜೋಡಣೆಯೂ ಪೂರ್ವನಿರ್ಧಾರಿತ. ಒಂದು ಪದವನ್ನು ಎಲ್ಲರೂ ಹೀಗೇ ಬರೆಯಬೇಕು, ಅಂತೆಯೇ ಹೀಗೇ ಉಚ್ಛರಿಸಬೇಕು ಎಂಬ ಕಟ್ಟಳೆ! ಯಾರೂ ಪ್ರಶ್ನಿಸುವಂತಿಲ್ಲ! ಅವರ ಪದಜೋಡಣೆಯ ವಿಧಾನದಲ್ಲೂ ಯಾವ ಸ್ಥಿರ ನಿಯಮವಿಲ್ಲ. ಇಷ್ಟಿದ್ದರೂ ಇಂಗ್ಲೀಷಿನವರು ಆ ಮಟ್ಟವನ್ನು ಹೇಗೆ ಸಾಧಿಸಿದರು? ಅವರಲ್ಲಿರುವುದು ಬರೇ ೨೬ ಅಕ್ಷರಗಳಲ್ಲ. ೨೬ ಅಕ್ಷರಗಳಿಗೆ ದೊಡ್ಡಕ್ಷರ, ಸಣ್ಣಕ್ಷರ ಹೀಗೆ ೫೨! ಅವರಲ್ಲಿಲ್ಲದ ಧ್ವನಿಗೆ ಅಕ್ಷರ-ಅಕ್ಷರಗಳನ್ನು ಸೇರಿಸಿ ರೂಪಿಸಿಕೊಂಡಿದ್ದಾರೆ. ಶ್ sh, ಚ್ ch, ಹೀಗೆ. ನನ್ನ ಅಜ್ಜ ಹೇಳುತ್ತಿದ್ದರು: ‘ಕನ್ನಡವನ್ನು ನೀನು ಎಷ್ಟು ಸ್ಪಷ್ಟವಾಗಿ ಮಾತನಾಡುತ್ತೀಯೋ ಅದು ಅಷ್ಟು ಚಂದ; ಅದೇ ಇಂಗ್ಲೀಷಿನಲ್ಲಿ ಮಾತನಾಡುವಾಗ ಎಷ್ಟು ನುಂಗುತ್ತೀಯೋ ಅದು ಅಷ್ಟು ಫ್ಯಾಶನ್!’

ಎರಡನೆಯದಾಗಿ ಚೀನಾ ಭಾಷೆಯನ್ನು ತೆಗೆದುಕೊಳ್ಳೋಣ. ಚೀನಾ ಭಾಷೆಯದು ಪುರಾತನ ಕಾಲದ ಬರಹದಂತೆ ಚಿತ್ರಲಿಪಿ. ಅವರಲ್ಲಿ ಅಸಂಖ್ಯ ಅಕ್ಷರಗಳು. ಕಲಿಯುವುದೂ, ಬರೆಯುವುದೂ ಕಷ್ಟ. ನೀವು ಯಾವುದಾದರು ಎಲೆಕ್ಟ್ರಾನಿಕ್ ಉಪಕರಣದ ಬಹುಭಾಷಾ ಕೈಪಿಡಿಯನ್ನು ಗಮನಿಸಿ. ಅದರಲ್ಲಿ ಆ ಕಂಪೆನಿಯ ವಿಳಾಸವನ್ನು ಬರೆದಿರುವಲ್ಲಿ ದೂರವಾಣಿ ಸಂಖ್ಯೆ ಬರೆಯುವಾಗ ಚೀನಾ ಭಾಷೆಯಲ್ಲಿ ಟೆಲಿಫೋನ್‌ನ ಚಿತ್ರವೇ ಇರುತ್ತದೆ!

ಇನ್ನು ನಮಗೆ ಹತ್ತಿರವಾದ ತಮಿಳು: ತಮಿಳರಿಗೆ ಮೂರು ವಿಶಿಷ್ಟ ಗುಣಗಳಿವೆ. ಭಾಷಾ ದುರಭಿಮಾನ, ಇಂಗ್ಲೀಷ್ ವ್ಯಾಮೋಹ, ಪರಭಾಷಾ ದ್ವೇಷ. ತಮಗೆ ಪ್ರಿಯವಾದ ಇಂಗ್ಲೀಷ್‌ಗೇ ೨೬ ಅಕ್ಷರಗಳಿರುವಾಗ ನಮಗೇಕೆ ಸಂಸೃತದ ೫೦, ಎಂದು ಎಲ್ಲವನ್ನೂ ಕೈಬಿಟ್ಟು ಈಗ ೨೯ ಅಕ್ಷರಗಳಿಗೆ ಬಂದು ನಿಂತಿದ್ದಾರೆ. ಅವರ ಗುರಿ, ೨೬ ಅಥವಾ ಅದಕ್ಕಿಂತ ಕಡಿಮೆ!

ಕುತರ್ಕ
ವಾದವೇ ಮಾಡುವುದಾದಲ್ಲಿ, ಒಂದು ಭಾಷೆಯಲ್ಲಿ ಪದಗಳ ಸೃಷ್ಟಿಗೆ ಖಂಡಿತವಾಗಿಯೂ ೫೦-೫೫ ಅಕ್ಷರಗಳು ಬೇಡ. ಉದಾಹರಣೆಗೆ ನಮ್ಮಲ್ಲಿ ಎರಡು ವ್ಯಂಜನಗಳು ಮತ್ತು ಎರಡೇ ಸ್ವರಗಳು ಇವೆಯೆಂದು ಭಾವಿಸೋಣ: ಕ್, ಪ್, ಅ ಮತ್ತು ಇ. ಇವುಗಳಿಂದ ನಮಗೆ ನಾಲ್ಕು ಅಕ್ಷರಗಳು ದೊರಕುತ್ತವೆ: ಕ, ಕಿ, ಪ, ಪಿ. ಈ ನಾಲ್ಕು ಅಕ್ಷರಗಳನ್ನು ಬಳಸಿ ಎರಡಕ್ಷರ, ಮೂರಕ್ಷರ, ನಾಲ್ಕಕ್ಷರ, ಐದಕ್ಷರ ಮತ್ತು ಆರಕ್ಷರದ ಎಷ್ಟು ಪದಗಳನ್ನು ಸೃಷ್ಟಿಸಬಹುದು? ನಿಮಗೆ ಆಶ್ಚರ್ಯವಾಗಬಹುದು. ಒಟ್ಟು ೫೪೨೬ ಪದಗಳು ದೊರಕುತ್ತವೆ! ಮತ್ತೊಂದೇ ಸ್ವರ ಅಥವಾ ವ್ಯಂಜನವಿದ್ದಲ್ಲಿ ಈ ಪಟ್ಟಿ ಲಕ್ಷ ತಲುಪುತ್ತದೆ! ಕಕಪಿಕಪ, ಕಿಪಪಿಕ, ಕಿಕಿಪ, ಪಕಕಿ, ಕಕ, ಪಿಪ..... ಇವೇನು ಅರ್ಥವತ್ತಾದ ಪದಗಳೇ? ಹೀಗೆ ಮಾತನಾಡಲು ನಾವೇನು ಪ್ರಾಣಿಗಳೇ?

ಕೆಲವು ಭಾಷೆಗಳಲ್ಲಿ ಜನರು ಮಾತನಾಡುವಾಗ ಪದಗಳ ಉಚ್ಛರಣೆಯಲ್ಲಿ ಏಕತಾನತೆಯನ್ನು ನೀವು ಗಮನಿಸಿರಬಹುದು. ಕಡಿಮೆ ಸಂಖ್ಯೆಯ ಅಕ್ಷರಗಳಿರುವ ಭಾಷೆಗಳಲ್ಲೆಲ್ಲಾ ಇದು ಎದ್ದು ಕಾಣುತ್ತದೆ. ಬಾಯ್ತುಂಬ ವಿವಿಧ ಧ್ವನಿಗಳಿಂದ ಕೂಡಿದ ಸಮೃದ್ಧವಾದ ಪದಗಳನ್ನು ಮಾತನಾಡುವ ಸಾಮರ್ಥ್ಯ ಮನುಷ್ಯನಿಗೆ ಪ್ರಕೃತಿದತ್ತವಾಗಿ ಬಂದಿರುವಾಗ ಖಂಡಿತವಾಗಿಯೂ ಕನ್ನಡದ ಎಲ್ಲ ಅಕ್ಷರಗಳೂ ಬೇಕು. ಅದು ನಮ್ಮ ಹೆಗ್ಗಳಿಕೆ!

ಸಾಧಾರಣವಾಗಿ ಒಂದು ಭಾಷೆಯ ಪದಗಳನ್ನು ಮತ್ತೊಂದು ಭಾಷೆಯ ಲಿಪಿಯಲ್ಲಿ ಬರೆಯುವುದು ಅಸಾಧ್ಯದ ಮಾತು. ಆದರೆ, ಪ್ರಪಂಚದ ಯಾವುದೇ ಭಾಷೆಯನ್ನೂ ನಾವು ಕನ್ನಡದ ಲಿಪಿಯಲ್ಲಿ ಸಮರ್ಪಕವಾಗಿ ಬರೆಯಬಹುದು. ಏಕೆಂದರೆ ಕನ್ನಡದಲ್ಲಿ ನಾವು ಉಚ್ಚರಿಸಬಹುದಾದ ಎಲ್ಲ ಧ್ವನಿಗಳಿಗೂ ಅಕ್ಷರಗಳಿವೆ. ಬೇರೆಲ್ಲ ಭಾಷೆಗಳಲ್ಲಿರುವ ಧ್ವನಿಗಳಿಗೆ ಕನ್ನಡದಲ್ಲಿ ಲಿಪಿಯಿರುವುದೇ ಈ ವೈಶಿಷ್ಟ್ಯಕ್ಕೆ ಕಾರಣ. ಇದು ನಮ್ಮ ನುಡಿಯ ಅತಿಶಯ ವಿಶೇಷತೆ!

ಕನ್ನಡ ನುಡಿಯ ವಿಂಗಡಣೆ
ಸಾವಿರಾರು ವರ್ಷಗಳ ಇತಿಹಾಸವುಳ್ಳ ಕನ್ನಡ ಭಾಷೆಯನ್ನು ಅದರ ಕಾಲಕ್ಕೆ ಅನುಗುಣವಾಗಿ ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂದು ಸ್ಥೂಲವಾಗಿ ಕರೆಯುತ್ತಾರೆ. ಅದರಲ್ಲೂ ಪ್ರಾಚೀನ ಹಳೆಗನ್ನಡ ಹಾಗೂ ನವ್ಯ ಹೊಸಗನ್ನಡ ಎಂದು ಪುನರ್ವಿಂಗಡಿಸುವುದೂ ಉಂಟು. ಒಟ್ಟಾರೆ ಹೇಳುವುದಾದರೆ, ೧೨ನೇ ಶತಮಾನಕ್ಕಿಂತ ಹಿಂದಿನದ್ದು ಹಳೆಗನ್ನಡ, ೧೩ರಿಂದ ೧೬ರರವರೆಗೆ ನಡುಗನ್ನಡ ಮತ್ತು ೧೭ನೇ ಶತಮಾನದಿಂದೀಚೆಗೆ ಹೊಸಗನ್ನಡ ಎನ್ನುತ್ತಾರೆ.

ಆದರೆ ನನ್ನ ಪ್ರಕಾರ, ಸಾಹಿತ್ಯಕ ದೃಷ್ಟಿಯಿಂದ ಈ ವಿಂಗಡಣೆ ಸರಿಯಾಗಿರಬಹುದೇ ವಿನಃ ಆಡುಭಾಷೆಯಾಗಿ ಕನ್ನಡ ಹೆಚ್ಚೇನೂ ಬದಲಾಗಿಲ್ಲವೆಂದೇ ಅನ್ನಿಸುತ್ತದೆ. ಕೆಲವು ಉದಾಹರಣೆಗಳಿಂದ ಈ ಮಾತು ಸ್ಪಷ್ಟವಾಗುತ್ತದೆ.

೧. ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಅನ್ಯರಿಗೆ ಅಸಹ್ಯ ಪಡಬೇಡ|
ತನ್ನ ಬಣ್ಣಿಸಬೇಡ ಇದಿರ ಹಳಿಯಲುಬೇಡ||
ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ|
ಇದೇ ನಮ್ಮ ಕೂಡಲಸಂಗಮದೇವನೊಲಿಸುವ ಪರಿ||

-- ಭಕ್ತಿಭಂಡಾರಿ ಬಸವಣ್ಣ, ೧೨ನೇ ಶತಮಾನ
ಇಲ್ಲಿ ಕಳಬೇಡ, ಕೊಲ್ಲಬೇಡ ಇವೆಲ್ಲ ಯಾವ ಮಗುವಿಗೂ ಅರ್ಥವಾಗಬಲ್ಲ ಮಾತುಗಳು.


ಇನ್ನೊಂದು ವಚನವನ್ನು ನೋಡಿ:
ಹಿಂಡನಗಲಿ ಹಿಡಿವಡೆದ ಕುಂಜರ ತನ್ನ ವಿಂಧ್ಯವ ನೆನೆವಂತೆ ನೆನೆವೆನಯ್ಯಾ|
ಬಂಧನಕ್ಕೆ ಬಂದ ಗಿಳಿ ತನ್ನ ಬಂಧುವ ನೆನೆವಂತೆ ನೆನೆವೆನಯ್ಯಾ|
ಕಂದಾ ನೀನಿತ್ತ ಬಾ ಎಂದು ನೀವು ನಿಮ್ಮಂದವ ತೋರಯ್ಯಾ ಚೆನ್ನಮಲ್ಲಿಕಾರ್ಜುನಾ||
-- ಅಕ್ಕಮಹಾದೇವಿ, ೧೨ನೇ ಶತಮಾನ
ಇಲ್ಲಿಯ ಭಾಷೆ ಕ್ಲಿಷ್ಟಕರ ಮತ್ತು ಕಾಲದಲ್ಲಿ ಸ್ವಲ್ಪ ಹಿಂದಿನದೇನೋ ಅನ್ನಿಸುವುದಿಲ್ಲವೇ? ಆದರೆ ಇಬ್ಬರೂ ಸಮಕಾಲೀನರು!

ಕಾಲಘಟ್ಟದಲ್ಲಿ ಇನ್ನೂ ಮುಂದೆ ಹೋಗೋಣ.
೨. ಲೊಳಲೊಟ್ಟೆ ಬದುಕು ಲೊಳಲೊಟ್ಟೆ
ಆನೆ ಒಂಟೆ ಕುದುರೆ ಎಲ್ಲ ಲೊಳಲೊಟ್ಟೆ
ನಿನ್ನ ನೆಂಟರು ಇಷ್ಟರು ಲೊಳಲೊಟ್ಟೆ
-- ಪುರಂದರದಾಸರು, ಕ್ರಿ.ಶ. ೧೫೪೦
ಇಲ್ಲಿ ಬರುವ ಆನೆ, ಕುದುರೆ, ಒಂಟೆ ಎಲ್ಲವೂ ಒಂದು ಶಿಶುವಿಗೂ ಅರ್ಥವಾಗುತ್ತದೆ.

ಅದೇ ಕೆಳಗಿನ ಮತ್ತೊಂದು ದಾಸರ ಪದವನ್ನು ನೋಡಿ:
ದೀನ ನಾನು ಸಮಸ್ತಲೋಕಕೆ ದಾನಿ ನೀನು ವಿಚಾರಿಸಲು ಮತಿಹೀನ ನಾನು
ಮಹಾಮಹಿಮ ಕೈವಲ್ಯಪತಿ ನೀನು ಏನಬಲ್ಲೆನು ನಾನು ನೆರೆ ಸುಜ್ಞಾನಮೂರುತಿ ನೀನು
ನಿನ್ನ ಸಮಾನರುಂಟೇ ದೇವ ರಕ್ಷಿಸು ನಮ್ಮನನವರತ.


ಇದನ್ನು ರಚಿಸಿದ ಕನಕದಾಸರು, ಪುರಂದರದಾಸರ ಸಮಕಾಲೀನರು ಮತ್ತು ಇಬ್ಬರೂ ಒಂದೇ ಗುರುವಿನ ಶಿಷ್ಯರು! ಆದರೆ ಕನಕದಾಸರ ಸುಮಾರು ಎಲ್ಲ ಕೃತಿಗಳೂ ಕ್ಲಿಷ್ಟವಾದ ಮತ್ತು ಹಳೆಗನ್ನಡವನ್ನೊಳಗೊಂಡ ಸಾಹಿತ್ಯವೆಂದು ತೋರುತ್ತವೆ.

ಆಡುಭಾಷೆ ಹೆಚ್ಚು ಬದಲಾವಣೆಯಾಗಿಲ್ಲ ಎಂಬ ವಿಚಾರ ನಮಗೆ ಸ್ಪಷ್ಟವಾಗಿ ಮನವರಿಕೆಯಾಗುವುದು ನಮ್ಮ ಜಾನಪದ ಗೀತೆಗಳಲ್ಲಿ. ನೂರಾರು ವರ್ಷಗಳಿಂದ ಬಾಯಿಂದ ಬಾಯಿಗೆ ಹರಡಿ ತನ್ನ ನವಿರಾದ ಗ್ರಾಮ್ಯ ಸೊಗಡನ್ನು ಉಳಿಸಿಕೊಂಡಿರುವ ನಮ್ಮ ಜಾನಪದ ಪದ್ಯಗಳು ನಿಜಕ್ಕೂ ಕನ್ನಡಿಗರ ಆಡುಭಾಷೆ ಏನೇನೂ ಬದಲಾಗಿಲ್ಲವೆಂಬುದನ್ನು ಎತ್ತಿತೋರುತ್ತವೆ.

೩. ಮುಂಗೋಳಿ ಕೂಗ್ಯಾವು ಮುಗಿಲು ಕೆಂಪೇರ್‍ಯಾವು|
ಸ್ವಾಮಿ ನನ್ನಯ್ಯ ರಥವೇರಿ ಬರುವಾಗ ನಾನೆದ್ದು ಕೈಯ್ಯ ಮುಗಿದೇನು|

ಮಕ್ಕಳಾಟವು ಚಂದ, ಮತ್ತೆ ಯವ್ವನ ಚಂದ|
ಮುಪ್ಪಿನಲಿ ಚಂದ ನೆರೆಗಡ್ಡ, ಜಗದೊಳಗೆ ಎತ್ತ ನೋಡಿದರು ನಗು ಚಂದ||


ಇವೆಲ್ಲ ಸರಳವಾದ, ಸರ್ವಕಾಲಿಕವಾದ, ಅಳಿವಿಲ್ಲದ ಚೆಲ್ನುಡಿಯ ಕನ್ನಡ ಪದಗಳು!

ಒಬ್ಬ ಸಾಹಿತಿ ಅಥವಾ ಕವಿ ತನ್ನ ಸಾಹಿತ್ಯ ರಚನೆಗೆ ಆರಿಸಿಕೊಳ್ಳುವ ಕನ್ನಡ ಹಳೆಗನ್ನಡವೋ, ನಡುಗನ್ನಡವೋ ಅಥವಾ ಹೊಸಗನ್ನಡವೋ ಆಗಿರಬಹುದು. ಆ ಸಾಹಿತ್ಯವನ್ನು ನೋಡಿ ನಾವು ಆ ರಚನಾಕಾರನು ಬರೆದ ಕನ್ನಡ ಭಾಷೆಯನ್ನು ಜನ ಆ ಕಾಲದಲ್ಲಿ ಮಾತನಾಡುತ್ತಿದ್ದರು ಎಂದು ಹೇಳುವುದು ಸರಿಯಲ್ಲ. ೨೦ನೇ ಶತಮಾನದಲ್ಲಿಯೂ ನಂದಳಿಕೆಯ ಮುದ್ದಣ ರಾಮಾಶ್ವಮೇಧವನ್ನು ಬರೆದದ್ದು ಹಳೆಗನ್ನಡದಲ್ಲಿ. ಅಷ್ಟೇಕೆ ನಮ್ಮ ಕಣ್ಣೆದುರೇ ಇದ್ದ ಕುವೆಂಪು ತಮ್ಮ ರಾಮಾಯಣದರ್ಶನಂಗೆ ಆರಿಸಿಕೊಂಡ ಭಾಷೆ ಯಾವುದು? ತಮ್ಮದೇ ಮಹಾಛಂದಸ್ಸಿನಲ್ಲಿ ನಡುಗನ್ನಡದಲ್ಲಿಯೇ.
‘ಸತ್ಪಥಮೆ ದಲ್ ತಂಗೆ! ಸತ್ಪಥಮೆ ಅದು ದಿಟಂ. ಹೆಂಬೇಡಿಗಳಿಗೆ ಮೇಣ್
ಜೀವಗಳ್ಳರಿಗೆ!’ ಆರ್ದು ಕುಳಿತನು ದಶಾನನನವನ ಮಂಚಮಂ ನೆಮ್ಮಿ.


ಅಷ್ಟೇಕೆ ಈವತ್ತೂ (೨೦೦೮) ಕೂಡ ನಮ್ಮ ಕೊಡಗಿನವರೇ ಆದ ಪ್ರೊ. ಜಿ. ಟಿ. ನಾರಾಯಣರಾವ್‌ರವರು ಛಂದೋಬದ್ಧವಾದ ಕಂದಪದ್ಯಗಳನ್ನು, ಅದೂ ದ್ವಿತೀಯಾಕ್ಷರ ಪ್ರಾಸದೊಂದಿಗೆ, ಬರೆಯುತ್ತಿದ್ದಾರೆ!

ಪ್ರೌಢಲೇಖನ
ಒಂದು ಲೇಖನ ಉತ್ತಮ ಅಥವಾ ಪ್ರೌಢಲೇಖನವೆನಿಸಿಕೊಳ್ಳಲು ಬರಹಗಾರ ತನ್ನ ಕೃತಿಯಲ್ಲಿ ಹೆಚ್ಚು ಹೆಚ್ಚು ಸಂಸ್ಕೃತ ಪದಗಳನ್ನು ಸೇರಿಸುವುದು ನಾವು ಸಾಮಾನ್ಯವಾಗಿ ಕಾಣುವ ಅಂಶ. ಅಂತಹ ಗದ್ಯ ಒಂದು ವಿದ್ವತ್ಪೂರ್ಣ ಬರಹ ಎನ್ನಿಸಿಕೊಳ್ಳುತ್ತದೆ. ಕ್ರಿ.ಶ. ೧೫೫೦ರಲ್ಲಿ ಬಾಳಿದ ನಿಜಗುಣ ಶಿವಯೋಗಿಯ ಬಗ್ಗೆ ಈ ಪಂಕ್ತಿ ಓದಿ:
"ಕನ್ನಡನಾಡಿನ ದಕ್ಷಿಣದ ಅಂಚು; ಚಿಲುಕವಾಡಿಯ ಸಮೀಪದಲ್ಲಿ ಶಂಭುಲಿಂಗನ ಬೆಟ್ಟ, ಅದರಲ್ಲೊಂದು ಗುಹೆ. ಅದರಲ್ಲಿ ಪರಶಿವನಾದ ಶಂಭುಲಿಂಗನ ಸಾನಿಧ್ಯ. ಶಿವನು ಭಸ್ಮೋಧೂಳಿತನಾಗಿ, ಸರ್ಪಭೂಷಣನಾಗಿ, ಬಿಲ್ವದ್ರೋಣಪುಷ್ಪಗಳಿಂದ ಕಂಗೊಳಿಸುತ್ತ, ಸ್ಮಿತವದನನಾಗಿ, ನಾದಮಯನಾಗಿ, ವರದಮುದ್ರೆಯೊಂದಿಗೆ ಅನುಗ್ರಹಭಾವದಲ್ಲಿದ್ದಾನೆ. ಗುಹೆಯಲ್ಲಿ ಒಂದು ವ್ಯಾಘ್ರಾಸನ. ಅದರ ಮೇಲೆ ದೇಶಿಕೇಂದ್ರನಾದ ಶಿವಯೋಗಿಯೊಬ್ಬ ಪದ್ಮಾಸನದಲ್ಲಿ ಕುಳಿತಿದ್ದಾನೆ. ಹಣೆಯಲ್ಲಿ ಭಸ್ಮತ್ರಿಪುಂಡ್ರ- ಜ್ಞಾನಭಕ್ತಿವೈರಾಗ್ಯಗಳ ಸಂಕೇತ...."

ವಾಹ್! ಎಂಥ ವಿದ್ವತ್ಪೂರ್ಣ ಬರಹ!
ಕನ್ನಡ ಕವಿ ಆಂಡಯ್ಯ ಹೇಳುವಂತೆ ಅದು ಕಬ್ಬಿಣದ ಕಡಲೆಯಾಗಿರಬಾರದು, ‘ಸುಲಿದ ಬಾಳೆಯ ಹಣ್ಣಿನಂದದಿ’ ಇರಬೇಕು. ಈಗಂತೂ ನಾಯಿಕೊಡೆಯಂತೆ ಬೆಳೆಯುತ್ತಿರುವ ಕನ್ನಡ ಸಾಹಿತಿ-ಕವಿಗಳು ಅದೆಷ್ಟು ಸಾಹಿತ್ಯ ಕೃಷಿ ಮಾಡುತ್ತಿದ್ದಾರೆಂದರೆ, ಅವರ ಎಷ್ಟೋ ಸಾಹಿತ್ಯಗಳು ‘ಸುಲಿದ ಬಾಳೆಯ ಸಿಪ್ಪೆಯಂದದಿ’ ಇರುತ್ತವೆ: ಬರೇ ಕಹಿ, ಸಪ್ಪೆ! ಅದಿರಲಿ.


ಕನ್ನಡದ ಭವಿಷ್ಯ

ಭವ್ಯ ಇತಿಹಾಸವುಳ್ಳ ಕನ್ನಡ ಬಹು ವಿಶಾಲವಾಗಿ, ಅಷ್ಟೇ ಆಳವಾಗಿ ಬೆಳೆದಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಪ್ರಪಂಚದಲ್ಲಿ ಇನ್ನಾವುದೇ ಭಾಷೆಗೂ ಇಲ್ಲದ ಧ್ವನಿಭಂಡಾರ ಮತ್ತು ಅಕ್ಷರಭಂಡಾರವೇ ಕನ್ನಡದ ಆಸ್ತಿ. ಮುಂದೇನು? ಎಂದಾಗ ಕನ್ನಡಕ್ಕೆ ಇನ್ನೂ ಭವ್ಯವಾದ ಭವಿಷ್ಯವಿದೆ ಎಂದು ಸಂಭ್ರಮದಿಂದ ಹೇಳಬಹುದು.

ಹೇಳಿ-ಕೇಳಿ ಇದು ಕಂಪ್ಯೂಟರ್ ಯುಗ. ಕಂಪ್ಯೂಟರ್ ಬಳಕೆ ಈವತ್ತು ಎಲ್ಲ ಕ್ಷೇತ್ರಗಳಲ್ಲಿಯೂ ಅನಿವಾರ್ಯ ಅವಶ್ಯಕತೆಯಾಗಿಬಿಟ್ಟಿದೆ. ದಿನಪತ್ರಿಕೆಗಳು, ವಾರಪತ್ರಿಕೆಗಳು, ಮಾಸಿಕಗಳು, ಮುಂತಾದ ನಿಯತಕಾಲಿಕಗಳೊಂದಿಗೆ ಪ್ರತಿದಿನ ಹೊಸಹೊಸ ಪ್ರಕಾಶನಗಳು, ಹೊಸಹೊಸ ಪುಸ್ತಕಗಳು ಬೆಳಕಿಗೆ ಬರುತ್ತಿವೆ. ಲಕ್ಷಾಂತರ ಮಂದಿ ಕನ್ನಡಿಗರು ಸಾಹಿತ್ಯ ಕೃಷಿಗೆ ಕೈಹಾಕಿದ್ದಾರೆ.

ಮುದ್ರಣ ಮಾಧ್ಯಮ ತೀವ್ರಗತಿಯಲ್ಲಿ ಮುನ್ನಡೆದಂತೆ ಹೇರಳವಾಗಿ ಹೆಚ್ಚುತ್ತಿರುವ ನಿಯತಕಾಲಿಕಗಳು, ಲೇಖನಗಳು, ಕತೆ-ಕಾದಂಬರಿಗಳು, ಇನ್ನಿತರ ಪುಸ್ತಕಗಳು, ಮುಂತಾದುವುಗಳ ಫಲವಾಗಿ ಇಂದು ಲೇಖಕರ-ಕವಿಗಳ ಸಂಖ್ಯಾಬಾಹುಳ್ಯವೂ ಕನ್ನಡಕ್ಕೆ ಸೇರ್ಪಡೆಗೊಂಡಿದೆ. ಈ ನಿಟ್ಟಿನಲ್ಲಿ ನಾವು ನೋಡಿದಾಗ, ಪ್ರಚಲಿತ ವಿದ್ಯಮಾನದಲ್ಲಿ ಕನ್ನಡ ಭಾಷೆಯ ಅಕ್ಷರಮಾಲೆ ವರ್ತಮಾನ ಸಾಹಿತ್ಯಪ್ರಕಾರಗಳಲ್ಲಿ ಸಮರ್ಥವಾದ ಆಸರೆ ನೀಡುತ್ತಿದೆಯೇ ಎಂಬುದನ್ನು ನಾವು ಪುನರ್ವಿಮರ್ಶಿಸುವ ಸಂದರ್ಭ ಬಂದಿದೆ ಎಂದು ನನಗೆ ಅನ್ನಿಸುತ್ತದೆ.

ಹಿಂದೆ ಪ್ರೆಸ್‌ಗಳಲ್ಲಿ ಒಂದು ಕನ್ನಡ ಲೇಖನವನ್ನು ಅಚ್ಚಿಗೆ ಜೋಡಿಸಲು ಬಹಳ ಕಷ್ಟವಿತ್ತು. ಅಚ್ಚುಮೊಳೆಗಳನ್ನು ಒಂದೊಂದೇ ಜೋಡಿಸಬೇಕು. ಇಂಗ್ಲೀಷಿನಲ್ಲಾದರೆ ಬರೆ ೨೬ ಮೊಳೆಗಳು. ಆದರೆ ಕನ್ನಡದಲ್ಲಿ ತಲೆಕಟ್ಟು, ಕೊಂಬು, ಈಳಿ, ಒತ್ತಕ್ಷರ ಎಲ್ಲ ಸೇರಿ ನೂರಕ್ಕೂ ಹೆಚ್ಚು ಮೊಳೆಗಳು! ಇದರ ಜೊತೆಗೆ ತಪ್ಪೊಪ್ಪು, ಹೊಸ ತಪ್ಪುಗಳು, ಮುದ್ರಾರಾಕ್ಷಸನ ಹಾವಳಿ, ಇವುಗಳಿಂದ ಬಹಳಷ್ಟು ಸಮಯ, ಶ್ರಮ ವ್ಯರ್ಥವಾಗುತ್ತಿತ್ತು. ಈಗ ಕಂಪ್ಯೂಟರ್ ಬಳಕೆ ಎಲ್ಲೆಡೆ ವ್ಯಾಪಿಸಿ ಇದರಿಂದ ಪ್ರಿಂಟಿಂಗ್ ಬಹಳ ಸುಲಭವಾಗಿದೆ. ಕನ್ನಡದಲ್ಲಿಯೂ ನೂರಾರು ಅಕ್ಷರವಿನ್ಯಾಸ (fonts)ಗಳಿದ್ದು, ಅಚ್ಚುಕಟ್ಟಾದ, ಆಕರ್ಷಕವಾದ ಸಾಹಿತ್ಯವನ್ನು ಕಾಗದದ ಮೇಲೆ ನಾವು ಕಾಣುವಂತಾಗಿದೆ.

ಇದರೊಂದಿಗೆ ಒಂದು ಲಿಪಿಯನ್ನು ಮತ್ತೊಂದು ಲಿಪಿಗೆ ಬದಲಾಯಿಸಲು ‘ಲಿಪ್ಯಂತರ ತಂತ್ರಾಂಶ’ಗಳೂ ಬಂದಿವೆ. ಇದನ್ನು transliteration ಎನ್ನುತ್ತಾರೆ. ಇದು translation- ಭಾಷಾಂತರ- ಅಲ್ಲ. ಉದಾ: ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಎಂದು ಕನ್ನಡದಲ್ಲಿ type ಮಾಡಿ, ಅದನ್ನು ಹಿಂದಿ ಲಿಪಿಗೆ ಲಿಪ್ಯಂತರ ಬಹು ಸುಲಭವಾಗಿ ಮಾಡಬಹುದು. ಅದನ್ನೇ ಒರಿಯಾ, ಮಲಯಾಳ ಅಥವಾ ತೆಲುಗಿಗೆ ಅಷ್ಟೇ ಸುಲಭವಾಗಿ ಬದಲಾಯಿಸಬಹುದು. ಹಲವು ವರ್ಷಗಳಿಂದ ಈ ತಂತ್ರಾಂಶಗಳನ್ನು ನಾವೆಲ್ಲ ಬಳಸುತ್ತಿದ್ದೇವೆ.

ಧ್ವನಿ ಲಿಪ್ಯಂತರ
ಕಂಪ್ಯೂಟರ್ ತಾಂತ್ರಿಕತೆ ಅಭಿವೃದ್ಧಿ ಹೊಂದಿದಂತೆ ಎಲ್ಲ ಭಾಷೆಗಳಲ್ಲಿಯೂ ಹೊಸ ಹೊಸ ತಂತ್ರಾಂಶಗಳ ಸೇರ್ಪಡೆಯೂ ಆಗುತ್ತಿವೆ. ಈ ನಿಟ್ಟಿನಲ್ಲಿ ನಾವು ಇಂಗ್ಲೀಷ್ ಭಾಷೆಯಲ್ಲಿ ಸುಮಾರು ಹದಿನೈದು-ಹದಿನಾರು ವರ್ಷಗಳಿಂದ ಪ್ರಗತಿ ಸಾಧಿಸಿರುವ Voice Recognition ತಂತ್ರಾಂಶವನ್ನು ಕಾಣುತ್ತಿದ್ದೇವೆ. ಇದನ್ನು Tranphonetic Literation ಅಥವಾ ಕನ್ನಡದಲ್ಲಿ ‘ಧ್ವನಿ ಲಿಪ್ಯಂತರ’ ತಂತ್ರಾಂಶ ಎನ್ನಬಹುದು. ಇದರಲ್ಲಿ ಒಬ್ಬ ವ್ಯಕ್ತಿ ಮೈಕ್ರೋಫ಼ೋನ್‌ನಲ್ಲಿ ಹೇಳಿದ ಧ್ವನಿತರಂಗಗಳನ್ನು ಕಂಪ್ಯೂಟರ್ ಗ್ರಹಿಸಿ ಅದನ್ನು ಅಕ್ಷರರೂಪದಲ್ಲಿ ಬರೆಯುವುದು.

ಇಂಗ್ಲೀಷಿನಲ್ಲಿ ಈ ತಂತ್ರಾಂಶವನ್ನು ರೂಪಿಸುವುದು Software Engineerಗಳಿಗೆ ಅತಿ ಕ್ಲಿಷ್ಟವಾದ ಕಾರ್ಯ. ಏಕೆಂದರೆ, ಇಂಗ್ಲೀಷಿನಲ್ಲಿ ನಾವು ಉಚ್ಛರಿಸುವುದು ಒಂದಾದರೆ, ಬರವಣಿಗೆಯಲ್ಲಿ ಬರೆಯುವುದೇ ಬೇರೆ. ಅಲ್ಲದೆ ಒಂದೇ ಪದವನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ರೀತಿ ಉಚ್ಛರಿಸುತ್ತೇವೆ. ಇವೆಲ್ಲವನ್ನೂ ಕಂಪ್ಯೂಟರ್ ಗ್ರಹಿಸಿ ಸಂದರ್ಭಕ್ಕೆ ತಕ್ಕಂತೆ ಬರೆಯಬೇಕು. ಇನ್ನೂ ಪ್ರಗತಿಯಲ್ಲಿರುವ ಈ ಅಮೋಘ ಕಾರ್ಯ ಈವತ್ತು ಶೇಕಡ ೯೭ರಷ್ಟು ನಿಖರತೆ ಪಡೆದಿದೆ ಎನ್ನುತ್ತಾರೆ.

ಈ ತಂತ್ರಾಂಶ ಹೇಗೆ ಕೆಲಸ ಮಾಡುತ್ತದೆ ಎಂದು ಒಂದು ಚಿಕ್ಕ ಉದಾಹರಣೆಯೊಂದಿಗೆ ಹೇಳುತ್ತೇನೆ. ಇಂಗ್ಲೀಷಿನಲ್ಲಿ "I am going to Mysore" ಎಂದು ಹೇಳಿದ್ದೀರಿ ಎಂದಿಟ್ಟುಕೊಳ್ಳೋಣ. ಇದನ್ನು ಕಂಪ್ಯೂಟರ್ ಅಕ್ಷರದಲ್ಲಿ ಬರೆಯಬೇಕಾದಲ್ಲಿ ನೀವು ಹೇಳಿದ ಧ್ವನಿಗಳನ್ನು ಮೊದಲು ಗುರುತು ಹಿಡಿಯಬೇಕು. ಈ ವಾಕ್ಯದಲ್ಲಿ ಮೊದಲ ಪದ, I. ಇದು ಬಹಳ ಸುಲಭ; ಏಕೆಂದರೆ I ಎಂಬ ಒಂದು ಅಕ್ಷರವೇ ಇಂಗ್ಲೀಷ್ ವರ್ಣಮಾಲೆಯಲ್ಲಿದೆ. ಅದನ್ನು ಬರೆದ ನಂತರ ಎರಡನೆಯ ಪದ, am. ಇಲ್ಲಿ ಆ ಮತ್ತು ಮ್ ಎರಡನ್ನೂ ಸೇರಿಸಿ ಬರೆಯಬೇಕು. ಮುಂದಿನದು going. ಗ್ ಮತ್ತು ಓ = go, ಇನ್ನು ing ಎನ್ನುವುದು ಒಂದು suffix. ಅದೂ ಸುಲಭವಾಯಿತು. ಮುಂದಿನದು to: ಇಲ್ಲಿ ಕಂಪ್ಯೂಟರ್ ತಡವರಿಸುತ್ತದೆ. ಟು ಎಂದರೆ ಯಾವ ಟು? To, too, two? ಸಂದರ್ಭವನ್ನು ಗ್ರಹಿಸಿಕೊಳ್ಳಬೇಕು, ನಂತರ ಬಹುಶಃ ಇದು to ಇರಬೇಕು ಎಂದು ಊಹಿಸಿ ಅಚ್ಚಿಸಬೇಕು. ಕೊನೆಯ ಪದ Mysore: ಬಹುಶಃ ಈ ತಂತ್ರಾಂಶವನ್ನು ಬರೆದ ಪಾಶ್ಚಾತ್ಯ ಇಂಜಿನಿಯರ್ ವಾಶಿಂಗ್‌ಟನ್, ಕ್ಯಾಲಿಫೋರ್ನಿಯಾ, ಅಥವಾ ಲಂಡನ್, ಮುಂತಾದ ಸ್ಥಳಗಳನ್ನು ಹೇಳಿಕೊಟ್ಟಿರುತ್ತಾನೆಯೇ ವಿನಃ ಮೈಸೂರು, ಮಡಿಕೇರಿ ಮುಂತಾದ ಪದಗಳನ್ನು ಕಂಪ್ಯೂಟರ್‌ಗೆ ಅಳವಡಿಸಿರುವುದಿಲ್ಲ. ಆದ್ದರಿಂದ ‘ಮೈಸೂರ್’ ಎನ್ನುವಲ್ಲಿ ಆ ಗಣಕಯಂತ್ರ ಏನೋ ಅಪದ್ಧ ಬರೆಯುತ್ತದೆ. ಅದನ್ನು ಸರಿಪಡಿಸಿ, Mysore ಎಂದು ಪುನಃ ಉಚ್ಛರಿಸಿ, ಈ ಹೊಸ ಪದವನ್ನು ಕಂಪ್ಯೂಟರ್‌ನ ಮೆದುಳಿಗೆ ತುಂಬಬೇಕು.

ಹೀಗೆ ಆ ತಂತ್ರಾಂಶದಲ್ಲಿ ಇಂಗ್ಲೀಷ್ ಭಾಷೆಯ ಸಂಪೂರ್ಣ ನಿಘಂಟನ್ನು ಮೊದಲಿಗೆ ಕಂಪ್ಯೂಟರ್‌ನ ನೆನಪಿನ ಭಂಡಾರದಲ್ಲಿಟ್ಟು, ಅದರಲ್ಲಿನ ಒಂದೊಂದು ಪದವೂ ಸಾಮಾನ್ಯವಾಗಿ ಹೇಗೆ ಉಚ್ಛರಿಸಲ್ಪಡುತ್ತದೆ ಎಂಬ ವಿಚಾರವನ್ನು ಒಂದೊಂದಾಗಿ ಅದರ ನೆನೆಪಿಗೆ ತುಂಬಬೇಕು. ಅಲ್ಲಿಂದ ಮತ್ತೊಬ್ಬ ವ್ಯಕ್ತಿ ಆ ಭಂಡಾರದಲ್ಲಿರುವ ಯಾವುದೇ ಪದವನ್ನು ಉಚ್ಛರಿಸಿದರೂ ಕಂಪ್ಯೂಟರ್ ಆ ಧ್ವನಿ ತರಂಗಗಳನ್ನು ಗ್ರಹಿಸಿ, ಅದಕ್ಕೆ ಯಾವ ಅಕ್ಷರ ಜೋಡಣೆ ಹೊಂದುತ್ತದೆ ಎಂದು ತುಲನೆ ಮಾಡಿ ಆ ಪದವನ್ನು ಬರೆಯುತ್ತದೆ. ಇಂಗ್ಲೀಷಿನಲ್ಲಿ ಈ ತಂತ್ರಾಂಶವನ್ನು ತಯಾರಿಸಲು ಎಷ್ಟೊಂದು ಕ್ಲಿಷ್ಟ ಮತ್ತು ಈ ಕಾರ್ಯ ಎಷ್ಟು ಸಂಕೀರ್ಣತೆಯಿಂದ ಕೂಡಿದೆ ಈಗ ನಿಮಗೆ ಅರ್ಥವಾಗಿರಬಹುದು. ಹೀಗಿದ್ದೂ ಅದರ ನಿಖರತೆ, ಶೇಕಡ ೯೭; ಆದರೆ ಖಂಡಿತವಾಗಿಯೂ ಶೇಕಡ ನೂರಕ್ಕೆ ನೂರು ಅಲ್ಲ!

ಈಗ ಕನ್ನಡಕ್ಕೆ ಬನ್ನಿ! ಕನ್ನಡದಲ್ಲಿ ನಾವು ಏನು ಉಚ್ಛರಿಸುತ್ತೇವೋ ಅದನ್ನೇ ಲಿಪಿಯಲ್ಲಿ ಬರೆಯುತ್ತೇವೆ. ಮೈಕ್ರೋಫ಼ೋನಿನಲ್ಲಿ ಹೇಳಿದ ಧ್ವನಿಯನ್ನು ಗಣಕಯಂತ್ರ ಗ್ರಹಿಸಿ ಅದನ್ನು ನೇರವಾಗಿ ಅಕ್ಷರರೂಪಕ್ಕೆ ಲಿಪ್ಯಂತರಿಸುವುದು ಬಹಳ ಸುಲಭಸಾಧ್ಯವಾದ ಕೆಲಸ. ಮೇಲಿನ ಉದಾಹರಣೆಯನ್ನೇ ತೆಗೆದುಕೊಳ್ಳೋಣ: "ನಾನು ಮೈಸೂರಿಗೆ ಹೋಗುತ್ತಿದ್ದೇನೆ" ಎಂಬುದನ್ನು ತಾನೇ ಕಂಪ್ಯೂಟರ್ ಬರೆಯಬೇಕು? ಇಲ್ಲಿ ಮೊದಲ ಪದ, ನಾನು. ಇದನ್ನು ಇನ್ನು ಹೇಗೂ ಉಚ್ಛರಿಸಲು ಸಾಧ್ಯವಿಲ್ಲ. ಅದನ್ನು ಯಾರು ಹೇಳಿದರೂ ಅದು ‘ನಾನು’! ಇನ್ನು ಮೈಸೂರಿಗೆ -ಎಂದರೆ ಕಂಪ್ಯೂಟರ್ ‘ಇದು ಯಾವ ಊರು?’ ಎಂದು ಕೇಳುವಂತಿಲ್ಲ. ಹೇಳಿದ್ದನ್ನು ಹೇಳಿದ ಹಾಗೆ ಬರೆದುಕೊಂಡು ಹೋಗುತ್ತದೆ. ನನಗೆ ಗೊತ್ತಿಲ್ಲ ಎನ್ನುವಂತಿಲ್ಲ, ನಿಘಂಟಿನ ಅವಶ್ಯಕತೆಯಿಲ್ಲ! ಶೇಕಡ ನೂರಕ್ಕೆ ನೂರರಷ್ಟು ಕರಾರುವಾಕ್ಕಾದ ಪದ್ಧತಿ! ಇಂತಹ ತಂತ್ರಾಂಶವನ್ನು ಒಂದು ಸಾರಿ ಕನ್ನಡದಲ್ಲಿ ರೂಪಿಸಿಬಿಟ್ಟರೆ, ಭಾರತದ ಎಲ್ಲ ಭಾಷೆಗಳಿಗೂ ಅನುಕೂಲ, ಅಲ್ಲದೆ ಪ್ರಪಂಚದ ಯಾವುದೇ ಭಾಷೆಯನ್ನೂ ಈ ತಂತ್ರಾಂಶಕ್ಕೆ ಅಳವಡಿಸಬಹುದು.

ಉದಾಹರಣೆಗೆ ಒಬ್ಬ ಬಂಗಾಳಿ ಲೇಖಕ ಬಂಗಾಳಿ ಭಾಷೆಯಲ್ಲಿ ಒಂದು ಲೇಖನವನ್ನು ಬರೆಯಬೇಕಾದಲ್ಲಿ ಈ ಕನ್ನಡ ಧ್ವನಿಲಿಪ್ಯಂತರ ತಂತ್ರಾಂಶವನ್ನು ಬಳಸಿ, ಮೊದಲಿಗೆ ಲಿಪಿಯನ್ನು ‘ಬಂಗಾಳಿ’ ಎಂದು ಕಂಪ್ಯೂಟರ್‌ಗೆ ನಿರ್ದೇಶಿಸಿ, ಅಲ್ಲಿಂದ ಮುಂದೆ ತನ್ನ ಭಾಷೆಯಲ್ಲಿ ಹೇಳುತ್ತಾ ಹೋದರೆ, ಯಾವುದೇ ಅಡೆತಡೆಯಿಲ್ಲದೆ ಬಂಗಾಳಿ ಭಾಷೆಯಲ್ಲಿಯೇ ಕೃತಿಯನ್ನು ರಚಿಸಬಹುದು. ಇದನ್ನೇ ಒಬ್ಬ ಮಲೆಯಾಳಿಯೂ ಮಾಡಬಹುದು. ತಂತ್ರಾಂಶ ಕನ್ನಡದ್ದಾದ್ದರಿಂದ ಅದನ್ನು ಬಳಸಿ ಯಾವ ಭಾಷೆಯಲ್ಲಿ ಬೇಕಾದರೂ ಬರವಣಿಗೆಯಲ್ಲಿ ಸಿದ್ಧಪಡಿಸಬಹುದು. ಇದು ಕನ್ನಡದ ಅತಿಶಯ ವಿಶೇಷತೆಯಲ್ಲದೆ ಮತ್ತಿನ್ನೇನು?

ಆದ್ದರಿಂದ ನಾವು ಈವತ್ತು ಒಂದು ತೀರ್ಮಾನಕ್ಕೆ ಬರಬಹುದು:
"ಇಂದು ಪ್ರಪಂಚದಲ್ಲಿ ಪ್ರಚಲಿತವಿರುವ ಭಾಷೆಗಳಲ್ಲೆಲ್ಲ ಅತ್ಯಂತ ವೈಜ್ಞಾನಿಕ ತಳಹದಿಯ ಮೇಲೆ ರಚನೆಯಾದ, ಗಣಕ ತಾಂತ್ರಿಕತೆಗೆ ಅತ್ಯಂತ ಸರಳವೂ, ಪೂರಕವೂ ಆದ ಮತ್ತು ಎಲ್ಲಕ್ಕಿಂತಲೂ ಅತಿಶಯವಾಗಿ ಪರಿಪೂರ್ಣವಾದ ಭಾಷೆ ನಮ್ಮ ಕನ್ನಡ!"ಇದನ್ನು ನಾನು ಕನ್ನಡ ಭಾಷೆಯ ಮೇಲಿನ ಅಭಿಮಾನದಿಂದಾಗಲೀ, ಈ ನೆಲದ ಮಣ್ಣಿನ ಋಣಭಾರ ಕಡಿಮೆಯಾಗಲಿ ಎಂದಾಗಲೀ ಹೇಳುತ್ತಿರುವ ಮಾತಲ್ಲ. ಕನ್ನಡಕ್ಕೆ ಈ ಒಂದು ಅದ್ಭುತವಾದ ಉನ್ನತ ಸ್ಥಾನ ಇರುವುದು ನೂರಕ್ಕೆ ನೂರು ಸತ್ಯ.

ಪ್ರಪಂಚದ ಎಲ್ಲಾ ಭಾಷಾ ವಿಜ್ಞಾನಿಗಳೂ ಈ ಬಗ್ಗೆ ಆಲೋಚಿಸಬೇಕು. ಕನ್ನಡ ಬಲ್ಲವರಿಗೆ ಇದು ಮನವರಿಕೆಯಾಗಬೇಕು. ಕನ್ನಡಿಗರು ಈ ವಿಷಯವನ್ನು ಎಲ್ಲೆಡೆ ಸಾರಬೇಕು. ಕನ್ನಡನಾಡಿನ ಗಣಕತಂತ್ರ ಮತ್ತು ತಂತ್ರಾಂಶ ಇಂಜಿನಿಯರ್‌ಗಳು ಈ ಬಗ್ಗೆ ಹೆಚ್ಚಿನ ಆಸಕ್ತಿಯಿಂದ ಕಾರ್ಯತತ್ಪರರಾಗಬೇಕು.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಗಬೇಕೆಂಬ ವಿಚಾರದಲ್ಲಿ ಆಂದೋಲನ ನಡೆದಿದೆ. ಇದನ್ನೂ ನಾವು ಕಲಿತಿದ್ದು ತಮಿಳರಿಂದ. ಅಲ್ಲಿಯವರೆಗೂ ಅಂತಹ ಒಂದು ಸ್ಥಾನವಿದೆಯೆಂದೇ ನಮಗೆ ತಿಳಿದಿರಲಿಲ್ಲ! ರಾಷ್ಟ್ರಕವಿ ಕುವೆಂಪುರವರು "ಬಾರಿಸು ಕನ್ನಡ ಡಿಂಡಿಮವ" ಎಂದು ಕರೆಯಿತ್ತಿದ್ದಾರೆ. ನಾವು ಹಲವು ದಶಕಗಳಿಂದ ಡಿಂಡಿಮವನ್ನು ಬಾರಿಸುತ್ತಲೇ ಇದ್ದೇವೆ. ಆದರೆ, ತಮಿಳರು ‘ಬೊಂಬಡ’ ಬಾರಿಸುತ್ತಾರೆ ಮತ್ತು ಬೇಕಾದ್ದನ್ನು ಸಾಧಿಸುತ್ತಾರೆ! ಶಾಸ್ತ್ರೀಯ ಸ್ಥಾನ ಕನ್ನಡಕ್ಕೆ ದೊರಕಲಿ. ಅದಕ್ಕೂ ಮಿಗಿಲಾದ ಸ್ಥಾನ ಕನ್ನಡಕ್ಕೆ ಸ್ವಾಭಾವಿಕವಾಗಿಯೇ ಇದೆ, ಎಂಬುದನ್ನು ಹೇಳಲು ನಾನು ಪ್ರಯತ್ನಿಸಿದ್ದೇನೆ.

ಕನ್ನಡ ಭಾಷೆಯ ಎತ್ತರ, ಅದರ ಗಟ್ಟಿತನ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅದರ ಉಪಯುಕ್ತತೆ ಇವೆಲ್ಲ ಪ್ರಪಂಚದಾದ್ಯಂತ ಹರಡಬೇಕು. ಸಾವಿರದ ಇನ್ನೂರು ವರ್ಷಗಳ ಹಿಂದೆ ನೃಪತುಂಗ ಮಹಾರಾಜ ಇದನ್ನು ಊಹಿಸಿದ್ದನೋ ಇಲ್ಲವೋ. "ವಸುಧಾವಲಯ ವಿಲೀನ ವಿಶದ ವಿಷಯ ವಿಶೇಷಂ"- ಎಂದು ಹೇಳಿದ ಮಾತು ಇಂದು ಸತ್ಯವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಕನ್ನಡಕ್ಕೆ ಆ ಸ್ಥಾನ ಸಿಗಲಿ, ಈ ನಿಟ್ಟಿನಲ್ಲಿ ನಾವೆಲ್ಲ ಪ್ರಯತ್ನಿಸೋಣ ಎಂದು ಹಾರೈಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಜೈ ಭುವನೇಶ್ವರಿ!


ಗಮನಿಸಿ: ಈ ಪ್ರಬಂಧ ಸಂಪೂರ್ಣವಾಗಿ ತೆಲುಗು ಭಾಷೆಗೂ ಅನ್ವಯಿಸುತ್ತದೆ.