Sunday, May 23, 2021

ಪಾದ ನಿದಾನ

ನಮ್ಮ ದೇಹದ ಪ್ರತಿಯೊಂದು ಅಂಗವೂ ಉಳಿದ ಅಂಗಾಂಗಳೊಂದಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ. ಪ್ರತಿಯೊಂದು ಅಂಗವೂ ಮತ್ತೆಲ್ಲ ಅಂಗಾಂಗಗಳೊಂದಿಗೆ ಸಂಬಂಧ ಹೊಂದಿರುತ್ತದೆ. ಆದ್ದರಿಂದ ವೈದ್ಯನಾದವನು ರೋಗಿಯು ಯಾವುದೇ ಖಾಯಿಲೆಯಿಂದ ನರಳುತ್ತಿದ್ದರೂ, ಮೊದಲಿಗೆ ಇಡೀ ದೇಹವನ್ನು ಸಂಪೂರ್ಣವಾಗಿ ಪರೀಕ್ಷೆ ಮಾಡಬೇಕು. 

ರೋಗಿಯ ದೇಹದ ಸ್ಥೂಲ ಪರೀಕ್ಷೆ ಮಾಡುವ ನಿಟ್ಟಿನಲ್ಲಿ ಈವರೆಗೆ ನಾವು ರೋಗಿಯ ಕಣ್ಣು, ಬಾಯಿ, ನಾಡಿ, ಕೈ, ಎದೆ, ಉದರ ಮತ್ತು ಕಾಲು ಮುಂತಾದುವುಗಳನ್ನು ಕ್ರಮಬದ್ಧವಾಗಿ ತಪಾಸಣೆ ಮಾಡುವ ವಿಧಾನಗಳನ್ನು ಹಿಂದಿನ ತರಗತಿಗಳಲ್ಲಿ ತಿಳಿದುಕೊಂಡಿದ್ದೇವೆ.

ಕೊನೆಯಲ್ಲಿ, ನಾವಿಂದು ರೋಗಿಯ ಕಾಲಿನ ಪಾದದ ಭಾಗದಲ್ಲಿ ಏನೇನು ಪರೀಕ್ಷೆ ಮಾಡಬೇಕೆಂದು ತಿಳಿದುಕೊಳ್ಳೋಣ. ದೇಹದ ಈ ಭಾಗದಲ್ಲಿ ನಮಗೆ ಎರಡು ಅತಿ ಮುಖ್ಯವಾದ ರಕ್ತನಾಳಗಳಿವೆ. ಅವುಗಳನ್ನು ಡಾರ್ಸಾಲಿಸ್ ಪೀಡಿಸ್ (Dorsalis Pedis) ಮತ್ತು ಪೋಸ್ಟೀರಿಯರ್ ಟಿಬಿಯಲ್ (Posterior Tibial) ಎಂದು ಕರೆಯುತ್ತೇವೆ. ಅವು ಎಲ್ಲಿವೆ ಎಂದು ನೋಡೋಣ. ಡಾರ್ಸಾಲಿಸ್ ಪೀಡಿಸ್  ಎಂದರೆ,  ಪಾದದ ಹಿಂಬದಿ ಎಂದರ್ಥ. ಮೊದಲ ಮತ್ತು ಎರಡನೆ ಕಾಲ್ಬೆರಳುಗಳ ಮಧ್ಯೆ, ಪಾದದ ಬುಡದಲ್ಲಿ ಇದನ್ನು ನಾವು ಮುಟ್ಟಿ ನೋಡಬಹುದು. ಇಲ್ಲಿ ನೀವೆಲ್ಲ ಬೆರಳಿಟ್ಟು ನೋಡಿ. 

ವೈದ್ಯಕೀಯ ವಿದ್ಯಾರ್ಥಿಗಳು ಮೊದಲ ವರ್ಷ ಅನಾಟಮಿ ವಿಷಯವನ್ನು ಓದುವಾಗ, ಶವದ ಅಂಗಚ್ಛೇದನ ಮಾಡಿ ಈ ರಕ್ತನಾಳವನ್ನು ಕಂಡಿರಬಹುದು. ಆದರೆ, ಜೀವಂತವಾಗಿ ಅದರ ನಾಡಿಬಡಿತವನ್ನು ಮುಟ್ಟಿ, ಇದೇ ಮೊದಲ ಬಾರಿಗೆ ಅನುಭವಿಸುತ್ತಾರೆ. ಹೀಗೊಂದು ರಕ್ತನಾಳದ ನಾಡಿಯನ್ನು, ಇಂತಹ ಜಾಗದಲ್ಲಿ ಮುಟ್ಟಿ ನೋಡಬಹುದೆಂಬ ಕಲ್ಪನೆಯೂ ಅವರಿಗೆ ಇರುವುದಿಲ್ಲ. ಮಿಂಚುಕಣ್ಣುಗಳಿಂದ, ಏನೋ ಕಂಡುಹಿಡಿದವರ ಹಾಗೆ, ಒಬ್ಬರನ್ನೊಬ್ಬರು ನೋಡುತ್ತ ಮೆಚ್ಚುತ್ತಾರೆ!

ಹಾಗೆಯೇ, ಮನುಷ್ಯನ ಪಾದದಲ್ಲಿ ಸುಲಭವಾಗಿ ಸ್ಪರ್ಶಕ್ಕೆ ಸಿಕ್ಕುವ ಮತ್ತೊಂದು ರಕ್ತನಾಳದ ಹೆಸರು ಪೋಸ್ಟೀರಿಯರ್ ಟಿಬಿಯಲ್. ಹಾಗೆಂದರೆ, ಟಿಬಿಯಾದ ಹಿಂಬದಿ ಎಂದರ್ಥ. ಟಿಬಿಯಾ ಎನ್ನುವುದು ನಮ್ಮ ಕಾಲಿನ ಒಂದು ಮೂಳೆ. ಪಾದದ ಹೆಬ್ಬೆರಳ ಕಡೆ, ಹಿಮ್ಮಡಿಯ ಕೆಳಭಾಗದಲ್ಲಿ, ಈ ರಕ್ತನಾಳವನ್ನು ಸ್ಪರ್ಶಿಸಿ ನೋಡಬಹುದು. 

ಈ ಎರಡು ಅಪಧಮನಿಗಳು ಹೃದಯದಿಂದ ಪಂಪ್ ಆದ ರಕ್ತವನ್ನು, ಪಾದದ ವಿವಿಧ ಭಾಗಗಳಿಗೆ ಕೊಂಡೊಯ್ಯುತ್ತವೆ; ಪಾದದಲ್ಲಿರುವ ಚರ್ಮ, ಸ್ನಾಯು, ಮೂಳೆ-ಮಜ್ಜೆ, ನರಮಂಡಲ, ಮುಂತಾದುವುಗಳಿಗೆ ಆಮ್ಲಜನಕವನ್ನೂ, ಇತರ ಜೀವ ಸತ್ತ್ವಗಳನ್ನೂ ಪೂರೈಸುತ್ತವೆ. ಈ ರಕ್ತನಾಳಗಳ ಮಹತ್ತ್ವ ಏನೆಂದರೆ, ಇವು ನಮ್ಮ ದೇಹದಲ್ಲಿ ಹೃದಯದಿಂದ ಅತಿ ದೂರದಲ್ಲಿವೆ. ನಮ್ಮ ಹೃದಯ ಒಂದು ಬಾರಿಗೆ ಸುಮಾರು ೭೦ ಮಿ.ಲೀ ರಕ್ತವನ್ನು ಪಂಪ್ ಮಾಡುತ್ತದೆ. ಅದರಲ್ಲಿ ಈ ಎರಡು ರಕ್ತನಾಳಗಳ ಮೂಲಕ ಹೆಚ್ಚೆಂದರೆ, ಅರ್ಧ ಮಿ.ಲೀ ರಕ್ತ ದಾಟೀತು! ಆದರೂ ಈ ಎರಡು ರಕ್ತನಾಡಿಗಳು, ಕೆಲವು ರೋಗಗಳನ್ನು ಪತ್ತೆ ಹಚ್ಚುವಲ್ಲಿ ನಮಗೆ ಬಹಳ ಉಪಯೋಗವಾಗುತ್ತದೆ. 

ದೇಹದ ರಕ್ತನಾಳಗಳನ್ನು ಬಾಧಿಸುವ ಯಾವುದೇ ಕಾಯಿಲೆ, ಹೃದಯ ಸಂಬಂಧೀ ವ್ಯಾಧಿಗಳು, ಬೀಡಿ ಸೇದುವವರಲ್ಲಿ ಕಂಡುಬರುವ ಟಿ.ಏ.ಓ. ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಡಯಾಬೆಟೀಸ್ ರೋಗಿಗಳಲ್ಲಿ, ಮೊದಲು ಈ ಡಾರ್ಸಾಲಿಸ್ ಪೀಡಿಸ್ ಮತ್ತು ಪೋಸ್ಟೀರಿಯರ್ ಟಿಬಿಯಲ್ ಗಳಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಈ ರಕ್ತನಾಳಗಳು ಸಂಕುಚಿತಗೊಂಡು, ರಕ್ತಸಂಚಾರದಲ್ಲಿ ಅಡಚಣೆಯುಂಟಾಗುತ್ತದೆ. ಯಾವಾಗ ಪಾದಗಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾಗುವುದೋ ಆವಾಗ, ನರಗಳು ನಿಷ್ಕ್ರಿಯವಾಗುತ್ತವೆ. ಹೀಗಿರುವಾಗ, ರೋಗಿಯ ಬೆರಳುಗಳಿಗೆ ಯಾವುದೇ ಕಾರಣದಿಂದ ಗಾಯವಾದರೆ, ಗಾಯದಿಂದ ರಕ್ತಸ್ರಾವವಾಗುವುದಿಲ್ಲ, ಮಿಗಿಲಾಗಿ ನೋವು ಕೂಡ ಆಗುವುದಿಲ್ಲ. ಅಲಕ್ಷ್ಯದಿಂದ ಗಾಯವು ರಣವಾಗಿ, ಕಾಲಿನ ಬೆರಳು ಕೊಳೆತು, ಆ ಭಾಗವನ್ನು ಕತ್ತರಿಸಿ ತೆಗೆಯಬೇಕಾಗುತ್ತದೆ. ಕಡೆಗಣಿಸಿದರೆ, ಇದು ಮೇಲುಮೇಲಕ್ಕೆ ಹರಡುತ್ತ ಹೋಗುತ್ತದೆ!

ಆದ್ದರಿಂದಲೇ ಮಧುಮೇಹಿ ರೋಗಿಗಳು, ಅವರ ಮುಖವನ್ನು ಎಷ್ಟು ಶ್ರದ್ಧೆಯಿಂದ ನೋಡಿಕೊಳ್ಳುತ್ತಾರೋ, ಅಷ್ಟೇ ಕಳಕಳಿಯಿಂದ ಪಾದಗಳನ್ನು ರಕ್ಷಿಸಿಕೊಳ್ಳಬೇಕೆಂದು ಹೇಳುತ್ತೇವೆ.

ನೀವು ಡಾ. ಕ್ರಿಶ್ಚಿಯನ್ ಬರ್ನಾರ್ಡ್ ಹೆಸರು ಕೇಳಿರಬಹುದು. ಆತ ದಕ್ಷಿಣ ಆಫ಼್ರಿಕಾದ ಹೆಸರಾಂತ ಹೃದಯದ ಶಸ್ತ್ರವೈದ್ಯ; ವಿಶ್ವದ ಮೊಟ್ಟಮೊದಲ ಹೃದಯ ಕಸಿ ಮಾಡಿದ ವಿಜ್ಞಾನಿ. ಒಂದು ಸಾರಿ ಆತನ ಕಾರು ಕೆಟ್ಟು ನಿಂತಿತು. ಪರಿಚಯವಿದ್ದ ಒಬ್ಬ ಮೆಕ್ಯಾನಿಕ್ ಬಳಿ ಕಾರನ್ನು ಕೊಂಡೊಯ್ದ. ಆ ಮೆಕ್ಯಾನಿಕ್ ಕಾರನ್ನು ಸರಿಪಡಿಸಿದ ನಂತರ ತಮಾಷೆಗೆ ತನ್ನ ಸಂಭಾವನೆ ೨೦೦೦ ರ್‍ಯಾಂಡ್‌ಗಳು ಎಂದ. ಮತ್ತೆ ಕೇಳಿದ: ವೈದ್ಯ ಮಹಾಶಯರೆ, ಪ್ರಪಂಚದಲ್ಲಿ ನೂರಾರು ಕಾರು ತಯಾರಿಸುವ ಕಂಪೆನಿಗಳಿವೆ; ಒಂದೊಂದು ಕಂಪೆನಿಯೂ ಹತ್ತಾರು ಬ್ರಾಂಡ್ ಕಾರುಗಳನ್ನು ತಯಾರು ಮಾಡುತ್ತವೆ, ಒಂದೊಂದು ಬ್ರಾಂಡಿಗೂ, ಹತ್ತಾರು ಮಾಡೆಲ್‌ಗಳಿರುತ್ತವೆ. ಹಾಗಾಗಿ ನಮಗೆ ಈ ಎಲ್ಲ ಮಾಡೆಲ್‌ಗಳ ಸಂಪೂರ್ಣ ವಿವರಗಳೂ ಪ್ರತ್ಯೇಕವಾಗಿ ತಿಳಿದಿರಬೇಕಾಗುತ್ತದೆ! ಆದರೆ ನೋಡಿ, ನಿಮಗಾದರೆ ಲಕ್ಷಾಂತರ ವರ್ಷಗಳಿಂದಲೂ ಇರುವುದು ಒಂದೇ ಮಾಡೆಲ್! ನಿಮ್ಮ ವೃತ್ತಿಗೂ ನನ್ನ ವೃತ್ತಿಗೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಒಂದು ಕಾರಿನ ಎಂಜಿನ್, ನಮ್ಮ ದೇಹದಲ್ಲಿ ಹೃದಯ ಇದ್ದಂತೆ. ನೀವು ತೆರೆದ ಹೃದಯದ ಆಪರೇಶನ್ ಮಾಡುತ್ತೀರಿ; ವಾಲ್ವ್‌ಗಳನ್ನು ಬದಲಿಸುತ್ತೀರಿ, ಪುನಃ ಎಲ್ಲವನ್ನೂ ಜೋಡಿಸುತ್ತೀರಿ... ನಾವೂ ಕೂಡ ವಾಹನದ ಎಂಜಿನ್ ಬಿಚ್ಚುತ್ತೇವೆ, ವಾಲ್ವ್ ಬದಲಾಯಿಸುತ್ತೇವೆ, ನಟ್ಟು-ಬೋಲ್ಟುಗಳನ್ನು ಬಿಗಿಗೊಳಿಸುತ್ತೇವೆ... ಆದರೂ ನಿಮ್ಮ ಹಾಗೆ ನಾವು ಫ಼ೇಮಸ್ ಅಲ್ಲವಲ್ಲ, ಇದು ಏಕೆ?

ಡಾ. ಬರ್ನಾರ್ಡ್, ಆತನ ಹೆಗಲ ಮೇಲೆ ಕೈ ಹಾಕಿ ಹೇಳಿದ: ನೀನೀಗ ಕಾರನ್ನು ಸ್ಟಾರ್ಟ್ ಮಾಡು. ಕಾರಿನ ಎಂಜಿನ್ ರನ್ ಆಗುತ್ತಿರುವಾಗ ಅದನ್ನು ಬಿಚ್ಚಿ, ನೀನು ಹೇಳಿದ್ದನ್ನೆಲ್ಲ ಮಾಡು. ಆಗ ನೀನೂ ಪ್ರಸಿದ್ಧಿ ಹೊಂದುತ್ತೀಯ!

ಈವತ್ತು ಪ್ರಪಂಚದ ದೊಡ್ಡ ದೊಡ್ಡ ನಗರಗಳಲ್ಲಿ ವಾಹನಗಳನ್ನು ತಯಾರಿಸುವ ಕಾರ್ಖಾನೆಗಳಿವೆ. ಪ್ರತಿದಿನ ಸಾವಿರಾರು, ವಿವಿಧ ಮಾಡೆಲ್‌ಗಳ ಕಾರುಗಳು ತಯಾರಾಗುತ್ತಿರುತ್ತವೆ. ಆದರೆ, ಮನುಷ್ಯನನ್ನು ತಯಾರು ಮಾಡುವ ಕಾರ್ಖಾನೆ ಎಲ್ಲಿದೆ? ಇಲ್ಲಿರುವ ನಮ್ಮ ಕಿರಣ್ ಮಂದಣ್ಣ ತಯಾರಾಗಿದ್ದು ಅವನ ತಾಯಿಯ ಗರ್ಭಕೋಶದಲ್ಲಿ; ಸಮೀರ್ ತಯಾರಾಗಿದ್ದು ಅವನ ತಾಯಿಯ ಗರ್ಭಕೋಶದಲ್ಲಿ; ಪ್ರೆಸಿಲ್ಲಾ ಜೋಸೆಫ಼್ ತಯಾರಾಗಿದ್ದು ಅವಳ ತಾಯಿಯ ಗರ್ಭಕೋಶದಲ್ಲಿ! ಪ್ರಪಂಚದಾದ್ಯಂತ, ಪ್ರತಿಯೊಂದು ಮನೆಮನೆಯಲ್ಲೂ ಮನುಷ್ಯನನ್ನು ತಯಾರು ಮಾಡುವ ಕಾರ್ಖಾನೆಗಳಿವೆ. ಆದರೆ ಇಲ್ಲೊಂದು ವಿಶಿಷ್ಟತೆಯನ್ನು ನಾವೆಲ್ಲ ಗಮನಿಸಬೇಕು: ಕಾರ್ಖಾನೆಗಳು ಕೋಟ್ಯಂತರ ಇದ್ದರೂ ತಯಾರಾಗುವುದು ಮಾತ್ರ ಒಂದೇ ಮಾಡೆಲ್!

ಪ್ರಕೃತಿಯ ಈ ಅತ್ಯದ್ಭುತ ಜಾದೂ ಶಕ್ತಿಯನ್ನು ನೋಡಿ! ಪ್ರತಿಯೊಂದು ಮಾನವ ಮಾಡೆಲ್‌ನಲ್ಲೂ ಸರಿಸುಮಾರು ಒಂದೇ ರೀತಿಯ ದೇಹರಚನೆ, ಒಂದೇ ತೆರನ ಕಾರ್ಯವೈಖರಿ! ಪ್ರತಿಯೊಂದು ಕಾಲಿನ, ಪಾದದ ಬೆನ್ನಬದಿಯಲ್ಲಿ ಅದೇ ಡಾರ್ಸಾಲಿಸ್ ಪೀಡಿಸ್ ಮತ್ತು ಪೋಸ್ಟೀರಿಯರ್ ಟಿಬಿಯಲ್ ಎಂಬ ಎರಡು ರಕ್ತನಾಳಗಳನ್ನು ಯಾವ ಕಾಲಕ್ಕೂ ನಾವು ಮುಟ್ಟಿ ನೋಡಬಹುದು! 

ಈವತ್ತಿನ ಈ ಪಾಠದಲ್ಲಿ ನಮಗೆಲ್ಲ ಒಂದು ನೀತಿಯಿದೆ. ಪ್ರಪಂಚದಲ್ಲಿರುವ ಎಲ್ಲ ಮನುಷ್ಯರೂ ಒಂದೇ: ಇವರಲ್ಲಿ ಜಾತಿ-ಮತ, ಮೇಲು-ಕೀಳು, ದೇಶಿ-ಪರದೇಶಿ, ಬಡವ-ಬಲ್ಲಿದ, ಇವೇ ಮುಂತಾದ ಯಾವುದೇ ತಾರತಮ್ಯವಿಲ್ಲ! ವಿದ್ಯಾರ್ಥಿಗಳು ಈ ವಿಷಯವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು; ಇದು ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕರಗತವಾಗಬೇಕು; ಹಾಗಾದರೆ, ನಾಳೆ ನೀವೆಲ್ಲ ವೈದ್ಯರಾದಾಗ ಅದು ನಿಮ್ಮ ಸ್ವಭಾವವೇ ಆಗಿಬಿಡುತ್ತದೆ. ಆದ್ದರಿಂದಲೇ ಇಂದು ವಿಶ್ವದಾದ್ಯಂತ ಸಮಾಜದಲ್ಲಿ ವೈದ್ಯರು ಗೌರವಪ್ರಾಯರೂ, ಆದರ್ಶಪ್ರಾಯರೂ ಆಗಿದ್ದಾರೆ, ಅಲ್ಲವೆ? 


(ಮಾನ್ಯರೆ, ತರಗತಿಯಲ್ಲಿ ನನ್ನ ಈ ಪಾಠವನ್ನು ಕೇಳಲು ಹೆಚ್ಚು ಕಿವಿಗಳಿರುವುದಿಲ್ಲ; ಹೆಚ್ಚೆಂದರೆ, ೩೭-೪೦ ವಿದ್ಯಾರ್ಥಿಗಳು. ಆದ್ದರಿಂದ ಇದನ್ನು ಬರಹರೂಪದಲ್ಲಿ ಸಾವಿರಾರು ಕಣ್ಣುಗಳಿಗೆ ಉಣಬಡಿಸಿದ್ದೇನೆ.)

- ಡಾ| ಎಸ್. ವಿ. ನರಸಿಂಹನ್, ವಿರಾಜಪೇಟೆ.


ಕಿಷ್ಕಿಂಧೆಯ ಕಪಿಸೈನ್ಯ

ಆಗ ನಾನಿನ್ನೂ ಹೈಸ್ಕೂಲಿನ ವಿದ್ಯಾರ್ಥಿ. ಮೈಸೂರಿನ CFTRIನ ಸಿಬ್ಬಂದಿಗಳು ಚಿತ್ರದುರ್ಗಕ್ಕೆ ಟ್ರಿಪ್ ಹಾಕಿದ್ದರು. ನನ್ನ ಚಿಕ್ಕಪ್ಪ ಆ ವಿಭಾಗದ ಉನ್ನತ ವಿಜ್ಞಾನಿಯಾದ್ದರಿಂದ ಅವರೂ ಟಿಕೆಟ್ ತೆಗೆದುಕೊಂಡಿದ್ದರು. ಆದರೆ, ಕೆಲಸದ ಒತ್ತಡದಿಂದ ಅವರು ಹೋಗಲಿಲ್ಲ. ಮನೆಯಲ್ಲಿ ನನ್ನ ಜೊತೆಗಾರ ವಿಜಯರಂಗನೂ ತಯಾರಿರಲಿಲ್ಲವಾದ್ದರಿಂದ ನಾನು ಹೋಗಿಬಂದೆ.

ಚಿತ್ರದುರ್ಗದ ಚರಿತ್ರೆ, ಅಲ್ಲಿನ ಏಳು ಸುತ್ತಿನ ಕೋಟೆ, ವಾಸ್ತುಶಿಲ್ಪ, ತಾಂತ್ರಿಕ ಕೌಶಲ್ಯ, ನೀರಿನ ಜಲಾಶಯಗಳು ಮತ್ತು ಕಾಲುವೆಗಳು, ಓಬವ್ವನ ಕಿಂಡಿ, ಇವೆಲ್ಲವನ್ನೂ ನಡೆದು, ಸುತ್ತಿ ನೋಡಿದ್ದು ಇನ್ನೂ ನೆನಪಿನಲ್ಲಿ ಹಸುರಾಗಿದೆ. ಆದರೆ, ಚಿತ್ರದುರ್ಗದಲ್ಲಿ ಅವೆಲ್ಲಕ್ಕಿಂತ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದ ಒಂದು ಅನುಭವದ ಘಟನೆಯನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಚಿತ್ರದುರ್ಗದ ಕೋಟೆ-ಕೊತ್ತಳಗಳನ್ನು ಸುತ್ತಿ ನೋಡುತ್ತಿದ್ದಾಗ, ಒಂದು ಕಡೆ, ಸುಮಾರು ಮೂವತ್ತು ಅಡಿ ಎತ್ತರವಿದ್ದ ಒಂದು ಭಾರಿ ಗಾತ್ರದ ಬಂಡೆಯೊಂದು ಕಾಣಿಸಿತು. ಅದರ ಕೆಳಗಡೆ ಆಂಜನೇಯನ ಗುಡಿ ಎಂದು ಬೋರ್ಡ್ ಹಾಕಿದ್ದರು. ಮೇಲೆ ಯಾವ ಗುಡಿಯೂ ಕಾಣುತ್ತಿರಲಿಲ್ಲ. ಬಹುಶಃ ಆ ಬಂಡೆಯ ಮೇಲೆ, ಆಚೆಗೆಲ್ಲಿಯೋ ಗುಡಿ ಇದ್ದಿರಬೇಕು. ಮುಂದುಗಡೆ ನಮ್ಮೊಂದಿಗಿದ್ದ ಗೈಡ್ ಹೇಳುತ್ತಿದ್ದ ವಿವರಣೆಗಳು ಅರ್ಧಂಬರ್ಧ ಕೇಳುತ್ತಿತ್ತು. ಇದ್ದಕಿದ್ದಂತೆ ಎಲ್ಲ ಹುಡುಗರೂ ‘ಹೋ’ ಎಂದು ಕೂಗುತ್ತಾ ಆ ಬಂಡೆಯನ್ನು ಹತ್ತಲು ಶುರು ಮಾಡಿದರು. ನಾನೂ ಹಿಂದೆ-ಮುಂದೆ ನೋಡದೆ ಅವರೊಂದಿಗೆ ಬಂಡೆಯನ್ನು ಹತ್ತತೊಡಗಿದೆ.

ಮೇಲಕ್ಕೆ ಹತ್ತಲು ಏಣಿಯೇನೂ ಇರಲಿಲ್ಲ. ಆ ಬಂಡೆಯಲ್ಲಿಯೇ ಸಾಲಾಗಿ ಒಂದೊಂದಡಿಗೆ, ಅಕ್ಕ-ಪಕ್ಕ, ಸಣ್ಣ ಸಣ್ಣ ಗೂಡುಗಳನ್ನು ಕೊರೆದು ಕೆತ್ತಿದ್ದರು. ಅದರಲ್ಲಿ ನಮ್ಮ ಕೈಕಾಲುಗಳನ್ನಿಟ್ಟುಕೊಂಡು ಒಬ್ಬರ ಹಿಂದೆ ಒಬ್ಬರು ಹತ್ತಬೇಕಿತ್ತು. ಮೇಲಿನವ ಗೂಡಿನಿಂದ ತನ್ನ ಕಾಲನ್ನೆತ್ತಿದರೆ, ಕೆಳಗಿನವ ತನ್ನ ಕೈಯನ್ನು ಅದರಲ್ಲಿಟ್ಟು ಮುಂದಕ್ಕೆ ಹತ್ತಬೇಕು. 

ನಾಲ್ಕೈದು ಅಡಿ ಹತ್ತಿದ ಮೇಲೆ ತಲೆಯೆತ್ತಿ ನೋಡಿದೆ. ನನ್ನ ಮುಂದೆ ಹತ್ತಾರು ಹುಡುಗರು ನಿಧಾನವಾಗಿ ಹತ್ತುತ್ತಿದ್ದರು. ಬಂಡೆಯ ತುದಿಯೇ ಕಾಣುತ್ತಿರಲಿಲ್ಲ; ಬದಲಿಗೆ ವಿಶಾಲವಾದ ಆಕಾಶ ಕಾಣುತ್ತಿತ್ತು! ಮೆತ್ತಗೆ ಕೆಳಗೆ ನೋಡಿದೆ. ಮೂರು ಮಂದಿ ನನ್ನ ಹಿಂದೆ ಹತ್ತುತ್ತಿದ್ದರು. ಇಳಿದುಬಿಡಲೆ ಎಂಬ ಯೋಚನೆ ತಲೆಗೆ ಬಂತು; ಮರುಕ್ಷಣ ಏನಾದರಾಗಲಿ, ಎಂದು ಭಂಡ ಧೈರ್ಯದಿಂದ ಮುಂದುವರಿದೆ.

ಹತ್ತು ಅಡಿ ಮೇಲಕ್ಕೆ ಹತ್ತಿರಬಹುದು. ಮನಸ್ಸಿಗೆ ಒಂದು ರೀತಿಯ ದಿಗಿಲಾಗತೊಡಗಿತು. ಆ ಗೂಡುಗಳನ್ನು ನೂರಾರು (ಅಥವಾ ಸಾವಿರಾರು?) ವರ್ಷಗಳಿಂದ ಜನ ಹತ್ತಿ ಹತ್ತಿ ಒಳಬದಿಯೆಲ್ಲ ನಯವಾಗಿ ಹೋಗಿತ್ತು. ಸಾಲದ್ದಕ್ಕೆ ಅವುಗಳೆಲ್ಲ ಕೆಳಮುಖವಾಗಿ ಕೊರೆಯಲಾಗಿದ್ದವು. ಗೂಡುಗಳೊಳಗೆ ಕೈಕಾಲು ಬೆರಳುಗಳಿಗೆ ಸರಿಯಾದ ಹಿಡಿತ ಸಿಗುತ್ತಿರಲಿಲ್ಲ. ಆ ರಣ ಬಿಸಿಲಿನಲ್ಲಿ ಸುತ್ತಾಡಿ, ಮೊದಲೇ ಮೈಯೆಲ್ಲ ಬೆವೆತು ಹೋಗಿತ್ತು. ಅದರೊಂದಿಗೆ ಈಗ ಅಂಗೈ ಮತ್ತು ಅಂಗಾಲುಗಳು ಕೂಡ ಬೆವರತೊಡಗಿದವು. 

  ಕೈಕಾಲು ಅಕಸ್ಮಾತ್ತಾಗಿ ಜಾರಿಬಿಟ್ಟರೆ! ಧಪ್ಪನೆ ಕೆಳಕ್ಕೆ ಬಿದ್ದರೆ, ನನ್ನ ಹಿಂದೆ ಹತ್ತುತ್ತಿರುವವರ ಗತಿಯೇನು? ಆ ವಿಚಾರವನ್ನು ಮನಸ್ಸಿನಲ್ಲಿ ನೆನೆಸಿಕೊಂಡೇ ಗಾಬರಿಯಾಯಿತು. ಅದೇ ರೀತಿ, ಅಥವಾ ಅದಕ್ಕಿಂತಲೂ ಹೆಚ್ಚಾಗಿ, ಅಪ್ಪಿತಪ್ಪಿ ಮೇಲಿನವರು ಯಾರಾದರೂ ಜಾರಿದರೆ ನನ್ನ ಗತಿಯೇನು? ಅಯ್ಯೋ ದೇವರೆ, ನನಗೆ ಬೇಕಿತ್ತೆ ಈ ಉಸಾಬರಿ? ಒಳ್ಳೇ ಕಪಿಯ ಹಾಗೆ ಈ ಸಾಹಸಕ್ಕೆ ಕೈಹಾಕಿದೆನಲ್ಲ! ಈಗ ಕೆಳಗೆ ನೋಡಲೂ ಭಯ, ಮೇಲೆ ನೋಡಲೂ ಭಯವಾಯಿತು! ಮಾರುತೀ, ಒಂದು ಸಾರಿ ಮೇಲಕ್ಕೆ ಹತ್ತಿಬಿಟ್ಟರೆ ಸಾಕಪ್ಪಾ ಎಂದುಕೊಂಡೆ!

ನಮ್ಮೊಂದಿಗೆ ಬಂದಿದ್ದ ಗೈಡ್ ಬುದ್ಧಿವಂತ! ಆತ ನಮ್ಮ ಜೊತೆಗೆ ಹತ್ತಿರಲಿಲ್ಲ. ಆ ಆಂಜನೇಯನ ಗುಡಿ ಮೇಲೆ ಎಲ್ಲಿದೆಯೋ? ಹಿಂದಿರುಗಲು ಕೂಡ, ಇದೇ ರೀತಿ ಬಂಡೆಯ ಗೂಡುಗಳೊಳಗೆ ಕೈಕಾಲಿಟ್ಟು ಇಳಿಯಬೇಕೆ? ಅಬ್ಬಾ! ಏನಾದರಾಗಲಿ, ಮೇಲಕ್ಕೆ ಹತ್ತಿದ ನಂತರ, ಆಚೆಯಿಂದ ಅದೆಷ್ಟೇ ದೂರವಿರಲಿ, ದಿನವಿಡೀ ಕಷ್ಟಪಟ್ಟು ನಡೆದರೂ ಪರವಾಗಿಲ್ಲ, ಈ ಬಂಡೆಯನ್ನು ಹಿಡಿದು ಮಾತ್ರ ಇಳಿಯುವುದಿಲ್ಲ ಎಂದುಕೊಂಡೆ. 

ಕೊನೆಗೂ ಬಂಡೆಯ ತುದಿಯನ್ನು ತಲುಪಿದೆ. ಮೇಲಕ್ಕೆ ಹತ್ತಿ ನೋಡಿದರೆ, ಅಲ್ಲಿ ವಿಶಾಲವಾದ ಬಯಲಿನಲ್ಲಿ ಹನುಮಂತನ ದೇವಸ್ಥಾನವಿತ್ತು. ಆ ಹೆಬ್ಬಂಡೆಯ ಬದಿಯಿಂದ ಗುಡಿಗೆ ಹತ್ತಿ-ಇಳಿಯಲು ಸರಾಗವಾದ ರಾಜಮಾರ್ಗ! ನಮ್ಮ ಜೊತೆಯಲ್ಲಿದ್ದವರೆಲ್ಲ ಈಗಾಗಲೇ ನಡೆದುಕೊಂಡು ಬಂದು ಆಂಜನೇಯನ ದರ್ಶನ ಪಡೆಯುತ್ತಿದ್ದರು!

ನನ್ನ ಜೊತೆಗೆ ಹರಸಾಹಸದಿಂದ ಬಂಡೆಯನ್ನು ಹತ್ತಿದ ವಾನರಸೈನ್ಯವು, ಮೌಂಟ್ ಎವರೆಸ್ಟ್ ಪರ್ವತವನ್ನು ಹತ್ತಿದ ತೇನಸಿಂಗ್‌ನಂತೆ ಬೀಗುತ್ತಿದ್ದರೆ, ನಾನು ಮಾತ್ರ ಇಂಗು ತಿಂದ ಮಂಗನಂತಾಗಿದ್ದೆ! 

- ಡಾ| ಎಸ್. ವಿ.ನರಸಿಂಹನ್, ವಿರಾಜಪೇಟೆ.