Sunday, October 3, 2010

Wildlife Messages 2010




DO WE HAVE A FUTURE ON THIS EARTH ?





Wednesday, 29 September 2010



Dear friend,

Today we are proud that we are the most evolved creatures to be born on the Earth. Having the capability for thought and reason, we have excelled all other co-inhabitants and reign them.

With our sheer intelligence, we have built huge bridges across rivers and attained self-sufficiency in foodgrains. We have converted nuclear power to run our powerful machines and to show our strength to our neighbours. Today we can travel on land, navigate in water, fly like a bird in the air and even gone out to explore and exploit our neighbouring planets. We can speak to anybody, in any corner of the world at the touch of a button. In short, we have intelligently utilised all the naturally available materials and converted them for our own use.

All for our selfish goals, to accomplish our greed and to show out might!

But on this very Earth, from minute Bacteria to giant Sequoia, from tiny Amoebas to mighty Whales, each and every lifeform has contributed to the sustenance and equilibrium of all lifeforms on this Earth. It is only we, the humans, who have not participated in this essential and responsible activity. Throughout our existence, we have assumed that all the living and the non-living things on this Earth are meant for our own use and delectation. As though we did not belong to this Earth!

Now the time has come for us to introspect. Scientists say that nearly 99 percent of all the life that evolved on this Earth are extinct today. This is beacause either they were not naturally selected or were unfit to survive or perhaps they did not return anything back to nature. I have a feeling that, even now if we do not mend our ways, if we do not stop abusing nature, soon nature will treat us accordingly and push us towards extermination.

Let us join hands to make our only Earth, a place where all elements of life can live in health, happiness and harmony.

Thank you.

Dr. S V Narasimhan
VIRAJPET 571 218 India.
drnsimhan@yahoo.com
9480730884

The Wildlife Message Cards are individually hand-painted and sent free to individuals throughout the world to mark the Wildlife Week.
Total of hand-painted cards made: this year 2050; in 26 years 53,870.
Total recipients: this year 1130; in 26 years 7460.
Please send more stamps to reduce my burden on postage.



ಭೂಮಿಯ ಮೇಲೆ ಮಾನವನಿಗೆ ಭವಿಷ್ಯವಿದೆಯೆ?


ಬುಧವಾರ, ೨೯ ಸೆಪ್ಟೆಂಬರ್ ೨೦೧೦

ಮಿತ್ರರೆ,

ಇಂದು ಇಳೆಯ ಮೇಲೆ ಜನಿಸಿದ ಎಲ್ಲಾ ಜೀವಿಗಳಿಗಿಂತ ಹೆಚ್ಚು ವಿಕಾಸ ಹೊಂದಿದ ಪ್ರಾಣಿಗಳು ನಾವು ಎಂದು ಹೆಮ್ಮೆಯಿಂದ ಬೀಗುತ್ತೇವೆ. ಆಲೋಚಿಸುವ, ಪ್ರಶ್ನಿಸುವ, ವಿಶ್ಲೇಷಿಸುವ ಶಕ್ತಿಯುಳ್ಳ ನಾವು ಉಳಿದೆಲ್ಲ ಜೀವಿಗಳನ್ನೂ ಮೀರಿ ಅವುಗಳನ್ನು ಆಳುತ್ತಿದ್ದೇವೆ.

ನಮ್ಮ ಬುದ್ಧಿವಂತಿಕೆಯಿಂದ ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿ ನಮ್ಮ ಆಹಾರದ ಪೂರೈಕೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿದ್ದೇವೆ. ಅಣುಶಕ್ತಿಯಿಂದ ವಿದ್ಯುತ್ತಿನ ಉತ್ಪಾದನೆಯಲ್ಲದೆ, ಪರಸ್ಪರ ಶಕ್ತಿ ಪ್ರದರ್ಶನಕ್ಕೂ ಬಳಸುತ್ತಿದ್ದೇವೆ. ನೆಲ, ನೀರು ಹಾಗೂ ಆಕಾಶದಲ್ಲಿ ಲೀಲಾಜಾಲವಾಗಿ ಓಡಾಡುವುದಲ್ಲದೆ, ಇತರ ಗ್ರಹಗಳಲ್ಲಿಯೂ ನಮ್ಮ ಕಾಲಿಟ್ಟಿದ್ದೇವೆ. ಈವತ್ತು ಪ್ರಪಂಚದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯನ್ನು ಕ್ಷಣಾರ್ಧದಲ್ಲಿ ಸಂಪರ್ಕಿಸಬಹುದಾಗಿದೆ. ಒಟ್ಟಿನಲ್ಲಿ ನಮ್ಮ ಬೌದ್ಧಿಕ ನಿಪುಣತೆಯಿಂದ ಭೂಮಿಯ ಮೇಲೆ ದೊರಕುವ ಎಲ್ಲ ನೈಸರ್ಗಿಕ ಸಂಪತ್ತನ್ನು ನಮ್ಮ ಸ್ವಂತಕ್ಕೆ ಉಪಯೋಗಿಸಿಕೊಳ್ಳಲು ಸಮರ್ಥರಾಗಿದ್ದೇವೆ.

ಎಲ್ಲವೂ ನಮ್ಮ ಸ್ವಾರ್ಥಕ್ಕಾಗಿ, ನಮ್ಮ ನಮ್ಮ ದುರಾಸೆಗಳ ಪೂರೈಕೆಗಾಗಿ ಮತ್ತು ನಮ್ಮ ಕ್ರೌರ್ಯದ ಬಲ ಪ್ರದರ್ಶನಕ್ಕಾಗಿ!

ಆದರೆ ಇದೇ ಭೂಮಿಯ ಮೇಲಿರುವ ಇತರ ಜೀವಿಗಳನ್ನು ನೋಡಿ! ಅತಿ ಸೂಕ್ಷ್ಮ ಬ್ಯಾಕ್ಟೀರಿಯಾದಿಂದ ಹಿಡಿದು ದೈತ್ಯ ಸಿಕೋಯಾ ಮರದವರೆಗೆ, ಅಮೀಬಾದಿಂದ ಹಿಡಿದು ತಿಮಿಂಗಿಲದವರೆಗೆ, ಪ್ರತಿಯೊಂದು ಜೀವಿಯೂ ಪ್ರಕೃತಿಯನ್ನು ಪೋಷಿಸಲು ಮತ್ತು ಅದರ ಸಮತೋಲನವನ್ನು ಕಾಪಾಡಲು ತಮ್ಮ ನಿರಂತರ ಕೊಡುಗೆಯನ್ನು ನೀಡುತ್ತಲೇ ಬಂದಿವೆ. ಈ ಅತ್ಯಗತ್ಯ ಮತ್ತು ಜವಾಬ್ದಾರಿಯುತ ಪ್ರಕ್ರಿಯೆಯಲ್ಲಿ ಭಾಗವಹಿಸದವರು ನಾವು -ಮನುಷ್ಯರು- ಮಾತ್ರ! ಬದುಕಿನುದ್ದಕ್ಕೂ ಭೂಮಿಯ ಮೇಲಿರುವ ಎಲ್ಲ ಚರಾಚರ ವಸ್ತುಗಳೂ ಕೇವಲ ನಮ್ಮ ಉಪಯೋಗಕ್ಕಾಗಿ ಮತ್ತು ನಮ್ಮ ಭೋಗಲಾಲಸೆಗಾಗಿ ಎಂದೇ ಭಾವಿಸಿಕೊಂಡು ಬಂದಿದ್ದೇವೆ. ನಾವು ಈ ಭೂಮಿಗೇ ಸೇರಿದವರಲ್ಲವೇನೋ ಎಂಬಂತೆ!

ಆತ್ಮವಿಮರ್ಶೆ ಮಾಡಿಕೊಳ್ಳುವ ಸಮಯ ಬಂದಿದೆ. ಪ್ರಪಂಚದ ಮೇಲೆ ವಿಕಾಸಗೊಂಡ ಜೀವಿಗಳಲ್ಲಿ ಇಂದು ಶೇಕಡ ೯೯ರಷ್ಟು ಜೀವಿಗಳು ಅಳಿದುಹೋಗಿವೆಯೆಂದು ವಿಜ್ಞಾನಿಗಳು ಹೇಳುತ್ತಾರೆ. ಇದಕ್ಕೆ ಕಾರಣ, ಅವುಗಳ ನೈಸರ್ಗಿಕ ಆಯ್ಕೆ ತಪ್ಪಾಗಿರಬಹುದು, ಅಥವಾ ಅವು ಜೀವಿಸಲು ಅಯೋಗ್ಯವಾಗಿರಬಹುದು, ಅಥವಾ ಅವೂ ಕೂಡ ಪ್ರತಿಯಾಗಿ ಪ್ರಕೃತಿಗೆ ಏನನ್ನೂ ನೀಡಿಲ್ಲದೆ ಇರಬಹುದು. ಈಗಲೂ ಕೂಡ ನಾವು ತಿದ್ದಿಕೊಳ್ಳದಿದ್ದರೆ, ನೈಸರ್ಗಿಕ ಸಂಪತ್ತಿನ ದುರ್ಬಳಕೆಯನ್ನು ನಿಲ್ಲಿಸದಿದ್ದರೆ, ಶೀಘ್ರದಲ್ಲಿಯೇ ಪ್ರಕೃತಿಯು ನಾವು ಈ ಭೂಮಿಗೆ ಭಾರ ಎಂದು ತೀರ್ಮಾನಿಸಿ, ನಮ್ಮನ್ನೂ ವಿನಾಶದ ಅಂಚಿಗೆ ದೂಡಿಬಿಡುವ ಸಾಧ್ಯತೆ ಇದೆ ಎಂದು ನನಗನ್ನಿಸುತ್ತದೆ.

ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.

ವಂದನೆಗಳು.

ಡಾ. ಎಸ್. ವಿ. ನರಸಿಂಹನ್
ವಿರಾಜಪೇಟೆ ೫೭೧ ೨೧೮
ದೂರವಾಣಿ: ೯೪೮೦೭೩೦೮೮೪

ಕೈಯಲ್ಲೇ ಚಿತ್ರಿಸಿದ ಒಟ್ಟು ಸಂದೇಶಪತ್ರಗಳ ಸಂಖ್ಯೆ: ಈ ವರ್ಷ ೨೦೫೦; ಕಳೆದ ೨೬ ವರ್ಷಗಳಲ್ಲಿ ೫೩,೮೭೦.
ಸಂದೇಶಪತ್ರಗಳನ್ನು ಪಡೆದವರು: ಈ ವರ್ಷ ೧,೧೩೦; ಕಳೆದ ೨೬ ವರ್ಷಗಳಲ್ಲಿ ೭,೪೬೦.
ದಯವಿಟ್ಟು ಹೆಚ್ಚುಹೆಚ್ಚು ಅಂಚೆಚೀಟಿಗಳನ್ನು ಕಳುಹಿಸಿ, ನನ್ನ ಅಂಚೆವೆಚ್ಚವನ್ನು ತಗ್ಗಿಸಲು ಸಹಕರಿಸಿ.

Monday, April 12, 2010

ಗ್ರಹಣದ ಪರಾಮರ್ಶನ


ಸೂರ್ಯಗ್ರಹಣದ ದಿವ್ಯಾನುಭವದ ಎರಡು ಕಂತುಗಳ್ನ ನನ್ನ ಬ್ಲಾಗ್‌ನಲ್ಲಿ ಓದಿದ ತುಂಬಾ ಸ್ನೇಹಿತ್ರು ಅವರಿಗೇನನ್ನಿಸಿತೋ ಅದನ್ನು ಇಂಚೆಯ ಮೂಲಕ ಹಂಚ್ಕೊಂಡಿದ್ದಾರೆ. ಹೆಚ್ಚಿನವ್ರು ಕಾಮೆಂಟ್ಸ್‌ನಲ್ಲಿ ಬರೆಯದೆ, ಸಪರೇಟಾಗಿ ಮೇಲ್ ಮಾಡಿ ಬರ್ದಿದಾರೆ. ಒಬ್ರಂತೂ ‘ಬಾಳಾ ಚೆನ್ನಾಗಿದೆ, ಇದ್ನೇ ಇಂಗ್ಲಿಷ್‌ನಲ್ಲಿ ಬರ್ದ್ರೆ ಇನ್ನೂ ತುಂಬಾ ಜನ ಓದ್ಬೋದು’ ಅಂದ್ರು. ವಿಜ್ಞಾನದ ವಿಚಾರಗಳ್ನ ಇಂಗ್ಲೀಷ್‌ನಲ್ಲಿ ಬರ್ಯೋ ಜನ ತುಂಬಾ ಇದಾರೆ; ಎಲ್ಲಾರಿಗೂ ಅರ್ಥ ಆಗೋ ಹಾಗೆ ಕನ್ನಡದಲ್ಲಿ ಬರೆಯೋವ್ರೆಷ್ಟು? ಪ್ರೊ. ಜಿಟಿಎನ್ ಅದನ್ನೇ ಅಲ್ವೆ ನಮಗೆ ಹೇಳಿಕೊಟ್ಟಿದ್ದು? ಹಾಗೇಂತ ನಾನು ಬರೆದ್ರೆ ನನ್ನ ಇಂಗ್ಲಿಷ್ ಓದೋಕೆ ನೀವು ರೆಡೀನಾ? ಅಂತ ಬೆದರಿಸ್ದೆ! ನೀವೇನೇ ಹೇಳಿ, ನಮ್ಮ ನಮ್ಮ ಮನಸ್ಸಿನಾಳದಲ್ಲಿರೋ ಅನುಭವಗಳನ್ನ ಹೇಳೋಕೆ ನಮ್ಮ ಭಾಷೇನೇ ಸರಿ. ಏನಂತೀರಾ?

ಎಲ್ಲರೂ ಹೀಗೆ ವ್ಹಾ! ವ್ಹೂ! ಆಹಾ! ಅಂತ ನನ್ನ ಮೇಲಕ್ಕೆ ಹತ್ತಿಸ್ತಾ ಇದ್ದರೆ, ಇದ್ದಕ್ಕಿದ್ದ್‌ಹಾಗೆ ಒಂದು ಲೆಟರ್ ಬಂತೂ ನೋಡಿ, ಸ್ವರ್ಗದಲ್ಲಿ ತೇಲಾಡ್ತಿದ್ದ ನನ್ನ ನೇರವಾಗಿ ಭೂಮೀಗೇ ಎಳಕೊಂಡು ಬಂತು. ಪ್ಯಾರಾಚೂಟ್ ಇಲ್ಲದೆ ಏರೋಪ್ಲೇನ್‌ನಿಂದ ಇಳಿದ್ರೆ ಏನಾಗತ್ತೆ ಅಂತ ನೀವು ಕೇಳಿರ್ಬೋದು, ಆದ್ರೆ ನಂಗೆ ಆವತ್ತು ನಿಜ್ವಾದ ಅನುಭವ ಆಯ್ತು! ಆ ಪತ್ರ ಬರ್ದಿದ್ದು ಪ್ರೊ. ಎಸ್. ಎನ್. ಪ್ರಸಾದ್ ಅಂತ ಮೈಸೂರಿನ ಭೌತಶಾಸ್ತ್ರಜ್ಞರು. ಇವ್ರ ವಿಚಾರಾನ ಮೊದ್ಲು ಹೇಳಿ ಬಿಡ್ತೀನಿ, ಕೇಳಿ:

Dr. ಎಸ್. ಎನ್. ಪ್ರಸಾದ್. ಇವರು ನಿವೃತ್ತ ಭೌತಶಾಸ್ತ್ರದ ಉಪನ್ಯಾಸಕರು ಮತ್ತು ಮೈಸೂರಿನ NCERTಯ ನಿವೃತ್ತ ಪ್ರಾಂಶುಪಾಲರು ಕೂಡ. ಒಬ್ಬ ನಿಜ ವಿಜ್ಞಾನಿಯಲ್ಲಿರಬೇಕಾದ ಎಲ್ಲ ಗುಣಲಕ್ಷಣಗಳೂ ಇವರಲ್ಲಿ ಮೇಳೈಸಿವೆ! ಸತ್ಯನಿಷ್ಠತೆ, ನಿಃಸ್ವಾರ್ಥತೆ, ವಿಶಾಲ ಮನೋಭಾವ, ವಿಷಯದಲ್ಲಿ ಅಚಲಿತ ಶ್ರದ್ಧೆ, ಯಾವತ್ತೂ ತಾನೊಬ್ಬ ವಿದ್ಯಾರ್ಥಿ ಎನ್ನುವ ಭಾವನೆ, ತಪ್ಪಿದರೆ ಒಪ್ಪಿಕೊಳ್ಳುವ ಹೃದಯ ವೈಶಾಲ್ಯತೆ, ತನ್ನ ಜ್ಞಾನವನ್ನು ಮತ್ತೊಬ್ಬರಲ್ಲಿ ಹಂಚಿಕೊಳ್ಳಬೇಕೆನ್ನುವ ತವಕ, ಕಿರಿಯರನ್ನು ಪ್ರೇರೇಪಿಸುವ, ಪ್ರೋತ್ಸಾಹಿಸುವ ಮನೋಭಾವ... ಒಟ್ಟಿನಲ್ಲಿ ಹೇಳುವುದಾದರೆ, ಇವರು ಇಮ್ಮಡಿ ಜಿಟಿಎನ್! ಇವರ ಅಂತರ್ಜಾಲ ತಾಣಕ್ಕೆ ನೀವೂ ಭೇಟಿ ನೀಡಬಹುದು: http://drsnprasadmysoreindia.blogspot.com/


"ನೀನು ಗ್ರಹಣ ನೋಡಿದ್ದೆಲ್ಲ ಸರಿ, ಆದ್ರೆ ಅದು ಭಟ್ಕಳದಲ್ಲಿ ಆಗೋಕೆ ಸಾಧ್ಯಾನೇ ಇಲ್ಲ! ಇಲ್ಲಿ ನೋಡು, ನಾಸಾದವ್ರು ತಯಾರಿಸಿದ ಮ್ಯಾಪ್ ಕಳ್ಸಿದೀನಿ. ಅದ್ರಲ್ಲಿ ಭಟ್ಕಳ ಅನ್ನೋ ಊರು ಸಂಪೂರ್ಣ ಗ್ರಹಣ ನಡಿಯುವ ಪಟ್ಟಿಯಿಂದ ೧೩-೧೪ ಕಿಲೋಮೀಟರು ದಕ್ಷಿಣಕ್ಕೇ ಇದೆಯಲ್ಲ?" ಅಂತ ಅವ್ರು ಬರೆದ್ರು. ಇದೇನಪ್ಪ ಇದು? ಕಷ್ಟ ಬಿದ್ಕೊಂಡು ಹೋದೋನು ನಾನು, ಕಣ್ತುಂಬಾ ಗ್ರಹಣಾನ ನೋಡಿದ್ದು ನಾನು. ನೋಡಿ ಮೂವತ್ತು ವರ್ಷ ಆಗಿದ್ರೂ ಇನ್ನೂ ನೆನ್ನೆ ನೋಡಿದ್‌ಹಾಗಿದೆ. ಅಲ್ಲಿ ನಡೆದೇ ಇಲ್ಲ ಅಂತಾರಲ್ಲ, ಹಂಗಾದ್ರೆ ನಾನು ಹೋಗಿದ್ದೆಲ್ಲಿಗೆ?






ತಲೆಯೆಲ್ಲಾ ಕೆಟ್ಟ ಹಾಗಾಯ್ತು. ನೇರವಾಗಿ ಗೂಗ್ಲ್ ಅರ್ಥ್‌ಗೇ ಹೋದೆ. ಭಟ್ಕಳದ ಅಕ್ಷಾಂಶ-ರೇಖಾಂಶ ಗುರುತು ಮಾಡ್ಕೊಂಡೆ. ನನ್ನ ಹತ್ರ ಇದ್ದ ಖಗೋಳ ತಂತ್ರಾಂಶಗಳಲ್ಲಿ ಇದ್ನ ಆ ದಿನಕ್ಕೆ ಹಾಕಿ ನಡೆಸಿ ನೋಡ್ದೆ. ಇಂಥಾ ತಂತ್ರಾಂಶಗಳಲ್ಲೆಲ್ಲಾ ಅತ್ಯಂತ ನಿಖರವಾದ್ದು, ಅತೀ ವಿಶ್ವಾಸಾರ್ಹವಾದ್ದು Starry Night Pro plus 6.3.3. ಇದನ್ನ ವಾರಕ್ಕೊಂದ್ಸಲ ಅಪ್‌ಡೇಟ್ ಮಾಡ್ತಾ ಇರ್ತಾರೆ! ಯಾಕೇಂದ್ರೆ ಈ ಧೂಮಕೇತುಗಳು, ಕ್ಷುದ್ರ ಗ್ರಹಗಳು ಇವೆಲ್ಲ ಒಂದೇ ರೀತಿ, ಒಂದೇ ದಾರೀಲಿ ಹೋಗಲ್ಲ. ಅಕ್ಕ-ಪಕ್ಕ ಯಾವ್ದಾದ್ರೂ ದೊಡ್ಡ ಗ್ರಹ ಎಳೆದ್ರೆ ವಾಲಿ ಬಿಡ್ತವೆ! ಅದೂ ಅಲ್ದೆ, ಹೊಸ-ಹೊಸ ಆವಿಷ್ಕಾರ, ವಿದ್ಯಮಾನ, ಬದಲಾವಣೆ ಮುಂತಾದವೆಲ್ಲ ಆಕಾಶದಲ್ಲಿ ನಡೀತಾನೇ ಇರ್ತವೆ. ಇದನ್ನೆಲ್ಲ ಕರಾರುವಾಕ್ಕಾಗಿ ಆಗಾಗ ತಂತ್ರಾಂಶಗಳಲ್ಲಿ ಬರೀತಾ ಇರ್ಬೇಕಾಗತ್ತೆ. ಅಂಥ ಸ್ಟಾರೀನೈಟ್ ಕೂಡ ನೀನು ನೋಡಿದ್ದು ಸರಿ, ಭಟ್ಕಳದಲ್ಲಿ ಆವತ್ತು ಸಂಪೂರ್ಣ ಸೂರ್ಯಗ್ರಹಣ ಆಗಿದೆ ಅಂತಾನೇ ತೋರಿಸ್ತು! ಆದ್ರೆ ಇದನ್ನ ಉಳಿದ ತಂತ್ರಾಶಗಳು, ಅದ್ರಲ್ಲೂ Stellarium, Red Shiftಗಳು ಸುತಾರಾಂ ಒಪ್ಲಿಲ್ಲ. ಹಾಗಾದ್ರೆ ಯಾವ್ದು ಸರಿ? ನಾಸಾದವ್ರು ತಪ್ಪು ಹೇಳ್ತಾರಾ?





ರಾತ್ರಿ ಎಲ್ಲಾ ನಿದ್ರೇನೇ ಬರ್ಲಿಲ್ಲ. ನನ್ನ ತಲೇಗೇ ಒಂದು ರೀತಿ ಗ್ರಹಣ ಹಿಡ್ದಿತ್ತು! ಏನ್ಮಾಡ್ಲಿ, ಯಾರನ್ನ ಕೇಳ್ಲಿ, ಅಂತ ಯೋಚ್ನೆ ಮಾಡ್ತಾ ಇದ್ದಾಗ ಒಂದು ವಿಚಾರ ಜ್ಞಾಪಕ ಆಯ್ತು. ಬೆಳಿಗ್ಗೆ ನೇರವಾಗಿ ಅಲ್ತಾಫ್ ಮನೆಗೆ ಹೋದೆ. ನನ್ನ ಕ್ಲಿನಿಕ್-ಅವನ ಬಟ್ಟೆ ಶಾಪ್ ಎರಡೂ ಅಕ್ಕ-ಪಕ್ಕ. ಮೂವತ್ತು ವರ್ಷಕ್ಕೆ ಹಿಂದೆ ನಾನು ಗ್ರಹಣ ನೋಡಿದ್ಮೇಲೆ ವಾಪಾಸ್ ಬಂದಾಗ ಅವನ ಹತ್ರ ಮಾತಾಡಿದ್ದೆ. ನಮ್ಮೂರಲ್ಲಿ ಸುಮಾರು ಎಂಭತ್ತು ವರ್ಷಗಳಿಂದ ಒಂದು ಜಾತಿಯ ಮುಸಲ್ಮಾನರು ವಾಸ ಮಾಡ್ತಾ ಬಂದಿದಾರೆ. ಅವರನ್ನ ಎಲ್ಲರೂ ಬಟ್ಕಳೀಸ್ ಅಂತ ಕರೀತಾರೆ. ಬಟ್ಟೆ-ಪಾದರಕ್ಷೆ ವ್ಯಾಪಾರಸ್ತರು. (ಮೈಸೂರು, ಬೆಂಗ್ಳೂರಲ್ಲಿ ಇರುವ ಬಾದಶಾ ಸ್ಟೋರ್ಸ್ ಇವರದ್ದೆ). ಆವಾಗ ಐದಾರು ಕುಟುಂಬಗಳಿದ್ದಿದ್ದು ಈಗ ಮೂವತ್ತು ದಾಟಿವೆ. ಎಲ್ಲರೂ ಇಲ್ಲೇ ಮಕ್ಕಳು-ಮೊಮ್ಮಕ್ಕಳೊಂದಿಗೆ ವಾಸ ಮಾಡ್ಕೊಂಡು, ಕನ್ನಡ ಶಾಲೆಗೇ ಕಳ್ಸಿ, ಎಲ್ಲಾರ್ಜೊತೆ ಹೊಂದಿಕೊಂಡು ಬಾಳ್ತಾ ಇದಾರೆ. ಬಟ್ಕಳೀಸ್ ಆಗಿರೋದ್ರಿಂದ ಅವರೆಲ್ಲ ಭಟ್ಕಳದವರು ಅಂತ ನಾನು ಯೋಚಿಸಿದ್ದೆ.

ಆದ್ರೆ ಅಲ್ತಾಫ್ ಒಂದು ಹೊಸ ವಿಚಾರ ಹೇಳ್ದ: ನಮ್ಮ ಒರಿಜಿನಲ್ ಊರು ಭಟ್ಕಳದಿಂದ ಆಚೆ ಇರೋ ಮುರ್ಡೇಶ್ವರ. ನೀವು ಆವತ್ತು ಹೋಗಿದ್ದು ಮುರ್ಡೇಶ್ವರಕ್ಕೇ ಇರ್ಬೇಕು. ನಮ್ಮೂರಿಗೆ ಹೋಗಿದ್ರಿ ಅಂತ ನಾನು ಹೇಳಿದ್ದಕ್ಕೆ ನೀವು ಭಟ್ಕಳ ಅಂತ ತಪ್ಪು ತಿಳ್ಕೊಂಡ್ರಿ.






ಇವ್ನು ಹೇಳೋದು ಹೌದಾ? ಮನೆಗೆ ಬಂದು ಗೂಗ್ಲ್ ಅರ್ಥ್ ತೆರೆದೆ. ಭಟ್ಕಳದಿಂದ ಮುರ್ಡೇಶ್ವರಕ್ಕೆ ಸುಮಾರು ೧೩ ಕಿಲೋಮೀಟರು ದೂರ. ಮಧ್ಯೆ ಮಾವಳ್ಳಿ ಅಂತ ಒಂದು ಊರು ಕೂಡ ಇದೆ. ಅದನ್ನ ನದಿ ಬೇರೆ ದಾಟಿ ಹೋಗಬೇಕು. ಆವತ್ತು ನಾನು ಪ್ರಯಾಣ ಮಾಡ್ತಿದ್ದ ಕಾರು NH17ರ ಮೇಲೆ ರುಂ ಅಂತ ಹೋಗ್ತಿರಬೇಕಾದ್ರೆ, ನನ್ನ ಮನಸ್ಸು-ದೃಷ್ಟಿ ಎಲ್ಲಾ ಆಕಾಶದ ಕಡೆಗೇ ಇದ್ದಿದ್ದರಿಂದಲೋ ಏನೋ ನಾನು ಈ ಸೇತುವೆ ದಾಟಿದ್ದೇ ಜ್ಞಾಪಕವಿಲ್ಲ. ಅಲ್ಲದೆ ರಾತ್ರಿ ನಾನು ಯಾವುದೋ ಒಂದು ಬಸ್ ಹತ್ತಿ ಭಟ್ಕಳಕ್ಕೇ ಬಂದು ಲಾಡ್ಜ್‌ನಲ್ಲಿ ತಂಗಿದ್ದೆ. ರಾತ್ರಿ ಕತ್ತಲೆಯಲ್ಲೂ ಈ ಸೇತುವೆ ಮಿಸ್ ಆಯ್ತಾ?

ಪ್ರೊ. ಪ್ರಸಾದ್‌ರವರು ನನ್ನ ಇಷ್ಟಕ್ಕೆ ಬಿಡ್ಲಿಲ್ಲ. ಮತ್ತೊಂದು ನಾಸಾ-ಗೂಗ್ಲ್ ಸಂಯೋಜನೆಯ ಭೂಪಟ ಕಳ್ಸಿದ್ರು. ನಾಸಾದವ್ರ ಈ ಭೂಪಟಗಳು ಡಾ. ಫ್ರೆಡ್ ಎಸ್ಪನ್ಯಾಕ್ ಎಂಬ ಪ್ರಖ್ಯಾತ ಖಗೋಳ ವಿಜ್ಞಾನಿಯ ಲೆಕ್ಕಾಚಾರಗಳ ಮೇಲೆ ಅಧಾರಿತವಾಗಿವೆಯಂತೆ. ಆತನೊಬ್ಬ ಗ್ರಹಣಗಳ ಸ್ಪೆಷಲಿಸ್ಟು! ಅವನ ಲೆಕ್ಕಾಚಾರ ಬಹಳಾ ಬಹಳಾ ಆಕ್ಯುರೇಟು. "ಸರಿಯಾಗಿ ನೋಡು, ನೀನು ಸಂಪೂರ್ಣ ಗ್ರಹಣಾನ ಕಂಡಿದ್ದು ಮುರ್ಡೇಶ್ವರದಲ್ಲೂ ಅಲ್ಲ, ಅದೂ ಗ್ರಹಣದ ಪಟ್ಟಿಯಿಂದ ಅರ್ಧ ಕಿಲೋಮೀಟರು ದಕ್ಷಿಣಕ್ಕೇ ಇದೆ", ಅಂತ ದಬಾಯ್ಸಿದ್ರು. ಅಯ್ಯೋ ದೇವ್ರೆ, ಹಾಗಾದ್ರೆ ನಾನು ಮುರ್ಡೇಶ್ವರಾನೂ ದಾಟಿ ಹೋಗಿದ್ನೇ? ಮೂವತ್ತು ವರ್ಷಕ್ಕೆ ಹಿಂದೆ ಅವೆಲ್ಲ ಹೊಸ ಜಾಗಗ್ಳು. ಈವತ್ತಿಗೂ ನಾನು ಆ ಕಡೆ ಪುನಃ ಹೋಗಿಲ್ಲ.



ಪ್ರೊಫೆಸರ್ ಸಾಹೇಬರು ಮತ್ತೊಂದು ಮನ ತಟ್ಟೋ ಪತ್ರ ಬರೆದ್ರು: "ನೋಡು, ಈವತ್ತು ೨೦೧೦ ಫೆಬ್ರವರಿ ೧೩. ಬೆಸ್ಟ್ ಐಡಿಯಾ ಏನೂಂದ್ರೆ ಇನ್ನು ಮೂರೇ ದಿವ್ಸಕ್ಕೆ, ಅಂದ್ರೆ ನಾಡಿದ್ದು ೧೬ನೇ ತಾರೀಕು, ಆ ನಿನ್ನ ಅಮೂಲ್ಯ ಗ್ರಹಣದ ಮೂವತ್ತನೇ ಪುಣ್ಯ ಜಯಂತಿ! ನಿಂಗೆ ಪ್ರಾಕ್ಟಿಸ್ ಬಿಟ್ಟು ಹೊರಡೋಕೆ ಕಷ್ಟ ಅಗ್ಬೋದು. ಆದ್ರೂ ಬೆಳಿಗ್ಗೆ ಎದ್ದು ನಿನ್ನ ಕಾರ್‌ನಲ್ಲಿ ಅದೇ ದಾರಿ ಹಿಡ್ಕೊಂಡು ಹೋಗು. ನೀನು ನೋಡಿದ್ದ ಜಾಗ ಸಿಕ್ಕೇ ಸಿಗತ್ತೆ! ಅದಕ್ಕಿಂತ ಜೀವನದಲ್ಲಿ ಇನ್ನೇನು ಸಾಧನೆ ಬೇಕು?" ಇದನ್ನಲ್ಲವೆ ಒಬ್ಬ ವಿಜ್ಞಾನಿಯ ಆಂತರ್ಯ ಅನ್ನೋದು! ಸತ್ಯಶೋಧನೆಯಲ್ಲಿ ಸಫಲರಾಗೋ ತನಕ ಛಲ ಬಿಡಲ್ಲ!


ನನ್ನ ಮನೆ ಪರಿಸ್ಥಿತೀಲಿ ನಾನು ಊರು ಬಿಟ್ಟು ಎಲ್ಲಿಗೂ ಹೋಗೋ ಹಾಗಿರ್ಲಿಲ್ಲ. ಆವತ್ತು ಗ್ರಹಣ ನೋಡಿದವ್ರು ಯಾರಾದ್ರೂ ಇನ್ನೂ ಮುರ್ಡೇಶ್ವರದಲ್ಲೇ ಇರ್ಬೋದಾ? ಆ ಕಾಲದವ್ರು ಅಥವಾ ನಮ್ಮೂರ ಬಟ್ಕಳೀಸ್ ಜನರ ನೆಂಟ್ರು ಅಥವಾ ಯಾರಾದ್ರೂ ಶಾಲೆಯ ಟೀಚರ್ಸು? ಬಾದಶಾ ಅಂಗಡೀ ದಿಲ್ದಾರ್‌ನ ಕೇಳ್ದೆ. ಆತ ಮೊದಲೇ ಅಪಶಕುನದ ರಾಗ ಹಾಡ್ದ. "ನೀವು ಒಂದು ಆಲೋಚಿಸ್ಬೇಕು ಸ್ವಾಮಿ. ಗ್ರಹಣ ಸಮಯದಲ್ಲಿ ನಾವು ಗಂಡಸ್ರು ಬಿಡಿ, ಲೇಡೀಸ್-ಮಕ್ಳು ಯಾರೂ ಹೊರಗೆ ಹೋಗಿ ನೋಡೋ ಹಾಗೇ ಇಲ್ಲ. ಬಾಗಿಲು-ವಿಂಡೋಸ್ ಎಲ್ಲ ಬಂದ್!"

ಕೊನೆಗೆ ಮನ್ನಾ ಸ್ಟೋರ್ಸ್‌ನ ಮೀರಾ ಅಲ್ಲಿ-ಇಲ್ಲಿ ತಲಾಶ್ ಮಾಡಿ ಮುರ್ಡೇಶ್ವರದ ಒಂದು ಶಾಲೇ ಫೋನ್ ನಂಬರ್ ಕೊಟ್ಟ. ಅಲ್ಲಿಯ ಹೆಡ್ ಮೇಡಂ ಜೊತೆ ಮಾತನಾಡಿದೆ. "ನನ್ನಿಂದ ಸಾಧ್ಯ ಆಗೋ ಅಷ್ಟು ಪ್ರಯತ್ನ ಪಡ್ತೀನಿ, ನಿಮ್ಮ ಸಂಶೋಧನೆಗೆ ಏನಾದರೂ ಪ್ರಯೋಜನವಾಗುತ್ತೋ ನೋಡೋಣ. ಇಲ್ಲಿ ಕೆಲವರನ್ನು ವಿಚಾರಿಸಿ ನಿಮಗೆ ತಿಳಿಸುತ್ತೇನೆ," ಎಂದರು. ನನ್ನ ದುರದೃಷ್ಟಕ್ಕೆ ಶಾಲೆ ಮುಗಿದು ರಜಾ ಶುರುವಾಗಿದೆ.





ಸತ್ಯಾನ್ವೇಷಣೇನೇ ಒಂದ್ರೀತಿ ತಪಸ್ಸು. ಅದ್ರ ಕೊನೇಲಿ ಸಿಗೋ ಅಂತ ಆತ್ಮಸಂತೃಪ್ತಿ ಇದ್ಯಲ್ಲ ಅದ್ರಲ್ಲಿ ಎಂತ ಮಜಾ ಇದೇಂತ ಎಲ್ಲ ವಿಜ್ಞಾನಿಗ್ಳೂ ಹೇಳ್ತಾನೇ ಬಂದಿದಾರೆ. ನಮ್ಮ ಜಿಟಿಎನ್ ಆಗ್ಲೀ, ಪ್ರಸಾದ್ ಆಗ್ಲೀ, ಅವ್ರಿಂದ ಇದ್ನೇ ನಾವು ಕಲೀಬೇಕಾಗಿರೋದು. ಪ್ರೊ. ಪ್ರಸಾದ್‌ರವ್ರು ಹೇಳ್ದ ಹಾಗೆ ನೇರವಾಗಿ ಉತ್ತರ ಕನ್ನಡ ಜಿಲ್ಲೇಗೆ ಪ್ರಯಾಣ ಹೊರಟೇ ಬಿಡೋದಾ ಅಂತಲೂ ಆಲೋಚಿಸ್ತಿದೀನಿ. ಮೂವತ್ತು ವರ್ಷಕ್ಕೆ ಹಿಂದೆ ಮುರ್ಡೇಶ್ವರ ಅನ್ನೋ ಊರು, ಕಣ್ಣಿಗೂ ಕಾಣದ ಒಂದು ಹಳ್ಳಿ ಆಗಿತ್ತಂತೆ! ಈಗ ಬಾಳಾ ಬೆಳ್ದುಬಿಟ್ಟಿದೆ. ನಾಗರೀಕತೆಯ ಬೆಳ್ವಣಿಗೆ ಅಂದ್ರೇನು? ಹೆದ್ದಾರಿಯ ಎರ್ಡೂ ಕಡೆ ಎತ್ತರೆತ್ತರವಾದ ಕಾಂಕ್ರೀಟ್ ಕಟ್ಟಡಗ್ಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು ಇಷ್ಟೇ ತಾನೆ? ಅಲ್ಲಿ ನಾನು ಆವತ್ತು ನೋಡಿದ್ದ ಶಾಲೆ ಇನ್ನೂ ಇರತ್ತಾ? ಅಥವಾ ಅದೂ ಬೆಳೆದು ದುಡ್ಡು ಮಾಡೋ ಕಾಲೇಜಾಗಿ ಬಿಟ್ಟಿರತ್ತಾ? ನೋಡಿದ್ರೂ ಗುರ್ತು ಹಿಡ್ಯೋದು ಹೇಗೆ? ಇಂತಾ ಕೊಷ್ಣೆಗ್ಳು ನನ್ನ ತಲೇನ ದಿನಾ ಕೊರೀತಾ ಇವೆ. ಈವತ್ತಲ್ಲ, ನಾಳೆ ಅಲ್ಲೀಗೆ ಹೋಗೇ ಹೋಗ್ತೀನಿ. ಆ ದಿವ್ಸ ಬೇಗ್ನೆ ಬರ್ಲಿ ಅಂತ ನೀವೂ ಹಾರೈಸಿ.









Tuesday, March 23, 2010

ಹಿರಿಹಿರಿ ಹಿಗ್ಗಿ ಹೀರೇಕಾಯಾದ ಹೋಮ್ಸ್!


ಹಿರಿಹಿರಿ ಹಿಗ್ಗಿ ಹೀರೇಕಾಯಾದ ಹೋಮ್ಸ್!

ಜಗದೀಶ ಲಾಯರು ನಮ್ಮಗೆಲ್ಲ ಆತ್ಮೀಯರು, ಅಲ್ಲದೆ ಕುಟುಂಬದ ಹಿತೈಷಿಗಳು. ಅವರ ತಂದೆ ರಾಮಮೂರ್ತಿ ಲಾಯರೂ ಕೂಡ ನನ್ನ ತಂದೆಗೆ ಬಹಳ ಬೇಕಾದವರು. ಹೀಗೆ ನಮ್ಮಿಬ್ಬರ ಕುಟುಂಬದ ಸದಸ್ಯರೆಲ್ಲರೂ ಒಬ್ಬರಿಗೊಬ್ಬರು ಚಿರಪರಿಚಿತರೇ! ಜಗದೀಶ ಲಾಯರ ಮಗ ನಿಖಿಲ್ ರಾಮಮೂರ್ತಿ ಲಾಯರ್‌ಗಿರಿ ಓದಿದ್ದರೂ ಅಪ್ಪನ-ಅಜ್ಜನ ವೃತ್ತಿ ಮುಂದುವರಿಸಲು ಸ್ವಲ್ಪ ಹಿಂದೇಟು ಹಾಕುತ್ತಿದ್ದಾನೆ. ಎಸ್ಟೇಟುಗಳ ಉಸ್ತುವಾರಿಯೂ ಇವನ ಹೆಗಲ ಮೇಲೇ ಇದೆ. ಆದರೆ ಅವನ ಪ್ರವೃತ್ತಿಗಳು ಹಲವಾರು. ಒಳಾವರಣ ವಿನ್ಯಾಸದ (Interior designing) ವಿಷಯವನ್ನು ಓದಿ ಅದನ್ನು ಹಲವಾರು ಕಡೆ ಕಾರ್ಯರೂಪಕ್ಕಿಳಿಸುವಲ್ಲಿ ಸಫಲನಾಗಿದ್ದಾನೆ.

ನಿಖಿಲ್‌ನ ಮತ್ತೊಂದು ಹವ್ಯಾಸ ಖಗೋಳ ವೀಕ್ಷಣೆ. ಅವನ ಅಕ್ಕ ಡಾ. ಅನುಪಮಾ ಅಮೆರಿಕಾದಲ್ಲಿ ವೈದ್ಯಳಾಗಿದ್ದಾಳೆ. ಈ ಹಿಂದೆ ಅವಳು ಭಾರತಕ್ಕೆ ಬರುವಾಗ ಅಲ್ಲಿಂದ ಒಂದು ದೂರದರ್ಶಕವನ್ನು ಅವನಿಗೆ ಉಡುಗೊರೆಯಾಗಿ ತಂದಿದ್ದಳು. ಅದನ್ನು ವಿಧಿವತ್ತಾಗಿ ಅಳವಡಿಸಿ ಪ್ರತಿಷ್ಠಾಪಿಸಲು ನನ್ನನ್ನು ಆಗಾಗ ಕರೆದ. ಆ ವೇಳೆಗೆ ಮಳೆಗಾಲವೂ ಪ್ರಾರಂಭವಾದ್ದರಿಂದ, ಹಾಗೂ ನನ್ನ ಸ್ವಾಭಾವಿಕ ಸೋಮಾರಿತನದ ಉಡಾಫೆಯಿಂದ ಹಲವು ತಿಂಗಳುಗಳ ಕಾಲ ಹೋಗಲೇ ಇಲ್ಲ. ಕೊನೆಗೊಂದು ದಿನ, ಅಕ್ಟೋಬರ್ ೨೯, ೨೦೦೭ರಂದು ರಾತ್ರಿ, ಅವರ ಮನೆಗೆ ಹೋದೆ. ಛಳಿಗೆ ಸ್ವೆಟರ್ರು, ತಲೆಗೆ ಉಲ್ಲನ್ ಟೋಪಿ ಸಹಿತವಾಗಿ ಹೋಗಿದ್ದು ನೋಡಿ ಲಾಯರು ನಕ್ಕರು, ‘ಏನ್ ಡಾಕ್ಟ್ರೆ, ಹೊಸ ಪೇಷೆಂಟನ್ನ ನೋಡೋಕೆ ಬೆಚ್ಚಗೆ ಬಂದಿದ್ದೀರಿ?’

ನಿಖಿಲ್ ತನ್ನ ಟೆಲಿಸ್ಕೋಪನ್ನು ಹೊರತಂದ. ಆಗಲೇ ಅದರ ಪಟ್ಟಾಭಿಷೇಕವಾಗಿತ್ತು. ನೋಡಿದೊಡನೆ ಅದೊಂದು ಬಹಳ ಸಾಧಾರಣವಾದ ದೂರದರ್ಶಕವೆಂಬುದು ತಿಳಿಯುತ್ತಿತ್ತು. ಏಕೆಂದರೆ, ಅದರಲ್ಲಿ ಎಲ್ಲವೂ ಇದೆ, ಆದರೆ ಯಾವುದೂ ನಿಖರವಾಗಿಲ್ಲ. ಆ ಕಡೆ ಇಂಥ ಟೆಲಿಸ್ಕೋಪುಗಳನ್ನು Trash Telescopes ಎಂದು ಕರೆಯುತ್ತಾರೆ. ಏನು ಕಾಣಿಸುವುದೋ ಅದನ್ನೇ ನೋಡಿ ಖುಷಿ ಪಡೋಣ ಎಂದು ಅಂಗಳದಲ್ಲಿ ಅದನ್ನು ನಿಲ್ಲಿಸಿ, ಕಣ್ಣಿಗೆ ಕಾಣುತ್ತಿದ್ದ ಚಂದ್ರನನ್ನು, ಕೆಲವು ನೀಹಾರಿಕೆಗಳನ್ನು, ನಕ್ಷತ್ರಪುಂಜಗಳನ್ನು ತೋರಿಸತೊಡಗಿದೆ. ಜಗದೀಶ ಲಾಯರ ಮನೆ ಸ್ವಲ್ಪ ತಗ್ಗಿನಲ್ಲಿರುವುದರಿಂದ ಹಾಗೂ ಎದುರುಗಡೆ ಮಲೆತಿರಿಕೆ ಬೆಟ್ಟವಿರುವುದರಿಂದ ಪೂರ್ವದಲ್ಲಿ ಎಲ್ಲವೂ ಅರ್ಧ ಘಂಟೆ ಲೇಟಾಗಿಯೇ ಕಂಡುಬರುತ್ತವೆ!

ವೇಳೆ ರಾತ್ರಿ ಒಂಭತ್ತೂವರೆ ಕಳೆದದ್ದರಿಂದ ಪಶ್ಚಿಮದಲ್ಲಿ ಮುಳುಗುತ್ತಿರುವ ಗುರುಗ್ರಹವನ್ನು ಬಿಟ್ಟರೆ ಇನ್ನಾವುದೇ ಗ್ರಹ ಆಕಾಶದಲ್ಲಿ ಕಾಣುತ್ತಿರಲಿಲ್ಲ. ಎಂಟು ಘಂಟೆಗೇ ಶುಕ್ರಗ್ರಹ ಮುಳುಗಿಯಾಗಿತ್ತು. ನೆತ್ತಿಯ ಹತ್ತಿರವಿದ್ದ ಅಂಡ್ರೋಮೆಡ ಬ್ರಹ್ಮಾಂಡವನ್ನು ನೋಡುವಷ್ಟರಲ್ಲಿ ಅವರೆಲ್ಲರ ಕುತೂಹಲ ಸಾಕಷ್ಟು ಮಾಯವಾಗಿತ್ತು. ಏಕೆಂದರೆ ಅದೂ ಕೂಡ ಆ ದೂರದರ್ಶಕದಲ್ಲಿ ಶೋಭಾಯಮಾನವಾಗೇನೂ ಕಾಣುತ್ತಿರಲಿಲ್ಲ. ನೇರವಾಗಿ ನನ್ನ ಬೈನಾಕ್ಯುಲರ್‌ನಲ್ಲಿ ತೋರಿಸಹೋದೆ. ಕತ್ತನ್ನು ಎತ್ತಿ ಎತ್ತಿ ಕತ್ತು ನೋವು ಬಂತು ಎಂದರು. ಪೂರ್ವದಲ್ಲಿ ಕೃತ್ತಿಕಾ ನಕ್ಷತ್ರಪುಂಜ ನೋಡಲು ಬಲು ಚಂದ. ಎಲ್ಲರೂ ನೋಡಿ ಸಂತೋಷಪಟ್ಟರು. ಹತ್ತೂಕಾಲರ ಹೊತ್ತಿಗೆ ಮಹಾವ್ಯಾಧ ಪೂರ್ವದಲ್ಲಿ ಕಾಣಿಸಿತು. ಬರಿ ಕಣ್ಣಿಗೆ ಕಾಣುವ ಒಂದೇ ನೀಹಾರಿಕೆ ಮಹಾವ್ಯಾಧನಲ್ಲಿದೆ ಎಂದು ವಿವರಿಸಿ ಅತ್ತ ದೂರದರ್ಶಕವನ್ನು ತಿರುಗಿಸಿದೆ. ಪುಣ್ಯಕ್ಕೆ ಶುಭ್ರವಾಗಿ ಕಾಣುತ್ತಿತ್ತು. ಒಟ್ಟಿನಲ್ಲಿ ಆವತ್ತು ಎಲ್ಲಕ್ಕಿಂತ ಚೆನ್ನಾಗಿ ಕಂಡದ್ದು ಕೃಷ್ಣಪಕ್ಷದ ಚೌತಿಯ ಚಂದ್ರ!

‘ಇನ್ನಾವುದೂ ಗ್ರಹ ಕಾಣೋದಿಲ್ಲವೆ?’ ಎಂದು ಲಾಯರು ಕೇಳಿದರು. ‘ಇಲ್ಲಾ ಸಾರ್, ಶನಿಗ್ರಹವನ್ನು ನೋಡಬೇಕಾದರೆ, ರಾತ್ರಿ ಮೂರು ಘಂಟೆಯವರೆಗೆ ಕಾಯಬೇಕು! ಉಳಿದವು, ಮಂಗಳ, ಶುಕ್ರ ಮತ್ತು ಬುಧ ಸಾಲಾಗಿ ಮುಂಜಾವಿಗೆ ಉದಯಿಸುತ್ತವೆ’, ಎಂದು ವಿವರಿಸಿದೆ. ‘ನಿನ್ನ ತಲೆ, ಈವತ್ತು ಯಾಕೆ ಬಂದೆ? ಎಲ್ಲ ಗ್ರಹಗಳೂ ಕಾಣೋ ದಿನ ಬಂದು ತೋರಿಸು. ಎಲ್ಲಾರೂ ನೋಡೋಣ’, ಎಂದು ತಲೆಯ ಮಂಕಿ ಟೋಪಿಯನ್ನು ತೆಗೆದು ಒಂದು ಸಾರಿ ಒದರಿದರು. ನಿಖಿಲ್‌ನ್ನು ವಾರೆಗಣ್ಣಲ್ಲಿ ನೋಡಿದೆ. ತಂದೆಗೆ ಕಾಣದಂತೆ ಅತ್ತ ತಿರುಗಿ ಮುಸಿಮುಸಿ ನಗುತ್ತಿದ್ದ.

ಇದ್ದಕ್ಕಿದ್ದಂತೆ ನನ್ನ ದೃಷ್ಟಿ ಉತ್ತರದ ಪರ್ಸಿಯಸ್ ನಕ್ಷತ್ರಪುಂಜದ ಕಡೆಗೆ ತಿರುಗಿತು. (ಭಾರತದ ಖಗೋಳಶಾಸ್ತ್ರಜ್ಞರು ಈ ತಾರಾಮಂಡಲವನ್ನು ‘ಪಾರ್ಥ’ ಎಂದು ಕರೆಯುತ್ತಾರೆ.) ಅಲ್ಲಿ ನಾನು ಯಾವತ್ತೂ ಕಂಡಿರದ ಒಂದು ವಿದ್ಯಮಾನ ಕಣ್ಣಿಗೆ ಬಿತ್ತು. ಅಲ್ಲಿ ದೊಡ್ಡದಾದ, ಉರುಟಾದ ಒಂದು ಆಕಾಶಕಾಯ ಬರಿಗಣ್ಣಿಗೇ ಎದ್ದು ತೋರುತ್ತಿತ್ತು. ಸಣ್ಣ ಮೋಡದ ತುಣುಕು ಇದ್ದಂತೆ! ಶುಭ್ರವಾದ ಆಕಾಶವಿರುವಾಗ ಮೋಡಕ್ಕೆಲ್ಲಿಯ ಅವಕಾಶ? ಮೊದಲು ಬೈನಾಕ್ಯುಲರ್‌ನಿಂದ ನೋಡಿದೆ. ಚಂದ್ರನ ಗಾತ್ರದ ಚೆಂಡು! ಮೋಡ ಎಲ್ಲಾದರೂ ಇಷ್ಟು ಉರುಟಾಗಿರುತ್ತದೆಯೇ? ಖಂಡಿತವಾಗಿಯೂ ಅದು ಮೋಡವಾಗಿರಲಿಲ್ಲ. ಬಹಳ ಆಶ್ಚರ್ಯವಾಗತೊಡಗಿತು. ಇವೆಲ್ಲಕಿಂತ ನನ್ನನ್ನು ಕಾಡಿದ ಪ್ರಶ್ನೆ, ಇಷ್ಟು ಹೊತ್ತು ಇದೆಲ್ಲಿತ್ತು? ಸುಮಾರು ಒಂದು ಘಂಟೆಯ ಆಕಾಶವೀಕ್ಷಣೆ ಮಾಡಿದ್ದೆವು. ಉತ್ತರದಲ್ಲಿ ಪಾರ್ಥ ಮಾತ್ರ ಏಕೆ, ಅವನೊಡನೆ ಅವನಮ್ಮ ಕುಂತಿ (Cassiopeia), ಅವನ ಅಣ್ಣ ಯುಧಿಷ್ಠಿರ (Cepheus), ಪತ್ನಿ ದ್ರೌಪದಿ (Andromeda), ಮಿಗಿಲಾಗಿ ಗೀತಾಚಾರ್ಯನಾದ ವಿಜಯಸಾರಥಿ (Auriga), ಹೀಗೆ ಇಡೀ ಸಂಸಾರವನ್ನೇ ನೋಡುತ್ತಿದ್ದ ನಮಗೆ ಇವರೆಲ್ಲರ ನಡುವೆ ದಿಢೀರನೆ ಇದೆಲ್ಲಿಂದ ಪ್ರತ್ಯಕ್ಷವಾಯಿತು? ನಿಖಿಲ್‌ಗೆ ಈ ಹೊಸ ಆಕಾಶಕಾಯವನ್ನು ತೋರಿಸಿದೆ. ಅವನಿಗೂ ಅಶ್ಚರ್ಯವಾಯಿತು. ಅವನೂ ಈವರೆಗೆ ಇಂತಹದ್ದೊಂದು ಗೋಳವನ್ನು ಕಂಡಿರಲಿಲ್ಲ.






ಟೆಲಿಸ್ಕೋಪನ್ನೇ ಅತ್ತ ಮುಖ ಮಾಡಿದೆವು. ಈಗ ಆ ವಿಚಿತ್ರಕಾಯ ಬೈನಾಕ್ಯುಲರ್‌ನಲ್ಲಿ ಕಂಡದ್ದಕ್ಕಿಂತ ಸ್ಪಷ್ಟವಾಗಿ ಕಾಣುತ್ತಿತ್ತು. ಅಲ್ಲದೆ ಆ ಸುಂದರವಾದ ಮೋಡದ ಚೆಂಡಿನ ದೇಹದೊಳಗಿಂದ ಅದರ ಹಿಂದೆ ಇದ್ದ ಎರಡು ನಕ್ಷತ್ರಗಳೂ ಗೋಚರಿಸುತ್ತಿದ್ದವು. ಅಂದರೆ, ಇದು ಯಾವುದೇ ಘನವಾದ ಆಕಾಶಕಾಯವಲ್ಲ. ಇದೇನಿರಬಹುದು? ಅಲ್ಲಿದ್ದ ಒಂದು ನಕ್ಷತ್ರ ಸ್ಫೋಟವಾಯಿತೇ? ಅಥವಾ ಅದೊಂದು ಧೂಮಕೇತುವೇ? ಆದರೆ ಹೀಗೆ ಇದ್ದಕ್ಕಿದ್ದಂತೆ ರಂಗಪ್ರವೇಶ ಮಾಡುವ ಕಾರಣವೇನು ಅಥವಾ ಉದ್ದೇಶವೇನು? ಮತ್ತೆ ಮತ್ತೆ ಹೊಸ ಪಾತ್ರಧಾರಿಯನ್ನೇ ನೋಡಿದೆವು. ನನಗಂತೂ ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಾಗುತ್ತಿತ್ತು. ಆಗಲೇ ಇರುಳು ಹನ್ನೊಂದಾಗಿತ್ತು. ಹೊಸ ಆಕಾಶಕಾಯದ ಬಗ್ಗೆಯೇ ಆಲೋಚಿಸುತ್ತ ನೇರವಾಗಿ ಮನೆಗೆ ಬಂದೆ.

ಬಂದೊಡನೆ ನನ್ನ ಹೆಂಡತಿ, ಪುಷ್ಪಾಳನ್ನು ಕರೆದು ಹೊಸ ಮಿತ್ರನನ್ನು ತೋರಿಸಿದೆ. ಆಶ್ಚರ್ಯದಿಂದ ನೋಡಿದಳು. ಈ ಸರಿರಾತ್ರಿಯಲ್ಲಿ ಯಾರಿಗೆ ಹೇಳುವುದು, ಇನ್ನಾರಿಗೆ ತೋರಿಸುವುದು? ‘ಮೈಸೂರಿನ ನಿಮ್ಮ ಗುರುಗಳೇ ಇದ್ದಾರಲ್ಲ, ಪ್ರೊ. ಜಿ. ಟಿ. ನಾರಾಯಣ ರಾವ್, ಅವರಿಗೇ ಫೋನ್ ಮಾಡಿ ಹೇಳಿ’ ಎಂದು ಸಲಹೆಯಿತ್ತಳು. ‘ಇಷ್ಟು ಹೊತ್ತಿಗೆ ಅವರು ನಿದ್ದೆ ಮಾಡುತ್ತಿರುವುದಿಲ್ಲವೆ?’ ಎಂದೆ. ‘ಏನಾದರಾಗಲಿ, ಅವರ ಮನೆಯಲ್ಲಿಯೇ ಯಾರಿಗಾದರೂ ಹೇಳಿದರೆ, ಪ್ರೊಫೆಸರ್ರು ಎದ್ದ ಮೇಲೆ ತಿಳಿಸುತ್ತಾರೆ,’ ಎಂದು ಒತ್ತಾಯಿಸಿದಳು. ನೇರವಾಗಿ ಪ್ರೊ. ಜಿಟಿಎನ್‌ರವರ ಮನೆಗೆ ರಿಂಗಿಸಿದೆ. ಆ ಕಡೆ ಅವರ ಸೊಸೆ ಫೋನ್ ಸ್ವೀಕರಿಸಿದ್ದರು. ಅವರಿಗೆ ಮೊದಲು ನನ್ನ ಪ್ರವರ ಅರ್ಪಿಸಿದೆ. ಹೀಗೆ, ನಾನು ವೀರಾಜಪೇಟೆಯ ಡಾ. ನರಸಿಂಹನ್, ಹವ್ಯಾಸಿ ಖಗೋಳ ವೀಕ್ಷಕ, ಪ್ರೊಫೆಸರ್ ಜಿಟಿಎನ್‌ರವರಿಗೆ ನನ್ನ ಪರಿಚಯವಿದೆ, ಹೀಗೊಂದು ಹೊಸ ಆಕಾಶಕಾಯ ಆಕಾಶದಲ್ಲಿ ಕಾಣಿಸುತ್ತಿದೆ, ಅದು ಪರ್ಸಿಯಸ್ ನಕ್ಷತ್ರಪುಂಜದ ಡೆಲ್ಟಾ(δ) ಮತ್ತು ಆಲ್ಫಾ(α)ಗಳ ನಡುವೆ ಕೆಳಭಾಗದಲ್ಲಿ ಗೋಚರಿಸುತ್ತಿದೆ, ಅದು ಏನು ಎಂದು ದಯವಿಟ್ಟು ಪ್ರೊಫೆಸರ್ ಸಾಹೇಬರ ಹತ್ತಿರ ವಿಚಾರಿಸಬೇಕು, ನಾಳೆ ನಾನೇ ಅವರಿಗೆ ಪುನಃ ಕರೆನೀಡುತ್ತೇನೆ.

ಒಂದು ದೊಡ್ಡ ಕೆಲಸ ಮುಗಿಯಿತು. ಮುಂದೇನು? ಫೋಟೋ ತೆಗೆಯೋಣವೆಂದರೆ, ನನ್ನ ಬಳಿ ಅಷ್ಟು ಶಕ್ತಿಯುತವಾದ ಕ್ಯಾಮೆರಾ ಇರಲಿಲ್ಲ. ಗೆಳೆಯ ಡಾ. ಬಿಶನ್ ಹತ್ತಿರವೇನೋ ಇದೆ, ಆದರೆ ಈ ಸರಿರಾತ್ರಿಯಲ್ಲಿ ಅವನಿಗೆ ಹೇಗೆ ಹೇಳುವುದು? ಖಗೋಳ ವೀಕ್ಷಣೆ ರಾತ್ರಿಯಲ್ಲದೆ ಹಗಲು ಮಾಡುತ್ತಾರೇನು, ಎಂದು ನನಗೆ ನಾನೇ ಸಮಜಾಯಿಷಿ ಹೇಳಿಕೊಂಡು ಫೋನಲ್ಲಿ ಬಿಶನ್‌ಗೆ ವಿಷಯ ತಿಳಿಸಿದೆ. ತಕ್ಷಣ ಅವನು ‘ನಾನೀಗಲೇ ಅಲ್ಲಿಗೆ ಬರುತ್ತೇನೆ’ ಎಂದು ತನ್ನ ಎಲ್ಲ ಕ್ಯಾಮೆರಾ ಸಾಮಗ್ರಿಗಳೊಂದಿಗೆ ಹಾಜರಾದ. ನಮ್ಮ ಮನೆಯ ತಾರಸಿಯ ಮೇಲೆ ಹೋಗಿ ಫೋಟೊ ತೆಗೆಯಲು ಪ್ರಯತ್ನಿಸಿದೆವು. ಆ ದಿಕ್ಕಿನಲ್ಲಿ ಭಯಂಕರವಾದ ಒಂದು ಸೋಡಿಯಂ ದೀಪ ಆ ಭಾಗದ ಆಕಾಶವನ್ನೇ ಮಬ್ಬು ಮಾಡಿಬಿಟ್ಟಿತ್ತು. ಈ ಪಂಚಾಯಿತಿಯವರು ಹಾದಿದೀಪಗಳನ್ನು ರಸ್ತೆ ಕಾಣಲು ಹಾಕಿರುತ್ತಾರೋ ಅಥವಾ ಆಕಾಶ ನೋಡಲು ನೆಟ್ಟಿರುತ್ತಾರೋ ಎಂಬ ಸಂಶಯ ಬಂತು!

ಬಿಶನ್, ‘ಇಲ್ಲಿ ಬೇಡ, ನಮ್ಮ ಮನೆಯ ಮೇಲೆ ಹೀಗೆ ಬೆಳಕಿಲ್ಲ, ಅಲ್ಲಿಗೇ ಹೋಗೋಣ’ ಎಂದ. ಹೇಗಾದರೂ ಮಾಡಿ ಆ ಆಕಾಶಕಾಯವನ್ನು ಸೆರೆಹಿಡಿಯಬೇಕೆಂದು ತೀರ್ಮಾನಿಸಿದ್ದೆವು. ನನ್ನ ಚಡಪಡಿಕೆ ನೋಡಿ ನನ್ನವಳಿಗೆ ಒಳಗೊಳಗೇ ನಗು! ‘ಇದ್ಯಾಕೆ ಹೀಗೆ ಮೈ ಮೇಲೆ ಜಿರಳೆ ಬಿಟ್ಟುಕೊಂಡವರಂತೆ ಆಡುತ್ತಿದ್ದೀರ? ಅವನೊಂದಿಗೆ ಹೋಗಿ ಅದೇನು ಚಿತ್ರ ಬೇಕೋ ತೆಗೆದುಕೊಂಡು ಬನ್ನಿ. ಒಟ್ಟಿನಲ್ಲಿ ನಿಮ್ಮ ಈ ಆಕಾಶಶಾಸ್ತ್ರದಿಂದ ನನ್ನ ನಿದ್ದೆ ಹಾಳಾಯಿತು!’ ಅವಳು ಹೇಳುವುದೂ ಸರಿ. ಬೆಳಿಗ್ಗೆ ಐದು ಘಂಟೆಗೆ ಎದ್ದರೆ, ರಾತ್ರಿ ಹನ್ನೊಂದರವರೆಗೂ ಒಂದೇ ಸಮನೆ ಕೆಲಸ ಮಾಡುವ ವರ್ಕೋಹಾಲಿಕ್ ಅವಳು. ನಾನಾದರೋ ರಾತ್ರಿ ಗಡದ್ದಾಗಿ ನಿದ್ದೆ ಮಾಡುವುದಲ್ಲದೆ, ಹಗಲಲ್ಲೂ ಸಮಯ ಸಿಕ್ಕಾಗಲೆಲ್ಲ ಒಂದೊಂದು ಗೊರಕೆ ಹೊಡೆದುಬಿಡುವವನು!

ಉಟ್ಟ ಪಂಚೆಯಲ್ಲೇ ಬಿಶನ್ ಮನೆಗೆ ಹೋದೆ. ಅಲ್ಲಿಯೂ ಡಿಟ್ಟೋ! ಅವನ ಹೆಂಡತಿಗೂ ನನ್ನವಳದ್ದೇ ಪರಿಸ್ಥಿತಿ. ಅವಳೂ ವೈದ್ಯೆ, ಅರಿವಳಿಕೆ ತಜ್ಞೆ. ಹಗಲೂ-ರಾತ್ರಿ ಆಸ್ಪತ್ರೆಗಳಲ್ಲಿ ಕರೆ ಬಂದಾಗಲೆಲ್ಲ ಹೋಗಿ ದುಡಿಯುತ್ತಾಳೆ. ಒಂದು ವ್ಯತ್ಯಾಸವೆಂದರೆ, ಅವಳು ಈ ವಿಷಯದಲ್ಲಿ ತೋರಿದ ಅಪ್ರತಿಮ ನಿರ್ಲಿಪ್ತತೆ! ನಾವು ಹೋದೊಡನೆ ಬಾಗಿಲು ತೆರೆದ ತಕ್ಷಣ ನಾವು ಯಾವುದೋ ಬಹು ದೊಡ್ಡ, ಗಹನವಾದ ವಿಚಾರದಲ್ಲಿ ಮಗ್ನರಾಗಿದ್ದೇವೆಂದು ನಮ್ಮಿಬ್ಬರ ಮುಖಭಾವದಿಂದಲೇ ಅರಿತು ‘ಹಲೋ!’ ಎಂದವಳೇ ಒಳನಡೆದುಬಿಟ್ಟಳು!

ನಾವು ಮಹಡಿ ಹತ್ತಿ ತಾರಸಿಗೆ ಬಂದೆವು. ಉತ್ತರದಲ್ಲಿ ಇನ್ನೂ ಆ ಖಗೋಳ ವೈಚಿತ್ರ್ಯ ಕಾಣುತ್ತಲೇ ಇತ್ತು. ಕ್ಯಾಮೆರಾವನ್ನು ಜೋಡಿಸಿದವನೆ ಬಿಶನ್ ಹಲವಾರು ಫೋಟೋಗಳನ್ನು ತೆಗೆದ. ಅಲ್ಲಿಂದ ಆ ಫೋಟೋಗಳನ್ನು ಕಂಪ್ಯೂಟರ್‌ನಲ್ಲಿಯೇ ನೋಡಬೇಕು. ಅರ್ಧ ತಾಸಿನಲ್ಲಿ ನಾವಿಬ್ಬರೂ ಕಂಪ್ಯೂಟರ್‌ಗೆ ಆ ಫೋಟೋಗಳನ್ನು ರವಾನಿಸಿ ನೋಡಿದೆವು. ಈ ಹಿಂದೆ ಟೆಲಿಸ್ಕೋಪ್‌ನಲ್ಲಿ ಕಂಡದ್ದಕ್ಕಿಂತ ಸ್ಫುಟವಾಗಿ ಕಾಣಿಸಿತು. ಅಂತರ್ಜಾಲದಲ್ಲಿ ಏನಾದರೂ ವಿವರ ಸಿಕ್ಕಬಹುದೆಂದು ನಾಲ್ಕಾರು ಜಾಲತಾಣಗಳಲ್ಲಿ ಪಾರ್ಥನನ್ನು ನೊಡಕಾಡಿದೆವು. ಎಲ್ಲಿಯೂ ಈ ಆಕಾಶಕಾಯದ ಬಗ್ಗೆ ಒಂದಿಷ್ಟೂ ಮಾಹಿತಿಯಿರಲಿಲ್ಲ. ಎಲ್ಲ ಚಿತ್ರಗಳಲ್ಲಿಯೂ ಪರ್ಸಿಯಸ್‌ನ δ ಮತ್ತು α ನಡುವೆ ಮತ್ತು ಅವುಗಳ ಕೆಳಗೆ ಖಾಲಿ ಖಾಲಿ! ಹಾಗಾದರೆ ನಾವು ಆ ಜಾಗದಲ್ಲಿ ಕಾಣುತ್ತಿರುವುದೇನು? ಪುನಃ ಪುನಃ ಹೊರಗೆ ಹೋಗಿ ಅದು ಅಲ್ಲಿಯೇ ಇದೆಯೇ ಅಥವಾ ಪ್ರತ್ಯಕ್ಷವಾದ ಹಾಗೇ ಮಾಯವಾಗಿ ಹೋಯಿತೇ ಎಂದು ಧೃಢಪಡಿಸಿಕೊಳ್ಳುತ್ತಿದ್ದೆ! ಕೊನೆಗೆ ಏನೂ ತೋಚದೆ ಮನೆಗೆ ಹಿಂದಿರುಗಿದೆ.

ನಡುರಾತ್ರಿ ಒಂದೂಮುಕ್ಕಾಲು ಆಗಿತ್ತು. ನನ್ನ ಹೆಂಡತಿಯೂ ಆ ವೇಳೆಗೆ ಒಂದಿಬ್ಬರಿಗೆ ಈ ವಿಷಯವನ್ನು ಹೇಳಿಯಾಗಿತ್ತು. ಮೈಸೂರಿನಲ್ಲಿ ನನ್ನ ತಂಗಿ-ಭಾವನನ್ನು ಮನೆಯ ಹೊರಗೆಳೆದು ಫೋನಿನಲ್ಲಿಯೇ ನಮ್ಮ ಹೊಸ ಮಿತ್ರ ಅಂತರಿಕ್ಷದಲ್ಲಿ ಎಲ್ಲಿ, ಯಾವ ದಿಕ್ಕಿನಲ್ಲಿ, ಯಾವ ನಕ್ಷತ್ರದ ಹತ್ತಿರ ಕಾಣಿಸುತ್ತಾನೆ, ಮುಂತಾದ ವಿವರ ನೀಡುತ್ತಿದ್ದಳು. ಹಗಲು ಕಳೆದ ಮೇಲೆ, ನಾಳೆ ರಾತ್ರಿ ಅದು ಆಕಾಶದಲ್ಲಿಯೇ ಇರುತ್ತದೆಯೋ ಇಲ್ಲವೋ ಎಂಬ ದಿಗಿಲು. ಬೆಳಿಗ್ಗೆ ಎದ್ದೊಡನೆ ಮೊದಲ ಕೆಲಸ, ಪ್ರೊ. ಜಿಟಿಎನ್‌ರವರಿಗೆ ಫೋನ್ ಮಾಡುವುದು, ಎಂದುಕೊಂಡೆ. ಆ ಇಡೀ ರಾತ್ರಿ ನಿದ್ದೆಗೆಟ್ಟಿದ್ದಂತೂ ನಿಜ.

ಮುಂಜಾವು ಏಳು ಘಂಟೆಗೆ ಸರಿಯಾಗಿ ಫೋನ್ ರಿಂಗಿಸಿತು. ನೋಡಿದರೆ, ಪ್ರೊ. ಜಿಟಿಎನ್‌ರವರೇ ನನಗೆ ಕರೆ ಮಾಡಿದ್ದಾರೆ! ‘ನಿಮ್ಮ ಟೆಲಿಫೋನ್ ಕರೆಯ ವಿಚಾರ ರಾತ್ರಿಯೇ ನನ್ನ ಸೊಸೆ ಹೇಳಿದ್ದಾಳೆ, ನಾನು ಈಗೆಲ್ಲ ಮುಂಚಿನಂತೆ ನಡುರಾತ್ರಿಯಲ್ಲಿ ಹೊರಗೆ ಹೋಗಿ ಆಕಾಶವನ್ನು ನೋಡುವ ಸ್ಥಿತಿಯಲ್ಲಿಲ್ಲ. ನಿಮಗೆ ಇಷ್ಟರಲ್ಲಿಯೇ ನಮ್ಮವರೇ ಆದ ಪ್ರೊ. ಎಸ್. ಎನ್. ಪ್ರಸಾದ್ ಎಂಬುವವರು ವಿವರಗಳನ್ನು ನೀಡುತ್ತಾರೆ’, ಎಂದಿಷ್ಟು ಹೇಳಿ ಫೋನ್ ಇಟ್ಟರು. ಯಾರಿದು ಪ್ರೊ. ಪ್ರಸಾದ್ ಎಂದು ಅಂದುಕೊಳ್ಳುವಷ್ಟರಲ್ಲೇ ಪುನಃ ದೂರವಾಣಿ ಕರೆ ಬಂತು. ಈಗ ಪ್ರೊಫೆಸರ್ ಎಸ್. ಎನ್. ಪ್ರಸಾದ್ ಎಂಬುವವರೇ ನನ್ನೊಡನೆ ಮಾತನಾಡಿದರು. ಅವರು ಹೇಳಿದ ಮತ್ತು ನಂತರ ನಾನು ಸಂಗ್ರಹಿಸಿದ ವಿವರಗಳು:



ಅಂತರಿಕ್ಷದಲ್ಲಿ ಅನಿರೀಕ್ಷಿತವಾಗಿ ನಾವು ಕಂಡ ಈ ಖಗೋಳ ಕೌತುಕದ ಹೆಸರು, ಹೋಮ್ಸ್ 17p. ಇದೊಂದು ಧೂಮಕೇತು. ಇದು ಮೊಟ್ಟಮೊದಲು ಕಂಡದ್ದು ೧೮೯೨ ನವೆಂಬರ್ ೬ರಂದು. ೬.೮೮ ವರ್ಷಕ್ಕೊಂದು ಬಾರಿ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುವ ಈ ಧೂಮಕೇತು ಸುತ್ತುವ ಪಥ ಮತ್ತು ಈ ಧೂಮಕೇತುವಿನ ಸ್ವಭಾವ ಎಲ್ಲವೂ ಅನಿರ್ದಿಷ್ಟ. ೧೯೦೬ ಮತ್ತು ೧೯೬೪ರ ನಡುವೆ ಇದು ಯಾರ ಕಣ್ಣಿಗೂ ಬಿದ್ದಿರಲೇ ಇಲ್ಲ. ೧೯೬೪ರ ಜುಲೈ ೧೬ರರ ನಂತರ ಪ್ರತಿ ಸಾರಿಯೂ ಹೋಮ್ಸ್‌ನ್ನು ಖಗೋಳ ಶಾಸ್ತ್ರಿಗಳು ಬೆನ್ನು ಹತ್ತುತ್ತಲೇ ಬಂದಿದ್ದಾರೆ. ಈ ಬಾರಿಯೂ ಹೋಮ್ಸ್‌ನ್ನು ಮೇ ೨೦೦೭ರಿಂದಲೇ ಪ್ರಬಲವಾದ ದೂರದರ್ಶಕಗಳ ಮೂಲಕ ಅನುಸರಿಸಿಕೊಂಡು ಬರಲಾಗಿತ್ತು. ಅಕ್ಟೋಬರ್ ೨೪ರವರೆಗೂ ಅದೊಂದು ಕೇವಲ ಖಗೋಳಿಗಳ ಸ್ವತ್ತಾಗಿತ್ತು. ಒಂದು ವ್ಯತ್ಯಾಸವೇನೆಂದರೆ, ಸಾಮಾನ್ಯವಾಗಿ ಧೂಮಕೇತುಗಳಿಗೆ ಬಾಲವಿರುತ್ತದೆ, ಆದರೆ ಹೋಮ್ಸ್‌ಗೆ ಅಂತಹ ಬಾಲವಿರಲಿಲ್ಲ. ಆದರೆ, ಅಲ್ಲಿಯವರೆಗೂ ಸರ್ವೇ ಸಾಧಾರಣ, ದೂರದರ್ಶಕಗಳಿಗೇ ಮೀಸಲಾಗಿದ್ದ ಧೂಮಕೇತು ಹೋಮ್ಸ್ ಇದ್ದಕ್ಕಿದ್ದಂತೆ ೨೪ರಂದು ಉನ್ಮಾದದಿಂದ ಅತಿವೇಗವಾಗಿ ಹಿಗ್ಗತೊಡಗಿತು. ಹಲವೇ ಘಂಟೆಗಳಲ್ಲಿ ೧೦ ಲಕ್ಷ ಪಟ್ಟು ಹಿಗ್ಗಿದೆ ಎಂದರೆ ಆ ವೇಗವನ್ನು ಊಹಿಸಿಕೊಳ್ಳಿ! ಹಾಗೆ ನೋಡಿದರೆ ಅದು ಆ ಸಮಯದಲ್ಲಿ ಸೂರ್ಯನಿಗಾಗಲಿ, ಭೂಮಿಗಾಗಲೀ ಬಹಳ ಹತ್ತಿರವೇನೂ ಇರಲಿಲ್ಲ. ೨೮ರವರೆಗೂ ಪರ್ಸಿಯಸ್ ನಕ್ಷತ್ರಪುಂಜದ ಬಳಿ ಒಂದು ನಕ್ಷತ್ರದ ಗಾತ್ರದಲ್ಲಿ ಕಂಡ ಹೋಮ್ಸ್, ಅಲ್ಲಿಂದಾಚೆಗೆ ಒಂದೇ ದಿನದಲ್ಲಿ ಧೂಮಕೇತುವಿನ ಸ್ವರೂಪ ಪಡೆದು ಒಂದು ಮೋಡದ ಉಂಡೆಯಂತೆ ನಮಗೆ ಕಾಣಿಸಿತ್ತು.

ಹೀಗೆ ಒಂದು ಧೂಮಕೇತುವಿಗೆ ಪಿತ್ತ ಕೆರಳುವುದೇಕೆ ಎಂಬ ಪ್ರಶ್ನೆಗೆ ವಿಜ್ಞಾನಿಗಳಲ್ಲಿ ಈವರೆಗೆ ಉತ್ತರವಿಲ್ಲ. ಬಹುಶಃ ಮೊದಲ ಬಾರಿಗೆ ಹೋಮ್ಸ್ ಎಂಬ ಖಗೋಳಿ ಇದನ್ನು ಕಂಡಾಗಲೂ ಈ ಧೂಮಕೇತು ಹೀಗೇ ಹಿಗ್ಗಿ ಹೀರೇಕಾಯಾಗಿತ್ತು ಎಂದು ವಿಜ್ಞಾನಿಗಳ ಅಂಬೋಣ. ಹೋಮ್ಸ್ ೧೭ಪಿ ನಾವು ನೋಡಿದ ನಂತರದ ರಾತ್ರಿಗಳಲ್ಲಿ ಬರಬರುತ್ತ α ಪಾರ್ಥದ ಕಡೆಗೆ ಚಲಿಸಿ ಹಾಗೇ ಮೋಡದ ಉಂಡೆ ವಿರಳವಾಗುತ್ತಾ ಹಾಗೇ ನಭದಲ್ಲಿ ಲೀನವಾಗಿಹೋಯಿತು. ಇನ್ನೊಮ್ಮೆ ನಮ್ಮ-ಅದರ ಭೇಟಿ ಆರೂಮುಕ್ಕಾಲು ವರ್ಷಗಳ ನಂತರ!

ಪ್ರೊ. ಪ್ರಸಾದ್‌ರವರು ಕೊನೆಗೊಂದು ಮಾತು ಹೇಳಿದರು: ಪ್ರೊ. ಜಿಟಿಎನ್‌ರವರು ನಿಮ್ಮ ಬಗ್ಗೆ ತುಂಬಾ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಆಕಾಶದಲ್ಲಿ ಸಂಭವಿಸುವ ಇಂತಹ ಒಂದು ವಿದ್ಯಮಾನ ನಿಮ್ಮ ಕಣ್ಣಿಗೆ ಮೊದಲ ಬಾರಿಗೆ ಬಿದ್ದಿದೆ ಎಂದರೆ ನೀವು ತುಂಬಾ ಅದೃಷ್ಟವಂತರು! ‘ಆದರೆ ಈಗಾಗಲೇ ಈ ಧೂಮಕೇತುವಿನ ಬಗ್ಗೆ ಸಾಕಷ್ಟು ಮಾಹಿತಿ ದೊರಕಿದೆ, ನಾನು ಇದನ್ನು ಕಂಡ ಮೊದಲಿಗನಲ್ಲವಲ್ಲ’, ಎಂದು ಕೇಳಿದೆ. ಅದಕ್ಕವರು, ‘ಈ ಧೂಮಕೇತುವನ್ನು ನಾವೆಲ್ಲ ಕೇಳಿ, ಓದಿದ ನಂತರ ನೋಡಿದೆವು, ಆದರೆ ನೀವು ಸ್ವತಃ ಮೊದಲ ಬಾರಿ ಕಂಡಿದ್ದೀರಿ! ನಮಗೆ ಆ ಯೋಗ ದೊರಕಲಿಲ್ಲವಲ್ಲ!’

ಎಂತಹ ನಿಷ್ಕಪಟ ಮಾತು!

ಈ ಪ್ರಕರಣದ ನಂತರ ನಾನು ಬಹಳಷ್ಟು ಆಲೋಚಿಸಿದ್ದೇನೆ. ನಕ್ಷತ್ರಲೋಕದ ಅದ್ಭುತಗಳೆಡೆಗೆ ನಮ್ಮಲ್ಲಿ ಆಸಕ್ತಿ ಮೂಡಿಸಿ, ಆಕಾಶಕ್ಕೆ ಏಣಿ ಹಾಕಿಕೊಟ್ಟ ಮಹಾತ್ಮ ಪ್ರೊ. ಜಿಟಿಎನ್‌ರವರು! ತನ್ನ ಅನಾರೋಗ್ಯವನ್ನೂ ಮರೆತು, ಆ ಅಪರಾತ್ರಿಯಲ್ಲಿ ಆಗಿಂದಾಗಲೇ ಮೈಸೂರಿನ ಕನಿಷ್ಠ ನಾಲ್ಕಾರು ಮಂದಿಯನ್ನು ಎಬ್ಬಿಸಿ ಅವರ ನಿದ್ದೆಗೆಡಿಸಿ ಅವರಿಗೆ ಕೆಲಸ ಹಚ್ಚಿದ್ದರಲ್ಲ, ಆ ಇಳಿವಯಸ್ಸಿನಲ್ಲಿಯೂ ಅವರ ಜೀವನೋತ್ಸಾಹ ಎಂಥದ್ದು! ಒಬ್ಬ ವ್ಯಕ್ತಿಯ ಕನಿಷ್ಠ ಪ್ರತಿಭೆಯನ್ನೂ ಗುರುತಿಸಿ, ಅದನ್ನು ಇನ್ನೊಬ್ಬರಲ್ಲಿ ವೈಭವೀಕರಿಸಿ ಹೇಳಿ, ಆ ಮೂಲಕ ಆ ವ್ಯಕ್ತಿಯ ಔನ್ನತ್ಯಕ್ಕೆ ಪ್ರೇರೇಪಿಸುವ, ಪ್ರೋತ್ಸಾಹಿಸುವ ಮಹಾನುಭಾವರೊಬ್ಬರಿದ್ದಾರೆಂದರೆ, ಖಂಡಿತವಾಗಿಯೂ ಅವರು ನಮ್ಮ ಜಿಟಿಎನ್ ಒಬ್ಬರೆ. ಇದು ಕೂಪಮಂಡೂಕದಂತೆ ಯಾವುದೋ ಸಣ್ಣ ಊರಿನಲ್ಲಿ ಜೀವನ ಸಾಗಿಸುತ್ತಿರುವ ನನ್ನೊಬ್ಬನ ಅನುಭವವಾಗಿರಲಾರದು. ಈ ಪ್ರಕರಣದ ಮೂಲಕ ಪ್ರಾತಃಸ್ಮರಣೀಯರಾದ ಪ್ರೊ. ಜಿ. ಟಿ. ನಾರಾಯಣರಾಯರಿಂದ ನನಗಾದ ಮತ್ತೊಂದು ಬಹು ದೊಡ್ಡ ಲಾಭ, ಮತ್ತೊಬ್ಬ ಸಹೃದಯಿ, ಪ್ರೊ. ಎಸ್. ಎನ್. ಪ್ರಸಾದರ ಪರಿಚಯ! ಬಾಳನ್ನು ಸಂಭ್ರಮಿಸಲು ಇದಕ್ಕಿಂತ ಕಾರಣಗಳು ಬೇಕೆ?

Wednesday, February 24, 2010

ಕಂಕಣ ಸೂರ್ಯನ ಭವ್ಯಾನುಭವ -೨


ಮಿತ್ರರೆ,

ಕಳೆದ ವಾರ, ೧೯೮೦ರಲ್ಲಿ ನಡೆದ ಒಂದು ಸಂಪೂರ್ಣ ಸೂರ್ಯಗ್ರಹಣದ ಬಗ್ಗೆ ನನ್ನ ಅನುಭವ ಕಥನವನ್ನು ಓದಿ ಹತ್ತಾರು ಮಂದಿ ಉತ್ತಮ ಪ್ರತಿಕ್ರಿಯೆ ನೀಡಿದ್ದೀರಿ. ನಿಮಗೆಲ್ಲ ಹೃದಯ ತುಂಬಿದ ಧನ್ಯವಾದಗಳು.

ನಿಜಕ್ಕೂ ನಾನು ಬರೆಯಲು ಹೊರಟಿದ್ದು ಕಳೆದ ಜನವರಿ ೧೫ರಂದು ಆಕಾಶದಲ್ಲಾದ ವಿಸ್ಮಯಕರ ಘಟನೆಯನ್ನು. ಈ ಸಂಪೂರ್ಣ ಸೂರ್ಯಗ್ರಹಣ ಬಹು ಅಪರೂಪವಾದದ್ದು ಯಾಕೆ ಎಂದರೆ, ಅದೊಂದು ಅಪೂರ್ವ ಕಂಕಣ ಗ್ರಹಣ. ಹಾಗೆಂದರೇನು ಅಂತ ನೀವು ಕೇಳಬಹುದು. ಪ್ರೊ. ಜಿ. ಟಿ. ನಾರಾಯಣರಾವ್‌ರವರ ಖಡಕ್ ಕನ್ನಡದಲ್ಲಿ ಹೇಳಬೇಕೆಂದರೆ, ದೀರ್ಘವೃತ್ತದ ಒಂದು ನಾಭಿಯಲ್ಲಿ ನೆಲೆಸಿರುವ ಭೂಮಿಯ ಸುತ್ತ ಪರಿಭ್ರಮಿಸುತ್ತಿರುವ ಚಂದ್ರ ಅಪರವಿಯಲ್ಲಿ ಹಾದುಹೋಗುವ ವೇಳೆಯಲ್ಲಿಯೇ ಸೂರ್ಯನನ್ನು ಕುರಿತಂತೆ ಭೂಮಿಯು ಪುರರವಿಯಯಲ್ಲಿ ಹಾದುಹೋಗುವ ರಾಶಿಚಕ್ರದ ಎರಡು ಸ್ಪಷ್ಟನೆಲೆಗಳಲ್ಲಿ ಸೂರ್ಯನೂ ಸಮಾಗಮಿಸಿದರೆ ಆಗ ಸುದೀರ್ಘ ಕಂಕಣ ಸೂರ್ಯಗ್ರಹಣ ಘಟಿಸುತ್ತದೆ. ಪಾಮರರ ಭಾಷೆಯಲ್ಲಿ ಹೇಳುವುದಾದರೆ ಆವತ್ತು ಆದದ್ದಿಷ್ಟೆ: ಚಂದ್ರ ಭೂಮಿಯಿಂದ ಬಹಳ ದೂರದಲ್ಲಿದ್ದ, ಚಿಕ್ಕದಾಗಿ ತೋರುತ್ತಿದ್ದ; ಸೂರ್ಯ ಹತ್ತಿರದಲ್ಲಿದ್ದ, ಸ್ವಲ್ಪ ದೊಡ್ಡದಾಗಿ ತೋರುತ್ತಿದ್ದ. ಹೀಗಾಗಿ ಗ್ರಹಣದ ವೇಳೆ ಚಂದ್ರನ ತಟ್ಟೆ ಸೂರ್ಯನನ್ನು ಸಂಪೂರ್ಣ ಮುಚ್ಚಲು ವಿಫಲವಾಯ್ತು, ಚಂದ್ರನ ಸುತ್ತ ಬಳೆಯ ಹಾಗೆ ಸೂರ್ಯ ಕಂಡುಬಂದ! ಚಂದ್ರ ಸೂರ್ಯನ ಅಡ್ಡವಾಗಿ ಹಾದುಹೋಗಲು ಸುಮಾರು ಏಳು ನಿಮಿಷಗಳ ಸುದೀರ್ಘಕಾಲ ತೆಗೆದುಕೊಂಡದ್ದು, ಅಲ್ಲದೆ ಅದು ಭೂಮಧ್ಯ ರೇಖೆಯ ಆಸುಪಾಸಿನಲ್ಲೆ ಘಟಿಸಿದ್ದು ಈ ಗ್ರಹಣದ ವಿಶೇಷ. ಮತ್ತೊಮ್ಮೆ ಇಂತಹ ಸುದೀರ್ಘ ಕಂಕಣಗ್ರಹಣ ನಡೆಯುವುದು ಇನ್ನು ಒಂದು ಸಾವಿರ ವರ್ಷಕ್ಕೂ ಹೆಚ್ಚು ಸಮಯದ ನಂತರ!

ಈ ಖಂಡಗ್ರಾಸ ಗ್ರಹಣ ಕರ್ನಾಟಕದ ಎಲ್ಲೆಡೆ ಕಂಡರೂ ಖಗ್ರಾಸ ಗ್ರಹಣ (ಅಂದರೆ ಸಂಪೂರ್ಣಗ್ರಹಣ) ಕಂಡದ್ದು ಭೂಮಧ್ಯರೇಖೆಯಿಂದ ೭ ಡಿಗ್ರಿ ಉತ್ತರದವರೆಗೆ ವಾಸಿಸುವವರಿಗೆ ಮಾತ್ರ. ಹಾಗಾಗಿ ನಾನು ದಕ್ಷಿಣದ ತಮಿಳುನಾಡು ಅಥವಾ ಕೇರಳ ರಾಜ್ಯಗಳಲ್ಲಿ ಯಾವುದಾದರೂ ಸ್ಥಳಕ್ಕೆ ಮೊದಲೇ ಹೋಗಿ ತಳವೂರಬೇಕಾಗಿತ್ತು.

ದೇಶದ ಹಾಗೂ ಪರದೇಶಗಳ ಎಷ್ಟೋ ವಿಜ್ಞಾನಿಗಳು, ಹವ್ಯಾಸಿ ಖಗೋಳವೀಕ್ಷಕರು ಇಂತಹ ಸಂದರ್ಭಗಳಿಗೆ ಕಾಯುತ್ತಿರುತ್ತಾರೆ. ಅವರು ಹಿಂದಿನ ಎಷ್ಟೋ ವರ್ಷಗಳ ದಾಖಲೆಗಳನ್ನು ಸಂಶೋಧಿಸಿ, ಪರಾಮರ್ಶಿಸಿ ಯಾವ ಜಾಗ ವೀಕ್ಷಣೆಗೆ ಅತಿ ಸೂಕ್ತ ಎಂದು ತೀರ್ಮಾನಿಸುತ್ತಾರೆ. ಅಂದರೆ, ಆ ಸ್ಥಳದಲ್ಲಿ ಆ ದಿನ ಯಾವುದೇ ಹವಾಮಾನ ವೈಪರೀತ್ಯಗಳಿಲ್ಲದೆ, ಯಾವುದೇ ಅಡೆತಡೆಗಳಿಲ್ಲದೆ, ಮಂಜು-ಮೋಡಗಳಿಲ್ಲದೆ ಶುಭ್ರವಾಗಿ ಕಾಣುವಂತಿರಬೇಕು.


ನಾನು ಆ ಸಮಯಕ್ಕೆ ನೇರವಾಗಿ ಕನ್ಯಾಕುಮಾರಿಗೇ ಹೋಗುವ ತಯಾರಿ ನಡೆಸಿದ್ದೆ. ಈ ಮಧ್ಯೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಖಗೋಳ ವಿಜ್ಞಾನದ ಮೂರು ದಿನಗಳ ಸಮ್ಮೇಳನ ನಡೆಯಿತು. ಅಲ್ಲಿಯೂ ದೇಶ-ವಿದೇಶಗಳಿಂದ ಅನೇಕ ಸಂಶೋಧಕರು ಜಮಾಯಿಸಿದ್ದರು. ಅವರಲ್ಲಿ ಹಲವರೊಂದಿಗೆ ಈ ಗ್ರಹಣದ ಬಗ್ಗೆ ಮಾತನಾಡಿದೆ. ಎಲ್ಲರೂ ರಾಮೇಶ್ವರದ ಕಡೆ ಬೆರಳು ತೋರಿದಾಗ ಅಶ್ಚರ್ಯವಾಯಿತು! ಏಕೆಂದರೆ, ರಾಮೇಶ್ವರ ಸಂಪೂರ್ಣ ಸೂರ್ಯಗ್ರಹಣ ಕಂಡುಬರುವ ಅತಿ ಉತ್ತರ ರೇಖಾಂಶದಲ್ಲಿರುವ ಊರು. ಅಂತರ್ಜಾಲದಲ್ಲಿ ಹಲವು ವಿಜ್ಞಾನಿಗಳು ಕೂಡ ಅದೇ ಜಾಗವನ್ನು ಆರಿಸಿಕೊಂಡಿದ್ದು ಕಂಡುಬಂದಿತು. ರಾಮೇಶ್ವರವು ಕನ್ಯಾಕುಮಾರಿಗಿಂತ ಸುಮಾರು ೨೫೦ ಕಿಮೀ ಹತ್ತಿರವೂ ಆಗುತ್ತದೆ, ಆರು ಘಂಟೆ ಪ್ರಯಾಣದ ಹೊತ್ತೂ ಉಳಿಯುತ್ತದೆ. ಆದ್ದರಿಂದ ನಾನೂ ಅಲ್ಲಿಗೇ ಹೋಗುವುದೆಂದು ತೀರ್ಮಾನಿಸಿದೆ.


ಜೊತೆಗೆ ಯಾರು ಯಾರು ಬರುತ್ತಾರೆ? ಇಂತಹ ವಿಷಯಗಳಲ್ಲಿ ಆಸಕ್ತಿಯಿರುವವರೆಂದರೆ ಅನುಪಮ್ ರೇ, ಪ್ರೊ. ಪೂವಣ್ಣ ಮತ್ತು ಶ್ರೀಕಾಂತ್. ಮೂವರೂ ‘ಬೇರೆ ಕೆಲಸವಿದೆ, ನೀವು ಹೋಗಿಬನ್ನಿ’ ಎಂದುಬಿಟ್ಟರು. ಕೊನೆಗೆ ನನ್ನ ಹೆಂಡತಿ ಪುಷ್ಪ, ಕಿರಿಯ ಮಗಳು ಅಭಿಜ್ಞ, ತಮ್ಮನ ಮಗಳು ಅಂಜಲಿ ಮತ್ತು ನಾನು ಇಷ್ಟು ಜನ, ನಮ್ಮ ಕಾರಿನಲ್ಲಿಯೇ ಹೋಗುವುದೆಂದು ನಿಶ್ಚಯಿಸಿದೆವು.
ನಮ್ಮ ಸಂಕ್ರಾಂತಿ ಹಬ್ಬವನ್ನು ತಮಿಳರು ಪೊಂಗಲ್ ಎಂದು ಆಚರಿಸುತ್ತಾರೆ. ಆಗ ಆ ರಾಜ್ಯದಲ್ಲೆಲ್ಲ ಮೂರು ದಿನ ರಜಾ. ಜೊತೆಗೆ ಭಾನುವಾರವೂ ಸೇರಿ ಬಂದಿದ್ದರಿಂದ ಬಹಳ ಜನಜಂಗುಳಿ ಇರಬಹುದು, ಉಳಿದುಕೊಳ್ಳಲು ಲಾಡ್ಜ್ ಮೊದಲೇ ನಿಗದಿ ಪಡಿಸಿಕೊಳ್ಳುವುದು ಒಳ್ಳೆಯದೆಂದು ಊರೂರು ತಿರುಗಾಡುವ ಹವ್ಯಾಸವಿರುವ ನನ್ನ ಭಾವನವರನ್ನೇ ವಿಚಾರಿಸಿದೆ.

ರಾಮನಾಡಿನಲ್ಲಿ ಅವರಿಗೆ ತಿಳಿದಿದ್ದ ಒಂದು ಹೋಟೆಲಿನ ನಂಬರ್ ಕೊಟ್ಟರು. ‘ಬನ್ನಿ ಪರವಾಗಿಲ್ಲ, ರೂಂ ಬುಕ್ ಮಾಡಿರುತ್ತೇನೆ’ ಎಂದು ಆ ಮುಸ್ಲಿಂ ಹೋಟೆಲಿನ ಒಡೆಯನೇ ಆಶ್ವಾಸನೆ ಕೊಟ್ಟ.


ದೂರದ ಹಾಗೂ ಮೂರು ದಿನಗಳ ಪ್ರಯಾಣವಾದ್ದರಿಂದ ಒಬ್ಬ ಡ್ರೈವರ್‌ನ್ನು ಹುಡುಕಬೇಕಾಯಿತು. ಕೊನೆಗೆ ರಫೀಕ್ ಸಿಕ್ಕಿದ. ಈ ರಫೀಕ್ ಬಗ್ಗೆ ಮೊದಲೇ ಹೇಳಿಬಿಡುತ್ತೇನೆ. ಅವನು ನನ್ನ ಕ್ಲಿನಿಕ್ಕಿನಲ್ಲಿ ಬಹಳ ಹಿಂದೆ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದವ. ಈಗ ಡ್ರೈವರ್ ಆಗಿದ್ದಾನೆ. ಒಂದೆರಡು ಕಡೆಗೆ ನಮ್ಮ ಜೊತೆ ಬಂದಿದ್ದಾನೆ ಕೂಡ. ಎಷ್ಟೋ ರಾಜ್ಯಗಳನ್ನು ಸುತ್ತಿರುವುದರಿಂದ ಸ್ಥಳಗಳ ಪರಿಚಯವೂ ಇದೆ. ಮಾತು ಮಾತ್ರ ಸ್ವಲ್ಪ ವಿಚಿತ್ರ. ಮಾತನಾಡಲು ಬಾಯಿ ತೆರೆದರೆ ಶಕಾರಮೂರ್ತಿ! ‘ನಿಮ್ಗೆ ಯೋಚನೆ ಬೇಡ ಡಾಕ್ಟ್ರೆ, ನಂಗೆ ಬಿಟ್ಬಿಡಿ. ರೂಟ್ ನಾನು ವಿಚಾರಿಶ್ತೇನೆ!’

ಜನವರಿ ೧೪ರಂದು ಬೆಳಿಗ್ಗೆ ಐದೂವರೆಗೆ ವೀರಾಜಪೇಟೆ ಬಿಟ್ಟೆವು. ಮೈಸೂರು, ನಂಜನಗೂಡು, ಚಾಮರಾಜನಗರದ ದಾರಿಗಾಗಿ ಸತ್ಯಮಂಗಲ ತಲುಪಿದೆವು. ದಾರಿಯಲ್ಲಿ ರಸ್ತೆ ಬದಿಯ ಒಂದು ಕಬ್ಬಿನ ತೋಟದಲ್ಲಿ ಬೆಳಗ್ಗಿನ ಉಪಹಾರಕ್ಕೆ ನಾವು ಕಟ್ಟಿಕೊಂದು ಬಂದಿದ್ದ ಇಡ್ಲಿ ಮುಗಿಸಿದೆವು. ಬಹುಶಃ ಅಲ್ಲಿಂದ ಹಿಡಿದು, ಹಿಂದಿರುಗುವವರೆಗೂ ನಾವು ತಿಂದ ಚೊಕ್ಕ-ರುಚಿಕರ ಆಹಾರ ಅದೊಂದೆ!

ದಿಂಬಂ ಘಾಟ್ ಇಳಿದು ಬನ್ನಾರಿ ದಾಟಿ ಸತ್ಯಮಂಗಲಕ್ಕೆ ಹೋದೆವು. ನಾವು ಸಂಜೆಯ ವೇಳೆಗೆ ರಾಮನಾಡ್ (ರಾಮನಾಥಪುರಂ) ತಲುಪಬೇಕಿತ್ತು. ಆದಷ್ಟೂ ಹತ್ತಿರದ ದಾರಿ ಹುಡುಕಿ ಆ ಮಾರ್ಗವಾಗಿ ಹೋಗುವ ಉದ್ದೇಶದಿಂದ ದಾರಿಯಲ್ಲಿ ಅವರಿವರನ್ನು ಕೇಳಬೇಕಾಯಿತು. ತಮಿಳುನಾಡಿನಲ್ಲಿ ಯಾರು ನಿಮಗೆ ದಾರಿ ಹೇಳಿದರೂ ‘ನೇರೆ ಪೋ, ಯಾರಿಯುಂ ಕೇಕ್ಕಾದೆ!’ (ನೆಟ್ಟಗೆ ಹೋಗಿ. ಯಾರನ್ನೂ ಕೇಳಬೇಡಿ) ಎನ್ನುವ ಚಾಳಿ ಇದೆ. ಒಬ್ಬೊಬ್ಬರೂ ತಮಗೆ ತಿಳಿದ ಮಟ್ಟಿಗೆ ದಾರಿ ತೋರುತ್ತಿದ್ದುದರಿಂದ ಕೊನೆಗೆ ೫೦-೭೦ ಕಿಲೋಮೀಟರು ಸುತ್ತಿ ಬಳಸಿಯೇ ಮಧುರೆ ತಲುಪಿದೆವು. ಅಲ್ಲಿಯೂ ಕೂಡ ಊರೊಳಗೆ ನುಗ್ಗಿ ವಾಹನಗಳ ಗೊಂದಲದೊಳಗೆ ಸಿಕ್ಕಿಕೊಂಡು ಸುಮಾರು ಒಂದು ಘಂಟೆ ವೇಸ್ಟ್ ಆಯಿತು. ಕೊನೆಗೂ ರಾಮನಾಡ್ ತಲುಪಿದಾಗ ರಾತ್ರಿ ಒಂಭತ್ತೂವರೆ! ಊರೆಲ್ಲ ಎರಡು ದಿನ ಜಡಿಮಳೆ ಸುರಿದು ಕೊಚ್ಚೆಮಯವಾಗಿತ್ತು.

ಹದಿನೈದರಂದು ಬೆಳಿಗ್ಗೆ ಎದ್ದು, ಏಳು ಘಂಟೆಗೆ ಲಾಡ್ಜ್‌ನಿಂದ ಹೊರಬಂದು ಮೊದಲು ನೋಡಿದ್ದು ಆಕಾಶವನ್ನು! ಸುತ್ತಲೂ ಮೋಡ ತುಂಬಿದ ವಾತಾವರಣ, ಪಿರಿಪಿರಿ ಮಳೆ, ಎಲ್ಲವೂ ನಮ್ಮ ಗ್ರಹಣ ನೋಡುವ ಸಂಭ್ರಮವನ್ನು ತಣ್ಣಗಾಗಿಸಿಬಿಟ್ಟಿತು. ಅದೇ ಹೊತ್ತಿಗೆ ನಮ್ಮ ಲಾಡ್ಜ್‌ನಲ್ಲಿಯೇ ಹಿಂದಿನ ರಾತ್ರಿ ತಂಗಿದ್ದ ಗುವಾಹಟಿಯ ನಾಲ್ಕು ಜನರ ತಂಡ ಟೆಲಿಸ್ಕೋಪು, ಕ್ಯಾಮೆರಾ ಮುಂತಾದ ಸಲಕರಣೆಗಳನ್ನು ತಮ್ಮ ವ್ಯಾನಿಗೆ ತುಂಬಿಸತೊಡಗಿದರು. ನನ್ನ ಪರಿಚಯ ಮಾಡಿಕೊಂಡೆ. ಎಲ್ಲರ ಮುಖದಲ್ಲಿಯೂ ಆತಂಕ ತುಂಬಿತ್ತು. ಆಕಾಶ ಹೀಗಿದ್ದರೆ ಸೂರ್ಯನನ್ನು ಕಂಡ ಹಾಗೆಯೇ! ಈ ಭಾಗ್ಯಕ್ಕೆ ದೇಶವಿದೇಶಗಳಿಂದ ಇಲ್ಲಿಗೆ ಬರಬೇಕಿತ್ತೇ! ಎಲ್ಲರೂ ರಾಮೇಶ್ವರವನ್ನು ಏಕೆ ಆಯ್ಕೆ ಮಾಡಿಕೊಂಡರು? ನಾನೂ ಇಲ್ಲಿಗೇ ಬಂದೆನಲ್ಲ? ಏನಾದರಾಗಲಿ, ಸೂರ್ಯನ ಇಣುಕು ನೋಟವನ್ನಾದರೂ ನೋಡಿಕೊಂಡು ಹೋಗುವುದೆಂದು ತೀರ್ಮಾನಿಸಿದೆವು.

ಪಕ್ಕದ ಭಯಂಕರ ಹೋಟೆಲಿನಲ್ಲಿ ಉಪಾಹಾರ ಮುಗಿಸಿ ರಾಮೇಶ್ವರಕ್ಕೆ ಪ್ರಯಾಣ ಬೆಳೆಸಿದೆವು. ರಾಮನಾಡಿನಿಂದ ರಾಮೇಶ್ವರದ ದಾರಿಯಲ್ಲಿ ಪಾಂಬನ್ ಸೇತುವೆ ದಾಟಬೇಕು. ವಾಹನಗಳಿಗೆ ಎತ್ತರದಲ್ಲಿ ಒಂದು ರಸ್ತೆ, ಅನತಿ ದೂರದಲ್ಲಿಯೇ ಸಮಾನಂತರದಲ್ಲಿ ಆದರೆ, ಸಮುದ್ರಮಟ್ಟದಲ್ಲಿ ರೈಲು ಪ್ರಯಾಣಕ್ಕೆ ದಾರಿ! ಮೂವತ್ತೆರಡು ವರ್ಷಗಳ ಹಿಂದೆ ರೈಲಿನಲ್ಲಿ ಈ ದಾರಿಗಾಗಿ ಬಂದಿದ್ದೆ. ಆ ಥ್ರಿಲ್ ರಸ್ತೆಯ ಮೇಲಿಲ್ಲ.



ಮೊದಲು ರಾಮೇಶ್ವರದ ದೇವಸ್ಥಾನವನ್ನು ನೋಡಿಕೊಂದು ಅಲ್ಲಿಂದ ಗ್ರಹಣ ವೀಕ್ಷಣೆಗೆ ಸೂಕ್ತ ಜಾಗದಲ್ಲಿ ಠಿಕಾಣಿ ಹೂಡಬೇಕೆಂಬುದು ನಮ್ಮ ಕಾರ್ಯಕ್ರಮ. ನಾವಂದುಕೊಂಡಂತೆ ರಾಮೇಶ್ವರವು ಯಾತ್ರಾರ್ಥಿಗಳಿಂದ, ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಆವತ್ತು ಅಲ್ಲಿ ಸುಮಾರು ಎರಡು ಲಕ್ಷ ಜನ ಸೇರಿದ್ದಿರಬಹುದು.

ಗ್ರಹಣದ ದಿನವಾದ್ದರಿಂದ ದೇವಸ್ಥಾನವನ್ನು ಹತ್ತು ಘಂಟೆಗೇ ಮುಚ್ಚುತ್ತಾರೆಂದು ತಿಳಿದು ಬೇಗಬೇಗನೆ ಹೆಜ್ಜೆ ಹಾಕಿದೆವು. ರಾಮೇಶ್ವರ ದೇವಸ್ಥಾನ ನಿಜಕ್ಕೂ ಒಂದು ಅತಿ ಬೃಹತ್ತಾದ ಕಟ್ಟಡ ಸಮೂಹ. ದೇವಸ್ಥಾನದ ಹೊರಗಿನ ಎರಡು ಪ್ರಾಕಾರಗಳನ್ನು ಸುತ್ತಿ ಹೆಬ್ಬಾಗಿಲಿಗೆ ಬರುವುದರೊಳಗೆ ಬಾಗಿಲು ಮುಚ್ಚಿಬಿಟ್ಟಿದ್ದರು! ಇನ್ನೂ ಒಂಭತ್ತು ಘಂಟೆ, ಆಗಲೇ ಮುಚ್ಚಿಬಿಟ್ಟರಲ್ಲ? ಈಗಾಗಲೇ ಒಳಗೆ ಇರುವ ಯಾತ್ರಾರ್ಥಿಗಳು ದೇವರ ದರ್ಶನವನ್ನು ಪಡೆದು ಹೊರಬರಲು ಒಂದು ತಾಸು ಆಗುವುದರಿಂದ ಈ ವ್ಯವಸ್ಥೆ ಎಂದು ತಿಳಿಯಿತು. ಈಗೇನು ಮಾಡುವುದು? ಗ್ರಹಣ ಹಿಡಿಯಲು ಇನ್ನೂ ಎರಡು ಘಂಟೆಯಿದೆ. ಸುತ್ತಲೂ ಇದ್ದ ಜನಕ್ಕೆ ಗ್ರಹಣದ ಬಗ್ಗೆ ಯಾವ ಆಸಕ್ತಿಯೂ ಇದ್ದಂತಿರಲಿಲ್ಲ. ದೇವಸ್ಥಾನದ ಪೂರ್ವಕ್ಕೆ ಇರುವ ಸಮುದ್ರ ತೀರದಲ್ಲಂತೂ ಸಾವಿರಾರು ಜನ! ಸರಿಯಾಗಿ ನಿಲ್ಲಲೂ ಆಗದಿರುವ ಇಂತಹ ಜಾಗದಲ್ಲಿ ನಾವು ಗ್ರಹಣ ವೀಕ್ಷಣೆ ಮಾಡುವುದಾದರೂ ಹೇಗೆ? ನಮ್ಮೊಂದಿಗೆ ತಂಗಿದ್ದ ಗುವಾಹಟಿಯವರು ಏನಾದರು? ಇಲ್ಲಿ ನಮಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ಸುಮಾರು ಒಂಭತ್ತು ಘಂಟೆಗೆಲ್ಲ ಆಗಸ ಶುಭ್ರವಾಗತೊಡಗಿತ್ತು. ಅಲ್ಲಿಂದ ಸಾಯಂಕಾಲದವರೆಗೂ ಆಕಾಶದಲ್ಲಿ ಒಂದೇ ಒಂದು ಮೋಡದ ತುಣುಕೂ ಇಲ್ಲದೆ ಇಡೀ ಆಕಾಶ ಗ್ರಹಣವೀಕ್ಷಣೆಗೆ ಅನುವು ಮಾಡಿಕೊಟ್ಟಿತ್ತು!


ಈ ಜಂಜಾಟದಿಂದ ದೂರ ಹೋಗೋಣವೆಂದು ವಾಹನ ಸಂದಣಿಯಿಂದ ಕಷ್ಟಪಟ್ಟು ಪಾರಾಗಿ ಮುಖ್ಯ ಬೀದಿಗೆ ಬಂದೆವು. ಇಲ್ಲಿಂದ ಕೆಲವೇ ಕಿಲೋಮೀಟರು ದೂರದಲ್ಲಿದ್ದ ಧನುಷ್ಕೋಟಿಗೆ ಹೋಗುವುದು ಸೂಕ್ತವೆಂದು ತೋರಿತು. ಅಷ್ಟರಲ್ಲಿ ಯಾವುದೋ ರಾಜ್ಯದ ರಾಜ್ಯಪಾಲರು ಅಲ್ಲಿಗೆ ಬರುತ್ತಿರುವರೆಂದು ಎಲ್ಲಾ ವಾಹನಗಳನ್ನೂ ಸ್ವಲ್ಪ ಕಾಲ ತಡೆದರು. ಅಂತೂ ರಾಮೇಶ್ವರವನ್ನು ಬಿಡುವಷ್ಟರಲ್ಲಿ ಹನ್ನೊಂದೂಕಾಲು ಘಂಟೆಯಾಗಿತ್ತು, ಸೂರ್ಯಗ್ರಹಣ ಪ್ರಾರಂಭವಾಗಿತ್ತು. ನಮ್ಮ ನಾಲ್ವರ ಬಳಿಯಲ್ಲೂ ಸೂರ್ಯನ ವೀಕ್ಷಣೆಗೆ ಸೂಕ್ತ ಕನ್ನಡಕಗಳಿದ್ದವು. ಯಾವುದೋ ಮನೆಯೊಳಗಿಂದ ಇಬ್ಬರು ಹುಡುಗರು ಬೈನಾಕ್ಯುಲರ್ ಹಿಡಿದು ಗ್ರಹಣ ನೋಡಲು ಹೊರಬಂದರು. ಅವರನ್ನು ಬೈದು ಬುದ್ಧಿ ಹೇಳಿ ಒಂದು ಕನ್ನಡಕವನ್ನು ಅವರಿಗೆ ಕೊಡಬೇಕಾಯಿತು.
ನಮ್ಮ ಕೈಯಲ್ಲಿ ಸೋನಿ ವಿಡಿಯೋ ಕ್ಯಾಮೆರಾ, ನಿಕಾನ್ P90 ಕ್ಯಾಮೆರಾ ಮತ್ತು ಬೈನಾಕ್ಯುಲರ್ ಇವಿಷ್ಟಿದ್ದವು. ನನ್ನ ಒಂದು ಕೊರತೆ ಟ್ರೈಪಾಡ್ ಇಲ್ಲದಿದ್ದದ್ದು. ಹೊರಡುವ ಸಂಭ್ರಮದಲ್ಲಿ ಅದೊಂದನ್ನು ಮರೆತು ಬಂದಿದ್ದೆ. ಧನುಷ್ಕೋಟಿ ತಲುಪಿದಾಗ ಬಹಳ ಸಂತೋಷವಾಯಿತು. ಏಕೆಂದರೆ, ಅಲ್ಲಿ ಈಗಾಗಲೇ ಸುಮಾರು ಸಾವಿರ ಮಂದಿ ಸೇರಿದ್ದರು ಮತ್ತು ಅವರೆಲ್ಲ ಸೂರ್ಯಗ್ರಹಣದ ವೀಕ್ಷಣೆಗೇ ಬಂದಿದ್ದರು. ದೇಶವಿದೇಶಗಳಿಂದ ನೂರಾರು ಸಲಕರಣೆಗಳೊಂದಿಗೆ ಎಲ್ಲರೂ ಸಜ್ಜಾಗಿ ಬಂದಿದ್ದರು. ಅಲ್ಲದೆ ದೂರದಲ್ಲಿ ಪೆಂಡಾಲ್ ಮತ್ತು ಮೈಕು ಹಾಕಿಕೊಂಡು ವಿವಿಧ ರೇಡಿಯೋ-ಟಿವಿ ಮಾಧ್ಯಮದ ಮಂದಿಯೊಂದಿಗೆ, ಹಲವು ಶೈಕ್ಷಣಿಕ ಸಂಸ್ಥೆಗಳು, ವಿಜ್ಞಾನ ಸಂಘಗಳು ಗ್ರಹಣದ ಬಗ್ಗೆ ಸೂಕ್ತ ಮಾಹಿತಿ ಮತ್ತು ನೇರವರದಿಯನ್ನು ಬಿತ್ತರಿಸುತ್ತಿದ್ದರು.

ಆದರೆ ಅತಿ ಕಿರಿದಾದ ರಸ್ತೆ, ಹೋಗಲು-ಬರಲು ವಾಹನಗಳಿಗೆ ಬಹಳ ತ್ರಾಸಾಗುತ್ತಿತ್ತು. ಮುಂದೆ ಹೋದ ವಾಹನಗಳು ರಿವರ್ಸ್‌ನಲ್ಲಿ ಹಿಂದಿರುಗಬೇಕು. ರಸ್ತೆಯ ಎರಡೂ ಬದಿಯಲ್ಲಿ ಅಗಾಧ ಮರಳು ರಾಶಿ. ರಫೀಕನಿಗಂತು ತುಂಬಾ ಕೋಪ ಬಂದಿರಬೇಕು. ‘ಈ ಜನಕ್ಕೆ ಬುದ್ದಿ ಇಲ್ಲ, ಶ್ರೈಟ್ ಮರಳು ಮೇಲೆ ಇಳಿಕೊಂಡು ಹಾಗೇ ಒಂದು ಶುತ್ತು ತಿರುಗಿಶಿ ವಾಪಾಶ್ ರಶ್ತೆಗೆ ಬಂದುಬಿಡೋಣ’, ಅಂದ. ನನಗೇಕೋ ಸಂಶಯ ಬಂತು. ಇಷ್ಟು ವಾಹನಗಳಲ್ಲಿ ಒಂದಾದರೂ ವಿಶಾಲವಾದ ಮರಳ ಮೇಲೆ ಪಾರ್ಕ್ ಮಾಡಿಲ್ಲ ಅಂದ ಮೇಲೆ, ಏನೋ ಐಬು ಇರಬೇಕು ಎಂದುಕೊಂಡು ‘ಬೇಡ ಮಾರಾಯ ಇಲ್ಲೇ ರಸ್ತೆಯ ಬದಿಯಲ್ಲಿ ನಿಲ್ಲಿಸಿಕೊ. ನಾವೆಲ್ಲ ಇಳಿದುಬಿಡುತ್ತೇವೆ, ಆಮೇಲೆ ನೀನೆಲ್ಲಾದರೂ ಪಾರ್ಕ್ ಮಾಡು’ ಎಂದು ಹೇಳುವುದರೊಳಗೆ ಬಲಬದಿಗೆ ಇಳಿದೇಬಿಟ್ಟ.

ಕಾರಿನ ನಾಲ್ಕು ಚಕ್ರಗಳು ಮರಳಿಗೆ ಇಳಿದವೋ ಇಲ್ಲವೋ ಕಾರು ಒಮ್ಮೆಲೇ ನಿಂತು ಹೋಯಿತು! ಜಂ ಅಂತ ಮೊದಲನೆ ಗೇರು ಹಾಕಿ ರಿವ್ವನೆ ಬಿಟ್ಟ. ಚಕ್ರಗಳು ತಿರುಗಿದವೇ ವಿನಃ ಕಾರು ಒಂದಿಂಚೂ ಅಲುಗಲಿಲ್ಲ. ಕೆಳಗೆ ಇಳಿದು ನೋಡಿ ದಂಗಾಗಿಹೋದ. ಕಾರಿನ ಚಕ್ರಗಳು ಸೊಂಟದವರೆಗೆ ಹೂತುಹೋದವು! ರಫೀಕನಿಗೆ ಮೈಯೆಲ್ಲಾ ಬೆವತು ಹೋಯಿತು. ‘ಎಲ್ಲಾರೂ ಶ್ವಲ್ಪ ಇಳಿದು ತಳ್ಳಿದರೆ ಶಾಕು’, ಅಂದ. ಯಾರಿದ್ದಾರೆ? ಎಲ್ಲರೂ ಆಕಾಶ ನೋಡುತ್ತಿದ್ದರು. ಅಷ್ಟರಲ್ಲಿ ನನ್ನ ಹೆಂಡತಿ-ಮಕ್ಕಳು ತಮ್ಮ ಸ್ಪೆಶಲ್ ಕನ್ನಡಕದೊಂದಿಗೆ ಸುತ್ತಮುತ್ತ ಇದ್ದ ಕೆಲವರಿಗೆ ಸೂರ್ಯನನ್ನು ತೋರಿಸತೊಡಗಿದ್ದರು. ರಫೀಕನಿಗಂತೂ ತಡೆಯಲಾಗಲಿಲ್ಲ. ‘ಶಾರ್, ಶಾರ್, ಎಲ್ಲಾರು ವಾಂಗೊ. ಶಕ್ತಿ ಪೋಡುಂಗೊ!’ ಎಂದು ತನಗೆ ತಿಳಿದ ತಮಿಳಿನಲ್ಲೇ ದೈನ್ಯನಾಗಿ ಕೂಗತೊಡಗಿದ. ಒಂದೆರಡು ಧಾಂಡಿಗರು ಮತ್ತಿಬ್ಬರನ್ನು ಸೇರಿಸಿಕೊಂಡು ಮೊದಲು ರಫೀಕನನ್ನು ಕಾರಿನಿಂದ ಇಳಿಸಿದರು. ಚಕ್ರದ ಸುತ್ತ ಮರಳನ್ನು ಬಿಡಿಸಿ, ಎಲ್ಲಾ ಸೇರಿ ಕಾರನ್ನೇ ಗುಂಡಿಯಿಂದ ಅನಾಮತ್ತಾಗಿ ಪಕ್ಕಕ್ಕೆ ಎತ್ತಿಟ್ಟರು. ಅಲ್ಲಿಂದ ಹಿಂದಕ್ಕೆ ನೂಕಿ ರಸ್ತೆಗೆ ತಂದಿಟ್ಟರು. ನನಗಂತೂ ಸಾಕಾಗಿ ಹೋಗಿತ್ತು, ‘ಇನ್ನಾದರೂ ಸುರಕ್ಷಿತವಾಗಿ ಎಲ್ಲಾದರೂ ಪಾರ್ಕ್ ಮಾಡು’ ಎಂದು ಹೇಳಿದವನೆ ಎಲ್ಲರೊಂದಿಗೆ ಸಮುದ್ರ ತೀರಕ್ಕೆ ಬಂದೆ.

ಗ್ರಹಣ ಈಗಾಗಲೇ ಪ್ರಾರಂಭವಾಗಿದ್ದರಿಂದ ಸಮುದ್ರ ತೀರದುದ್ದಕ್ಕೂ ಎಲ್ಲೆಡೆ ಸಕಲ ಸಲಕರಣೆಗಳೂ ಸಿದ್ಧಗೊಂಡು ಸೂರ್ಯನತ್ತ ತಿರುಗಿ ನಿಂತಿದ್ದವು. ಹಲವು ವಿಜ್ಞಾನಿಗಳು, ಹವ್ಯಾಸೀ ಖಗೋಳತಜ್ಞರು, ನನ್ನಂತಹ ಆಕಾಶರಾಯರು ಎಲ್ಲರೂ ಸಂಪೂರ್ಣ ವಿದ್ಯಮಾನಗಳನ್ನು ನಿರಂತರವಾಗಿ ಚಿತ್ರೀಕರಿಸುತ್ತ, ಮಧ್ಯೆಮಧ್ಯೆ ಫೋಟೊ ತೆಗೆಯುತ್ತ, ಕುತೂಹಲದಿಂದ ಕಂಕಣ ಸೂರ್ಯಗ್ರಹಣವನ್ನು ನಿರೀಕ್ಷಿಸುತ್ತ ನಿಂತಿದ್ದರು. ಚಂದ್ರ ಆಗಲೇ ಸೂರ್ಯನನ್ನು ಮುಕ್ಕಾಲು ಭಾಗ ನುಂಗಿದ್ದ. ನನ್ನಲ್ಲಿ ಟ್ರೈಪಾಡ್ ಇಲ್ಲದಿದ್ದುದು ಬಹು ದೊಡ್ಡ ಕೊರತೆಯಾಯಿತು. ಫಿಲ್ಟರ್ ಹಾಳೆಯನ್ನು ಲೆನ್ಸ್ ಮುಂದೆ ಹಿಡಿದು, ಜೂಂ ಮಾಡಿ, ಸ್ವಲ್ಪವೂ ಕೈ ನಡುಗಿಸದೆ ಸೂರ್ಯನ ಛಾಯೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ನಿಜಕ್ಕೂ ಅಸಾಧ್ಯವಾದ ಕೆಲಸ. ಪ್ರತಿ ಸಾರಿ ಒಬ್ಬೊಬ್ಬರನ್ನು ಮುಕ್ಕಾಲಿ ದಯಪಾಲಿಸಲು ಬೇಡುವಂತಾಯಿತು. ಬೀಸುತ್ತಿದ್ದ ಗಾಳಿಯ ತೀವ್ರತೆಯಿಂದಾಗಿ ಸಾಧಾರಣ ಮುಕ್ಕಾಲಿಗಳು ತರತರನೆ ನಡುಗುತ್ತಿದ್ದವು.

ಜಮಾಯಿಸಿದ್ದ ಜನರಲ್ಲಿ ಹಲವರು ಕರ್ನಾಟಕದವರೂ ಇದ್ದರು. ದೂರದ ನಾಡಿಗೆ ಹೋದಾಗ ಕನ್ನಡದಲ್ಲಿ ಮಾತನಾಡುವವರು ಸಿಕ್ಕಿದರೇ ಒಂದು ರೀತಿಯ ಸಂತೋಷ! ನಾವು ನಿಂತ ಜಾಗದ ಹತ್ತಿರದಲ್ಲಿಯೇ ಬೆಂಗಳೂರಿನ ಸಹೋದರರರಿಬ್ಬರು ಗ್ರಹಣವನ್ನು ವೀಕ್ಷಿಸುವುದರೊಂದಿಗೆ ಸಂಪ್ರದಾಯಬದ್ಧರಾಗಿ ಮಂತ್ರಜಪವನ್ನೂ ಮಾಡುತ್ತಿದ್ದರು. ಮಕ್ಕಳು ಆಗಲೇ ಸಮುದ್ರಕ್ಕೆ ಇಳಿದಾಗಿತ್ತು. ವಿಡಿಯೋಚಿತ್ರಗಳನ್ನು, ಮತ್ತು ಫೋಟೋಗಳನ್ನು ತೆಗೆದುಕೊಳ್ಳಬೇಕಾಗಿದ್ದರಿಂದ ಮತ್ತು ಆಗಾಗ ಇತರರ ಸಲಕರಣೆಗಳನ್ನು ಮುಟ್ಟುತ್ತಿದ್ದರಿಂದ, ಹಾಗೂ ಜೊತೆಗೆ ಅವುಗಳನ್ನು ಹಿಡಿದುಕೊಂಡು ನನ್ನ ಹಿಂದೆ ತಿರುಗಬೇಕಾಗಿದ್ದರಿಂದ ನಾನೂ ನನ್ನ ಹೆಂಡತಿಯೂ ಕೊನೆಯವರೆಗೂ ಮೈಕೈ ನೀರು ಮಾಡಿಕೊಳ್ಳದೆ ಎಚ್ಚರ ವಹಿಸಬೇಕಾಯಿತು. ಇನ್ನೊಂದು ತಮಾಷೆಯೆಂದರೆ, ಒಬ್ಬ ತನ್ನ ದೂರದರ್ಶಕದ ಮೂಲಕ ಸೂರ್ಯನನ್ನು ನೋಡಿದ ಮೇಲೆ ಪಕ್ಕದಲ್ಲಿ ಸ್ಥಾಪಿತವಾದ ಮತ್ತೊಬ್ಬನ ದೂರದರ್ಶಕದೊಳಗೆ ಇಣುಕುತ್ತಿದ್ದ; ಅಲ್ಲಿ ಕಾಣುತ್ತಿದ್ದದ್ದೂ ಅದೇ!

ಸಮಯ ಕಳೆದಂತೆ ಚಂದ್ರ ನಿಧಾನವಾಗಿ ಸೂರ್ಯನ ಮಧ್ಯಭಾಗಕ್ಕೆ ಸರಿಯುತ್ತಿದ್ದ. ಮಧ್ಯಾಹ್ನ ೧.೧೮ಕ್ಕೆ ಕಂಕಣಗ್ರಹಣ ಪ್ರಾರಂಭವಾಯಿತು. ನೆರೆದ ಎಲ್ಲ ವೀಕ್ಷಕರಲ್ಲಿಯೂ ಹೊಸ ಹುರುಪು ಕಂಡಿತು. ಕ್ರಿಕೆಟ್ ಆಟದಲ್ಲಿ ಒಬ್ಬ ಬೌಲರ್ ಓಡಿಬಂದು ಬೌಲ್ ಮಾಡುವಾಗ ಕಾಮೆಂಟೇಟರ್‌ಗಳ ಧ್ವನಿ ಬರಬರುತ್ತ ತಾರಕಕ್ಕೆ ಏರುವಂತೆ ದೂರದಲ್ಲಿ ವಿವಿಧ ಮಾಧ್ಯಮಗಳ ಮಾತುಗಾರರು ಮೈಮೇಲೆ ದೇವರು ಬಂದಂತೆ ಮೈಕ್‌ನಲ್ಲಿ ಕೂಗುತ್ತಿದ್ದುದು ಕೇಳುತ್ತಿತ್ತು. ಅಲ್ಲಿ ಆ ಹೊತ್ತು ಕೇಕು, ಬಿಸ್ಕೇಟು ಮುಂತಾದ ತಿನಿಸುಗಳನ್ನು ಎಲ್ಲರಿಗೂ ಹಂಚಿ, ತಾವೂ ತಿಂದು, ಸಾವಿರಾರು ವರ್ಷಗಳಿಂದ ಭಾರತೀಯರು ಆಚರಿಸುತ್ತ ಬಂದಿದ್ದ ಮೂಢನಂಬಿಕೆಯನ್ನು ಹೀಗೆ ತಿನ್ನುವುದರ ಮೂಲಕ ತೊಡೆದಿದ್ದೇವೆ ಎಂದು ಜಾಹೀರು ಮಾಡುವ ಉತ್ಸುಕತೆ ಅವರಲ್ಲಿದ್ದಂತೆ ತೋರಿತು. ಆ ವೇಳೆಗೆ ಸುತ್ತಲ ವಾತಾವರಣದಲ್ಲಿ ಸ್ವಲ್ಪ ಕತ್ತಲ ಛಾಯೆ ಕಾಣಿಸಿತು. ಸೂರ್ಯನಿಗೇ ಮಂಕು ಬಡಿಯಿತೇನೋ ಎಂಬಂತೆ! ಅದು ಬಿಟ್ಟರೆ ಸಾಧಾರಣವಾಗಿ ಸಂಪೂರ್ಣ ಸೂರ್ಯಗ್ರಹಣದಲ್ಲಿ ಆಗುವಂತೆ ಕತ್ತಲು ಆವರಿಸಲಿಲ್ಲ. ಫಿಲ್ಟರ್ ಇಲ್ಲದೆ ನೇರವಾಗಿ ಸೂರ್ಯನನ್ನು ದಿಟ್ಟಿಸಲು ಆಗಲೂ ಸಾಧ್ಯವಿಲ್ಲ. ಎಡೆಬಿಡದೆ ಎಲ್ಲರೂ ಚಿತ್ರೀಕರಣ, ಛಾಯಾಗ್ರಹಣದಲ್ಲಿ ನಿರತರಾದರು! ಈ ವೇಳೆಗೆ ನಾನು ಒಂದು ಟ್ರೈಪಾಡ್‌ನ್ನು ಹೇಗೋ ಹೊಂದಿಸಿಕೊಂಡಿದ್ದೆ.

೧.೨೩ರಕ್ಕೆ ಚಂದ್ರನ ತಟ್ಟೆ ಸೂರ್ಯನ ಇನ್ನೊಂದು ಬದಿಯನ್ನು ಸೇರಿತು, ಅಲ್ಲಿಂದಾಚೆ ಗ್ರಹಣ ಬಿಡತೊಡಗಿತು. ಉತ್ತುಂಗಕ್ಕೆ ಏರಿದ್ದ ಉತ್ಸಾಹ ಎಲ್ಲೆಡೆ ಕುಗ್ಗುತ್ತಾ ಬಂತು. ಎಲ್ಲರೂ ಅವರವರ ಸಲಕರಣೆಗಳನ್ನು ಬಿಚ್ಚಿ, ಸುತ್ತತೊಡಗಿದರು, ತಮ್ಮ ತಮ್ಮ ವಾಹನಗಳಿಗೆ ಪ್ಯಾಕ್ ಮಾಡತೊಡಗಿದರು. ಬೆಳಗ್ಗಿನಿಂದ ನಾವೆಲ್ಲ ಏನನ್ನೂ ತಿಂದಿರಲಿಲ್ಲ; ಮಕ್ಕಳೂ ಹಸಿವೆ ಎಂದಿರಲಿಲ್ಲ. ಗ್ರಹಣ ಬಿಟ್ಟಿದ್ದರಿಂದ ನಮ್ಮ ಮುಂದಿನ ಕಾರ್ಯಕ್ರಮ ಸಮುದ್ರಸ್ನಾನ. ಮಕ್ಕಳಿಬ್ಬರೂ ಈಗಾಗಲೇ ಕಡಲ ನೀರಿನಲ್ಲಿ ಆಟವಾಡುತ್ತಿದ್ದರು; ಅವರಮ್ಮನೂ, ನಾನೂ ಅಮಾವಾಸ್ಯೆಯ ಅಲೆಯುಬ್ಬರಗಳ ಹೊಡೆತ ಸುಖವನ್ನು ಆನಂದಿಸತೊಡಗಿದೆವು. ನಾನಾಚೆ ತಿರುಗಿ ಅಭಿಜ್ಞಳೊಂದಿಗೆ ಏನೋ ಹೇಳುತ್ತಿದ್ದೆ. ಯಾವುದೋ ಕ್ಷಣದಲ್ಲಿ ಈ ಕಡೆ ತಿರುಗಿದರೆ, ಪುಷ್ಪಾ ‘ಓ..ಹೋ’ ಎಂದು ಎರಡೂ ಕಾಲು, ಕೈಎತ್ತಿ ಕೂಗುತ್ತಿದ್ದಳು. ಮೊದಲೇ ಅವಳಿಗೆ ಈಜು, ಮತ್ತೊಂದು ಬಾರದು. ಅಲೆಗಳು ತೀರಕ್ಕೆ ಬಡಿದು ಹಿಂದಿರುಗುತ್ತಿದ್ದಾಗ ಇವಳು ಆಯ ತಪ್ಪಿದ್ದಳು! ನಾನು ಓಡಿಹೋಗಿ ಹಿಡಿದುಕೊಳ್ಳುವುದರೊಳಗೆ, ಪಕ್ಕದಲ್ಲಿದ್ದ ಬೆಂಗಳೂರಿನ ಸಹೋದರರು ಅವಳನ್ನು ಹಿಡಿದೆತ್ತಿ ನಿಲ್ಲಿಸಿದ್ದರು. ಅವರಿಗೆ ಕೃತಜ್ಞತೆಯನ್ನು ಹೇಳಿ ಇವಳನ್ನು ನೀರಿನಿಂದ ಪಾರು ಮಾಡಿ, ಎಲ್ಲರೂ ಕಾರಿನೆಡೆಗೆ ನಡೆದೆವು. ಕೊನೆಗೆ ಇವಳು ಹೇಳಿದ್ದಿಷ್ಟು: ‘ಅವರು ನನ್ನ ಜೀವ ಉಳಿಸಿದ್ದು ಹಾಗಿರಲಿ, ನನ್ನ ರಟ್ಟೆಯನ್ನು ಹಿಡಿದೆಳೆದ ನೋವು ಇನ್ನೂ ಹೋಗಿಲ್ಲ!’


ಧನುಷ್ಕೋಟಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಸಮುದ್ರ ಒಂದಿಷ್ಟೂ ಆಳವಿಲ್ಲ. ನಡೆದೇ ಎಷ್ಟೋ ದೂರ ಸುತ್ತಬಹುದು. ಅಲ್ಲದೆ ಅಲ್ಲಿಂದ ಇನ್ನೂ ಹತ್ತು ಕಿಲೋಮೀಟರುಗಳ ದೂರದಲ್ಲಿ ರಾಮಸೇತುವಿದೆ. ಅಲ್ಲಿಗೆ ನಾಲ್ಕು ಗೇರ್‌ಗಳಿರುವ ವಾಹನಗಳಲ್ಲಿ ಹೋಗಬಹುದು. ಅದೊಂದು ವಿಶಿಷ್ಟ ಅನುಭವ. ಅದನ್ನೂ ಮುಗಿಸಿ, ಸಂಜೆ ಆರೂವರೆಗೆ ಭಾರವಾದ ಉಪ್ಪುದೇಹವನ್ನು ಹೊತ್ತು ರಾಮೇಶ್ವರಕ್ಕೆ ಬಂದು, ಅಲ್ಲಿಂದ ರಾಮನಾಡ್‌ಗೆ ಹಿಂದಿರುಗಿದೆವು. ರಾತ್ರಿ ಊಟ ಮಾಡುವಾಗ ಏಳೂವರೆ ಘಂಟೆ! ಮಾರನೆ ದಿನ ಮಧುರೆಗೆ ತೆರಳಿ ಅಲ್ಲಿ ದೇವಸ್ಥಾನವನ್ನೂ ನೋಡಿಕೊಂಡು, ಹಾಗೇ ತಿರುಪ್ಪೂರಿನ ಮಾರ್ಗವಾಗಿ ಬಂದು ಕೊನೆಗೆ ನಂಜನಗೂಡಿನ ತಮ್ಮನ ಮನೆ ತಲುಪುವಾಗ ರಾತ್ರಿ ಹತ್ತು ಘಂಟೆ ಮೀರಿತ್ತು.


ಕೊನೆಗೂ ಕಂಕಣ ಸೂರ್ಯಗ್ರಹಣವನ್ನು ನೋಡಬೇಕೆಂಬ ನನ್ನ ಹಲವು ವರ್ಷಗಳ ಕನಸು ನನಸಾಗಿತ್ತು. ನಿಜಕ್ಕೂ ಅದೊಂದು ಅದ್ಭುತ ಅನುಭವ!

Saturday, February 6, 2010

ಕಂಕಣ ಸೂರ್ಯನ ಭವ್ಯಾನುಭವ

ಮೊನ್ನೆ ಜನವರಿ ಹದಿನೈದರ ಸಂಪೂರ್ಣ ಸೂರ್ಯಗ್ರಹಣವನ್ನು ನೋಡುವ ತವಕ ನನಗೆ ಉಂಟಾದದ್ದು ಹದಿನಾರು ವರ್ಷಗಳ ಹಿಂದೆ. ಆಗ ನನ್ನ ಕಂಪ್ಯೂಟರ್‌ನಲ್ಲಿ ಹೊಸದಾಗಿ ಅಳವಡಿಸಿದ ಖಗೋಳ ತಂತ್ರಾಂಶವನ್ನು ಉಪಯೋಗಿಸಿ, ಮುಂದೆ ಭಾರತದಲ್ಲಿ ನಡೆಯಲಿರುವ ಸಂಪೂರ್ಣ ಸೂರ್ಯಗ್ರಹಣಗಳ ಬಗ್ಗೆ ಕುತೂಹಲದಿಂದ ನೋಡುತ್ತ ನೋಡುತ್ತ ಹೋದಾಗ ೨೦೧೦ ಜನವರಿ ೧೫ರಂದು ಘಟಿಸುವ ಖಗ್ರಾಸ ಸೂರ್ಯಗ್ರಹಣ ನನ್ನ ಗಮನ ಸೆಳೆದಿತ್ತು. ಈ ಗ್ರಹಣದ ವಿಶೇಷತೆ ಏನೆಂದರೆ, ಚಂದ್ರನು ಸೂರ್ಯನ ತಟ್ಟೆಯನ್ನು ಸಂಪೂರ್ಣವಾಗಿ ಮುಚ್ಚಿಯೂ ಮುಚ್ಚಲಾರದೆ ನಡುಮಧ್ಯೆ ನಿಲ್ಲುವ ನೋಟವನ್ನು ನೋಡಿದ ನನಗೆ ಹೀಗೂ ಒಂದು ಸೂರ್ಯಗ್ರಹಣ ನಡೆಯಬಹುದೆ ಎಂದು ಅಚ್ಚರಿಯಾಗಿತ್ತು. ಇದಕ್ಕೆ ಉತ್ತರ ಪ್ರೊ. ಜಿ. ಟಿ. ನಾರಾಯಣರಾಯರಲ್ಲದೆ ಇನ್ನಾರಿಗೆ ಗೊತ್ತಿದ್ದೀತು ಎಂದು ನೇರವಾಗಿ ಅವರನ್ನೇ ಸಂಪರ್ಕಿಸಿದೆ.

‘ಇದನ್ನು ಕಂಕಣ ಗ್ರಹಣ ಎನ್ನುತ್ತಾರೆ. ಇಂತಹ ಸಂದರ್ಭಗಳಲ್ಲಿ ಚಂದ್ರನು ಭೂಮಿಯಿಂದ ಸ್ವಲ್ಪ ಹೆಚ್ಚು ದೂರದಲ್ಲಿರುವುದರಿಂದ ಅವನ ಸೈಜ್ ಸ್ವಲ್ಪ ಚಿಕ್ಕದಾಗಿ ತೋರುತ್ತದೆ. ಹಾಗಾಗಿ ಈ ಗ್ರಹಣದ ಸಮಯದಲ್ಲಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚುವುದಿಲ್ಲ. ಮಧ್ಯದಲ್ಲಿ ಚಂದ್ರ ಮತ್ತು ಅವನ ಸುತ್ತಲೂ ಸೂರ್ಯನ ಕಿರಣಗಳು ದೊಡ್ಡ ಬಳೆಯ ರೀತಿ ಕಾಣಿಸುತ್ತದೆ’ ಎಂಬ ವಿಷಯ ತಿಳಿಸಿದರು. ಈ ಗ್ರಹಣ ನಾನಿರುವ ಊರಿನಿಂದ ಕೆಲವೇ ನೂರು ಕಿಲೋಮೀಟರುಗಳ ದೂರದಲ್ಲಿ ನಡೆಯುವುದರಿಂದ ಅದನ್ನು ನೋಡಲೇಬೇಕೆಂಬ ಚಪಲ ಅಲ್ಲಿಂದಲೇ ಶುರುವಾಯಿತು.

ಸಂಪೂರ್ಣ ಸೂರ್ಯಗ್ರಹಣವನ್ನು ನೋಡುವುದೇ ಒಂದು ವಿಶೇಷವಾದ, ವರ್ಣನಾತೀತವಾದ ಅನುಭವ. ಹಿಂದೆ ೧೯೮೦ರ ಫೆಬ್ರವರಿ ಹದಿನಾರರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಗ್ರಹಣವನ್ನು ಬಹಳ ಸಾಹಸಪಟ್ಟು ನೋಡಿದ್ದೆ. ಇದರಲ್ಲಿ ಸಾಹಸ ಎಂಥದ್ದು ಎಂದು ನೀವು ಕೇಳಬಹುದು. ಆ ಅನುಭವವನ್ನು ಇಷ್ಟು ವರ್ಷಗಳಲ್ಲಿ ನೂರಾರು ಬಾರಿ ಪುನಃಪುನಃ ಮನಸ್ಸಿನಲ್ಲಿಯೇ ಮನನ ಮಾಡಿದ್ದೇನೆ; ಹತ್ತು-ಹಲವು ಮಂದಿಯೊಂದಿಗೆ ಹೇಳಿ ಸಂಭ್ರಮಿಸಿದ್ದೇನೆ. ಆದ್ದರಿಂದ ಅದಿನ್ನೂ ನನ್ನ ನೆನಪಿನ ಅಂಗಳದಲ್ಲಿ ಹಚ್ಚಹಸುರಾಗಿಯೇ ಇದೆ! ಆದ್ದರಿಂದ ಈ ಲೇಖನದ ಮೊದಲ ಕಂತಿನಲ್ಲಿ ನನ್ನ ಹಳೆಯ ಅನುಭವವನ್ನು ಬರೆದು, ಮುಂದಿನ ವಾರ ರಾಮೇಶ್ವರದ ಕತೆಯನ್ನು ಹೇಳಲು ತೀರ್ಮಾನಿಸಿದ್ದೇನೆ.

ಕೊಡಗಿನಿಂದ ಉತ್ತರ ಕನ್ನಡ ಜಿಲ್ಲೆಯನ್ನು ತಲುಪಲು ಸುಮಾರು ೩೨೫ ಕಿಮೀ ಪ್ರಯಾಣ ಮಾಡಬೇಕು. ಅಂದರೆ ಸುಮಾರು ಎಂಟು-ಒಂಭತ್ತು ಘಂಟೆಗಳ ಪ್ರಯಾಣ. ಸಾಧಾರಣವಾಗಿ ಬಾಕಿ ಎಲ್ಲಾ ದಿನಗಳಲ್ಲಿ ಇಲ್ಲಿಂದ ಮಂಗಳೂರು ತಲುಪಿದರೆ, ಅಲ್ಲಿಂದ ಕುಂದಾಪುರದ ಕಡೆಗೆ ಹತ್ತಾರು ಬಸ್‌ಗಳು ಸಿಕ್ಕುತ್ತವೆ ಎಂದು ಕೇಳಿ ತಿಳಿದುಕೊಂಡೆ. ಸಂಪೂರ್ಣಗ್ರಹಣ ಹಿಡಿಯುವುದು ಮಧ್ಯಾಹ್ನ ಮೂರೂವರೆ ಘಂಟೆಗೆ ತಾನೇ? ಬೆಳಿಗ್ಗೆ ಹೊತ್ತಿಗೆ ಮುಂಚೆ ಹೊರಟರೆ, ಮಧ್ಯಾಹ್ನದ ಮೂರು ಘಂಟೆಯ ಹೊತ್ತಿಗೆ ಉತ್ತರ ಕನ್ನಡ ಜಿಲ್ಲೆಯನ್ನು ತಲುಪಬಹುದು. ಅಲ್ಲಿಗೆ ಯಾವತ್ತೂ ಬಸ್ಸುಗಳಿಗೆ ಕೊರತೆಯಿರುವುದಿಲ್ಲ. ಬಹುಶಃ ನಾನೂ ಆವತ್ತು ಹಾಗೆ ಆಲೋಚಿಸಿದ್ದೆ. ಅದು ಆವತ್ತಿನ ಮಟ್ಟಿಗೆ ಸುಳ್ಳಾಗುವುದೆಂದು ಕನಸಿನಲ್ಲೂ ಎಣಿಸಿರಲಿಲ್ಲ!

‘ಸುಮ್ಮನೆ ಒಂದು ಗ್ರಹಣವನ್ನು ನೋಡಲು ಅಷ್ಟು ದೂರ ಯಾಕೆ ಹೋಗುತ್ತೀಯ’ ಎಂದು ಅಮ್ಮ ಹಿಂದಿನ ರಾತ್ರಿಯೇ ಕೊಕ್ಕೆ ಹಾಕಿದ್ದರು. ಏನೇ ಆಗಲಿ ಈ ಗ್ರಹಣವನ್ನು ನೋಡಲೇಬೇಕೆಂದು ವೀರಾಜಪೇಟೆಯಿಂದ ಬೆಳಿಗ್ಗೆ ಐದೂವರೆ ಘಂಟೆಗೆ ಮಡಿಕೇರಿಯ ಬಸ್ ಹತ್ತಿದೆ. ಮಡಿಕೇರಿ ತಲುಪುವಾಗ ಆರೂವರೆ ಘಂಟೆಯಾಗಿತ್ತು. ಯಾವುದೋ ಒಂದು ಪ್ರೈವೇಟ್ ಬಸ್ ಮಂಗಳೂರಿಗೆ ಹೋಗುತ್ತದೆ ಎಂದು ತಿಳಿದಾಕ್ಷಣ ಓಡಿ ಆ ಬಸ್ಸನ್ನು ಹತ್ತಿದೆ.

ಕುಂದಾಪುರಕ್ಕೆ, ಅಲ್ಲಿಂದ ಕಾರವಾರದ ಕಡೆಗೆ ಹೋಗುವುದಿದ್ದರೆ ಮಂಗಳೂರಿಗೆ ಯಾಕೆ ಹೋಗಬೇಕು, ಬಿಸಿ ರೋಡ್ ತಲುಪಿದರೆ ಅಲ್ಲಿಂದಲೇ ನೇರವಾಗಿ ಯಾವುದಾದರೂ ವಾಹನ ಸಿಕ್ಕಿಯೇ ಸಿಕ್ಕುತ್ತದೆ ಎಂದು ಸಹ ಪ್ರಯಾಣಿಕರು ಹೇಳಿದ ಮೇರೆಗೆ, ಬಿಸಿ ರೋಡಿಗೇ ಟಿಕೆಟ್ ತೆಗೆದುಕೊಂಡೆ. ಪುತ್ತೂರು ತಲುಪುವಾಗ ಒಂಭತ್ತು ಘಂಟೆ ಕಳೆದಿತ್ತು. ಅದೇಕೋ ಆವತ್ತು ಬಹಳ ಬೇಗನೆ ತಲುಪಿದ್ದೇನೆ ಅನ್ನಿಸಿತು. ಬಸ್ಸಿನವರಿಗೆ ಅದೇನು ತೋಚಿತೋ ಇದ್ದಕ್ಕಿದ್ದಂತೆ ಪುತ್ತೂರಿನಲ್ಲಿ ಬಸ್ಸಿನ ಪ್ರಯಾಣಕ್ಕೆ ಫುಲ್ ಸ್ಟಾಪ್ ಹಾಕಿ ನಿಲ್ಲಿಸಿಬಿಟ್ಟರು. ಎಲ್ಲರೂ ಬಸ್ಸಿನಿಂದ ಇಳಿಯತೊಡಗಿದರು. ಈ ಬಸ್ಸಿಗೇನಾಯ್ತು?

ದಾರಿಯುದ್ದಕ್ಕೂ ಆಲೋಚಿಸುತ್ತಿದ್ದೆ: ಇದೇನಿದು? ಒಂಭತ್ತು ಘಂಟೆಯಾದರೂ ಯಾವ ಮಕ್ಕಳೂ ಶಾಲೆಗೆ ಹೋಗುವುದು ಕಾಣುತ್ತಿಲ್ಲವಲ್ಲ? ಈವತ್ತು ಯಾವುದಾದರೂ ರಜೆಯೆ? ಅಷ್ಟು ಹೊತ್ತಾದರೂ ಯಾವ ಅಂಗಡಿಯೂ ಇನ್ನೂ ತೆರೆದದ್ದು ಕಾಣಲಿಲ್ಲ. ಆಶ್ಚರ್ಯವಾಯಿತು. ಬಸ್ಸಿನಿಂದ ಇಳಿದು ಸುತ್ತಲೂ ನೋಡಿದೆ. ಎಲ್ಲಿಯೂ ಯಾವ ಬಸ್ಸಿನ ಸುಳಿವೂ ಇರಲಿಲ್ಲ. ಜನರೂ ಒಬ್ಬಿಬ್ಬರು ಮಾತ್ರ ಅಲ್ಲಿ-ಇಲ್ಲಿ ನಿಂತಿದ್ದರು. ಇದೇನಿದು? ಎಲ್ಲವೂ ಸ್ತಬ್ದ? ಈ ಊರಿನಲ್ಲಿ ಯಾವುದಾದರೂ ಬಂದ್ ಘೋಷಣೆಯಾಗಿದೆಯೇ ಎಂದು ಯಾರನ್ನೋ ಕೇಳಿದೆ. ಈವತ್ತು ಗ್ರಹಣವಾದದ್ದರಿಂದ ಹೀಗೆ ಅಂತ ಗೊತ್ತಾಯಿತು. ಎಂಥ ವಿಪರ್ಯಾಸ! ವಿದ್ಯಾರ್ಥಿಗಳಿಗೆ ಸೂರ್ಯಗ್ರಹಣದ ಬಗ್ಗೆ ತಿಳಿಸಲು ಇದಕ್ಕಿಂತ ಒಳ್ಳೆಯ ಸಂದರ್ಭ ಬೇಕೇ? ಶಾಲೆಗೆ ರಜಾ ಕೊಟ್ಟು ಮಕ್ಕಳನ್ನು ಸಂಪೂರ್ಣವಾಗಿ ಕತ್ತಲಿನಲ್ಲಿಡುತ್ತಿದ್ದಾರಲ್ಲ! ಛೆ!

ಮುಂದೇನು, ಎಂದು ಆಲೋಚಿಸಿದೆ. ಅದೇ ಬಸ್ಸಿನಲ್ಲಿ ಮಂಗಳೂರಿಗೆ ಹೋಗಿದ್ದರೆ ಅಲ್ಲಿಂದ ಹೇಗಾದರೂ ಪ್ರಯಾಣ ಮುಂದುವರಿಸಬಹುದಿತ್ತೇನೋ. ಹೀಗೆ ಎಲ್ಲಾ ಬಿಟ್ಟು ಪುತ್ತೂರಿನಲ್ಲಿ ಸಿಕ್ಕಿಕೊಂಡೆನಲ್ಲ! ಹಾಗೆಂದುಕೊಳ್ಳುವ ಹೊತ್ತಿಗೆ ಮತ್ತೊಂದು ಮಂಗಳೂರಿಗೆ ಹೋಗುವ ಬಸ್ ಬಂದಿತು. ಬಸ್ಸಿಗೆ ಬಸ್ಸೇ ಖಾಲಿ ಖಾಲಿ! ಬಿಸಿ ರೋಡ್ ಹೇಗೂ ತಲುಪುವಷ್ಟರಲ್ಲಿ ಹತ್ತೂವರೆಯಾಗಿತ್ತು. ಎಲ್ಲಿಯೂ ನಿಲ್ಲದೆ ನಾನ್ ಸ್ಟಾಪ್ ಬಸ್‌ನಂತೆ ಪ್ರಯಾಣ. ತಿನ್ನಲು ಯಾವ ಅಂಗಡಿಯೂ ಇಲ್ಲ, ಹೋಟಲ್ಲೂ ಇಲ್ಲ. ಮೊದಲೇ ತಿಳಿದಿದ್ದರೆ ತಿನ್ನಲು ಏನನ್ನಾದರೂ ಕಟ್ಟಿಸಿಕೊಂಡು ಬರಬಹುದಿತ್ತು.

ರಸ್ತೆಯೆಲ್ಲ ಭಣಗುಟ್ಟುತ್ತಿತ್ತು. ಒಂದೆರಡು ಲಾರಿ-ಟ್ರಕ್‌ಗಳನ್ನು ಬಿಟ್ಟರೆ ಯಾವ ವಾಹನವೂ ಕಂಡುಬರಲಿಲ್ಲ. ಆಗೊಂದು ಈಗೊಂದು ಕಾರು ಭರ್ರನೆ ಹಾದುಹೋಗುತ್ತಿದ್ದವು. ಯಾರಾದರೂ ಕುಂದಾಪುರ-ಕಾರವಾರದ ಕಡೆಗೆ ಹೋಗುವವರಿದ್ದರೆ! ಏನಾದರಾಗಲಿ ಎಂದು ಒಂದೊಂದು ಕಾರಿಗೂ ಕೈ ತೋರಿಸತೊಡಗಿದೆ. ಕೊನೆಗೂ ನನ್ನ ಅದೃಷ್ಟಕ್ಕೆ ಬ್ರಹ್ಮಾವರಕ್ಕೆ ಹೋಗುತ್ತಿದ್ದ ಒಂದು ಕಾರು ಸಿಕ್ಕಿತು. ಅರ್ಜೆಂಟ್, ಕಾರವಾರಕ್ಕೆ ಹೋಗಬೇಕು ಎಂದು ಹೇಳಿ ಹತ್ತಿದೆ. ರಸ್ತೆಯಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಬಿಟ್ಟ ಬಾಣದ ಹಾಗೆ ಕಾರು ಮೂಡಬಿದರೆ, ಕಾರ್ಕಳ ದಾರಿಗಾಗಿ, ಉಡುಪಿಯಲ್ಲಿ ನನ್ನನ್ನು ಇಳಿಸಿ ಹೋಯಿತು. ಸಾಲದ್ದಕ್ಕೆ ೫೦ ರೂಪಾಯಿಗಳನ್ನೂ ತೆರಬೇಕಾಯಿತು. ಆಗ ವೇಳೆ ಮಧ್ಯಾಹ್ನ ಒಂದೂವರೆ ಘಂಟೆ!

ಏನೇ ಆದರೂ ನಾನು ಮೂರೂವರೆಯೊಳಗೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರಬೇಕಿತ್ತು. ಸಂಪೂರ್ಣ ಸೂರ್ಯಗ್ರಹಣವನ್ನು ನೋಡಬೇಕಾದರೆ ಕನಿಷ್ಟ ಬಟ್ಕಳವನ್ನಾದರೂ ತಲುಪಲೇ ಬೇಕಿತ್ತು. ಈಗ ಉಳಿದಿರುವುದು ಎರಡು ತಾಸುಗಳು ಮಾತ್ರ! ಆ ದಾರಿಗಾಗಿ ಹೋಗುವ ಎಲ್ಲ ವಾಹನಗಳಿಗೂ ಕೈತೋರುತ್ತಲೇ ಇದ್ದೆ. ಎಲ್ಲರಿಗೂ ಅದೇನು ಅರ್ಜೆಂಟೋ ಒಬ್ಬರೂ ನಿಲ್ಲಿಸುವ ಕರುಣೆ ತೋರಿಸಲಿಲ್ಲ. ಕೊನೆಗೆ ಏನೂ ತೋಚದೆ ಕೈಸನ್ನೆ ಮಾಡುತ್ತಾ ಒಂದು ಕಾರಿನ ಹಿಂದೆಯೇ ಓಡಿದೆ. ಅವರಿಗೆ ಅದೇನನ್ನಿಸಿತೋ, ಸ್ವಲ್ಪ ದೂರ ಹೋಗಿ ನಿಲ್ಲಿಸಿದರು. ಕುಮಟಾದಲ್ಲಿ ಯಾರದ್ದೋ ಸಾವು ನೋಡಲು ಹೋಗುತ್ತಿದ್ದವರು. ಬಹುಶಃ ನನ್ನ ಆತಂಕದ ಮುಖ ನೋಡಿ ನನಗೂ ಅಂತಹದ್ದೇ ಅನಿವಾರ್ಯ ಪರಿಸ್ಥಿತಿ ಇರಬಹುದೇನೋ ಅನ್ನಿಸಿರಬೇಕು! ಕಾರು ಹತ್ತಿದ ಮೇಲೆ ನಾನು ಹೊರಟ ಉದ್ದೇಶ ತಿಳಿಸಿದೆ. ಕಾರಿನಲ್ಲಿದ್ದ ಯಾರಿಗೂ ನನ್ನ ಘನಕಾರ್ಯ ರುಚಿಸಿದ ಹಾಗೆ ಕಾಣಲಿಲ್ಲ. ಆದರೂ ಹತ್ತಿಸಿಕೊಂಡು ಆಗಿತ್ತು, ಪ್ರಯಾಣ ಮುಂದುವರೆಸಿದರು. ನನ್ನ ಪುಣ್ಯಕ್ಕೆ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರವಿಲ್ಲವಾದ್ದರಿಂದ ನಮ್ಮ ಕಾರು ವೇಗವಾಗಿ ಹೋಗಲು ಸಾಧ್ಯವಾಗಿತ್ತು. ಎರಡೂವರೆ ಘಂಟೆಗೇ ಕುಂದಾಪುರವನ್ನು ತಲುಪಿದೆವು.

ಯಾವ ಗ್ರಹಣವನ್ನು ನೋಡಬೇಕೆಂದು ಇಲ್ಲಿಯವರೆಗೆ ಬಂದಿದ್ದೆನೋ ಅದು ೨.೨೦ಕ್ಕೇ ಹಿಡಿಯಲು ಶುರುವಾಗಿತ್ತು. ನಾನು ಮತ್ತೊಂದು ಪೆದ್ದು ಕೆಲಸವನ್ನು ಮಾಡಿದ್ದೆ. ಸೂರ್ಯನನ್ನು ನೋಡಲು ತೆಗೆದಿರಿಸಿಕೊಂಡಿದ್ದ ಎಕ್ಸ್‌ರೇ ಹಾಳೆಯನ್ನು ಮನೆಯಲ್ಲೇ ಬಿಟ್ಟುಬಂದಿದ್ದೆ!

ಗ್ರಹಣದ ಸಮಯದಲ್ಲಿ ಸೂರ್ಯನನ್ನು ನೋಡಬಾರದೆಂದು ಎಲ್ಲರೂ ಸತತವಾಗಿ ಎಚ್ಚರಿಕೆ ನೀಡುವುದನ್ನು ಕೇಳಿದ್ದೇನೆ. ಇದು ಯಾಕೋ ನನಗೆ ತಿಳಿಯದು. ಹಾಗೆ ನೋಡಿದರೆ, ಯಾವ ಹೊತ್ತೂ ಸೂರ್ಯನನ್ನು ನೋಡಲೇಬಾರದು. ಮುಂಜಾನೆಯ ಮತ್ತು ಸಂಜೆಯಲ್ಲಿ ಕಾಣುವ ಎಳೆ ಸೂರ್ಯನನ್ನು ಮಾತ್ರ ನೇರವಾಗಿ ನೋಡಲು ಸಾಧ್ಯ. ಸಾಧಾರಣವಾಗಿ ನಾವು ಯಾರೂ ಪ್ರಖರವಾದ ಸೂರ್ಯನನ್ನು ನೇರವಾಗಿ ದೃಷ್ಟಿಸಿ ನೋಡುವುದಕ್ಕೆ ಆಗುವುದೇ ಇಲ್ಲ. ಆ ಕಿರಣಗಳು ನಮ್ಮ ದೃಷ್ಟಿಪಟಲವನ್ನು ಸುಟ್ಟುಹಾಕುವ ಶಕ್ತಿ ಹೊಂದಿರುತ್ತವೆ. ಅಲ್ಲದೆ ಸಾಮಾನ್ಯ ದಿನಗಳಲ್ಲಿ ಅವನಲ್ಲಿ ಯಾವ ಆಕರ್ಷಣೆ ಕೂಡಾ ಇಲ್ಲವಲ್ಲ!

ಆದರೆ ಗ್ರಹಣದ ಸಮಯದಲ್ಲಿ ಹಾಗಲ್ಲ; ಅವನ ಮೇಲೆ ಅದೇನೋ ವಿಶೇಷತೆ ನಡೆಯುತ್ತದೆ, ಅದು ನಮ್ಮನ್ನು ಆಕರ್ಷಿಸುತ್ತದೆ. ಆ ಸಮಯದಲ್ಲಿ ಸೂರ್ಯನಿಂದ ಯಾವ ಪ್ರತ್ಯೇಕವಾದ ಕಿರಣಗಳೂ ಹೊರಹೊಮ್ಮುವುದಿಲ್ಲ ಅಥವಾ ಯಾವ ಹೊಸ ಪ್ರಭೆಯೂ ನಮ್ಮ ಮೇಲೆ ಬಿದ್ದು ಹೊಸದಾದ ದುಷ್ಪರಿಣಾಮ ಬೀರುವುದಿಲ್ಲ. ಯಾವತ್ತೂ ಸೂರ್ಯನನ್ನು ನೇರವಾಗಿ ನೋಡಬಾರದು, ಆ ಸಮಯದಲ್ಲೂ ಅವನನ್ನು ನೋಡಬಾರದು. ಅಷ್ಟೆ.

ಕಾರಿನಲ್ಲಿದ್ದ ಯಾರಿಗೂ ಗ್ರಹಣದ ಬಗ್ಗೆ ಕುತೂಹಲವಾಗಲೀ ಆಸಕ್ತಿಯಾಗಲೀ ಇದ್ದಂತಿರಲಿಲ್ಲ. ಎಕ್ಸ್‌ರೇ ಶೀಟ್ ಇರಲಿಲ್ಲವಾದ್ದರಿಂದ ಒಂದು ಕ್ಷಣ ಕತ್ತೆತ್ತಿ ಕಾರಿನ ಹೊರಗೆ ಸೂರ್ಯನನ್ನು ನೋಡುವುದು, ತಕ್ಷಣ ಕಣ್ಣು ಮುಚ್ಚಿಕೊಳ್ಳುವುದು. ಅಷ್ಟಕ್ಕೇ ಅವನ ಚಿತ್ರ ಸ್ಪಷ್ಟವಾಗಿ ದೃಷ್ಟಿಗೆ ಗೋಚರವಾಗಿ ಬಿಡುತ್ತಿತ್ತು!

ಬೈಂದೂರು ತಲುಪುವಾಗ ಮಧ್ಯಾಹ್ನ ಮೂರು ಘಂಟೆ; ಸ್ವಲ್ಪ ಸ್ವಲ್ಪವಾಗಿ ಚಂದ್ರ ಸೂರ್ಯನನ್ನು ನುಂಗುತ್ತಿದ್ದ; ಆ ವೇಳೆಗೆ ಸೂರ್ಯನನ್ನು ಅರ್ಧಭಾಗ ನುಂಗಿಯಾಗಿತ್ತು. ಅಲ್ಲಿಂದ ೩.೨೦ಕ್ಕೆ ಶಿರೂರು. ಅಂತೂ ದಕ್ಷಿಣ ಕನ್ನಡ ದಾಟಿ, ಉತ್ತರ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿ ಆಗಿತ್ತು. ಇಲ್ಲಿಂದ ಉತ್ತರಕ್ಕೆ ಯಾವುದೇ ಜಾಗದಲ್ಲಿಯೂ ಸಂಪೂರ್ಣ ಗ್ರಹಣದ ನೋಟ ಲಭ್ಯ. ಕೊಟ್ಟಕೊನೆಗೂ ಭಟ್ಕಳವನ್ನು ೩.೩೦ಕ್ಕೆ ತಲುಪಿದೆವು. ಗ್ರಹಣ ಶೇಕಡ ೮೦ರಷ್ಟು ಆವರಿಸಿತ್ತು. ಇಲ್ಲೇ ಇಳಿದುಬಿಟ್ಟರೆ ಸಂಪೂರ್ಣ ಗ್ರಹಣವನ್ನು ನೋಡಬಹುದು ಎಂದು, ಇಲ್ಲೇ ಇಳಿದುಕೊಳ್ಳುತ್ತೇನೆ. ನಿಮಗೆಲ್ಲ ತುಂಬಾ ಥ್ಯಾಂಕ್ಸ್ ಎಂದು ಹೇಳಿದೆ. ಅಲ್ಲಿ ನನ್ನನ್ನು ಇಳಿಸಿದ ಕಾರು ಕುಮಟಾ ಕಡೆಗೆ ಮುಂದುವರಿಯಿತು.

ರಸ್ತೆಯ ಬದಿಯಲ್ಲೇ ಇಳಿದಿದ್ದೆ. ಆ ತುದಿಯಿಂದ ಈ ತುದಿಯವರೆಗೂ ಎಲ್ಲವೂ ನೀರವ! ಒಂದು ನರಪಿಳ್ಳೆಯೂ ಕಾಣುತ್ತಿರಲಿಲ್ಲ. ಏನಾಗಿದೆ ಈ ಜನಕ್ಕೆ! ಎಲ್ಲರೂ ಎಲ್ಲಿ ಹೋದರು? ಇಂಥ ಒಂದು ಅದ್ಭುತ ಸಂಗತಿ ತಮ್ಮೂರಿನಲ್ಲೇ ನಡೆಯುತ್ತಿರುವಾಗ ಮನೆಯೊಳಗೆ ಅವಿತು ಕುಳಿತಿದ್ದಾರಲ್ಲ? ಹಾಗೇ ತುಸು ದೂರ ನಡೆದು ಹೋದೆ. ಒಂದು ಶಾಲೆಯ ಮುಂದುಗಡೆ ವಿಶಾಲವಾದ ಆವರಣದಲ್ಲಿ ಸುಮಾರು ೫೦-೫೫ ಜನ ನೆರೆದಿದ್ದರು. ಹಲವು ವಿದ್ಯಾರ್ಥಿಗಳೂ ಇದ್ದರು. ವಿಶೇಷ ಕನ್ನಡಕಗಳನ್ನು ಬಳಸಿ ಗ್ರಹಣವನ್ನು ವೀಕ್ಷಿಸುತ್ತಿದ್ದರು. ಸದ್ಯ, ಜೊತೆಗೆ ಸ್ವಲ್ಪವಾದರೂ ವೈಜ್ಞಾನಿಕ ಮನೋಭಾವವಿರುವ ಮಂದಿ ಸಿಕ್ಕಿದರಲ್ಲ ಎಂದು ನಾನೂ ಗುಂಪಿನಲ್ಲಿ ಸೇರಿಕೊಂಡೆ.

೩.೩೫ರ ವೇಳೆಗೆ ಸುತ್ತಲೂ ಕತ್ತಲು ಆವರಿಸತೊಡಗಿತು. ಇದು ಸಂಜೆಯ ಕತ್ತಲಿನ ಹಾಗೆ ಕೆಂಪು-ಕಿತ್ತಳೆ ಛಾಯೆಗಳಿಂದ ಕತ್ತಲಿನೆಡೆಗೆ ನಿಧಾನವಾಗಿ, ಸ್ವಲ್ಪಸ್ವಲ್ಪವಾಗಿ ವ್ಯಾಪಿಸಲಿಲ್ಲ. ಒಂದು ರೀತಿಯ ವಿಚಿತ್ರವಾದ ಕಪ್ಪು ಛಾಯೆ! ಐದೇ ನಿಮಿಷಗಲ್ಲಿ ಕತ್ತಲಾಗಿಬಿಟ್ಟಿತು. ವ್ಹಾ! ನೆತ್ತಿಯ ಬಳಿ ಮೊದಲು ಕಂಡದ್ದು ಶುಕ್ರ ಗ್ರಹ! ಈಗ ಸೂರ್ಯನನ್ನು ಯಾವುದೇ ಕಪ್ಪು ಹಾಳೆಯಿಲ್ಲದೆ, ನೇರವಾಗಿ ನೋಡತೊಡಗಿದೆವು.


ಚಂದ್ರ ಸೂರ್ಯನನ್ನು ಮುಚ್ಚುತ್ತಿದ್ದಂತೆಯೇ ಅವನ ಸುತ್ತಲೂ ಒಂದು ಪ್ರಭಾವಲಯ ಕಾಣತೊಡಗಿತು. ಬರಬರುತ್ತ ಅದು ದಟ್ಟವಾಗಿ, ನೋಡನೋಡುತ್ತಿದ್ದಂತೆಯೇ ಮೇಲಿನ ಎಡಬದಿಯಲ್ಲಿ ಒಂದು ಬೆಳಕಿನ ಉಂಡೆ ಝಗ್ಗನೆ ಉಬ್ಬಿ ನಿಂತಿತು. ಇದನ್ನು ವಜ್ರದುಂಗುರ ಎನ್ನುತ್ತಾರೆ. ಸಮಯ ಸರಿಯಾಗಿ ೩.೪೦. ಈ ಉಂಗುರ ನಾಲ್ಕು ಸೆಕೆಂಡುಗಳ ಕಾಲ ಮಾತ್ರ ಕಾಣಲು ಲಭ್ಯ. ಸುತ್ತಲೂ ನಕ್ಷತ್ರಗಳು ಒಂದೊಂದೇ ಪಿಳಪಿಳನೆ ಕಾಣತೊಡಗಿದವು. ನಾನು ಗುರುತಿಸಿದ ನಕ್ಷತ್ರಗಳು, ಅಶ್ವಿನೀ, ಕೃತ್ತಿಕಾ, ರೋಹಿಣೀ, ಮೃಗಶಿರಾ, ಆರ್ದ್ರಾ, ಇವಲ್ಲದೆ ಉತ್ತರದಲ್ಲಿ ಧ್ರುವ, ಶ್ರವಣ, ಅಭಿಜಿತ್, Deneb, Capella ಮತ್ತು ದಕ್ಷಿಣದಲ್ಲಿ Achernar, Fomalhaut, ಅದರೊಂದಿಗೆ ಸೂರ್ಯನ ಸಮೀಪವೇ ಬುಧಗ್ರಹ! ಅಲ್ಲದೆ ಸುತ್ತಲೂ ಕಾಣುತ್ತಿದ್ದ ಎಲ್ಲ ನಕ್ಷತ್ರಪುಂಜಗಳನ್ನೂ ಗುರುತಿಸಿದೆ.

ಸೂರ್ಯನ ಸುತ್ತ ಬೆಳ್ಳಿಯ ಪ್ರಭೆ ವಿಜ್ರಂಭಿಸುತ್ತಿದ್ದ ಹಾಗೇ ಕತ್ತಲು ಆವರಿಸಿದ ಇಡೀ ಆಕಾಶ ಒಂದೂವರೆ ನಿಮಿಷಗಳ ಕಾಲ ಸ್ತಬ್ದವಾಗಿ ನಿಂತಿತು. ಎಂಥ ರಮ್ಯ ನೋಟ! ಎಲ್ಲರೂ ಹೋ! ಎಂದು ಕೂಗುತ್ತಾ ಸಂಭ್ರಮಿಸಿದರು. ಇದನ್ನು ಅನುಭವಿಸಲು ಇಲ್ಲಿಯವರೆಗೆ ಬಂದೆನೇ? ಇಷ್ಟು ಪರಿಪಾಡಲು ಪಟ್ಟೆನೆ? ಸಂತೋಷದಿಂದ ನನಗೆ ಕಣ್ಣಲ್ಲಿ ನೀರೇ ಬಂದುಬಿಟ್ಟಿತು! ಬೆಳಿಗ್ಗೆಯಿಂದ ಪಟ್ಟ ಕಷ್ಟವೆಲ್ಲ ಮಂಗಮಾಯವಾಗಿತ್ತು! ೩.೪೩ಕ್ಕೆ ಪುನಃ ಸೂರ್ಯನ ಕೆಳ ಎಡಬದಿಯಲ್ಲಿ ವಜ್ರದುಂಗುರ ಕಾಣಿಸಿಕೊಂಡಿತು. ಪುನಃ ಎಲ್ಲರೂ ಚಪ್ಪಾಳೆ ತಟ್ಟಿ ಹೋ! ಎಂದು ಕುಣಿದರು.


ಅದಾದ ಒಂದೇ ನಿಮಿಷದಲ್ಲಿ ಫಕ್ಕನೆ ಆಕಾಶದಲ್ಲಿ ಬೆಳಕು ಕಂಡಿತು. ನಕ್ಷತ್ರಗಳೆಲ್ಲ ಮಾಯವಾದವು. ಕ್ಷಣಕ್ಷಣಕ್ಕೂ ವಾತಾವರಣ ಪ್ರಕಾಶಮಾನವಾಯಿತು. ಸೂರ್ಯನ ಒಂದೇ ಒಂದು ತುಣುಕು ಚಂದ್ರನ ಎಡೆಯಿಂದ ಇಣುಕಿದರೂ ಆ ಬೆಳಕು ವಿಶಾಲ ಆಕಾಶವನ್ನು ಬೆಳಗಲು ಸಾಕು ಎಂಬುದನ್ನು ಕಣ್ಣಾರೆ ಕಂಡೆ.




ನೆರೆದ ಹಿರಿಯ-ಕಿರಿಯ ಮಿತ್ರರೆಲ್ಲರೂ ಬಹಳ ಸಂತೋಷದಿಂದ ಒಬ್ಬರಿಗೊಬ್ಬರು ತಮಗೆ ತೋಚಿದ ರೀತಿಯಲ್ಲಿ, ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಮಧ್ಯೆ ಮತ್ತೊಂದು ಕುತೂಹಲಕಾರಿ ಸಂಗತಿಯನ್ನು ಕಂಡಿದ್ದೆ. ಹಕ್ಕಿಗಳು ಗಲಿಬಿಲಿಗೊಂಡೋ, ಗಾಬರಿಯಿಂದಲೋ ಚಿಲಿಪಿಲಿಗುಟ್ಟುತ್ತಾ ದಿಕ್ಕಾಪಾಲಾಗಿ ಹಾರಾಡುತ್ತಿದ್ದವು; ನಾಯಿಗಳು ವಿಚಿತ್ರ ಸ್ವರದಲ್ಲಿ ಕೂಗುತ್ತಿದ್ದವು; ದೂರದಲ್ಲಿ ಹಸು-ಕರುಗಳೂ ಕೂಗುವುದು ಕೇಳಿಸಿತು. ನಿಸರ್ಗದ ಈ ವಿಸ್ಮಯವನ್ನು ಮೂಕನಾಗಿ ಅನುಭವಿಸಿದೆ. ಒಟ್ಟಾರೆ ಆಕಾಶದಲ್ಲಿ ಬಹು ಅಪರೂಪಕ್ಕೆ ನಡೆಯುವ ಸೂರ್ಯ-ಚಂದ್ರರ ನೆರಳು-ಬೆಳಕಿನಾಟದ ವೈಭವವನ್ನು ನೋಡುವ ಭಾಗ್ಯ ನನ್ನದಾಯಿತು.

ಸಂಜೆ ಐದು ಗಂಟೆಯಾಗುವುದರೊಳಗೆ ಸರಿಸುಮಾರು ಎಲ್ಲ ಅಂಗಡಿಗಳ ಬಾಗಿಲುಗಳೂ ತೆರೆದಿದ್ದವು. ತಕ್ಷಣ ನೆನಪಾಯಿತು. ನಾನು ಅಂದು ಬೆಳಗ್ಗೆಯಿಂದ ಏನೂ ತಿಂದಿರಲಿಲ್ಲ. ಸೂರ್ಯಗ್ರಹಣವನ್ನು ನೋಡುವ ಸಂಭ್ರಮದಲ್ಲಿ ನಿಜಕ್ಕೂ ನನಗೆ ಹಸಿವೆಯೇ ಆಗಿರಲಿಲ್ಲ!

ಗ್ರಹಣದ ದಿನ ಉಪವಾಸ ಮಾಡಬೇಕೆಂಬ ಸಂಪ್ರದಾಯ ಯಾಕೆ ಎಂದು ಹಲವಾರು ಬಾರಿ ಆಲೋಚಿಸಿದ್ದೇನೆ. ಉಪವಾಸ ಅಂದರೆ ಏನನ್ನೂ ತಿನ್ನದೆ ಹೊಟ್ಟೆಯನ್ನು ಖಾಲಿ ಕೆಡವುವುದು ಎನ್ನುವುದು ಸಾಮಾನ್ಯವಾಗಿ ನಾವೆಲ್ಲ ಅಂದುಕೊಂಡಿರುವ ಅರ್ಥ. ಆದರೆ ಈ ಪದದ ಅರ್ಥವಿಸ್ತಾರ ಬಹಳ ದೊಡ್ಡದು. ಉಪವಾಸ ಎಂದರೆ ಭಗವಂತನ ಜೊತೆ ವಾಸ ಮಾಡುವುದು ಎಂದರ್ಥ. ಭಗವಂತ ಎಂದರೆ ಯಾರು? ಆತ ಪರಮಸತ್ಯದ ಸಾಕಾರಮೂರ್ತಿ. ನನ್ನ ಪ್ರಕಾರ, ಸತ್ಯಾನ್ವೇಷಣೆಯಲ್ಲಿರುವ ಎಲ್ಲ ಜ್ಞಾನಿ-ವಿಜ್ಞಾನಿಗಳಿಗೂ ತಮ್ಮ ತಮ್ಮ ಅಧ್ಯಯನದಲ್ಲಿ ಹೆಚ್ಚು ಶ್ರದ್ಧೆ ಮತ್ತು ಆಸಕ್ತಿಯಿಂದ ತೊಡಗಿಸಿಕೊಳ್ಳುವುದೇ ಉಪವಾಸದ ಗುರಿ. ತಿಂಗಳ ಅಥವಾ ವರ್ಷದ ಕೆಲವು ವಿಶೇಷ ದಿನಗಳಂದು ಹೀಗೆ ಉಪವಾಸ ಮಾಡಿದರೆ ಒಬ್ಬ ವಿದ್ಯಾರ್ಥಿಯ ಬುದ್ಧಿ ಜಾಗೃತವಾಗುತ್ತದೆ, ಏಕಾಗ್ರತೆ ಹೆಚ್ಚುತ್ತದೆ ಎಂದು ನಾನಂದುಕೊಂಡಿದ್ದೇನೆ. ಇಂತಹ ಸಂದರ್ಭಗಳಲ್ಲಿ ಹೊಟ್ಟೆಯ ಪಾತ್ರ ಗೌಣ.

ಉಪವಾಸದ ಸಾರ್ವತ್ರಿಕ ಅರ್ಥಕ್ಕೆ ಮತ್ತೊಂದು ವಿವರಣೆಯನ್ನೂ ಕೊಡಬಹುದು. ನಾವು ಏನನ್ನೂ ತಿನ್ನದೆ ಹೊಟ್ಟೆ ಹಸಿದುಕೊಂಡಿದ್ದರೆ ಅಥವಾ ನಮ್ಮ ದೇಹಕ್ಕೆ ಪೂರಕವಾದ ಇಂಧನವನ್ನು ಸ್ವಲ್ಪ ಕಾಲ ಪೂರೈಸದೆ ಹೋದರೆ, ನಮ್ಮ ದೇಹ ಒಂದು ರೀತಿಯ ದಂಡನೆಗೆ ಒಳಗಾಗುತ್ತದೆ. ಹೀಗೆ ದಂಡನೆಗೊಳಗಾದ ಸಂದರ್ಭಗಳಲ್ಲಿ ದೇಹದಲ್ಲಿ ಹಲವಾರು ವಿಶೇಷ ರಾಸಾಯನಿಕ ದ್ರವ್ಯಗಳು ಸ್ರವಿಸಲ್ಪಡುತ್ತವೆ. ಇತ್ತೀಚೆಗೆ ವಿಜ್ಞಾನಿಗಳು ಈ ವಿಶೇಷ ರಾಸಾಯನಿಕ ಪದಾರ್ಥಗಳನ್ನು ಗುರುತಿಸಿದ್ದಾರೆ ಮತ್ತು ಅವುಗಳನ್ನು ಒಟ್ಟಾರೆ Anti-oxidants ಎಂದು ಕರೆಯುತ್ತಾರೆ. ಇವು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಕ್ಯಾನ್ಸರ್‌ನಂಥ ರೋಗಗಳನ್ನೂ ತಡೆಗಟ್ಟುವುದು ಎಂದು ವೈದ್ಯಕೀಯವಾಗಿ ಧೃಢಪಟ್ಟಿದೆ. ನನಗೆ ಅರಿವಿಲ್ಲದೆಯೇ ನಾನು ಆವತ್ತು ಉಪವಾಸ ಮಾಡಿದ್ದೆ!

ಅಂದು ರಾತ್ರಿ ಅಲ್ಲೇ ಒಂದು ಲಾಡ್ಜ್‌ನಲ್ಲಿ ಉಳಿದು ಮಾರನೆ ದಿನ ಮನೆಗೆ ಹಿಂದಿರುಗಿದೆ. ಸೂರ್ಯಗ್ರಹಣದ ಆ ಕ್ಷಣಗಳನ್ನು ಯಾವತ್ತೂ ಮರೆಯಲು ಅಸಾಧ್ಯ.

ಓದುಗರೆ, ಈ ಲೇಖನದೊಂದಿಗೆ ನೀವು ಕಾಣುವ ಚಿತ್ರಗಳು ನಾನು ಕ್ಯಾಮೆರಾದಿಂದ ತೆಗೆದ ಫೋಟೋಗಳಲ್ಲ. ಆಗ ನನ್ನ ಹತ್ತಿರ ಒಳ್ಳೆಯ ಕ್ಯಾಮೆರಾ ಇರಲಿಲ್ಲ. ಆದರೆ ಜನವರಿ ೧೫ರಂದು ರಾಮೇಶ್ವರದಲ್ಲಿ ಘಟಿಸಿದ ಕಂಕಣ ಸೂರ್ಯಗ್ರಹಣದ ಚಿತ್ರಗಳನ್ನು ನಾನೇ ತೆಗೆದಿದ್ದೇನೆ. ಮುಂದಿನ ವಾರ ಅದರ ಬಗ್ಗೆ ಸುದೀರ್ಘವಾಗಿ ಬರೆಯುವವನಿದ್ದೇನೆ.

ನಿಮ್ಮ ನಿಷ್ಪಕ್ಷ ಅಭಿಪ್ರಾಯಗಳನ್ನು ಸಂಕೋಚವಿಲ್ಲದೆ ತಿಳಿಸಿ. ಅಲ್ಲಿಯವರೆಗೆ,

ನಿಮ್ಮವ,

ನರಸಿಂಹನ್.