Wednesday, February 24, 2010

ಕಂಕಣ ಸೂರ್ಯನ ಭವ್ಯಾನುಭವ -೨


ಮಿತ್ರರೆ,

ಕಳೆದ ವಾರ, ೧೯೮೦ರಲ್ಲಿ ನಡೆದ ಒಂದು ಸಂಪೂರ್ಣ ಸೂರ್ಯಗ್ರಹಣದ ಬಗ್ಗೆ ನನ್ನ ಅನುಭವ ಕಥನವನ್ನು ಓದಿ ಹತ್ತಾರು ಮಂದಿ ಉತ್ತಮ ಪ್ರತಿಕ್ರಿಯೆ ನೀಡಿದ್ದೀರಿ. ನಿಮಗೆಲ್ಲ ಹೃದಯ ತುಂಬಿದ ಧನ್ಯವಾದಗಳು.

ನಿಜಕ್ಕೂ ನಾನು ಬರೆಯಲು ಹೊರಟಿದ್ದು ಕಳೆದ ಜನವರಿ ೧೫ರಂದು ಆಕಾಶದಲ್ಲಾದ ವಿಸ್ಮಯಕರ ಘಟನೆಯನ್ನು. ಈ ಸಂಪೂರ್ಣ ಸೂರ್ಯಗ್ರಹಣ ಬಹು ಅಪರೂಪವಾದದ್ದು ಯಾಕೆ ಎಂದರೆ, ಅದೊಂದು ಅಪೂರ್ವ ಕಂಕಣ ಗ್ರಹಣ. ಹಾಗೆಂದರೇನು ಅಂತ ನೀವು ಕೇಳಬಹುದು. ಪ್ರೊ. ಜಿ. ಟಿ. ನಾರಾಯಣರಾವ್‌ರವರ ಖಡಕ್ ಕನ್ನಡದಲ್ಲಿ ಹೇಳಬೇಕೆಂದರೆ, ದೀರ್ಘವೃತ್ತದ ಒಂದು ನಾಭಿಯಲ್ಲಿ ನೆಲೆಸಿರುವ ಭೂಮಿಯ ಸುತ್ತ ಪರಿಭ್ರಮಿಸುತ್ತಿರುವ ಚಂದ್ರ ಅಪರವಿಯಲ್ಲಿ ಹಾದುಹೋಗುವ ವೇಳೆಯಲ್ಲಿಯೇ ಸೂರ್ಯನನ್ನು ಕುರಿತಂತೆ ಭೂಮಿಯು ಪುರರವಿಯಯಲ್ಲಿ ಹಾದುಹೋಗುವ ರಾಶಿಚಕ್ರದ ಎರಡು ಸ್ಪಷ್ಟನೆಲೆಗಳಲ್ಲಿ ಸೂರ್ಯನೂ ಸಮಾಗಮಿಸಿದರೆ ಆಗ ಸುದೀರ್ಘ ಕಂಕಣ ಸೂರ್ಯಗ್ರಹಣ ಘಟಿಸುತ್ತದೆ. ಪಾಮರರ ಭಾಷೆಯಲ್ಲಿ ಹೇಳುವುದಾದರೆ ಆವತ್ತು ಆದದ್ದಿಷ್ಟೆ: ಚಂದ್ರ ಭೂಮಿಯಿಂದ ಬಹಳ ದೂರದಲ್ಲಿದ್ದ, ಚಿಕ್ಕದಾಗಿ ತೋರುತ್ತಿದ್ದ; ಸೂರ್ಯ ಹತ್ತಿರದಲ್ಲಿದ್ದ, ಸ್ವಲ್ಪ ದೊಡ್ಡದಾಗಿ ತೋರುತ್ತಿದ್ದ. ಹೀಗಾಗಿ ಗ್ರಹಣದ ವೇಳೆ ಚಂದ್ರನ ತಟ್ಟೆ ಸೂರ್ಯನನ್ನು ಸಂಪೂರ್ಣ ಮುಚ್ಚಲು ವಿಫಲವಾಯ್ತು, ಚಂದ್ರನ ಸುತ್ತ ಬಳೆಯ ಹಾಗೆ ಸೂರ್ಯ ಕಂಡುಬಂದ! ಚಂದ್ರ ಸೂರ್ಯನ ಅಡ್ಡವಾಗಿ ಹಾದುಹೋಗಲು ಸುಮಾರು ಏಳು ನಿಮಿಷಗಳ ಸುದೀರ್ಘಕಾಲ ತೆಗೆದುಕೊಂಡದ್ದು, ಅಲ್ಲದೆ ಅದು ಭೂಮಧ್ಯ ರೇಖೆಯ ಆಸುಪಾಸಿನಲ್ಲೆ ಘಟಿಸಿದ್ದು ಈ ಗ್ರಹಣದ ವಿಶೇಷ. ಮತ್ತೊಮ್ಮೆ ಇಂತಹ ಸುದೀರ್ಘ ಕಂಕಣಗ್ರಹಣ ನಡೆಯುವುದು ಇನ್ನು ಒಂದು ಸಾವಿರ ವರ್ಷಕ್ಕೂ ಹೆಚ್ಚು ಸಮಯದ ನಂತರ!

ಈ ಖಂಡಗ್ರಾಸ ಗ್ರಹಣ ಕರ್ನಾಟಕದ ಎಲ್ಲೆಡೆ ಕಂಡರೂ ಖಗ್ರಾಸ ಗ್ರಹಣ (ಅಂದರೆ ಸಂಪೂರ್ಣಗ್ರಹಣ) ಕಂಡದ್ದು ಭೂಮಧ್ಯರೇಖೆಯಿಂದ ೭ ಡಿಗ್ರಿ ಉತ್ತರದವರೆಗೆ ವಾಸಿಸುವವರಿಗೆ ಮಾತ್ರ. ಹಾಗಾಗಿ ನಾನು ದಕ್ಷಿಣದ ತಮಿಳುನಾಡು ಅಥವಾ ಕೇರಳ ರಾಜ್ಯಗಳಲ್ಲಿ ಯಾವುದಾದರೂ ಸ್ಥಳಕ್ಕೆ ಮೊದಲೇ ಹೋಗಿ ತಳವೂರಬೇಕಾಗಿತ್ತು.

ದೇಶದ ಹಾಗೂ ಪರದೇಶಗಳ ಎಷ್ಟೋ ವಿಜ್ಞಾನಿಗಳು, ಹವ್ಯಾಸಿ ಖಗೋಳವೀಕ್ಷಕರು ಇಂತಹ ಸಂದರ್ಭಗಳಿಗೆ ಕಾಯುತ್ತಿರುತ್ತಾರೆ. ಅವರು ಹಿಂದಿನ ಎಷ್ಟೋ ವರ್ಷಗಳ ದಾಖಲೆಗಳನ್ನು ಸಂಶೋಧಿಸಿ, ಪರಾಮರ್ಶಿಸಿ ಯಾವ ಜಾಗ ವೀಕ್ಷಣೆಗೆ ಅತಿ ಸೂಕ್ತ ಎಂದು ತೀರ್ಮಾನಿಸುತ್ತಾರೆ. ಅಂದರೆ, ಆ ಸ್ಥಳದಲ್ಲಿ ಆ ದಿನ ಯಾವುದೇ ಹವಾಮಾನ ವೈಪರೀತ್ಯಗಳಿಲ್ಲದೆ, ಯಾವುದೇ ಅಡೆತಡೆಗಳಿಲ್ಲದೆ, ಮಂಜು-ಮೋಡಗಳಿಲ್ಲದೆ ಶುಭ್ರವಾಗಿ ಕಾಣುವಂತಿರಬೇಕು.


ನಾನು ಆ ಸಮಯಕ್ಕೆ ನೇರವಾಗಿ ಕನ್ಯಾಕುಮಾರಿಗೇ ಹೋಗುವ ತಯಾರಿ ನಡೆಸಿದ್ದೆ. ಈ ಮಧ್ಯೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಖಗೋಳ ವಿಜ್ಞಾನದ ಮೂರು ದಿನಗಳ ಸಮ್ಮೇಳನ ನಡೆಯಿತು. ಅಲ್ಲಿಯೂ ದೇಶ-ವಿದೇಶಗಳಿಂದ ಅನೇಕ ಸಂಶೋಧಕರು ಜಮಾಯಿಸಿದ್ದರು. ಅವರಲ್ಲಿ ಹಲವರೊಂದಿಗೆ ಈ ಗ್ರಹಣದ ಬಗ್ಗೆ ಮಾತನಾಡಿದೆ. ಎಲ್ಲರೂ ರಾಮೇಶ್ವರದ ಕಡೆ ಬೆರಳು ತೋರಿದಾಗ ಅಶ್ಚರ್ಯವಾಯಿತು! ಏಕೆಂದರೆ, ರಾಮೇಶ್ವರ ಸಂಪೂರ್ಣ ಸೂರ್ಯಗ್ರಹಣ ಕಂಡುಬರುವ ಅತಿ ಉತ್ತರ ರೇಖಾಂಶದಲ್ಲಿರುವ ಊರು. ಅಂತರ್ಜಾಲದಲ್ಲಿ ಹಲವು ವಿಜ್ಞಾನಿಗಳು ಕೂಡ ಅದೇ ಜಾಗವನ್ನು ಆರಿಸಿಕೊಂಡಿದ್ದು ಕಂಡುಬಂದಿತು. ರಾಮೇಶ್ವರವು ಕನ್ಯಾಕುಮಾರಿಗಿಂತ ಸುಮಾರು ೨೫೦ ಕಿಮೀ ಹತ್ತಿರವೂ ಆಗುತ್ತದೆ, ಆರು ಘಂಟೆ ಪ್ರಯಾಣದ ಹೊತ್ತೂ ಉಳಿಯುತ್ತದೆ. ಆದ್ದರಿಂದ ನಾನೂ ಅಲ್ಲಿಗೇ ಹೋಗುವುದೆಂದು ತೀರ್ಮಾನಿಸಿದೆ.


ಜೊತೆಗೆ ಯಾರು ಯಾರು ಬರುತ್ತಾರೆ? ಇಂತಹ ವಿಷಯಗಳಲ್ಲಿ ಆಸಕ್ತಿಯಿರುವವರೆಂದರೆ ಅನುಪಮ್ ರೇ, ಪ್ರೊ. ಪೂವಣ್ಣ ಮತ್ತು ಶ್ರೀಕಾಂತ್. ಮೂವರೂ ‘ಬೇರೆ ಕೆಲಸವಿದೆ, ನೀವು ಹೋಗಿಬನ್ನಿ’ ಎಂದುಬಿಟ್ಟರು. ಕೊನೆಗೆ ನನ್ನ ಹೆಂಡತಿ ಪುಷ್ಪ, ಕಿರಿಯ ಮಗಳು ಅಭಿಜ್ಞ, ತಮ್ಮನ ಮಗಳು ಅಂಜಲಿ ಮತ್ತು ನಾನು ಇಷ್ಟು ಜನ, ನಮ್ಮ ಕಾರಿನಲ್ಲಿಯೇ ಹೋಗುವುದೆಂದು ನಿಶ್ಚಯಿಸಿದೆವು.
ನಮ್ಮ ಸಂಕ್ರಾಂತಿ ಹಬ್ಬವನ್ನು ತಮಿಳರು ಪೊಂಗಲ್ ಎಂದು ಆಚರಿಸುತ್ತಾರೆ. ಆಗ ಆ ರಾಜ್ಯದಲ್ಲೆಲ್ಲ ಮೂರು ದಿನ ರಜಾ. ಜೊತೆಗೆ ಭಾನುವಾರವೂ ಸೇರಿ ಬಂದಿದ್ದರಿಂದ ಬಹಳ ಜನಜಂಗುಳಿ ಇರಬಹುದು, ಉಳಿದುಕೊಳ್ಳಲು ಲಾಡ್ಜ್ ಮೊದಲೇ ನಿಗದಿ ಪಡಿಸಿಕೊಳ್ಳುವುದು ಒಳ್ಳೆಯದೆಂದು ಊರೂರು ತಿರುಗಾಡುವ ಹವ್ಯಾಸವಿರುವ ನನ್ನ ಭಾವನವರನ್ನೇ ವಿಚಾರಿಸಿದೆ.

ರಾಮನಾಡಿನಲ್ಲಿ ಅವರಿಗೆ ತಿಳಿದಿದ್ದ ಒಂದು ಹೋಟೆಲಿನ ನಂಬರ್ ಕೊಟ್ಟರು. ‘ಬನ್ನಿ ಪರವಾಗಿಲ್ಲ, ರೂಂ ಬುಕ್ ಮಾಡಿರುತ್ತೇನೆ’ ಎಂದು ಆ ಮುಸ್ಲಿಂ ಹೋಟೆಲಿನ ಒಡೆಯನೇ ಆಶ್ವಾಸನೆ ಕೊಟ್ಟ.


ದೂರದ ಹಾಗೂ ಮೂರು ದಿನಗಳ ಪ್ರಯಾಣವಾದ್ದರಿಂದ ಒಬ್ಬ ಡ್ರೈವರ್‌ನ್ನು ಹುಡುಕಬೇಕಾಯಿತು. ಕೊನೆಗೆ ರಫೀಕ್ ಸಿಕ್ಕಿದ. ಈ ರಫೀಕ್ ಬಗ್ಗೆ ಮೊದಲೇ ಹೇಳಿಬಿಡುತ್ತೇನೆ. ಅವನು ನನ್ನ ಕ್ಲಿನಿಕ್ಕಿನಲ್ಲಿ ಬಹಳ ಹಿಂದೆ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದವ. ಈಗ ಡ್ರೈವರ್ ಆಗಿದ್ದಾನೆ. ಒಂದೆರಡು ಕಡೆಗೆ ನಮ್ಮ ಜೊತೆ ಬಂದಿದ್ದಾನೆ ಕೂಡ. ಎಷ್ಟೋ ರಾಜ್ಯಗಳನ್ನು ಸುತ್ತಿರುವುದರಿಂದ ಸ್ಥಳಗಳ ಪರಿಚಯವೂ ಇದೆ. ಮಾತು ಮಾತ್ರ ಸ್ವಲ್ಪ ವಿಚಿತ್ರ. ಮಾತನಾಡಲು ಬಾಯಿ ತೆರೆದರೆ ಶಕಾರಮೂರ್ತಿ! ‘ನಿಮ್ಗೆ ಯೋಚನೆ ಬೇಡ ಡಾಕ್ಟ್ರೆ, ನಂಗೆ ಬಿಟ್ಬಿಡಿ. ರೂಟ್ ನಾನು ವಿಚಾರಿಶ್ತೇನೆ!’

ಜನವರಿ ೧೪ರಂದು ಬೆಳಿಗ್ಗೆ ಐದೂವರೆಗೆ ವೀರಾಜಪೇಟೆ ಬಿಟ್ಟೆವು. ಮೈಸೂರು, ನಂಜನಗೂಡು, ಚಾಮರಾಜನಗರದ ದಾರಿಗಾಗಿ ಸತ್ಯಮಂಗಲ ತಲುಪಿದೆವು. ದಾರಿಯಲ್ಲಿ ರಸ್ತೆ ಬದಿಯ ಒಂದು ಕಬ್ಬಿನ ತೋಟದಲ್ಲಿ ಬೆಳಗ್ಗಿನ ಉಪಹಾರಕ್ಕೆ ನಾವು ಕಟ್ಟಿಕೊಂದು ಬಂದಿದ್ದ ಇಡ್ಲಿ ಮುಗಿಸಿದೆವು. ಬಹುಶಃ ಅಲ್ಲಿಂದ ಹಿಡಿದು, ಹಿಂದಿರುಗುವವರೆಗೂ ನಾವು ತಿಂದ ಚೊಕ್ಕ-ರುಚಿಕರ ಆಹಾರ ಅದೊಂದೆ!

ದಿಂಬಂ ಘಾಟ್ ಇಳಿದು ಬನ್ನಾರಿ ದಾಟಿ ಸತ್ಯಮಂಗಲಕ್ಕೆ ಹೋದೆವು. ನಾವು ಸಂಜೆಯ ವೇಳೆಗೆ ರಾಮನಾಡ್ (ರಾಮನಾಥಪುರಂ) ತಲುಪಬೇಕಿತ್ತು. ಆದಷ್ಟೂ ಹತ್ತಿರದ ದಾರಿ ಹುಡುಕಿ ಆ ಮಾರ್ಗವಾಗಿ ಹೋಗುವ ಉದ್ದೇಶದಿಂದ ದಾರಿಯಲ್ಲಿ ಅವರಿವರನ್ನು ಕೇಳಬೇಕಾಯಿತು. ತಮಿಳುನಾಡಿನಲ್ಲಿ ಯಾರು ನಿಮಗೆ ದಾರಿ ಹೇಳಿದರೂ ‘ನೇರೆ ಪೋ, ಯಾರಿಯುಂ ಕೇಕ್ಕಾದೆ!’ (ನೆಟ್ಟಗೆ ಹೋಗಿ. ಯಾರನ್ನೂ ಕೇಳಬೇಡಿ) ಎನ್ನುವ ಚಾಳಿ ಇದೆ. ಒಬ್ಬೊಬ್ಬರೂ ತಮಗೆ ತಿಳಿದ ಮಟ್ಟಿಗೆ ದಾರಿ ತೋರುತ್ತಿದ್ದುದರಿಂದ ಕೊನೆಗೆ ೫೦-೭೦ ಕಿಲೋಮೀಟರು ಸುತ್ತಿ ಬಳಸಿಯೇ ಮಧುರೆ ತಲುಪಿದೆವು. ಅಲ್ಲಿಯೂ ಕೂಡ ಊರೊಳಗೆ ನುಗ್ಗಿ ವಾಹನಗಳ ಗೊಂದಲದೊಳಗೆ ಸಿಕ್ಕಿಕೊಂಡು ಸುಮಾರು ಒಂದು ಘಂಟೆ ವೇಸ್ಟ್ ಆಯಿತು. ಕೊನೆಗೂ ರಾಮನಾಡ್ ತಲುಪಿದಾಗ ರಾತ್ರಿ ಒಂಭತ್ತೂವರೆ! ಊರೆಲ್ಲ ಎರಡು ದಿನ ಜಡಿಮಳೆ ಸುರಿದು ಕೊಚ್ಚೆಮಯವಾಗಿತ್ತು.

ಹದಿನೈದರಂದು ಬೆಳಿಗ್ಗೆ ಎದ್ದು, ಏಳು ಘಂಟೆಗೆ ಲಾಡ್ಜ್‌ನಿಂದ ಹೊರಬಂದು ಮೊದಲು ನೋಡಿದ್ದು ಆಕಾಶವನ್ನು! ಸುತ್ತಲೂ ಮೋಡ ತುಂಬಿದ ವಾತಾವರಣ, ಪಿರಿಪಿರಿ ಮಳೆ, ಎಲ್ಲವೂ ನಮ್ಮ ಗ್ರಹಣ ನೋಡುವ ಸಂಭ್ರಮವನ್ನು ತಣ್ಣಗಾಗಿಸಿಬಿಟ್ಟಿತು. ಅದೇ ಹೊತ್ತಿಗೆ ನಮ್ಮ ಲಾಡ್ಜ್‌ನಲ್ಲಿಯೇ ಹಿಂದಿನ ರಾತ್ರಿ ತಂಗಿದ್ದ ಗುವಾಹಟಿಯ ನಾಲ್ಕು ಜನರ ತಂಡ ಟೆಲಿಸ್ಕೋಪು, ಕ್ಯಾಮೆರಾ ಮುಂತಾದ ಸಲಕರಣೆಗಳನ್ನು ತಮ್ಮ ವ್ಯಾನಿಗೆ ತುಂಬಿಸತೊಡಗಿದರು. ನನ್ನ ಪರಿಚಯ ಮಾಡಿಕೊಂಡೆ. ಎಲ್ಲರ ಮುಖದಲ್ಲಿಯೂ ಆತಂಕ ತುಂಬಿತ್ತು. ಆಕಾಶ ಹೀಗಿದ್ದರೆ ಸೂರ್ಯನನ್ನು ಕಂಡ ಹಾಗೆಯೇ! ಈ ಭಾಗ್ಯಕ್ಕೆ ದೇಶವಿದೇಶಗಳಿಂದ ಇಲ್ಲಿಗೆ ಬರಬೇಕಿತ್ತೇ! ಎಲ್ಲರೂ ರಾಮೇಶ್ವರವನ್ನು ಏಕೆ ಆಯ್ಕೆ ಮಾಡಿಕೊಂಡರು? ನಾನೂ ಇಲ್ಲಿಗೇ ಬಂದೆನಲ್ಲ? ಏನಾದರಾಗಲಿ, ಸೂರ್ಯನ ಇಣುಕು ನೋಟವನ್ನಾದರೂ ನೋಡಿಕೊಂಡು ಹೋಗುವುದೆಂದು ತೀರ್ಮಾನಿಸಿದೆವು.

ಪಕ್ಕದ ಭಯಂಕರ ಹೋಟೆಲಿನಲ್ಲಿ ಉಪಾಹಾರ ಮುಗಿಸಿ ರಾಮೇಶ್ವರಕ್ಕೆ ಪ್ರಯಾಣ ಬೆಳೆಸಿದೆವು. ರಾಮನಾಡಿನಿಂದ ರಾಮೇಶ್ವರದ ದಾರಿಯಲ್ಲಿ ಪಾಂಬನ್ ಸೇತುವೆ ದಾಟಬೇಕು. ವಾಹನಗಳಿಗೆ ಎತ್ತರದಲ್ಲಿ ಒಂದು ರಸ್ತೆ, ಅನತಿ ದೂರದಲ್ಲಿಯೇ ಸಮಾನಂತರದಲ್ಲಿ ಆದರೆ, ಸಮುದ್ರಮಟ್ಟದಲ್ಲಿ ರೈಲು ಪ್ರಯಾಣಕ್ಕೆ ದಾರಿ! ಮೂವತ್ತೆರಡು ವರ್ಷಗಳ ಹಿಂದೆ ರೈಲಿನಲ್ಲಿ ಈ ದಾರಿಗಾಗಿ ಬಂದಿದ್ದೆ. ಆ ಥ್ರಿಲ್ ರಸ್ತೆಯ ಮೇಲಿಲ್ಲ.



ಮೊದಲು ರಾಮೇಶ್ವರದ ದೇವಸ್ಥಾನವನ್ನು ನೋಡಿಕೊಂದು ಅಲ್ಲಿಂದ ಗ್ರಹಣ ವೀಕ್ಷಣೆಗೆ ಸೂಕ್ತ ಜಾಗದಲ್ಲಿ ಠಿಕಾಣಿ ಹೂಡಬೇಕೆಂಬುದು ನಮ್ಮ ಕಾರ್ಯಕ್ರಮ. ನಾವಂದುಕೊಂಡಂತೆ ರಾಮೇಶ್ವರವು ಯಾತ್ರಾರ್ಥಿಗಳಿಂದ, ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಆವತ್ತು ಅಲ್ಲಿ ಸುಮಾರು ಎರಡು ಲಕ್ಷ ಜನ ಸೇರಿದ್ದಿರಬಹುದು.

ಗ್ರಹಣದ ದಿನವಾದ್ದರಿಂದ ದೇವಸ್ಥಾನವನ್ನು ಹತ್ತು ಘಂಟೆಗೇ ಮುಚ್ಚುತ್ತಾರೆಂದು ತಿಳಿದು ಬೇಗಬೇಗನೆ ಹೆಜ್ಜೆ ಹಾಕಿದೆವು. ರಾಮೇಶ್ವರ ದೇವಸ್ಥಾನ ನಿಜಕ್ಕೂ ಒಂದು ಅತಿ ಬೃಹತ್ತಾದ ಕಟ್ಟಡ ಸಮೂಹ. ದೇವಸ್ಥಾನದ ಹೊರಗಿನ ಎರಡು ಪ್ರಾಕಾರಗಳನ್ನು ಸುತ್ತಿ ಹೆಬ್ಬಾಗಿಲಿಗೆ ಬರುವುದರೊಳಗೆ ಬಾಗಿಲು ಮುಚ್ಚಿಬಿಟ್ಟಿದ್ದರು! ಇನ್ನೂ ಒಂಭತ್ತು ಘಂಟೆ, ಆಗಲೇ ಮುಚ್ಚಿಬಿಟ್ಟರಲ್ಲ? ಈಗಾಗಲೇ ಒಳಗೆ ಇರುವ ಯಾತ್ರಾರ್ಥಿಗಳು ದೇವರ ದರ್ಶನವನ್ನು ಪಡೆದು ಹೊರಬರಲು ಒಂದು ತಾಸು ಆಗುವುದರಿಂದ ಈ ವ್ಯವಸ್ಥೆ ಎಂದು ತಿಳಿಯಿತು. ಈಗೇನು ಮಾಡುವುದು? ಗ್ರಹಣ ಹಿಡಿಯಲು ಇನ್ನೂ ಎರಡು ಘಂಟೆಯಿದೆ. ಸುತ್ತಲೂ ಇದ್ದ ಜನಕ್ಕೆ ಗ್ರಹಣದ ಬಗ್ಗೆ ಯಾವ ಆಸಕ್ತಿಯೂ ಇದ್ದಂತಿರಲಿಲ್ಲ. ದೇವಸ್ಥಾನದ ಪೂರ್ವಕ್ಕೆ ಇರುವ ಸಮುದ್ರ ತೀರದಲ್ಲಂತೂ ಸಾವಿರಾರು ಜನ! ಸರಿಯಾಗಿ ನಿಲ್ಲಲೂ ಆಗದಿರುವ ಇಂತಹ ಜಾಗದಲ್ಲಿ ನಾವು ಗ್ರಹಣ ವೀಕ್ಷಣೆ ಮಾಡುವುದಾದರೂ ಹೇಗೆ? ನಮ್ಮೊಂದಿಗೆ ತಂಗಿದ್ದ ಗುವಾಹಟಿಯವರು ಏನಾದರು? ಇಲ್ಲಿ ನಮಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ಸುಮಾರು ಒಂಭತ್ತು ಘಂಟೆಗೆಲ್ಲ ಆಗಸ ಶುಭ್ರವಾಗತೊಡಗಿತ್ತು. ಅಲ್ಲಿಂದ ಸಾಯಂಕಾಲದವರೆಗೂ ಆಕಾಶದಲ್ಲಿ ಒಂದೇ ಒಂದು ಮೋಡದ ತುಣುಕೂ ಇಲ್ಲದೆ ಇಡೀ ಆಕಾಶ ಗ್ರಹಣವೀಕ್ಷಣೆಗೆ ಅನುವು ಮಾಡಿಕೊಟ್ಟಿತ್ತು!


ಈ ಜಂಜಾಟದಿಂದ ದೂರ ಹೋಗೋಣವೆಂದು ವಾಹನ ಸಂದಣಿಯಿಂದ ಕಷ್ಟಪಟ್ಟು ಪಾರಾಗಿ ಮುಖ್ಯ ಬೀದಿಗೆ ಬಂದೆವು. ಇಲ್ಲಿಂದ ಕೆಲವೇ ಕಿಲೋಮೀಟರು ದೂರದಲ್ಲಿದ್ದ ಧನುಷ್ಕೋಟಿಗೆ ಹೋಗುವುದು ಸೂಕ್ತವೆಂದು ತೋರಿತು. ಅಷ್ಟರಲ್ಲಿ ಯಾವುದೋ ರಾಜ್ಯದ ರಾಜ್ಯಪಾಲರು ಅಲ್ಲಿಗೆ ಬರುತ್ತಿರುವರೆಂದು ಎಲ್ಲಾ ವಾಹನಗಳನ್ನೂ ಸ್ವಲ್ಪ ಕಾಲ ತಡೆದರು. ಅಂತೂ ರಾಮೇಶ್ವರವನ್ನು ಬಿಡುವಷ್ಟರಲ್ಲಿ ಹನ್ನೊಂದೂಕಾಲು ಘಂಟೆಯಾಗಿತ್ತು, ಸೂರ್ಯಗ್ರಹಣ ಪ್ರಾರಂಭವಾಗಿತ್ತು. ನಮ್ಮ ನಾಲ್ವರ ಬಳಿಯಲ್ಲೂ ಸೂರ್ಯನ ವೀಕ್ಷಣೆಗೆ ಸೂಕ್ತ ಕನ್ನಡಕಗಳಿದ್ದವು. ಯಾವುದೋ ಮನೆಯೊಳಗಿಂದ ಇಬ್ಬರು ಹುಡುಗರು ಬೈನಾಕ್ಯುಲರ್ ಹಿಡಿದು ಗ್ರಹಣ ನೋಡಲು ಹೊರಬಂದರು. ಅವರನ್ನು ಬೈದು ಬುದ್ಧಿ ಹೇಳಿ ಒಂದು ಕನ್ನಡಕವನ್ನು ಅವರಿಗೆ ಕೊಡಬೇಕಾಯಿತು.
ನಮ್ಮ ಕೈಯಲ್ಲಿ ಸೋನಿ ವಿಡಿಯೋ ಕ್ಯಾಮೆರಾ, ನಿಕಾನ್ P90 ಕ್ಯಾಮೆರಾ ಮತ್ತು ಬೈನಾಕ್ಯುಲರ್ ಇವಿಷ್ಟಿದ್ದವು. ನನ್ನ ಒಂದು ಕೊರತೆ ಟ್ರೈಪಾಡ್ ಇಲ್ಲದಿದ್ದದ್ದು. ಹೊರಡುವ ಸಂಭ್ರಮದಲ್ಲಿ ಅದೊಂದನ್ನು ಮರೆತು ಬಂದಿದ್ದೆ. ಧನುಷ್ಕೋಟಿ ತಲುಪಿದಾಗ ಬಹಳ ಸಂತೋಷವಾಯಿತು. ಏಕೆಂದರೆ, ಅಲ್ಲಿ ಈಗಾಗಲೇ ಸುಮಾರು ಸಾವಿರ ಮಂದಿ ಸೇರಿದ್ದರು ಮತ್ತು ಅವರೆಲ್ಲ ಸೂರ್ಯಗ್ರಹಣದ ವೀಕ್ಷಣೆಗೇ ಬಂದಿದ್ದರು. ದೇಶವಿದೇಶಗಳಿಂದ ನೂರಾರು ಸಲಕರಣೆಗಳೊಂದಿಗೆ ಎಲ್ಲರೂ ಸಜ್ಜಾಗಿ ಬಂದಿದ್ದರು. ಅಲ್ಲದೆ ದೂರದಲ್ಲಿ ಪೆಂಡಾಲ್ ಮತ್ತು ಮೈಕು ಹಾಕಿಕೊಂಡು ವಿವಿಧ ರೇಡಿಯೋ-ಟಿವಿ ಮಾಧ್ಯಮದ ಮಂದಿಯೊಂದಿಗೆ, ಹಲವು ಶೈಕ್ಷಣಿಕ ಸಂಸ್ಥೆಗಳು, ವಿಜ್ಞಾನ ಸಂಘಗಳು ಗ್ರಹಣದ ಬಗ್ಗೆ ಸೂಕ್ತ ಮಾಹಿತಿ ಮತ್ತು ನೇರವರದಿಯನ್ನು ಬಿತ್ತರಿಸುತ್ತಿದ್ದರು.

ಆದರೆ ಅತಿ ಕಿರಿದಾದ ರಸ್ತೆ, ಹೋಗಲು-ಬರಲು ವಾಹನಗಳಿಗೆ ಬಹಳ ತ್ರಾಸಾಗುತ್ತಿತ್ತು. ಮುಂದೆ ಹೋದ ವಾಹನಗಳು ರಿವರ್ಸ್‌ನಲ್ಲಿ ಹಿಂದಿರುಗಬೇಕು. ರಸ್ತೆಯ ಎರಡೂ ಬದಿಯಲ್ಲಿ ಅಗಾಧ ಮರಳು ರಾಶಿ. ರಫೀಕನಿಗಂತು ತುಂಬಾ ಕೋಪ ಬಂದಿರಬೇಕು. ‘ಈ ಜನಕ್ಕೆ ಬುದ್ದಿ ಇಲ್ಲ, ಶ್ರೈಟ್ ಮರಳು ಮೇಲೆ ಇಳಿಕೊಂಡು ಹಾಗೇ ಒಂದು ಶುತ್ತು ತಿರುಗಿಶಿ ವಾಪಾಶ್ ರಶ್ತೆಗೆ ಬಂದುಬಿಡೋಣ’, ಅಂದ. ನನಗೇಕೋ ಸಂಶಯ ಬಂತು. ಇಷ್ಟು ವಾಹನಗಳಲ್ಲಿ ಒಂದಾದರೂ ವಿಶಾಲವಾದ ಮರಳ ಮೇಲೆ ಪಾರ್ಕ್ ಮಾಡಿಲ್ಲ ಅಂದ ಮೇಲೆ, ಏನೋ ಐಬು ಇರಬೇಕು ಎಂದುಕೊಂಡು ‘ಬೇಡ ಮಾರಾಯ ಇಲ್ಲೇ ರಸ್ತೆಯ ಬದಿಯಲ್ಲಿ ನಿಲ್ಲಿಸಿಕೊ. ನಾವೆಲ್ಲ ಇಳಿದುಬಿಡುತ್ತೇವೆ, ಆಮೇಲೆ ನೀನೆಲ್ಲಾದರೂ ಪಾರ್ಕ್ ಮಾಡು’ ಎಂದು ಹೇಳುವುದರೊಳಗೆ ಬಲಬದಿಗೆ ಇಳಿದೇಬಿಟ್ಟ.

ಕಾರಿನ ನಾಲ್ಕು ಚಕ್ರಗಳು ಮರಳಿಗೆ ಇಳಿದವೋ ಇಲ್ಲವೋ ಕಾರು ಒಮ್ಮೆಲೇ ನಿಂತು ಹೋಯಿತು! ಜಂ ಅಂತ ಮೊದಲನೆ ಗೇರು ಹಾಕಿ ರಿವ್ವನೆ ಬಿಟ್ಟ. ಚಕ್ರಗಳು ತಿರುಗಿದವೇ ವಿನಃ ಕಾರು ಒಂದಿಂಚೂ ಅಲುಗಲಿಲ್ಲ. ಕೆಳಗೆ ಇಳಿದು ನೋಡಿ ದಂಗಾಗಿಹೋದ. ಕಾರಿನ ಚಕ್ರಗಳು ಸೊಂಟದವರೆಗೆ ಹೂತುಹೋದವು! ರಫೀಕನಿಗೆ ಮೈಯೆಲ್ಲಾ ಬೆವತು ಹೋಯಿತು. ‘ಎಲ್ಲಾರೂ ಶ್ವಲ್ಪ ಇಳಿದು ತಳ್ಳಿದರೆ ಶಾಕು’, ಅಂದ. ಯಾರಿದ್ದಾರೆ? ಎಲ್ಲರೂ ಆಕಾಶ ನೋಡುತ್ತಿದ್ದರು. ಅಷ್ಟರಲ್ಲಿ ನನ್ನ ಹೆಂಡತಿ-ಮಕ್ಕಳು ತಮ್ಮ ಸ್ಪೆಶಲ್ ಕನ್ನಡಕದೊಂದಿಗೆ ಸುತ್ತಮುತ್ತ ಇದ್ದ ಕೆಲವರಿಗೆ ಸೂರ್ಯನನ್ನು ತೋರಿಸತೊಡಗಿದ್ದರು. ರಫೀಕನಿಗಂತೂ ತಡೆಯಲಾಗಲಿಲ್ಲ. ‘ಶಾರ್, ಶಾರ್, ಎಲ್ಲಾರು ವಾಂಗೊ. ಶಕ್ತಿ ಪೋಡುಂಗೊ!’ ಎಂದು ತನಗೆ ತಿಳಿದ ತಮಿಳಿನಲ್ಲೇ ದೈನ್ಯನಾಗಿ ಕೂಗತೊಡಗಿದ. ಒಂದೆರಡು ಧಾಂಡಿಗರು ಮತ್ತಿಬ್ಬರನ್ನು ಸೇರಿಸಿಕೊಂಡು ಮೊದಲು ರಫೀಕನನ್ನು ಕಾರಿನಿಂದ ಇಳಿಸಿದರು. ಚಕ್ರದ ಸುತ್ತ ಮರಳನ್ನು ಬಿಡಿಸಿ, ಎಲ್ಲಾ ಸೇರಿ ಕಾರನ್ನೇ ಗುಂಡಿಯಿಂದ ಅನಾಮತ್ತಾಗಿ ಪಕ್ಕಕ್ಕೆ ಎತ್ತಿಟ್ಟರು. ಅಲ್ಲಿಂದ ಹಿಂದಕ್ಕೆ ನೂಕಿ ರಸ್ತೆಗೆ ತಂದಿಟ್ಟರು. ನನಗಂತೂ ಸಾಕಾಗಿ ಹೋಗಿತ್ತು, ‘ಇನ್ನಾದರೂ ಸುರಕ್ಷಿತವಾಗಿ ಎಲ್ಲಾದರೂ ಪಾರ್ಕ್ ಮಾಡು’ ಎಂದು ಹೇಳಿದವನೆ ಎಲ್ಲರೊಂದಿಗೆ ಸಮುದ್ರ ತೀರಕ್ಕೆ ಬಂದೆ.

ಗ್ರಹಣ ಈಗಾಗಲೇ ಪ್ರಾರಂಭವಾಗಿದ್ದರಿಂದ ಸಮುದ್ರ ತೀರದುದ್ದಕ್ಕೂ ಎಲ್ಲೆಡೆ ಸಕಲ ಸಲಕರಣೆಗಳೂ ಸಿದ್ಧಗೊಂಡು ಸೂರ್ಯನತ್ತ ತಿರುಗಿ ನಿಂತಿದ್ದವು. ಹಲವು ವಿಜ್ಞಾನಿಗಳು, ಹವ್ಯಾಸೀ ಖಗೋಳತಜ್ಞರು, ನನ್ನಂತಹ ಆಕಾಶರಾಯರು ಎಲ್ಲರೂ ಸಂಪೂರ್ಣ ವಿದ್ಯಮಾನಗಳನ್ನು ನಿರಂತರವಾಗಿ ಚಿತ್ರೀಕರಿಸುತ್ತ, ಮಧ್ಯೆಮಧ್ಯೆ ಫೋಟೊ ತೆಗೆಯುತ್ತ, ಕುತೂಹಲದಿಂದ ಕಂಕಣ ಸೂರ್ಯಗ್ರಹಣವನ್ನು ನಿರೀಕ್ಷಿಸುತ್ತ ನಿಂತಿದ್ದರು. ಚಂದ್ರ ಆಗಲೇ ಸೂರ್ಯನನ್ನು ಮುಕ್ಕಾಲು ಭಾಗ ನುಂಗಿದ್ದ. ನನ್ನಲ್ಲಿ ಟ್ರೈಪಾಡ್ ಇಲ್ಲದಿದ್ದುದು ಬಹು ದೊಡ್ಡ ಕೊರತೆಯಾಯಿತು. ಫಿಲ್ಟರ್ ಹಾಳೆಯನ್ನು ಲೆನ್ಸ್ ಮುಂದೆ ಹಿಡಿದು, ಜೂಂ ಮಾಡಿ, ಸ್ವಲ್ಪವೂ ಕೈ ನಡುಗಿಸದೆ ಸೂರ್ಯನ ಛಾಯೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ನಿಜಕ್ಕೂ ಅಸಾಧ್ಯವಾದ ಕೆಲಸ. ಪ್ರತಿ ಸಾರಿ ಒಬ್ಬೊಬ್ಬರನ್ನು ಮುಕ್ಕಾಲಿ ದಯಪಾಲಿಸಲು ಬೇಡುವಂತಾಯಿತು. ಬೀಸುತ್ತಿದ್ದ ಗಾಳಿಯ ತೀವ್ರತೆಯಿಂದಾಗಿ ಸಾಧಾರಣ ಮುಕ್ಕಾಲಿಗಳು ತರತರನೆ ನಡುಗುತ್ತಿದ್ದವು.

ಜಮಾಯಿಸಿದ್ದ ಜನರಲ್ಲಿ ಹಲವರು ಕರ್ನಾಟಕದವರೂ ಇದ್ದರು. ದೂರದ ನಾಡಿಗೆ ಹೋದಾಗ ಕನ್ನಡದಲ್ಲಿ ಮಾತನಾಡುವವರು ಸಿಕ್ಕಿದರೇ ಒಂದು ರೀತಿಯ ಸಂತೋಷ! ನಾವು ನಿಂತ ಜಾಗದ ಹತ್ತಿರದಲ್ಲಿಯೇ ಬೆಂಗಳೂರಿನ ಸಹೋದರರರಿಬ್ಬರು ಗ್ರಹಣವನ್ನು ವೀಕ್ಷಿಸುವುದರೊಂದಿಗೆ ಸಂಪ್ರದಾಯಬದ್ಧರಾಗಿ ಮಂತ್ರಜಪವನ್ನೂ ಮಾಡುತ್ತಿದ್ದರು. ಮಕ್ಕಳು ಆಗಲೇ ಸಮುದ್ರಕ್ಕೆ ಇಳಿದಾಗಿತ್ತು. ವಿಡಿಯೋಚಿತ್ರಗಳನ್ನು, ಮತ್ತು ಫೋಟೋಗಳನ್ನು ತೆಗೆದುಕೊಳ್ಳಬೇಕಾಗಿದ್ದರಿಂದ ಮತ್ತು ಆಗಾಗ ಇತರರ ಸಲಕರಣೆಗಳನ್ನು ಮುಟ್ಟುತ್ತಿದ್ದರಿಂದ, ಹಾಗೂ ಜೊತೆಗೆ ಅವುಗಳನ್ನು ಹಿಡಿದುಕೊಂಡು ನನ್ನ ಹಿಂದೆ ತಿರುಗಬೇಕಾಗಿದ್ದರಿಂದ ನಾನೂ ನನ್ನ ಹೆಂಡತಿಯೂ ಕೊನೆಯವರೆಗೂ ಮೈಕೈ ನೀರು ಮಾಡಿಕೊಳ್ಳದೆ ಎಚ್ಚರ ವಹಿಸಬೇಕಾಯಿತು. ಇನ್ನೊಂದು ತಮಾಷೆಯೆಂದರೆ, ಒಬ್ಬ ತನ್ನ ದೂರದರ್ಶಕದ ಮೂಲಕ ಸೂರ್ಯನನ್ನು ನೋಡಿದ ಮೇಲೆ ಪಕ್ಕದಲ್ಲಿ ಸ್ಥಾಪಿತವಾದ ಮತ್ತೊಬ್ಬನ ದೂರದರ್ಶಕದೊಳಗೆ ಇಣುಕುತ್ತಿದ್ದ; ಅಲ್ಲಿ ಕಾಣುತ್ತಿದ್ದದ್ದೂ ಅದೇ!

ಸಮಯ ಕಳೆದಂತೆ ಚಂದ್ರ ನಿಧಾನವಾಗಿ ಸೂರ್ಯನ ಮಧ್ಯಭಾಗಕ್ಕೆ ಸರಿಯುತ್ತಿದ್ದ. ಮಧ್ಯಾಹ್ನ ೧.೧೮ಕ್ಕೆ ಕಂಕಣಗ್ರಹಣ ಪ್ರಾರಂಭವಾಯಿತು. ನೆರೆದ ಎಲ್ಲ ವೀಕ್ಷಕರಲ್ಲಿಯೂ ಹೊಸ ಹುರುಪು ಕಂಡಿತು. ಕ್ರಿಕೆಟ್ ಆಟದಲ್ಲಿ ಒಬ್ಬ ಬೌಲರ್ ಓಡಿಬಂದು ಬೌಲ್ ಮಾಡುವಾಗ ಕಾಮೆಂಟೇಟರ್‌ಗಳ ಧ್ವನಿ ಬರಬರುತ್ತ ತಾರಕಕ್ಕೆ ಏರುವಂತೆ ದೂರದಲ್ಲಿ ವಿವಿಧ ಮಾಧ್ಯಮಗಳ ಮಾತುಗಾರರು ಮೈಮೇಲೆ ದೇವರು ಬಂದಂತೆ ಮೈಕ್‌ನಲ್ಲಿ ಕೂಗುತ್ತಿದ್ದುದು ಕೇಳುತ್ತಿತ್ತು. ಅಲ್ಲಿ ಆ ಹೊತ್ತು ಕೇಕು, ಬಿಸ್ಕೇಟು ಮುಂತಾದ ತಿನಿಸುಗಳನ್ನು ಎಲ್ಲರಿಗೂ ಹಂಚಿ, ತಾವೂ ತಿಂದು, ಸಾವಿರಾರು ವರ್ಷಗಳಿಂದ ಭಾರತೀಯರು ಆಚರಿಸುತ್ತ ಬಂದಿದ್ದ ಮೂಢನಂಬಿಕೆಯನ್ನು ಹೀಗೆ ತಿನ್ನುವುದರ ಮೂಲಕ ತೊಡೆದಿದ್ದೇವೆ ಎಂದು ಜಾಹೀರು ಮಾಡುವ ಉತ್ಸುಕತೆ ಅವರಲ್ಲಿದ್ದಂತೆ ತೋರಿತು. ಆ ವೇಳೆಗೆ ಸುತ್ತಲ ವಾತಾವರಣದಲ್ಲಿ ಸ್ವಲ್ಪ ಕತ್ತಲ ಛಾಯೆ ಕಾಣಿಸಿತು. ಸೂರ್ಯನಿಗೇ ಮಂಕು ಬಡಿಯಿತೇನೋ ಎಂಬಂತೆ! ಅದು ಬಿಟ್ಟರೆ ಸಾಧಾರಣವಾಗಿ ಸಂಪೂರ್ಣ ಸೂರ್ಯಗ್ರಹಣದಲ್ಲಿ ಆಗುವಂತೆ ಕತ್ತಲು ಆವರಿಸಲಿಲ್ಲ. ಫಿಲ್ಟರ್ ಇಲ್ಲದೆ ನೇರವಾಗಿ ಸೂರ್ಯನನ್ನು ದಿಟ್ಟಿಸಲು ಆಗಲೂ ಸಾಧ್ಯವಿಲ್ಲ. ಎಡೆಬಿಡದೆ ಎಲ್ಲರೂ ಚಿತ್ರೀಕರಣ, ಛಾಯಾಗ್ರಹಣದಲ್ಲಿ ನಿರತರಾದರು! ಈ ವೇಳೆಗೆ ನಾನು ಒಂದು ಟ್ರೈಪಾಡ್‌ನ್ನು ಹೇಗೋ ಹೊಂದಿಸಿಕೊಂಡಿದ್ದೆ.

೧.೨೩ರಕ್ಕೆ ಚಂದ್ರನ ತಟ್ಟೆ ಸೂರ್ಯನ ಇನ್ನೊಂದು ಬದಿಯನ್ನು ಸೇರಿತು, ಅಲ್ಲಿಂದಾಚೆ ಗ್ರಹಣ ಬಿಡತೊಡಗಿತು. ಉತ್ತುಂಗಕ್ಕೆ ಏರಿದ್ದ ಉತ್ಸಾಹ ಎಲ್ಲೆಡೆ ಕುಗ್ಗುತ್ತಾ ಬಂತು. ಎಲ್ಲರೂ ಅವರವರ ಸಲಕರಣೆಗಳನ್ನು ಬಿಚ್ಚಿ, ಸುತ್ತತೊಡಗಿದರು, ತಮ್ಮ ತಮ್ಮ ವಾಹನಗಳಿಗೆ ಪ್ಯಾಕ್ ಮಾಡತೊಡಗಿದರು. ಬೆಳಗ್ಗಿನಿಂದ ನಾವೆಲ್ಲ ಏನನ್ನೂ ತಿಂದಿರಲಿಲ್ಲ; ಮಕ್ಕಳೂ ಹಸಿವೆ ಎಂದಿರಲಿಲ್ಲ. ಗ್ರಹಣ ಬಿಟ್ಟಿದ್ದರಿಂದ ನಮ್ಮ ಮುಂದಿನ ಕಾರ್ಯಕ್ರಮ ಸಮುದ್ರಸ್ನಾನ. ಮಕ್ಕಳಿಬ್ಬರೂ ಈಗಾಗಲೇ ಕಡಲ ನೀರಿನಲ್ಲಿ ಆಟವಾಡುತ್ತಿದ್ದರು; ಅವರಮ್ಮನೂ, ನಾನೂ ಅಮಾವಾಸ್ಯೆಯ ಅಲೆಯುಬ್ಬರಗಳ ಹೊಡೆತ ಸುಖವನ್ನು ಆನಂದಿಸತೊಡಗಿದೆವು. ನಾನಾಚೆ ತಿರುಗಿ ಅಭಿಜ್ಞಳೊಂದಿಗೆ ಏನೋ ಹೇಳುತ್ತಿದ್ದೆ. ಯಾವುದೋ ಕ್ಷಣದಲ್ಲಿ ಈ ಕಡೆ ತಿರುಗಿದರೆ, ಪುಷ್ಪಾ ‘ಓ..ಹೋ’ ಎಂದು ಎರಡೂ ಕಾಲು, ಕೈಎತ್ತಿ ಕೂಗುತ್ತಿದ್ದಳು. ಮೊದಲೇ ಅವಳಿಗೆ ಈಜು, ಮತ್ತೊಂದು ಬಾರದು. ಅಲೆಗಳು ತೀರಕ್ಕೆ ಬಡಿದು ಹಿಂದಿರುಗುತ್ತಿದ್ದಾಗ ಇವಳು ಆಯ ತಪ್ಪಿದ್ದಳು! ನಾನು ಓಡಿಹೋಗಿ ಹಿಡಿದುಕೊಳ್ಳುವುದರೊಳಗೆ, ಪಕ್ಕದಲ್ಲಿದ್ದ ಬೆಂಗಳೂರಿನ ಸಹೋದರರು ಅವಳನ್ನು ಹಿಡಿದೆತ್ತಿ ನಿಲ್ಲಿಸಿದ್ದರು. ಅವರಿಗೆ ಕೃತಜ್ಞತೆಯನ್ನು ಹೇಳಿ ಇವಳನ್ನು ನೀರಿನಿಂದ ಪಾರು ಮಾಡಿ, ಎಲ್ಲರೂ ಕಾರಿನೆಡೆಗೆ ನಡೆದೆವು. ಕೊನೆಗೆ ಇವಳು ಹೇಳಿದ್ದಿಷ್ಟು: ‘ಅವರು ನನ್ನ ಜೀವ ಉಳಿಸಿದ್ದು ಹಾಗಿರಲಿ, ನನ್ನ ರಟ್ಟೆಯನ್ನು ಹಿಡಿದೆಳೆದ ನೋವು ಇನ್ನೂ ಹೋಗಿಲ್ಲ!’


ಧನುಷ್ಕೋಟಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಸಮುದ್ರ ಒಂದಿಷ್ಟೂ ಆಳವಿಲ್ಲ. ನಡೆದೇ ಎಷ್ಟೋ ದೂರ ಸುತ್ತಬಹುದು. ಅಲ್ಲದೆ ಅಲ್ಲಿಂದ ಇನ್ನೂ ಹತ್ತು ಕಿಲೋಮೀಟರುಗಳ ದೂರದಲ್ಲಿ ರಾಮಸೇತುವಿದೆ. ಅಲ್ಲಿಗೆ ನಾಲ್ಕು ಗೇರ್‌ಗಳಿರುವ ವಾಹನಗಳಲ್ಲಿ ಹೋಗಬಹುದು. ಅದೊಂದು ವಿಶಿಷ್ಟ ಅನುಭವ. ಅದನ್ನೂ ಮುಗಿಸಿ, ಸಂಜೆ ಆರೂವರೆಗೆ ಭಾರವಾದ ಉಪ್ಪುದೇಹವನ್ನು ಹೊತ್ತು ರಾಮೇಶ್ವರಕ್ಕೆ ಬಂದು, ಅಲ್ಲಿಂದ ರಾಮನಾಡ್‌ಗೆ ಹಿಂದಿರುಗಿದೆವು. ರಾತ್ರಿ ಊಟ ಮಾಡುವಾಗ ಏಳೂವರೆ ಘಂಟೆ! ಮಾರನೆ ದಿನ ಮಧುರೆಗೆ ತೆರಳಿ ಅಲ್ಲಿ ದೇವಸ್ಥಾನವನ್ನೂ ನೋಡಿಕೊಂಡು, ಹಾಗೇ ತಿರುಪ್ಪೂರಿನ ಮಾರ್ಗವಾಗಿ ಬಂದು ಕೊನೆಗೆ ನಂಜನಗೂಡಿನ ತಮ್ಮನ ಮನೆ ತಲುಪುವಾಗ ರಾತ್ರಿ ಹತ್ತು ಘಂಟೆ ಮೀರಿತ್ತು.


ಕೊನೆಗೂ ಕಂಕಣ ಸೂರ್ಯಗ್ರಹಣವನ್ನು ನೋಡಬೇಕೆಂಬ ನನ್ನ ಹಲವು ವರ್ಷಗಳ ಕನಸು ನನಸಾಗಿತ್ತು. ನಿಜಕ್ಕೂ ಅದೊಂದು ಅದ್ಭುತ ಅನುಭವ!

Saturday, February 6, 2010

ಕಂಕಣ ಸೂರ್ಯನ ಭವ್ಯಾನುಭವ

ಮೊನ್ನೆ ಜನವರಿ ಹದಿನೈದರ ಸಂಪೂರ್ಣ ಸೂರ್ಯಗ್ರಹಣವನ್ನು ನೋಡುವ ತವಕ ನನಗೆ ಉಂಟಾದದ್ದು ಹದಿನಾರು ವರ್ಷಗಳ ಹಿಂದೆ. ಆಗ ನನ್ನ ಕಂಪ್ಯೂಟರ್‌ನಲ್ಲಿ ಹೊಸದಾಗಿ ಅಳವಡಿಸಿದ ಖಗೋಳ ತಂತ್ರಾಂಶವನ್ನು ಉಪಯೋಗಿಸಿ, ಮುಂದೆ ಭಾರತದಲ್ಲಿ ನಡೆಯಲಿರುವ ಸಂಪೂರ್ಣ ಸೂರ್ಯಗ್ರಹಣಗಳ ಬಗ್ಗೆ ಕುತೂಹಲದಿಂದ ನೋಡುತ್ತ ನೋಡುತ್ತ ಹೋದಾಗ ೨೦೧೦ ಜನವರಿ ೧೫ರಂದು ಘಟಿಸುವ ಖಗ್ರಾಸ ಸೂರ್ಯಗ್ರಹಣ ನನ್ನ ಗಮನ ಸೆಳೆದಿತ್ತು. ಈ ಗ್ರಹಣದ ವಿಶೇಷತೆ ಏನೆಂದರೆ, ಚಂದ್ರನು ಸೂರ್ಯನ ತಟ್ಟೆಯನ್ನು ಸಂಪೂರ್ಣವಾಗಿ ಮುಚ್ಚಿಯೂ ಮುಚ್ಚಲಾರದೆ ನಡುಮಧ್ಯೆ ನಿಲ್ಲುವ ನೋಟವನ್ನು ನೋಡಿದ ನನಗೆ ಹೀಗೂ ಒಂದು ಸೂರ್ಯಗ್ರಹಣ ನಡೆಯಬಹುದೆ ಎಂದು ಅಚ್ಚರಿಯಾಗಿತ್ತು. ಇದಕ್ಕೆ ಉತ್ತರ ಪ್ರೊ. ಜಿ. ಟಿ. ನಾರಾಯಣರಾಯರಲ್ಲದೆ ಇನ್ನಾರಿಗೆ ಗೊತ್ತಿದ್ದೀತು ಎಂದು ನೇರವಾಗಿ ಅವರನ್ನೇ ಸಂಪರ್ಕಿಸಿದೆ.

‘ಇದನ್ನು ಕಂಕಣ ಗ್ರಹಣ ಎನ್ನುತ್ತಾರೆ. ಇಂತಹ ಸಂದರ್ಭಗಳಲ್ಲಿ ಚಂದ್ರನು ಭೂಮಿಯಿಂದ ಸ್ವಲ್ಪ ಹೆಚ್ಚು ದೂರದಲ್ಲಿರುವುದರಿಂದ ಅವನ ಸೈಜ್ ಸ್ವಲ್ಪ ಚಿಕ್ಕದಾಗಿ ತೋರುತ್ತದೆ. ಹಾಗಾಗಿ ಈ ಗ್ರಹಣದ ಸಮಯದಲ್ಲಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚುವುದಿಲ್ಲ. ಮಧ್ಯದಲ್ಲಿ ಚಂದ್ರ ಮತ್ತು ಅವನ ಸುತ್ತಲೂ ಸೂರ್ಯನ ಕಿರಣಗಳು ದೊಡ್ಡ ಬಳೆಯ ರೀತಿ ಕಾಣಿಸುತ್ತದೆ’ ಎಂಬ ವಿಷಯ ತಿಳಿಸಿದರು. ಈ ಗ್ರಹಣ ನಾನಿರುವ ಊರಿನಿಂದ ಕೆಲವೇ ನೂರು ಕಿಲೋಮೀಟರುಗಳ ದೂರದಲ್ಲಿ ನಡೆಯುವುದರಿಂದ ಅದನ್ನು ನೋಡಲೇಬೇಕೆಂಬ ಚಪಲ ಅಲ್ಲಿಂದಲೇ ಶುರುವಾಯಿತು.

ಸಂಪೂರ್ಣ ಸೂರ್ಯಗ್ರಹಣವನ್ನು ನೋಡುವುದೇ ಒಂದು ವಿಶೇಷವಾದ, ವರ್ಣನಾತೀತವಾದ ಅನುಭವ. ಹಿಂದೆ ೧೯೮೦ರ ಫೆಬ್ರವರಿ ಹದಿನಾರರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಗ್ರಹಣವನ್ನು ಬಹಳ ಸಾಹಸಪಟ್ಟು ನೋಡಿದ್ದೆ. ಇದರಲ್ಲಿ ಸಾಹಸ ಎಂಥದ್ದು ಎಂದು ನೀವು ಕೇಳಬಹುದು. ಆ ಅನುಭವವನ್ನು ಇಷ್ಟು ವರ್ಷಗಳಲ್ಲಿ ನೂರಾರು ಬಾರಿ ಪುನಃಪುನಃ ಮನಸ್ಸಿನಲ್ಲಿಯೇ ಮನನ ಮಾಡಿದ್ದೇನೆ; ಹತ್ತು-ಹಲವು ಮಂದಿಯೊಂದಿಗೆ ಹೇಳಿ ಸಂಭ್ರಮಿಸಿದ್ದೇನೆ. ಆದ್ದರಿಂದ ಅದಿನ್ನೂ ನನ್ನ ನೆನಪಿನ ಅಂಗಳದಲ್ಲಿ ಹಚ್ಚಹಸುರಾಗಿಯೇ ಇದೆ! ಆದ್ದರಿಂದ ಈ ಲೇಖನದ ಮೊದಲ ಕಂತಿನಲ್ಲಿ ನನ್ನ ಹಳೆಯ ಅನುಭವವನ್ನು ಬರೆದು, ಮುಂದಿನ ವಾರ ರಾಮೇಶ್ವರದ ಕತೆಯನ್ನು ಹೇಳಲು ತೀರ್ಮಾನಿಸಿದ್ದೇನೆ.

ಕೊಡಗಿನಿಂದ ಉತ್ತರ ಕನ್ನಡ ಜಿಲ್ಲೆಯನ್ನು ತಲುಪಲು ಸುಮಾರು ೩೨೫ ಕಿಮೀ ಪ್ರಯಾಣ ಮಾಡಬೇಕು. ಅಂದರೆ ಸುಮಾರು ಎಂಟು-ಒಂಭತ್ತು ಘಂಟೆಗಳ ಪ್ರಯಾಣ. ಸಾಧಾರಣವಾಗಿ ಬಾಕಿ ಎಲ್ಲಾ ದಿನಗಳಲ್ಲಿ ಇಲ್ಲಿಂದ ಮಂಗಳೂರು ತಲುಪಿದರೆ, ಅಲ್ಲಿಂದ ಕುಂದಾಪುರದ ಕಡೆಗೆ ಹತ್ತಾರು ಬಸ್‌ಗಳು ಸಿಕ್ಕುತ್ತವೆ ಎಂದು ಕೇಳಿ ತಿಳಿದುಕೊಂಡೆ. ಸಂಪೂರ್ಣಗ್ರಹಣ ಹಿಡಿಯುವುದು ಮಧ್ಯಾಹ್ನ ಮೂರೂವರೆ ಘಂಟೆಗೆ ತಾನೇ? ಬೆಳಿಗ್ಗೆ ಹೊತ್ತಿಗೆ ಮುಂಚೆ ಹೊರಟರೆ, ಮಧ್ಯಾಹ್ನದ ಮೂರು ಘಂಟೆಯ ಹೊತ್ತಿಗೆ ಉತ್ತರ ಕನ್ನಡ ಜಿಲ್ಲೆಯನ್ನು ತಲುಪಬಹುದು. ಅಲ್ಲಿಗೆ ಯಾವತ್ತೂ ಬಸ್ಸುಗಳಿಗೆ ಕೊರತೆಯಿರುವುದಿಲ್ಲ. ಬಹುಶಃ ನಾನೂ ಆವತ್ತು ಹಾಗೆ ಆಲೋಚಿಸಿದ್ದೆ. ಅದು ಆವತ್ತಿನ ಮಟ್ಟಿಗೆ ಸುಳ್ಳಾಗುವುದೆಂದು ಕನಸಿನಲ್ಲೂ ಎಣಿಸಿರಲಿಲ್ಲ!

‘ಸುಮ್ಮನೆ ಒಂದು ಗ್ರಹಣವನ್ನು ನೋಡಲು ಅಷ್ಟು ದೂರ ಯಾಕೆ ಹೋಗುತ್ತೀಯ’ ಎಂದು ಅಮ್ಮ ಹಿಂದಿನ ರಾತ್ರಿಯೇ ಕೊಕ್ಕೆ ಹಾಕಿದ್ದರು. ಏನೇ ಆಗಲಿ ಈ ಗ್ರಹಣವನ್ನು ನೋಡಲೇಬೇಕೆಂದು ವೀರಾಜಪೇಟೆಯಿಂದ ಬೆಳಿಗ್ಗೆ ಐದೂವರೆ ಘಂಟೆಗೆ ಮಡಿಕೇರಿಯ ಬಸ್ ಹತ್ತಿದೆ. ಮಡಿಕೇರಿ ತಲುಪುವಾಗ ಆರೂವರೆ ಘಂಟೆಯಾಗಿತ್ತು. ಯಾವುದೋ ಒಂದು ಪ್ರೈವೇಟ್ ಬಸ್ ಮಂಗಳೂರಿಗೆ ಹೋಗುತ್ತದೆ ಎಂದು ತಿಳಿದಾಕ್ಷಣ ಓಡಿ ಆ ಬಸ್ಸನ್ನು ಹತ್ತಿದೆ.

ಕುಂದಾಪುರಕ್ಕೆ, ಅಲ್ಲಿಂದ ಕಾರವಾರದ ಕಡೆಗೆ ಹೋಗುವುದಿದ್ದರೆ ಮಂಗಳೂರಿಗೆ ಯಾಕೆ ಹೋಗಬೇಕು, ಬಿಸಿ ರೋಡ್ ತಲುಪಿದರೆ ಅಲ್ಲಿಂದಲೇ ನೇರವಾಗಿ ಯಾವುದಾದರೂ ವಾಹನ ಸಿಕ್ಕಿಯೇ ಸಿಕ್ಕುತ್ತದೆ ಎಂದು ಸಹ ಪ್ರಯಾಣಿಕರು ಹೇಳಿದ ಮೇರೆಗೆ, ಬಿಸಿ ರೋಡಿಗೇ ಟಿಕೆಟ್ ತೆಗೆದುಕೊಂಡೆ. ಪುತ್ತೂರು ತಲುಪುವಾಗ ಒಂಭತ್ತು ಘಂಟೆ ಕಳೆದಿತ್ತು. ಅದೇಕೋ ಆವತ್ತು ಬಹಳ ಬೇಗನೆ ತಲುಪಿದ್ದೇನೆ ಅನ್ನಿಸಿತು. ಬಸ್ಸಿನವರಿಗೆ ಅದೇನು ತೋಚಿತೋ ಇದ್ದಕ್ಕಿದ್ದಂತೆ ಪುತ್ತೂರಿನಲ್ಲಿ ಬಸ್ಸಿನ ಪ್ರಯಾಣಕ್ಕೆ ಫುಲ್ ಸ್ಟಾಪ್ ಹಾಕಿ ನಿಲ್ಲಿಸಿಬಿಟ್ಟರು. ಎಲ್ಲರೂ ಬಸ್ಸಿನಿಂದ ಇಳಿಯತೊಡಗಿದರು. ಈ ಬಸ್ಸಿಗೇನಾಯ್ತು?

ದಾರಿಯುದ್ದಕ್ಕೂ ಆಲೋಚಿಸುತ್ತಿದ್ದೆ: ಇದೇನಿದು? ಒಂಭತ್ತು ಘಂಟೆಯಾದರೂ ಯಾವ ಮಕ್ಕಳೂ ಶಾಲೆಗೆ ಹೋಗುವುದು ಕಾಣುತ್ತಿಲ್ಲವಲ್ಲ? ಈವತ್ತು ಯಾವುದಾದರೂ ರಜೆಯೆ? ಅಷ್ಟು ಹೊತ್ತಾದರೂ ಯಾವ ಅಂಗಡಿಯೂ ಇನ್ನೂ ತೆರೆದದ್ದು ಕಾಣಲಿಲ್ಲ. ಆಶ್ಚರ್ಯವಾಯಿತು. ಬಸ್ಸಿನಿಂದ ಇಳಿದು ಸುತ್ತಲೂ ನೋಡಿದೆ. ಎಲ್ಲಿಯೂ ಯಾವ ಬಸ್ಸಿನ ಸುಳಿವೂ ಇರಲಿಲ್ಲ. ಜನರೂ ಒಬ್ಬಿಬ್ಬರು ಮಾತ್ರ ಅಲ್ಲಿ-ಇಲ್ಲಿ ನಿಂತಿದ್ದರು. ಇದೇನಿದು? ಎಲ್ಲವೂ ಸ್ತಬ್ದ? ಈ ಊರಿನಲ್ಲಿ ಯಾವುದಾದರೂ ಬಂದ್ ಘೋಷಣೆಯಾಗಿದೆಯೇ ಎಂದು ಯಾರನ್ನೋ ಕೇಳಿದೆ. ಈವತ್ತು ಗ್ರಹಣವಾದದ್ದರಿಂದ ಹೀಗೆ ಅಂತ ಗೊತ್ತಾಯಿತು. ಎಂಥ ವಿಪರ್ಯಾಸ! ವಿದ್ಯಾರ್ಥಿಗಳಿಗೆ ಸೂರ್ಯಗ್ರಹಣದ ಬಗ್ಗೆ ತಿಳಿಸಲು ಇದಕ್ಕಿಂತ ಒಳ್ಳೆಯ ಸಂದರ್ಭ ಬೇಕೇ? ಶಾಲೆಗೆ ರಜಾ ಕೊಟ್ಟು ಮಕ್ಕಳನ್ನು ಸಂಪೂರ್ಣವಾಗಿ ಕತ್ತಲಿನಲ್ಲಿಡುತ್ತಿದ್ದಾರಲ್ಲ! ಛೆ!

ಮುಂದೇನು, ಎಂದು ಆಲೋಚಿಸಿದೆ. ಅದೇ ಬಸ್ಸಿನಲ್ಲಿ ಮಂಗಳೂರಿಗೆ ಹೋಗಿದ್ದರೆ ಅಲ್ಲಿಂದ ಹೇಗಾದರೂ ಪ್ರಯಾಣ ಮುಂದುವರಿಸಬಹುದಿತ್ತೇನೋ. ಹೀಗೆ ಎಲ್ಲಾ ಬಿಟ್ಟು ಪುತ್ತೂರಿನಲ್ಲಿ ಸಿಕ್ಕಿಕೊಂಡೆನಲ್ಲ! ಹಾಗೆಂದುಕೊಳ್ಳುವ ಹೊತ್ತಿಗೆ ಮತ್ತೊಂದು ಮಂಗಳೂರಿಗೆ ಹೋಗುವ ಬಸ್ ಬಂದಿತು. ಬಸ್ಸಿಗೆ ಬಸ್ಸೇ ಖಾಲಿ ಖಾಲಿ! ಬಿಸಿ ರೋಡ್ ಹೇಗೂ ತಲುಪುವಷ್ಟರಲ್ಲಿ ಹತ್ತೂವರೆಯಾಗಿತ್ತು. ಎಲ್ಲಿಯೂ ನಿಲ್ಲದೆ ನಾನ್ ಸ್ಟಾಪ್ ಬಸ್‌ನಂತೆ ಪ್ರಯಾಣ. ತಿನ್ನಲು ಯಾವ ಅಂಗಡಿಯೂ ಇಲ್ಲ, ಹೋಟಲ್ಲೂ ಇಲ್ಲ. ಮೊದಲೇ ತಿಳಿದಿದ್ದರೆ ತಿನ್ನಲು ಏನನ್ನಾದರೂ ಕಟ್ಟಿಸಿಕೊಂಡು ಬರಬಹುದಿತ್ತು.

ರಸ್ತೆಯೆಲ್ಲ ಭಣಗುಟ್ಟುತ್ತಿತ್ತು. ಒಂದೆರಡು ಲಾರಿ-ಟ್ರಕ್‌ಗಳನ್ನು ಬಿಟ್ಟರೆ ಯಾವ ವಾಹನವೂ ಕಂಡುಬರಲಿಲ್ಲ. ಆಗೊಂದು ಈಗೊಂದು ಕಾರು ಭರ್ರನೆ ಹಾದುಹೋಗುತ್ತಿದ್ದವು. ಯಾರಾದರೂ ಕುಂದಾಪುರ-ಕಾರವಾರದ ಕಡೆಗೆ ಹೋಗುವವರಿದ್ದರೆ! ಏನಾದರಾಗಲಿ ಎಂದು ಒಂದೊಂದು ಕಾರಿಗೂ ಕೈ ತೋರಿಸತೊಡಗಿದೆ. ಕೊನೆಗೂ ನನ್ನ ಅದೃಷ್ಟಕ್ಕೆ ಬ್ರಹ್ಮಾವರಕ್ಕೆ ಹೋಗುತ್ತಿದ್ದ ಒಂದು ಕಾರು ಸಿಕ್ಕಿತು. ಅರ್ಜೆಂಟ್, ಕಾರವಾರಕ್ಕೆ ಹೋಗಬೇಕು ಎಂದು ಹೇಳಿ ಹತ್ತಿದೆ. ರಸ್ತೆಯಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಬಿಟ್ಟ ಬಾಣದ ಹಾಗೆ ಕಾರು ಮೂಡಬಿದರೆ, ಕಾರ್ಕಳ ದಾರಿಗಾಗಿ, ಉಡುಪಿಯಲ್ಲಿ ನನ್ನನ್ನು ಇಳಿಸಿ ಹೋಯಿತು. ಸಾಲದ್ದಕ್ಕೆ ೫೦ ರೂಪಾಯಿಗಳನ್ನೂ ತೆರಬೇಕಾಯಿತು. ಆಗ ವೇಳೆ ಮಧ್ಯಾಹ್ನ ಒಂದೂವರೆ ಘಂಟೆ!

ಏನೇ ಆದರೂ ನಾನು ಮೂರೂವರೆಯೊಳಗೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರಬೇಕಿತ್ತು. ಸಂಪೂರ್ಣ ಸೂರ್ಯಗ್ರಹಣವನ್ನು ನೋಡಬೇಕಾದರೆ ಕನಿಷ್ಟ ಬಟ್ಕಳವನ್ನಾದರೂ ತಲುಪಲೇ ಬೇಕಿತ್ತು. ಈಗ ಉಳಿದಿರುವುದು ಎರಡು ತಾಸುಗಳು ಮಾತ್ರ! ಆ ದಾರಿಗಾಗಿ ಹೋಗುವ ಎಲ್ಲ ವಾಹನಗಳಿಗೂ ಕೈತೋರುತ್ತಲೇ ಇದ್ದೆ. ಎಲ್ಲರಿಗೂ ಅದೇನು ಅರ್ಜೆಂಟೋ ಒಬ್ಬರೂ ನಿಲ್ಲಿಸುವ ಕರುಣೆ ತೋರಿಸಲಿಲ್ಲ. ಕೊನೆಗೆ ಏನೂ ತೋಚದೆ ಕೈಸನ್ನೆ ಮಾಡುತ್ತಾ ಒಂದು ಕಾರಿನ ಹಿಂದೆಯೇ ಓಡಿದೆ. ಅವರಿಗೆ ಅದೇನನ್ನಿಸಿತೋ, ಸ್ವಲ್ಪ ದೂರ ಹೋಗಿ ನಿಲ್ಲಿಸಿದರು. ಕುಮಟಾದಲ್ಲಿ ಯಾರದ್ದೋ ಸಾವು ನೋಡಲು ಹೋಗುತ್ತಿದ್ದವರು. ಬಹುಶಃ ನನ್ನ ಆತಂಕದ ಮುಖ ನೋಡಿ ನನಗೂ ಅಂತಹದ್ದೇ ಅನಿವಾರ್ಯ ಪರಿಸ್ಥಿತಿ ಇರಬಹುದೇನೋ ಅನ್ನಿಸಿರಬೇಕು! ಕಾರು ಹತ್ತಿದ ಮೇಲೆ ನಾನು ಹೊರಟ ಉದ್ದೇಶ ತಿಳಿಸಿದೆ. ಕಾರಿನಲ್ಲಿದ್ದ ಯಾರಿಗೂ ನನ್ನ ಘನಕಾರ್ಯ ರುಚಿಸಿದ ಹಾಗೆ ಕಾಣಲಿಲ್ಲ. ಆದರೂ ಹತ್ತಿಸಿಕೊಂಡು ಆಗಿತ್ತು, ಪ್ರಯಾಣ ಮುಂದುವರೆಸಿದರು. ನನ್ನ ಪುಣ್ಯಕ್ಕೆ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರವಿಲ್ಲವಾದ್ದರಿಂದ ನಮ್ಮ ಕಾರು ವೇಗವಾಗಿ ಹೋಗಲು ಸಾಧ್ಯವಾಗಿತ್ತು. ಎರಡೂವರೆ ಘಂಟೆಗೇ ಕುಂದಾಪುರವನ್ನು ತಲುಪಿದೆವು.

ಯಾವ ಗ್ರಹಣವನ್ನು ನೋಡಬೇಕೆಂದು ಇಲ್ಲಿಯವರೆಗೆ ಬಂದಿದ್ದೆನೋ ಅದು ೨.೨೦ಕ್ಕೇ ಹಿಡಿಯಲು ಶುರುವಾಗಿತ್ತು. ನಾನು ಮತ್ತೊಂದು ಪೆದ್ದು ಕೆಲಸವನ್ನು ಮಾಡಿದ್ದೆ. ಸೂರ್ಯನನ್ನು ನೋಡಲು ತೆಗೆದಿರಿಸಿಕೊಂಡಿದ್ದ ಎಕ್ಸ್‌ರೇ ಹಾಳೆಯನ್ನು ಮನೆಯಲ್ಲೇ ಬಿಟ್ಟುಬಂದಿದ್ದೆ!

ಗ್ರಹಣದ ಸಮಯದಲ್ಲಿ ಸೂರ್ಯನನ್ನು ನೋಡಬಾರದೆಂದು ಎಲ್ಲರೂ ಸತತವಾಗಿ ಎಚ್ಚರಿಕೆ ನೀಡುವುದನ್ನು ಕೇಳಿದ್ದೇನೆ. ಇದು ಯಾಕೋ ನನಗೆ ತಿಳಿಯದು. ಹಾಗೆ ನೋಡಿದರೆ, ಯಾವ ಹೊತ್ತೂ ಸೂರ್ಯನನ್ನು ನೋಡಲೇಬಾರದು. ಮುಂಜಾನೆಯ ಮತ್ತು ಸಂಜೆಯಲ್ಲಿ ಕಾಣುವ ಎಳೆ ಸೂರ್ಯನನ್ನು ಮಾತ್ರ ನೇರವಾಗಿ ನೋಡಲು ಸಾಧ್ಯ. ಸಾಧಾರಣವಾಗಿ ನಾವು ಯಾರೂ ಪ್ರಖರವಾದ ಸೂರ್ಯನನ್ನು ನೇರವಾಗಿ ದೃಷ್ಟಿಸಿ ನೋಡುವುದಕ್ಕೆ ಆಗುವುದೇ ಇಲ್ಲ. ಆ ಕಿರಣಗಳು ನಮ್ಮ ದೃಷ್ಟಿಪಟಲವನ್ನು ಸುಟ್ಟುಹಾಕುವ ಶಕ್ತಿ ಹೊಂದಿರುತ್ತವೆ. ಅಲ್ಲದೆ ಸಾಮಾನ್ಯ ದಿನಗಳಲ್ಲಿ ಅವನಲ್ಲಿ ಯಾವ ಆಕರ್ಷಣೆ ಕೂಡಾ ಇಲ್ಲವಲ್ಲ!

ಆದರೆ ಗ್ರಹಣದ ಸಮಯದಲ್ಲಿ ಹಾಗಲ್ಲ; ಅವನ ಮೇಲೆ ಅದೇನೋ ವಿಶೇಷತೆ ನಡೆಯುತ್ತದೆ, ಅದು ನಮ್ಮನ್ನು ಆಕರ್ಷಿಸುತ್ತದೆ. ಆ ಸಮಯದಲ್ಲಿ ಸೂರ್ಯನಿಂದ ಯಾವ ಪ್ರತ್ಯೇಕವಾದ ಕಿರಣಗಳೂ ಹೊರಹೊಮ್ಮುವುದಿಲ್ಲ ಅಥವಾ ಯಾವ ಹೊಸ ಪ್ರಭೆಯೂ ನಮ್ಮ ಮೇಲೆ ಬಿದ್ದು ಹೊಸದಾದ ದುಷ್ಪರಿಣಾಮ ಬೀರುವುದಿಲ್ಲ. ಯಾವತ್ತೂ ಸೂರ್ಯನನ್ನು ನೇರವಾಗಿ ನೋಡಬಾರದು, ಆ ಸಮಯದಲ್ಲೂ ಅವನನ್ನು ನೋಡಬಾರದು. ಅಷ್ಟೆ.

ಕಾರಿನಲ್ಲಿದ್ದ ಯಾರಿಗೂ ಗ್ರಹಣದ ಬಗ್ಗೆ ಕುತೂಹಲವಾಗಲೀ ಆಸಕ್ತಿಯಾಗಲೀ ಇದ್ದಂತಿರಲಿಲ್ಲ. ಎಕ್ಸ್‌ರೇ ಶೀಟ್ ಇರಲಿಲ್ಲವಾದ್ದರಿಂದ ಒಂದು ಕ್ಷಣ ಕತ್ತೆತ್ತಿ ಕಾರಿನ ಹೊರಗೆ ಸೂರ್ಯನನ್ನು ನೋಡುವುದು, ತಕ್ಷಣ ಕಣ್ಣು ಮುಚ್ಚಿಕೊಳ್ಳುವುದು. ಅಷ್ಟಕ್ಕೇ ಅವನ ಚಿತ್ರ ಸ್ಪಷ್ಟವಾಗಿ ದೃಷ್ಟಿಗೆ ಗೋಚರವಾಗಿ ಬಿಡುತ್ತಿತ್ತು!

ಬೈಂದೂರು ತಲುಪುವಾಗ ಮಧ್ಯಾಹ್ನ ಮೂರು ಘಂಟೆ; ಸ್ವಲ್ಪ ಸ್ವಲ್ಪವಾಗಿ ಚಂದ್ರ ಸೂರ್ಯನನ್ನು ನುಂಗುತ್ತಿದ್ದ; ಆ ವೇಳೆಗೆ ಸೂರ್ಯನನ್ನು ಅರ್ಧಭಾಗ ನುಂಗಿಯಾಗಿತ್ತು. ಅಲ್ಲಿಂದ ೩.೨೦ಕ್ಕೆ ಶಿರೂರು. ಅಂತೂ ದಕ್ಷಿಣ ಕನ್ನಡ ದಾಟಿ, ಉತ್ತರ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿ ಆಗಿತ್ತು. ಇಲ್ಲಿಂದ ಉತ್ತರಕ್ಕೆ ಯಾವುದೇ ಜಾಗದಲ್ಲಿಯೂ ಸಂಪೂರ್ಣ ಗ್ರಹಣದ ನೋಟ ಲಭ್ಯ. ಕೊಟ್ಟಕೊನೆಗೂ ಭಟ್ಕಳವನ್ನು ೩.೩೦ಕ್ಕೆ ತಲುಪಿದೆವು. ಗ್ರಹಣ ಶೇಕಡ ೮೦ರಷ್ಟು ಆವರಿಸಿತ್ತು. ಇಲ್ಲೇ ಇಳಿದುಬಿಟ್ಟರೆ ಸಂಪೂರ್ಣ ಗ್ರಹಣವನ್ನು ನೋಡಬಹುದು ಎಂದು, ಇಲ್ಲೇ ಇಳಿದುಕೊಳ್ಳುತ್ತೇನೆ. ನಿಮಗೆಲ್ಲ ತುಂಬಾ ಥ್ಯಾಂಕ್ಸ್ ಎಂದು ಹೇಳಿದೆ. ಅಲ್ಲಿ ನನ್ನನ್ನು ಇಳಿಸಿದ ಕಾರು ಕುಮಟಾ ಕಡೆಗೆ ಮುಂದುವರಿಯಿತು.

ರಸ್ತೆಯ ಬದಿಯಲ್ಲೇ ಇಳಿದಿದ್ದೆ. ಆ ತುದಿಯಿಂದ ಈ ತುದಿಯವರೆಗೂ ಎಲ್ಲವೂ ನೀರವ! ಒಂದು ನರಪಿಳ್ಳೆಯೂ ಕಾಣುತ್ತಿರಲಿಲ್ಲ. ಏನಾಗಿದೆ ಈ ಜನಕ್ಕೆ! ಎಲ್ಲರೂ ಎಲ್ಲಿ ಹೋದರು? ಇಂಥ ಒಂದು ಅದ್ಭುತ ಸಂಗತಿ ತಮ್ಮೂರಿನಲ್ಲೇ ನಡೆಯುತ್ತಿರುವಾಗ ಮನೆಯೊಳಗೆ ಅವಿತು ಕುಳಿತಿದ್ದಾರಲ್ಲ? ಹಾಗೇ ತುಸು ದೂರ ನಡೆದು ಹೋದೆ. ಒಂದು ಶಾಲೆಯ ಮುಂದುಗಡೆ ವಿಶಾಲವಾದ ಆವರಣದಲ್ಲಿ ಸುಮಾರು ೫೦-೫೫ ಜನ ನೆರೆದಿದ್ದರು. ಹಲವು ವಿದ್ಯಾರ್ಥಿಗಳೂ ಇದ್ದರು. ವಿಶೇಷ ಕನ್ನಡಕಗಳನ್ನು ಬಳಸಿ ಗ್ರಹಣವನ್ನು ವೀಕ್ಷಿಸುತ್ತಿದ್ದರು. ಸದ್ಯ, ಜೊತೆಗೆ ಸ್ವಲ್ಪವಾದರೂ ವೈಜ್ಞಾನಿಕ ಮನೋಭಾವವಿರುವ ಮಂದಿ ಸಿಕ್ಕಿದರಲ್ಲ ಎಂದು ನಾನೂ ಗುಂಪಿನಲ್ಲಿ ಸೇರಿಕೊಂಡೆ.

೩.೩೫ರ ವೇಳೆಗೆ ಸುತ್ತಲೂ ಕತ್ತಲು ಆವರಿಸತೊಡಗಿತು. ಇದು ಸಂಜೆಯ ಕತ್ತಲಿನ ಹಾಗೆ ಕೆಂಪು-ಕಿತ್ತಳೆ ಛಾಯೆಗಳಿಂದ ಕತ್ತಲಿನೆಡೆಗೆ ನಿಧಾನವಾಗಿ, ಸ್ವಲ್ಪಸ್ವಲ್ಪವಾಗಿ ವ್ಯಾಪಿಸಲಿಲ್ಲ. ಒಂದು ರೀತಿಯ ವಿಚಿತ್ರವಾದ ಕಪ್ಪು ಛಾಯೆ! ಐದೇ ನಿಮಿಷಗಲ್ಲಿ ಕತ್ತಲಾಗಿಬಿಟ್ಟಿತು. ವ್ಹಾ! ನೆತ್ತಿಯ ಬಳಿ ಮೊದಲು ಕಂಡದ್ದು ಶುಕ್ರ ಗ್ರಹ! ಈಗ ಸೂರ್ಯನನ್ನು ಯಾವುದೇ ಕಪ್ಪು ಹಾಳೆಯಿಲ್ಲದೆ, ನೇರವಾಗಿ ನೋಡತೊಡಗಿದೆವು.


ಚಂದ್ರ ಸೂರ್ಯನನ್ನು ಮುಚ್ಚುತ್ತಿದ್ದಂತೆಯೇ ಅವನ ಸುತ್ತಲೂ ಒಂದು ಪ್ರಭಾವಲಯ ಕಾಣತೊಡಗಿತು. ಬರಬರುತ್ತ ಅದು ದಟ್ಟವಾಗಿ, ನೋಡನೋಡುತ್ತಿದ್ದಂತೆಯೇ ಮೇಲಿನ ಎಡಬದಿಯಲ್ಲಿ ಒಂದು ಬೆಳಕಿನ ಉಂಡೆ ಝಗ್ಗನೆ ಉಬ್ಬಿ ನಿಂತಿತು. ಇದನ್ನು ವಜ್ರದುಂಗುರ ಎನ್ನುತ್ತಾರೆ. ಸಮಯ ಸರಿಯಾಗಿ ೩.೪೦. ಈ ಉಂಗುರ ನಾಲ್ಕು ಸೆಕೆಂಡುಗಳ ಕಾಲ ಮಾತ್ರ ಕಾಣಲು ಲಭ್ಯ. ಸುತ್ತಲೂ ನಕ್ಷತ್ರಗಳು ಒಂದೊಂದೇ ಪಿಳಪಿಳನೆ ಕಾಣತೊಡಗಿದವು. ನಾನು ಗುರುತಿಸಿದ ನಕ್ಷತ್ರಗಳು, ಅಶ್ವಿನೀ, ಕೃತ್ತಿಕಾ, ರೋಹಿಣೀ, ಮೃಗಶಿರಾ, ಆರ್ದ್ರಾ, ಇವಲ್ಲದೆ ಉತ್ತರದಲ್ಲಿ ಧ್ರುವ, ಶ್ರವಣ, ಅಭಿಜಿತ್, Deneb, Capella ಮತ್ತು ದಕ್ಷಿಣದಲ್ಲಿ Achernar, Fomalhaut, ಅದರೊಂದಿಗೆ ಸೂರ್ಯನ ಸಮೀಪವೇ ಬುಧಗ್ರಹ! ಅಲ್ಲದೆ ಸುತ್ತಲೂ ಕಾಣುತ್ತಿದ್ದ ಎಲ್ಲ ನಕ್ಷತ್ರಪುಂಜಗಳನ್ನೂ ಗುರುತಿಸಿದೆ.

ಸೂರ್ಯನ ಸುತ್ತ ಬೆಳ್ಳಿಯ ಪ್ರಭೆ ವಿಜ್ರಂಭಿಸುತ್ತಿದ್ದ ಹಾಗೇ ಕತ್ತಲು ಆವರಿಸಿದ ಇಡೀ ಆಕಾಶ ಒಂದೂವರೆ ನಿಮಿಷಗಳ ಕಾಲ ಸ್ತಬ್ದವಾಗಿ ನಿಂತಿತು. ಎಂಥ ರಮ್ಯ ನೋಟ! ಎಲ್ಲರೂ ಹೋ! ಎಂದು ಕೂಗುತ್ತಾ ಸಂಭ್ರಮಿಸಿದರು. ಇದನ್ನು ಅನುಭವಿಸಲು ಇಲ್ಲಿಯವರೆಗೆ ಬಂದೆನೇ? ಇಷ್ಟು ಪರಿಪಾಡಲು ಪಟ್ಟೆನೆ? ಸಂತೋಷದಿಂದ ನನಗೆ ಕಣ್ಣಲ್ಲಿ ನೀರೇ ಬಂದುಬಿಟ್ಟಿತು! ಬೆಳಿಗ್ಗೆಯಿಂದ ಪಟ್ಟ ಕಷ್ಟವೆಲ್ಲ ಮಂಗಮಾಯವಾಗಿತ್ತು! ೩.೪೩ಕ್ಕೆ ಪುನಃ ಸೂರ್ಯನ ಕೆಳ ಎಡಬದಿಯಲ್ಲಿ ವಜ್ರದುಂಗುರ ಕಾಣಿಸಿಕೊಂಡಿತು. ಪುನಃ ಎಲ್ಲರೂ ಚಪ್ಪಾಳೆ ತಟ್ಟಿ ಹೋ! ಎಂದು ಕುಣಿದರು.


ಅದಾದ ಒಂದೇ ನಿಮಿಷದಲ್ಲಿ ಫಕ್ಕನೆ ಆಕಾಶದಲ್ಲಿ ಬೆಳಕು ಕಂಡಿತು. ನಕ್ಷತ್ರಗಳೆಲ್ಲ ಮಾಯವಾದವು. ಕ್ಷಣಕ್ಷಣಕ್ಕೂ ವಾತಾವರಣ ಪ್ರಕಾಶಮಾನವಾಯಿತು. ಸೂರ್ಯನ ಒಂದೇ ಒಂದು ತುಣುಕು ಚಂದ್ರನ ಎಡೆಯಿಂದ ಇಣುಕಿದರೂ ಆ ಬೆಳಕು ವಿಶಾಲ ಆಕಾಶವನ್ನು ಬೆಳಗಲು ಸಾಕು ಎಂಬುದನ್ನು ಕಣ್ಣಾರೆ ಕಂಡೆ.




ನೆರೆದ ಹಿರಿಯ-ಕಿರಿಯ ಮಿತ್ರರೆಲ್ಲರೂ ಬಹಳ ಸಂತೋಷದಿಂದ ಒಬ್ಬರಿಗೊಬ್ಬರು ತಮಗೆ ತೋಚಿದ ರೀತಿಯಲ್ಲಿ, ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಮಧ್ಯೆ ಮತ್ತೊಂದು ಕುತೂಹಲಕಾರಿ ಸಂಗತಿಯನ್ನು ಕಂಡಿದ್ದೆ. ಹಕ್ಕಿಗಳು ಗಲಿಬಿಲಿಗೊಂಡೋ, ಗಾಬರಿಯಿಂದಲೋ ಚಿಲಿಪಿಲಿಗುಟ್ಟುತ್ತಾ ದಿಕ್ಕಾಪಾಲಾಗಿ ಹಾರಾಡುತ್ತಿದ್ದವು; ನಾಯಿಗಳು ವಿಚಿತ್ರ ಸ್ವರದಲ್ಲಿ ಕೂಗುತ್ತಿದ್ದವು; ದೂರದಲ್ಲಿ ಹಸು-ಕರುಗಳೂ ಕೂಗುವುದು ಕೇಳಿಸಿತು. ನಿಸರ್ಗದ ಈ ವಿಸ್ಮಯವನ್ನು ಮೂಕನಾಗಿ ಅನುಭವಿಸಿದೆ. ಒಟ್ಟಾರೆ ಆಕಾಶದಲ್ಲಿ ಬಹು ಅಪರೂಪಕ್ಕೆ ನಡೆಯುವ ಸೂರ್ಯ-ಚಂದ್ರರ ನೆರಳು-ಬೆಳಕಿನಾಟದ ವೈಭವವನ್ನು ನೋಡುವ ಭಾಗ್ಯ ನನ್ನದಾಯಿತು.

ಸಂಜೆ ಐದು ಗಂಟೆಯಾಗುವುದರೊಳಗೆ ಸರಿಸುಮಾರು ಎಲ್ಲ ಅಂಗಡಿಗಳ ಬಾಗಿಲುಗಳೂ ತೆರೆದಿದ್ದವು. ತಕ್ಷಣ ನೆನಪಾಯಿತು. ನಾನು ಅಂದು ಬೆಳಗ್ಗೆಯಿಂದ ಏನೂ ತಿಂದಿರಲಿಲ್ಲ. ಸೂರ್ಯಗ್ರಹಣವನ್ನು ನೋಡುವ ಸಂಭ್ರಮದಲ್ಲಿ ನಿಜಕ್ಕೂ ನನಗೆ ಹಸಿವೆಯೇ ಆಗಿರಲಿಲ್ಲ!

ಗ್ರಹಣದ ದಿನ ಉಪವಾಸ ಮಾಡಬೇಕೆಂಬ ಸಂಪ್ರದಾಯ ಯಾಕೆ ಎಂದು ಹಲವಾರು ಬಾರಿ ಆಲೋಚಿಸಿದ್ದೇನೆ. ಉಪವಾಸ ಅಂದರೆ ಏನನ್ನೂ ತಿನ್ನದೆ ಹೊಟ್ಟೆಯನ್ನು ಖಾಲಿ ಕೆಡವುವುದು ಎನ್ನುವುದು ಸಾಮಾನ್ಯವಾಗಿ ನಾವೆಲ್ಲ ಅಂದುಕೊಂಡಿರುವ ಅರ್ಥ. ಆದರೆ ಈ ಪದದ ಅರ್ಥವಿಸ್ತಾರ ಬಹಳ ದೊಡ್ಡದು. ಉಪವಾಸ ಎಂದರೆ ಭಗವಂತನ ಜೊತೆ ವಾಸ ಮಾಡುವುದು ಎಂದರ್ಥ. ಭಗವಂತ ಎಂದರೆ ಯಾರು? ಆತ ಪರಮಸತ್ಯದ ಸಾಕಾರಮೂರ್ತಿ. ನನ್ನ ಪ್ರಕಾರ, ಸತ್ಯಾನ್ವೇಷಣೆಯಲ್ಲಿರುವ ಎಲ್ಲ ಜ್ಞಾನಿ-ವಿಜ್ಞಾನಿಗಳಿಗೂ ತಮ್ಮ ತಮ್ಮ ಅಧ್ಯಯನದಲ್ಲಿ ಹೆಚ್ಚು ಶ್ರದ್ಧೆ ಮತ್ತು ಆಸಕ್ತಿಯಿಂದ ತೊಡಗಿಸಿಕೊಳ್ಳುವುದೇ ಉಪವಾಸದ ಗುರಿ. ತಿಂಗಳ ಅಥವಾ ವರ್ಷದ ಕೆಲವು ವಿಶೇಷ ದಿನಗಳಂದು ಹೀಗೆ ಉಪವಾಸ ಮಾಡಿದರೆ ಒಬ್ಬ ವಿದ್ಯಾರ್ಥಿಯ ಬುದ್ಧಿ ಜಾಗೃತವಾಗುತ್ತದೆ, ಏಕಾಗ್ರತೆ ಹೆಚ್ಚುತ್ತದೆ ಎಂದು ನಾನಂದುಕೊಂಡಿದ್ದೇನೆ. ಇಂತಹ ಸಂದರ್ಭಗಳಲ್ಲಿ ಹೊಟ್ಟೆಯ ಪಾತ್ರ ಗೌಣ.

ಉಪವಾಸದ ಸಾರ್ವತ್ರಿಕ ಅರ್ಥಕ್ಕೆ ಮತ್ತೊಂದು ವಿವರಣೆಯನ್ನೂ ಕೊಡಬಹುದು. ನಾವು ಏನನ್ನೂ ತಿನ್ನದೆ ಹೊಟ್ಟೆ ಹಸಿದುಕೊಂಡಿದ್ದರೆ ಅಥವಾ ನಮ್ಮ ದೇಹಕ್ಕೆ ಪೂರಕವಾದ ಇಂಧನವನ್ನು ಸ್ವಲ್ಪ ಕಾಲ ಪೂರೈಸದೆ ಹೋದರೆ, ನಮ್ಮ ದೇಹ ಒಂದು ರೀತಿಯ ದಂಡನೆಗೆ ಒಳಗಾಗುತ್ತದೆ. ಹೀಗೆ ದಂಡನೆಗೊಳಗಾದ ಸಂದರ್ಭಗಳಲ್ಲಿ ದೇಹದಲ್ಲಿ ಹಲವಾರು ವಿಶೇಷ ರಾಸಾಯನಿಕ ದ್ರವ್ಯಗಳು ಸ್ರವಿಸಲ್ಪಡುತ್ತವೆ. ಇತ್ತೀಚೆಗೆ ವಿಜ್ಞಾನಿಗಳು ಈ ವಿಶೇಷ ರಾಸಾಯನಿಕ ಪದಾರ್ಥಗಳನ್ನು ಗುರುತಿಸಿದ್ದಾರೆ ಮತ್ತು ಅವುಗಳನ್ನು ಒಟ್ಟಾರೆ Anti-oxidants ಎಂದು ಕರೆಯುತ್ತಾರೆ. ಇವು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಕ್ಯಾನ್ಸರ್‌ನಂಥ ರೋಗಗಳನ್ನೂ ತಡೆಗಟ್ಟುವುದು ಎಂದು ವೈದ್ಯಕೀಯವಾಗಿ ಧೃಢಪಟ್ಟಿದೆ. ನನಗೆ ಅರಿವಿಲ್ಲದೆಯೇ ನಾನು ಆವತ್ತು ಉಪವಾಸ ಮಾಡಿದ್ದೆ!

ಅಂದು ರಾತ್ರಿ ಅಲ್ಲೇ ಒಂದು ಲಾಡ್ಜ್‌ನಲ್ಲಿ ಉಳಿದು ಮಾರನೆ ದಿನ ಮನೆಗೆ ಹಿಂದಿರುಗಿದೆ. ಸೂರ್ಯಗ್ರಹಣದ ಆ ಕ್ಷಣಗಳನ್ನು ಯಾವತ್ತೂ ಮರೆಯಲು ಅಸಾಧ್ಯ.

ಓದುಗರೆ, ಈ ಲೇಖನದೊಂದಿಗೆ ನೀವು ಕಾಣುವ ಚಿತ್ರಗಳು ನಾನು ಕ್ಯಾಮೆರಾದಿಂದ ತೆಗೆದ ಫೋಟೋಗಳಲ್ಲ. ಆಗ ನನ್ನ ಹತ್ತಿರ ಒಳ್ಳೆಯ ಕ್ಯಾಮೆರಾ ಇರಲಿಲ್ಲ. ಆದರೆ ಜನವರಿ ೧೫ರಂದು ರಾಮೇಶ್ವರದಲ್ಲಿ ಘಟಿಸಿದ ಕಂಕಣ ಸೂರ್ಯಗ್ರಹಣದ ಚಿತ್ರಗಳನ್ನು ನಾನೇ ತೆಗೆದಿದ್ದೇನೆ. ಮುಂದಿನ ವಾರ ಅದರ ಬಗ್ಗೆ ಸುದೀರ್ಘವಾಗಿ ಬರೆಯುವವನಿದ್ದೇನೆ.

ನಿಮ್ಮ ನಿಷ್ಪಕ್ಷ ಅಭಿಪ್ರಾಯಗಳನ್ನು ಸಂಕೋಚವಿಲ್ಲದೆ ತಿಳಿಸಿ. ಅಲ್ಲಿಯವರೆಗೆ,

ನಿಮ್ಮವ,

ನರಸಿಂಹನ್.