Tuesday, March 23, 2010

ಹಿರಿಹಿರಿ ಹಿಗ್ಗಿ ಹೀರೇಕಾಯಾದ ಹೋಮ್ಸ್!


ಹಿರಿಹಿರಿ ಹಿಗ್ಗಿ ಹೀರೇಕಾಯಾದ ಹೋಮ್ಸ್!

ಜಗದೀಶ ಲಾಯರು ನಮ್ಮಗೆಲ್ಲ ಆತ್ಮೀಯರು, ಅಲ್ಲದೆ ಕುಟುಂಬದ ಹಿತೈಷಿಗಳು. ಅವರ ತಂದೆ ರಾಮಮೂರ್ತಿ ಲಾಯರೂ ಕೂಡ ನನ್ನ ತಂದೆಗೆ ಬಹಳ ಬೇಕಾದವರು. ಹೀಗೆ ನಮ್ಮಿಬ್ಬರ ಕುಟುಂಬದ ಸದಸ್ಯರೆಲ್ಲರೂ ಒಬ್ಬರಿಗೊಬ್ಬರು ಚಿರಪರಿಚಿತರೇ! ಜಗದೀಶ ಲಾಯರ ಮಗ ನಿಖಿಲ್ ರಾಮಮೂರ್ತಿ ಲಾಯರ್‌ಗಿರಿ ಓದಿದ್ದರೂ ಅಪ್ಪನ-ಅಜ್ಜನ ವೃತ್ತಿ ಮುಂದುವರಿಸಲು ಸ್ವಲ್ಪ ಹಿಂದೇಟು ಹಾಕುತ್ತಿದ್ದಾನೆ. ಎಸ್ಟೇಟುಗಳ ಉಸ್ತುವಾರಿಯೂ ಇವನ ಹೆಗಲ ಮೇಲೇ ಇದೆ. ಆದರೆ ಅವನ ಪ್ರವೃತ್ತಿಗಳು ಹಲವಾರು. ಒಳಾವರಣ ವಿನ್ಯಾಸದ (Interior designing) ವಿಷಯವನ್ನು ಓದಿ ಅದನ್ನು ಹಲವಾರು ಕಡೆ ಕಾರ್ಯರೂಪಕ್ಕಿಳಿಸುವಲ್ಲಿ ಸಫಲನಾಗಿದ್ದಾನೆ.

ನಿಖಿಲ್‌ನ ಮತ್ತೊಂದು ಹವ್ಯಾಸ ಖಗೋಳ ವೀಕ್ಷಣೆ. ಅವನ ಅಕ್ಕ ಡಾ. ಅನುಪಮಾ ಅಮೆರಿಕಾದಲ್ಲಿ ವೈದ್ಯಳಾಗಿದ್ದಾಳೆ. ಈ ಹಿಂದೆ ಅವಳು ಭಾರತಕ್ಕೆ ಬರುವಾಗ ಅಲ್ಲಿಂದ ಒಂದು ದೂರದರ್ಶಕವನ್ನು ಅವನಿಗೆ ಉಡುಗೊರೆಯಾಗಿ ತಂದಿದ್ದಳು. ಅದನ್ನು ವಿಧಿವತ್ತಾಗಿ ಅಳವಡಿಸಿ ಪ್ರತಿಷ್ಠಾಪಿಸಲು ನನ್ನನ್ನು ಆಗಾಗ ಕರೆದ. ಆ ವೇಳೆಗೆ ಮಳೆಗಾಲವೂ ಪ್ರಾರಂಭವಾದ್ದರಿಂದ, ಹಾಗೂ ನನ್ನ ಸ್ವಾಭಾವಿಕ ಸೋಮಾರಿತನದ ಉಡಾಫೆಯಿಂದ ಹಲವು ತಿಂಗಳುಗಳ ಕಾಲ ಹೋಗಲೇ ಇಲ್ಲ. ಕೊನೆಗೊಂದು ದಿನ, ಅಕ್ಟೋಬರ್ ೨೯, ೨೦೦೭ರಂದು ರಾತ್ರಿ, ಅವರ ಮನೆಗೆ ಹೋದೆ. ಛಳಿಗೆ ಸ್ವೆಟರ್ರು, ತಲೆಗೆ ಉಲ್ಲನ್ ಟೋಪಿ ಸಹಿತವಾಗಿ ಹೋಗಿದ್ದು ನೋಡಿ ಲಾಯರು ನಕ್ಕರು, ‘ಏನ್ ಡಾಕ್ಟ್ರೆ, ಹೊಸ ಪೇಷೆಂಟನ್ನ ನೋಡೋಕೆ ಬೆಚ್ಚಗೆ ಬಂದಿದ್ದೀರಿ?’

ನಿಖಿಲ್ ತನ್ನ ಟೆಲಿಸ್ಕೋಪನ್ನು ಹೊರತಂದ. ಆಗಲೇ ಅದರ ಪಟ್ಟಾಭಿಷೇಕವಾಗಿತ್ತು. ನೋಡಿದೊಡನೆ ಅದೊಂದು ಬಹಳ ಸಾಧಾರಣವಾದ ದೂರದರ್ಶಕವೆಂಬುದು ತಿಳಿಯುತ್ತಿತ್ತು. ಏಕೆಂದರೆ, ಅದರಲ್ಲಿ ಎಲ್ಲವೂ ಇದೆ, ಆದರೆ ಯಾವುದೂ ನಿಖರವಾಗಿಲ್ಲ. ಆ ಕಡೆ ಇಂಥ ಟೆಲಿಸ್ಕೋಪುಗಳನ್ನು Trash Telescopes ಎಂದು ಕರೆಯುತ್ತಾರೆ. ಏನು ಕಾಣಿಸುವುದೋ ಅದನ್ನೇ ನೋಡಿ ಖುಷಿ ಪಡೋಣ ಎಂದು ಅಂಗಳದಲ್ಲಿ ಅದನ್ನು ನಿಲ್ಲಿಸಿ, ಕಣ್ಣಿಗೆ ಕಾಣುತ್ತಿದ್ದ ಚಂದ್ರನನ್ನು, ಕೆಲವು ನೀಹಾರಿಕೆಗಳನ್ನು, ನಕ್ಷತ್ರಪುಂಜಗಳನ್ನು ತೋರಿಸತೊಡಗಿದೆ. ಜಗದೀಶ ಲಾಯರ ಮನೆ ಸ್ವಲ್ಪ ತಗ್ಗಿನಲ್ಲಿರುವುದರಿಂದ ಹಾಗೂ ಎದುರುಗಡೆ ಮಲೆತಿರಿಕೆ ಬೆಟ್ಟವಿರುವುದರಿಂದ ಪೂರ್ವದಲ್ಲಿ ಎಲ್ಲವೂ ಅರ್ಧ ಘಂಟೆ ಲೇಟಾಗಿಯೇ ಕಂಡುಬರುತ್ತವೆ!

ವೇಳೆ ರಾತ್ರಿ ಒಂಭತ್ತೂವರೆ ಕಳೆದದ್ದರಿಂದ ಪಶ್ಚಿಮದಲ್ಲಿ ಮುಳುಗುತ್ತಿರುವ ಗುರುಗ್ರಹವನ್ನು ಬಿಟ್ಟರೆ ಇನ್ನಾವುದೇ ಗ್ರಹ ಆಕಾಶದಲ್ಲಿ ಕಾಣುತ್ತಿರಲಿಲ್ಲ. ಎಂಟು ಘಂಟೆಗೇ ಶುಕ್ರಗ್ರಹ ಮುಳುಗಿಯಾಗಿತ್ತು. ನೆತ್ತಿಯ ಹತ್ತಿರವಿದ್ದ ಅಂಡ್ರೋಮೆಡ ಬ್ರಹ್ಮಾಂಡವನ್ನು ನೋಡುವಷ್ಟರಲ್ಲಿ ಅವರೆಲ್ಲರ ಕುತೂಹಲ ಸಾಕಷ್ಟು ಮಾಯವಾಗಿತ್ತು. ಏಕೆಂದರೆ ಅದೂ ಕೂಡ ಆ ದೂರದರ್ಶಕದಲ್ಲಿ ಶೋಭಾಯಮಾನವಾಗೇನೂ ಕಾಣುತ್ತಿರಲಿಲ್ಲ. ನೇರವಾಗಿ ನನ್ನ ಬೈನಾಕ್ಯುಲರ್‌ನಲ್ಲಿ ತೋರಿಸಹೋದೆ. ಕತ್ತನ್ನು ಎತ್ತಿ ಎತ್ತಿ ಕತ್ತು ನೋವು ಬಂತು ಎಂದರು. ಪೂರ್ವದಲ್ಲಿ ಕೃತ್ತಿಕಾ ನಕ್ಷತ್ರಪುಂಜ ನೋಡಲು ಬಲು ಚಂದ. ಎಲ್ಲರೂ ನೋಡಿ ಸಂತೋಷಪಟ್ಟರು. ಹತ್ತೂಕಾಲರ ಹೊತ್ತಿಗೆ ಮಹಾವ್ಯಾಧ ಪೂರ್ವದಲ್ಲಿ ಕಾಣಿಸಿತು. ಬರಿ ಕಣ್ಣಿಗೆ ಕಾಣುವ ಒಂದೇ ನೀಹಾರಿಕೆ ಮಹಾವ್ಯಾಧನಲ್ಲಿದೆ ಎಂದು ವಿವರಿಸಿ ಅತ್ತ ದೂರದರ್ಶಕವನ್ನು ತಿರುಗಿಸಿದೆ. ಪುಣ್ಯಕ್ಕೆ ಶುಭ್ರವಾಗಿ ಕಾಣುತ್ತಿತ್ತು. ಒಟ್ಟಿನಲ್ಲಿ ಆವತ್ತು ಎಲ್ಲಕ್ಕಿಂತ ಚೆನ್ನಾಗಿ ಕಂಡದ್ದು ಕೃಷ್ಣಪಕ್ಷದ ಚೌತಿಯ ಚಂದ್ರ!

‘ಇನ್ನಾವುದೂ ಗ್ರಹ ಕಾಣೋದಿಲ್ಲವೆ?’ ಎಂದು ಲಾಯರು ಕೇಳಿದರು. ‘ಇಲ್ಲಾ ಸಾರ್, ಶನಿಗ್ರಹವನ್ನು ನೋಡಬೇಕಾದರೆ, ರಾತ್ರಿ ಮೂರು ಘಂಟೆಯವರೆಗೆ ಕಾಯಬೇಕು! ಉಳಿದವು, ಮಂಗಳ, ಶುಕ್ರ ಮತ್ತು ಬುಧ ಸಾಲಾಗಿ ಮುಂಜಾವಿಗೆ ಉದಯಿಸುತ್ತವೆ’, ಎಂದು ವಿವರಿಸಿದೆ. ‘ನಿನ್ನ ತಲೆ, ಈವತ್ತು ಯಾಕೆ ಬಂದೆ? ಎಲ್ಲ ಗ್ರಹಗಳೂ ಕಾಣೋ ದಿನ ಬಂದು ತೋರಿಸು. ಎಲ್ಲಾರೂ ನೋಡೋಣ’, ಎಂದು ತಲೆಯ ಮಂಕಿ ಟೋಪಿಯನ್ನು ತೆಗೆದು ಒಂದು ಸಾರಿ ಒದರಿದರು. ನಿಖಿಲ್‌ನ್ನು ವಾರೆಗಣ್ಣಲ್ಲಿ ನೋಡಿದೆ. ತಂದೆಗೆ ಕಾಣದಂತೆ ಅತ್ತ ತಿರುಗಿ ಮುಸಿಮುಸಿ ನಗುತ್ತಿದ್ದ.

ಇದ್ದಕ್ಕಿದ್ದಂತೆ ನನ್ನ ದೃಷ್ಟಿ ಉತ್ತರದ ಪರ್ಸಿಯಸ್ ನಕ್ಷತ್ರಪುಂಜದ ಕಡೆಗೆ ತಿರುಗಿತು. (ಭಾರತದ ಖಗೋಳಶಾಸ್ತ್ರಜ್ಞರು ಈ ತಾರಾಮಂಡಲವನ್ನು ‘ಪಾರ್ಥ’ ಎಂದು ಕರೆಯುತ್ತಾರೆ.) ಅಲ್ಲಿ ನಾನು ಯಾವತ್ತೂ ಕಂಡಿರದ ಒಂದು ವಿದ್ಯಮಾನ ಕಣ್ಣಿಗೆ ಬಿತ್ತು. ಅಲ್ಲಿ ದೊಡ್ಡದಾದ, ಉರುಟಾದ ಒಂದು ಆಕಾಶಕಾಯ ಬರಿಗಣ್ಣಿಗೇ ಎದ್ದು ತೋರುತ್ತಿತ್ತು. ಸಣ್ಣ ಮೋಡದ ತುಣುಕು ಇದ್ದಂತೆ! ಶುಭ್ರವಾದ ಆಕಾಶವಿರುವಾಗ ಮೋಡಕ್ಕೆಲ್ಲಿಯ ಅವಕಾಶ? ಮೊದಲು ಬೈನಾಕ್ಯುಲರ್‌ನಿಂದ ನೋಡಿದೆ. ಚಂದ್ರನ ಗಾತ್ರದ ಚೆಂಡು! ಮೋಡ ಎಲ್ಲಾದರೂ ಇಷ್ಟು ಉರುಟಾಗಿರುತ್ತದೆಯೇ? ಖಂಡಿತವಾಗಿಯೂ ಅದು ಮೋಡವಾಗಿರಲಿಲ್ಲ. ಬಹಳ ಆಶ್ಚರ್ಯವಾಗತೊಡಗಿತು. ಇವೆಲ್ಲಕಿಂತ ನನ್ನನ್ನು ಕಾಡಿದ ಪ್ರಶ್ನೆ, ಇಷ್ಟು ಹೊತ್ತು ಇದೆಲ್ಲಿತ್ತು? ಸುಮಾರು ಒಂದು ಘಂಟೆಯ ಆಕಾಶವೀಕ್ಷಣೆ ಮಾಡಿದ್ದೆವು. ಉತ್ತರದಲ್ಲಿ ಪಾರ್ಥ ಮಾತ್ರ ಏಕೆ, ಅವನೊಡನೆ ಅವನಮ್ಮ ಕುಂತಿ (Cassiopeia), ಅವನ ಅಣ್ಣ ಯುಧಿಷ್ಠಿರ (Cepheus), ಪತ್ನಿ ದ್ರೌಪದಿ (Andromeda), ಮಿಗಿಲಾಗಿ ಗೀತಾಚಾರ್ಯನಾದ ವಿಜಯಸಾರಥಿ (Auriga), ಹೀಗೆ ಇಡೀ ಸಂಸಾರವನ್ನೇ ನೋಡುತ್ತಿದ್ದ ನಮಗೆ ಇವರೆಲ್ಲರ ನಡುವೆ ದಿಢೀರನೆ ಇದೆಲ್ಲಿಂದ ಪ್ರತ್ಯಕ್ಷವಾಯಿತು? ನಿಖಿಲ್‌ಗೆ ಈ ಹೊಸ ಆಕಾಶಕಾಯವನ್ನು ತೋರಿಸಿದೆ. ಅವನಿಗೂ ಅಶ್ಚರ್ಯವಾಯಿತು. ಅವನೂ ಈವರೆಗೆ ಇಂತಹದ್ದೊಂದು ಗೋಳವನ್ನು ಕಂಡಿರಲಿಲ್ಲ.






ಟೆಲಿಸ್ಕೋಪನ್ನೇ ಅತ್ತ ಮುಖ ಮಾಡಿದೆವು. ಈಗ ಆ ವಿಚಿತ್ರಕಾಯ ಬೈನಾಕ್ಯುಲರ್‌ನಲ್ಲಿ ಕಂಡದ್ದಕ್ಕಿಂತ ಸ್ಪಷ್ಟವಾಗಿ ಕಾಣುತ್ತಿತ್ತು. ಅಲ್ಲದೆ ಆ ಸುಂದರವಾದ ಮೋಡದ ಚೆಂಡಿನ ದೇಹದೊಳಗಿಂದ ಅದರ ಹಿಂದೆ ಇದ್ದ ಎರಡು ನಕ್ಷತ್ರಗಳೂ ಗೋಚರಿಸುತ್ತಿದ್ದವು. ಅಂದರೆ, ಇದು ಯಾವುದೇ ಘನವಾದ ಆಕಾಶಕಾಯವಲ್ಲ. ಇದೇನಿರಬಹುದು? ಅಲ್ಲಿದ್ದ ಒಂದು ನಕ್ಷತ್ರ ಸ್ಫೋಟವಾಯಿತೇ? ಅಥವಾ ಅದೊಂದು ಧೂಮಕೇತುವೇ? ಆದರೆ ಹೀಗೆ ಇದ್ದಕ್ಕಿದ್ದಂತೆ ರಂಗಪ್ರವೇಶ ಮಾಡುವ ಕಾರಣವೇನು ಅಥವಾ ಉದ್ದೇಶವೇನು? ಮತ್ತೆ ಮತ್ತೆ ಹೊಸ ಪಾತ್ರಧಾರಿಯನ್ನೇ ನೋಡಿದೆವು. ನನಗಂತೂ ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಾಗುತ್ತಿತ್ತು. ಆಗಲೇ ಇರುಳು ಹನ್ನೊಂದಾಗಿತ್ತು. ಹೊಸ ಆಕಾಶಕಾಯದ ಬಗ್ಗೆಯೇ ಆಲೋಚಿಸುತ್ತ ನೇರವಾಗಿ ಮನೆಗೆ ಬಂದೆ.

ಬಂದೊಡನೆ ನನ್ನ ಹೆಂಡತಿ, ಪುಷ್ಪಾಳನ್ನು ಕರೆದು ಹೊಸ ಮಿತ್ರನನ್ನು ತೋರಿಸಿದೆ. ಆಶ್ಚರ್ಯದಿಂದ ನೋಡಿದಳು. ಈ ಸರಿರಾತ್ರಿಯಲ್ಲಿ ಯಾರಿಗೆ ಹೇಳುವುದು, ಇನ್ನಾರಿಗೆ ತೋರಿಸುವುದು? ‘ಮೈಸೂರಿನ ನಿಮ್ಮ ಗುರುಗಳೇ ಇದ್ದಾರಲ್ಲ, ಪ್ರೊ. ಜಿ. ಟಿ. ನಾರಾಯಣ ರಾವ್, ಅವರಿಗೇ ಫೋನ್ ಮಾಡಿ ಹೇಳಿ’ ಎಂದು ಸಲಹೆಯಿತ್ತಳು. ‘ಇಷ್ಟು ಹೊತ್ತಿಗೆ ಅವರು ನಿದ್ದೆ ಮಾಡುತ್ತಿರುವುದಿಲ್ಲವೆ?’ ಎಂದೆ. ‘ಏನಾದರಾಗಲಿ, ಅವರ ಮನೆಯಲ್ಲಿಯೇ ಯಾರಿಗಾದರೂ ಹೇಳಿದರೆ, ಪ್ರೊಫೆಸರ್ರು ಎದ್ದ ಮೇಲೆ ತಿಳಿಸುತ್ತಾರೆ,’ ಎಂದು ಒತ್ತಾಯಿಸಿದಳು. ನೇರವಾಗಿ ಪ್ರೊ. ಜಿಟಿಎನ್‌ರವರ ಮನೆಗೆ ರಿಂಗಿಸಿದೆ. ಆ ಕಡೆ ಅವರ ಸೊಸೆ ಫೋನ್ ಸ್ವೀಕರಿಸಿದ್ದರು. ಅವರಿಗೆ ಮೊದಲು ನನ್ನ ಪ್ರವರ ಅರ್ಪಿಸಿದೆ. ಹೀಗೆ, ನಾನು ವೀರಾಜಪೇಟೆಯ ಡಾ. ನರಸಿಂಹನ್, ಹವ್ಯಾಸಿ ಖಗೋಳ ವೀಕ್ಷಕ, ಪ್ರೊಫೆಸರ್ ಜಿಟಿಎನ್‌ರವರಿಗೆ ನನ್ನ ಪರಿಚಯವಿದೆ, ಹೀಗೊಂದು ಹೊಸ ಆಕಾಶಕಾಯ ಆಕಾಶದಲ್ಲಿ ಕಾಣಿಸುತ್ತಿದೆ, ಅದು ಪರ್ಸಿಯಸ್ ನಕ್ಷತ್ರಪುಂಜದ ಡೆಲ್ಟಾ(δ) ಮತ್ತು ಆಲ್ಫಾ(α)ಗಳ ನಡುವೆ ಕೆಳಭಾಗದಲ್ಲಿ ಗೋಚರಿಸುತ್ತಿದೆ, ಅದು ಏನು ಎಂದು ದಯವಿಟ್ಟು ಪ್ರೊಫೆಸರ್ ಸಾಹೇಬರ ಹತ್ತಿರ ವಿಚಾರಿಸಬೇಕು, ನಾಳೆ ನಾನೇ ಅವರಿಗೆ ಪುನಃ ಕರೆನೀಡುತ್ತೇನೆ.

ಒಂದು ದೊಡ್ಡ ಕೆಲಸ ಮುಗಿಯಿತು. ಮುಂದೇನು? ಫೋಟೋ ತೆಗೆಯೋಣವೆಂದರೆ, ನನ್ನ ಬಳಿ ಅಷ್ಟು ಶಕ್ತಿಯುತವಾದ ಕ್ಯಾಮೆರಾ ಇರಲಿಲ್ಲ. ಗೆಳೆಯ ಡಾ. ಬಿಶನ್ ಹತ್ತಿರವೇನೋ ಇದೆ, ಆದರೆ ಈ ಸರಿರಾತ್ರಿಯಲ್ಲಿ ಅವನಿಗೆ ಹೇಗೆ ಹೇಳುವುದು? ಖಗೋಳ ವೀಕ್ಷಣೆ ರಾತ್ರಿಯಲ್ಲದೆ ಹಗಲು ಮಾಡುತ್ತಾರೇನು, ಎಂದು ನನಗೆ ನಾನೇ ಸಮಜಾಯಿಷಿ ಹೇಳಿಕೊಂಡು ಫೋನಲ್ಲಿ ಬಿಶನ್‌ಗೆ ವಿಷಯ ತಿಳಿಸಿದೆ. ತಕ್ಷಣ ಅವನು ‘ನಾನೀಗಲೇ ಅಲ್ಲಿಗೆ ಬರುತ್ತೇನೆ’ ಎಂದು ತನ್ನ ಎಲ್ಲ ಕ್ಯಾಮೆರಾ ಸಾಮಗ್ರಿಗಳೊಂದಿಗೆ ಹಾಜರಾದ. ನಮ್ಮ ಮನೆಯ ತಾರಸಿಯ ಮೇಲೆ ಹೋಗಿ ಫೋಟೊ ತೆಗೆಯಲು ಪ್ರಯತ್ನಿಸಿದೆವು. ಆ ದಿಕ್ಕಿನಲ್ಲಿ ಭಯಂಕರವಾದ ಒಂದು ಸೋಡಿಯಂ ದೀಪ ಆ ಭಾಗದ ಆಕಾಶವನ್ನೇ ಮಬ್ಬು ಮಾಡಿಬಿಟ್ಟಿತ್ತು. ಈ ಪಂಚಾಯಿತಿಯವರು ಹಾದಿದೀಪಗಳನ್ನು ರಸ್ತೆ ಕಾಣಲು ಹಾಕಿರುತ್ತಾರೋ ಅಥವಾ ಆಕಾಶ ನೋಡಲು ನೆಟ್ಟಿರುತ್ತಾರೋ ಎಂಬ ಸಂಶಯ ಬಂತು!

ಬಿಶನ್, ‘ಇಲ್ಲಿ ಬೇಡ, ನಮ್ಮ ಮನೆಯ ಮೇಲೆ ಹೀಗೆ ಬೆಳಕಿಲ್ಲ, ಅಲ್ಲಿಗೇ ಹೋಗೋಣ’ ಎಂದ. ಹೇಗಾದರೂ ಮಾಡಿ ಆ ಆಕಾಶಕಾಯವನ್ನು ಸೆರೆಹಿಡಿಯಬೇಕೆಂದು ತೀರ್ಮಾನಿಸಿದ್ದೆವು. ನನ್ನ ಚಡಪಡಿಕೆ ನೋಡಿ ನನ್ನವಳಿಗೆ ಒಳಗೊಳಗೇ ನಗು! ‘ಇದ್ಯಾಕೆ ಹೀಗೆ ಮೈ ಮೇಲೆ ಜಿರಳೆ ಬಿಟ್ಟುಕೊಂಡವರಂತೆ ಆಡುತ್ತಿದ್ದೀರ? ಅವನೊಂದಿಗೆ ಹೋಗಿ ಅದೇನು ಚಿತ್ರ ಬೇಕೋ ತೆಗೆದುಕೊಂಡು ಬನ್ನಿ. ಒಟ್ಟಿನಲ್ಲಿ ನಿಮ್ಮ ಈ ಆಕಾಶಶಾಸ್ತ್ರದಿಂದ ನನ್ನ ನಿದ್ದೆ ಹಾಳಾಯಿತು!’ ಅವಳು ಹೇಳುವುದೂ ಸರಿ. ಬೆಳಿಗ್ಗೆ ಐದು ಘಂಟೆಗೆ ಎದ್ದರೆ, ರಾತ್ರಿ ಹನ್ನೊಂದರವರೆಗೂ ಒಂದೇ ಸಮನೆ ಕೆಲಸ ಮಾಡುವ ವರ್ಕೋಹಾಲಿಕ್ ಅವಳು. ನಾನಾದರೋ ರಾತ್ರಿ ಗಡದ್ದಾಗಿ ನಿದ್ದೆ ಮಾಡುವುದಲ್ಲದೆ, ಹಗಲಲ್ಲೂ ಸಮಯ ಸಿಕ್ಕಾಗಲೆಲ್ಲ ಒಂದೊಂದು ಗೊರಕೆ ಹೊಡೆದುಬಿಡುವವನು!

ಉಟ್ಟ ಪಂಚೆಯಲ್ಲೇ ಬಿಶನ್ ಮನೆಗೆ ಹೋದೆ. ಅಲ್ಲಿಯೂ ಡಿಟ್ಟೋ! ಅವನ ಹೆಂಡತಿಗೂ ನನ್ನವಳದ್ದೇ ಪರಿಸ್ಥಿತಿ. ಅವಳೂ ವೈದ್ಯೆ, ಅರಿವಳಿಕೆ ತಜ್ಞೆ. ಹಗಲೂ-ರಾತ್ರಿ ಆಸ್ಪತ್ರೆಗಳಲ್ಲಿ ಕರೆ ಬಂದಾಗಲೆಲ್ಲ ಹೋಗಿ ದುಡಿಯುತ್ತಾಳೆ. ಒಂದು ವ್ಯತ್ಯಾಸವೆಂದರೆ, ಅವಳು ಈ ವಿಷಯದಲ್ಲಿ ತೋರಿದ ಅಪ್ರತಿಮ ನಿರ್ಲಿಪ್ತತೆ! ನಾವು ಹೋದೊಡನೆ ಬಾಗಿಲು ತೆರೆದ ತಕ್ಷಣ ನಾವು ಯಾವುದೋ ಬಹು ದೊಡ್ಡ, ಗಹನವಾದ ವಿಚಾರದಲ್ಲಿ ಮಗ್ನರಾಗಿದ್ದೇವೆಂದು ನಮ್ಮಿಬ್ಬರ ಮುಖಭಾವದಿಂದಲೇ ಅರಿತು ‘ಹಲೋ!’ ಎಂದವಳೇ ಒಳನಡೆದುಬಿಟ್ಟಳು!

ನಾವು ಮಹಡಿ ಹತ್ತಿ ತಾರಸಿಗೆ ಬಂದೆವು. ಉತ್ತರದಲ್ಲಿ ಇನ್ನೂ ಆ ಖಗೋಳ ವೈಚಿತ್ರ್ಯ ಕಾಣುತ್ತಲೇ ಇತ್ತು. ಕ್ಯಾಮೆರಾವನ್ನು ಜೋಡಿಸಿದವನೆ ಬಿಶನ್ ಹಲವಾರು ಫೋಟೋಗಳನ್ನು ತೆಗೆದ. ಅಲ್ಲಿಂದ ಆ ಫೋಟೋಗಳನ್ನು ಕಂಪ್ಯೂಟರ್‌ನಲ್ಲಿಯೇ ನೋಡಬೇಕು. ಅರ್ಧ ತಾಸಿನಲ್ಲಿ ನಾವಿಬ್ಬರೂ ಕಂಪ್ಯೂಟರ್‌ಗೆ ಆ ಫೋಟೋಗಳನ್ನು ರವಾನಿಸಿ ನೋಡಿದೆವು. ಈ ಹಿಂದೆ ಟೆಲಿಸ್ಕೋಪ್‌ನಲ್ಲಿ ಕಂಡದ್ದಕ್ಕಿಂತ ಸ್ಫುಟವಾಗಿ ಕಾಣಿಸಿತು. ಅಂತರ್ಜಾಲದಲ್ಲಿ ಏನಾದರೂ ವಿವರ ಸಿಕ್ಕಬಹುದೆಂದು ನಾಲ್ಕಾರು ಜಾಲತಾಣಗಳಲ್ಲಿ ಪಾರ್ಥನನ್ನು ನೊಡಕಾಡಿದೆವು. ಎಲ್ಲಿಯೂ ಈ ಆಕಾಶಕಾಯದ ಬಗ್ಗೆ ಒಂದಿಷ್ಟೂ ಮಾಹಿತಿಯಿರಲಿಲ್ಲ. ಎಲ್ಲ ಚಿತ್ರಗಳಲ್ಲಿಯೂ ಪರ್ಸಿಯಸ್‌ನ δ ಮತ್ತು α ನಡುವೆ ಮತ್ತು ಅವುಗಳ ಕೆಳಗೆ ಖಾಲಿ ಖಾಲಿ! ಹಾಗಾದರೆ ನಾವು ಆ ಜಾಗದಲ್ಲಿ ಕಾಣುತ್ತಿರುವುದೇನು? ಪುನಃ ಪುನಃ ಹೊರಗೆ ಹೋಗಿ ಅದು ಅಲ್ಲಿಯೇ ಇದೆಯೇ ಅಥವಾ ಪ್ರತ್ಯಕ್ಷವಾದ ಹಾಗೇ ಮಾಯವಾಗಿ ಹೋಯಿತೇ ಎಂದು ಧೃಢಪಡಿಸಿಕೊಳ್ಳುತ್ತಿದ್ದೆ! ಕೊನೆಗೆ ಏನೂ ತೋಚದೆ ಮನೆಗೆ ಹಿಂದಿರುಗಿದೆ.

ನಡುರಾತ್ರಿ ಒಂದೂಮುಕ್ಕಾಲು ಆಗಿತ್ತು. ನನ್ನ ಹೆಂಡತಿಯೂ ಆ ವೇಳೆಗೆ ಒಂದಿಬ್ಬರಿಗೆ ಈ ವಿಷಯವನ್ನು ಹೇಳಿಯಾಗಿತ್ತು. ಮೈಸೂರಿನಲ್ಲಿ ನನ್ನ ತಂಗಿ-ಭಾವನನ್ನು ಮನೆಯ ಹೊರಗೆಳೆದು ಫೋನಿನಲ್ಲಿಯೇ ನಮ್ಮ ಹೊಸ ಮಿತ್ರ ಅಂತರಿಕ್ಷದಲ್ಲಿ ಎಲ್ಲಿ, ಯಾವ ದಿಕ್ಕಿನಲ್ಲಿ, ಯಾವ ನಕ್ಷತ್ರದ ಹತ್ತಿರ ಕಾಣಿಸುತ್ತಾನೆ, ಮುಂತಾದ ವಿವರ ನೀಡುತ್ತಿದ್ದಳು. ಹಗಲು ಕಳೆದ ಮೇಲೆ, ನಾಳೆ ರಾತ್ರಿ ಅದು ಆಕಾಶದಲ್ಲಿಯೇ ಇರುತ್ತದೆಯೋ ಇಲ್ಲವೋ ಎಂಬ ದಿಗಿಲು. ಬೆಳಿಗ್ಗೆ ಎದ್ದೊಡನೆ ಮೊದಲ ಕೆಲಸ, ಪ್ರೊ. ಜಿಟಿಎನ್‌ರವರಿಗೆ ಫೋನ್ ಮಾಡುವುದು, ಎಂದುಕೊಂಡೆ. ಆ ಇಡೀ ರಾತ್ರಿ ನಿದ್ದೆಗೆಟ್ಟಿದ್ದಂತೂ ನಿಜ.

ಮುಂಜಾವು ಏಳು ಘಂಟೆಗೆ ಸರಿಯಾಗಿ ಫೋನ್ ರಿಂಗಿಸಿತು. ನೋಡಿದರೆ, ಪ್ರೊ. ಜಿಟಿಎನ್‌ರವರೇ ನನಗೆ ಕರೆ ಮಾಡಿದ್ದಾರೆ! ‘ನಿಮ್ಮ ಟೆಲಿಫೋನ್ ಕರೆಯ ವಿಚಾರ ರಾತ್ರಿಯೇ ನನ್ನ ಸೊಸೆ ಹೇಳಿದ್ದಾಳೆ, ನಾನು ಈಗೆಲ್ಲ ಮುಂಚಿನಂತೆ ನಡುರಾತ್ರಿಯಲ್ಲಿ ಹೊರಗೆ ಹೋಗಿ ಆಕಾಶವನ್ನು ನೋಡುವ ಸ್ಥಿತಿಯಲ್ಲಿಲ್ಲ. ನಿಮಗೆ ಇಷ್ಟರಲ್ಲಿಯೇ ನಮ್ಮವರೇ ಆದ ಪ್ರೊ. ಎಸ್. ಎನ್. ಪ್ರಸಾದ್ ಎಂಬುವವರು ವಿವರಗಳನ್ನು ನೀಡುತ್ತಾರೆ’, ಎಂದಿಷ್ಟು ಹೇಳಿ ಫೋನ್ ಇಟ್ಟರು. ಯಾರಿದು ಪ್ರೊ. ಪ್ರಸಾದ್ ಎಂದು ಅಂದುಕೊಳ್ಳುವಷ್ಟರಲ್ಲೇ ಪುನಃ ದೂರವಾಣಿ ಕರೆ ಬಂತು. ಈಗ ಪ್ರೊಫೆಸರ್ ಎಸ್. ಎನ್. ಪ್ರಸಾದ್ ಎಂಬುವವರೇ ನನ್ನೊಡನೆ ಮಾತನಾಡಿದರು. ಅವರು ಹೇಳಿದ ಮತ್ತು ನಂತರ ನಾನು ಸಂಗ್ರಹಿಸಿದ ವಿವರಗಳು:



ಅಂತರಿಕ್ಷದಲ್ಲಿ ಅನಿರೀಕ್ಷಿತವಾಗಿ ನಾವು ಕಂಡ ಈ ಖಗೋಳ ಕೌತುಕದ ಹೆಸರು, ಹೋಮ್ಸ್ 17p. ಇದೊಂದು ಧೂಮಕೇತು. ಇದು ಮೊಟ್ಟಮೊದಲು ಕಂಡದ್ದು ೧೮೯೨ ನವೆಂಬರ್ ೬ರಂದು. ೬.೮೮ ವರ್ಷಕ್ಕೊಂದು ಬಾರಿ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುವ ಈ ಧೂಮಕೇತು ಸುತ್ತುವ ಪಥ ಮತ್ತು ಈ ಧೂಮಕೇತುವಿನ ಸ್ವಭಾವ ಎಲ್ಲವೂ ಅನಿರ್ದಿಷ್ಟ. ೧೯೦೬ ಮತ್ತು ೧೯೬೪ರ ನಡುವೆ ಇದು ಯಾರ ಕಣ್ಣಿಗೂ ಬಿದ್ದಿರಲೇ ಇಲ್ಲ. ೧೯೬೪ರ ಜುಲೈ ೧೬ರರ ನಂತರ ಪ್ರತಿ ಸಾರಿಯೂ ಹೋಮ್ಸ್‌ನ್ನು ಖಗೋಳ ಶಾಸ್ತ್ರಿಗಳು ಬೆನ್ನು ಹತ್ತುತ್ತಲೇ ಬಂದಿದ್ದಾರೆ. ಈ ಬಾರಿಯೂ ಹೋಮ್ಸ್‌ನ್ನು ಮೇ ೨೦೦೭ರಿಂದಲೇ ಪ್ರಬಲವಾದ ದೂರದರ್ಶಕಗಳ ಮೂಲಕ ಅನುಸರಿಸಿಕೊಂಡು ಬರಲಾಗಿತ್ತು. ಅಕ್ಟೋಬರ್ ೨೪ರವರೆಗೂ ಅದೊಂದು ಕೇವಲ ಖಗೋಳಿಗಳ ಸ್ವತ್ತಾಗಿತ್ತು. ಒಂದು ವ್ಯತ್ಯಾಸವೇನೆಂದರೆ, ಸಾಮಾನ್ಯವಾಗಿ ಧೂಮಕೇತುಗಳಿಗೆ ಬಾಲವಿರುತ್ತದೆ, ಆದರೆ ಹೋಮ್ಸ್‌ಗೆ ಅಂತಹ ಬಾಲವಿರಲಿಲ್ಲ. ಆದರೆ, ಅಲ್ಲಿಯವರೆಗೂ ಸರ್ವೇ ಸಾಧಾರಣ, ದೂರದರ್ಶಕಗಳಿಗೇ ಮೀಸಲಾಗಿದ್ದ ಧೂಮಕೇತು ಹೋಮ್ಸ್ ಇದ್ದಕ್ಕಿದ್ದಂತೆ ೨೪ರಂದು ಉನ್ಮಾದದಿಂದ ಅತಿವೇಗವಾಗಿ ಹಿಗ್ಗತೊಡಗಿತು. ಹಲವೇ ಘಂಟೆಗಳಲ್ಲಿ ೧೦ ಲಕ್ಷ ಪಟ್ಟು ಹಿಗ್ಗಿದೆ ಎಂದರೆ ಆ ವೇಗವನ್ನು ಊಹಿಸಿಕೊಳ್ಳಿ! ಹಾಗೆ ನೋಡಿದರೆ ಅದು ಆ ಸಮಯದಲ್ಲಿ ಸೂರ್ಯನಿಗಾಗಲಿ, ಭೂಮಿಗಾಗಲೀ ಬಹಳ ಹತ್ತಿರವೇನೂ ಇರಲಿಲ್ಲ. ೨೮ರವರೆಗೂ ಪರ್ಸಿಯಸ್ ನಕ್ಷತ್ರಪುಂಜದ ಬಳಿ ಒಂದು ನಕ್ಷತ್ರದ ಗಾತ್ರದಲ್ಲಿ ಕಂಡ ಹೋಮ್ಸ್, ಅಲ್ಲಿಂದಾಚೆಗೆ ಒಂದೇ ದಿನದಲ್ಲಿ ಧೂಮಕೇತುವಿನ ಸ್ವರೂಪ ಪಡೆದು ಒಂದು ಮೋಡದ ಉಂಡೆಯಂತೆ ನಮಗೆ ಕಾಣಿಸಿತ್ತು.

ಹೀಗೆ ಒಂದು ಧೂಮಕೇತುವಿಗೆ ಪಿತ್ತ ಕೆರಳುವುದೇಕೆ ಎಂಬ ಪ್ರಶ್ನೆಗೆ ವಿಜ್ಞಾನಿಗಳಲ್ಲಿ ಈವರೆಗೆ ಉತ್ತರವಿಲ್ಲ. ಬಹುಶಃ ಮೊದಲ ಬಾರಿಗೆ ಹೋಮ್ಸ್ ಎಂಬ ಖಗೋಳಿ ಇದನ್ನು ಕಂಡಾಗಲೂ ಈ ಧೂಮಕೇತು ಹೀಗೇ ಹಿಗ್ಗಿ ಹೀರೇಕಾಯಾಗಿತ್ತು ಎಂದು ವಿಜ್ಞಾನಿಗಳ ಅಂಬೋಣ. ಹೋಮ್ಸ್ ೧೭ಪಿ ನಾವು ನೋಡಿದ ನಂತರದ ರಾತ್ರಿಗಳಲ್ಲಿ ಬರಬರುತ್ತ α ಪಾರ್ಥದ ಕಡೆಗೆ ಚಲಿಸಿ ಹಾಗೇ ಮೋಡದ ಉಂಡೆ ವಿರಳವಾಗುತ್ತಾ ಹಾಗೇ ನಭದಲ್ಲಿ ಲೀನವಾಗಿಹೋಯಿತು. ಇನ್ನೊಮ್ಮೆ ನಮ್ಮ-ಅದರ ಭೇಟಿ ಆರೂಮುಕ್ಕಾಲು ವರ್ಷಗಳ ನಂತರ!

ಪ್ರೊ. ಪ್ರಸಾದ್‌ರವರು ಕೊನೆಗೊಂದು ಮಾತು ಹೇಳಿದರು: ಪ್ರೊ. ಜಿಟಿಎನ್‌ರವರು ನಿಮ್ಮ ಬಗ್ಗೆ ತುಂಬಾ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಆಕಾಶದಲ್ಲಿ ಸಂಭವಿಸುವ ಇಂತಹ ಒಂದು ವಿದ್ಯಮಾನ ನಿಮ್ಮ ಕಣ್ಣಿಗೆ ಮೊದಲ ಬಾರಿಗೆ ಬಿದ್ದಿದೆ ಎಂದರೆ ನೀವು ತುಂಬಾ ಅದೃಷ್ಟವಂತರು! ‘ಆದರೆ ಈಗಾಗಲೇ ಈ ಧೂಮಕೇತುವಿನ ಬಗ್ಗೆ ಸಾಕಷ್ಟು ಮಾಹಿತಿ ದೊರಕಿದೆ, ನಾನು ಇದನ್ನು ಕಂಡ ಮೊದಲಿಗನಲ್ಲವಲ್ಲ’, ಎಂದು ಕೇಳಿದೆ. ಅದಕ್ಕವರು, ‘ಈ ಧೂಮಕೇತುವನ್ನು ನಾವೆಲ್ಲ ಕೇಳಿ, ಓದಿದ ನಂತರ ನೋಡಿದೆವು, ಆದರೆ ನೀವು ಸ್ವತಃ ಮೊದಲ ಬಾರಿ ಕಂಡಿದ್ದೀರಿ! ನಮಗೆ ಆ ಯೋಗ ದೊರಕಲಿಲ್ಲವಲ್ಲ!’

ಎಂತಹ ನಿಷ್ಕಪಟ ಮಾತು!

ಈ ಪ್ರಕರಣದ ನಂತರ ನಾನು ಬಹಳಷ್ಟು ಆಲೋಚಿಸಿದ್ದೇನೆ. ನಕ್ಷತ್ರಲೋಕದ ಅದ್ಭುತಗಳೆಡೆಗೆ ನಮ್ಮಲ್ಲಿ ಆಸಕ್ತಿ ಮೂಡಿಸಿ, ಆಕಾಶಕ್ಕೆ ಏಣಿ ಹಾಕಿಕೊಟ್ಟ ಮಹಾತ್ಮ ಪ್ರೊ. ಜಿಟಿಎನ್‌ರವರು! ತನ್ನ ಅನಾರೋಗ್ಯವನ್ನೂ ಮರೆತು, ಆ ಅಪರಾತ್ರಿಯಲ್ಲಿ ಆಗಿಂದಾಗಲೇ ಮೈಸೂರಿನ ಕನಿಷ್ಠ ನಾಲ್ಕಾರು ಮಂದಿಯನ್ನು ಎಬ್ಬಿಸಿ ಅವರ ನಿದ್ದೆಗೆಡಿಸಿ ಅವರಿಗೆ ಕೆಲಸ ಹಚ್ಚಿದ್ದರಲ್ಲ, ಆ ಇಳಿವಯಸ್ಸಿನಲ್ಲಿಯೂ ಅವರ ಜೀವನೋತ್ಸಾಹ ಎಂಥದ್ದು! ಒಬ್ಬ ವ್ಯಕ್ತಿಯ ಕನಿಷ್ಠ ಪ್ರತಿಭೆಯನ್ನೂ ಗುರುತಿಸಿ, ಅದನ್ನು ಇನ್ನೊಬ್ಬರಲ್ಲಿ ವೈಭವೀಕರಿಸಿ ಹೇಳಿ, ಆ ಮೂಲಕ ಆ ವ್ಯಕ್ತಿಯ ಔನ್ನತ್ಯಕ್ಕೆ ಪ್ರೇರೇಪಿಸುವ, ಪ್ರೋತ್ಸಾಹಿಸುವ ಮಹಾನುಭಾವರೊಬ್ಬರಿದ್ದಾರೆಂದರೆ, ಖಂಡಿತವಾಗಿಯೂ ಅವರು ನಮ್ಮ ಜಿಟಿಎನ್ ಒಬ್ಬರೆ. ಇದು ಕೂಪಮಂಡೂಕದಂತೆ ಯಾವುದೋ ಸಣ್ಣ ಊರಿನಲ್ಲಿ ಜೀವನ ಸಾಗಿಸುತ್ತಿರುವ ನನ್ನೊಬ್ಬನ ಅನುಭವವಾಗಿರಲಾರದು. ಈ ಪ್ರಕರಣದ ಮೂಲಕ ಪ್ರಾತಃಸ್ಮರಣೀಯರಾದ ಪ್ರೊ. ಜಿ. ಟಿ. ನಾರಾಯಣರಾಯರಿಂದ ನನಗಾದ ಮತ್ತೊಂದು ಬಹು ದೊಡ್ಡ ಲಾಭ, ಮತ್ತೊಬ್ಬ ಸಹೃದಯಿ, ಪ್ರೊ. ಎಸ್. ಎನ್. ಪ್ರಸಾದರ ಪರಿಚಯ! ಬಾಳನ್ನು ಸಂಭ್ರಮಿಸಲು ಇದಕ್ಕಿಂತ ಕಾರಣಗಳು ಬೇಕೆ?