ಸೂರ್ಯಗ್ರಹಣದ ದಿವ್ಯಾನುಭವದ ಎರಡು ಕಂತುಗಳ್ನ ನನ್ನ ಬ್ಲಾಗ್‌ನಲ್ಲಿ ಓದಿದ ತುಂಬಾ ಸ್ನೇಹಿತ್ರು ಅವರಿಗೇನನ್ನಿಸಿತೋ ಅದನ್ನು ಇಂಚೆಯ ಮೂಲಕ ಹಂಚ್ಕೊಂಡಿದ್ದಾರೆ. ಹೆಚ್ಚಿನವ್ರು ಕಾಮೆಂಟ್ಸ್‌ನಲ್ಲಿ ಬರೆಯದೆ, ಸಪರೇಟಾಗಿ ಮೇಲ್ ಮಾಡಿ ಬರ್ದಿದಾರೆ. ಒಬ್ರಂತೂ ‘ಬಾಳಾ ಚೆನ್ನಾಗಿದೆ, ಇದ್ನೇ ಇಂಗ್ಲಿಷ್‌ನಲ್ಲಿ ಬರ್ದ್ರೆ ಇನ್ನೂ ತುಂಬಾ ಜನ ಓದ್ಬೋದು’ ಅಂದ್ರು. ವಿಜ್ಞಾನದ ವಿಚಾರಗಳ್ನ ಇಂಗ್ಲೀಷ್‌ನಲ್ಲಿ ಬರ್ಯೋ ಜನ ತುಂಬಾ ಇದಾರೆ; ಎಲ್ಲಾರಿಗೂ ಅರ್ಥ ಆಗೋ ಹಾಗೆ ಕನ್ನಡದಲ್ಲಿ ಬರೆಯೋವ್ರೆಷ್ಟು? ಪ್ರೊ. ಜಿಟಿಎನ್ ಅದನ್ನೇ ಅಲ್ವೆ ನಮಗೆ ಹೇಳಿಕೊಟ್ಟಿದ್ದು? ಹಾಗೇಂತ ನಾನು ಬರೆದ್ರೆ ನನ್ನ ಇಂಗ್ಲಿಷ್ ಓದೋಕೆ ನೀವು ರೆಡೀನಾ? ಅಂತ ಬೆದರಿಸ್ದೆ! ನೀವೇನೇ ಹೇಳಿ, ನಮ್ಮ ನಮ್ಮ ಮನಸ್ಸಿನಾಳದಲ್ಲಿರೋ ಅನುಭವಗಳನ್ನ ಹೇಳೋಕೆ ನಮ್ಮ ಭಾಷೇನೇ ಸರಿ. ಏನಂತೀರಾ?
ಎಲ್ಲರೂ ಹೀಗೆ ವ್ಹಾ! ವ್ಹೂ! ಆಹಾ! ಅಂತ ನನ್ನ ಮೇಲಕ್ಕೆ ಹತ್ತಿಸ್ತಾ ಇದ್ದರೆ, ಇದ್ದಕ್ಕಿದ್ದ್‌ಹಾಗೆ ಒಂದು ಲೆಟರ್ ಬಂತೂ ನೋಡಿ, ಸ್ವರ್ಗದಲ್ಲಿ ತೇಲಾಡ್ತಿದ್ದ ನನ್ನ ನೇರವಾಗಿ ಭೂಮೀಗೇ ಎಳಕೊಂಡು ಬಂತು. ಪ್ಯಾರಾಚೂಟ್ ಇಲ್ಲದೆ ಏರೋಪ್ಲೇನ್‌ನಿಂದ ಇಳಿದ್ರೆ ಏನಾಗತ್ತೆ ಅಂತ ನೀವು ಕೇಳಿರ್ಬೋದು, ಆದ್ರೆ ನಂಗೆ ಆವತ್ತು ನಿಜ್ವಾದ ಅನುಭವ ಆಯ್ತು! ಆ ಪತ್ರ ಬರ್ದಿದ್ದು ಪ್ರೊ. ಎಸ್. ಎನ್. ಪ್ರಸಾದ್ ಅಂತ ಮೈಸೂರಿನ ಭೌತಶಾಸ್ತ್ರಜ್ಞರು. ಇವ್ರ ವಿಚಾರಾನ ಮೊದ್ಲು ಹೇಳಿ ಬಿಡ್ತೀನಿ, ಕೇಳಿ:
Dr. ಎಸ್. ಎನ್. ಪ್ರಸಾದ್. ಇವರು ನಿವೃತ್ತ ಭೌತಶಾಸ್ತ್ರದ ಉಪನ್ಯಾಸಕರು ಮತ್ತು ಮೈಸೂರಿನ NCERTಯ ನಿವೃತ್ತ ಪ್ರಾಂಶುಪಾಲರು ಕೂಡ. ಒಬ್ಬ ನಿಜ ವಿಜ್ಞಾನಿಯಲ್ಲಿರಬೇಕಾದ ಎಲ್ಲ ಗುಣಲಕ್ಷಣಗಳೂ ಇವರಲ್ಲಿ ಮೇಳೈಸಿವೆ! ಸತ್ಯನಿಷ್ಠತೆ, ನಿಃಸ್ವಾರ್ಥತೆ, ವಿಶಾಲ ಮನೋಭಾವ, ವಿಷಯದಲ್ಲಿ ಅಚಲಿತ ಶ್ರದ್ಧೆ, ಯಾವತ್ತೂ ತಾನೊಬ್ಬ ವಿದ್ಯಾರ್ಥಿ ಎನ್ನುವ ಭಾವನೆ, ತಪ್ಪಿದರೆ ಒಪ್ಪಿಕೊಳ್ಳುವ ಹೃದಯ ವೈಶಾಲ್ಯತೆ, ತನ್ನ ಜ್ಞಾನವನ್ನು ಮತ್ತೊಬ್ಬರಲ್ಲಿ ಹಂಚಿಕೊಳ್ಳಬೇಕೆನ್ನುವ ತವಕ, ಕಿರಿಯರನ್ನು ಪ್ರೇರೇಪಿಸುವ, ಪ್ರೋತ್ಸಾಹಿಸುವ ಮನೋಭಾವ... ಒಟ್ಟಿನಲ್ಲಿ ಹೇಳುವುದಾದರೆ, ಇವರು ಇಮ್ಮಡಿ ಜಿಟಿಎನ್! ಇವರ ಅಂತರ್ಜಾಲ ತಾಣಕ್ಕೆ ನೀವೂ ಭೇಟಿ ನೀಡಬಹುದು: http://drsnprasadmysoreindia.blogspot.com/
"ನೀನು ಗ್ರಹಣ ನೋಡಿದ್ದೆಲ್ಲ ಸರಿ, ಆದ್ರೆ ಅದು ಭಟ್ಕಳದಲ್ಲಿ ಆಗೋಕೆ ಸಾಧ್ಯಾನೇ ಇಲ್ಲ! ಇಲ್ಲಿ ನೋಡು, ನಾಸಾದವ್ರು ತಯಾರಿಸಿದ ಮ್ಯಾಪ್ ಕಳ್ಸಿದೀನಿ. ಅದ್ರಲ್ಲಿ ಭಟ್ಕಳ ಅನ್ನೋ ಊರು ಸಂಪೂರ್ಣ ಗ್ರಹಣ ನಡಿಯುವ ಪಟ್ಟಿಯಿಂದ ೧೩-೧೪ ಕಿಲೋಮೀಟರು ದಕ್ಷಿಣಕ್ಕೇ ಇದೆಯಲ್ಲ?" ಅಂತ ಅವ್ರು ಬರೆದ್ರು. ಇದೇನಪ್ಪ ಇದು? ಕಷ್ಟ ಬಿದ್ಕೊಂಡು ಹೋದೋನು ನಾನು, ಕಣ್ತುಂಬಾ ಗ್ರಹಣಾನ ನೋಡಿದ್ದು ನಾನು. ನೋಡಿ ಮೂವತ್ತು ವರ್ಷ ಆಗಿದ್ರೂ ಇನ್ನೂ ನೆನ್ನೆ ನೋಡಿದ್‌ಹಾಗಿದೆ. ಅಲ್ಲಿ ನಡೆದೇ ಇಲ್ಲ ಅಂತಾರಲ್ಲ, ಹಂಗಾದ್ರೆ ನಾನು ಹೋಗಿದ್ದೆಲ್ಲಿಗೆ?
ತಲೆಯೆಲ್ಲಾ ಕೆಟ್ಟ ಹಾಗಾಯ್ತು. ನೇರವಾಗಿ ಗೂಗ್ಲ್ ಅರ್ಥ್‌ಗೇ ಹೋದೆ. ಭಟ್ಕಳದ ಅಕ್ಷಾಂಶ-ರೇಖಾಂಶ ಗುರುತು ಮಾಡ್ಕೊಂಡೆ. ನನ್ನ ಹತ್ರ ಇದ್ದ ಖಗೋಳ ತಂತ್ರಾಂಶಗಳಲ್ಲಿ ಇದ್ನ ಆ ದಿನಕ್ಕೆ ಹಾಕಿ ನಡೆಸಿ ನೋಡ್ದೆ. ಇಂಥಾ ತಂತ್ರಾಂಶಗಳಲ್ಲೆಲ್ಲಾ ಅತ್ಯಂತ ನಿಖರವಾದ್ದು, ಅತೀ ವಿಶ್ವಾಸಾರ್ಹವಾದ್ದು Starry Night Pro plus 6.3.3. ಇದನ್ನ ವಾರಕ್ಕೊಂದ್ಸಲ ಅಪ್‌ಡೇಟ್ ಮಾಡ್ತಾ ಇರ್ತಾರೆ! ಯಾಕೇಂದ್ರೆ ಈ ಧೂಮಕೇತುಗಳು, ಕ್ಷುದ್ರ ಗ್ರಹಗಳು ಇವೆಲ್ಲ ಒಂದೇ ರೀತಿ, ಒಂದೇ ದಾರೀಲಿ ಹೋಗಲ್ಲ. ಅಕ್ಕ-ಪಕ್ಕ ಯಾವ್ದಾದ್ರೂ ದೊಡ್ಡ ಗ್ರಹ ಎಳೆದ್ರೆ ವಾಲಿ ಬಿಡ್ತವೆ! ಅದೂ ಅಲ್ದೆ, ಹೊಸ-ಹೊಸ ಆವಿಷ್ಕಾರ, ವಿದ್ಯಮಾನ, ಬದಲಾವಣೆ ಮುಂತಾದವೆಲ್ಲ ಆಕಾಶದಲ್ಲಿ ನಡೀತಾನೇ ಇರ್ತವೆ. ಇದನ್ನೆಲ್ಲ ಕರಾರುವಾಕ್ಕಾಗಿ ಆಗಾಗ ತಂತ್ರಾಂಶಗಳಲ್ಲಿ ಬರೀತಾ ಇರ್ಬೇಕಾಗತ್ತೆ. ಅಂಥ ಸ್ಟಾರೀನೈಟ್ ಕೂಡ ನೀನು ನೋಡಿದ್ದು ಸರಿ, ಭಟ್ಕಳದಲ್ಲಿ ಆವತ್ತು ಸಂಪೂರ್ಣ ಸೂರ್ಯಗ್ರಹಣ ಆಗಿದೆ ಅಂತಾನೇ ತೋರಿಸ್ತು! ಆದ್ರೆ ಇದನ್ನ ಉಳಿದ ತಂತ್ರಾಶಗಳು, ಅದ್ರಲ್ಲೂ Stellarium, Red Shiftಗಳು ಸುತಾರಾಂ ಒಪ್ಲಿಲ್ಲ. ಹಾಗಾದ್ರೆ ಯಾವ್ದು ಸರಿ? ನಾಸಾದವ್ರು ತಪ್ಪು ಹೇಳ್ತಾರಾ?
ರಾತ್ರಿ ಎಲ್ಲಾ ನಿದ್ರೇನೇ ಬರ್ಲಿಲ್ಲ. ನನ್ನ ತಲೇಗೇ ಒಂದು ರೀತಿ ಗ್ರಹಣ ಹಿಡ್ದಿತ್ತು! ಏನ್ಮಾಡ್ಲಿ, ಯಾರನ್ನ ಕೇಳ್ಲಿ, ಅಂತ ಯೋಚ್ನೆ ಮಾಡ್ತಾ ಇದ್ದಾಗ ಒಂದು ವಿಚಾರ ಜ್ಞಾಪಕ ಆಯ್ತು. ಬೆಳಿಗ್ಗೆ ನೇರವಾಗಿ ಅಲ್ತಾಫ್ ಮನೆಗೆ ಹೋದೆ. ನನ್ನ ಕ್ಲಿನಿಕ್-ಅವನ ಬಟ್ಟೆ ಶಾಪ್ ಎರಡೂ ಅಕ್ಕ-ಪಕ್ಕ. ಮೂವತ್ತು ವರ್ಷಕ್ಕೆ ಹಿಂದೆ ನಾನು ಗ್ರಹಣ ನೋಡಿದ್ಮೇಲೆ ವಾಪಾಸ್ ಬಂದಾಗ ಅವನ ಹತ್ರ ಮಾತಾಡಿದ್ದೆ. ನಮ್ಮೂರಲ್ಲಿ ಸುಮಾರು ಎಂಭತ್ತು ವರ್ಷಗಳಿಂದ ಒಂದು ಜಾತಿಯ ಮುಸಲ್ಮಾನರು ವಾಸ ಮಾಡ್ತಾ ಬಂದಿದಾರೆ. ಅವರನ್ನ ಎಲ್ಲರೂ ಬಟ್ಕಳೀಸ್ ಅಂತ ಕರೀತಾರೆ. ಬಟ್ಟೆ-ಪಾದರಕ್ಷೆ ವ್ಯಾಪಾರಸ್ತರು. (ಮೈಸೂರು, ಬೆಂಗ್ಳೂರಲ್ಲಿ ಇರುವ ಬಾದಶಾ ಸ್ಟೋರ್ಸ್ ಇವರದ್ದೆ). ಆವಾಗ ಐದಾರು ಕುಟುಂಬಗಳಿದ್ದಿದ್ದು ಈಗ ಮೂವತ್ತು ದಾಟಿವೆ. ಎಲ್ಲರೂ ಇಲ್ಲೇ ಮಕ್ಕಳು-ಮೊಮ್ಮಕ್ಕಳೊಂದಿಗೆ ವಾಸ ಮಾಡ್ಕೊಂಡು, ಕನ್ನಡ ಶಾಲೆಗೇ ಕಳ್ಸಿ, ಎಲ್ಲಾರ್ಜೊತೆ ಹೊಂದಿಕೊಂಡು ಬಾಳ್ತಾ ಇದಾರೆ. ಬಟ್ಕಳೀಸ್ ಆಗಿರೋದ್ರಿಂದ ಅವರೆಲ್ಲ ಭಟ್ಕಳದವರು ಅಂತ ನಾನು ಯೋಚಿಸಿದ್ದೆ.
ಆದ್ರೆ ಅಲ್ತಾಫ್ ಒಂದು ಹೊಸ ವಿಚಾರ ಹೇಳ್ದ: ನಮ್ಮ ಒರಿಜಿನಲ್ ಊರು ಭಟ್ಕಳದಿಂದ ಆಚೆ ಇರೋ ಮುರ್ಡೇಶ್ವರ. ನೀವು ಆವತ್ತು ಹೋಗಿದ್ದು ಮುರ್ಡೇಶ್ವರಕ್ಕೇ ಇರ್ಬೇಕು. ನಮ್ಮೂರಿಗೆ ಹೋಗಿದ್ರಿ ಅಂತ ನಾನು ಹೇಳಿದ್ದಕ್ಕೆ ನೀವು ಭಟ್ಕಳ ಅಂತ ತಪ್ಪು ತಿಳ್ಕೊಂಡ್ರಿ.
ಇವ್ನು ಹೇಳೋದು ಹೌದಾ? ಮನೆಗೆ ಬಂದು ಗೂಗ್ಲ್ ಅರ್ಥ್ ತೆರೆದೆ. ಭಟ್ಕಳದಿಂದ ಮುರ್ಡೇಶ್ವರಕ್ಕೆ ಸುಮಾರು ೧೩ ಕಿಲೋಮೀಟರು ದೂರ. ಮಧ್ಯೆ ಮಾವಳ್ಳಿ ಅಂತ ಒಂದು ಊರು ಕೂಡ ಇದೆ. ಅದನ್ನ ನದಿ ಬೇರೆ ದಾಟಿ ಹೋಗಬೇಕು. ಆವತ್ತು ನಾನು ಪ್ರಯಾಣ ಮಾಡ್ತಿದ್ದ ಕಾರು NH17ರ ಮೇಲೆ ರುಂ ಅಂತ ಹೋಗ್ತಿರಬೇಕಾದ್ರೆ, ನನ್ನ ಮನಸ್ಸು-ದೃಷ್ಟಿ ಎಲ್ಲಾ ಆಕಾಶದ ಕಡೆಗೇ ಇದ್ದಿದ್ದರಿಂದಲೋ ಏನೋ ನಾನು ಈ ಸೇತುವೆ ದಾಟಿದ್ದೇ ಜ್ಞಾಪಕವಿಲ್ಲ. ಅಲ್ಲದೆ ರಾತ್ರಿ ನಾನು ಯಾವುದೋ ಒಂದು ಬಸ್ ಹತ್ತಿ ಭಟ್ಕಳಕ್ಕೇ ಬಂದು ಲಾಡ್ಜ್‌ನಲ್ಲಿ ತಂಗಿದ್ದೆ. ರಾತ್ರಿ ಕತ್ತಲೆಯಲ್ಲೂ ಈ ಸೇತುವೆ ಮಿಸ್ ಆಯ್ತಾ?
ಪ್ರೊ. ಪ್ರಸಾದ್‌ರವರು ನನ್ನ ಇಷ್ಟಕ್ಕೆ ಬಿಡ್ಲಿಲ್ಲ. ಮತ್ತೊಂದು ನಾಸಾ-ಗೂಗ್ಲ್ ಸಂಯೋಜನೆಯ ಭೂಪಟ ಕಳ್ಸಿದ್ರು. ನಾಸಾದವ್ರ ಈ ಭೂಪಟಗಳು ಡಾ. ಫ್ರೆಡ್ ಎಸ್ಪನ್ಯಾಕ್ ಎಂಬ ಪ್ರಖ್ಯಾತ ಖಗೋಳ ವಿಜ್ಞಾನಿಯ ಲೆಕ್ಕಾಚಾರಗಳ ಮೇಲೆ ಅಧಾರಿತವಾಗಿವೆಯಂತೆ. ಆತನೊಬ್ಬ ಗ್ರಹಣಗಳ ಸ್ಪೆಷಲಿಸ್ಟು! ಅವನ ಲೆಕ್ಕಾಚಾರ ಬಹಳಾ ಬಹಳಾ ಆಕ್ಯುರೇಟು. "ಸರಿಯಾಗಿ ನೋಡು, ನೀನು ಸಂಪೂರ್ಣ ಗ್ರಹಣಾನ ಕಂಡಿದ್ದು ಮುರ್ಡೇಶ್ವರದಲ್ಲೂ ಅಲ್ಲ, ಅದೂ ಗ್ರಹಣದ ಪಟ್ಟಿಯಿಂದ ಅರ್ಧ ಕಿಲೋಮೀಟರು ದಕ್ಷಿಣಕ್ಕೇ ಇದೆ", ಅಂತ ದಬಾಯ್ಸಿದ್ರು. ಅಯ್ಯೋ ದೇವ್ರೆ, ಹಾಗಾದ್ರೆ ನಾನು ಮುರ್ಡೇಶ್ವರಾನೂ ದಾಟಿ ಹೋಗಿದ್ನೇ? ಮೂವತ್ತು ವರ್ಷಕ್ಕೆ ಹಿಂದೆ ಅವೆಲ್ಲ ಹೊಸ ಜಾಗಗ್ಳು. ಈವತ್ತಿಗೂ ನಾನು ಆ ಕಡೆ ಪುನಃ ಹೋಗಿಲ್ಲ.
ಪ್ರೊಫೆಸರ್ ಸಾಹೇಬರು ಮತ್ತೊಂದು ಮನ ತಟ್ಟೋ ಪತ್ರ ಬರೆದ್ರು: "ನೋಡು, ಈವತ್ತು ೨೦೧೦ ಫೆಬ್ರವರಿ ೧೩. ಬೆಸ್ಟ್ ಐಡಿಯಾ ಏನೂಂದ್ರೆ ಇನ್ನು ಮೂರೇ ದಿವ್ಸಕ್ಕೆ, ಅಂದ್ರೆ ನಾಡಿದ್ದು ೧೬ನೇ ತಾರೀಕು, ಆ ನಿನ್ನ ಅಮೂಲ್ಯ ಗ್ರಹಣದ ಮೂವತ್ತನೇ ಪುಣ್ಯ ಜಯಂತಿ! ನಿಂಗೆ ಪ್ರಾಕ್ಟಿಸ್ ಬಿಟ್ಟು ಹೊರಡೋಕೆ ಕಷ್ಟ ಅಗ್ಬೋದು. ಆದ್ರೂ ಬೆಳಿಗ್ಗೆ ಎದ್ದು ನಿನ್ನ ಕಾರ್‌ನಲ್ಲಿ ಅದೇ ದಾರಿ ಹಿಡ್ಕೊಂಡು ಹೋಗು. ನೀನು ನೋಡಿದ್ದ ಜಾಗ ಸಿಕ್ಕೇ ಸಿಗತ್ತೆ! ಅದಕ್ಕಿಂತ ಜೀವನದಲ್ಲಿ ಇನ್ನೇನು ಸಾಧನೆ ಬೇಕು?" ಇದನ್ನಲ್ಲವೆ ಒಬ್ಬ ವಿಜ್ಞಾನಿಯ ಆಂತರ್ಯ ಅನ್ನೋದು! ಸತ್ಯಶೋಧನೆಯಲ್ಲಿ ಸಫಲರಾಗೋ ತನಕ ಛಲ ಬಿಡಲ್ಲ!
ನನ್ನ ಮನೆ ಪರಿಸ್ಥಿತೀಲಿ ನಾನು ಊರು ಬಿಟ್ಟು ಎಲ್ಲಿಗೂ ಹೋಗೋ ಹಾಗಿರ್ಲಿಲ್ಲ. ಆವತ್ತು ಗ್ರಹಣ ನೋಡಿದವ್ರು ಯಾರಾದ್ರೂ ಇನ್ನೂ ಮುರ್ಡೇಶ್ವರದಲ್ಲೇ ಇರ್ಬೋದಾ? ಆ ಕಾಲದವ್ರು ಅಥವಾ ನಮ್ಮೂರ ಬಟ್ಕಳೀಸ್ ಜನರ ನೆಂಟ್ರು ಅಥವಾ ಯಾರಾದ್ರೂ ಶಾಲೆಯ ಟೀಚರ್ಸು? ಬಾದಶಾ ಅಂಗಡೀ ದಿಲ್ದಾರ್‌ನ ಕೇಳ್ದೆ. ಆತ ಮೊದಲೇ ಅಪಶಕುನದ ರಾಗ ಹಾಡ್ದ. "ನೀವು ಒಂದು ಆಲೋಚಿಸ್ಬೇಕು ಸ್ವಾಮಿ. ಗ್ರಹಣ ಸಮಯದಲ್ಲಿ ನಾವು ಗಂಡಸ್ರು ಬಿಡಿ, ಲೇಡೀಸ್-ಮಕ್ಳು ಯಾರೂ ಹೊರಗೆ ಹೋಗಿ ನೋಡೋ ಹಾಗೇ ಇಲ್ಲ. ಬಾಗಿಲು-ವಿಂಡೋಸ್ ಎಲ್ಲ ಬಂದ್!"
ಕೊನೆಗೆ ಮನ್ನಾ ಸ್ಟೋರ್ಸ್‌ನ ಮೀರಾ ಅಲ್ಲಿ-ಇಲ್ಲಿ ತಲಾಶ್ ಮಾಡಿ ಮುರ್ಡೇಶ್ವರದ ಒಂದು ಶಾಲೇ ಫೋನ್ ನಂಬರ್ ಕೊಟ್ಟ. ಅಲ್ಲಿಯ ಹೆಡ್ ಮೇಡಂ ಜೊತೆ ಮಾತನಾಡಿದೆ. "ನನ್ನಿಂದ ಸಾಧ್ಯ ಆಗೋ ಅಷ್ಟು ಪ್ರಯತ್ನ ಪಡ್ತೀನಿ, ನಿಮ್ಮ ಸಂಶೋಧನೆಗೆ ಏನಾದರೂ ಪ್ರಯೋಜನವಾಗುತ್ತೋ ನೋಡೋಣ. ಇಲ್ಲಿ ಕೆಲವರನ್ನು ವಿಚಾರಿಸಿ ನಿಮಗೆ ತಿಳಿಸುತ್ತೇನೆ," ಎಂದರು. ನನ್ನ ದುರದೃಷ್ಟಕ್ಕೆ ಶಾಲೆ ಮುಗಿದು ರಜಾ ಶುರುವಾಗಿದೆ.
ಸತ್ಯಾನ್ವೇಷಣೇನೇ ಒಂದ್ರೀತಿ ತಪಸ್ಸು. ಅದ್ರ ಕೊನೇಲಿ ಸಿಗೋ ಅಂತ ಆತ್ಮಸಂತೃಪ್ತಿ ಇದ್ಯಲ್ಲ ಅದ್ರಲ್ಲಿ ಎಂತ ಮಜಾ ಇದೇಂತ ಎಲ್ಲ ವಿಜ್ಞಾನಿಗ್ಳೂ ಹೇಳ್ತಾನೇ ಬಂದಿದಾರೆ. ನಮ್ಮ ಜಿಟಿಎನ್ ಆಗ್ಲೀ, ಪ್ರಸಾದ್ ಆಗ್ಲೀ, ಅವ್ರಿಂದ ಇದ್ನೇ ನಾವು ಕಲೀಬೇಕಾಗಿರೋದು. ಪ್ರೊ. ಪ್ರಸಾದ್‌ರವ್ರು ಹೇಳ್ದ ಹಾಗೆ ನೇರವಾಗಿ ಉತ್ತರ ಕನ್ನಡ ಜಿಲ್ಲೇಗೆ ಪ್ರಯಾಣ ಹೊರಟೇ ಬಿಡೋದಾ ಅಂತಲೂ ಆಲೋಚಿಸ್ತಿದೀನಿ. ಮೂವತ್ತು ವರ್ಷಕ್ಕೆ ಹಿಂದೆ ಮುರ್ಡೇಶ್ವರ ಅನ್ನೋ ಊರು, ಕಣ್ಣಿಗೂ ಕಾಣದ ಒಂದು ಹಳ್ಳಿ ಆಗಿತ್ತಂತೆ! ಈಗ ಬಾಳಾ ಬೆಳ್ದುಬಿಟ್ಟಿದೆ. ನಾಗರೀಕತೆಯ ಬೆಳ್ವಣಿಗೆ ಅಂದ್ರೇನು? ಹೆದ್ದಾರಿಯ ಎರ್ಡೂ ಕಡೆ ಎತ್ತರೆತ್ತರವಾದ ಕಾಂಕ್ರೀಟ್ ಕಟ್ಟಡಗ್ಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು ಇಷ್ಟೇ ತಾನೆ? ಅಲ್ಲಿ ನಾನು ಆವತ್ತು ನೋಡಿದ್ದ ಶಾಲೆ ಇನ್ನೂ ಇರತ್ತಾ? ಅಥವಾ ಅದೂ ಬೆಳೆದು ದುಡ್ಡು ಮಾಡೋ ಕಾಲೇಜಾಗಿ ಬಿಟ್ಟಿರತ್ತಾ? ನೋಡಿದ್ರೂ ಗುರ್ತು ಹಿಡ್ಯೋದು ಹೇಗೆ? ಇಂತಾ ಕೊಷ್ಣೆಗ್ಳು ನನ್ನ ತಲೇನ ದಿನಾ ಕೊರೀತಾ ಇವೆ. ಈವತ್ತಲ್ಲ, ನಾಳೆ ಅಲ್ಲೀಗೆ ಹೋಗೇ ಹೋಗ್ತೀನಿ. ಆ ದಿವ್ಸ ಬೇಗ್ನೆ ಬರ್ಲಿ ಅಂತ ನೀವೂ ಹಾರೈಸಿ.