ಇತ್ತೀಚೆಗೆ ನನ್ನಣ್ಣ ಅವನ ಮನೆಗೆ ಹೊಸ ೪೦ ಇಂಚಿನ ಎಲ್ಇಡಿ ಟೀವಿ ಕೊಂಡುಕೊಂಡಿದ್ದ. ನೇರವಾಗಿ ಅದನ್ನು ಗೋಡೆಗೆ ನೇತುಹಾಕಿತ್ತು. ಅದರಲ್ಲಿ ಟಿವಿ ಪ್ರೋಗ್ರಾ∫ಮ್ಸ್ ನೋಡಿದರೆ ಸಿನೆಮಾ ನೋಡಿದ ಅನುಭವವಾಗುತ್ತಿತ್ತು. ನನ್ನ ಹತ್ತಿರವೂ ಎಲ್‍ಸಿಡಿ ಪ್ರೊಜೆಕ್ಟರ್ ಇದೆ. ಶಾಲಾ ಕಾಲೇಜುಗಳಲ್ಲಿ ಪವರ್ ಪಾ~ಯ್೦ಟ್ ಪ್ರೆಸೆಂಟೇಶನ್ ಗಳಿಗೆ ಲಾ∫ಪ್ ಟಾ~ಪ್ ನೊಂದಿಗೆ ಬಳಸುತ್ತೇನೆ. ವಿಜ್ಞಾನದಲ್ಲಿ ಹೊಸಹೊಸ ಆವಿಷ್ಕಾರಗಳು ಆದಂತೆಲ್ಲ ಮನೆಗಳಲ್ಲಿ ಹೊಸಹೊಸ ಗಾ∫ಡ್ಜೆಟ್ಸ್ ಹೇಗೆ ಸೇರ್ಪಡೆಯಾಗುತ್ತವೆ!
ಇವನ್ನೆಲ್ಲ ನೋಡಿದಾಗ, ನಾವು ಹುಡುಗರಾಗಿದ್ದಾಗ ನಾವೇ ತಯಾರು ಮಾಡಿದ ಹೋಮ್ ಥಿಯೇಟರ್ ನೆನಪಾಗುತ್ತದೆ. ಬೇಸಿಗೆ ರಜ ಬಂದೊಡನೆ ಇಂತಹ ಎಕ್ಸ್ಟ್ರಾಕರಿಕ್ಯುಲರ್ ಚಟುವಟಿಕೆಗಳು ಚಿಗುರೊಡೆಯುತ್ತಿದ್ದವು. ಮನೆಯ ಸುತ್ತುಮುತ್ತಲ ಓರಗೆಯ ಮಕ್ಕಳೊಂದಿಗೆ ಬೆಳಗಿನಿಂದ ರಾತ್ರಿಯವರೆಗೆ ವಿವಿಧ ರೀತಿಯ ಆಟ, ತಿರುಗಾಟ, ಹೊಡೆದಾಟ ಮುಂತಾದುವುಗಳೊಂದಿಗೆ ಕೆಲವು ಕ್ರಿಯೇಟಿವ್ ಕಾರ್ಯಗಳೂ ಇರುತ್ತಿದ್ದವು! ಅವುಗಳಲ್ಲಿ ಮನೆಯಲ್ಲೇ ಸಿನೆಮಾ ತೋರಿಸುವ ಕಾರ್ಯಕ್ರಮ ಬಹಳ ಜನಪ್ರಿಯವಾಗಿತ್ತು.
ನಮ್ಮ ಹೋಮ್ ಥಿಯೇಟರ್ ನನ್ನ ತಮ್ಮ ನಾರಾಯಣ ಮತ್ತು ನಾನು ಇಬ್ಬರೂ ಸೇರಿ ನಡೆಸುತ್ತಿದ್ದ ಸಿನೆಮಾ. ಆಗ ಅವನು ನಾಲ್ಕನೇ ಕ್ಲಾಸು, ನಾನು ಆರನೇ ಕ್ಲಾಸು. ನಮಗೆ ಈ ಸಿನೆಮಾ ಹುಚ್ಚು ಬಂದಿದ್ದು ನಮ್ಮ ಗುರು ವಿಜಯನಿಂದ. ವಿಜಯ ನಮಗಿಂತ ವಯಸ್ಸಿನಲ್ಲಿ ದೊಡ್ಡವನು, ಹೈಸ್ಕೂಲು. ಆಗಾಗ ಮೈಸೂರಿಗೆ ಹೋಗಿ ಇಂಗ್ಲಿಷ್ ಸಿನೆಮಾಗಳನ್ನೂ ನೋಡಿ ಬರುತ್ತಿದ್ದ. ಆ ಕಥೆಗಳನ್ನು, ಅದರಲ್ಲೂ ಜೇಮ್ಸ್ ಬಾ~೦ಡ್ ಚಿತ್ರಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದ.
ಅವನ ಭಾವ ನಮ್ಮೂರಿನಲ್ಲಿದ್ದ ಚಿತ್ರಮಂದಿರದಲ್ಲಿ ಆಪರೇಟರ್ ಆಗಿದ್ದರು. ಮೊದಲ ಬಾರಿಗೆ ವಿಜಯ ನಮ್ಮನ್ನು ಪಿಕ್ಚರ್ ಥಿಯೇಟರ್‍ನ ಕಾ∫ಬಿನ್‍ಗೆ ಕರೆದುಕೊಂಡು ಹೋಗಿದ್ದ! ಅಲ್ಲಿ ಭೂತಾಕಾರದ ಯಂತ್ರದಂತಿದ್ದ ಪ್ರೊಜೆಕ್ಟರ್, ಧೂಳು ಮತ್ತು ಬೀಡಿ ಹೊಗೆಯ ಮಧ್ಯೆ ಚೆಲ್ಲಾಪಿಲ್ಲಿಯಾಗಿ ಹರಡಿಹೋಗಿದ್ದ ಇಗ್ನಿಶನ್ ಕಡ್ಡಿಗಳು, ರಾಶಿರಾಶಿ ಫಿಲ್ಮ್ ರೋಲ್‍ಗಳು ಇವೆಲ್ಲ ನೋಡಿ ದಂಗು ಬಡಿದುಹೋಯಿತು! ನಮ್ಮೂರಿಗೆ ಒಂದು ಸಿನೆಮಾ ಬರಬೇಕಾದರೆ ಅದು ನೂರಾರು ಕಡೆ ಸಾವಿರಾರು ಶೋಗಳನ್ನು ಕಂಡಿರಲೇಬೇಕು. ಹಾಗಾಗಿ ಫಿಲ್ಮ್ ನ ಅಂಚುಗಳು ಎಷ್ಟೋ ಜಾಗಗಳಲ್ಲಿ ಹರಿದು ಹೋಗಿರುತ್ತಿದ್ದವು. ಒಬ್ಬ ಹುಡುಗ ಕುಳಿತುಕೊಂಡು ಸ್ಪೂಲ್‍ನಿಂದ ಫಿಲ್ಮ್ ನಿಧಾನವಾಗಿ ಬಿಡಿಸಿ ಕೆಟ್ಟುಹೋದ ಭಾಗಗಳನ್ನು ಕತ್ತರಿಸಿ ಅಂಟಿಸುತ್ತಿದ್ದ.
ಈ ಸಂದರ್ಭದಲ್ಲಿ ನಮಗೆ ಒಂದು ವಿಚಾರ ಮನದಟ್ಟಾಯಿತು. ಅದೇನೆಂದರೆ, ಮನೆಯಲ್ಲಿ ನಮಗೆ ’ಮೂವಿ’ ಸಿನೆಮಾ ತೋರಿಸಲು ಸಾಧ್ಯವಿಲ್ಲ. ಏಕೆಂದರೆ ಅದಕ್ಕೆ ವಿಶೇಷವಾದ ಯಂತ್ರವೇ ಬೇಕು. ಆದರೆ ನಮ್ಮದೇ ಡಬ್ಬಾ ಪ್ರೊಜೆಕ್ಟರ್ ಮೂಲಕ ’ಸ್ಟಿಲ್ಸ್’ ತೋರಿಸಬಹುದು. ವಿಜಯನ ಭಾವನ ಪರಿಚಯವಾದ ಮೇಲೆ ಅಲ್ಲಿಂದ ಮುಂದೆ ನಾವಿಬ್ಬರೆ ಹೋಗಿ ಅಲ್ಲಿ ಇಲ್ಲಿ ಬಿದ್ದಿದ್ದ ತುಂಡು ಫಿಲ್ಮ್ ಗಳನ್ನು ಸಂಗ್ರಹಿಸುತ್ತಾ ಹೋದೆವು. ಅದರಲ್ಲಿ ವಿವಿಧ ಭಾಷೆಗಳ, ಬೇರೆ ಬೇರೆ ಸಿನೆಮಾಗಳ, ಬೇರೆ ಬೇರೆ ಆ∫ಕ್ಟರ್‍ಗಳ ದೊಡ್ಡ ಕಲೆಕ್ಷನ್ನೇ ನಮ್ಮಲ್ಲಿ ಬೆಳೆಯಿತು. ಬಹಳ ಹಳೇ ಕಾಲ ಚಿತ್ರವಾದರೆ ನಮಗೆ ಆ ಚಿತ್ರದ ಹೆಚ್ಚು ಕಟ್‍ಪೀಸ್‍ಗಳು ಸಿಕ್ಕುತ್ತಿದ್ದವು. ಮಹಾಭಾರತ್ ಹಿಂದಿ ಚಿತ್ರದ ಎಲ್ಲಾ ಸೀನುಗಳೂ ಸಿಕ್ಕಿದ್ದವು! ಅವುಗಳಲ್ಲಿ ಅತ್ಯುತ್ತಮವಾದ ಒಂದೊಂದೇ ಪೀಸ್ ಕತ್ತರಿಸಿ ತೆಗೆದು, ಫಿಲ್ಮ್ ಅಳತೆಯ ಕಿಟಕಿಯುಳ್ಳ ಸಣ್ಣ ಸಣ್ಣ ರಟ್ಟುಗಳ ಮಧ್ಯೆ ಅದನ್ನಿಟ್ಟು ನೂರಾರು ಸ್ಲೈಡ್‍ಗಳನ್ನು ತಯಾರಿಸಿದ್ದೆವು.
ಇನ್ನು ನಮ್ಮ ಹಾ∫೦ಡ್ ಮೇಡ್ ಸ್ಲೈಡ್ ಪ್ರೊಜೆಕ್ಟರ್ ನ ಕಥೆಯೇ ಬೇರೆ! ವಿಜಯನ ಹತ್ತಿರ ಆ ಕಾಲದಲ್ಲೇ ಒಂದು ಲೆನ್ಸ್ ಇತ್ತು. ಒಂದು ರಟ್ಟಿನ ಡಬ್ಬಕ್ಕೆ ಅದನ್ನು ಸಿಕ್ಕಿಸಿ ಪ್ರೊಜೆಕ್ಟರ್ ಮಾಡಿದ್ದ. ನಮ್ಮ ಬಳಿ ಪೀನ ಮಸೂರವೇ ಇಲ್ಲವಲ್ಲ? ಕೊನೆಗೆ ನಮಗೆ ದೊರಕಿದ್ದು ಥಾಮಸ್ ಆಲ್ವ ಎಡಿಸನ್ನನ ಎಲೆಕ್ಟ್ರಿಕ್ ಬಲ್ಬ್. ಒಂದು ಲೈಟ್ ಬಲ್ಬಿನ ಒಳಗೆ ಖಾಲಿ ಮಾಡಿ ಅದರಲ್ಲಿ ನೀರು ತುಂಬಿದರೆ ಅತ್ಯುತ್ತಮ ಲೆನ್ಸ್ ತಯಾರಾಗುವುದೆಂದು ತಿಳಿಯಿತು. ಆದರೆ ಈ ಖಾಲಿ ಮಾಡುವ ಕೆಲಸ ಬಹಳ ನಾಜೂಕು. ಬಲ್ಬ್ ನ ಮಧ್ಯದಲ್ಲಿ ವೈರ್ ಮತ್ತು ಟಂಗ್‍ಸ್ಟನ್ ಎಳೆವನ್ನು ಹಿಡಿದಿಟ್ಟುಕೊಳ್ಳಲು ಮೇಲಿನಿಂದ ಇಳಿಬಿಟ್ಟಂತೆ ಒಂದು ಗಾಜಿನ ವ್ಯವಸ್ಥೆಯಿರುತ್ತದೆ. ಇದನ್ನು ಹೊರಗಿನ ಗಾಜು ಬುರುಡೆಗೆ ಅಂಟಿಸಿರುವುದಿಲ್ಲ. ಹೊರಗೆ-ಒಳಗೆ ಅವೆಲ್ಲ ಒಂದೇ ಗಾಜಿನ ತುಂಡು. ಅದರ ಹೋಲ್ಡರ್ ಮಾತ್ರ ಲೋಹದ್ದು.
ಮೊದಲು ಹೋಲ್ಡರ್ ನ ಒಳಗಡೆ ತುಂಬಿಸಿರುವ ಅರಗನ್ನು ಕೊರೆದು ತೆಗೆಯಬೇಕು. ಇದು ಸುಲಭದ ಕಾರ್ಯ. ಮುಂದಿನ ಕೆಲಸ ಬಹಳ ಕಷ್ಟಕರವಾದದ್ದು. ಸ್ಕ್ರೂಡ್ರೈವರ್ ನಿಂದ ಮೆತ್ತಗೆ ಟ‘ರ್ಮಿನಲ್ಸ್, ವೈರ್ ಮತ್ತು ಟಂಗ್‍ಸ್ಟನ್ ಸಮೇತ ಒಳಗಿನ ಗಾಜನ್ನು ಒಟ್ಟಾಗಿ ಒಡೆದು ಹೊರತೆಗೆಯಬೇಕು. ಈ ಹಂತದಲ್ಲಿ ಬಹಳಷ್ಟು ಸಾರಿ ಹೋಲ್ಡರ್ ಕಿತ್ತು ಬರುವುದು, ಅದರೊಂದಿಗೆ ಬಲ್ಬಿನ ತೆಳುವಾದ ಗಾಜು ಕ್ರಾ∫ಕ್ ಬಂದು ಒಡೆದುಹೋಗುವುದು, ಕೈಗೆ ಗಾಯ ಆಗುವುದು ಸಾಮಾನ್ಯ. ಹೀಗೆ ಹತ್ತಾರು ಬಲ್ಬುಗಳನ್ನು ಹಾಳು ಮಾಡಿದ ನಂತರ ನಮಗೆ ಸಿಕ್ಕಿದ್ದು ಅಬ್ರಹಮ್. ಅವನು ಎಸ್ಸೆಸ್ಸಲ್ಸಿ. ರಜಾ ಟೈಮಿನಲ್ಲಿ ತಂದೆಯ ಜೊತೆ ಅಂಗಡಿಗೂ ಹೋಗುತ್ತಿದ್ದ. ಹೀಗಾಗಿ ಬಹಳ ಬಿಜಿ ಮನುಷ್ಯ. ಹಲವು ಬಾರಿ ಅವನ ಮನೆಗೆ ತಿರುಗಿ, ಪುಸಲಾಯಿಸಿ ಕೆಲಸ ಮಾಡಿಸಿಕೊಳ್ಳಬೇಕು. ಇಷ್ಟಾಗಿಯೂ ಅವನದ್ದೇನೂ ನೂರು ಪರ್ಸೆಂಟ್ ಸಕ್ಸೆಸ್ಸ್ ರೇಟ್ ಅಲ್ಲ. ನಾವು ಕಷ್ಟಪಟ್ಟು ರಾ∫ಗ್ ಪಿಕ್ಕಿಂಗ್ ಮಾಡಿ ಸಂಪಾದಿಸಿ ಕೊಟ್ಟ ಹತ್ತು ಬಲ್ಬುಗಳಲ್ಲಿ ಏಳು ಮಾತ್ರ ನಮಗೆ ಸಿಗುತ್ತಿತ್ತು. ಉಳಿದವು ಅವನ ಕೈಯ್ಯಲ್ಲೂ ಒಡೆದು ಹೋಗುತ್ತಿದ್ದವು. ಕೇಳಿದರೆ “ಅಮ್‍ರ್ ಬಿಟ್ಟೆ” ಎನ್ನುತ್ತಿದ್ದ. ಅವನಿಗೆ ಅಮರ್ ಅಬ್ರಹಮ್ ಎಂತಲೇ ಹೆಸರಾಗಿದ್ದು ಹೀಗೆ!
ನಂತರ ನಮ್ಮ ಪ್ರೊಜೆಕ್ಟರ್. ಒಂದು ಚಿಕ್ಕ ರಟ್ಟಿನ ಡಬ್ಬಕ್ಕೆ ಹಿಂದುಗಡೆ ಫಿಲ್ಮಿನ ಅಳತೆಗೆ ಸರಿಯಾಗಿ ಕಿಂಡಿಯನ್ನು ಕತ್ತರಿಸಿ, ಮುಂದುಗಡೆ ಚಿತ್ರ ಹಾದು ಹೋಗಲು ತಕ್ಕ ಗಾತ್ರದ ತೂತವನ್ನು ಕತ್ತರಿಸಿ, ನೀರು ತುಂಬಿದ ಬಲ್ಬನ್ನು ಮಧ್ಯೆ ನೇತು ಹಾಕಿದರೆ ಮುಗಿಯಿತು. ನೇತು ಹಾಕಿದ ಬಲ್ಬನ್ನು ಒಂದು ಸಣ್ಣ ಕೋಲಿಗೆ ಕಟ್ಟಿ ಆ ಕಡ್ಡಿಯನ್ನು ಮುಂದಕ್ಕೋ ಹಿಂದಕ್ಕೋ ಮೆತ್ತಗೆ ತಳ್ಳಿದರೆ ಗೋಡೆಯ ಮೇಲೆ ಚಿತ್ರ ಫೋಕಸ್ ಆಗುತ್ತದೆ.
ಇನ್ನು ಉಳಿದಿದ್ದು ಮುಖ್ಯವಾದ ಭಾಗ, ಸಿನೆಮಾ ತೋರಿಸುವುದು. ನಮ್ಮ ಮನೆಯ ಹಾಲಿನ ಪಕ್ಕ ಎರಡು ದೊಡ್ಡ ಕೋಣೆಗಳಿವೆ. ಮುಂದುಗಡೆ ಆ~ಫೀಸ್‍ರೂಮ್ ಮತ್ತು ಅದಕ್ಕೆ ಸೇರಿದ ಹಾಗೆ ನಾವು ಮಲಗುವ ಬೆಡ್‍ರೂಮ್. ಈ ಕೋಣೆಗೆ ಆ~ಫೀಸ್‍ರೂಮ್ ಮತ್ತು ಹಾಲ್, ಎರಡು ಕಡೆಯಿಂದಲೂ ಬಾಗಿಲುಗಳಿವೆ. ಮಲಗುವ ಕೋಣೆಯೇ ನಮ್ಮ ಥಿಯೇಟರ್. ಅದರ ಕಿಟಕಿಗೆ ಕಂಬಳಿ ಹೊದಿಸಿ, ಹೊರ ಬಾಗಿಲು ಹಾಕಿದರೆ, ಕತ್ತಲು ಕೋಣೆ ರೆಡಿ. ಮೊದಲು ಬೀದಿಯ ಕಡೆಯಿಂದ ಸೂರ್ಯನ ಬೆಳಕನ್ನು ಒಂದು ಕನ್ನಡಿಯ ಮೂಲಕ ಆ~ಫೀಸ್‍ರೂಮಿನೊಳಕ್ಕೆ ಬಿಡಬೇಕು. ನಮಗೆ ಇದಕ್ಕೇ ಹೇಳಿ ಮಾಡಿಸಿದ ಹಾಗೆ ಸಿಕ್ಕಿದ್ದು ನಮ್ಮ ತಂದೆ ದಿನಾ ಶೇವ್ ಮಾಡಿಕೊಳ್ಳಲು ಬಳಸುತ್ತಿದ್ದ ಕನ್ನಡಿ. ಏಕೆಂದರೆ ಅಗಲವಾಗಿದ್ದ ಆ ಕನ್ನಡಿಯನ್ನು ಹೊರಗಿನ ಕಾಂ~ಪೌಂಡ್ ಮೇಲೆ ಹೇಗೆ, ಯಾವ ಆಂ∫ಗಲ್‍ನಲ್ಲಿ ಬೇಕಾದರೂ ಹೆಚ್ಚು ಶ್ರಮವಿಲ್ಲದೆ ಇರಿಸಬಹುದಾಗಿತ್ತು. ಈ ಬೆಳಕನ್ನು ನಮ್ಮ ಪ್ರೊಜೆಕ್ಟರ್ ಡಬ್ಬದ ಮೇಲೆ ಬೀಳುವಂತೆ ಟೇಬಲ್ ಮೇಲೆ ಜೋಡಿಸಿದೆವು. ಎರಡು ಕೋಣೆಗಳಿಗೂ ಮಧ್ಯೆ ಇದ್ದ ಬಾಗಿಲನ್ನು ನಡುವೆ ಚಿತ್ರದ ಬಿಂಬ ಹೋಗಲು ಮಾತ್ರ ತಕ್ಕಷ್ಟು ಜಾಗ ಬಿಟ್ಟು ಮುಚ್ಚಿದೆವು.
ಇನ್ನು ಸೌಂಡ್ ಸಿಸ್ಟಮ್‍ನ ತಯಾರಿ. ಇದು ನಾರಾಯಣನ ಸುಪರ್ದಿಗೆ ಬಿಟ್ಟಿದ್ದು. ಅವನು ಆಗಲೇ ಚೆನ್ನಾಗಿ ಹಾಡುತ್ತಿದ್ದ. ಜೊತೆಗೆ ಅಣಕು ಪರಿಣತ. ಕನ್ನಡ, ತಮಿಳು, ಹಿಂದಿ ಚಿತ್ರಗಳ ಆ∫ಕ್ಟರ್ ಗಳನ್ನು ಚೆನ್ನಾಗಿಯೇ ಮಿಮಿಕ್ ಮಾಡುತ್ತಿದ್ದ. ಬಚ್ಚಲು ಮನೆಯಿಂದ ಕತ್ತರಿಸಿದ ರಬ್ಬರ್ ಪೈಪನ್ನು ತಂದು ಅದರ ಒಂದು ತುದಿ ನಮ್ಮ ಪ್ರೊಜೆಕ್ಟರ್ ರೂಮ್‍ನ ಟೇಬಲ್ ಕೆಳಗಿಟ್ಟು, ಅದರ ಇನ್ನೊಂದು ತುದಿಯನ್ನು ಒಂದು ಅಲ್ಯುಮಿನಿಯಮ್ ಡಬ್ಬದೊಳಗಿಟ್ಟು ಅದನ್ನು ಥಿಯೇಟರ್ ರೂಮ್‍ನ ಮಂಚದ ಕೆಳಗಿಟ್ಟಿದ್ದ. ಈ ತುದಿಯಲ್ಲಿ ಮಾತನಾಡಿದರೆ ಮತ್ತೊಂದು ತುದಿಯಲ್ಲಿ ’ಭಂ’ ಎಂದು ಕೇಳಿಸುತ್ತಿತ್ತು.
ಆಯಾ ದಿನ ಶೋಗೆ ಅವಶ್ಯವಾದ ಸ್ಲೈಡ್‍ಗಳನ್ನು ಮೊದಲೇ ಅನುಕ್ರಮವಾಗಿ ಜೋಡಿಸಿಕೊಳ್ಳುತ್ತಿದ್ದೆ. ಪ್ರತಿ ಶೋಗೂ ಒಂದೊಂದು ಥೀಂ ಇರುತ್ತಿತ್ತು. ಬೆಳಕು, ಪ್ರೊಜೆಕ್ಟರ್, ಫೋಕಸ್ ಎಲ್ಲವನ್ನೂ ಮೊದಲೇ ಅಡ್ಜಸ್ಟ್ ಮಾಡಿ ನಂತರ ಪ್ರೇಕ್ಷಕರನ್ನು ಕರೆಯುತ್ತಿದ್ದೆವು. ನಮ್ಮ ಗೌರವಾನ್ವಿತ ಆಡಿಯೆನ್ಸ್ ಯಾರಪ್ಪಾ ಎಂದರೆ, ನಮ್ಮ ಮನೆಯ ಎದುರು ಸಾಲಿನಲ್ಲಿ ಈ ತುದಿಯಿಂದ ಸಾರಂಬಿಯವರ ಮಕ್ಕಳಾದ ಬಾಷ, ನಜೀರ್, ಮೆಹರ್ ಬಾನು ಮತ್ತು ಬೀಬಿ; ಕೊಂಕಣಿಯವರ ಮನೆಯಿಂದ ವಿನುತ ಮತ್ತು ಗಿರೀಶ; ಡ್ರೈವರ್ ಗಣಪಯ್ಯನವರ ಮಕ್ಕಳಾದ ನಟರಾಜ, ನಳಿನಾಕ್ಷ, ಜಲ ಮತ್ತು ಜಯಿ; ಟೈಲರ್ ಮೀನಾಕ್ಷಮ್ಮನವರ ಮನೆಯಿಂದ ಸುಮಾ, ಪ್ರಸಾದಿ ಮತ್ತು ತಾರಾಮಣಿ; ಅವರ ಮನೆಗೆ ಸಮ್ಮರ್ ಹಾ~ಲಿಡೇಸ್ ಗೆ ಬಂದಿರಬಹುದಾದ ನೆಂಟರ ಮಕ್ಕಳು . ಹೀಗೆ ಸುಮಾರು ನರ್ಸರಿ ಕ್ಲಾಸ್‍ನಿಂದ ಐದನೇ ಕ್ಲಾಸ್‍ವರೆಗಿನ ೧೨-೧೪ ಜನ.
ನಮ್ಮ ಬಳಿ ವಿಶೇಷ ಸಂದರ್ಭಗಳಿಗೆ ಕೆಲವು ಸ್ಪೆಶಲ್ ಸ್ಲೈಡ್‍ಗಳಿದ್ದವು. ಶುರುವಿನಲ್ಲಿ ವೆಲ್ ಕಂ, ಸುಸ್ವಾಗತ; ನಂತರ ಇಂಟರ್ವಲ್, ಮಧ್ಯಂತರ; ಕೊನೆಗೆ ಶುಭಂ, ದಿ ಎಂಡ್, ಸಮಾಪ್ತ್, ನಮಸ್ಕಾರ, ಹೀಗೆ. ಇದಲ್ಲದೆ, ನಡುನಡುವೆ ಸೂರ್ಯನ ಬೆಳಕು ಚಲಿಸಿ, ಪ್ರೊಜೆಕ್ಟರ್ ನಿಂದ ಹೊರಗೆ ಹೋಗಿ ಬಿಡುತ್ತಿತ್ತು. ಆಗ ನಾರಾಯಣ ಓಡಿ ಹೋಗಿ ಕನ್ನಡಿಯನ್ನು ಪುನಃ ಸರಿಯಾಗಿಟ್ಟು ಬರುತ್ತಿದ್ದ. ಆ ಸಮಯದಲ್ಲಿ ರೀಲ್ ಚೇಂಜ್, ಸೈಲೆನ್ಸ್ ಪ್ಲೀಸ್ ಎಂಬ ಸ್ಲೈಡನ್ನು ತೋರಿಸುತ್ತಿದ್ದೆ.
ನಮ್ಮ ಶೋ ಘಂಟಸಾಲನ ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂನಿಂದ ಶುರುವಾಗುತ್ತಿತ್ತು. ಆಯಾ ಸೀನ್ ಗೆ ತಕ್ಕಂತೆ ನಾರಾಯಣ ತನ್ನ ಮಿಮಿಕ್ರಿ ಸಮೇತ ಕಾಮೆಂಟರಿ ಕೊಡುತ್ತಿದ್ದ. ಕನ್ನಡವಾದರೆ ಕನ್ನಡ, ತಮಿಳಾದರೆ ತಮಿಳು, ಹಿಂದಿಯಾದರೆ ಹಿಂದಿ ಅದೇನು ಗೊತ್ತಿತ್ತೋ ಅದೇ ಹರುಕುಮುರುಕು ಭಾಷೆಯಲ್ಲಿ. ಡಿಶ್ಯುಂ..ಡಿಶ್ಯುಂ.. ಹೊಡೆದಾಟದ ಸ್ಲೈಡ್ ಗಳು, ಯುದ್ಧ, ಸಸ್ಪೆನ್ಸ್ ಸೀನುಗಳು ವಿವಿಧ ಅಡಿಯೋ ಇಫೆಕ್ಟ್ಸ್ ಗಳಿಂದ ಬಹಳ ರೋಚಕವಾಗಿರುತ್ತಿದ್ದವು. ಅದರಲ್ಲೂ ನರಸಿಂಹರಾಜು, ತಾಯ್ ನಾಗೇಶ್, ಜಾ~ನಿವಾಕರ್ ಸೀನುಗಳು ಬಂತೆಂದರೆ ಟ್ರಾಂ∫..ಟ್ರ.ಡಾ∫..ನ್ ! ಆಡಿಟೋರಿಯಂನಲ್ಲಿ ಎಲ್ಲರಿಗೂ ಕರೆಂಟು ಹೊಡೆದಂತೆ ಮಿಂಚಿನ ಸಂಚಾರ! ಶಾಲೆಯಲ್ಲಿ ನಾವೆಲ್ಲ ಇಂಗ್ಲಿಷ್ ಮೀಡಿಯಮ್ಮೇ ಆದರೂ ನಮಗೆ ಯಾರಿಗೂ ಅಷ್ಟು ಚೆನ್ನಾಗಿ ಇಂಗ್ಲಿಷ್ ಮಾತನಾಡಲು ಬರುತ್ತಿಲ್ಲ. ಇಂಗ್ಲಿಷ್ ಸ್ಲೈಡ್ ಹಾಕಿದ ಸಂದರ್ಭಗಳಲ್ಲಿ ಡಿಯೋಟ್ರ್.. ಬಾಂ~ಕೊರಾ∫ಟ್ರುಶ್.. ಮ‘ಶ್ಟ್ರಾ∫ಕ್ಯುಲಾ∫ಟ್.. ಅಂತ ಏನಾದರೂ ಹೊಡೆಯುತಿದ್ದ. ಇಂಟರ್ವಲ್‍ನಲ್ಲಿ ಎಲ್ಲರೂ ಹೊರಗೆ ಹೋಗಿ ಅವರವರ ಮನೆಯಲ್ಲಿಯೋ, ಅಥವಾ ಮುಂದುಗಡೆಯ ಚರಂಡಿಯಲ್ಲಿಯೋ ಸಾಲಾಗಿ ಒಂದ ಮಾಡಿ ಬರುತ್ತಿದ್ದರು. ಕೊನೆಗೆ ಭಾರತದ ಬಾವುಟವಿದ್ದ ಚಿತ್ರ: ಆಗ ತಪ್ಪದೆ ಎಲ್ಲರೂ ಎದ್ದು ನಿಂತು ಜನಗಣಮನ ಹಾಡುತ್ತಿದ್ದರು.
ಅಲ್ಲಿಂದಾಚೆಗೆ ಎಲ್ಲರ ಬಾಯಲ್ಲೂ ಆ ದಿನ ಪೂರ್ತಿ ಆ ಸಿನೆಮಾ ಶೋವಿನದೇ ಮಾತು! ಅದನ್ನೇ ನೆನಸಿ ನೆನಸಿ ನಗುವುದು, ಕುಣಿಯುವುದು!
ಆಗ ವಿಶೇಷ ಬೇಸಿಗೆ ಶಿಬಿರಗಳಿಲ್ಲ, ಸಮ್ಮರ್ ಕೋಚಿಂಗ್ ಕಾಂ∫ಪ್ ಗಳಿಲ್ಲ, ನಮ್ಮ ತಂದೆ-ತಾಯಿಗೆ ಮಕ್ಕಳು ಎಲ್ಲಿ-ಏನಾಗಿ ಬಿಡುತ್ತಾರೋ ಎಂಬ ಆತಂಕವಿಲ್ಲ, ಎಲ್ಲಕ್ಕಿಂತ ಮುಖ್ಯವಾಗಿ ಒಂದಿಷ್ಟೂ ಖರ್ಚಿಲ್ಲ. ಶಾಲೆಯ ಪರೀಕ್ಷೆಗಳು ಮುಗಿಯುತ್ತಿದ್ದಂತೆ ನಮ್ಮದೇ ಪ್ರೋಗ್ರಾ∫ಮ್ಸ್ ಇರುತ್ತಿದ್ದವು. ಕಾಡು ಸುತ್ತುವುದು, ವಾಕಿಂಗ್ ಹೋಗುವುದು, ಪುಸ್ತಕ ಓದುವುದು…. ಒಟ್ಟಿನಲ್ಲಿ ಬೆಳಿಗ್ಗೆ ತಿಂಡಿ ತಿಂದು ಹೊರಟರೆ, ಮಧ್ಯಾಹ್ನ ಊಟದ ಸಮಯಕ್ಕೆ ಮತ್ತು ಸಂಜೆ ಬೀದಿ ದೀಪ ಹತ್ತುವುದರ ಒಳಗೆ ಮನೆಯಲ್ಲಿ ಹಾಜರಿರಬೇಕೆಂಬುದು ರೂಲ್ಸ್. ಆ ಕಾಲದಲ್ಲಿ ಟೆಲಿವಿಷನ್ ಎಂಬ ಹೆಸರೇ ಕೇಳಿಲ್ಲದ ನಾವು ಎಷ್ಟು ಪುಣ್ಯವಂತರು!