ಕಿಷ್ಕಿಂಧೆಯ ಕಪಿಸೈನ್ಯ
ಆಗ ನಾನಿನ್ನೂ ಹೈಸ್ಕೂಲಿನ ವಿದ್ಯಾರ್ಥಿ. ಮೈಸೂರಿನ CFTRIನ ಸಿಬ್ಬಂದಿಗಳು ಚಿತ್ರದುರ್ಗಕ್ಕೆ ಟ್ರಿಪ್ ಹಾಕಿದ್ದರು. ನನ್ನ ಚಿಕ್ಕಪ್ಪ ಆ ವಿಭಾಗದ ಉನ್ನತ ವಿಜ್ಞಾನಿಯಾದ್ದರಿಂದ ಅವರೂ ಟಿಕೆಟ್ ತೆಗೆದುಕೊಂಡಿದ್ದರು. ಆದರೆ, ಕೆಲಸದ ಒತ್ತಡದಿಂದ ಅವರು ಹೋಗಲಿಲ್ಲ. ಮನೆಯಲ್ಲಿ ನನ್ನ ಜೊತೆಗಾರ ವಿಜಯರಂಗನೂ ತಯಾರಿರಲಿಲ್ಲವಾದ್ದರಿಂದ ನಾನು ಹೋಗಿಬಂದೆ.
ಚಿತ್ರದುರ್ಗದ ಚರಿತ್ರೆ, ಅಲ್ಲಿನ ಏಳು ಸುತ್ತಿನ ಕೋಟೆ, ವಾಸ್ತುಶಿಲ್ಪ, ತಾಂತ್ರಿಕ ಕೌಶಲ್ಯ, ನೀರಿನ ಜಲಾಶಯಗಳು ಮತ್ತು ಕಾಲುವೆಗಳು, ಓಬವ್ವನ ಕಿಂಡಿ, ಇವೆಲ್ಲವನ್ನೂ ನಡೆದು, ಸುತ್ತಿ ನೋಡಿದ್ದು ಇನ್ನೂ ನೆನಪಿನಲ್ಲಿ ಹಸುರಾಗಿದೆ. ಆದರೆ, ಚಿತ್ರದುರ್ಗದಲ್ಲಿ ಅವೆಲ್ಲಕ್ಕಿಂತ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದ ಒಂದು ಅನುಭವದ ಘಟನೆಯನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಚಿತ್ರದುರ್ಗದ ಕೋಟೆ-ಕೊತ್ತಳಗಳನ್ನು ಸುತ್ತಿ ನೋಡುತ್ತಿದ್ದಾಗ, ಒಂದು ಕಡೆ, ಸುಮಾರು ಮೂವತ್ತು ಅಡಿ ಎತ್ತರವಿದ್ದ ಒಂದು ಭಾರಿ ಗಾತ್ರದ ಬಂಡೆಯೊಂದು ಕಾಣಿಸಿತು. ಅದರ ಕೆಳಗಡೆ ಆಂಜನೇಯನ ಗುಡಿ ಎಂದು ಬೋರ್ಡ್ ಹಾಕಿದ್ದರು. ಮೇಲೆ ಯಾವ ಗುಡಿಯೂ ಕಾಣುತ್ತಿರಲಿಲ್ಲ. ಬಹುಶಃ ಆ ಬಂಡೆಯ ಮೇಲೆ, ಆಚೆಗೆಲ್ಲಿಯೋ ಗುಡಿ ಇದ್ದಿರಬೇಕು. ಮುಂದುಗಡೆ ನಮ್ಮೊಂದಿಗಿದ್ದ ಗೈಡ್ ಹೇಳುತ್ತಿದ್ದ ವಿವರಣೆಗಳು ಅರ್ಧಂಬರ್ಧ ಕೇಳುತ್ತಿತ್ತು. ಇದ್ದಕಿದ್ದಂತೆ ಎಲ್ಲ ಹುಡುಗರೂ ‘ಹೋ’ ಎಂದು ಕೂಗುತ್ತಾ ಆ ಬಂಡೆಯನ್ನು ಹತ್ತಲು ಶುರು ಮಾಡಿದರು. ನಾನೂ ಹಿಂದೆ-ಮುಂದೆ ನೋಡದೆ ಅವರೊಂದಿಗೆ ಬಂಡೆಯನ್ನು ಹತ್ತತೊಡಗಿದೆ.
ಮೇಲಕ್ಕೆ ಹತ್ತಲು ಏಣಿಯೇನೂ ಇರಲಿಲ್ಲ. ಆ ಬಂಡೆಯಲ್ಲಿಯೇ ಸಾಲಾಗಿ ಒಂದೊಂದಡಿಗೆ, ಅಕ್ಕ-ಪಕ್ಕ, ಸಣ್ಣ ಸಣ್ಣ ಗೂಡುಗಳನ್ನು ಕೊರೆದು ಕೆತ್ತಿದ್ದರು. ಅದರಲ್ಲಿ ನಮ್ಮ ಕೈಕಾಲುಗಳನ್ನಿಟ್ಟುಕೊಂಡು ಒಬ್ಬರ ಹಿಂದೆ ಒಬ್ಬರು ಹತ್ತಬೇಕಿತ್ತು. ಮೇಲಿನವ ಗೂಡಿನಿಂದ ತನ್ನ ಕಾಲನ್ನೆತ್ತಿದರೆ, ಕೆಳಗಿನವ ತನ್ನ ಕೈಯನ್ನು ಅದರಲ್ಲಿಟ್ಟು ಮುಂದಕ್ಕೆ ಹತ್ತಬೇಕು.
ನಾಲ್ಕೈದು ಅಡಿ ಹತ್ತಿದ ಮೇಲೆ ತಲೆಯೆತ್ತಿ ನೋಡಿದೆ. ನನ್ನ ಮುಂದೆ ಹತ್ತಾರು ಹುಡುಗರು ನಿಧಾನವಾಗಿ ಹತ್ತುತ್ತಿದ್ದರು. ಬಂಡೆಯ ತುದಿಯೇ ಕಾಣುತ್ತಿರಲಿಲ್ಲ; ಬದಲಿಗೆ ವಿಶಾಲವಾದ ಆಕಾಶ ಕಾಣುತ್ತಿತ್ತು! ಮೆತ್ತಗೆ ಕೆಳಗೆ ನೋಡಿದೆ. ಮೂರು ಮಂದಿ ನನ್ನ ಹಿಂದೆ ಹತ್ತುತ್ತಿದ್ದರು. ಇಳಿದುಬಿಡಲೆ ಎಂಬ ಯೋಚನೆ ತಲೆಗೆ ಬಂತು; ಮರುಕ್ಷಣ ಏನಾದರಾಗಲಿ, ಎಂದು ಭಂಡ ಧೈರ್ಯದಿಂದ ಮುಂದುವರಿದೆ.
ಹತ್ತು ಅಡಿ ಮೇಲಕ್ಕೆ ಹತ್ತಿರಬಹುದು. ಮನಸ್ಸಿಗೆ ಒಂದು ರೀತಿಯ ದಿಗಿಲಾಗತೊಡಗಿತು. ಆ ಗೂಡುಗಳನ್ನು ನೂರಾರು (ಅಥವಾ ಸಾವಿರಾರು?) ವರ್ಷಗಳಿಂದ ಜನ ಹತ್ತಿ ಹತ್ತಿ ಒಳಬದಿಯೆಲ್ಲ ನಯವಾಗಿ ಹೋಗಿತ್ತು. ಸಾಲದ್ದಕ್ಕೆ ಅವುಗಳೆಲ್ಲ ಕೆಳಮುಖವಾಗಿ ಕೊರೆಯಲಾಗಿದ್ದವು. ಗೂಡುಗಳೊಳಗೆ ಕೈಕಾಲು ಬೆರಳುಗಳಿಗೆ ಸರಿಯಾದ ಹಿಡಿತ ಸಿಗುತ್ತಿರಲಿಲ್ಲ. ಆ ರಣ ಬಿಸಿಲಿನಲ್ಲಿ ಸುತ್ತಾಡಿ, ಮೊದಲೇ ಮೈಯೆಲ್ಲ ಬೆವೆತು ಹೋಗಿತ್ತು. ಅದರೊಂದಿಗೆ ಈಗ ಅಂಗೈ ಮತ್ತು ಅಂಗಾಲುಗಳು ಕೂಡ ಬೆವರತೊಡಗಿದವು.
ಕೈಕಾಲು ಅಕಸ್ಮಾತ್ತಾಗಿ ಜಾರಿಬಿಟ್ಟರೆ! ಧಪ್ಪನೆ ಕೆಳಕ್ಕೆ ಬಿದ್ದರೆ, ನನ್ನ ಹಿಂದೆ ಹತ್ತುತ್ತಿರುವವರ ಗತಿಯೇನು? ಆ ವಿಚಾರವನ್ನು ಮನಸ್ಸಿನಲ್ಲಿ ನೆನೆಸಿಕೊಂಡೇ ಗಾಬರಿಯಾಯಿತು. ಅದೇ ರೀತಿ, ಅಥವಾ ಅದಕ್ಕಿಂತಲೂ ಹೆಚ್ಚಾಗಿ, ಅಪ್ಪಿತಪ್ಪಿ ಮೇಲಿನವರು ಯಾರಾದರೂ ಜಾರಿದರೆ ನನ್ನ ಗತಿಯೇನು? ಅಯ್ಯೋ ದೇವರೆ, ನನಗೆ ಬೇಕಿತ್ತೆ ಈ ಉಸಾಬರಿ? ಒಳ್ಳೇ ಕಪಿಯ ಹಾಗೆ ಈ ಸಾಹಸಕ್ಕೆ ಕೈಹಾಕಿದೆನಲ್ಲ! ಈಗ ಕೆಳಗೆ ನೋಡಲೂ ಭಯ, ಮೇಲೆ ನೋಡಲೂ ಭಯವಾಯಿತು! ಮಾರುತೀ, ಒಂದು ಸಾರಿ ಮೇಲಕ್ಕೆ ಹತ್ತಿಬಿಟ್ಟರೆ ಸಾಕಪ್ಪಾ ಎಂದುಕೊಂಡೆ!
ನಮ್ಮೊಂದಿಗೆ ಬಂದಿದ್ದ ಗೈಡ್ ಬುದ್ಧಿವಂತ! ಆತ ನಮ್ಮ ಜೊತೆಗೆ ಹತ್ತಿರಲಿಲ್ಲ. ಆ ಆಂಜನೇಯನ ಗುಡಿ ಮೇಲೆ ಎಲ್ಲಿದೆಯೋ? ಹಿಂದಿರುಗಲು ಕೂಡ, ಇದೇ ರೀತಿ ಬಂಡೆಯ ಗೂಡುಗಳೊಳಗೆ ಕೈಕಾಲಿಟ್ಟು ಇಳಿಯಬೇಕೆ? ಅಬ್ಬಾ! ಏನಾದರಾಗಲಿ, ಮೇಲಕ್ಕೆ ಹತ್ತಿದ ನಂತರ, ಆಚೆಯಿಂದ ಅದೆಷ್ಟೇ ದೂರವಿರಲಿ, ದಿನವಿಡೀ ಕಷ್ಟಪಟ್ಟು ನಡೆದರೂ ಪರವಾಗಿಲ್ಲ, ಈ ಬಂಡೆಯನ್ನು ಹಿಡಿದು ಮಾತ್ರ ಇಳಿಯುವುದಿಲ್ಲ ಎಂದುಕೊಂಡೆ.
ಕೊನೆಗೂ ಬಂಡೆಯ ತುದಿಯನ್ನು ತಲುಪಿದೆ. ಮೇಲಕ್ಕೆ ಹತ್ತಿ ನೋಡಿದರೆ, ಅಲ್ಲಿ ವಿಶಾಲವಾದ ಬಯಲಿನಲ್ಲಿ ಹನುಮಂತನ ದೇವಸ್ಥಾನವಿತ್ತು. ಆ ಹೆಬ್ಬಂಡೆಯ ಬದಿಯಿಂದ ಗುಡಿಗೆ ಹತ್ತಿ-ಇಳಿಯಲು ಸರಾಗವಾದ ರಾಜಮಾರ್ಗ! ನಮ್ಮ ಜೊತೆಯಲ್ಲಿದ್ದವರೆಲ್ಲ ಈಗಾಗಲೇ ನಡೆದುಕೊಂಡು ಬಂದು ಆಂಜನೇಯನ ದರ್ಶನ ಪಡೆಯುತ್ತಿದ್ದರು!
ನನ್ನ ಜೊತೆಗೆ ಹರಸಾಹಸದಿಂದ ಬಂಡೆಯನ್ನು ಹತ್ತಿದ ವಾನರಸೈನ್ಯವು, ಮೌಂಟ್ ಎವರೆಸ್ಟ್ ಪರ್ವತವನ್ನು ಹತ್ತಿದ ತೇನಸಿಂಗ್‌ನಂತೆ ಬೀಗುತ್ತಿದ್ದರೆ, ನಾನು ಮಾತ್ರ ಇಂಗು ತಿಂದ ಮಂಗನಂತಾಗಿದ್ದೆ!
- ಡಾ| ಎಸ್. ವಿ.ನರಸಿಂಹನ್, ವಿರಾಜಪೇಟೆ.