Saturday, July 2, 2011

ಚುಟಕ ಬ್ರಹ್ಮನ ಕನ್ನಡ ವೈಭವ

ಮಾನ್ಯ ಶಿವರಾಮ ಭಟ್ಟರು ನಿಮಗೆಲ್ಲ ಪರಿಚಿತರಲ್ಲದಿರಬಹುದು. ಎಲ್‌ಐಸಿ ಅಧಿಕಾರಿಯಾಗಿ ನಿವೃತ್ತರಾಗಿ ಈಗ ಉಡುಪಿಯಲ್ಲಿ ನೆಲೆಸಿದ್ದಾರೆ. ಶಿವರಾಮ ಭಟ್ಟರ ವಿಶೇಷತೆ ಏನಪ್ಪಾ ಎಂದರೆ, ಅವರು ಒಂದು ಗುಂಡುಕಲ್ಲನ್ನಾದರೂ ಮಾತನಾಡಿಸಿ ಸ್ನೇಹ ಸಂಪಾದಿಸಿಬಿಡುತ್ತಾರೆ! ಅದೇನು ಮಹಾ, ಎಷ್ಟೋ ಮಂದಿ ಇಂತಹ ಹರಟೆಮಲ್ಲರನ್ನು ನಾವು ಕಂಡಿದ್ದೇವೆ ಎಂದು ನೀವು ಹೇಳಬಹುದು. ಆದರೆ ಶಿವರಾಮ್‌ರವರ ಸ್ನೇಹ ಶೀಘ್ರದಲ್ಲಿ ಬಿಟ್ಟು ಹೋಗುವಂತಹದ್ದಲ್ಲ. ಒಂದು ಸಾರಿ ನೀವು ಅವರ ಸ್ನೇಹಿತರಾಗಿಬಿಟ್ಟರೆ ಅದು ವಜ್ರದಂತೆ ಉಳಿಯುವ ನಿರಂತರ ಗೆಳೆತನ! ಗೆಳೆತನವನ್ನು ಸಂಪಾದಿಸುವುದು ಎಷ್ಟು ಮುಖ್ಯವೋ ಅದನ್ನು ಉಳಿಸಿಕೊಳ್ಳುವುದೂ ಅಷ್ಟೇ ಮುಖ್ಯ. ಅವರು ನಮ್ಮೂರಿನ ಎಲ್‌ಐಸಿ ಆಫೀಸನ್ನು ಬಿಟ್ಟು ಹತ್ತು ವರ್ಷಗಳ ನಂತರವೂ ಉಡುಪಿಯ ತಮ್ಮ ತಮ್ಮನ ಮನೆ ಒಕ್ಕಲಿಗೆ ಆಮಂತ್ರಣ ಕಳುಹಿಸಿದ್ದು ಆ ಸ್ಥಿರವಾದ ಗೆಳೆತನದಿಂದಲೇ!


ಗೃಹಪ್ರವೇಶ ಕಾರ್ಯಕ್ರಮಕ್ಕೆ ಹೋಗಲು ಆಗಿಂದಾಗಲೇ ತೀರ್ಮಾನಿಸಿಬಿಟ್ಟೆ. ಇಲ್ಲಿಂದ ಇನ್ನೂರು ಕಿಲೋಮೀಟರ್ ದೂರದ ಊರಿಗೆ ಹೋಗಲು ಮತ್ತೊಂದು ಕಾರಣ ಅವರ ತಮ್ಮ ಡುಂಡಿರಾಜ ಭಟ್ಟರು. ನನ್ನಲ್ಲಿರುವ ಡುಂಡಿರಾಜರ ಹನಿಗವನಗಳ ಹಲವು ಪುಸ್ತಕಗಳನ್ನು ಓದಿದ್ದೆನೇ ವಿನಃ ಅವರನ್ನು ಕಂಡಿರಲಿಲ್ಲ. ಅಲ್ಲಿ ಅಷ್ಟೇ ಗಟ್ಟಿತನದ ಡುಂಡಿರಾಜರ ಸ್ನೇಹವೂ ದೊರಕಿತು.


ನಮ್ಮೂರಿನ ಹತ್ತಿರವಿರುವ ಅರಮೇರಿ ಗ್ರಾಮದ ಕಳಂಚೇರಿ ಮಠದಲ್ಲಿ ಅಲ್ಲಿನ ಯುವ ಸ್ವಾಮೀಜಿಯವರು ಪ್ರತಿ ತಿಂಗಳ ಮೊದಲ ಭಾನುವಾರ ‘ಹೊಂಬೆಳಕು’ ಎಂಬ ಮಾಸಿಕ ತತ್ತ್ವಚಿಂತನ ಗೋಷ್ಠಿಯನ್ನು ಕಳೆದ ನೂರು ತಿಂಗಳುಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಧರ್ಮ, ತತ್ತ್ವ, ವಿಜ್ಞಾನ, ಪರಿಸರ, ಖಗೋಳ ಮುಂತಾದ ವಿವಿಧ ವಿಷಯಗಳಲ್ಲದೆ, ನೃತ್ಯ, ಸಂಗೀತ, ಭಾಷೆ, ಸಾಹಿತ್ಯ, ಸಂಸ್ಕೃತಿ ಹೀಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಕಂಡಿದ್ದೇವೆ, ಕೇಳಿದ್ದೇವೆ ಮತ್ತು ಅನುಭವಿಸಿದ್ದೇವೆ. ಇಂತಹ ಒಂದು ಭಾನುವಾರ ಡುಂಡಿರಾಜರನ್ನೂ ಕರೆಸಿದ್ದರು. ಆ ಕಾರ್ಯಕ್ರಮದ ಉದ್ಘಾಟನಾ ಭಾಷಣದಲ್ಲಿ ನಾನು ಡುಂಡಿರಾಜರ ಹನಿಗವನಗಳನ್ನೇ ಆಧಾರವಾಗಿಟ್ಟುಕೊಂಡು ಕನ್ನಡ ಎಷ್ಟೊಂದು ಸುಂದರ ಭಾಷೆ ಎಂಬುದನ್ನು ತೋರಿಸಲು ಪ್ರಯತ್ನಿಸಿದ್ದೇನೆ.


ಹನಿಗವನಗಳ ರಚನೆಯಲ್ಲಿ ವಿಶಿಷ್ಟವಾದ ಮೊನಚಿನಿಂದ ಹಾಸ್ಯದ ಲೇಪನ ಮಾಡಿ ಅರ್ಥವನ್ನು ಫಳಕ್ಕನೆ ಮಿಂಚಿಸುತ್ತ ಬರೆಯುವವರಲ್ಲಿ ಡುಂಡಿರಾಜರು ಪ್ರಸಿದ್ಧರು. ಅವರು ಈ ಸಾಹಿತ್ಯಪ್ರಕಾರದಲ್ಲಿ ಕನ್ನಡ ಭಾಷೆಯ ಪದಗಳನ್ನು ಎಷ್ಟು ನಿಷ್ಕೃಷ್ಟವಾಗಿ ಉಪಯೋಗಿಸಿಕೊಂಡಿದ್ದಾರೆಂಬುದನ್ನು ಅವರ ಚುಟಕಗಳಲ್ಲಿ ನಾವು ಗಮನಿಸಬಹುದು. ಅದಕ್ಕಿಂತಲೂ ಹೆಚ್ಚಾಗಿ ಚುಟಕ ಸಾಹಿತ್ಯಕ್ಕೆ ಕನ್ನಡ ಭಾಷೆ ಎಷ್ಟು ಸಮರ್ಥವಾದ ಅಡಿಪಾಯ ಹಾಕಿಕೊಡಬಲ್ಲದು ಎಂಬುದೂ ನಮಗೆ ವೇದ್ಯವಾಗುತ್ತದೆ!


ಪ್ರಾಸ:
ಇದು ಎಲ್ಲ ಚುಟಕ ಸಾಹಿತ್ಯದಲ್ಲೂ ಅತ್ಯವಶ್ಯ. ಅಡಿ, ಕಡಿ, ಬಡಿ, ಮಡಿ ..., ಆಟ, ಪಾಟ, ಮಾಟ, ಲೋಟ ..., ಇವೆಲ್ಲ ಪ್ರಾಸಗಳು. ಹೀಗಾಗಿ ಪ್ರಾಸಬದ್ಧ ಚುಟಕಗಳಿಗೆ ನಾನು ವಿಶೇಷ ಉದಾಹರಣೆ ನೀಡುವ ಅವಶ್ಯಕತೆಯೇ ಇಲ್ಲ.


ಪದಲೋಪ:
ಮನೆಮುರುಕರನ್ನು ನೀವು ಕಂಡಿರಬಹುದು; ಮನೆ ಮುರಿದರೆ ನಿಮಗೆ ಆಗುವುದು ನಷ್ಟವೇ! ಆದರೆ ಒಂದು ಕನ್ನಡ ಪದವನ್ನು ಮುರಿದು, ಒಂದು ಅಕ್ಷರವನ್ನು ಕಿತ್ತುಹಾಕಿ, ಉಳಿದ ಭಾಗವನ್ನು ಹೊಸ ಅರ್ಥದೊಂದಿಗೆ ಬಳಸಿಕೊಂಡು ರಚಿಸಿದ ಚುಟಕ ಹೀಗಿದೆ:


ಅಯ್ಯಾ ಕುಮಾರವ್ಯಾಸ
ನಾನು ನಿನ್ನ ದಾಸ
ನೀನು ಬರೆದದ್ದು
ಭಾಮಿನಿ
ನನ್ನದು ಬರೇ
ಮಿನಿ!


ಪದಬಂಧ:
ಇದು ಮೊದಲ ಸನ್ನಿವೇಶಕ್ಕೆ ವಿರುದ್ಧ. ಅಲ್ಲಿ ಪದವನ್ನು ಮುರಿದಿರಿ. ಇಲ್ಲಿ ಎರಡು ಪದಗಳನ್ನು ಜೋಡಿಸಿ ಸಿಗುವ ಹೊಸ ಅರ್ಥದ ಪದವನ್ನು ಬಳಸಿಕೊಂಡು ಹೇಗೆ ಚುಟಕವನ್ನು ರಚಿಸಬಹುದು ಎಂಬುದಕ್ಕೆ ಉದಾಹರಣೆ:


ಬರೆದೂ ಬರೆದೂ
ಕನ್ನಡ ಕವನ
ಪಡೆದೆನು
ಕನ್ನಡಕವನ್ನ!


ಪದಭಂಗ:
ಒಂದು ಪದವನ್ನು ಕತ್ತರಿಸಿ ಆ ಎರಡೂ ಭಾಗಗಳನ್ನು ಬಳಸಿ ಹನಿಗವನ ರಚಿಸಿದರೆ ಹೇಗಿರುತ್ತದೆ, ಎನ್ನುವುದಕ್ಕೆ ತಗೊಳ್ಳಿ ಈ ಮಿನಿ ಕವನ:


ಏನೆಂದೆ ಪ್ರಿಯಾ?
ನಾನು ಸದಾ ನಗಬೇಕು ಅಂದೆಯಾ?
ನಗಬೇಕಾದರೆ ನನಗೆ
ಮೈತುಂಬ ನಗ
ಬೇಕು!


ಮತ್ತೊಂದು:


"ನನ್ನೊಲವಿನ ದೀಪಾ!
ಆಗು ನನ್ನ ಬಾಳಿಗೆ ನಂದಾದೀಪ"
ಎಂದೆಲ್ಲ ಪ್ರೇಮ ಪತ್ರ
ಬರೆದಿದ್ದ ಹುಡುಗ
ಕೇಳುತ್ತಿದ್ದಾನಂತೆ ಈಗ
"ಆ ಪತ್ರ ನನ್ದಾ ದೀಪಾ?"


ಆಗಮ:
ಸಂದಿ-ಸಮೋಸಗಳನ್ನೆಲ್ಲ ನೀವು ಹೈಸ್ಕೂಲಿನಲ್ಲಿ ಸವಿದಿರಬಹುದು. ನನಗೂ ಮರೆತು ಹೋಗಿದೆ. ಒಂದು ಪದಕ್ಕೆ ಮತ್ತೊಂದು ಅಕ್ಷರವನ್ನು ತಂದು ಜೋಡಿಸಿ ಅದರಿಂದ ಉದ್ಭವವಾದ ಹೊಸ ಪದದಿಂದ ಇಗೊಳ್ಳಿ ಚಾರ್ಲಿ ಚಾಪ್ಲಿನ್‌ನ ಹಾಸ್ಯವನ್ನು ನೆನಪಿಸುವಂತಹ ಉದಾಹರಣೆ:


ಹೊರಗಡೆ ಭರ್ಜರಿ
ಬಣ್ಣದ ಅಂಗಿ
ಹರಿದಿದೆ ಒಳಗಿನ
ಬನಿಯನ್ನು.
ಹೂತಿಡುವೆನು ನಗೆ
ಮಾತುಗಳೊಳಗೆ
ನೋವು ವಿಷಾದ ಕಂ-
ಬನಿಯನ್ನು!


ಆಮದು/ರಫ್ತು:
ಕೆಲವು ಕನ್ನಡ ಪದಗಳಿವೆ. ಅವುಗಳ ಉಚ್ಛರಣೆ ಮತ್ತೊಂದು ಭಾಷೆಯ ಪದವೂ ಆಗಿರುತ್ತದೆ. ಅಂತಹ ಸಂದರ್ಭವನ್ನು ಬಳಸಿಕೊಂಡು ರಚಿಸಿದ ಚುಟಕ ಹೀಗಿದೆ:


ಇದೇ ಕವನಗಳನ್ನು ಈ ಹಿಂದೆ
ಇದೇ ಬುದ್ಧಿಜೀವಿ ಗೆಳೆಯರ ಮುಂದೆ
ಓದಿದಾಗ ಅಷ್ಟೊಂದು
ಪರಿಣಾಮ ಬೀರಿರಲಿಲ್ಲ.
ಯಾಕೆಂದರೆ ಅಲ್ಲಿ
ಬೀರಿರಲಿಲ್ಲ.


ಮತ್ತೊಂದು:


ತಿಂಗಳ ಮೊದಲು

ಸಾಲರಿ

ತಿಂಗಳ ಕೊನೆಯಲ್ಲಿ

ಸಾಲ ರೀ!


ಪದವ್ಯತ್ಯಯ:
ಪದದ ಒಂದು ಅಕ್ಷರವನ್ನು ಅತ್ಯಲ್ಪ ಬದಲಾಯಿಸಿ ದೊರಕುವ ಹೊಸ ಪದದ ಆವಿಷ್ಕಾರ ಹೇಗಿರಬಹುದು ಎನ್ನುವುದಕ್ಕೆ ಈ ಎರಡು ಹನಿಗವನಗಳನ್ನು ಗಮನಿಸಿ:


ಬಡವನಾದರೂ ಪ್ರಿಯೆ
ಹೃದಯ ಸಂಪತ್ತಿನಲ್ಲಿ
ನಾನೂ ಟಾಟಾ ಬಿರ್ಲಾ
ಎಂದ ತಕ್ಷಣ
ಹುಡುಗಿ ಹೇಳಿದಳು -
ಹಾಗಾದ್ರೆ ಟಾಟಾ ! ಬರ್ಲಾ ?


ಮತ್ತೊಂದು:


ಹಾಸ್ಯ ಕವನ
ಓದುವಾಗ ಜನ
ಬಿದ್ದು ಬಿದ್ದು ನಕ್ಕರು
ಕವಿಗೆ ಗೊತ್ತೇ ಇಲ್ಲ
ಪಂಚೆ ಜಾರಿ ಹೋಗಿ
ತೋರುತ್ತಿತ್ತು ನಿಕ್ಕರು!


ದ್ವಂದ್ವಾರ್ಥ:
ಹಾಗೆಂದೊಡನೆ ನಮಗೆ ನೆನಪಾಗುವುದು ಅಶ್ಲೀಲ ಸಾಹಿತ್ಯ. ಸಿನೆಮಾ-ನಾಟಕಗಳಲ್ಲಿ ನೀವು ಕೇಳಿರಬಹುದು. ಆದರೆ ಒಂದೇ ಪದಕ್ಕೆ ಬೇರೆ ಬೇರೆ ಎರಡು ಅರ್ಥಗಳಿರುವಂತಹ ಸನ್ನಿವೇಶಗಳು ಕನ್ನಡದಲ್ಲಿ ಹೇರಳವಾಗಿವೆ. ಅಂತಹ ಪದಗಳನ್ನು ಬಳಸಿಯೂ ಹನಿಗವನ ರಚಿಸಬಹುದೆಂದು ಈ ಉದಾಹರಣೆಗಳನ್ನು ನೋಡಿದರೆ ನಿಮಗೆ ತಿಳಿಯುತ್ತದೆ: ನವೆಂಬರ್ ಬಂತೆಂದರೆ ಎಲ್ಲರಿಗೂ ಎಲ್ಲಿಲ್ಲದ ಹುರುಪು! ಎಲ್ಲೆಲ್ಲೂ ಕನ್ನಡ ಪತಾಕೆ, ಎಲ್ಲೆಲ್ಲೂ ಕನ್ನಡಮ್ಮನ ಗಾನ, ಜೊತೆಗೆ ಕನ್ನಡ ಕಾರ್ಯಕ್ರಮಗಳಿಗೆ ಗಲ್ಲಿಗಲ್ಲಿಗಳಲ್ಲಿ ಚಂದಾ ವಸೂಲಿ!


ಕನ್ನಡಕ್ಕೆ ಹೋರಾಡುವ ನೀನು
ನಿಜಕ್ಕೂ ಕನ್ನಡದ ಕಲಿ!
ಆದರೂ ಒಂದೆರಡು
ಕನ್ನಡ ಅಕ್ಷರ ಕಲಿ!


ಇದು ಬಿ ಆರ್ ಎಲ್‌ರವರ ಹನಿಗವನ. ಮತ್ತೊಂದು ಡುಂಡಿರಾಜರದ್ದು:


ಗೆಳೆಯಾ ಒಪ್ಪಿದೆ
ನೀನು ನುಡಿದರೆ
ಮುತ್ತಿನ ಹಾರದಂತೆ!
ಆದರೂ ತುಸು
ಎಚ್ಚರ ವಹಿಸು
ಎಂಜಲು ಹಾರದಂತೆ!


ಯದಾರ್ಥ:
ಕೊನೆಗೆ ಒಂದು ಕನ್ನಡ ಪದ. ಇದಕ್ಕೆ ಯಾವ ದ್ವಂದ್ವಾರ್ಥವೂ ಇಲ್ಲ, ಯಾವ ಬದಲಾವಣೆಯೂ ಇಲ್ಲ. ಇರುವುದಿದ್ದಂತೆಯೇ ಬರೆದು ಅದಕ್ಕೆ ಎರಡು ಅರ್ಥ ಬರುವಂತೆ ಮಾಡಲು ಸಾಧ್ಯವೆ? ಅಕ್ಟೋಬರ್ ೨ರಂದು ನೀವು ತೆಗೆದುಕೊಳ್ಳಬಹುದಾದ ಪ್ರತಿಜ್ಞೆ:


ಗಾಂಧಿ ತಾತಾ
ನೀನು ಹೇಳಿದಂತೆ
ಮಾಡುತ್ತೇವೆ.
ಕೆಟ್ಟದ್ದನ್ನು ಕೇಳುವುದಿಲ್ಲ,
ಕೆಟ್ಟದ್ದನ್ನು ನೋಡುವುದಿಲ್ಲ,
ಕೆಟ್ಟದ್ದನ್ನು ಆಡುವುದಿಲ್ಲ.
ಮಾಡುತ್ತೇವೆ!


ಡುಂಡಿರಾಜರ ಈ ಪದ ಚಮತ್ಕಾರಗಳನ್ನು ಓದಿದಾಗ ನಮಗೆಲ್ಲ ಸ್ವಾಭಾವಿಕವಾಗಿಯೇ ಇಂತಹ ಚುಟಕಗಳನ್ನು ಬರೆಯುವ ಚಪಲ ಉಂಟಾಗುತ್ತದೆ. ಇದೇನು ಮಹಾ, ನಮಗೂ ಕನ್ನಡ ಬರುವುದಿಲ್ಲವೆ? ಅದೇನು ಭಾರಿ ವಿದ್ಯೆಯೇ ಎಂದು ಅನ್ನಿಸುವುದೂ ಸಹಜವೆ. ನೀವೂ ಚುಟಕಗಳನ್ನು ಧಾರಾಳವಾಗಿ ಬರೆಯಲು ಪ್ರಯತ್ನಿಸಬಹುದು. ನಾನೂ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಅದಕ್ಕಾಗಿ ಕನ್ನಡ ನಿಘಂಟೊಂದನ್ನು ಎದುರಿಗಿಟ್ಟುಕೊಂಡು ಈ ಸಾಧನೆ ಮಾಡಲು ಹೊರಟೆ. ನಿಘಂಟಿನಲ್ಲಿ ‘ಅ’ಯಿಂದ ‘ಳ’ವರೆಗೆ ಒಂದೊಂದೇ ಪದವನ್ನು ಅಗೆದು-ಬಗೆದು, ಕತ್ತರಿಸಿ-ಮೊಟಕಾಯಿಸಿ, ಸಂಕಲನ-ವ್ಯವಕಲನ, ಹೀಗೆ ಎಷ್ಟೆಲ್ಲ ಸರ್ಕಸ್ ಮಾಡಿದರೂ ನನ್ನ ನಿಘಂಟು ಚಿಂದಿ-ಚಿತ್ರಾನ್ನವಾಯಿತೇ ವಿನಃ ಒಂದು ಚುಟಕ ಹುಟ್ಟಲಿಲ್ಲ!


ಡುಂಡಿರಾಜರ ಹನಿಗವನಗಳನ್ನು ಇತರೆ ಜನರಿಗೂ ತಿಳಿಹೇಳಬೇಕು, ತಿಳಿಹಾಸ್ಯದ ಚುಟಕಗಳನ್ನು ಕೇಳಿ ಎಲ್ಲರೂ ನಗಬೇಕು, ಇವರ ಅಪ್ರತಿಮ ಪ್ರತಿಭೆಯನ್ನು ದೇಶದ ಎಲ್ಲೆಡೆ ಸಾರಬೇಕೆಂದು ಅನ್ನಿಸುತ್ತದೆ. ಆದರೆ ಒಂದು ಭಾಷೆಯ ಸೊಗಡು ಆ ಭಾಷೆಗೇ ಸೀಮಿತವಾದ್ದರಿಂದ ಅವರ ಹನಿಗವನಗಳನ್ನು ಬೇರೆ ಭಾಷೆಗಳಿಗೆ ತರ್ಜುಮೆ ಮಾಡುವುದು ದುಃಸ್ಸಾಧ್ಯ.


ಡುಂಡಿರಾಜರು ಬರೇ ಹನಿಗವನಗಳ ಕರ್ತೃವಲ್ಲ. ಅವರೊಬ್ಬ ನಾಟಕಕಾರ, ಒಬ್ಬ ಕಲಾವಿದ ಮತ್ತು ಒಬ್ಬ ಸಾಹಿತ್ಯ ವಿಮರ್ಶಕರೂ ಹೌದು. ಇದು ಚುಟಕ ಬ್ರಹ್ಮ ಡುಂಡಿರಾಜರ ಕಿರು ಪರಿಚಯ.ಮತ್ತು ಕನ್ನಡ ಬಹ್ಮಾಂಡದ ಅಣುದರ್ಶನ!


No comments: