ಶುಕ್ರ ಸಂಭ್ರಮ
ಜೂನ್ ಆರರಂದು ಘಟಿಸಿದ ಶುಕ್ರ ಸಂಕ್ರಮದ ವಿಚಾರವಾಗಿ ಬರೆಯಬೇಕೆಂದು ಬಹಳ ಹಿಂದೆಯೇ ಅಂದುಕೊಂಡಿದ್ದೆ. ಆದರೆ ಸಣ್ಣ ಅಪಘಾತದಲ್ಲಿ ಬಲಗೈಯ ಮೊಣಕೈ ಮೂಳೆ ಮುರಿದುಕೊಂಡಿದ್ದರಿಂದ ಸಾಧ್ಯವಾಗಲಿಲ್ಲ. ಡಾ. ಬಿಶನ್ ನನ್ನ ಅಂಗೈ, ಮಣಿಕಟ್ಟು, ಮುಂಗೈ ಎಲ್ಲಾ ಸೇರಿಸಿ ಗಾರೆ ಕಲಸಿ ಮೆತ್ತಿಬಿಟ್ಟಿದ್ದ! ಕಳೆದ ಒಂದೂವರೆ ತಿಂಗಳು ನಿಸ್ಸಹಾಯಕನಾದ ವಿಕಲಾಂಗ ಚೇತನನಾಗಿಬಿಟ್ಟಿದ್ದೆ.
ಶುಕ್ರಗ್ರಹಣ ನಮ್ಮ ಊರಿನ ಮಟ್ಟಿಗೆ ಅತ್ಯಂತ ನೀರಸವಾದ ವಿದ್ಯಮಾನವಾಗಿತ್ತು. ಕೊಡಗಿನಲ್ಲಿ ಜೂನ್ ಐದರಿಂದಲೇ ಮಳೆಗಾಲ ಶುರುವಾಗಿಬಿಟ್ಟಿತ್ತು. ಮಾರನೆ ದಿವಸ ಸೂರ್ಯನಿಗೂ ನಮಗೂ ಮಧ್ಯೆ ಮೋಡದ ಬೃಹತ್ ಗೋಡೆಯೇ ಸಿದ್ಧವಾಗಿತ್ತು. ಆಕಾಶ ಹೋಗಲಿ, ಎದುರುಗಡೆಯ ಬೆಟ್ಟವೂ ಮೋಡದಿಂದ ಮುಸುಕಿಹೋಗಿತ್ತು! ಎರಡು ಶಾಲೆಗಳಲ್ಲಿ ಈ ಅಪರೂಪದ ಸನ್ನಿವೇಶವನ್ನು ವಿದ್ಯಾರ್ಥಿಗಳಿಗೆ ತೋರಿಸಲೆಂದು ವಿಶೇಷ ಕನ್ನಡಕಗಳೊಂದಿಗೆ, ಸಕಲ ವ್ಯವಸ್ಥೆಗಳನ್ನೂ ಮಾಡಿಕೊಂಡಿದ್ದರು. ಕೆಲವು ಮಕ್ಕಳಿಗಂತೂ ಏನು ನಡೆಯುತ್ತಿದೆಯೆಂದೇ ಗೊತ್ತಿರಲಿಲ್ಲ. ಮಳೆಯಲ್ಲಿಯೇ ಕೊಡೆ ಹಿಡಿದುಕೊಂಡು ಆಕಾಶ ನೋಡುತ್ತಿದ್ದರು. ಆದರೆ ಒಂದಿನಿತೂ ಶುಕ್ರಗ್ರಹಣದ ದರ್ಶನವಾಗಲೇ ಇಲ್ಲ. ಕೊನೆಗೆ ಎಲ್ಲಾ ಮುಗಿದ ಮೇಲೆ ಹತ್ತೂವರೆ ಗಂಟೆಗೆ, ನಮ್ಮನ್ನು ಕೆಣಕಲೆಂದೇ, ಒಂದಷ್ಟು ಘಳಿಗೆ ಸೂರ್ಯ ಇಣುಕಿದ!
ದೃಶ್ಯ ಮಾಧ್ಯಮಗಳಲ್ಲಿ ಒಂದು ಕ್ಷಣವೂ ಬಿಡದಂತೆ ಬೇರೆ ಬೇರೆ ನಗರಗಳಲ್ಲಿ ನಡೆಯುತ್ತಿದ್ದ ಗ್ರಹಣದ ಚಿತ್ರಗಳನ್ನು ತೋರಿಸುತ್ತಿದ್ದರು. ಹಲವಾರು ವಿಜ್ಞಾನಿಗಳು, ಸಂಪನ್ಮೂಲ ವ್ಯಕ್ತಿಗಳು, ನಿರಂತರ ಮಾಹಿತಿ ನೀಡುತ್ತಿದ್ದರು. ಇಂತಹ ಸಂದರ್ಭಗಳಲ್ಲಿ ಟಿವಿಯವರು ಇವರೊಂದಿಗೆ ಗಿಣಿಶಾಸ್ತ್ರ ಹೇಳುವ ಭಯಂಕರ ಬುರುಡೆ ದಾಸಯ್ಯರನ್ನೂ ಬಿಡದೆ ಕರೆತಂದುಬಿಡುತ್ತಾರೆ. ಅವರಂತೂ ಬಣ್ಣಬಣ್ಣದ ದಿರಿಸಿನಲ್ಲಿ ಮೈಯ್ಯೆಲ್ಲಾ ವಿಭೂತಿ, ಕುಂಕುಮ ಹಚ್ಚಿಕೊಂಡು, ಎಲ್ಲಾ ಗ್ರಹಗಳೂ ತಮ್ಮ ಕೈಯ್ಯಲ್ಲೇ ಇವೆಯೇನೋ ಎಂಬಂತೆ, ರೋಚಕವಾದ ಮಾತುಗಳಿಂದ ಸಾಮಾನ್ಯ ಜನರ ದಿಕ್ಕು ತಪ್ಪಿಸುತ್ತಿರುತ್ತಾರೆ. ಆದರೆ ಆಕಾಶ ತೋರಿಸಿಕೊಂಡು ಬರೇ ವಿಜ್ಞಾನ ಮಾತ್ರ ಹೇಳುತ್ತಿದ್ದರೆ, ಆ ಚಾನಲ್ನ ಟಿಆರ್ಪಿ ಬಿದ್ದುಹೋಗುವುದಿಲ್ಲವೆ? ಆದ್ದರಿಂದ ಸಿನೆಮಾ-ನಾಟಕಗಳಲ್ಲಿ ವಿದೂಷಕರಂತೆ ಅವರೂ ಮುಖ್ಯ ಅಂದುಕೊಳ್ಳಬೇಕು!
ಈ ಬಾರಿ ಜರುಗಿದ ಅಮೋಘ ಶುಕ್ರಗ್ರಹಣದ ಬಗ್ಗೆ ಸವಿವರವಾಗಿ, ಮನಮುಟ್ಟುವಂತೆ, ಅತ್ಯಂತ ಪ್ರಬುದ್ಧವಾಗಿ ಮೈಸೂರಿನ ಪ್ರೊ. ಎಸ್. ಎನ್. ಪ್ರಸಾದ್ರವರು ತಮ್ಮ ಬ್ಲಾಗ್ನಲ್ಲಿ ಎರಡು ವಾರಗಳ ಕಂತುಗಳಲ್ಲಿ ವಿವರಿಸಿದ್ದಾರೆ. ದಯವಿಟ್ಟು ಓದುಗರು ಅವರ ಬ್ಲಾಗ್ಗೆ ತೆರಳಲು
ಶುಕ್ರಗ್ರಹವು ಸೂರ್ಯನ ಸುತ್ತ ೨೨೫ ದಿನಗಳಿಗೊಮ್ಮೆ ಸುತ್ತುತ್ತದೆ. ಆದರೆ ಭೂಮಿಗೂ ಸೂರ್ಯನಿಗೂ ಮಧ್ಯೆ ಪ್ರತಿ ಸಾರಿ ಹಾದು ಹೋಗುವಾಗಲೂ ಗ್ರಹಣವಾಗುವುದಿಲ್ಲ. ಏಕೆಂದರೆ ಪ್ರತೀ ಬಾರಿಯೂ ನಮ್ಮ ಮತ್ತು ಶುಕ್ರನ ಪಥಗಳು ಒಂದೇ ಸಮತಲ ಮಟ್ಟದಲ್ಲಿ ಇರುವುದಿಲ್ಲ. ಆದ್ದರಿಂದ ಶುಕ್ರಗ್ರಹ ಸಾಮಾನ್ಯವಾಗಿ ಸೂರ್ಯನ ಉತ್ತರಕ್ಕೋ-ದಕ್ಷಿಣಕ್ಕೋ ಹಾದುಹೋಗುತ್ತದೆ. ನಮ್ಮಗಳ ಗಾತ್ರಕ್ಕೆ ಹೋಲಿಸಿದರೆ ನಮ್ಮ-ನಮ್ಮ ನಡುವೆ ಪರಸ್ಪರ ದೂರ ಊಹಿಸಲೂ ಆಗದಷ್ಟು ಅಗಾಧ! ಸೂರ್ಯ-ಶುಕ್ರ-ಭೂಮಿ ಮೂವರೂ ಒಂದೇ ಮಟ್ಟದಲ್ಲಿ ಬಂದಾಗ ಮಾತ್ರ ಹೀಗೆ ಗ್ರಹಣವಾಗುತ್ತದೆ. ಹೀಗೆ ಸೂರ್ಯನ ಮುಂದುಗಡೆಯಲ್ಲೇ ಶುಕ್ರಗ್ರಹ ಹಾದು ಹೋಗುವಾಗ ಸೂರ್ಯನ ಮೇಲೆ ಒಂದು ಸಣ್ಣ ಚುಕ್ಕೆ ನಿಧಾನವಾಗಿ ಅಡ್ಡಡ್ಡಕ್ಕೆ ಚಲಿಸಿದಂತೆ ತೋರುತ್ತದೆ.
ಆಕಾಶದಲ್ಲಿ ಈ ಗ್ರಹಗಳು, ನಕ್ಷತ್ರಗಳು ಮತ್ತು ವಿವಿಧ ಆಕಾಶಕಾಯಗಳು ನಿರಂತರವಾಗಿ ಆಡುವ ಜೂಟಾಟ, ಕಣ್ಣಾಮುಚ್ಚಾಲೆ ಆಟಗಳನ್ನು ನೋಡುವುದೇ ಚಂದ! ಅದೊಂದು ವಿಶಿಷ್ಟ ಅನುಭವ. ಮೇಲ್ನೋಟಕ್ಕೆ ನೋಡಲು ಯರ್ರಂಬಿರ್ರಿಯಾಗಿ ಕಂಡರೂ ಈ ಆಟಗಳಲ್ಲಿ ಒಂದು ರೀತಿಯ ವ್ಯವಸ್ಥಿತ ಚಕ್ರಗಳಿವೆಯೆಂಬುದನ್ನು ಶುಕ್ರಗ್ರಹದಲ್ಲಿ ಬಹಳ ಚೆನ್ನಾಗಿ ಕಾಣುತ್ತೇವೆ.
ಶುಕ್ರ ಸಂಕ್ರಮ ಎನ್ನುವುದು ಸರಿಯಾಗಿ ನೂರಾಐದೂವರೆ ವರ್ಷ - ನೂರ ಇಪ್ಪತ್ತೊಂದೂವರೆ ವರ್ಷಗಳಿಗೊಂದು ಸಾರಿ ಜರುಗುವ ಕೌತುಕ. ಮತ್ತು ಹೀಗೆ ಪ್ರತಿ ಸಾರಿ ಬಂದಾಗ ಎಂಟು ವರ್ಷಗಳ ಅಂತರದಲ್ಲೇ ಎರಡು ಬಾರಿ ಸೂರ್ಯನ ಮುಂದೆ ಹಾದುಹೋಗುತ್ತದೆ. ಸರಿಸುಮಾರು ಶತಮಾನಕ್ಕೊಂದು ಬಾರಿ ಜರುಗುವ ಈ ವಿಸ್ಮಯ ಒಂದು ರೀತಿಯ ಡಬಲ್ ಧಮಾಕ! ಮೊನ್ನೆ, ಜೂನ್ ೬, ೨೦೧೨ ಕ್ಕೆ ಮುಂಚೆ ಜೂನ್ ೮, ೨೦೦೪ರಂದೂ ಶುಕ್ರ ಗ್ರಹಣವಾಯಿತು. ಅದಕ್ಕೂ ಮುಂಚೆ ಶುಕ್ರಗ್ರಹಣವಾದದ್ದು ೧೮೮೨ನೇ ಇಸವಿಯಲ್ಲಿ! ಹೀಗೆ ಸೂರ್ಯನ ಮುಂದೆ ಶುಕ್ರನ ಮೆರವಣಿಗೆ ನಡೆದ ಕಾಲಗಳನ್ನು ಹೇಳಿದರೆ ನಿಮಗೆ ಈ ವಿಷಯ ಇನ್ನೂ ವಿಶದವಾಗುತ್ತದೆ. ಆಧುನಿಕ ವಿಜ್ಞಾನ ಯುಗದಲ್ಲಿ ಮೊದಲನೆ ಬಾರಿಗೆ ೧೬೩೯ರ ಗ್ರಹಣದ ಬಗ್ಗೆ ಭವಿಷ್ಯ ನುಡಿದದ್ದು ಇಂಗ್ಲೆಂಡಿನ ಜೆರೆಮಿಯಾ ಹೊರ್ರಾಕ್ಸ್ ಎಂಬುವವನು.
ಸರದಿ-ಸರಣಿ:
(+121.5) 26-05-1518 ಮತ್ತು 23-05-1526
(+105.5) 07-12-1631 ಮತ್ತು 04-12-1639
(+121.5) 06-06-1761 ಮತ್ತು 03-06-1769
(+105.5) 09-12-1874 ಮತ್ತು 06-12-1882
(+121.5) 08-06-2004 ಮತ್ತು 06-06-2012
(+105.5) 11-12-2117 ಮತ್ತು 08-12-2125
(+121.5) 11-06-2247 ಮತ್ತು 09-06-2225
(+105.5) 13-12-2360 ಮತ್ತು 10-12-2368
(+121.5) 12-06-2490 ಮತ್ತು 10-06-2498 ......
ಇದರೊಂದಿಗೆ ಕೆಲವು ಸ್ವಾರಸ್ಯಕರ ಘಟನೆಗಳನ್ನು ನೋಡಿ:
* ಬುಧ-ಶುಕ್ರ ಇಬ್ಬರೂ ಸೂರ್ಯನ ಮುಂದೆ ಹಾದುಹೋಗುವ ದೃಶ್ಯ ಭೂಮಿಯಿಂದ ಕಾಣಬಹುದೆ? ಹೌದು. ಇದು ನಡೆದದ್ದು ಕ್ರಿಸ್ತಪೂರ್ವ 22ನೇ ಸೆಪ್ಟೆಂಬರ್ 3,73,173ರಂದು. ಮತ್ತೊಂದು ಬಾರಿ ಇದು ಕ್ರಿಸ್ತಶಕ 26 ಸೆಪ್ಟೆಂಬರ್ 69,163ರಂದು ಜರುಗಲಿದೆ! ಬದುಕಿದ್ದರೆ ನೀವೂ ನೋಡಬಹುದು.
* ಸೂರ್ಯಗ್ರಹಣವಾದಂದೇ ಶುಕ್ರಗ್ರಹಣವೂ ಆಗಬಹುದೇ? ಹೌದು. ಇದು ಕ್ರಿಸ್ತಪೂರ್ವ 1ನೇ ನವೆಂಬರ್ 15,607ರಂದು ನಡೆದಿತ್ತು ಮತ್ತು 5ನೇ ಏಪ್ರಿಲ್ 15,232ರಂದು ನಿಮ್ಮ ಮರಿ-ಮರಿ-ಮರಿ.... ಮಕ್ಕಳು ನೋಡಿ ಆನಂದಿಸಬಹುದು!
* ಜೂನ್ 3, 1769ರಂದು ಶುಕ್ರಗ್ರಹಣವಾಯ್ತಲ್ಲ, ಅದರ ಮಾರನೇ ದಿನವೇ ಸಂಪೂರ್ಣ ಸೂರ್ಯಗ್ರಹಣವೂ ಆಗಿತ್ತು!
ಈಗ ಬಿಡಿ, ಕಂಪ್ಯೂಟರ್ ತಂತ್ರಜ್ಞಾನ ಮುಂದುವರಿದಂತೆ ಸೌರಮಂಡಲದ, ಒಂದು ಕೋಟಿ ನಕ್ಷತ್ರಗಳ, ಲಕ್ಷಾಂತರ ಬ್ರಹ್ಮಾಂಡಗಳ, ಒಂದು ಲಕ್ಷ ವರ್ಷ ಆಚೆ-ಈಚೆ ನಡೆದ-ನಡೆಯುವ ವೃತ್ತಾಂತಗಳ ಅತ್ಯಂತ ನಿಖರವಾದ ಮಾಹಿತಿಯುಳ್ಳ ಖಗೋಳ ತಂತ್ರಾಂಶವೂ ಬಂದಿದೆ!
ಮೊನ್ನೆ ಟಿವಿ ಕಾರ್ಯಕ್ರಮದಲ್ಲಿ, ಶುಕ್ರ ಸಂಕ್ರಮದ ಈ ವಿಚಾರವೆಲ್ಲ ಪುರಾತನ ಭಾರತೀಯ ಜ್ಯೋತಿಶ್ಶಾಸ್ತ್ರಜ್ಞರಿಗೆ ಮೊದಲೇ ಗೊತ್ತಿತ್ತು ಅಂತ ಒಬ್ಬ ಬೃಹಸ್ಪತಿ ಬೊಗಳೆ ಬಿಟ್ಟಿದ್ದ! ಇದು ನಿಜವೇ? ಈ ವಿಚಾರವನ್ನು ತಿಳಿದುಕೊಳ್ಳಲು ನಾನು ನನಗೆ ಪರಿಚಯವಿದ್ದ, ಜ್ಯೋತಿಷದ ಬಗ್ಗೆ ಶಾಸ್ತ್ರೀಯವಾಗಿ ಓದಿ-ತಿಳಿದುಕೊಂಡಿದ್ದ, ಮೂರು ಪಂಡಿತರನ್ನು ವಿಚಾರಿಸಿದೆ. ಅವರಲ್ಲು ಕಾರ್ಪೊರೇಷನ್ ಬ್ಯಾಂಕ್ನ ಶ್ರೀ ಗೋಪಾಲಕೃಷ್ಣ ಭಟ್ಟರು, “ಭಾರತೀಯ ಖಗೋಳ ವಿಜ್ಞಾನದಲ್ಲಿ ಶುಕ್ರಗ್ರಹದ ಪಥದ ಬಗ್ಗೆ ಅಮೂಲಾಗ್ರವಾದ, ಕರಾರುವಾಕ್ಕಾದ ಲೆಕ್ಕಾಚಾರವಿದೆಯೇ ವಿನಃ ಗ್ರಹಣದ ಬಗ್ಗೆ ಮಾಹಿತಿಯಾಗಲೀ ಸೂತ್ರಗಳಾಗಲೀ ಇಲ್ಲ,” ಎಂದು ಖಚಿತವಾಗಿ ಹೇಳಿದರು.
ಆದರೆ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ಬಗ್ಗೆ ಅತ್ಯಂತ ನಿಖರವಾದ ಲೆಕ್ಕಾಚಾರವನ್ನು ಸಾವಿರಾರು ವರ್ಷಗಳಿಂದ ಭಾರತದ ಜ್ಯೋತಿಷಿಗಳು ಮಾಡುತ್ತಲೇ ಬಂದಿರುವುದನ್ನು ನಾವು ಮಹಾಭಾರತದ ಕಾಲದಿಂದಲೂ ನೋಡುತ್ತೇವೆ. ನೀವು ಈವತ್ತು ಯಾವುದೇ ಪಂಚಾಂಗ ತೆರೆದು ನೋಡಿ. ಈ ಗ್ರಹಣಗಳ ವಿಚಾರವಾಗಿ ನಿಮಗೆ ವಿವರಗಳು ದೊರಕುತ್ತವೆ. ಒಂದು ಗ್ರಹಣವಾದರೆ ಅದು ಯಾವ ಊರಿನಲ್ಲಿ, ಹಿಡಿಯುವುದು ಯಾವಾಗ, ಬಿಡುವುದು ಎಷ್ಟು ಹೊತ್ತಿಗೆ ಎಂಬಿತ್ಯಾದಿ ವಿವರಗಳನ್ನು ನೋಡುವಾಗ ನಿಮಗೇ ಅಶ್ಚರ್ಯವಾಗಬಹುದು. ಇಲ್ಲಿ ಅವುಗಳು ಹಿಡಿಯುವ-ಬಿಡುವ ವೇಳೆಗಳು ಡೆಲ್ಲಿಗೆ ಬೇರೆ, ಕಾಶಿಗೆ ಬೇರೆ, ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಹಾಸನ, ಮಡಿಕೇರಿ ಎಲ್ಲವೂ ಬೇರೆ ಬೇರೆ! ಈ ಲೆಕ್ಕಾಚಾರಗಳನ್ನು ಮಾಡುವಾಗ ಈ ನಗರಗಳಿಗಿರುವ ಪರಸ್ಪರ ದೂರವನ್ನು ಅಳೆಯುವುದಿಲ್ಲ ಬದಲಿಗೆ ಅವುಗಳ ನಡುವಣ ಕೋನಗಳನ್ನು ಪರಿಗಣಿಸುತ್ತಾರೆ ಎನ್ನುವುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಅಂದರೆ ಅಯಾ ನಗರಗಳ ಅಕ್ಷಾಂಶ-ರೇಖಾಂಶ ಬಹಳ ಮುಖ್ಯ. ಯಾವಾಗ ನೀವು ಕೋನಗಳನ್ನು ಬಳಸಿಕೊಂಡು ಲೆಕ್ಕಾಚಾರ ಶುರು ಮಾಡಿದಿರೋ ಆಗಲೇ ನೀವು ಟ್ರಿಗ್ನಾಮೆಟ್ರಿ ಬಳಸಲು ತೊಡಗಿದಿರಿ ಎಂದರ್ಥ! ಪೈ, ಸೈನ್, ಕಾಸ್, ತೀಟ.. ಈ ಪಾಠಗಳೆಲ್ಲ ಆವತ್ತೇ ಭಾರತೀಯ ಜ್ಯೋತಿಷಿಗಳಿಗೆ ಆಗಿತ್ತು ಎಂಬುದು ನಿಜ. ಆಶ್ಚರ್ಯದ ವಿಚಾರ ಏನೆಂದರೆ ಆ ಕಾಲದ ಕೋಷ್ಟಕಗಳು, ಸೂತ್ರಗಳು ಈವತ್ತಿಗೂ ಬದಲಾಗಿಲ್ಲ. ಸಾವಿರಾರು ವರ್ಷಗಳಲ್ಲಿ ಖಗೋಳದಲ್ಲಾಗಬಹುದಾದ ಸಣ್ಣ-ಪುಟ್ಟ ಬದಲಾವಣೆಗಳನ್ನೆಲ್ಲ ಆ ಸೂತ್ರಗಳಲ್ಲೇ ಅಳವಡಿಸಿದ್ದರು!
ಭಾರತೀಯ ಜ್ಯೋತಿಷವನ್ನು ವಿಜ್ಞಾನ ಎಂದು ಕರೆಯಬೇಕೆ ಅಥವಾ ಅದೊಂದು ಟೊಳ್ಳು ಕವಡೆ-ಗಿಣಿ ಶಾಸ್ತ್ರವೇ? ಈ ವಿಚಾರವನ್ನು ನೀವು ತಿಳಿಯಬೇಕಾದರೆ ಪ್ರಾತಃಸ್ಮರಣೀಯರಾದ ಪ್ರೊ. ಜಿ. ಟಿ. ನಾರಾಯಣರಾವ್ರವರ ‘ಜಾತಕ ಮತ್ತು ಭವಿಷ್ಯ’ ಪುಸ್ತಕವನ್ನು ಓದಬೇಕು. ಪುಸ್ತಕದ ಗಾತ್ರ ಸಣ್ಣದಾಗಿದ್ದರೂ ಅದರೊಳಗಿನ ಹೂರಣ ಅಮೃತ ರಸಪಾನ! ಭಾರತೀಯ ಜ್ಯೋತಿಶ್ಶಾಸ್ತ್ರದಲ್ಲಿ ಒಟ್ಟು ನವಗ್ರಹಗಳಿವೆ. ಆ ಗ್ರಹಗಳು ಬೇರೆ, ಆಧುನಿಕ ವಿಜ್ಞಾನದಲ್ಲಿ ಹೇಳುವ ಗ್ರಹಗಳು ಬೇರೆ. ಆಲ್ಲಿ ಸೂರ್ಯ, ಚಂದ್ರರೂ ಗ್ರಹಗಳೇ! ಇಂದು ಅವುಗಳ ಬದಲಿಗೆ ಭೂಮಿ, ಯುರೇನಸ್, ನೆಪ್ಟ್ಯೂನ್ಗಳು ಸೇರಿ ಒಟ್ಟು ಎಂಟು ಗ್ರಹಗಳು. (ಮೂರ್ನಾಲ್ಕು ವರ್ಷಗಳ ಹಿಂದೆ ಇಲ್ಲಿಯೂ ನವ-ಗ್ರಹಗಳೇ ಇದ್ದವು. ಪ್ಲೂಟೋವನ್ನು ಆ ಪಟ್ಟಿಯಿಂದ ತೆಗೆದುಹಾಕಿದ ಮೇಲೆ ಈಗ ಎಂಟಾಗಿವೆ). ಅಲ್ಲಿ ಜೊತೆಗೆ ಎರಡು ವಿಶೇಷ ಜೋಡಿ ಗ್ರಹಗಳು: ರಾಹು ಮತ್ತು ಕೇತು! ಪ್ರಪಂಚದ ಇನ್ನಾವುದೇ ಖಗೋಳ ಪದ್ಧತಿಯಲ್ಲಿಯೂ ಇಲ್ಲದ ಈ ಗ್ರಹಗಳಾವುವು?
ಪ್ರೊ. ಜಿಟಿಎನ್ ಮಾತುಗಳಲ್ಲಿಯೇ ಕೇಳೋಣ. “ರಾಹು ಮತ್ತು ಕೇತು ಎಂಬ ನಿರ್ದಿಷ್ಟ ನೆಲೆಗಳಿಗೆ- ಅಲ್ಲಿ ಬೊಟ್ಟು ಮಾಡಿ ತೋರಿಸಲು ಯಾವುದೇ ಭೌತಕಾಯ ಇಲ್ಲದಿದ್ದರೂ- ಇತರ ಗ್ರಹಗಳಷ್ಟೆ ಪ್ರಾಮುಖ್ಯ ಒದಗಿತು. (ತುಸು ಹೆಚ್ಚಾಗಿ ಕೂಡ: ದುಷ್ಟರಿಗೆ ಮೊದಲ ಮಣೆ!) ಇವು ಸೂರ್ಯ ಅಥವಾ ಚಂದ್ರನಿಗೆ ಛಾಯೆ ಬಳಿಯುವುದರಿಂದಲೂ ಸ್ವತಃ ಇವುಗಳಿಗೆ ಘನ ಅಸ್ತಿತ್ವ ಇಲ್ಲದಿರುವುದರಿಂದಲೂ ಛಾಯಾಗ್ರಹಗಳೆಂದೇ (ಕು)ಪ್ರಸಿದ್ಧವಾದುವು.”
ಸೂರ್ಯನ ಸುತ್ತ ಸುತ್ತುತ್ತಿರುವ ಭೂಮಿಯ ಪಥಕ್ಕೆ ಕ್ರಾಂತಿವೃತ್ತ ಎನ್ನುತ್ತಾರೆ. ಭೂಮಿಯ ಸುತ್ತ ತಿರುಗುತ್ತಿರುವ ಚಂದ್ರನ ಪಥಕ್ಕೆ ಚಾಂದ್ರಕಕ್ಷೆ ಎನ್ನುತ್ತಾರೆ. ಇವುಗಳ ಕಕ್ಷೆಗಳು ಪರಸ್ಪರ ಸಂಧಿಸುವ ಪಾತಬಿಂದುಗಳೇ ರಾಹು ಮತ್ತು ಕೇತು! ಭೂಮಿ ಮತ್ತು ಚಂದ್ರರು ಅವರವರ ಕಕ್ಷೆಯಲ್ಲಿ ಸುತ್ತುತ್ತಿದ್ದಂತೆ, ಈ ರಾಹು-ಕೇತುಗಳ ನೆಲೆಗಳೂ ನಿರಂತರವಾಗಿ ದಲಾಗುತ್ತಿರುತ್ತವೆ. ನೆನಪಿಡಿ: ಆಕಾಶದಲ್ಲಿ ಕ್ರಾಂತಿವೃತ್ತವಾಗಲೀ, ಚಾಂದ್ರಕಕ್ಷೆಯಾಗಲೀ ಕಣ್ಣಿಗೆ ಕಾಣುವ ಗೆರೆಗಳಲ್ಲ! ಅಲ್ಲಿ ರಾಹು-ಕೇತುಗಳು ಬರಿಗಣ್ಣಿಗೆ ಕಾಣದ ನೆಲೆಗಳು. ಗ್ರಹಣದ ಲೆಕ್ಕಾಚಾರಗಳಿಗೆ ಇವು ಬಹು ಮುಖ್ಯ.
ಚಾಂದ್ರಕಕ್ಷೆಯ ಮೇಲೆ ತಿಂಗಳಿಗೊಮ್ಮೆ ಚಂದ್ರನು, ಭೂಮಿ ಮತ್ತು ಸೂರ್ಯನ ನಡುವೆ ಬರುತ್ತಾನೆ, ಆವತ್ತು ಅಮಾವಾಸ್ಯೆ. ಹದಿನೈದು ದಿನಗಳ ನಂತರ ಅವನು ಭೂಮಿಯ ಇನ್ನೊಂದು ಬದಿಗೆ ಬರುತ್ತಾನೆ, ಆವತ್ತು ಹುಣ್ಣಿಮೆ. ಮೂವರೂ ಪ್ರತಿ ತಿಂಗಳೂ ಎರಡು ಬಾರಿ ಸಾಲಾಗಿ ಬರುವುದರಿಂದ ಪ್ರತಿ ಅಮಾವಾಸ್ಯೆಯ ದಿನ ಚಂದ್ರ ಸೂರ್ಯನನ್ನು ಹಾದು ಹೋಗಬೇಕು, ಅಂದರೆ ಸೂರ್ಯಗ್ರಹಣವಾಗಬೇಕು. ಹಾಗೆಯೇ ಪ್ರತಿ ಹುಣ್ಣಿಮೆಯಂದೂ ಭೂಮಿಯ ನೆರಳು ಚಂದ್ರನ ಮೇಲೆ ಹಾದುಹೋಗಬೇಕು, ಅಂದರೆ ಚಂದ್ರಗ್ರಹಣವಾಗಬೇಕು. ಆದರೆ ಇದು ನಡೆಯುವುದಿಲ್ಲವಲ್ಲ?
ಇದು ಏಕೆಂದರೆ ಪ್ರತಿ ಬಾರಿ ಈ ಮೂವರೂ ಒಂದೇ ಸಮ ಮಟ್ಟದಲ್ಲಿರುವುದಿಲ್ಲ. ಈ ಆಕಾಶಕಾಯಗಳ ಗಾತ್ರಕ್ಕೆ ಹೋಲಿಸಿದರೆ ಅವುಗಳ ಪರಸ್ಪರ ದೂರ ಅತ್ಯಂತ ಅಗಾಧ! ಕ್ರಾಂತಿವೃತ್ತ ಮತ್ತು ಚಾಂದ್ರಕಕ್ಷೆ ಒಂದೇ ಸಮಮಟ್ಟದಲ್ಲಿದ್ದರೆ, ಮಾತ್ರ ಗ್ರಹಣಗಳು ಸಂಭವಿಸುತ್ತವೆ.
ಇಷ್ಟೆಲ್ಲಾ ಏಕೆ ಹೇಳಿದೆನೆಂದರೆ, ಭಾರತೀಯ ಖಗೋಳಶಾಸ್ತ್ರಜ್ಞರು ಚಂದ್ರಗ್ರಹಣ-ಸೂರ್ಯಗ್ರಹಣಗಳ ಬಗ್ಗೆ ಖಡಾಖಂಡಿತವಾದ ಮಾಹಿತಿ ನೀಡುತ್ತಿದ್ದ ಹಾಗೆ ಉಳಿದ ಗ್ರಹಗಳು ಸೂರ್ಯನನ್ನು ಹಾದು ಹೋಗುವ ವಿಚಾರ ಹೇಳಿಯೇ ಇಲ್ಲ! ನೀವು ಸರಿಯಾಗಿ ಗಮನಿಸಿದರೆ ಬುಧ ಮತ್ತು ಶುಕ್ರ ಗ್ರಹಗಳ ಪಥಗಳು ಭೂಮಿಯ ಪಥದ ಒಳಗಡೆಯಿರುವುದರಿಂದ, ಅವು ಮಾತ್ರ ಸೂರ್ಯನ ಮುಂದೆ ಹಾದು ಹೋಗುವ ದೃಶ್ಯ ನಮಗೆ ಕಾಣಬಹುದು. ಮಂಗಳನಾಗಲೀ, ಗುರುವಾಗಲೀ, ಶನಿಯಾಗಲೀ ಸೂರ್ಯನ ಹಿಂದುಗಡೆಯಿಂದ ಹಾದುಹೋಗಿಬಿಡುತ್ತವೆ. ಅವು ಸುತಾರಾಂ ನಮಗೆ ಕಾಣುವುದೇ ಇಲ್ಲ.
ಸೂರ್ಯ-ಭೂಮಿ-ಚಂದ್ರ ಈ ಮೂವರ ಜೊತೆಗೆ ರಾಹು ಮತ್ತು ಕೇತು, ಒಟ್ಟು ಐದು ಮಂದಿ ಸಂಧಿಸುವ ಸಂದರ್ಭಗಳನ್ನು ಹೆಚ್ಚು ನಿಖರವಾಗಿ ಲೆಕ್ಕಾಚಾರ ಹಾಕಬಹುದು. ಉಳಿದ ಗ್ರಹಗಳಿಗೆ ರಾಹು-ಕೇತುಗಳನ್ನು ಕಲ್ಪಿಸಲು ಸಾಧ್ಯವಿಲ್ಲ. ಹಾಗಾಗಿ ಅವುಗಳ ಗ್ರಹಣದ ಬಗೆಗೂ ಲೆಕ್ಕಾಚಾರವಿಲ್ಲ.
ಭಾರತೀಯ ಖಗೋಳ ವಿಜ್ಞಾನ ಒಂದು ಕಾಲಘಟ್ಟದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಇತಿಹಾಸದಲ್ಲಿ ದೇಶವು ಅನೇಕ ಧಾಳಿಗಳಿಗೆ ತುತ್ತಾಗಿ, ಅವರುಗಳ ಆಡಳಿತದಲ್ಲಿ ರಾಜಾಶ್ರಯ ಕಳೆದುಕೊಂಡು ತನ್ನ ಅಸ್ತಿತ್ವವನ್ನೇ ಕಳೆದುಕೊಂಡುಬಿಟ್ಟಿದೆ. ನಮ್ಮ ಶಾಲಾವಿದ್ಯಾರ್ಥಿಗಳ ಪಠ್ಯಗಳಲ್ಲಿ ಈ ಬಗ್ಗೆ ಒಂದಿಷ್ಟೂ ಮಾಹಿತಿ ಇಲ್ಲದಿರುವುದರಿಂದ ಅವರಿಗೆ ನಮ್ಮ ದೇಶದ ಪುರಾತನ ವಿಜ್ಞಾನಿಗಳ ವಿಚಾರ ಒಂದಿನಿತೂ ಗೊತ್ತೇ ಇಲ್ಲ. ಇಂತಹ ವಿಚಾರಗಳನ್ನೆಲ್ಲ ನಮ್ಮ ವಿದ್ಯಾರ್ಥಿಗಳು ತಿಳಿದುಕೊಳ್ಳದಿದ್ದರೇ ದೇಶ ಹೆಚ್ಚು ಸುರಕ್ಷಿತ ಎಂದು ಪಠ್ಯರಚನಾ ಪಂಡಿತರು ಭಾವಿಸಿದಂತಿದೆ. ಸಾವಿರಾರು ವರ್ಷಗಳ ಹಿಂದೆ ಈ ಋಷಿ-ಮುನಿಗಳು ಪ್ರಶಾಂತವಾದ ವನಗಳಲ್ಲಿ ಕುಟೀರಗಳನ್ನು ಕಟ್ಟಿಕೊಂಡು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದುರಿಂದ ಅವರನ್ನೆಲ್ಲ ಕಾಡುಮನುಷ್ಯರು ಎಂದೂ ಕರೆದಿದ್ದಾರೆ! ಇಂತಹ ಶೋಚನೀಯ ಪರಿಸ್ಥಿತಿಯಲ್ಲಿ ನಾವು ನಮ್ಮ ಮಕ್ಕಳಲ್ಲಿ ದೇಶಾಭಿಮಾನ, ರಾಷ್ಟ್ರಭಕ್ತಿ ಇವನ್ನೆಲ್ಲ ನಿರೀಕ್ಷಿಸುವುದಾದರೂ ಹೇಗೆ?
1 comment:
Namaskara sir...nimma lekanagalu hodi santhoshavagide,hosadagi praramba vaguthiruva namma chalukya prabha maasika patrike ge nimma lekanagalannu baredukodalu vinanthisuthiddeve sir,chalukyaprabha@gmail.com
Post a Comment