Wednesday, December 23, 2015

ಅಪಾನವಾಯುವಿನ ಮೇಲೊಂದು ವಿಚಾರಲಹರಿ

ಅಪಾನವಾಯುವಿನ ಮೇಲೊಂದು ವಿಚಾರಲಹರಿ

ಢರ್ರಂ ಭುರ್ರಂ ಭಯಂ ನಾಸ್ತಿ
ಕೊಯ್ಯಂ ಪಿಯ್ಯಂ ಚ ಮಧ್ಯಮಂ|
ತಿಸಕ್ ಪಿಸಕ್ ಮಹಾ ಘೋರಂ
ನಿಶ್ಶಬ್ದಂ ಪ್ರಾಣ ಸಂಕಟಂ||
ಈ ಮಂತ್ರವನ್ನು ನಮ್ಮಜ್ಜ ನಮಗೆ ಬಹಳ ಸಣ್ಣ ಮಕ್ಕಳಾಗಿರುವಾಗಲೇ ಬಾಯಿಪಾಠ ಮಾಡಿಸಿದ್ದರು. ಇದು ಯಾವುದರ ಬಗ್ಗೆ ಅಂತ ನಾನು ಬಿಡಿಸಿ ಹೇಳಬೇಕಾಗಿಲ್ಲ. ನೀವು ಗೂಗ್ಲ್‌ಸರ್ಚ್‌ನಲ್ಲಿ ಎಫ಼್‌ಎಆರ್‌ಟಿ ಅಂತ ಇಂಗ್ಲಿಷಿನಲ್ಲಿ ಟೈಪ್ ಮಾಡಿ ಹುಡುಕಿದರೆ ಕ್ಷಣಾರ್ಧದಲ್ಲಿ ಆರು ಕೋಟಿ ನಲವತ್ತೆಂಟು ಸಾವಿರ ಫಲಿತಾಂಶಗಳು ಈ ಅಪೂರ್ವ ವಿಷಯದ ಬಗ್ಗೆ ದೊರಕುತ್ತದೆ. ನಾವು ಯಾವುದನ್ನು ಮೂಗು ಮುಚ್ಚಿಕೊಂಡು ಅಥವಾ ಮುಖ ಸಿಂಡರಿಸಿಕೊಂಡು ಅಸಹ್ಯ ಪಟ್ಟುಕೊಳ್ಳುತ್ತೇವೆಯೋ ಅದು ಎಷ್ಟೊಂದು ಕುಖ್ಯಾತ ಪದ ಎಂದು ಇದರಿಂದ ನಮಗೆ ಮನದಟ್ಟಾಗುತ್ತದೆ.ಸುಸಂಸ್ಕೃತವೋ ಅಸಭ್ಯವೋ
ಸುಸಂಸ್ಕೃತರು ಅದನ್ನು ಭ್ರಷ್ಟವಾಯು, ಅಪಾನವಾಯು ಅಂತ ಕರೆಯುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಹೂಸು, ಕೆಟ್ಟಗಾಳಿ ಅಂತಲೇ ಹೇಳುತ್ತಾರೆ. ನನ್ನಣ್ಣ ರಘುವಿನ ಮಗ ಸಣ್ಣವನಾಗಿದ್ದಾಗ ಹೀಗೇ ಒಂದು ಸಾರಿ ಢರ್ರ್ ಎಂದು ಬಿಟ್ಟು ಅಪ್ಪಾ, ಹೂಸು ಎಂದು ನೆಗಾಡಿದನಂತೆ. ಛೆ, ಎಲ್ಲರ ಎದುರೂ ಹಾಗನ್ನಬಾರದು ಅಂತ ಅಪ್ಪ ಸುಪುತ್ರನಿಗೆ ಹೇಳಿಕೊಟ್ಟ. ಮಗ ಬುದ್ಧಿವಂತ. ಅದಾದ ಮೇಲೆ ಇನ್ನೊಂದು ಸಂದರ್ಭದಲ್ಲಿ ಪುನಃ ಹೀಗೇ ಬಿಟ್ಟಾಗ, ಏನೋ ಅದು ಶಬ್ದ? ಅಂತ ಕೇಳಿದರೆ, ಅದು ಗೂಪು ಅಂದನಂತೆ. ಹಾಗಂದ್ರೆ ಏನೋ? ಅಂದಿದ್ದಕ್ಕೆ ಅವನು, ನೀನೇ ಹೇಳಿದೆಯಲ್ಲ, ಹೂಸು ಅಂತ ಅನ್ನಬಾರದು ಅಂತ, ಅದಕ್ಕೆ ಹಾಗೆ ಕರೆದೆ!
ಎ ರೋಸ್ ಈಸ್ ಏ ರೋಸ್ ಈಸ್ ಎ ರೋಸ್ ಎಂದು ಶೇಕ್ಸ್‌ಪಿಯರ್ರೇ ಹೇಳಿಲ್ಲವೇ? ಆದ್ದರಿಂದ ಅದನ್ನು ನೀವು ಹೇಗೆ ಕರೆದರೂ ಅದು ಅದೇ!

ನಾವು ಕಾನ್ವೆಂಟ್ ಶಾಲೆಯಲ್ಲಿ ಓದುತ್ತಿರುವಾಗ ಒಂದು ದಿನ ಮಧ್ಯಾಹ್ನ ಆಗ ತಾನೇ ಊಟ ಮುಗಿಸಿ ಬಂದ ಹೊತ್ತು. ಮೊದಲನೆ ಪೀರಿಯಡ್ ಪಾಠ ಮಾಡುತ್ತಿರುವಾಗ ನಮ್ಮ ಟೀಚರು ಢರ್ರನೆ ಬಿಟ್ಟರು. ನಾವೆಲ್ಲ ಘೊಳ್ಳೆಂದು ನೆಗಾಡಿದೆವು. ಮಕ್ಕಳೇ, ಹಾಗೆಲ್ಲ ನಗಬಾರದು. ಅದು ದೇವರು ಕೊಟ್ಟ ಪೀಪಿ! ಎಂದು ಅದನ್ನೂ ಆಧ್ಯಾತ್ಮಿಕ ಮಟ್ಟಕ್ಕೇರಿಸಿಬಿಟ್ಟರು!ಸುಪ್ರಭಾತ!
ಭುಸುಗುಟ್ಟುವ ಕಾಳಿಂಗ ಸರ್ಪದಿಂದ ಹಿಡಿದು, ಹಾವಾಡಿಗನ ಪುಂಗಿಯ ನಾದದವರೆಗೆ; ಮಂದಗಾಳಿಯಿಂದ ಹಿಡಿದು, ಆರ್ಭಟಿಸುವ ಚಂಡಮಾರುತದವರೆಗೆ; ಸುಂಡಿಲಿಯ ಚೀಕಲಿನಿಂದ ಹಿಡಿದು, ಘರ್ಜಿಸುವ ವನವ್ಯಾಘ್ರನವರೆಗೆ; ಕೊಂಬು-ಕಹಳೆಯ ಫೂಂಕಾರದಿಂದ ಹಿಡಿದು ಶಂಖನಾದದವರೆಗೆ; ಚಿನಕುರುಳಿ ಪಟಾಕಿಯಿಂದ ಹಿಡಿದು, ಆಟಂಬಾಂಬ್‌ವರೆಗೆ, ವಿವಿಧ ತರಂಗಾಂತರಗಳಿಂದ ಕೂಡಿದ ಹೂಸು ವಾಯುಮಾಲಿನ್ಯಕ್ಕೆ ತನ್ನ ಅಳಿಲುಸೇವೆಯನ್ನು ಮಾಡುತ್ತ ಬಂದಿದೆ! ಇದನ್ನು ನಾವು ಅಲಕ್ಷ್ಯ ಮಾಡುವಂತಿಲ್ಲ. ಏಕೆಂದರೆ ಒಬ್ಬ ವ್ಯಕ್ತಿ ಒಂದು ದಿನದಲ್ಲಿ ಹತ್ತರಿಂದ ಹದಿನಾರು ಬಾಂಬುಗಳನ್ನು ತಯಾರಿಸುತ್ತಾನೆ. ಇದರಲ್ಲಿ ಸರಾಸರಿ ಅರ್ಧ ಲೀಟರ್ ವಾಯುವಿರುತ್ತದೆ. ಬಸ್ಸು-ಕಾರುಗಳಂತೆ ದಿನ ಪೂರ್ತಿ ಮಲಿನ ವಾಯುವನ್ನು ಉಗುಳದಿದ್ದರೂ, ಪ್ರಪಂಚದಲ್ಲಿ ನಾವು ೭೦೦ ಕೋಟಿ ಜನರಿದ್ದೇವಲ್ಲ! ಸರಾಸರಿ ಹನ್ನೆರಡು ಎಂದಿಟ್ಟುಕೊಂಡರೂ ಒಂದು ದಿನದಲ್ಲಿ ೮೪೦೦ ಕೋಟಿ ಹೂಸುಗಳನ್ನು ಬಿಟ್ಟರೆ ಅದರಿಂದ ಉಂಟಾಗುವ ಮಾಲಿನ್ಯದ ಒಟ್ಟು ಮೊತ್ತವನ್ನು ನೀವೇ ಊಹಿಸಿ!

ಸಾಧಾರಣವಾಗಿ ಎಲ್ಲರೂ ಬೆಳ್ಳಂಬೆಳಗ್ಗೆ ಏಳುವಾಗಲೇ ಈ ಭ್ರಷ್ಟವಾಯುವನ್ನು ಬಿಡುತ್ತಾ ಏಳುತ್ತಾರೆ. ಇದರಲ್ಲಿ ಲಿಂಗಭೇದವಿಲ್ಲ. ರಾತ್ರಿಯೆಲ್ಲ ನಮ್ಮ ಕರುಳು ಬಳ್ಳಿ ರೆಸ್ಟ್ ತೆಗೆದುಕೊಂಡಿರುತ್ತದಲ್ಲ, ಬೆಳಿಗ್ಗೆ ನಮಗೆ ಎಚ್ಚರವಾದೊಡನೆ ದೊಡ್ಡ ಕರುಳೂ ಕೂಡ ಎದ್ದು ತನ್ನ ಕೆಲಸವನ್ನು ಶುರುಮಾಡುತ್ತದೆ. ಸರ್ವೇಸಾಮಾನ್ಯವಾಗಿ ಆಸ್ಪತ್ರೆಯ ಜನರಲ್ ವಾರ್ಡ್‌ಗಳಲ್ಲಿ ಈ ಸುಪ್ರಭಾತದ ಗುಡುಗು ಸಿಡಿಲುಗಳನ್ನು ನೀವು ಕೇಳಬಹುದು!

ಯಾರಿಗಾದರೂ ಜನರಲ್ ಅನೆಸ್ತೀಶಿಯಾ ಕೊಟ್ಟು ಆಪರೇಷನ್ ಆಗಿದ್ದರೆ, ಮಾರನೇ ದಿನ ಸರ್ಜನ್ ಸಾಹೇಬರು ಬಂದು ಮೊದಲು ಕೇಳುವ ಪ್ರಶ್ನೆ, ಹೊಟ್ಟೆಯಿಂದ ಗಾಳಿ ಹೋಯ್ತಾ? ಅಂತ. ನೀವೇನಾದರೂ ಹೂಂ ಅಂದರೆ ನಿಮ್ಮ ಶಸ್ತ್ರಚಿಕಿತ್ಸಕರೂ ಸಮಾಧಾನದ ನಿಟ್ಟುಸಿರು ಬಿಡುತ್ತಾರೆ! ಏಕೆಂದರೆ ಅರಿವಳಿಕೆ ಔಷಧಿಯ ಪರಿಣಾಮದಿಂದ ಕರುಳು ಸುಖವಾಗಿ ಮಲಗೇ ಬಿಟ್ಟರೆ, ಪ್ಯಾರಾಲಿಟಿಕ್ ಐಲಿಯಸ್ ಎಂಬ ಅವಸ್ಥೆ ಉಂಟಾಗಬಹುದು ಎಂಬ ಆತಂಕ ಅವರದ್ದು!ಹೊಟ್ಟೆಯೊಳಗೆ ಗಾಳಿ ಎಲ್ಲಿಂದ?
ಮೊದಲೇ ಹೇಳಿ ಬಿಡುತ್ತೇನೆ, ನಮ್ಮ ದೇಹದಲ್ಲಿ ಸ್ವಾಭಾವಿಕವಾಗಿ ಯಾವ ಅನಿಲವೂ ತಯಾರಾಗುವುದಿಲ್ಲ. ಹಾಗಾದರೆ ಜೀರ್ಣಾಂಗದಲ್ಲಿ ಗಾಳಿ ಅಥವಾ ಇನ್ನಾವುದೇ ಗ್ಯಾಸ್ ತುಂಬುವುದು ಹೇಗೆ? ಇದಕ್ಕೆ ಮೂರು ಕಾರಣಗಳಿವೆ:
೧. ಇದರಲ್ಲಿ ಬಹು ಮುಖ್ಯವಾದದ್ದು ನಾವು ಕುಡಿಯುವ ಗಾಳಿ! ನಾವು ತಿನ್ನುವಾಗ, ಕುಡಿಯುವಾಗ, ಮಾತನಾಡುವಾಗಲೆಲ್ಲ ವಾತಾವರಣದ ಗಾಳಿ ಸ್ವಲ್ಪ ಸ್ವಲ್ಪ ಹೊಟ್ಟೆಗೆ ಸೇರುತ್ತಿರುತ್ತದೆ. ಅದರಲ್ಲೂ ಹಸಿವೆಯಾದಾಗ ಒಂದಿಷ್ಟು ಜಾಸ್ತಿ.
೨. ಸಣ್ಣಕರುಳು ಹಾಗೂ ದೊಡ್ಡ ಕರುಳಿನಲ್ಲಿ ಹಲವು ಬ್ಯಾಕ್ಟೀರಿಯಾಗಳು ನಾವು ತಿಂದ ಆಹಾರದಲ್ಲಿ ಜೀರ್ಣವಾಗದ ಆಹಾರಾಂಶಗಳನ್ನು ಕೊಳೆಯಿಸುತ್ತವೆ. ಆವಾಗಲೂ ಸಾಕಷ್ಟು ಪ್ರಮಾಣದಲ್ಲಿ ಗ್ಯಾಸ್ ತಯಾರಾಗುತ್ತದೆ.
೩. ನಮ್ಮ ಸಣ್ಣಕರುಳಿನಲ್ಲಿ ವಿವಿಧ ರಾಸಾಯನಿಕ ಕ್ರಿಯೆಗಳು ನಡೆಯುತ್ತಿರುತ್ತವೆ; ಬಹು ಸಣ್ಣ ಪ್ರಮಾಣದಲ್ಲಿ ಆಗಲೂ ವಿವಿಧ ಜಾತಿಯ ಅನಿಲಗಳು ತಯಾರಾಗುತ್ತವೆ.
೪. ಅಲ್ಪಸ್ವಲ್ಪ ಪ್ರಮಾಣದ ಅನಿಲಗಳು ರಕ್ತದಿಂದ ಕರುಳಿಗೆ ಸ್ರವಿಸುತ್ತವೆ.ಹೊಟ್ಟೆಯೊಳಗಿನ ಗಾಳಿ ಅಥವಾ ಅನಿಲಗಳಲ್ಲಿ ಯಾವ ಯಾವ ರಾಸಾಯನಿಕಗಳು?
ನಾವು ಕುಡಿದ ಗಾಳಿಯಲ್ಲಿ ಆಮ್ಲಜನಕ, ನೈಟ್ರೋಜನ್ ಮತ್ತು ಇಂಗಾಲದ ಡಯಾಕ್ಸೈಡ್ ಇರುತ್ತದಲ್ಲ, ಪಚನವಾಗುತ್ತಿರುವ ಆಹಾರದೊಂದಿಗೆ ಈ ಗಾಳಿಯೂ ಸೇರಿಕೊಂಡು ದೊಡ್ಡಕರುಳಿಗೆ ತಲುಪುವುದರಲ್ಲಿ ಅದರಲ್ಲಿರುವ ಎಲ್ಲಾ ಆಮ್ಲಜನಕವನ್ನೂ ದೇಹವೇ ಹೀರಿಕೊಂಡುಬಿಟ್ಟಿರುತ್ತದೆ. ಆದ್ದರಿಂದ ಅದರಲ್ಲಿ ಉಳಿಯುವುದು ನೈಟ್ರೋಜನ್ ಮತ್ತು ಅಲ್ಪಸ್ವಲ್ಪ ಇಂಗಾಲದ ಡಯಾಕ್ಸೈಡ್ ಮಾತ್ರ. ಜಠರ ಮತ್ತು ಸಣ್ಣಕರುಳಿನಲ್ಲಿಯೂ ಸ್ವಲ್ಪ ಪ್ರಮಾಣದ ಇಂಗಾಲದ ಡಯಾಕ್ಸೈಡ್ ತಯಾರಾಗುತ್ತದೆ.
ಇದಲ್ಲದೆ ನಮ್ಮ ಕರುಳಿನಲ್ಲಿ ಅನುಗಾಲವೂ ವಾಸಿಸುವ ಬ್ಯಾಕ್ಟೀರಿಯಾಗಳು ಹೈಡ್ರೋಜನ್ ಮತ್ತು ಮೀಥೇನ್ ಅನಿಲಗಳನ್ನು ತಯಾರು ಮಾಡುತ್ತವೆ. ಈ ಮೀಥೇನ್ ತಯಾರಿಸುವ ಬ್ಯಾಕ್ಟೀರಿಯಾಗಳು ವಂಶವಾಹಿಯಾಗಿ ಇಡೀ ಕುಟುಂಬದಲ್ಲಿ ಹರಿಯುತ್ತಿರುತ್ತವೆ. ಆದ್ದರಿಂದ ದೊಡ್ಡ ದೊಡ್ಡ ಹೂಸು ಬಿಡುವ ಕುಟುಂಬಗಳನ್ನೇ ನೀವು ನೋಡಬಹುದು!
ಕೆಲವು ಪೇಶೆಂಟ್‌ಗಳು ಬರುತ್ತಾರೆ. ಹೊಟ್ಟೆಯೊಳಗಿಂದ ಬರುವ ತೇಗುಗಳು, ಕೇಳಿಸುತ್ತಿರುವ ವಿವಿಧ ರಿಂಗ್‌ಟೋನ್‌ಗಳು, ಇವಕ್ಕೆಲ್ಲ ಅವರು ಹೇಳುವುದು ಗ್ಯಾಸ್ ಟ್ರಿಕ್ ಅಂತಲೇ! ಅವರ ಲೆಕ್ಕದಲ್ಲಿ ಅವೆಲ್ಲ ಹೊಟ್ಟೆಯೊಳಗೆ ಇರುವ ಗ್ಯಾಸ್ ಆಡುತ್ತಿರುವ ತಂತ್ರಗಳು!ದುರ್ವಾಸನೆ ಎಲ್ಲಿಯದು?
ಕರುಳನ್ನು ಸೇರಿದ ವಾತಾವರಣದ ಗಾಳಿಯಲ್ಲಿ ಇರುವ ಆಮ್ಲಜನಕ, ನೈಟ್ರೋಜನ್ ಮತ್ತು ಇಂಗಾಲದ ಡಯಾಕ್ಸೈಡ್ ಇಂತಹ ಯಾವುದೇ ಅನಿಲವೂ ವಾಸನಾರಹಿತವಾದ್ದು. ಹಾಗಾಗಿ ವಾಸನೆ ಏನಿದ್ದರೂ ಬ್ಯಾಕ್ಟೀರಿಯಾಗಳ ಕೈಚಳಕವೇ ಎಂದಂತಾಯ್ತು! ನಾವು ತಿನ್ನುವ ಆಹಾರದಲ್ಲಿ ಹೆಚ್ಚು ಹೆಚ್ಚು ಗಂಧಕ ಇರುವ ವಸ್ತುಗಳು ಅಂದರೆ, ಹೂಕೋಸು, ನವಿಲುಕೋಸು, ಎಲೆಕೋಸು, ಮೂಲಂಗಿ, ಮೊಟ್ಟೆ, ಮಾಂಸ, ಮತ್ತು ಈರುಳ್ಳಿ, ಬೆಳ್ಳುಳ್ಳಿ ಮುಂತಾದುವು ಇದ್ದಲ್ಲಿ ಬ್ಯಾಕ್ಟೀರಿಯಾಗಳು ಅವನ್ನು ಸಲ್ಫೈಡ್ ಮತ್ತು ಮರ್ಕ್ಯಾಪ್ಟಾನ್ ಎಂಬ ರಾಸಾಯನಿಕಗಳಾಗಿ ಪರಿವರ್ತಿಸುತ್ತವೆ. ಇವಿಷ್ಟಲ್ಲದೆ ಕಾಳು-ಬೀಜಗಳಿರುವ, ಅಂದರೆ ಬೀನ್ಸ್, ಅವರೆಕಾಳು ಮುಂತಾದ ಹೆಚ್ಚು ಸಾರಜನಕವಿರುವ ಆಹಾರ ಪದಾರ್ಥಗಳು ಎಲ್ಲವೂ ಕರುಳಿನಲ್ಲಿ ಸಂಪೂರ್ಣ ಪಚನವಾಗದೆ ಉಳಿದುಬಿಡುತ್ತವೆ. ಈ ಸಂಕೀರ್ಣ ಪ್ರೋಟೀನುಗಳನ್ನೂ ಬ್ಯಾಕ್ಟೀರಿಯಾಗಳು ವಿವಿಧ ರಾಸಾಯನಿಕ ವಸ್ತುಗಳನ್ನಾಗಿ ಪರಿವರ್ತಿಸುತ್ತವೆ. ದುರ್ನಾತಕ್ಕೆ ರಾಸಾಯನಿಕ ದ್ರವ್ಯಗಳೇ ಕಾರಣ. ಅದಕ್ಕೇ ಹಿರಿಯರು ಹೇಳಿದ್ದು: ಬೀನ್ಸ್ ತಿನ್ನಬೇಡ, ಅವು ಹಿಂದುಗಡೆಯಿಂದ ಮಾತಾಡುತ್ತವೆ ಅಂತ!

ಮತ್ತೊಂದು ವಿಚಾರವನ್ನು ಇಲ್ಲಿಯೇ ಹೇಳಿಬಿಡುತ್ತೇನೆ. ಗುದದ್ವಾರದಿಂದ ಅಪಾನವಾಯು ಹೊರಬರುವಾಗ ದ್ವಾರದಲ್ಲಿ ಇರುವ ಮೃದು ಚರ್ಮದಲ್ಲಿ ಉಂಟಾಗುವ ಅದಿರಾಟದ ಕಂಪನಗಳಿಂದ ಶಬ್ದ ಬರುತ್ತದೆ ಎಂಬುದು ಎಲ್ಲರ ಅನುಭವಕ್ಕೂ ಬಂದಂತಹ ವಿಚಾರವೇ ಆಗಿದೆ. ಆಮ್ಲಜನಕ, ನೈಟ್ರೋಜನ್ ಮುಂತಾದ ಅನಿಲದ ಗುಳ್ಳೆಗಳು ದಪ್ಪನಾಗಿರುವುದರಿಂದ ಅವು ಸಶಬ್ದವಾಗಿ ಹೊರಬರುತ್ತವೆ. ಹಾಗಾಗಿ ಅವು ದುರ್ನಾತದಿಂದ ಕೂಡಿರುವುದಿಲ್ಲ. ಆದರೆ ಸಲ್ಫೈಡ್‌ಗಳು, ಮರ್ಕ್ಯಾಪ್ಟಾನ್‌ಗಳು ಸ್ವಾಭಾವಿಕವಾಗಿಯೇ ಸಣ್ಣ ಸಣ್ಣ ಅನಿಲದ ಗುಳ್ಳೆಗಳಾಗಿರುವುದರಿಂದ ಸಣ್ಣ ಶಬ್ದ ಅಥವಾ ನಿಶ್ಶಬ್ದವಾಗಿರುತ್ತವೆ ಮತ್ತು ಅವುಗಳಿಂದ ಭಯಂಕರ ದುರ್ಗಂಧ ಪಸರಿಸುತ್ತದೆ! ಈಗ ಗೊತ್ತಾಯಿತಲ್ಲವೆ ಮೊದಲು ನಾನು ಹೇಳಿದ ಮಂತ್ರ ಎಷ್ಟು ತರ್ಕಬದ್ಧವಾಗಿದೆ, ಎಂತಹ ಅರ್ಥವತ್ತಾಗಿದೆ ಮತ್ತು ಎಷ್ಟು ಸೈಂಟಿಫಿಕ್ ಅಂತ?

ಸಾಹಿತ್ಯ ಭಂಡಾರ
ಪಟ್ಟಣದ ನಾಜೂಕು ನಗರವಾಸಿಗಳು ಈ ವಿಷಯದ ಬಗ್ಗೆ ಮೂಗು ಮುರಿಯುತ್ತಾರೆ, ಆದರೆ ಹಳ್ಳಿಗಳ ಕಡೆ ಅಷ್ಟು ಮಡಿವಂತಿಕೆಯಿಲ್ಲ. ಜಾನಪದ-ಲಾವಣಿ ಹಾಡುಗಳು, ಗಾದೆಗಳು, ಒಗಟುಗಳು, ನಾಣ್ನುಡಿ-ಜಾಣ್ನುಡಿಗಳು, ನುಡಿಗಟ್ಟುಗಳು ಮುಂತಾದ ಎಲ್ಲ ಸಾಹಿತ್ಯಿಕ ಪ್ರಕಾರಗಳಲ್ಲೂ ಅಪಾನವಾಯುವಿನ ಸಮೃದ್ಧವಾದ ಸಂಪತ್ತು ದೊರಕುತ್ತದೆ. ನಾನು ಇಲ್ಲಿ ಕೆಲವೇ ಉದಾಹರಣೆಗಳನ್ನು ಹೇಳುತ್ತೇನೆ.

* ಸಣ್ಣಂದಿನಲ್ಲಿ ನಾವು ಕೇಳಿದ ಒಂದು ಜಾನಪದ ಸಾಲು ಹೀಗಿದೆ:

ಒಂದು ಹೂಸ ಹೂಸಿದಕ್ಕೆ, ಏರಿಕಲ್ಲು ಜಾರಿ ಬಿದ್ದು
ಊರಗೌಡ ಬೈದನಂತಲ್ಲೆ ಪುಣ್ಯಾತ್ಮಗಿತ್ತಿ,
ಎಂಥ ಹೂಸನ್ನು ಹೂಸಿದೆ!
* ಒಬ್ಬ ತಾಯಿಗೆ ತನ್ನ ಮತ್ತು ತನ್ನ ಸ್ವಂತ ಮಕ್ಕಳ ವಿಚಾರದಲ್ಲಿ ಎಷ್ಟು ಪ್ರೀತಿ, ಆದರ! ಅದೇ ಹೊರಗಿನಿಂದ ಬಂದ ಸೊಸೆಯ ಬಗ್ಗೆ ಎಂತಹ ತಾತ್ಸಾರಭಾವ ಎಂಬುದಕ್ಕೆ ಕೆಳಗಿನ ಸಂದೇಶ ಸಾಕ್ಷಿ:

ತನ್ಹೂಸು ಹೊನ್ನೂಸು
ಮಗಳ್ಹೂಸು ಮಾಣಿಕ್ಯ
ಸೊಸೆ ಹೂಸು ಕಸಿವಿಸಿ!

* ಯಾವಾಗಲೂ ನಮ್ಮಲ್ಲಿ ಸ್ವಲ್ಪ ಪಾಪದವರು ಅಂದರೆ ಅಷ್ಟಕ್ಕಷ್ಟೆ. ಅವರು ಯಾವ ತಪ್ಪನ್ನು ಮಾಡದೇ ಇದ್ದರೂ ಎಲ್ಲವನ್ನೂ ಅವರ ತಲೆಗೇ ಕಟ್ಟುತ್ತೇವೆ. ನಿಸ್ಸಹಾಯಕರ ಮೇಲೆ ಹುಲ್ಲುಕಡ್ಡಿಯೂ ಬುಸುಗುಟ್ಟುತ್ತೆ ಅನ್ನುವ ಹಾಗೆ, ಗುಂಡಿಗೆ ಬಿದ್ದವರಿಗೆ ಎರಡು ಕಲ್ಲು ಹೆಚ್ಚು. ಆದ್ದರಿಂದ ಈ ಗಾದೆ ಮಾತು.

ಹೂಸಿದೋಳ್ಯಾರು ಅಂದ್ರೆ ಮಾಸಲು ಸೀರ್ಯೋಳು!
* ಅದೇ ರೀತಿ ನಾವು ಯಾವುದಾದರೂ ಕೆಲಸವನ್ನು ಸಾವಧಾನವಾಗಿ ಮಾಡುತ್ತಿದ್ದು ಸಮಯ ಮೀರಿಹೋಗುತ್ತಿದ್ದಲ್ಲಿ ಈ ಗಾದೆ ಉಪಯೋಗಕ್ಕೆ ಬರಬಹುದು. ಹಾಸೋದ್ರಲ್ಲಿ ಹೂಸೋದ್ರಲ್ಲಿ ಬೆಳಗಾಯ್ತು!

* ಇನ್ನು ಕೆಲವರಿರುತ್ತಾರೆ. ನೀವು ಯಾವ ಒಳ್ಳೆ ಕೆಲಸವನ್ನು ಮಾಡಲು ಹೊರಟರೂ ಅದಕ್ಕೆ ಕೊಕ್ಕೆ ಹಾಕುತ್ತಾರೆ, ಘನಂದಾರಿ ಸಲಹೆಗಳನ್ನು ಕೊಟ್ಟು ಆ ಕೆಲಸ ನಿಂತುಹೋಗುವ ಹಾಗೆ ನೋಡಿಕೊಳ್ಳುತ್ತಾರೆ. ಇಂತಹವರನ್ನು ನೋಡಿಯೇ ಈ ಕೆಳಗಿನ ಗಾದೆಯನ್ನು ಹೇಳಿದ್ದಾರೆ.

ಹೂಸ್ದೆ ಹೋದ್ರೆ ಧೂಪ ಹಾಕ್ದಷ್ಟು ಫಲ!
ವಿನಾ ಕಾರಣ ಹೀಗೆ ನಿಮ್ಮ ಕೆಲಸದಲ್ಲಿ ಮೂಗು ತೂರಿಸುವವರಿಗೆ ಆ ಮೂಗಿನ ನೇರಕ್ಕೇ ಒಂದು ಬಿಟ್ಟು ಅವರು ಓಡಿಹೋಗುವ ಹಾಗೆ ಮಾಡುವುದೇ ಇದಕ್ಕೆ ಸರಿಯಾದ ಉಪಾಯ!

* ಮಲ್ಲಿಗೆ ಹೂ ಸುವಾಸನೆಯಿಂದ ಕೂಡಿರುತ್ತದೆ. ಅದೇ ಬಾಡಿ ಹೋದ ಮೇಲೆ ಸ್ವಲ್ಪ ಅಕ್ಷರಪಲ್ಲಟಗೊಂಡು ಮಲ್ಲಿಗೆ ಹೂಸು ವಾಸನೆಯಾಗುತ್ತದೆ!ಹಳೆಯ ಅನುಭವಗಳು
ನಾವು ಹುಡುಗರಾಗಿದ್ದಾಗ ನಮ್ಮ ಒಡನಾಡಿ ರಾಧಾಕೃಷ್ಣನ ಮನೆಯ ಹಿಂಭಾಗದಲ್ಲಿದ್ದ ದೊಡ್ಡ ಸೀಬೆಮರಗಳ ತೋಪಿತ್ತು. ಅಲ್ಲಿಯೇ ನಾವು ಸಂಜೆ ಆಟವಾಡುತ್ತಿದ್ದೆವು. ನಮ್ಮೊಂದಿಗೆ ಕೊನೆಯ ಮನೆಯ ಜಗನ್ನಾಥ ಎಂಬ ಹುಡುಗನೂ ಇದ್ದ. ಅವನು ಶಾಲೆಗೆ ಹೋಗುತ್ತಿರಲಿಲ್ಲ, ಬರೇ ಮನೆಕೆಲಸ ಮಾಡಿಕೊಂಡಿದ್ದ. ನಮಗಿಂತ ದೊಡ್ಡವನು, ಕಟ್ಟುಮಸ್ತಾದ ಆಳು.
ಪ್ರತಿ ಸಾಯಂಕಾಲ ಪಕ್ಕದ ಶಾಂತಾ ಚಿತ್ರಮಂದಿರದಲ್ಲಿ ಸಿನೆಮಾ ಶುರುವಾಗುವುದಕ್ಕೆ ಮುಂಚೆ ಒಂದಿಪ್ಪತ್ತು ಚಿತ್ರಗೀತೆಗಳನ್ನು ಮೈಕಿನಲ್ಲಿ ಹಾಕುತ್ತಿದ್ದರು. ಅದರಲ್ಲೊಂದು ತಾಯ್ ನಾಗೇಶ್ ನಟಿಸಿದ ತಮಿಳು ಹಾಡು,

ಮಾಡಿ ಮೇಲೆ ಮಾಡಿ ಕಟ್ಟಿ ಕೋಟಿ ಕೋಟಿ ಸೇರ್ತುವಿಟ್ಟ ಶ್ರೀಮಾನೇ
ಹಲೋ ಹಲೋ, ಹಲೋ ಹಲೋ ಶ್ರೀಮಾನೇ
ಈ ಹಾಡು ನಮಗೆ ಜಗನ್ನಾಥನನ್ನು ಕೆಣಕಲು ಸ್ಫೂರ್ತಿ! ಆಗ ನಾವು ಮರಕೋತಿಯಾಟ ಆಡುತ್ತಿರಬೇಕು, ಜಗನ್ನಾಥ ಹಿಡಿಯುತ್ತಿರಬೇಕು. ನಾವೆಲ್ಲ ಮರದ ಮೇಲಿರಬೇಕು. ಅಂತಹ ಸಮಯದಲ್ಲೇ ನಮಗೆ ಆಶುಕವಿತೆಗಳನ್ನು ಹೇಳುವ ಧೈರ್ಯ!

ಹೂಸ ಮೇಲೆ ಹೂಸು ಬಿಟ್ಟು ಲೋಕಕೆಲ್ಲ ನಾತ ಕೊಟ್ಟ ಜಗನ್ನಾತ
ಹಲೋ ಹಲೋ, ಹಲೋ ಹಲೋ ಜಗನ್ನಾತ!
ನಮ್ಮಣ್ಣ ಆಗ ಹೈಸ್ಕೂಲ್ ಓದುತ್ತಿದ್ದ. ಶಾಲೆಯಲ್ಲಿ ಕನ್ನಡ ಸಂಧಿ-ಸಮಾಸ ಎಲ್ಲ ಕಲಿತಿದ್ದ. ನಮ್ಮ ಜಗನ್ನಾಥನನ್ನು ಕೆರಳಿಸಲು ಮತ್ತೊಂದು ಬಾಣ, ಜಗಕ್ಕೆಲ್ಲ ನಾತ ಕೊಡುವವನು ಯಾವನೋ ಅವನೇ ಜಗನ್ನಾತ_ ಇದು ಯಣ್ ಸಂಧಿ!

ಮತ್ತೊಂದು ಜೋಕು ಕೇಳಿ: ಆವತ್ತು ಗುಂಡನ ಹುಟ್ಟಿದ ಹಬ್ಬ. ಗುಂಡಿ ಮನೆಯಲ್ಲಿ ಗ್ರ್ಯಾಂಡ್ ಆಗಿ ತಯಾರು ಮಾಡಿ ಕಾಯುತ್ತಿದ್ದಾಳೆ. ಯಥಾಪ್ರಕಾರ ಆಫೀಸಿಗೆ ಹೋದ ಗುಂಡನಿಗೆ ಮನೆ-ಹೆಂಡತಿ ಮರೆತೇ ಹೋಗಿದೆ. ಆ ಮಧ್ಯಾಹ್ನ ಆಫೀಸಿನಲ್ಲೇ ಫ್ರೆಂಡ್ಸ್ ಜೊತೆ ಘನವಾದ ಬರ್ತ್ ಡೇ ಪಾರ್ಟಿ ಮಾಡಿದ್ದಾನೆ. ರಾತ್ರಿ ಬಾಗಿಲಿನಲ್ಲೇ ಕಾಯುತ್ತಿದ್ದ ಗುಂಡಿ ಇವನಿಗೆ ಸರ್ಪ್ರೈಸ್ ಕೊಡಬೇಕಂತ ಅಲ್ಲೇ ಅವನ ಕಣ್ಣಿಗೆ ಪಟ್ಟಿ ಕಟ್ಟಿ ಡೈನಿಂಗ್ ಹಾಲಿಗೆ ಕರೆದುಕೊಂಡು ಬಂದು ಕೂರಿಸುತ್ತಾಳೆ. ನಾನು ಬರುವವರೆಗೂ ಹೀಗೇ ಕೂತಿರಬೇಕು!, ಅಂತ ಆರ್ಡರ್ ಮಾಡಿ ಒಳಗೆ ಹೋಗ್ತಾಳೆ.
ಮೊದಲೇ ಪಾರ್ಟಿಯಲ್ಲಿ ಕಂಡಕಂಡದ್ದನ್ನೆಲ್ಲ ತಿಂದು ಬಂದಿದ್ದ ಗುಂಡನ ಹೊಟ್ಟೆಯೊಳಗೆ ವಾಯುಸಾಂದ್ರತೆ ಹೆಚ್ಚಾಗಿ ಗುಡುಗುಡು ಶುರುವಾಗಿದೆ; ತಡೆದುಕೊಳ್ಳಲಾಗುತ್ತಿಲ್ಲ. ಅವಳು ಬರುವುದರೊಳಗೆ ಆದಷ್ಟೂ ಆಚೆ ಹೋಗಲಿ ಅಂತ ಸಶಬ್ದವಾಗಿ ಠುಸ್ ಅಂತ ಬಿಟ್ಟ. ಹೋಟೆಲಿನವನು ಅದೇನೆಲ್ಲ ದರಿದ್ರ ಮಸಾಲೆ ಹಾಕಿ ಅಡಿಗೆ ಮಾಡಿದ್ದನೋ, ಗಬ್ಬು ವಾಸನೆ! ಕೈಯ್ಯಿಂದಲೇ ಮೂಗಿನ ಮುಂದೆ ಗಾಳಿಯನ್ನು ಅತ್ತಿತ್ತ ನೂಕಿದ. ಅಷ್ಟರಲ್ಲಿ ಇನ್ನೊಂದು; ಮತ್ತೆ ಮತ್ತೊಂದು. ಅಬ್ಬಬ್ಬಾ, ಸದ್ಯ ಬದುಕಿದೆ ಎಂದು ಗಪ್ ಅಂತ ಕುಳಿತ.
ಹೆಂಡತಿ ಬಂದಳು. ಕಣ್ಣಿನಿಂದ ಪಟ್ಟಿ ತೆಗೆದಳು. ಕಣ್ಣುಬಿಟ್ಟು ನೋಡ್ತಾನೆ, ಸುತ್ತಲೂ ಡೈನಿಂಗ್ ಕುರ್ಚಿಗಳ ಮೇಲೆ ಅಕ್ಕಪಕ್ಕದ ಮನೆ ಮಂದಿಯೆಲ್ಲ ಮುಸಿಮುಸಿ ನಗುತ್ತಾ ಮೂಗು ಮುಚ್ಚಿಕೊಂಡು ಕುಳಿತಿದ್ದಾರೆ!ಸಭ್ಯರ ಅಸಭ್ಯತೆ
ಕೆಲವರಿರುತ್ತಾರೆ, ಅವರಿಗೆ ಗಬ್ಬು ವಾಸನೆ ಎಂದರೇ ಅಸಹ್ಯ! ತಾವು ಮಹಾ ಸಭ್ಯರು ಅನ್ನೋ ರೀತಿ, ಥೂ ಥೂ ಅಂತ ಬಂದ ಕಡೆಯೂ ಎಲ್ಲರೆದುರು ಮುಖ ಸಿಂಡರಿಸಿಕೊಳ್ಳುತ್ತಾರೆ. ವಾಸನೆ ಮೂಗಿಗೆ ಹೊಡೆದೊಡನೆ ಅಬ್ಬ ಅಂತ ತಕ್ಷಣ ಮೂಗು ಮುಚ್ಚಿಕೊಳ್ಳುತ್ತಾರೆ. ಸ್ವಲ್ಪ ಹೊತ್ತು ಬಿಟ್ಟು ಸದ್ಯ ಅಂತ ಮೂಗಿನಿಂದ ಕೈ ತೆಗೆಯುತ್ತಾರೆ. ನನಗೆ ಅರ್ಥವಾಗದ್ದು ಏನೆಂದರೆ, ವಾಸನೆ ಗಾಳಿಯಲ್ಲಿ ಪೂರ್ತಿ ಕರಗಿ ಹೋಯ್ತು ಅಂತ ಅವರಿಗೆ ಹೇಗೆ ಗೊತ್ತಾಯ್ತು? ಮಧ್ಯೆ ಮಧ್ಯೆ ಸ್ವಲ್ಪ ಸ್ವಲ್ಪ ಉಸಿರೆಳೆದುಕೊಂಡು ಇನ್ನೂ ಇದೆಯಾ ಅಂತ ಆಗಾಗ ಪರೀಕ್ಷೆ ಮಾಡಿರಬೇಕು ತಾನೆ? ಅದರ ಬದಲು ನೆಮ್ಮದಿಯಾಗಿ ಸ್ವಲ್ಪ ಹೊತ್ತು ಉಸಿರು ಹಿಡಿದುಕೊಂಡು ಎಲ್ಲರಂತೆ ಬಾಯಿ ಮುಚ್ಚಿಕೊಂಡಿರಬಹುದಲ್ಲ!

ನಾವು ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದಾಗ ನಡೆದ ಘಟನೆ. ನಮ್ಮ ಫೊರೆಂಸಿಕ್ ಪ್ರೊಫೆಸರ್ ನಮಗೆ ಒಂದು ಶವದ ಪೋಸ್ಟ್‌ಮಾರ್ಟಂ ಹೇಗೆ ಮಾಡಬೇಕೆಂದು ತೋರಿಸುವ ಸಂದರ್ಭ. ಶವಾಗಾರದ ತರಗತಿಯಲ್ಲಿ ನಾವೆಲ್ಲ ಕುಳಿತಿದ್ದೆವು. ಸತ್ತವನ ಕುಟುಂಬದವರು ಹೊರಗೆ ಕಾಯುತ್ತಿದ್ದರು, ಹಾಗಾಗಿ ಬಾಗಿಲು ಮುಚ್ಚಿತ್ತು. ನಮ್ಮ ಮುಂದುಗಡೆ ಟೇಬಲ್ಲಿನ ಮೇಲೆ ಕೊಳೆತ ಶವವನ್ನು ಒಬ್ಬ ಅಟೆಂಡರ್ ಸಹಾಯದೊಂದಿಗೆ ವಿವರಿಸುತ್ತಿದ್ದರು. ಮೊದಲಿಗೆ ತಲೆ, ಎದೆಯ ಭಾಗಗಳನ್ನೆಲ್ಲ ಸೀಳಿ ವಿವರಿಸಿದರು.
ಆ ನಂತರ ಹೊಟ್ಟೆಯ ಭಾಗವನ್ನು ನಾಜೂಕಾಗಿ ಸೀಳಿದೊಡನೆ, ಒಳಗಿನಿಂದ ಸಣ್ಣ ಕರುಳಿನ ರಾಶಿ ಧುತ್ತನೆ ಹೊರಬಂದಿತು. ಬಹುಶಃ ನೀರಿನಲ್ಲಿ ಮುಳುಗಿ ಸತ್ತಿರಬೇಕು. ನಾಲ್ಕಾರು ದಿನಗಳಲ್ಲಿ ಕರುಳಿನಲ್ಲಿ ಕೊಳೆತ ಗಾಳಿ ತುಂಬಿಕೊಂಡು ಊದಿ ಹೋಗಿತ್ತು. ಗುದದ್ವಾರ ಮುಚ್ಚಿ ಹೋಗಿದ್ದರಿಂದ ವಿಷಗಾಳಿ ಹೊರಕ್ಕೆ ಬರಲೂ ಸಾಧ್ಯವಾಗಿರಲಿಲ್ಲ. ಈಗ ನೋಡಿ ಎಂದು ಪ್ರೊಫೆಸರ್ ಸಾಹೇಬರು ಕರುಳನ್ನು ಸ್ಕಾಲ್‌ಪೆಲ್ಲಿನಿಂದ ಸೀಳಿ, ತಕ್ಷಣ ಕರ್ಚೀಫಿನಿಂದ ಮೂಗು ಮುಚ್ಚಿಕೊಂಡು ಅತ್ತ ತಿರುಗಿದರು. ಠುಸ್ಸ್ ಎಂದು ಕರುಳಿನಲ್ಲಿದ್ದ ಗಾಳಿ ಎಲ್ಲ ಹೊರಬಂದಿತು. ಕ್ಷಣಾರ್ಧದಲ್ಲಿ ಭಯಂಕರ ದುರ್ನಾತ ರೂಂನಲ್ಲೆಲ್ಲ ಹರಡಿಹೋಯಿತು! ನಮ್ಮ ಪುಣ್ಯ, ಹುಡುಗಿಯರು ಯಥಾಪ್ರಕಾರ ಮುಂದಿನ ಸಾಲಿನಲ್ಲಿ ಕುಳಿತಿದ್ದರು. ದುರ್ನಾತವನ್ನು ತಡೆಯಲಾರದೆ ಹಿಂಬದಿಯ ಕಿಟಕಿಯಿಂದ ನಾಲ್ಕಾರು ಹುಡುಗರು ೧೨-೧೫ ಅಡಿ ಎತ್ತರದಿಂದ ಕೆಳಗೆ ಹಾರಿದ್ದರು! ರಾಜಶೇಖರ ಐತಾಳ ಅಲ್ಲಿ ವಾಂತಿಯೂ ಮಾಡಿಕೊಂಡಿದ್ದ!

ಇಲ್ಲಿ ಮತ್ತೊಂದು ಮುಖ್ಯವಾದ ವಿಚಾರವನ್ನು ನೀವು ನೆನಪಿನಲ್ಲಿಡಬೇಕು. ಪ್ರಕೃತಿಯಲ್ಲಿ ಅಸಹ್ಯ ಎಂಬುದೇ ಇಲ್ಲ. ನಿಮಗೆ ಅಸಹನೀಯವಾದ ಒಂದು ವಸ್ತು ಮತ್ತೊಬ್ಬರಿಗೆ ಸಂತೋಷವನ್ನು ಕೊಡಬಹುದು; ನಿಮಗೆ ಯಾವುದು ಆಪ್ಯಾಯಮಾನವೋ ಅದು ಮತ್ತೊಂದಕ್ಕೆ ಅಸಹ್ಯವಾಗಿರಬಹುದು. ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ, ಎಂದು ನೀವು ಹೇಳಬಹುದು. ಆದರೆ ಇದನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ನಾಯಿಗಳಿಗೆ ಹೂಸು ವಾಸನೆ ಎಂದರೆ ಬಹಳ ಇಷ್ಟ! ಸಭೆಯಲ್ಲಿ ಯಾರು ಬಿಟ್ಟರೂ ಗುರುತು ಹಿಡಿದು ಅವರ ಹಿಂದೆಯೇ ಹೋಗಿ ನಿಲ್ಲುತ್ತದೆ.

ವೈಜ್ಞಾನಿಕ ಆವಿಷ್ಕಾರಗಳಿಗೆ ಅಸ್ತಿಭಾರ
ನಮ್ಮ ದೇಹದ ಚರ್ಮದಲ್ಲಿ ನಾನಾ ಬಗೆಯ ಸೂಕ್ಷ್ಮವಾದ ಸಂವೇದನಾಶೀಲ ಜ್ಞಾನಕೋಶಗಳಿರುತ್ತವೆ. ಸ್ಪರ್ಶ, ನೋವು, ಶಾಖ, ಕಂಪನ, ಒತ್ತಡ ಇವುಗಳಲ್ಲಿ ಒಂದೊಂದನ್ನೂ ಪ್ರತ್ಯೇಕವಾಗಿ ಗುರುತಿಸಲು ನಮಗೆ ಸಾಧ್ಯವಿದೆ. ಅದೇ ರೀತಿ ನಮ್ಮ ಗುದದ್ವಾರದಲ್ಲಿಯೂ ನಮಗೆ ಆ ತುದಿಗೆ ಬಂದು ನಿಂತಿರುವುದು ದ್ರವವೋ, ಅನಿಲವೋ ಅಥವಾ ಘನವಸ್ತುವೋ ಎಂಬುದು ನಮ್ಮೆಲ್ಲರ ಅನುಭವಕ್ಕೆ ಬರುತ್ತದೆ. ಅಷ್ಟೇ ಅಲ್ಲ, ಅನಿಲವಾದರೆ ಅದು ದೊಡ್ಡ ಗುಳ್ಳೆಯ ಅನಿಲವೋ ಸಣ್ಣ ಗುಳ್ಳೆಗಳ ಅನಿಲವೋ ಎಂಬುದೂ ನಮಗೆ ಗೊತ್ತಾಗಿ ಬಿಡುತ್ತದೆ!

ಅಂದರೆ, ಮಾನವನ ಗುದದ್ವಾರದಲ್ಲಿ ವಿಶೇಷ ಗುಣಗಳಿಂದ ಕೂಡಿದ ಸಂವೇದನಾಶೀಲ ನರಕೋಶಗಳಿವೆ ಎಂದಾಯ್ತು. ಈ ನಾನಾಬಗೆಯ ನರಕೋಶಗಳು ಯಾವುವು, ಅವುಗಳಿಂದ ನಮಗೆ ಏನು ಉಪಯೋಗ ಮತ್ತು ವಿವಿಧ ರೋಗಗಳಲ್ಲಿ ಅಥವಾ ನರವ್ಯೂಹದ ವ್ಯಾಧಿವಿಕಾರಗಳಲ್ಲಿ ರೋಗಿಗಳು ಏನೇನು ಅಸ್ವಸ್ಥತೆಗಳನ್ನು ಅನುಭವಿಸುತ್ತಾರೆ, ಅವಕ್ಕೆ ಪರಿಹಾರಗಳು ಯಾವುವು ಎಂಬುದು ಮುಂದಿನ ಪೀಳಿಗೆಯ ವೈದ್ಯಕೀಯ ವಿಜ್ಞಾನಿಗಳ ಮುಂದಿರುವ ಸವಾಲು.


 

1 comment:

ನಾರಾಯಣ ಶಾಸ್ತ್ರಿ said...

ನಕ್ಕೂ ನಕ್ಕೂ ಸಾಕಾಯ್ತು ... ಅಂಗಣ ಬಹಳ ಸ್ವಾರಸ್ಯಕರವಾಗಿದೆ. ಡಾ. ಬಿ ಜಿ ಎಲ್‌ ಸ್ವಾಮಿಯವರ ಕೃತಿಗಳನ್ನು ಓದಿದ ಹಾಗಾಯ್ತು.