Tuesday, October 6, 2020

ಗಾಂಧೀಜಿಯವರ ರಾಮರಾಜ್ಯದ ಕಲ್ಪನೆ

 ಗಾಂಧೀಜಿಯವರ ರಾಮರಾಜ್ಯದ ಕಲ್ಪನೆ

ಮಹಾತ್ಮಾ ಗಾಂಧೀಜಿಯವರು ಸ್ವಾತಂತ್ರಕ್ಕೆ ಮುನ್ನ ಭಾರತದಲ್ಲಿ ರಾಮರಾಜ್ಯವನ್ನು ಕಟ್ಟುವ ಅಭಿಲಾಶೆಯನ್ನು ಇಟ್ಟುಕೊಂಡಿದ್ದರು. ನಮ್ಮ ದೇಶ ಸ್ವಾತಂತ್ರ್ಯ ಕಂಡು ಇಂದಿಗೆ ಎಪ್ಪತ್ತ ಮೂರು ವರ್ಷಗಳು ಕಳೆದಿವೆ. ಮಹಾತ್ಮರ ರಾಮರಾಜ್ಯದ ಕನಸು ಈಡೇರಿದೆಯೆ ಎಂದು ನಾವು ಆತ್ಮಾವಲೋಕನೆ ಮಾಡಿಕೊಳ್ಳುವ ಕಾಲ ಬಂದಿದೆ. 

ಗಾಂಧೀಜಿಯವರ ರಾಮರಾಜ್ಯ ಎಂದರೆ, ಅದು ಗ್ರಾಮರಾಜ್ಯವಾಗಿತ್ತು. ಈವತ್ತೂ ನಾವು ನಮ್ಮ ದೇಶ ಎಂದರೆ, ಅದು ಹಳ್ಳಿಗಳಿಂದ ಕೂಡಿದ ದೇಶ, ಜನಪದ ಸಂಗೀತ, ಕರಕುಶಲ ಕಲೆ, ಗ್ರಾಮ್ಯ ಭಾಷೆಯ ಸೊಗಡು, ಇವೆಲ್ಲ ನಮ್ಮ ದೇಶದ ಬೆನ್ನೆಲುಬು ಎಂದೆಲ್ಲ ಭಾವಿಸುತ್ತಾ ಬಂದಿದ್ದೇವೆ. ಆದರೆ ಇವು ಎಷ್ಟರ ಮಟ್ಟಿಗೆ ಸರಿ?

ಬ್ರಿಟಿಷರು ನಮ್ಮ ದೇಶವನ್ನು ಸುಮಾರು ಒಂದೂವರೆ ಶತಕಗಳ ಕಾಲ ಆಳಿದರು. ದೇಶವನ್ನು, ದೇಶದ ಜನರನ್ನು ಒಡೆದು, ಜನರ ಒಗ್ಗಟ್ಟನ್ನು ಛಿದ್ರ ಮಾಡಿ, ಆ ಮೂಲಕ ಇಡೀ ದೇಶದ ಜನರಲ್ಲಿ ಪರಸ್ಪರ ದ್ವೇಷದ ಬೀಜವನ್ನು ಬಿತ್ತಿದರು. ಹೀಗೆ ಭಾರತವನ್ನು ಅವರ ರಾಜಕೀಯ ಇಚ್ಛಾಶಕ್ತಿಗೆ ಪೂರಕವಾಗಿ ಬಳಸಿಕೊಂಡರು. ಈ ಒಡೆದಾಳುವ ನೀತಿಯನ್ನೇ, ಸ್ವಾತಂತ್ಯಾ ನಂತರ ದೇಶವನ್ನಾಳಿದ ಎಲ್ಲಾ ರಾಜಕೀಯ ಪಕ್ಷಗಳು ಮುಂದುವರಿಸಿಕೊಂಡು ಬಂದಿವೆ.

ಹಿಂದೆ, ಅಂದರೆ, ಜಾತಿಯ ವಿಷವೃಕ್ಷ ಮೊಳಕೆಯೊಡೆಯುವ ಮುನ್ನ, ಒಂದು ಹಳ್ಳಿಯಲ್ಲಿ ರೈತ, ಹರಿಜನ, ಕುಂಬಾರ, ಕಂಬಾರ, ಪೂಜಾರಿ, ಜೌಳಿಗ, ಗೌಳಿಗ, ಕ್ಷೌರಿಕ, ದರ್ಜಿ, ಚಿನಿವಾರ, ಚಮ್ಮಾರ, ಬಳೆಗಾರ, ಜಾಡಮಾಲಿ, ದನಗಾಹಿ, ಕುರಿಗಾಹಿ ಮುಂತಾದವರು ತಮ್ಮ ಬಗೆಬಗೆಯ ಕುಲಕಸುಬನ್ನು ಮಾಡಿಕೊಂಡು ತಮ್ಮ ಬದುಕನ್ನು ಕಂಡುಕೊಂಡಿದ್ದರು. ಅವರ ದೈನಂದಿನ ಕಾರ್ಯಗಳು ಮತ್ತು ಉತ್ಪನ್ನಗಳು ಆಯಾ ಗ್ರಾಮದ ಮಂದಿಗೆ ಪೂರೈಕೆಯಾಗುತ್ತಿದ್ದವು. ಕಾಲಾಕಾಲಕ್ಕೆ ಜರುಗುತ್ತಿದ್ದ ಹಬ್ಬ-ಹರಿದಿನಗಳಲ್ಲಿ, ಜಾತ್ರೆಗಳಲ್ಲಿ ಎಲ್ಲರೂ ಒಂದುಗೂಡಿ ಸಂತೋಷದಿಂದ ಸಂಭ್ರಮಿಸುತ್ತಿದ್ದರು. ಜನಪದ ಪ್ರತಿಭೆಗಳು ಆ ಸಮಯಗಳಲ್ಲಿ ವಿಜ್ರಂಭಿಸಿದವು. ಅವರ ವಿವಿಧ ವೃತ್ತಿಗಳು ಇಡೀ ಹಳ್ಳಿಯನ್ನು ಒಂದುಗೂಡಿಸಿತ್ತು. ದಿನನಿತ್ಯದ ಬದುಕಿಗೆ ಒಬ್ಬೊಬ್ಬರ ವೃತ್ತಿಯೂ ಆ ಹಳ್ಳಿಗೆ ಸೀಮಿತಗೊಂಡಿತ್ತು ಮತ್ತು ಪ್ರತಿಯೊಬ್ಬರೂ ಮತ್ತೊಬ್ಬರಿಗೆ ಅನಿವಾರ್ಯವಾಗಿದ್ದರು. ಹಳ್ಳಿಯಲ್ಲಿ ಪ್ರತಿಯೊಂದು ವೃತ್ತಿಯವರಿಗೂ ವಿಶಿಷ್ಟ ಸ್ಥಾನ ಹಾಗೂ ಗೌರವವಿತ್ತು. ಜಾನಪದ ಹಾಡುಗಳಲ್ಲಿ, ಸಾಂಸ್ಕೃತಿಕ ಪರಂಪರೆ-ಆಚರಣೆಗಳಲ್ಲಿ ಅದನ್ನು ಇಂದೂ ನಾವು ಕಾಣಬಹುದಾಗಿದೆ.

ಅವರ ಒಂದೊಂದು ಕುಲವೃತ್ತಿಯೂ ತಲೆತಲಾಂತರದಿಂದ ವಂಶವಾಹಿನಿಯಲ್ಲಿ ಹರಿದು ಅದು ಅವರಲ್ಲಿ ರಕ್ತಗತವಾಗಿ, ಒಬ್ಬೊಬ್ಬರೂ ಅವರವರ ವೃತ್ತಿಯಲ್ಲಿ ಪ್ರವೀಣರೂ, ವಿಶೇಷಜ್ಞರೂ ಆಗಿದ್ದರು! ಅದು ಅವರ ಆತ್ಮವಿಕಾಸಕ್ಕೂ, ಸ್ವಾಭಿಮಾನಕ್ಕೂ ಆತ್ಮನಿರ್ಭರತೆಗೂ ಪೂರಕವಾಗಿತ್ತು. ಹೀಗೆ ಪ್ರತಿಯೊಂದು ಗ್ರಾಮವೂ ಸ್ವಯಂಪೂರ್ಣವಾದ, ಸ್ವಾವಲಂಬನೆಯ, ಸ್ವರಾಜ್ಯವಾಗಿತ್ತು.

ನಾವು ಇಲ್ಲಿ ಒಂದು ವಿಷಯವನ್ನು ಗಂಭೀರವಾಗಿ ಗಮನಿಸಬೇಕು: ಮೇಲೆ ಹೇಳಿದ ಯಾರೂ ಕೂಡ ಇಂದಿನ ಆಧುನಿಕ ಪದ್ಧತಿಯ ವಿದ್ಯಾಭ್ಯಾಸವನ್ನೂ ಮಾಡಿರಲಿಲ್ಲ, ಯಾರೂ ಯಾವ ಡಿಗ್ರಿ ಪ್ರಶಸ್ತಿ ಪತ್ರವನ್ನೂ ಪಡೆದಿರಲಿಲ್ಲ. ಆದರೆ, ಅವರೆಲ್ಲ ಅವರವರ ವೃತ್ತಿಯಲ್ಲಿ ಸಂಪೂರ್ಣ ನಿಪುಣರಾಗಿದ್ದರು. ಮತ್ತು ಅವರೆಲ್ಲ ಅವರ ಕಾರ್ಯ ಚಟುವಟಿಕೆಗಳಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಮೈಗೂಡಿಸಿಕೊಂಡಿದ್ದರು. ಒಂದು ದೃಷ್ಟಿಯಿಂದ ನೋಡುವುದಾದರೆ, ಅವರೆಲ್ಲ ವಿಜ್ಞಾನಿಗಳೇ ಆಗಿದ್ದರು! ಹಳ್ಳಿಯ ವಿಶಾಲ ಹೊಲ-ಗದ್ದೆ, ಬೆಟ್ಟ-ಗುಡ್ಡ, ಹಸು-ಕುರಿ ಕೊಟ್ಟಿಗೆಗಳೇ ಅವರ ಪ್ರಯೋಗಾಲಯ! ಹಾಗಿಲ್ಲದಿದ್ದಲ್ಲಿ, ಈಗ ನಾವು ಕಾಣುತ್ತಿರುವ ನೂರಾರು ತಳಿಯ ಭತ್ತ, ಜೋಳ, ಗೋಧಿ, ಹಸು, ಕೋಳಿ, ಕುರಿ ಮುಂತಾದುವುಗಳು ಇರುತ್ತಿರಲಿಲ್ಲ. ನಿಮಗೆ ಆಶ್ಚರ್ಯವಾಗಬಹುದು: ಇವು ಯಾವುವೂ ಆಧುನಿಕ ವಿಜ್ಞಾನಿಗಳಿಂದ ಪ್ರಯೋಗಾಲಯಗಳಲ್ಲಿ ಸಂಶೋಧಿಸಲ್ಪಟ್ಟ ಆವಿಷ್ಕಾರಗಳೇ ಅಲ್ಲ!

ಇಂದು ಪ್ರತಿಯೊಂದು ಕುಲ ವೃತ್ತಿಯೂ ಮಣ್ಣುಪಾಲಾಗಿವೆ. ಪ್ರತಿಯೊಂದು ಕುಲಕಸುಬೂ ಕೂಡ ಒಂದೊಂದು ಜಾತಿಯಾಗಿ ಪರಿವರ್ತಿತಗೊಂಡಿದೆ. ನೂರಾರು ವರ್ಷಗಳಿಂದ ಅನುಕ್ರಮವಾಗಿ ಬಂದಂತಹ ಸರ್ಕಾರಗಳು ಈ ಎಲ್ಲ ನಾಗರಿಕರನ್ನೂ ಒಬ್ಬರಿಂದ ಮತ್ತೊಬ್ಬರನ್ನು ಸಮರ್ಥಕವಾಗಿ ಬೇರ್ಪಡಿಸಿದರು. ಎಲ್ಲರನ್ನು ತುಚ್ಛವಾಗಿ, ಕೀಳಾಗಿ ಕಂಡರು. ಅಷ್ಟೇ ಅಲ್ಲ, ಈ ಎಲ್ಲ ವೃತ್ತಿಗಳೂ ಕೀಳು ಎಂಬ ಭಾವನೆ ಅವರಲ್ಲಿ ಆಳವಾಗಿ ಬೇರೂರುವಂತೆ ಮನಗೆಡಿಸಿದರು! ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಪ್ರತಿಯೊಂದು ಜಾತಿಯೂ ಇಂದು ಹರಿದು ಹಂಚಿಹೋಗಿದೆ. 

ಅಷ್ಟೇ ಅಲ್ಲ, ಹೀಗೆ ಭಾರತ ದೇಶವಾಸಿಗಳನ್ನೆಲ್ಲ ಹಿಂದುಳಿದವರು, ತುಳಿತಕ್ಕೊಳಪಟ್ಟವರು, ದಲಿತರು, ನಿರ್ಗತಿಕರು ಎಂದು ಅವರನ್ನು ಪ್ರತಿಬಿಂಬಿಸಲ್ಪಟ್ಟಿದೆ. ಪ್ರತಿಯೊಂದು ಜಾತಿಯೂ, ಅವರವರ ಜನಸಂಖ್ಯೆಯ ಆಧಾರದಲ್ಲಿ, ಎಷ್ಟೆಷ್ಟು ಕೀಳು ಎಂದು ಪಟ್ಟಿ ಮಾಡಲಾಗಿದೆ. ಈ ಹಣೆಪಟ್ಟಿ ಹಚ್ಚುವುದಲ್ಲದೆ, ಎಲ್ಲರಿಗೂ ಜಾತಿ ಸರ್ಟಿಫ಼ಿಕೇಟನ್ನು ಕೊಡಲಾಗಿದೆ. ಇದು ವ್ಯವಸ್ಥಿತವಾಗಿ ತಲೆತಲಾಂತರಕ್ಕೂ ಮುಂದುವರೆಯುವಂತೆ ನೋಡಿಕೊಂಡಿದ್ದಾರೆ. ಇದರೊಂದಿಗೆ ಭಾರತೀಯರೇ ಆದ ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಕ್ಕರು, ಜೈನರು ಮುಂತಾದ ವಿವಿಧ ಮತದವರನ್ನು ಅಲ್ಪಸಂಖ್ಯಾತರು ಎಂದು ಒಡೆಯಲಾಗಿದೆ.

ಸಾಮಾಜಿಕ ನಿಚ್ಚಣಿಕೆಯಲ್ಲಿ ಅವರೆಲ್ಲ ಬಹಳ ಕೆಳ ಮೆಟ್ಟಿಲುಗಳಲ್ಲಿದ್ದಾರೆ ಎಂಬ ಭ್ರಮೆ ಹುಟ್ಟಿಸಿ, ಅವರನ್ನು ಸಾಮಾಜಿಕವಾಗಿ ಮೇಲೆತ್ತುವ ಪ್ರಕ್ರಿಯೆ ಎಡೆಬಿಡದೆ ಸಾಗಿದೆ. ಇದೊಂದು ರಾಜಕೀಯ ನಾಟಕವಷ್ಟೆ. ಮೇಲೆತ್ತುವುದು ಎಂದರೆ, ಅವರನ್ನೆಲ್ಲ ವೈದ್ಯರು, ಇಂಜಿನಿಯರುಗಳು, ಹಾಗೂ ವಿವಿಧ ಕಾಲೇಜು-ಶಿಕ್ಷಣವನ್ನು ಪಡೆದು ವಿವಿಧ ಡಿಗ್ರಿಗಳನ್ನು ಪಡೆದ ಪದವೀಧರರನ್ನಾಗಿ ಮಾಡುವುದು, ಸರ್ಕಾರದ ಹುದ್ದೆಗಳನ್ನು ಅಲಂಕರಿಸುವುದು ಎಂದರ್ಥ! ಹೀಗೆ, ದೊಡ್ಡ ದೊಡ್ಡ ಪದವಿ ಪಡೆಯುವುದೇ, ಸರ್ಕಾರಿ ಹುದ್ದೆಯನ್ನು ಪಡೆಯುವುದೇ ಒಬ್ಬ ವ್ಯಕ್ತಿಯ ಜೀವನದ ಗುರಿ, ಹಾಗಾದರೆ ಮಾತ್ರ ಅವನಿಗೆ ಸಮಾಜದಲ್ಲಿ ಗೌರವ ಎಂಬ ಭಾವನೆ ಈಗ ಎಲ್ಲರ ಮನದಲ್ಲಿಯೂ ತಳವೂರಿಬಿಟ್ಟಿದೆ! 

ಇದರೊಂದಿಗೆ ಮತ್ತೊಂದು, ಮತ್ತು ಅಷ್ಟೇ ಹೀನ, ಸಂಸ್ಕೃತಿ ಕಂಡುಬರುತ್ತಿದೆ. ಇವರನ್ನೆಲ್ಲ ರಾಜಕೀಯ ದಾಳಗಳನ್ನಾಗಿಸಿ, ಪ್ರತಿಯೊಂದು ಜಾತಿಯೂ ವೋಟ್-ಬ್ಯಾಂಕ್‌ಗಳನ್ನಾಗಿ ಪರಿವರ್ತಿತಗೊಳಿಸುವ ಪ್ರಕ್ರಿಯೆ ಸಮರ್ಥವಾಗಿ ನಡೆಯುತ್ತಿದೆ! ಭಾರತದ ಸಂವಿಧಾನದಲ್ಲಿ ನಮ್ಮದು ಜಾತ್ಯಾತೀತ ದೇಶ ಎಂದು ದಪ್ಪನಾದ ಅಕ್ಷರದಲ್ಲಿ ಬರೆದಿದ್ದರೂ, ಸ್ವಾತಂತ್ರ್ಯ ದೊರಕಿ ಏಳೆಂಟು ದಶಕಗಳು ಕಳೆದರೂ ಜಾತಿ ವೈಷಮ್ಯಗಳು, ವೈಪರೀತ್ಯಗಳು ಒಂದಿಷ್ಟೂ ಬದಲಾಗಿಲ್ಲ ಮತ್ತು ಈ ಪರಿಸ್ಥಿತಿ ಹೆಚ್ಚುತ್ತಿರುವದನ್ನೇ ನಾವು ಕಾಣುತ್ತಿದ್ದೇವೆ. ಇಂದು ಪ್ರತಿಯೊಂದು ಜಾತಿಯೂ ರಾಜಕೀಯ ಲಾಭವನ್ನು ಪಡೆಯಲು, ಹೆಚ್ಚು ಹೆಚ್ಚು ಹಿಂದುಳಿಯಲು ಪ್ರಯತ್ನಿಸುತ್ತಿವೆ! ತಮ್ಮ ಮುಂದಿನ ಪೀಳಿಗೆಗಳಿಗೂ ಎಲ್ಲ ಸರಕಾರದ ಸವಲತ್ತುಗಳು ದೊರಕಬೇಕೆಂಬ ನಿಟ್ಟಿನಲ್ಲಿ ಎಲ್ಲರಲ್ಲಿಯೂ ತಾವು ಹಿಂದುಳಿಯಬೇಕೆಂಬುದೇ ಧ್ಯೇಯವಾಗಿಬಿಟ್ಟಿದೆ. 

ನಾವೆಲ್ಲ ಭಾರತೀಯರು, ದೇಶವನ್ನು ಎಲ್ಲರೂ ಒಂದುಗೂಡಿ ಮುಂದಕ್ಕೆ ತರಬೇಕು ಎಂಬ ವಿಚಾರವೇ ನೇಪಥ್ಯಕ್ಕೆ ಸರಿದಿದೆ. ರಾಷ್ಟ್ರಭಕ್ತಿ, ದೇಶಪ್ರೇಮ ಮುಂತಾದ ಆದರ್ಶಗಳು ಮಾಯವಾಗಿವೆ. ಹಣ ಗಳಿಸುವುದೇ ರಾಜಕೀಯದ ಉದ್ದೇಶವಾದ್ದರಿಂದ ಎಲ್ಲ ಆಡಳಿತ ನಡೆಸುವ ಅಧಿಕಾರ ವ್ಯವಸ್ಥೆಗಳಲ್ಲಿ ಮೋಸ, ಲಂಚಗುಳಿತನ, ತಾಂಡವವಾಡುತ್ತಿದೆ. ಗೂಂಡಾಗಿರಿ, ಕ್ರೌರ್ಯ, ಸಮಾಜಘಾತುಕತನ ಇವೇ ಇಂದು ಯುವ ನಾಯಕತ್ವದ ಗುಣಗಳಾಗಿವೆ! ದೇಶದ ನಾಗರಿಕರ ಮೂಲ ಅವಶ್ಯಕತೆಗಳಾದ ವಿದ್ಯಾಭ್ಯಾಸ, ಆರೋಗ್ಯ, ಎಲ್ಲವೂ ರಾಜಕೀಯ ವ್ಯಕ್ತಿಗಳ ಕೌಟುಂಬಿಕ ವ್ಯವಹಾರಗಳಾಗಿವೆ.

ಈ ಎಲ್ಲ ದುರ್ವ್ಯವಹಾರಗಳೂ ದೊಡ್ಡ ದೊಡ್ಡ ನಗರಗಳಲ್ಲಿ ಹುಟ್ಟಿ, ಗ್ರಾಮಗಳಿಗೆ ಪಸರಿಸುತ್ತಿವೆ. ಪಟ್ಟಣಗಳು ಸುತ್ತಮುತ್ತಲ ಹಳ್ಳಿಗಳನ್ನು ನುಂಗಿ ಯಾವುದೇ ಎಗ್ಗಿಲ್ಲದೆ ಬೆಳೆಯುತ್ತಿವೆ. ದೊಡ್ಡ ದೊಡ್ಡ ಉದ್ಯಮಗಳು ತಲೆಯೆತ್ತುತ್ತಿವೆ. ಇದರಿಂದ ಗ್ರಾಮೋದ್ಯೋಗಗಳು ಮಾಯವಾಗಿ, ಗ್ರಾಮಾಂತರ ಜೀವನಗಳು ನಿರ್ಭರವಾಗುತ್ತಿದೆ. ಹಳ್ಳಿಗರು ತಮ್ಮ ಕುಲಕಸುಬನ್ನು ಬಿಟ್ಟು, ಆಸ್ತಿಯನ್ನು ಬಂಡವಾಳಶಾಹಿಗಳಿಗೆ ಮಾರಿ, ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕರಾಗುತ್ತಿದ್ದಾರೆ. ಗ್ರಾಮ ಸಂಸ್ಕೃತಿ, ಗುಡಿ ಕೈಗಾರಿಕೆಗಳು ಮಾಯವಾಗಿವೆ. ಹಳ್ಳಿಯ ಯುವಕರು ಯಾವುದೇ ಕೆಲಸವಿಲ್ಲದೆ, ಯಾವುದೇ ವೃತ್ತಿಯಲ್ಲೂ ಪ್ರಣೀತರಾಗದೆ, ಪುಂಡ ಪೋಕರಿಗಳಾಗಿ, ವಿವಿಧ ವ್ಯಸನಿಗಳಾಗಿ, ಸರ್ಕಾರ ನೀಡುವ ಉಚಿತ ಸೌಲಭ್ಯಗಳನ್ನು ಪಡೆದು, ಸೋಮಾರಿಗಳಾಗಿ, ಅಡ್ಡದಾರಿ ಹಿಡಿದು ದೇಶಕ್ಕೆ ಮಾರಕರಾಗುತ್ತಿದ್ದಾರೆ.

ಈ ಎಲ್ಲ ಪರಿಸ್ಥಿತಿಯನ್ನು ಹಿಮ್ಮೊಗವಾಗಿ ತಿರುಗಿಸಲು ಸಾಧ್ಯವೆ? ಇವಕ್ಕೆ ಪರಿಹಾರಗಳೇನು? 

೧. ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಗೆ ಕಡಿವಾಣ ಹಾಕಬೇಕು. 

೨. ಸರ್ಕಾರವು ಉಚಿತ ಪಡಿತರ ಮುಂತಾದ ಸಾಮಗ್ರಿಗಳನ್ನು ನೀಡುವುದು ತಪ್ಪಬೇಕು.

೩. ಕಾರ್ಮಿಕರಿಗೆ, ಆರ್ಥಿಕವಾಗಿ ಹಿಂದುಳಿದ ಜನರಿಗೆ, ಅವರ ವೃತ್ತಿಗೆ ಅವಶ್ಯವಾದ ಸಾಮಗ್ರಿಗಳನ್ನು ನೀಡಿ, ಕೆಲಸ ಮಾಡಲು ಪ್ರೋತ್ಸಾಹಿಸಬೇಕು.  

೪. ಜಾತಿ ವ್ಯವಸ್ಥೆ ದೇಶಕ್ಕೇ ಮಾರಕ. ಇದು ಯುವಕರ ಸ್ವಾಭಿಮಾನ, ಆತ್ಮಸ್ಥೈರ್ಯಗಳನ್ನು ಕುಗ್ಗಿಸಿದೆ. ಇದನ್ನು ಮೊದಲು ತೊಡೆಯಬೇಕು.

೫. ಕುಲಕಸುಬು-ವೃತ್ತಿಧರ್ಮಗಳನ್ನು ಎಲ್ಲರೂ ಗೌರವಿಸುವಂತಾಗಬೇಕು. ಸರ್ಕಾರದಿಂದ ಅವುಗಳಿಗೆ ಪ್ರೋತ್ಸಾಹ, ಸವಲತ್ತುಗಳು ದೊರಕಬೇಕು. 

೬. ಪ್ರತಿಯೊಂದು ಹಳ್ಳಿಯಲ್ಲಿಯೂ ನಮಗೀಗ ಉತ್ತಮ ನಡೆವಳಿಕೆಯ, ದೇಶದ ಬಗ್ಗೆ ಕಳಕಳಿಯುಳ್ಳ, ನಿಸ್ವಾರ್ಥ ಯುವ ಕಟ್ಟಾಳುಗಳು ಬೇಕಿದ್ದಾರೆ.

೭. ಇಂತಹ ಯುವ ನಾಯಕರನ್ನು ಗ್ರಾಮದ ಹಿರಿಯರು ಪ್ರೋತ್ಸಾಹಿಸಿ, ಬೆಳೆಸಬೇಕು. ಗ್ರಾಮದ ಪುಂಡರನ್ನು, ನಿಷ್ಪ್ರಯೋಜಕರನ್ನು ತಿರಸ್ಕರಿಸಬೇಕು. 

೮. ಗ್ರಾಮಾಂತರ ಪ್ರದೇಶಗಳ ಗಡಿಗಳನ್ನು ಗುರುತಿಸಿ, ಉಳಿಸಬೇಕು ಮತ್ತು ಅವು ಪರರ ಪಾಲಾಗುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು.

೯. ಅದರಲ್ಲೂ ಕೃಷಿಭೂಮಿಯನ್ನು, ವಾಣಿಜ್ಯದ ಉದ್ದೇಶಕ್ಕೆ ಪರಿವರ್ತಿಸುವ ಆದೇಶ ಖಂಡಿತ ನಿಲ್ಲಬೇಕು.

೧೦. ಜನ ಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಂಡು, ಪ್ರಾಮಾಣಿಕ ಯುವಕರೊಡಗೂಡಿ, ಗ್ರಾಮಾಭಿವೃದ್ಧಿಗೆ ನಿಷ್ಠೆಯಿಂದ ಕೈಜೋಡಿಸಬೇಕು.

ಹೀಗೆ ಆದಾಗ ಮಾತ್ರ ನಾವು ಗಾಂಧೀಜಿಯವರ ರಾಮರಾಜ್ಯ, ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತ್ ಮುಂತಾದ ಕನಸುಗಳನ್ನು ನನಸಾಗಿಸಲು ಮತ್ತು ನಮ್ಮ ದೇಶವನ್ನು ಪ್ರಪಂಚದ ಮುಂಚೂಣಿಗೆ ತರಲು ಸಾಧ್ಯ.



WILDLIFE MESSAGES 2018

 

DIVERSITY: THE LIFE-BREATH

Thursday, 27 September 2018

Dear friend, 

Early morning the first thing we do is to brush our teeth. We do not know who manufactured the tooth brush that we are using, nor we know where the tooth paste came from. We bought them from the same nearby store. Likewise, the water that we use was disinfected, pumped to our house, the pipeline, taps fitted by unknown men. We use them without bothering about who really were responsible for these works.

 

Similarly, an unsung village farmer from an unknown corner of the country has grown
the cereals, vegetables and the fruits that have found place in our kitchen. We are not concerned about who the farmer is and the hardship he faced to produce them. We just pay money and get them all. In fact, we depend on others for all our needs because, we cannot manufacture or grow them for ourselves. Starting from a tiny pin to the television, from a small screw to a car, somewhere, somebody have created them for us. Ultimately they become an inseparable part of our life.

 We are so accustomed to these things that we cannot imagine our life without them. Each thing is produced in accordance with our demands and requirements. Our life becomes miserable even if one of these links is cut off; life turns into chaos and ultimately our life may cease!

 In this system, every one knows his obligations and responsibilities. He also is proud that without his role, the society is put to distress. Lastly he is also aware that if he minds, he can make the life of his cohabitants miserable.

 Now I will take you to another world: Visualise a dense forest. There wanders a wildboar. It is night and the boar is in search of its food. It digs the ground hither and thither to find the roots and tubers. Early next morning a deer comes along grazing and drops it dung allover. There is a tall plum tree nearby. With full of fruits, it attracts birds and animals. A Hornbill devours the plums and rushes to his family, locked inside the tree hole nest, to feed them. He evacuates his bowel on his way and the seeds drop to the ground. Likewise, a monkey spits a mango seed closeby.

 Some days later, there is a cloudburst and the whole land is dampened by the life-giving water. The seeds miraculously spring into action. They sprout, grow and become large trees. The whole wood gets filled with a variety of plants and trees. In this whole natural process, none of the animals -- the wildboar or porcupine, deer or gaur, hornbill or monkey -- know that they are responsible for the emergence of the magnificent forest! Each and every animal in the wild, participates in this endeavour selflessly. They never celebrate their achievement!

 In Nature, every life form bestows its might for the healthy coexistence and contributes to make it rich and diverse, considered by Nature to be important and desirable.

 With greed, selfishness and cruelty only humans have the ability to halt this process. If we do not interfere in this sustained natural phenomenon everything remains beautiful for our future generations.

 
Let us join hands to make our only Earth, a place where all elements of life can live in health, happiness and harmony. 

 Special Wildlife Messenger of This Year

Golden Oriole (Oriolus oriolus): These attractive birds are slim, bright golden yellow birds which live among the leaves of big trees. Females have dull yellowish-green body. Rather shy birds, despite their gaudy colour, usually they are more heard rather than seen. Their flight is attractive: rapid, strong and undulating. The voice is a melodious fluty, moist pee.loo.loo. They build a hammock-like nest in the fork of a tall tree, with grass and fibre, bound by cobweb. 

Total of hand-painted cards made: this year 2015; in 34 years 68,445. Total recipients: this year 1,270; in 34 years 12,004.  WILDLIFE MESSAGE CARDS are individually hand-painted and sent to individuals throughout the world to mark the Wildlife Week.

ವೈವಿಧ್ಯತೆ: ಜೀವದ ಉಸಿರು


ನಾವು ಪ್ರತಿದಿನ ಬೆಳಿಗ್ಗೆ ಎದ್ದು ಮೊದಲು ಹಲ್ಲುಜ್ಜುತ್ತೇವಲ್ಲ, ನಾವು ಬಳಸುವ ಟೂತ್‌ಬ್ರಶ್ ಎಲ್ಲಿಯೋ ತಯಾರಾಗಿರುತ್ತದೆ, ಟೂತ್‌ಪೇಸ್ಟನ್ನು ಇನ್ನಾರೋ ತಯಾರಿಸಿರುತ್ತಾರೆ. ಅವೆರಡನ್ನೂ ನಾವು ಒಂದೇ ಅಂಗಡಿಯಿಂದ ಕೊಂಡಿರುತ್ತೇವೆ. ಹಾಗೆಯೇ, ನಾವು ಬಳಸುವ ನೀರಿನ ಶುದ್ಧೀಕರಣ, ಅದರ ಸರಬರಾಜು, ಪೈಪುಗಳ ಅಳವಡಿಕೆ, ನಲ್ಲಿ ಇವೆಲ್ಲ ಯಾರು ಯಾರೋ ನಮ್ಮ ಮನೆಯಲ್ಲಿ ಜೋಡಿಸಿರುತ್ತಾರೆ. ಅದರ ಯಾವುದೇ ಗೋಜಿಗೆ ಹೋಗದೆ ನಾವು ಅವನ್ನೆಲ್ಲ ಉಪಯೋಗಿಸುತ್ತೇವೆ. 

ಅದೇ ರೀತಿ ದೇಶದ ಯಾವುದೋ ಮೂಲೆಯಲ್ಲಿ ಅಪರಿಚಿತ ರೈತನೊಬ್ಬ ತನ್ನ ಬೆವರು ಸುರಿಸಿ ಬೆಳೆದ ಪ್ರತಿಯೊಂದು ಧಾನ್ಯವೂ, ತರಕಾರಿ-ಹಣ್ಣು ಹಂಪಲುಗಳೂ ನಮ್ಮ ಮನೆ ಸೇರಿರುತ್ತದೆ. ಇವುಗಳಲ್ಲಿ ಯಾವೊಂದು ವಸ್ತುವಿನ ಮೂಲವನ್ನಾಗಲೀ, ಅದನ್ನು ಬೆಳೆಯಲು ಆ ರೈತನು ಪಟ್ಟ ಪರಿಶ್ರಮವನ್ನಾಗಲೀ, ನಾವು ಆಲೋಚಿಸುವುದೇ ಇಲ್ಲ. ಯಾವುದೇ ಒಂದನ್ನೂ ನಾವು ತಯಾರಿಸಿಕೊಳ್ಳಲು ಸಾಧ್ಯವಿಲ್ಲ. ಈ ಎಲ್ಲ ವಸ್ತುಗಳೂ ಹಣ ಕೊಟ್ಟೊಡನೆ ನಮಗೆ ದೊರಕುತ್ತವೆ. ಒಂದು ಸೂಜಿಯಿಂದ ಹಿಡಿದು ಟಿವಿಯವರೆಗೆ, ಒಂದು ಸ್ಕ್ರೂನಿಂದ ಹಿಡಿದು ಕಾರಿನವರೆಗೆ, ಯಾರೋ, ಎಲ್ಲಿಯೋ, ಯಾವಾಗಲೋ ತಯಾರು ಮಾಡಿದ ವಸ್ತುಗಳು ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುತ್ತವೆ; ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿಬಿಟ್ಟಿರುತ್ತವೆ.

ನಾವು ಈ ವ್ಯವಸ್ಥೆಗೆ ಎಷ್ಟು ಹೊಂದಿಕೊಂಡಿದ್ದೇವೆಂದರೆ ಅವುಗಳು ಇಲ್ಲದೆ ನಮ್ಮ ಜೀವನ ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಇಲ್ಲಿ ಎಲ್ಲರೂ ಇತರರ ಬೇಕು-ಬೇಡಿಕೆಗಳಿಗನುಸಾರವಾಗಿ ತಮ್ಮ ವಸ್ತುಗಳನ್ನು ಉತ್ಪಾದಿಸುತ್ತಾರೆ. ಯಾವುದಾದರೂ ಒಂದು ಕೊಂಡಿ ಕಳಚಿ ಹೋದರೆ ನಮ್ಮ ದಿನಚರಿ ಅಸ್ತವ್ಯಸ್ತಗೊಳ್ಳುತ್ತದೆ; ಅಲ್ಲೋಲ ಕಲ್ಲೋಲವಾಗಿಬಿಡುತ್ತದೆ; ಕೊನೆಗೆ ಜೀವನವೇ ಸ್ತಬ್ದಗೊಳ್ಳುತ್ತದೆ.

ಈ ವ್ಯವಸ್ಥೆಯಲ್ಲಿ ಪ್ರತಿಯೊಬ್ಬನಿಗೂ ತನ್ನ ಪಾತ್ರದ-ಜವಾಬ್ದಾರಿಯ ತಿಳಿವು, ತಾನಿಲ್ಲದಿದ್ದರೆ ಸಮಾಜದಲ್ಲಿ ಏರುಪೇರಾಗುವುದೆಂಬ ಅರಿವು ಇರುತ್ತದೆ. ಹಾಗೆಯೇ ತಾನು ಅಂತಹ ಪರಿಸ್ಥಿತಿಯನ್ನು ಉಂಟುಮಾಡಬಹುದು ಎಂಬ ಗರ್ವವೂ ಸೇರಿಕೊಳ್ಳುತ್ತದೆ.  

ಈಗ ನಿಮ್ಮ ಮುಂದೆ ಮತ್ತೊಂದು ಚಿತ್ರಣವನ್ನಿಡುತ್ತೇನೆ: ಒಂದು ದಟ್ಟವಾದ ಅಡವಿ; ಅಲ್ಲೊಂದು ಕಾಡುಹಂದಿ. ಇರುಳಿನ ವೇಳೆ ಆಹಾರವನರಸುತ್ತ ಆ ಹಂದಿ ಅಲ್ಲಲ್ಲಿ ನೆಲವನ್ನು ಬಗೆಬಗೆದು ಗೆಡ್ಡೆ-ಗೆಣಸುಗಳನ್ನು ತಿನ್ನುತ್ತದೆ. ಮರುದಿನ ಮುಂಜಾವು ಹುಲ್ಲು ಮೇಯುತ್ತ ಬರುವ ಒಂದು ಜಿಂಕೆ ಅಲ್ಲೆಲ್ಲ ಸೆಗಣಿಯನ್ನು ಹಾಕುತ್ತಾ ಸಾಗುತ್ತದೆ. ಅಲ್ಲೇ ಪಕ್ಕದಲ್ಲಿ ಮುಗಿಲೆತ್ತರಕ್ಕೆ ಬೆಳೆದ ಒಂದು ಧೂಪದ ಮರ ಹಣ್ಣುಗಳಿಂದ ತುಂಬಿ ಪ್ರಾಣಿ-ಪಕ್ಷಿಗಳನ್ನು ಆಕರ್ಷಿಸುತ್ತಿದೆ. ಆ ಹಣ್ಣನ್ನು ತಿಂದ ಒಂದು ಗಂಡು ಮಂಗಟ್ಟೆ ಹಕ್ಕಿ, ಗೂಡಿನಲ್ಲಿ ತನಗೇ ಕಾಯುತ್ತಿರುವ ಪತ್ನಿ ಹಾಗೂ ಮಕ್ಕಳಿಗೆ ಆಹಾರವನ್ನು ಒಯ್ಯುತ್ತಾ, ಮೇಲಿನಿಂದಲೇ ಹಿಕ್ಕೆಯನ್ನು ಹಾಕುತ್ತದೆ. ಹೀಗೆ ಧೂಪದ ಮರದ ಬೀಜವೊಂದು ನೆಲ ಸೇರುತ್ತದೆ. ಹಾಗೆಯೇ ಕಪಿಯೊಂದು ತಾನು ತಿಂದ ಮಾವಿನ ಗೊರಟನ್ನು ಉಗಿದುಹೋಗುತ್ತದೆ.

ಮುಂದೊಂದು ದಿನ ಆಕಾಶದಲ್ಲಿ ಸಂಚರಿಸುವ ಮೋಡವೊಂದು ಹನಿ ಮಳೆಗರೆದು ಇಡೀ ಕಾನನವನ್ನು ತೋಯಿಸುತ್ತದೆ. ಫಲವತ್ತಾದ ಭೂಮಿಯ ಮೇಲೆ ಬಿದ್ದ ಒಂದೊಂದು ಬೀಜವೂ ಮೊಳಕೆಯೊಡೆದು, ಗಿಡವಾಗಿ, ಹೆಮ್ಮರವಾಗುತ್ತದೆ. ಇಡೀ ಕಾಡು ವಿಧವಿಧದ ಸಸ್ಯಗಳಿಂದ ಕಂಗೊಳಿಸುತ್ತದೆ. ಈ ನೈಸರ್ಗಿಕ ಪ್ರಕ್ರಿಯೆಯಲ್ಲಿ ಕಾಡುಹಂದಿಗಾಗಲೀ, ಜಿಂಕೆ-ಕಡವೆಗಳಿಗಾಗಲೀ, ಮಂಗಟ್ಟೆ-ಕಪಿಗೇ ಆಗಲೀ, ತಾವು ಒಂದು ಅದ್ಭುತವಾದ ಸಾಧನೆ ಮಾಡಿದ್ದೇವೆಂದು ತಿಳಿದೇ ಇರುವುದಿಲ್ಲ; ಯಾವೊಂದು ಜೀವಿಯೂ ತನ್ನಿಂದಲೇ ಈ ಕಾರ್ಯ ನಡೆದಿದೆ ಎಂದು ಹೆಮ್ಮೆಯಿಂದ ಬೀಗುವುದಿಲ್ಲ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತವೆ! ನಿಸರ್ಗದಲ್ಲಿ ಪ್ರತಿಯೊಂದು ಜೀವಿಯೂ ಒಂದಕ್ಕೊಂದು ಪೂರಕವಾಗಿ, ನಿಸ್ಪೃಹತೆಯಿಂದ ತನ್ನ ಪಾತ್ರವನ್ನು ನಿಭಾಯಿಸಿ, ಇಳೆಯ ಇಡೀ ಜೀವಸಂಕುಲ ಯಾವುದೇ ಅಡೆತಡೆಗಳಿಲ್ಲದೆ ಬಾಳಾಟ ನಡೆಸಲು ಅನುವು ಮಾಡಿಕೊಡುತ್ತದೆ.

ಪ್ರಕೃತಿಯಲ್ಲಿ ನಡೆಯುತ್ತಿರುವ ಈ ವಿಸ್ಮಯಕಾರಿ, ಸ್ವಾಭಾವಿಕ ಕಾರ್ಯಗತಿಯನ್ನು ತಡೆಯಬಲ್ಲ ವಿಕೃತಶಕ್ತಿ ಇರುವುದು ಮಾನವನಿಗೊಬ್ಬನಿಗೆ ಮಾತ್ರ. ಸ್ವಾರ್ಥ-ದುರಾಸೆ-ಕ್ರೌರ್ಯಗಳನ್ನು ಬಿಟ್ಟು, ಜೀವ ವೈವಿಧ್ಯತೆಯಿಂದ ಕೂಡಿದ ನಿತ್ಯಸುಂದರ ಭೂಮಿಯನ್ನು ಮುಂದಿನ ತಲೆಮಾರುಗಳಿಗೆ ತಲುಪಿಸುವುದು ನಮ್ಮ ಕರ್ತವ್ಯವಾಗಿದೆ. 

ಬನ್ನಿ, ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.

ಈ ವರ್ಷದ ವಿಶೇಷ ವನ್ಯಜೀವಿ ಸಂದೇಶವಾಹಕ   ಹೊನ್ನಕ್ಕಿ: ಉಜ್ವಲ ಹೊನ್ನಿನ ಬಣ್ಣದ, ಸಪೂರವಾದ ದೇಹದ, ನಾಚಿಕೆ ಸ್ವಭಾವದ, ಮರದ ಮೇಲೆ ವಾಸಿಸುವ ಹಕ್ಕಿ. ಹೆಣ್ಣು ಹಕ್ಕಿಗಳಿಗೆ ತುಸು ಹಸುರುಮಿಶ್ರಿತ ದೇಹ. ಜೋಡಿಯಾಗಿ ಮರದ ಎಲೆಗಳ ಮರೆಯಲ್ಲಿ ಅವಿತುಕೊಳ್ಳುವುದರಿಂದ ಈ ಹಕ್ಕಿಗಳನ್ನು ನಾವು ಕಾಣುವುದಕ್ಕಿಂತ ಕೇಳುವುದೇ ಹೆಚ್ಚು. ಆಲ-ಅರಳಿ-ಅತ್ತಿ ಹಣ್ಣುಗಳು, ಮಕರಂದ, ಕೀಟಗಳು ಇವುಗಳ ಆಹಾರ. ಇಂಪಾದ ಕೊಳಲಿನ ಪೀ.ಲೂ..ಲೂ ಸ್ವರ. ಮರದ ತುದಿ-ಕವಲುಗಳಲ್ಲಿ ಹುಲ್ಲು-ನಾರು-ಬೇರುಗಳಿಂದ ನೇಯ್ದ ಸುಂದರವಾದ ತೂಗುಯ್ಯಾಲೆ ಗೂಡು ಕಟ್ಟುತ್ತವೆ. 

ಕೈಯಲ್ಲೇ ಚಿತ್ರಿಸಿದ ಒಟ್ಟು ಸಂದೇಶಪತ್ರಗಳ ಸಂಖ್ಯೆ: ಈ ವರ್ಷ೨೦೧೫; ಕಳೆದ ೩೪ ವರ್ಷಗಳಲ್ಲಿ ೬೮,೪೪೫.
ಸಂದೇಶಪತ್ರಗಳನ್ನು ಪಡೆದವರು: ಈ ವರ್ಷ ೧,೨೭೦; ಕಳೆದ ೩೪ ವರ್ಷಗಳಲ್ಲಿ ೧೨,೦೦೪. 




Monday, September 28, 2020

WILDLIFE MESSAGES 2019

 


 Thursday, 26 September 2019


LEADING A HEALTHY LIFE WITH NATURE
Dear friend,

Our body has a marvelous built-in defense system or immune system where it recognises and fights diseases and keeps the marauding organisms at bay. This process is seen in all the living beings. The human body has acquired this character from millions of years of genetic pool. Naturally grown fruits, vegetables and nuts impart a lot of immunity to our body.           
But, in its excitement to recognise any thing that is foreign, the defense system sometimes becomes over-enthusiastic! As such, there are hundreds of things in the air, including street and house dust, pollens and micro-organisms, most of which are either harmless or not a matter of concern. For a trivial reason, when the body is exposed to them, it reacts severely. We generally call this type of stupid reaction as allergies. The body itches, swells, there is sneezing, wheezing and sometimes it may lead to severe illness, shock and even death.
Over the years, I have noticed that this phenomenon is more pronounced in urban dwellers than in village population. The people in villages are inherently tough. From the childhood, their body is thrown open to these allergens and their immune system learns to ignore most of the things when it is exposed to. 
I think that there is a complex connection between the immune system and our brain. Many elite, worry unnecessarily or excessively about things that are around them. They fuss about the smell of this or the taste of that… and, in a way, they inadvertently train their system to readily recognise anything foreign, which are otherwise harmless. Their body is put on a 'high-alert' all the time. And because of this attitude, they suffer and make a miserable life for themselves!           
Whereas, a village lad, always surrounded by these, is happy and without much suffering. I feel that this is a sort of mental attitude of the body cells! They learn to live compatibly with all the natural things around them, as far as they are not meant to be harmful. This is indeed a sign of perfect health!           
The moral of the story is that our body is meant to live along with nature and develop a harmonious relationship with it, so that we can lead a healthy life.

Let us join hands to make our only Earth, a place where all elements of life can live in health, happiness and harmony. Thank you.                    

  
Special Wildlife Messenger of This Year 
Asian Paradise-Flycatcher (Terpsiphone paradisi)  This insectivorous bird belongs to the family of Monarch Flycatchers, and is characterised by the long, stark white trailing tail feathers in breeding males. The agile, fairy like movements of the male bird, as he twists and turns in the air after insects, with his tail-ribbons looping and tracking behind, is a spectacle of exquisite charm! It nests between February and July. Builds a nest made of fine grasses and fibres, plastered with cobweb in the fork of a twig. Breeding male calls with pleasant musical notes.

Total of hand-painted cards made: this year 2280; in 35 years 70,725. Total recipients: this year 1190; in 35 years 12,304.
THE WILDLIFE MESSAGE CARDS are individually hand-painted and sent free to individuals throughout the world to mark the Wildlife Week.
For previous years’ messages, please visit me at http://drsvnarasimhan.blogspot.com


ಪ್ರಕೃತಿಯೊಂದಿಗೆ ಆರೋಗ್ಯಪೂರ್ಣ ಜೀವನ

 ಮಿತ್ರರೆ,

ನಮ್ಮ ದೇಹದಲ್ಲಿ ಒಂದು ಅದ್ಭುತವಾದ ರೋಗನಿಯಂತ್ರಣ ವ್ಯವಸ್ಥೆಯಿದೆ. ಅದು ನಮ್ಮ ದೇಹದ ಮೇಲೆ ದಾಳಿ ಮಾಡುವ ಕ್ಷುದ್ರ ಜೀವಿಗಳನ್ನೂ, ಅಪಾಯಕಾರಿ ರಾಸಾಯನಿಕಗಳನ್ನೂ  ಆಗಿಂದಾಗಲೇ ಗುರುತಿಸಿ, ಅನಾರೋಗ್ಯಗಳಿಂದ ನಮ್ಮನ್ನು ರಕ್ಷಿಸುವುದಲ್ಲದೆ, ಅವು ಮತ್ತೊಂದು ಬಾರಿ ಹತ್ತಿರ ಬಾರದಂತೆ ದೂರವಿಡುತ್ತದೆ. ಈ ಗುಣವನ್ನು ನಾವು ಎಲ್ಲ ಜೀವಿಗಳಲ್ಲೂ ಕಾಣುತ್ತೇವೆ. ಕೋಟಿ ಕೋಟಿ ವರ್ಷಗಳಿಂದ ವಿಕಾಸ ಹೊಂದಿ, ಈ ವಿಶಿಷ್ಟ ಗುಣವನ್ನು ನಮ್ಮ ದೇಹ ತನ್ನ ವರ್ಣತಂತುಗಳಲ್ಲಿ ಪಡೆದಿದೆ. ಸಹಜವಾಗಿ ಬೆಳೆದ ಹಣ್ಣು-ತರಕಾರಿಗಳು, ಕಾಳು-ಬೀಜಗಳನ್ನು ತಿನ್ನುವುದರಿಂದ ಈ ಶಕ್ತಿಯನ್ನು ನಾವು ವೃದ್ಧಿಗೊಳಿಸಬಹುದು. 
ಆದರೆ, ಈ ಅಭ್ಯಾಗತರನ್ನು ಪತ್ತೆ ಹಚ್ಚುವ ಸಂಭ್ರಮದಲ್ಲಿ ಕೆಲವು ಸಾರಿ ನಮ್ಮ ದೇಹ ಅತಿಯಾದ ಬುದ್ಧಿವಂತಿಕೆಯನ್ನು ತೋರಿಸುವುದುಂಟು! ಹೇಳಿ-ಕೇಳಿ, ನಮ್ಮ ಸುತ್ತಲ ವಾತಾವರಣದಲ್ಲಿ ಹಾದಿ-ಬೀದಿಯ ಧೂಳು, ಮನೆಯ ಧೂಳು, ಹೂ-ಪರಾಗಗಳು, ಸೂಕ್ಷ್ಮಜೀವಿಗಳು, ಹೀಗೆ ನೂರಾರು ವಸ್ತುಗಳು ಇರುತ್ತವೆ. ಯಾವುದರಿಂದ ನಮಗೆ ಅಪಾಯ ಎಂಬುದನ್ನು ಗುರುತಿಸುವುದನ್ನು ಬಿಟ್ಟು, ನಿರುಪದ್ರವಿಯಾದ, ನಿರಪಾಯಕಾರಿಯಾದ ವಸ್ತುಗಳಿಗೂ ನಮ್ಮ ದೇಹ ಅತಿ ಉಗ್ರವಾಗಿ ಪ್ರತಿಕ್ರಯಿಸುತ್ತದೆ. ಇದನ್ನೇ ನಾವು ಅಲರ್ಜಿ ಎನ್ನುತ್ತೇವೆ. ಅಂತಹ ಸಂದರ್ಭಗಳಲ್ಲಿ ನಮಗೆ ತುರಿಕೆ, ಊತ, ಉಬ್ಬಸ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಲವು ಸಾರಿ ಇದು ಅಪಾಯಕಾರಿ ಮಟ್ಟಕ್ಕೂ ಹೋಗಿ, ಸಾವು ಕೂಡ ಸಂಭವಿಸಬಹುದು. 
             ಈ ರೀತಿಯ ತೀಕ್ಷ್ಣ ಪ್ರತಿಕ್ರಿಯೆ, ಹಳ್ಳಿಗರಿಗಿಂತ ನಗರವಾಸಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂಬುದನ್ನು ಹಲವು ವರ್ಷಗಳಿಂದ ನಾನು ಗಮನಿಸಿದ್ದೇನೆ. ಗ್ರಾಮಸ್ಥರು ಕಷ್ಟಜೀವಿಗಳು ಮತ್ತು ಸಹಿಷ್ಣುಗಳು. ಅವರ ದೇಹ ಬಾಲ್ಯದಿಂದಲೇ ಇಂತಹ ಪರಕೀಯ ವಸ್ತುಗಳಿಗೆ ತೆರೆದುಕೊಂಡಿರುತ್ತದೆ. ಯಾವ ಹೊತ್ತೂ ಅವೆಲ್ಲ ತಮ್ಮ ಸುತ್ತುಮುತ್ತಲೇ ಇರುವುದರಿಂದ ಅವುಗಳಿಂದ ತಮಗೆ ಅಪಾಯವಿಲ್ಲ ಎಂಬುದನ್ನು ಮನಗಂಡು ಅವುಗಳ ಇರುವಿಕೆಯನ್ನು ಅಲಕ್ಷಿಸುವುದನ್ನು ಕಲಿತಿರುತ್ತದೆ. 
            ನಮ್ಮ ರೋಗನಿಯಂತ್ರಣ ಶಕ್ತಿಗೂ, ನಮ್ಮ ಮೆದುಳಿಗೂ ಒಂದು ರೀತಿಯ ಸಂಕೀರ್ಣ ಸಂಬಂಧವಿದೆಯೆಂದು ನನಗನ್ನಿಸುತ್ತದೆ. ನಗರಜೀವಿಗಳು ಸುಖಜೀವಿಗಳು, ಆರೋಗ್ಯದ ಬಗ್ಗೆ ಅರಿವು ಮತ್ತು ಅತೀವ ಕಾಳಜಿ ಇರುವವರು. ತಮ್ಮ ಸುತ್ತಮುತ್ತಲ ವಿಷಯಗಳಿಗೆ ಅನಾವಶ್ಯಕವಾಗಿ ಹಾಗೂ ಅತಿಯಾಗಿ ಸ್ಪಂದಿಸುತ್ತಾರೆ. ತನಗೆ ಆ ವಾಸನೆ ಆಗದು, ಈ ರುಚಿ ವಾಕರಿಕೆ ಬರಿಸುತ್ತದೆ, ಮತ್ತೊಂದನ್ನು ಕಂಡರೆ ಹಿಡಿಸುವುದಿಲ್ಲ.... ಹೀಗೆ ಅವರಿಗರಿವಿಲ್ಲದೆಯೇ ಪ್ರತಿಯೊಂದು ವಸ್ತುವನ್ನೂ ಪರಕೀಯ ಎಂಬ ದೃಷ್ಟಿಯಿಂದ ನೋಡುವಂತೆ, ತಮ್ಮ ದೇಹಪ್ರಕೃತಿಯನ್ನು ಒಂದು ರೀತಿಯಲ್ಲಿ ತರಬೇತಿಗೊಳಿಸುತ್ತಾರೆ. ಅವರ ಇಡೀ ಶರೀರ ಯಾವಾಗಲೂ ಜಾಗರೂಕ ಸ್ಥಿತಿಯಲ್ಲಿರುತ್ತದೆ! ಈ ಮನೋಭಾವದಿಂದಾಗಿ ದಿನನಿತ್ಯ ನರಳುತ್ತಾರೆ, ಅವರ ಜೀವನವೇ ಕ್ಲೇಶಮಯಗೊಳ್ಳುತ್ತದೆ! 
            ಅದೇ ಸದಾ ನಿಸರ್ಗದ ಮಡಿಲಲ್ಲಿ ವಾಸಮಾಡುವ ಒಬ್ಬ ಹಳ್ಳಿಗ ಇದಾವುದರ ಪರಿವೆಯೇ ಇಲ್ಲದೆ ನಿರಾತಂಕದಿಂದ, ನೆಮ್ಮದಿಯ ಜೀವನ ನಡೆಸುತ್ತಾನೆ. ಇದೊಂದು ರೀತಿಯಲ್ಲಿ, ನಮ್ಮ ದೇಹದ ಪ್ರತಿಯೊಂದು ಜೀವಕೋಶದ ಮನಸ್ಥಿತಿಯೆಂದು ನಾನು ಭಾವಿಸುತ್ತೇನೆ. ಎಲ್ಲಿಯವರೆಗೆ ತನಗೆ ಈ ಪರಕೀಯ ವಸ್ತುಗಳಿಂದ ಅಪಾಯವಿಲ್ಲವೋ ಅಲ್ಲಿಯವರೆಗೆ ಎಲ್ಲವೂ ತನ್ನದು, ಎಲ್ಲರೂ ತನ್ನವರು ಎಂಬ ದೃಷ್ಟಿಯನ್ನು ಅದು ಬೆಳೆಸಿಕೊಳ್ಳುತ್ತದೆ. ಇದೇ ಅಲ್ಲವೆ ನಿಜವಾದ ಆರೋಗ್ಯದ ಲಕ್ಷಣ! 
            ಆದ್ದರಿಂದ ನಾವು ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ, ನಾವು ಪ್ರಕೃತಿಯೊಂದಿಗೆ ಬೆರೆತು, ಸಾಮರಸ್ಯದಿಂದ ಬದುಕಲು ಕಲಿತರೆ ಸತತ ಆರೋಗ್ಯದ ಜೀವನ ನಮ್ಮದಾಗುತ್ತದೆ.
ಬನ್ನಿ, ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ. ವಂದನೆಗಳು. 

ಈ ವರ್ಷದ ವಿಶೇಷ ವನ್ಯಜೀವಿ ಸಂದೇಶವಾಹಕ  ರಾಜಹಕ್ಕಿ: ಪ್ರಜನನ ಋತುವಿನಲ್ಲಿ ಗಂಡು ಹಕ್ಕಿಗೆ, ದೇಹಕ್ಕಿಂತ ಬಹಳ ಉದ್ದವಾಗಿ ಬೆಳೆಯುವ, ಅಚ್ಚ ಬಿಳಿ ಬಣ್ಣದ ಎರಡು ಬಾಲದ ಗರಿಗಳಿಂದ ಈ ಕೀಟಾಹಾರಿ ಪಕ್ಷಿಯನ್ನು ಗುರುತಿಸಬಹುದು.  ಬಹು ಚಾಕಚಕ್ಯತೆಯಿಂದ, ಲೀಲಾಜಾಲವಾಗಿ ಗಿಡಗಂಟಿಗಳ ಮಧ್ಯೆ ಕೀಟಗಳನ್ನು ಅಟ್ಟಿಸಿಕೊಂಡು ಹೋಗುವಾಗ, ಅದರ ಹಿಂದೆಯೇ ಬಗೆಬಗೆಯ ವಿನ್ಯಾಸದ ಚಿತ್ತಾರಗಳನ್ನು ರಚಿಸುತ್ತಾ ಚಲಿಸುವ ಆ ಬಾಲದ ಗರಿಗಳು ನಿಮ್ಮ ಮುಂದೆ ಒಂದು ಗಂಧರ್ವ ಲೋಕವನ್ನೇ ಸೃಷ್ಟಿಸಿಬಿಡುತ್ತದೆ! ದಂಪತಿಗಳು ಗಿಡದ ಕವಲುಗಳಲ್ಲಿ ತೆಳುವಾದ ಒಣಹುಲ್ಲು-ನಾರುಗಳನ್ನು ಜೇಡರ ಬಲೆಯ ಎಳೆಗಳಿಂದ ಅಂಟಿಸಿ ಮಾಡಿದ ಮುದ್ದಾದ ಗೂಡು ಕಟ್ಟುತ್ತವೆ. ಈ ಸಮಯದಲ್ಲಿ ಗಂಡು ಹಕ್ಕಿ ತನ್ನ ಇಂಪಾದ ಸ್ವರಗಳಿಂದ ಸಂಗಾತಿಯನ್ನು ಕರೆಯುತ್ತದೆ.           

ಕೈಯಲ್ಲೇ ಚಿತ್ರಿಸಿದ ಒಟ್ಟು ಸಂದೇಶಪತ್ರಗಳ ಸಂಖ್ಯೆ: ಈ ವರ್ಷ೨೨೮೦; ಕಳೆದ ೩೫ ವರ್ಷಗಳಲ್ಲಿ ೭೦,೭೨೫
ಸಂದೇಶಪತ್ರಗಳನ್ನು ಪಡೆದವರು: ಈ ವರ್ಷ ೧೧೯೦; ಕಳೆದ ೩೫ ವರ್ಷಗಳಲ್ಲಿ ೧೨,೩೦೪. 

Tuesday, October 3, 2017

WILDLIFE MESSAGES 2017


Oxygen: The Life Breath

 Thursday, 28 September 2017
Dear friend,

In the zeal to gain more and more knowledge, we tend to forget the very basic facts of life. Take for example, the oxygen that we breath every moment. Our body burns oxygen to get the energy that we need to do our bodily activities. You may be surprised that we breath-in about one billion molecules of oxygen, from the air, every day! Think about the amount of oxygen that is needed by 720 billion people in the world!

Similarly, all animals breath to gain energy that they need. Plants too breath, though their oxygen requirement is less because they do not move about. But you know that it is the plants that manufacture lots and lots of oxygen and release them to the air.

As human-beings, we use atmospheric oxygen for far more different purposes. Every evening, we burn lamps. The cotton in the lamp utilises the oxygen from air, burns and gives us light. In our kitchen, whether we use firewood or LPG or electricity, we need the same oxygen to cook our food. Then, we daily go around in vehicles. Whether we use petrol or diesel or CNG, they burn and produce energy that make the vehicles run. Added to this, there are industries which, again, utilise the same atmospheric oxygen for manufacturing different things that we use. In the end, even after our death we need lots of oxygen to cremate the body! Thus for all our energy needs, we need oxygen.

But other than for breathing, no animal burns lamps to get artificial light, none of them cook food and eat or they move about in vehicles, nor they have built factories! Only we consume the oxygen in the air, taken for granted, indifferently, as if it is there for our own benefits, free of cost! We do not have a factory to manufacture oxygen anywhere in the world and can we really produce all that oxygen! For all our oxygen needs, we solely depend on plants, not once realising their contribution to the global need.

As if this is not enough, humans indulge in another most heinous activity. None of the animals cut the trees and destroy the naturally grown forest.  Imagine how cruel, selfish and greedy we are! Individually, you may not take an axe and go into the forest. The timber thieves may be one in a ten thousand population. But neither we or the concerned officers nor the government are doing anything to stop this activity. Always remember that we haven't inherited this Earth from our ancestors, but we have actually borrowed it from our next generation. Let us plant more trees and make our world greener. Any small contribution made by us can make a big difference!

Let us join hands to make our only Earth, a place where all elements of life can live in health, happiness and harmony. Thank you.
Special Wildlife Messenger of This Year

Chestnut-bellied Nuthatch (Sitta castanea) A restless, tree climbing, sparrow-sized bird with a slender bill. It has a wide foot with long toes to grasp the bark of the tree. Moves on the tree with jerky hops and it is a splendour to see the bird descending upside down, looking for spiders, insects and seeds. It makes its nest in the tree holes or crevices, lined with leaves, moss and cotton.

Total of hand-painted cards made: this year 1,970; in 33 years 66,430. Total recipients: this year 1,160; in 33 years 11,463.
THE WILDLIFE MESSAGE CARDS are individually hand-painted and sent free to individuals throughout the world to mark the Wildlife Week.


ಆಮ್ಲಜನಕ: ಜೀವದ ಉಸಿರು

  ಗುರುವಾರ, ೨೮ ಸೆಪ್ಟೆಂಬರ್ ೨೦೧೭

ಮಿತ್ರರೆ,

ಜ್ಞಾನದಾಹಿಗಳಾದ ನಾವು ಹೆಚ್ಚು ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳುವ ಭರದಲ್ಲಿ ಎಷ್ಟೋ ಸಾರಿ ಬಲು ಮೂಲಭೂತ ವಿಚಾರಗಳನ್ನೇ ಮರೆತುಬಿಡುತ್ತೇವೆ. ನಾವು ಪ್ರತಿಕ್ಷಣ ಉಸಿರಾಡುವ ಆಮ್ಲಜನಕವನ್ನೇ ತೆಗೆದುಕೊಳ್ಳೋಣ. ನಮ್ಮಂತೆ ಎಲ್ಲಾ ಪ್ರಾಣಿ-ಪಕ್ಷಿಗಳೂ ಉಸಿರಾಡುತ್ತವೆ; ಸಸ್ಯಜೀವಿಗಳೂ ಉಸಿರಾಡುತ್ತವೆ. ಆದರೆ, ಗಿಡ-ಮರಗಳು ಚಲಿಸುವುದಿಲ್ಲವಾದ್ದರಿಂದ ಅವಕ್ಕೆ ಆಮ್ಲಜನಕದ ಅವಶ್ಯಕತೆ ಕಡಿಮೆ. ಗಾಳಿಯಲ್ಲಿರುವ ಈ ಎಲ್ಲ ಆಮ್ಲಜನಕವನ್ನೂ ಸಸ್ಯಗಳೇ ತಯಾರುಮಾಡಿ ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ ಎಂದು ನಿಮಗೆಲ್ಲ ತಿಳಿದೇ ಇದೆ.

ಆಮ್ಲಜನಕವೇ ನಮ್ಮ ದೇಹಕ್ಕೆ ಶಕ್ತಿಯ ಇಂಧನ. ನಿಮಗೆ ಆಶ್ಚರ್ಯವಾಗಬಹುದು: ನಾವು ಒಂದು ದಿನದಲ್ಲಿ ಸರಾಸರಿ ನೂರು ಕೋಟಿ ಆಮ್ಲಜನಕದ ಪರಮಾಣುಗಳನ್ನು ಉಸಿರಾಡುತ್ತೇವೆ! ಪ್ರಪಂಚದಲ್ಲಿರುವ ಏಳ್ನೂರಿಪ್ಪತ್ತು ಕೋಟಿ ಜನಕ್ಕೆ ಎಷ್ಟು ಆಮ್ಲಜನಕ ಬೇಕಾಗಬಹುದೆಂದು ಊಹಿಸಿ!

ಉಸಿರಾಟಕ್ಕಲ್ಲದೆ, ಈ ಆಮ್ಲಜನಕದಿಂದ ನಾವು ಬೇರೆ ಪ್ರಯೋಜನಗಳನ್ನೂ ಪಡೆಯುತ್ತೇವೆ. ಪ್ರತಿದಿನ ಸಂಜೆ ದೀಪ ಹಚ್ಚುತ್ತೇವಲ್ಲ, ಅಲ್ಲಿ ದೀಪದ ಬತ್ತಿ ವಾತಾವರಣದಲ್ಲಿರುವ ಆಮ್ಲಜನಕವನ್ನು ಬಳಸಿಕೊಂಡು ತಾನು ಉರಿದು, ನಮಗೆ ಬೆಳಕು ನೀಡುತ್ತದೆ. ನಿಮ್ಮ ಅಡುಗೆ ಮನೆಯಲ್ಲಿ ನೀವು ಸೌದೆ-ಗ್ಯಾಸ್-ವಿದ್ಯುತ್ ಯಾವುದನ್ನೇ ಬಳಸಿ, ಆಹಾರ ಬೇಯಲು ಅದೇ ಆಮ್ಲಜನಕದ ಅವಶ್ಯಕತೆಯಿದೆ. ಅದೆಲ್ಲ ಬಿಡಿ, ಊರೆಲ್ಲ ತಿರುಗುವ ನಾವು ವಾಹನಗಳನ್ನು ಬಳಸುತ್ತೇವಲ್ಲ, ನಮ್ಮ ವಾಹನಕ್ಕೆ ಪೆಟ್ರೋಲ್ ಇರಲಿ, ಡೀಸೆಲ್ ಇರಲಿ, ಗ್ಯಾಸೇ ಇರಲಿ, ಅವೆಲ್ಲ ಉರಿದೇ ನಮ್ಮ ಗಾಡಿ ಓಡುವುದು. ಅವೆಲ್ಲ ಉರಿಯಲು ಆಮ್ಲಜನಕವೇ ಬೇಕು! ಇನ್ನು ನಮ್ಮ ದೈನಂದಿನ ಬಳಕೆ ವಸ್ತುಗಳನ್ನು ತಯಾರಿಸಲು ನಾವು ಕಟ್ಟಿರುವ ಕಾರ್ಖಾನೆಗಳೆಷ್ಟು! ಅವಕ್ಕೆ ಬೇಕಾಗುವ ಆಮ್ಲಜನಕವೆಷ್ಟು! ಕೊನೆಗೆ, ಒಬ್ಬ ವ್ಯಕ್ತಿ ಸತ್ತಾಗಲೂ ಸಾಕಷ್ಟು ಪ್ರಮಾಣದ ಸೌದೆ ಉರಿಯುತ್ತದೆ, ಅದಕ್ಕೂ ಆಮ್ಲಜನಕ ಬೇಕು.

ಯಾವ ಪ್ರಾಣಿಯೂ ದೀಪ ಬೆಳಗುವುದಿಲ್ಲ, ಅಡುಗೆ ಮಾಡುವುದಿಲ್ಲ ಅಥವಾ ವಾಹನಗಳಲ್ಲಿ ತಿರುಗುವುದಿಲ್ಲ ಅಥವಾ ಯಾವುದೇ ಕಾರ್ಖಾನೆ ತೆರೆದಿಲ್ಲ. ಮನುಷ್ಯರು ಮಾತ್ರ ವಾತಾವರಣದಲ್ಲಿರುವ ಆಮ್ಲಜನಕವನ್ನು ಉಚಿತವಾಗಿ, ಅದು ನಮಗೇ ಇರುವುದೇನೋ ಎಂಬಂತೆ, ಬೇಕಾಬಿಟ್ಟಿ ಬಳಸುತ್ತೇವೆ. ಅದಕ್ಕಾಗಿ ಭೂಮಿಯ ಮೇಲೆ ನಾವು ಒಂದೇ ಒಂದು ಆಮ್ಲಜನಕದ ಕಾರ್ಖಾನೆಯನ್ನೂ ತೆರೆದಿಲ್ಲ. ಕಾರ್ಖಾನೆಗಳಲ್ಲಿ ಅಷ್ಟು ಪ್ರಮಾಣದ ಆಮ್ಲಜನಕವನ್ನಾದರೂ ತಯಾರಿಸಲು ಸಾಧ್ಯವೇ? ನಮ್ಮೆಲ್ಲ ಆಮ್ಲಜನಕದ ಪೂರೈಕೆಗಳಿಗೂ ನಾವು ಸಸ್ಯಗಳನ್ನೇ ಅವಲಂಬಿಸಿದ್ದೇವೆ. ಆದರೆ, ಒಂದು ಸಾರಿಯೂ ಅದರ ಹಿಂದೆ ಇರುವ ಸಸ್ಯಗಳ ಪಾತ್ರವನ್ನು ನಾವು ನೆನೆಸಿಕೊಳ್ಳುವುದೇ ಇಲ್ಲ!

ಇವಿಷ್ಟೂ ಸಾಲದೆಂಬಂತೆ, ಮಾನವನಿಂದ ಮತ್ತೊಂದು ದುರಾಚಾರ ನಡೆಯುತ್ತಿದೆ. ಪ್ರಪಂಚದಲ್ಲಿ ಯಾವ ಪ್ರಾಣಿಯೂ ಮರಗಳನ್ನು ಕಡಿದು, ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ಬೆಳೆದು ನಿಂತ ಅರಣ್ಯಗಳನ್ನು ನಾಶ ಮಾಡುವುದಿಲ್ಲ. ನಾವೆಷ್ಟು ದುರುಳರು ಎಂಬುದನ್ನು ನೀವೇ ಆಲೋಚಿಸಿ! ನಾವು ಯಾರೂ ನೇರವಾಗಿ ಕೊಡಲಿ ತೆಗೆದುಕೊಂಡು ಕಾಡಿಗೆ ಹೋಗದಿರಬಹುದು. ಹತ್ತು ಸಾವಿರಕ್ಕೆ ಒಬ್ಬ ಮರಗಳ್ಳನಿರಬಹುದು. ಆದರೆ, ಅವನ ಕೆಲಸವನ್ನು ತಡೆಯಲು ನಾವಾಗಲೀ, ಅಧಿಕಾರಿಗಳಾಗಲೀ, ಸರ್ಕಾರವಾಗಲೀ ಏನೂ ಮಾಡುತ್ತಿಲ್ಲ.
ಈ ಭೂಮಿ ಪೂರ್ವಿಕರಿಂದ ನಮಗೆ  ಬಳುವಳಿಯಾಗಿ ಬಂದ ಆಸ್ತಿಯಲ್ಲ, ಅದು ನಮ್ಮ ಮುಂದಿನ ಪೀಳಿಗೆ ನಮಗಿತ್ತ ಸಾಲ ಎಂದು ಭಾವಿಸಿ, ಸಾಧ್ಯವಾದಷ್ಟು ಗಿಡಗಳನ್ನು ನೆಟ್ಟು ಪೋಷಿಸೋಣ, ನೆಲವನ್ನು ಹಸಿರುಗೊಳಿಸೋಣ. ನಮ್ಮ ಒಬ್ಬೊಬ್ಬರ ಅಳಿಲುಸೇವೆಯೂ ಈ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂಬುದನ್ನು ನಾವು ಮರೆಯಬಾರದು.
ಬನ್ನಿ, ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.
ವಂದನೆಗಳು. 


ಈ ವರ್ಷದ ವಿಶೇಷ ವನ್ಯಜೀವಿ ಸಂದೇಶವಾಹಕ


  ಕೆಂಪು ಮರಗುಬ್ಬಿ: ಮರಗಳ ಮೇಲೆ ಅವಿರತವಾಗಿ ಓಡಾಡುವ ಈ ಗುಬ್ಬಚ್ಚಿಗಾತ್ರದ ಹಕ್ಕಿಗೆ ಕೀಟಗಳನ್ನು ಹೆಕ್ಕಲು ಸಣ್ಣ, ಸಪೂರವಾದ ಕೊಕ್ಕು. ಮರವನ್ನು ಅವಚಿಕೊಳ್ಳಲು ಹೇಳಿ ಮಾಡಿದ ಅಗಲವಾದ ಪಾದ ಮತ್ತು ಉದ್ದನಾದ ಕಾಲ್ಬೆರಳುಗಳು. ಮರಗಳ ಮೇಲೆ ಕುಪ್ಪಳಿಸುತ್ತ ಹತ್ತುವ ಸ್ವಭಾವ, ಹಾಗೆಯೇ ತಲೆಕೆಳಕಾಗಿ ಇಳಿಯುತ್ತಾ ಜೇಡ, ಕ್ರಿಮಿಕೀಟ, ಕಾಳು ಬೀಜಗಳನ್ನು ಹೆಕ್ಕಿ ತಿನ್ನುವುದನ್ನು ನೋಡಲು ಸೊಗಸು! ಮರದ ರಂಧ್ರಗಳಿಗೆ ಮಣ್ಣು ಮೆತ್ತಿ, ಒಳಗೆ ಎಲೆ, ಹಾವಸೆ, ಹತ್ತಿಯಿಂದ ಮೃದುವಾದ ಗೂಡು ಕಟ್ಟುತ್ತದೆ. 

ಕೈಯಲ್ಲೇ ಚಿತ್ರಿಸಿದ ಒಟ್ಟು ಸಂದೇಶಪತ್ರಗಳ ಸಂಖ್ಯೆ: ಈ ವರ್ಷ ೧೯೭೦; ಕಳೆದ ೩೩ ವರ್ಷಗಳಲ್ಲಿ ೬೬,೪೩೦.
ಸಂದೇಶಪತ್ರಗಳನ್ನು ಪಡೆದವರು: ಈ ವರ್ಷ ೧,೧೬೦; ಕಳೆದ ೩೩ ವರ್ಷಗಳಲ್ಲಿ ೧೧,೪೬೩.





.



Sunday, October 2, 2016

Wildlfe Messages 2016


  The fourth dimension of Health


कस्त्वं कोऽहं कुत आयातः
का मे जननी को मे तातः ।
इति परिभावय सर्वमसारम्
विश्वं त्यक्त्वा स्वप्न विचारम् ॥ २३॥
Who are you ? Who am I ? Where do we come from ? Who is my mother, who is my father ?
Ponder thus and you will realise that the entire world of experience is but a dream, born out of imagination and delusion.
        -- Adi Sri Shankaracharya in Bhajagovindam

 Monday, 26 September 2016
Dear friend,
The World Health Organisation defines health as ‘a state of complete physical, mental and social well-being and not a merely the absence of disease or infirmity’.
A fourth dimension of health called the spiritual health is being thought of. Spiritual health is slowly gaining importance in the scientific community. It is not without reason why yoga has been recognised all over the world as one of the most important health promoter. This is because yoga confers a perfect health through all the four avenues.
Whether you believe in the existence of god or you are an atheist, at some point of time in your life, I am sure, a thought have passed in your mind: Who are we? Why are we here? What is the purpose of the existence of all the living creatures on Earth? Just thinking about these aspects of life, is a sign of good health.
Of the trillions of stars in this universe, with possibly millions of stars with a planetary system like our Sun, life is found only on our Earth! Why only Earth?
There are so many creatures, so many plants, animals and so many humans! What is the intention of this big game plan? At the same time, there appears to be a grand design in all this creation. Everything seems to work perfectly and follow a set pattern of events and life cycles, at least up to the atomic level.
The very same force that governs an atom, governs the whole universe. The same physical laws apply to all of them. This natural driving force pervades the whole universe.
Just surrender to this driving force. You will see the magic. You will be one with Nature; you’ll love it; you’ll feel responsible for everything that it is made of!
Let us join hands to make our only Earth, a place where all elements of life can live in health, happiness and harmony.
Thank you.
     
                      Special Wildlife Messenger of This Year
Red Junglefowl (Gallus gallus) This is the ancestor of all the domestic breeds of poultry. It is found in northern India, particularly on the Himalayan foothill states, eastern Madhya Pradesh and in the northern districts of Karnataka. A very shy bird, more heard than seen, living in the bamboo and scrub jungles, coming out in a party of a cock and 3-4 hens in the early morning to feed on grains, vegetable shoots, insects and lizards. Its call is like that of domestic cock. The birds spend the night on trees and bamboo clumps. The nest is made of a shallow scrape in dense bushes, lined with dry leaves.  
Total of hand-painted cards made: this year 2040; in 32 years 64,460. Total recipients: this year 1240; in 32 years 10,978.
THE WILDLIFE MESSAGE CARDS are individually hand-painted and sent free to individuals throughout the world to mark the Wildlife Week.¸

Wednesday, December 23, 2015

ಅಪಾನವಾಯುವಿನ ಮೇಲೊಂದು ವಿಚಾರಲಹರಿ

ಅಪಾನವಾಯುವಿನ ಮೇಲೊಂದು ವಿಚಾರಲಹರಿ

ಢರ್ರಂ ಭುರ್ರಂ ಭಯಂ ನಾಸ್ತಿ
ಕೊಯ್ಯಂ ಪಿಯ್ಯಂ ಚ ಮಧ್ಯಮಂ|
ತಿಸಕ್ ಪಿಸಕ್ ಮಹಾ ಘೋರಂ
ನಿಶ್ಶಬ್ದಂ ಪ್ರಾಣ ಸಂಕಟಂ||
ಈ ಮಂತ್ರವನ್ನು ನಮ್ಮಜ್ಜ ನಮಗೆ ಬಹಳ ಸಣ್ಣ ಮಕ್ಕಳಾಗಿರುವಾಗಲೇ ಬಾಯಿಪಾಠ ಮಾಡಿಸಿದ್ದರು. ಇದು ಯಾವುದರ ಬಗ್ಗೆ ಅಂತ ನಾನು ಬಿಡಿಸಿ ಹೇಳಬೇಕಾಗಿಲ್ಲ. ನೀವು ಗೂಗ್ಲ್‌ಸರ್ಚ್‌ನಲ್ಲಿ ಎಫ಼್‌ಎಆರ್‌ಟಿ ಅಂತ ಇಂಗ್ಲಿಷಿನಲ್ಲಿ ಟೈಪ್ ಮಾಡಿ ಹುಡುಕಿದರೆ ಕ್ಷಣಾರ್ಧದಲ್ಲಿ ಆರು ಕೋಟಿ ನಲವತ್ತೆಂಟು ಸಾವಿರ ಫಲಿತಾಂಶಗಳು ಈ ಅಪೂರ್ವ ವಿಷಯದ ಬಗ್ಗೆ ದೊರಕುತ್ತದೆ. ನಾವು ಯಾವುದನ್ನು ಮೂಗು ಮುಚ್ಚಿಕೊಂಡು ಅಥವಾ ಮುಖ ಸಿಂಡರಿಸಿಕೊಂಡು ಅಸಹ್ಯ ಪಟ್ಟುಕೊಳ್ಳುತ್ತೇವೆಯೋ ಅದು ಎಷ್ಟೊಂದು ಕುಖ್ಯಾತ ಪದ ಎಂದು ಇದರಿಂದ ನಮಗೆ ಮನದಟ್ಟಾಗುತ್ತದೆ.



ಸುಸಂಸ್ಕೃತವೋ ಅಸಭ್ಯವೋ
ಸುಸಂಸ್ಕೃತರು ಅದನ್ನು ಭ್ರಷ್ಟವಾಯು, ಅಪಾನವಾಯು ಅಂತ ಕರೆಯುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಹೂಸು, ಕೆಟ್ಟಗಾಳಿ ಅಂತಲೇ ಹೇಳುತ್ತಾರೆ. ನನ್ನಣ್ಣ ರಘುವಿನ ಮಗ ಸಣ್ಣವನಾಗಿದ್ದಾಗ ಹೀಗೇ ಒಂದು ಸಾರಿ ಢರ್ರ್ ಎಂದು ಬಿಟ್ಟು ಅಪ್ಪಾ, ಹೂಸು ಎಂದು ನೆಗಾಡಿದನಂತೆ. ಛೆ, ಎಲ್ಲರ ಎದುರೂ ಹಾಗನ್ನಬಾರದು ಅಂತ ಅಪ್ಪ ಸುಪುತ್ರನಿಗೆ ಹೇಳಿಕೊಟ್ಟ. ಮಗ ಬುದ್ಧಿವಂತ. ಅದಾದ ಮೇಲೆ ಇನ್ನೊಂದು ಸಂದರ್ಭದಲ್ಲಿ ಪುನಃ ಹೀಗೇ ಬಿಟ್ಟಾಗ, ಏನೋ ಅದು ಶಬ್ದ? ಅಂತ ಕೇಳಿದರೆ, ಅದು ಗೂಪು ಅಂದನಂತೆ. ಹಾಗಂದ್ರೆ ಏನೋ? ಅಂದಿದ್ದಕ್ಕೆ ಅವನು, ನೀನೇ ಹೇಳಿದೆಯಲ್ಲ, ಹೂಸು ಅಂತ ಅನ್ನಬಾರದು ಅಂತ, ಅದಕ್ಕೆ ಹಾಗೆ ಕರೆದೆ!
ಎ ರೋಸ್ ಈಸ್ ಏ ರೋಸ್ ಈಸ್ ಎ ರೋಸ್ ಎಂದು ಶೇಕ್ಸ್‌ಪಿಯರ್ರೇ ಹೇಳಿಲ್ಲವೇ? ಆದ್ದರಿಂದ ಅದನ್ನು ನೀವು ಹೇಗೆ ಕರೆದರೂ ಅದು ಅದೇ!

ನಾವು ಕಾನ್ವೆಂಟ್ ಶಾಲೆಯಲ್ಲಿ ಓದುತ್ತಿರುವಾಗ ಒಂದು ದಿನ ಮಧ್ಯಾಹ್ನ ಆಗ ತಾನೇ ಊಟ ಮುಗಿಸಿ ಬಂದ ಹೊತ್ತು. ಮೊದಲನೆ ಪೀರಿಯಡ್ ಪಾಠ ಮಾಡುತ್ತಿರುವಾಗ ನಮ್ಮ ಟೀಚರು ಢರ್ರನೆ ಬಿಟ್ಟರು. ನಾವೆಲ್ಲ ಘೊಳ್ಳೆಂದು ನೆಗಾಡಿದೆವು. ಮಕ್ಕಳೇ, ಹಾಗೆಲ್ಲ ನಗಬಾರದು. ಅದು ದೇವರು ಕೊಟ್ಟ ಪೀಪಿ! ಎಂದು ಅದನ್ನೂ ಆಧ್ಯಾತ್ಮಿಕ ಮಟ್ಟಕ್ಕೇರಿಸಿಬಿಟ್ಟರು!



ಸುಪ್ರಭಾತ!
ಭುಸುಗುಟ್ಟುವ ಕಾಳಿಂಗ ಸರ್ಪದಿಂದ ಹಿಡಿದು, ಹಾವಾಡಿಗನ ಪುಂಗಿಯ ನಾದದವರೆಗೆ; ಮಂದಗಾಳಿಯಿಂದ ಹಿಡಿದು, ಆರ್ಭಟಿಸುವ ಚಂಡಮಾರುತದವರೆಗೆ; ಸುಂಡಿಲಿಯ ಚೀಕಲಿನಿಂದ ಹಿಡಿದು, ಘರ್ಜಿಸುವ ವನವ್ಯಾಘ್ರನವರೆಗೆ; ಕೊಂಬು-ಕಹಳೆಯ ಫೂಂಕಾರದಿಂದ ಹಿಡಿದು ಶಂಖನಾದದವರೆಗೆ; ಚಿನಕುರುಳಿ ಪಟಾಕಿಯಿಂದ ಹಿಡಿದು, ಆಟಂಬಾಂಬ್‌ವರೆಗೆ, ವಿವಿಧ ತರಂಗಾಂತರಗಳಿಂದ ಕೂಡಿದ ಹೂಸು ವಾಯುಮಾಲಿನ್ಯಕ್ಕೆ ತನ್ನ ಅಳಿಲುಸೇವೆಯನ್ನು ಮಾಡುತ್ತ ಬಂದಿದೆ! ಇದನ್ನು ನಾವು ಅಲಕ್ಷ್ಯ ಮಾಡುವಂತಿಲ್ಲ. ಏಕೆಂದರೆ ಒಬ್ಬ ವ್ಯಕ್ತಿ ಒಂದು ದಿನದಲ್ಲಿ ಹತ್ತರಿಂದ ಹದಿನಾರು ಬಾಂಬುಗಳನ್ನು ತಯಾರಿಸುತ್ತಾನೆ. ಇದರಲ್ಲಿ ಸರಾಸರಿ ಅರ್ಧ ಲೀಟರ್ ವಾಯುವಿರುತ್ತದೆ. ಬಸ್ಸು-ಕಾರುಗಳಂತೆ ದಿನ ಪೂರ್ತಿ ಮಲಿನ ವಾಯುವನ್ನು ಉಗುಳದಿದ್ದರೂ, ಪ್ರಪಂಚದಲ್ಲಿ ನಾವು ೭೦೦ ಕೋಟಿ ಜನರಿದ್ದೇವಲ್ಲ! ಸರಾಸರಿ ಹನ್ನೆರಡು ಎಂದಿಟ್ಟುಕೊಂಡರೂ ಒಂದು ದಿನದಲ್ಲಿ ೮೪೦೦ ಕೋಟಿ ಹೂಸುಗಳನ್ನು ಬಿಟ್ಟರೆ ಅದರಿಂದ ಉಂಟಾಗುವ ಮಾಲಿನ್ಯದ ಒಟ್ಟು ಮೊತ್ತವನ್ನು ನೀವೇ ಊಹಿಸಿ!

ಸಾಧಾರಣವಾಗಿ ಎಲ್ಲರೂ ಬೆಳ್ಳಂಬೆಳಗ್ಗೆ ಏಳುವಾಗಲೇ ಈ ಭ್ರಷ್ಟವಾಯುವನ್ನು ಬಿಡುತ್ತಾ ಏಳುತ್ತಾರೆ. ಇದರಲ್ಲಿ ಲಿಂಗಭೇದವಿಲ್ಲ. ರಾತ್ರಿಯೆಲ್ಲ ನಮ್ಮ ಕರುಳು ಬಳ್ಳಿ ರೆಸ್ಟ್ ತೆಗೆದುಕೊಂಡಿರುತ್ತದಲ್ಲ, ಬೆಳಿಗ್ಗೆ ನಮಗೆ ಎಚ್ಚರವಾದೊಡನೆ ದೊಡ್ಡ ಕರುಳೂ ಕೂಡ ಎದ್ದು ತನ್ನ ಕೆಲಸವನ್ನು ಶುರುಮಾಡುತ್ತದೆ. ಸರ್ವೇಸಾಮಾನ್ಯವಾಗಿ ಆಸ್ಪತ್ರೆಯ ಜನರಲ್ ವಾರ್ಡ್‌ಗಳಲ್ಲಿ ಈ ಸುಪ್ರಭಾತದ ಗುಡುಗು ಸಿಡಿಲುಗಳನ್ನು ನೀವು ಕೇಳಬಹುದು!

ಯಾರಿಗಾದರೂ ಜನರಲ್ ಅನೆಸ್ತೀಶಿಯಾ ಕೊಟ್ಟು ಆಪರೇಷನ್ ಆಗಿದ್ದರೆ, ಮಾರನೇ ದಿನ ಸರ್ಜನ್ ಸಾಹೇಬರು ಬಂದು ಮೊದಲು ಕೇಳುವ ಪ್ರಶ್ನೆ, ಹೊಟ್ಟೆಯಿಂದ ಗಾಳಿ ಹೋಯ್ತಾ? ಅಂತ. ನೀವೇನಾದರೂ ಹೂಂ ಅಂದರೆ ನಿಮ್ಮ ಶಸ್ತ್ರಚಿಕಿತ್ಸಕರೂ ಸಮಾಧಾನದ ನಿಟ್ಟುಸಿರು ಬಿಡುತ್ತಾರೆ! ಏಕೆಂದರೆ ಅರಿವಳಿಕೆ ಔಷಧಿಯ ಪರಿಣಾಮದಿಂದ ಕರುಳು ಸುಖವಾಗಿ ಮಲಗೇ ಬಿಟ್ಟರೆ, ಪ್ಯಾರಾಲಿಟಿಕ್ ಐಲಿಯಸ್ ಎಂಬ ಅವಸ್ಥೆ ಉಂಟಾಗಬಹುದು ಎಂಬ ಆತಂಕ ಅವರದ್ದು!



ಹೊಟ್ಟೆಯೊಳಗೆ ಗಾಳಿ ಎಲ್ಲಿಂದ?
ಮೊದಲೇ ಹೇಳಿ ಬಿಡುತ್ತೇನೆ, ನಮ್ಮ ದೇಹದಲ್ಲಿ ಸ್ವಾಭಾವಿಕವಾಗಿ ಯಾವ ಅನಿಲವೂ ತಯಾರಾಗುವುದಿಲ್ಲ. ಹಾಗಾದರೆ ಜೀರ್ಣಾಂಗದಲ್ಲಿ ಗಾಳಿ ಅಥವಾ ಇನ್ನಾವುದೇ ಗ್ಯಾಸ್ ತುಂಬುವುದು ಹೇಗೆ? ಇದಕ್ಕೆ ಮೂರು ಕಾರಣಗಳಿವೆ:
೧. ಇದರಲ್ಲಿ ಬಹು ಮುಖ್ಯವಾದದ್ದು ನಾವು ಕುಡಿಯುವ ಗಾಳಿ! ನಾವು ತಿನ್ನುವಾಗ, ಕುಡಿಯುವಾಗ, ಮಾತನಾಡುವಾಗಲೆಲ್ಲ ವಾತಾವರಣದ ಗಾಳಿ ಸ್ವಲ್ಪ ಸ್ವಲ್ಪ ಹೊಟ್ಟೆಗೆ ಸೇರುತ್ತಿರುತ್ತದೆ. ಅದರಲ್ಲೂ ಹಸಿವೆಯಾದಾಗ ಒಂದಿಷ್ಟು ಜಾಸ್ತಿ.
೨. ಸಣ್ಣಕರುಳು ಹಾಗೂ ದೊಡ್ಡ ಕರುಳಿನಲ್ಲಿ ಹಲವು ಬ್ಯಾಕ್ಟೀರಿಯಾಗಳು ನಾವು ತಿಂದ ಆಹಾರದಲ್ಲಿ ಜೀರ್ಣವಾಗದ ಆಹಾರಾಂಶಗಳನ್ನು ಕೊಳೆಯಿಸುತ್ತವೆ. ಆವಾಗಲೂ ಸಾಕಷ್ಟು ಪ್ರಮಾಣದಲ್ಲಿ ಗ್ಯಾಸ್ ತಯಾರಾಗುತ್ತದೆ.
೩. ನಮ್ಮ ಸಣ್ಣಕರುಳಿನಲ್ಲಿ ವಿವಿಧ ರಾಸಾಯನಿಕ ಕ್ರಿಯೆಗಳು ನಡೆಯುತ್ತಿರುತ್ತವೆ; ಬಹು ಸಣ್ಣ ಪ್ರಮಾಣದಲ್ಲಿ ಆಗಲೂ ವಿವಿಧ ಜಾತಿಯ ಅನಿಲಗಳು ತಯಾರಾಗುತ್ತವೆ.
೪. ಅಲ್ಪಸ್ವಲ್ಪ ಪ್ರಮಾಣದ ಅನಿಲಗಳು ರಕ್ತದಿಂದ ಕರುಳಿಗೆ ಸ್ರವಿಸುತ್ತವೆ.



ಹೊಟ್ಟೆಯೊಳಗಿನ ಗಾಳಿ ಅಥವಾ ಅನಿಲಗಳಲ್ಲಿ ಯಾವ ಯಾವ ರಾಸಾಯನಿಕಗಳು?
ನಾವು ಕುಡಿದ ಗಾಳಿಯಲ್ಲಿ ಆಮ್ಲಜನಕ, ನೈಟ್ರೋಜನ್ ಮತ್ತು ಇಂಗಾಲದ ಡಯಾಕ್ಸೈಡ್ ಇರುತ್ತದಲ್ಲ, ಪಚನವಾಗುತ್ತಿರುವ ಆಹಾರದೊಂದಿಗೆ ಈ ಗಾಳಿಯೂ ಸೇರಿಕೊಂಡು ದೊಡ್ಡಕರುಳಿಗೆ ತಲುಪುವುದರಲ್ಲಿ ಅದರಲ್ಲಿರುವ ಎಲ್ಲಾ ಆಮ್ಲಜನಕವನ್ನೂ ದೇಹವೇ ಹೀರಿಕೊಂಡುಬಿಟ್ಟಿರುತ್ತದೆ. ಆದ್ದರಿಂದ ಅದರಲ್ಲಿ ಉಳಿಯುವುದು ನೈಟ್ರೋಜನ್ ಮತ್ತು ಅಲ್ಪಸ್ವಲ್ಪ ಇಂಗಾಲದ ಡಯಾಕ್ಸೈಡ್ ಮಾತ್ರ. ಜಠರ ಮತ್ತು ಸಣ್ಣಕರುಳಿನಲ್ಲಿಯೂ ಸ್ವಲ್ಪ ಪ್ರಮಾಣದ ಇಂಗಾಲದ ಡಯಾಕ್ಸೈಡ್ ತಯಾರಾಗುತ್ತದೆ.
ಇದಲ್ಲದೆ ನಮ್ಮ ಕರುಳಿನಲ್ಲಿ ಅನುಗಾಲವೂ ವಾಸಿಸುವ ಬ್ಯಾಕ್ಟೀರಿಯಾಗಳು ಹೈಡ್ರೋಜನ್ ಮತ್ತು ಮೀಥೇನ್ ಅನಿಲಗಳನ್ನು ತಯಾರು ಮಾಡುತ್ತವೆ. ಈ ಮೀಥೇನ್ ತಯಾರಿಸುವ ಬ್ಯಾಕ್ಟೀರಿಯಾಗಳು ವಂಶವಾಹಿಯಾಗಿ ಇಡೀ ಕುಟುಂಬದಲ್ಲಿ ಹರಿಯುತ್ತಿರುತ್ತವೆ. ಆದ್ದರಿಂದ ದೊಡ್ಡ ದೊಡ್ಡ ಹೂಸು ಬಿಡುವ ಕುಟುಂಬಗಳನ್ನೇ ನೀವು ನೋಡಬಹುದು!
ಕೆಲವು ಪೇಶೆಂಟ್‌ಗಳು ಬರುತ್ತಾರೆ. ಹೊಟ್ಟೆಯೊಳಗಿಂದ ಬರುವ ತೇಗುಗಳು, ಕೇಳಿಸುತ್ತಿರುವ ವಿವಿಧ ರಿಂಗ್‌ಟೋನ್‌ಗಳು, ಇವಕ್ಕೆಲ್ಲ ಅವರು ಹೇಳುವುದು ಗ್ಯಾಸ್ ಟ್ರಿಕ್ ಅಂತಲೇ! ಅವರ ಲೆಕ್ಕದಲ್ಲಿ ಅವೆಲ್ಲ ಹೊಟ್ಟೆಯೊಳಗೆ ಇರುವ ಗ್ಯಾಸ್ ಆಡುತ್ತಿರುವ ತಂತ್ರಗಳು!



ದುರ್ವಾಸನೆ ಎಲ್ಲಿಯದು?
ಕರುಳನ್ನು ಸೇರಿದ ವಾತಾವರಣದ ಗಾಳಿಯಲ್ಲಿ ಇರುವ ಆಮ್ಲಜನಕ, ನೈಟ್ರೋಜನ್ ಮತ್ತು ಇಂಗಾಲದ ಡಯಾಕ್ಸೈಡ್ ಇಂತಹ ಯಾವುದೇ ಅನಿಲವೂ ವಾಸನಾರಹಿತವಾದ್ದು. ಹಾಗಾಗಿ ವಾಸನೆ ಏನಿದ್ದರೂ ಬ್ಯಾಕ್ಟೀರಿಯಾಗಳ ಕೈಚಳಕವೇ ಎಂದಂತಾಯ್ತು! ನಾವು ತಿನ್ನುವ ಆಹಾರದಲ್ಲಿ ಹೆಚ್ಚು ಹೆಚ್ಚು ಗಂಧಕ ಇರುವ ವಸ್ತುಗಳು ಅಂದರೆ, ಹೂಕೋಸು, ನವಿಲುಕೋಸು, ಎಲೆಕೋಸು, ಮೂಲಂಗಿ, ಮೊಟ್ಟೆ, ಮಾಂಸ, ಮತ್ತು ಈರುಳ್ಳಿ, ಬೆಳ್ಳುಳ್ಳಿ ಮುಂತಾದುವು ಇದ್ದಲ್ಲಿ ಬ್ಯಾಕ್ಟೀರಿಯಾಗಳು ಅವನ್ನು ಸಲ್ಫೈಡ್ ಮತ್ತು ಮರ್ಕ್ಯಾಪ್ಟಾನ್ ಎಂಬ ರಾಸಾಯನಿಕಗಳಾಗಿ ಪರಿವರ್ತಿಸುತ್ತವೆ. ಇವಿಷ್ಟಲ್ಲದೆ ಕಾಳು-ಬೀಜಗಳಿರುವ, ಅಂದರೆ ಬೀನ್ಸ್, ಅವರೆಕಾಳು ಮುಂತಾದ ಹೆಚ್ಚು ಸಾರಜನಕವಿರುವ ಆಹಾರ ಪದಾರ್ಥಗಳು ಎಲ್ಲವೂ ಕರುಳಿನಲ್ಲಿ ಸಂಪೂರ್ಣ ಪಚನವಾಗದೆ ಉಳಿದುಬಿಡುತ್ತವೆ. ಈ ಸಂಕೀರ್ಣ ಪ್ರೋಟೀನುಗಳನ್ನೂ ಬ್ಯಾಕ್ಟೀರಿಯಾಗಳು ವಿವಿಧ ರಾಸಾಯನಿಕ ವಸ್ತುಗಳನ್ನಾಗಿ ಪರಿವರ್ತಿಸುತ್ತವೆ. ದುರ್ನಾತಕ್ಕೆ ರಾಸಾಯನಿಕ ದ್ರವ್ಯಗಳೇ ಕಾರಣ. ಅದಕ್ಕೇ ಹಿರಿಯರು ಹೇಳಿದ್ದು: ಬೀನ್ಸ್ ತಿನ್ನಬೇಡ, ಅವು ಹಿಂದುಗಡೆಯಿಂದ ಮಾತಾಡುತ್ತವೆ ಅಂತ!

ಮತ್ತೊಂದು ವಿಚಾರವನ್ನು ಇಲ್ಲಿಯೇ ಹೇಳಿಬಿಡುತ್ತೇನೆ. ಗುದದ್ವಾರದಿಂದ ಅಪಾನವಾಯು ಹೊರಬರುವಾಗ ದ್ವಾರದಲ್ಲಿ ಇರುವ ಮೃದು ಚರ್ಮದಲ್ಲಿ ಉಂಟಾಗುವ ಅದಿರಾಟದ ಕಂಪನಗಳಿಂದ ಶಬ್ದ ಬರುತ್ತದೆ ಎಂಬುದು ಎಲ್ಲರ ಅನುಭವಕ್ಕೂ ಬಂದಂತಹ ವಿಚಾರವೇ ಆಗಿದೆ. ಆಮ್ಲಜನಕ, ನೈಟ್ರೋಜನ್ ಮುಂತಾದ ಅನಿಲದ ಗುಳ್ಳೆಗಳು ದಪ್ಪನಾಗಿರುವುದರಿಂದ ಅವು ಸಶಬ್ದವಾಗಿ ಹೊರಬರುತ್ತವೆ. ಹಾಗಾಗಿ ಅವು ದುರ್ನಾತದಿಂದ ಕೂಡಿರುವುದಿಲ್ಲ. ಆದರೆ ಸಲ್ಫೈಡ್‌ಗಳು, ಮರ್ಕ್ಯಾಪ್ಟಾನ್‌ಗಳು ಸ್ವಾಭಾವಿಕವಾಗಿಯೇ ಸಣ್ಣ ಸಣ್ಣ ಅನಿಲದ ಗುಳ್ಳೆಗಳಾಗಿರುವುದರಿಂದ ಸಣ್ಣ ಶಬ್ದ ಅಥವಾ ನಿಶ್ಶಬ್ದವಾಗಿರುತ್ತವೆ ಮತ್ತು ಅವುಗಳಿಂದ ಭಯಂಕರ ದುರ್ಗಂಧ ಪಸರಿಸುತ್ತದೆ! ಈಗ ಗೊತ್ತಾಯಿತಲ್ಲವೆ ಮೊದಲು ನಾನು ಹೇಳಿದ ಮಂತ್ರ ಎಷ್ಟು ತರ್ಕಬದ್ಧವಾಗಿದೆ, ಎಂತಹ ಅರ್ಥವತ್ತಾಗಿದೆ ಮತ್ತು ಎಷ್ಟು ಸೈಂಟಿಫಿಕ್ ಅಂತ?

ಸಾಹಿತ್ಯ ಭಂಡಾರ
ಪಟ್ಟಣದ ನಾಜೂಕು ನಗರವಾಸಿಗಳು ಈ ವಿಷಯದ ಬಗ್ಗೆ ಮೂಗು ಮುರಿಯುತ್ತಾರೆ, ಆದರೆ ಹಳ್ಳಿಗಳ ಕಡೆ ಅಷ್ಟು ಮಡಿವಂತಿಕೆಯಿಲ್ಲ. ಜಾನಪದ-ಲಾವಣಿ ಹಾಡುಗಳು, ಗಾದೆಗಳು, ಒಗಟುಗಳು, ನಾಣ್ನುಡಿ-ಜಾಣ್ನುಡಿಗಳು, ನುಡಿಗಟ್ಟುಗಳು ಮುಂತಾದ ಎಲ್ಲ ಸಾಹಿತ್ಯಿಕ ಪ್ರಕಾರಗಳಲ್ಲೂ ಅಪಾನವಾಯುವಿನ ಸಮೃದ್ಧವಾದ ಸಂಪತ್ತು ದೊರಕುತ್ತದೆ. ನಾನು ಇಲ್ಲಿ ಕೆಲವೇ ಉದಾಹರಣೆಗಳನ್ನು ಹೇಳುತ್ತೇನೆ.

* ಸಣ್ಣಂದಿನಲ್ಲಿ ನಾವು ಕೇಳಿದ ಒಂದು ಜಾನಪದ ಸಾಲು ಹೀಗಿದೆ:

ಒಂದು ಹೂಸ ಹೂಸಿದಕ್ಕೆ, ಏರಿಕಲ್ಲು ಜಾರಿ ಬಿದ್ದು
ಊರಗೌಡ ಬೈದನಂತಲ್ಲೆ ಪುಣ್ಯಾತ್ಮಗಿತ್ತಿ,
ಎಂಥ ಹೂಸನ್ನು ಹೂಸಿದೆ!
* ಒಬ್ಬ ತಾಯಿಗೆ ತನ್ನ ಮತ್ತು ತನ್ನ ಸ್ವಂತ ಮಕ್ಕಳ ವಿಚಾರದಲ್ಲಿ ಎಷ್ಟು ಪ್ರೀತಿ, ಆದರ! ಅದೇ ಹೊರಗಿನಿಂದ ಬಂದ ಸೊಸೆಯ ಬಗ್ಗೆ ಎಂತಹ ತಾತ್ಸಾರಭಾವ ಎಂಬುದಕ್ಕೆ ಕೆಳಗಿನ ಸಂದೇಶ ಸಾಕ್ಷಿ:

ತನ್ಹೂಸು ಹೊನ್ನೂಸು
ಮಗಳ್ಹೂಸು ಮಾಣಿಕ್ಯ
ಸೊಸೆ ಹೂಸು ಕಸಿವಿಸಿ!

* ಯಾವಾಗಲೂ ನಮ್ಮಲ್ಲಿ ಸ್ವಲ್ಪ ಪಾಪದವರು ಅಂದರೆ ಅಷ್ಟಕ್ಕಷ್ಟೆ. ಅವರು ಯಾವ ತಪ್ಪನ್ನು ಮಾಡದೇ ಇದ್ದರೂ ಎಲ್ಲವನ್ನೂ ಅವರ ತಲೆಗೇ ಕಟ್ಟುತ್ತೇವೆ. ನಿಸ್ಸಹಾಯಕರ ಮೇಲೆ ಹುಲ್ಲುಕಡ್ಡಿಯೂ ಬುಸುಗುಟ್ಟುತ್ತೆ ಅನ್ನುವ ಹಾಗೆ, ಗುಂಡಿಗೆ ಬಿದ್ದವರಿಗೆ ಎರಡು ಕಲ್ಲು ಹೆಚ್ಚು. ಆದ್ದರಿಂದ ಈ ಗಾದೆ ಮಾತು.

ಹೂಸಿದೋಳ್ಯಾರು ಅಂದ್ರೆ ಮಾಸಲು ಸೀರ್ಯೋಳು!
* ಅದೇ ರೀತಿ ನಾವು ಯಾವುದಾದರೂ ಕೆಲಸವನ್ನು ಸಾವಧಾನವಾಗಿ ಮಾಡುತ್ತಿದ್ದು ಸಮಯ ಮೀರಿಹೋಗುತ್ತಿದ್ದಲ್ಲಿ ಈ ಗಾದೆ ಉಪಯೋಗಕ್ಕೆ ಬರಬಹುದು. ಹಾಸೋದ್ರಲ್ಲಿ ಹೂಸೋದ್ರಲ್ಲಿ ಬೆಳಗಾಯ್ತು!

* ಇನ್ನು ಕೆಲವರಿರುತ್ತಾರೆ. ನೀವು ಯಾವ ಒಳ್ಳೆ ಕೆಲಸವನ್ನು ಮಾಡಲು ಹೊರಟರೂ ಅದಕ್ಕೆ ಕೊಕ್ಕೆ ಹಾಕುತ್ತಾರೆ, ಘನಂದಾರಿ ಸಲಹೆಗಳನ್ನು ಕೊಟ್ಟು ಆ ಕೆಲಸ ನಿಂತುಹೋಗುವ ಹಾಗೆ ನೋಡಿಕೊಳ್ಳುತ್ತಾರೆ. ಇಂತಹವರನ್ನು ನೋಡಿಯೇ ಈ ಕೆಳಗಿನ ಗಾದೆಯನ್ನು ಹೇಳಿದ್ದಾರೆ.

ಹೂಸ್ದೆ ಹೋದ್ರೆ ಧೂಪ ಹಾಕ್ದಷ್ಟು ಫಲ!
ವಿನಾ ಕಾರಣ ಹೀಗೆ ನಿಮ್ಮ ಕೆಲಸದಲ್ಲಿ ಮೂಗು ತೂರಿಸುವವರಿಗೆ ಆ ಮೂಗಿನ ನೇರಕ್ಕೇ ಒಂದು ಬಿಟ್ಟು ಅವರು ಓಡಿಹೋಗುವ ಹಾಗೆ ಮಾಡುವುದೇ ಇದಕ್ಕೆ ಸರಿಯಾದ ಉಪಾಯ!

* ಮಲ್ಲಿಗೆ ಹೂ ಸುವಾಸನೆಯಿಂದ ಕೂಡಿರುತ್ತದೆ. ಅದೇ ಬಾಡಿ ಹೋದ ಮೇಲೆ ಸ್ವಲ್ಪ ಅಕ್ಷರಪಲ್ಲಟಗೊಂಡು ಮಲ್ಲಿಗೆ ಹೂಸು ವಾಸನೆಯಾಗುತ್ತದೆ!



ಹಳೆಯ ಅನುಭವಗಳು
ನಾವು ಹುಡುಗರಾಗಿದ್ದಾಗ ನಮ್ಮ ಒಡನಾಡಿ ರಾಧಾಕೃಷ್ಣನ ಮನೆಯ ಹಿಂಭಾಗದಲ್ಲಿದ್ದ ದೊಡ್ಡ ಸೀಬೆಮರಗಳ ತೋಪಿತ್ತು. ಅಲ್ಲಿಯೇ ನಾವು ಸಂಜೆ ಆಟವಾಡುತ್ತಿದ್ದೆವು. ನಮ್ಮೊಂದಿಗೆ ಕೊನೆಯ ಮನೆಯ ಜಗನ್ನಾಥ ಎಂಬ ಹುಡುಗನೂ ಇದ್ದ. ಅವನು ಶಾಲೆಗೆ ಹೋಗುತ್ತಿರಲಿಲ್ಲ, ಬರೇ ಮನೆಕೆಲಸ ಮಾಡಿಕೊಂಡಿದ್ದ. ನಮಗಿಂತ ದೊಡ್ಡವನು, ಕಟ್ಟುಮಸ್ತಾದ ಆಳು.
ಪ್ರತಿ ಸಾಯಂಕಾಲ ಪಕ್ಕದ ಶಾಂತಾ ಚಿತ್ರಮಂದಿರದಲ್ಲಿ ಸಿನೆಮಾ ಶುರುವಾಗುವುದಕ್ಕೆ ಮುಂಚೆ ಒಂದಿಪ್ಪತ್ತು ಚಿತ್ರಗೀತೆಗಳನ್ನು ಮೈಕಿನಲ್ಲಿ ಹಾಕುತ್ತಿದ್ದರು. ಅದರಲ್ಲೊಂದು ತಾಯ್ ನಾಗೇಶ್ ನಟಿಸಿದ ತಮಿಳು ಹಾಡು,

ಮಾಡಿ ಮೇಲೆ ಮಾಡಿ ಕಟ್ಟಿ ಕೋಟಿ ಕೋಟಿ ಸೇರ್ತುವಿಟ್ಟ ಶ್ರೀಮಾನೇ
ಹಲೋ ಹಲೋ, ಹಲೋ ಹಲೋ ಶ್ರೀಮಾನೇ
ಈ ಹಾಡು ನಮಗೆ ಜಗನ್ನಾಥನನ್ನು ಕೆಣಕಲು ಸ್ಫೂರ್ತಿ! ಆಗ ನಾವು ಮರಕೋತಿಯಾಟ ಆಡುತ್ತಿರಬೇಕು, ಜಗನ್ನಾಥ ಹಿಡಿಯುತ್ತಿರಬೇಕು. ನಾವೆಲ್ಲ ಮರದ ಮೇಲಿರಬೇಕು. ಅಂತಹ ಸಮಯದಲ್ಲೇ ನಮಗೆ ಆಶುಕವಿತೆಗಳನ್ನು ಹೇಳುವ ಧೈರ್ಯ!

ಹೂಸ ಮೇಲೆ ಹೂಸು ಬಿಟ್ಟು ಲೋಕಕೆಲ್ಲ ನಾತ ಕೊಟ್ಟ ಜಗನ್ನಾತ
ಹಲೋ ಹಲೋ, ಹಲೋ ಹಲೋ ಜಗನ್ನಾತ!
ನಮ್ಮಣ್ಣ ಆಗ ಹೈಸ್ಕೂಲ್ ಓದುತ್ತಿದ್ದ. ಶಾಲೆಯಲ್ಲಿ ಕನ್ನಡ ಸಂಧಿ-ಸಮಾಸ ಎಲ್ಲ ಕಲಿತಿದ್ದ. ನಮ್ಮ ಜಗನ್ನಾಥನನ್ನು ಕೆರಳಿಸಲು ಮತ್ತೊಂದು ಬಾಣ, ಜಗಕ್ಕೆಲ್ಲ ನಾತ ಕೊಡುವವನು ಯಾವನೋ ಅವನೇ ಜಗನ್ನಾತ_ ಇದು ಯಣ್ ಸಂಧಿ!

ಮತ್ತೊಂದು ಜೋಕು ಕೇಳಿ: ಆವತ್ತು ಗುಂಡನ ಹುಟ್ಟಿದ ಹಬ್ಬ. ಗುಂಡಿ ಮನೆಯಲ್ಲಿ ಗ್ರ್ಯಾಂಡ್ ಆಗಿ ತಯಾರು ಮಾಡಿ ಕಾಯುತ್ತಿದ್ದಾಳೆ. ಯಥಾಪ್ರಕಾರ ಆಫೀಸಿಗೆ ಹೋದ ಗುಂಡನಿಗೆ ಮನೆ-ಹೆಂಡತಿ ಮರೆತೇ ಹೋಗಿದೆ. ಆ ಮಧ್ಯಾಹ್ನ ಆಫೀಸಿನಲ್ಲೇ ಫ್ರೆಂಡ್ಸ್ ಜೊತೆ ಘನವಾದ ಬರ್ತ್ ಡೇ ಪಾರ್ಟಿ ಮಾಡಿದ್ದಾನೆ. ರಾತ್ರಿ ಬಾಗಿಲಿನಲ್ಲೇ ಕಾಯುತ್ತಿದ್ದ ಗುಂಡಿ ಇವನಿಗೆ ಸರ್ಪ್ರೈಸ್ ಕೊಡಬೇಕಂತ ಅಲ್ಲೇ ಅವನ ಕಣ್ಣಿಗೆ ಪಟ್ಟಿ ಕಟ್ಟಿ ಡೈನಿಂಗ್ ಹಾಲಿಗೆ ಕರೆದುಕೊಂಡು ಬಂದು ಕೂರಿಸುತ್ತಾಳೆ. ನಾನು ಬರುವವರೆಗೂ ಹೀಗೇ ಕೂತಿರಬೇಕು!, ಅಂತ ಆರ್ಡರ್ ಮಾಡಿ ಒಳಗೆ ಹೋಗ್ತಾಳೆ.
ಮೊದಲೇ ಪಾರ್ಟಿಯಲ್ಲಿ ಕಂಡಕಂಡದ್ದನ್ನೆಲ್ಲ ತಿಂದು ಬಂದಿದ್ದ ಗುಂಡನ ಹೊಟ್ಟೆಯೊಳಗೆ ವಾಯುಸಾಂದ್ರತೆ ಹೆಚ್ಚಾಗಿ ಗುಡುಗುಡು ಶುರುವಾಗಿದೆ; ತಡೆದುಕೊಳ್ಳಲಾಗುತ್ತಿಲ್ಲ. ಅವಳು ಬರುವುದರೊಳಗೆ ಆದಷ್ಟೂ ಆಚೆ ಹೋಗಲಿ ಅಂತ ಸಶಬ್ದವಾಗಿ ಠುಸ್ ಅಂತ ಬಿಟ್ಟ. ಹೋಟೆಲಿನವನು ಅದೇನೆಲ್ಲ ದರಿದ್ರ ಮಸಾಲೆ ಹಾಕಿ ಅಡಿಗೆ ಮಾಡಿದ್ದನೋ, ಗಬ್ಬು ವಾಸನೆ! ಕೈಯ್ಯಿಂದಲೇ ಮೂಗಿನ ಮುಂದೆ ಗಾಳಿಯನ್ನು ಅತ್ತಿತ್ತ ನೂಕಿದ. ಅಷ್ಟರಲ್ಲಿ ಇನ್ನೊಂದು; ಮತ್ತೆ ಮತ್ತೊಂದು. ಅಬ್ಬಬ್ಬಾ, ಸದ್ಯ ಬದುಕಿದೆ ಎಂದು ಗಪ್ ಅಂತ ಕುಳಿತ.
ಹೆಂಡತಿ ಬಂದಳು. ಕಣ್ಣಿನಿಂದ ಪಟ್ಟಿ ತೆಗೆದಳು. ಕಣ್ಣುಬಿಟ್ಟು ನೋಡ್ತಾನೆ, ಸುತ್ತಲೂ ಡೈನಿಂಗ್ ಕುರ್ಚಿಗಳ ಮೇಲೆ ಅಕ್ಕಪಕ್ಕದ ಮನೆ ಮಂದಿಯೆಲ್ಲ ಮುಸಿಮುಸಿ ನಗುತ್ತಾ ಮೂಗು ಮುಚ್ಚಿಕೊಂಡು ಕುಳಿತಿದ್ದಾರೆ!



ಸಭ್ಯರ ಅಸಭ್ಯತೆ
ಕೆಲವರಿರುತ್ತಾರೆ, ಅವರಿಗೆ ಗಬ್ಬು ವಾಸನೆ ಎಂದರೇ ಅಸಹ್ಯ! ತಾವು ಮಹಾ ಸಭ್ಯರು ಅನ್ನೋ ರೀತಿ, ಥೂ ಥೂ ಅಂತ ಬಂದ ಕಡೆಯೂ ಎಲ್ಲರೆದುರು ಮುಖ ಸಿಂಡರಿಸಿಕೊಳ್ಳುತ್ತಾರೆ. ವಾಸನೆ ಮೂಗಿಗೆ ಹೊಡೆದೊಡನೆ ಅಬ್ಬ ಅಂತ ತಕ್ಷಣ ಮೂಗು ಮುಚ್ಚಿಕೊಳ್ಳುತ್ತಾರೆ. ಸ್ವಲ್ಪ ಹೊತ್ತು ಬಿಟ್ಟು ಸದ್ಯ ಅಂತ ಮೂಗಿನಿಂದ ಕೈ ತೆಗೆಯುತ್ತಾರೆ. ನನಗೆ ಅರ್ಥವಾಗದ್ದು ಏನೆಂದರೆ, ವಾಸನೆ ಗಾಳಿಯಲ್ಲಿ ಪೂರ್ತಿ ಕರಗಿ ಹೋಯ್ತು ಅಂತ ಅವರಿಗೆ ಹೇಗೆ ಗೊತ್ತಾಯ್ತು? ಮಧ್ಯೆ ಮಧ್ಯೆ ಸ್ವಲ್ಪ ಸ್ವಲ್ಪ ಉಸಿರೆಳೆದುಕೊಂಡು ಇನ್ನೂ ಇದೆಯಾ ಅಂತ ಆಗಾಗ ಪರೀಕ್ಷೆ ಮಾಡಿರಬೇಕು ತಾನೆ? ಅದರ ಬದಲು ನೆಮ್ಮದಿಯಾಗಿ ಸ್ವಲ್ಪ ಹೊತ್ತು ಉಸಿರು ಹಿಡಿದುಕೊಂಡು ಎಲ್ಲರಂತೆ ಬಾಯಿ ಮುಚ್ಚಿಕೊಂಡಿರಬಹುದಲ್ಲ!

ನಾವು ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದಾಗ ನಡೆದ ಘಟನೆ. ನಮ್ಮ ಫೊರೆಂಸಿಕ್ ಪ್ರೊಫೆಸರ್ ನಮಗೆ ಒಂದು ಶವದ ಪೋಸ್ಟ್‌ಮಾರ್ಟಂ ಹೇಗೆ ಮಾಡಬೇಕೆಂದು ತೋರಿಸುವ ಸಂದರ್ಭ. ಶವಾಗಾರದ ತರಗತಿಯಲ್ಲಿ ನಾವೆಲ್ಲ ಕುಳಿತಿದ್ದೆವು. ಸತ್ತವನ ಕುಟುಂಬದವರು ಹೊರಗೆ ಕಾಯುತ್ತಿದ್ದರು, ಹಾಗಾಗಿ ಬಾಗಿಲು ಮುಚ್ಚಿತ್ತು. ನಮ್ಮ ಮುಂದುಗಡೆ ಟೇಬಲ್ಲಿನ ಮೇಲೆ ಕೊಳೆತ ಶವವನ್ನು ಒಬ್ಬ ಅಟೆಂಡರ್ ಸಹಾಯದೊಂದಿಗೆ ವಿವರಿಸುತ್ತಿದ್ದರು. ಮೊದಲಿಗೆ ತಲೆ, ಎದೆಯ ಭಾಗಗಳನ್ನೆಲ್ಲ ಸೀಳಿ ವಿವರಿಸಿದರು.
ಆ ನಂತರ ಹೊಟ್ಟೆಯ ಭಾಗವನ್ನು ನಾಜೂಕಾಗಿ ಸೀಳಿದೊಡನೆ, ಒಳಗಿನಿಂದ ಸಣ್ಣ ಕರುಳಿನ ರಾಶಿ ಧುತ್ತನೆ ಹೊರಬಂದಿತು. ಬಹುಶಃ ನೀರಿನಲ್ಲಿ ಮುಳುಗಿ ಸತ್ತಿರಬೇಕು. ನಾಲ್ಕಾರು ದಿನಗಳಲ್ಲಿ ಕರುಳಿನಲ್ಲಿ ಕೊಳೆತ ಗಾಳಿ ತುಂಬಿಕೊಂಡು ಊದಿ ಹೋಗಿತ್ತು. ಗುದದ್ವಾರ ಮುಚ್ಚಿ ಹೋಗಿದ್ದರಿಂದ ವಿಷಗಾಳಿ ಹೊರಕ್ಕೆ ಬರಲೂ ಸಾಧ್ಯವಾಗಿರಲಿಲ್ಲ. ಈಗ ನೋಡಿ ಎಂದು ಪ್ರೊಫೆಸರ್ ಸಾಹೇಬರು ಕರುಳನ್ನು ಸ್ಕಾಲ್‌ಪೆಲ್ಲಿನಿಂದ ಸೀಳಿ, ತಕ್ಷಣ ಕರ್ಚೀಫಿನಿಂದ ಮೂಗು ಮುಚ್ಚಿಕೊಂಡು ಅತ್ತ ತಿರುಗಿದರು. ಠುಸ್ಸ್ ಎಂದು ಕರುಳಿನಲ್ಲಿದ್ದ ಗಾಳಿ ಎಲ್ಲ ಹೊರಬಂದಿತು. ಕ್ಷಣಾರ್ಧದಲ್ಲಿ ಭಯಂಕರ ದುರ್ನಾತ ರೂಂನಲ್ಲೆಲ್ಲ ಹರಡಿಹೋಯಿತು! ನಮ್ಮ ಪುಣ್ಯ, ಹುಡುಗಿಯರು ಯಥಾಪ್ರಕಾರ ಮುಂದಿನ ಸಾಲಿನಲ್ಲಿ ಕುಳಿತಿದ್ದರು. ದುರ್ನಾತವನ್ನು ತಡೆಯಲಾರದೆ ಹಿಂಬದಿಯ ಕಿಟಕಿಯಿಂದ ನಾಲ್ಕಾರು ಹುಡುಗರು ೧೨-೧೫ ಅಡಿ ಎತ್ತರದಿಂದ ಕೆಳಗೆ ಹಾರಿದ್ದರು! ರಾಜಶೇಖರ ಐತಾಳ ಅಲ್ಲಿ ವಾಂತಿಯೂ ಮಾಡಿಕೊಂಡಿದ್ದ!

ಇಲ್ಲಿ ಮತ್ತೊಂದು ಮುಖ್ಯವಾದ ವಿಚಾರವನ್ನು ನೀವು ನೆನಪಿನಲ್ಲಿಡಬೇಕು. ಪ್ರಕೃತಿಯಲ್ಲಿ ಅಸಹ್ಯ ಎಂಬುದೇ ಇಲ್ಲ. ನಿಮಗೆ ಅಸಹನೀಯವಾದ ಒಂದು ವಸ್ತು ಮತ್ತೊಬ್ಬರಿಗೆ ಸಂತೋಷವನ್ನು ಕೊಡಬಹುದು; ನಿಮಗೆ ಯಾವುದು ಆಪ್ಯಾಯಮಾನವೋ ಅದು ಮತ್ತೊಂದಕ್ಕೆ ಅಸಹ್ಯವಾಗಿರಬಹುದು. ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ, ಎಂದು ನೀವು ಹೇಳಬಹುದು. ಆದರೆ ಇದನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ನಾಯಿಗಳಿಗೆ ಹೂಸು ವಾಸನೆ ಎಂದರೆ ಬಹಳ ಇಷ್ಟ! ಸಭೆಯಲ್ಲಿ ಯಾರು ಬಿಟ್ಟರೂ ಗುರುತು ಹಿಡಿದು ಅವರ ಹಿಂದೆಯೇ ಹೋಗಿ ನಿಲ್ಲುತ್ತದೆ.

ವೈಜ್ಞಾನಿಕ ಆವಿಷ್ಕಾರಗಳಿಗೆ ಅಸ್ತಿಭಾರ
ನಮ್ಮ ದೇಹದ ಚರ್ಮದಲ್ಲಿ ನಾನಾ ಬಗೆಯ ಸೂಕ್ಷ್ಮವಾದ ಸಂವೇದನಾಶೀಲ ಜ್ಞಾನಕೋಶಗಳಿರುತ್ತವೆ. ಸ್ಪರ್ಶ, ನೋವು, ಶಾಖ, ಕಂಪನ, ಒತ್ತಡ ಇವುಗಳಲ್ಲಿ ಒಂದೊಂದನ್ನೂ ಪ್ರತ್ಯೇಕವಾಗಿ ಗುರುತಿಸಲು ನಮಗೆ ಸಾಧ್ಯವಿದೆ. ಅದೇ ರೀತಿ ನಮ್ಮ ಗುದದ್ವಾರದಲ್ಲಿಯೂ ನಮಗೆ ಆ ತುದಿಗೆ ಬಂದು ನಿಂತಿರುವುದು ದ್ರವವೋ, ಅನಿಲವೋ ಅಥವಾ ಘನವಸ್ತುವೋ ಎಂಬುದು ನಮ್ಮೆಲ್ಲರ ಅನುಭವಕ್ಕೆ ಬರುತ್ತದೆ. ಅಷ್ಟೇ ಅಲ್ಲ, ಅನಿಲವಾದರೆ ಅದು ದೊಡ್ಡ ಗುಳ್ಳೆಯ ಅನಿಲವೋ ಸಣ್ಣ ಗುಳ್ಳೆಗಳ ಅನಿಲವೋ ಎಂಬುದೂ ನಮಗೆ ಗೊತ್ತಾಗಿ ಬಿಡುತ್ತದೆ!

ಅಂದರೆ, ಮಾನವನ ಗುದದ್ವಾರದಲ್ಲಿ ವಿಶೇಷ ಗುಣಗಳಿಂದ ಕೂಡಿದ ಸಂವೇದನಾಶೀಲ ನರಕೋಶಗಳಿವೆ ಎಂದಾಯ್ತು. ಈ ನಾನಾಬಗೆಯ ನರಕೋಶಗಳು ಯಾವುವು, ಅವುಗಳಿಂದ ನಮಗೆ ಏನು ಉಪಯೋಗ ಮತ್ತು ವಿವಿಧ ರೋಗಗಳಲ್ಲಿ ಅಥವಾ ನರವ್ಯೂಹದ ವ್ಯಾಧಿವಿಕಾರಗಳಲ್ಲಿ ರೋಗಿಗಳು ಏನೇನು ಅಸ್ವಸ್ಥತೆಗಳನ್ನು ಅನುಭವಿಸುತ್ತಾರೆ, ಅವಕ್ಕೆ ಪರಿಹಾರಗಳು ಯಾವುವು ಎಂಬುದು ಮುಂದಿನ ಪೀಳಿಗೆಯ ವೈದ್ಯಕೀಯ ವಿಜ್ಞಾನಿಗಳ ಮುಂದಿರುವ ಸವಾಲು.


 

Friday, October 9, 2015

Wildlife Messages 2015 ವನ್ಯಜೀವಿ ಸಂದೇಶಗಳು ೨೦೧೫

Why Should We Save Our Planet

 Friday, 25 September 2015
Dear friend,

Over the years we have heard catchphrases like Save Earth, Preserve Nature, and Conserve Environment …, which has become a cluster of slogans on platforms. After all, why have we to save our planet or for whom? After much thought, I have found three reasons:

First of all, animals and plants do not actually know what is happening around them. They do not have the ability to think nor analyse. Intelligent thoughts and predictability are the virtues that belong to only us, the humans. So only we are able to save the poor life forms.

There is another and more important reason: It is we who have to be blamed for all the havocs that have been caused to the Earth and its environs. We have caused an irreversible damage to all the habitats - land, water and air. Don’t you think, logically we are duty bound to correct the wreckage and it is our responsibility?

Lastly, I have the most important reason: I think it is for our own existence we have to save earth. It is because, such catastrophes have occurred more than four times on Earth, and each time Nature has recovered very quickly in a matter of some decades, as if nothing happened at all! And the evolutionary process has not stopped at any time and has continued unimpeded.

This means, nobody needs to preserve or protect Nature. Nature has the inherent capacity to heal itself.

With our massive population, our own changed food habits, sedentary lifestyle and fast mobility and least resistance to new diseases, we are the most vulnerable living being on this Earth. So naturally it is we who are bound to get extinct in the first place. Do we have any solution for this?

The tragic part is, the other species of our genera, Homo erectus, H. habilis, H. neantherthalis, H. naledi are all extinct. This means, we do not have any near cousins in the evolutionary ladder. We are alone!

Let us join hands to make our only Earth, a place where all elements of life can live in health, happiness and harmony.

Thank you.
Dr. S V Narasimhan

Special Wildlife Messenger of This Year
Bronze-winged Jaçana (Metopedius indicus) is a swamp bird easily recognized by glossy black head, neck and chest with glistening metallic bronze-green back and wings and a conspicuous broad white eyebrow. The most striking feature is the presence of long legs with massive elongated, widely spread toes that distribute the weight of the bird and enables it to walk effortlessly on the floating vegetation. They are seen in small parties on tanks with floating vegetation like water lily warily moving slowly and silently and are good swimmers. Their food consists of aquatic seeds, tubers, also insects, crustaceans and mollusks. They have a loud, wheezy piping seek..eek.. seek.. eek.. especially during breeding. And the nest is made of a pad of weed stems on floating leaves.

Total of hand-painted cards made: this year 1930; in 31 years 62,420. Total recipients: this year 1220; in 31 years 10,443.
THE WILDLIFE MESSAGE CARDS are individually hand-painted and sent free to individuals throughout the world to mark the Wildlife Week. For previous years’ messages, please visit me at http://drsvnarasimhan.blogspot.com


ಭೂಮಿಯನ್ನು ನಾವೇಕೆ ಸಂರಕ್ಷಿಸಬೇಕು
ಶುಕ್ರವಾರ, ೨೫ ಸೆಪ್ಟೆಂಬರ್ ೨೦೧೫
ಮಿತ್ರರೆ,

ಪ್ರಕೃತಿಯನ್ನು ಸಂರಕ್ಷಿಸಬೇಕು, ಭೂಮಿಯನ್ನು ಕಾಪಾಡೋಣ, ಪರಿಸರವನ್ನು ಉಳಿಸುವುದು ನಮ್ಮ ಕರ್ತವ್ಯ ... ಹೀಗೆಲ್ಲ ಪ್ರತಿದಿನ ವೇದಿಕೆಯ ಮೇಲೆ ಮಾತನಾಡುವುದು ಈಗೀಗ ಫ್ಯಾಷನ್ ಆಗಿಬಿಟ್ಟಿದೆ. ಅಷ್ಟಕ್ಕೂ ನಿಸರ್ಗವನ್ನು ನಾವೇ ಏಕೆ ರಕ್ಷಿಸಬೇಕು? ಇದರಿಂದ ಯಾರಿಗೆ ಪ್ರಯೋಜನ ಎಂದು ನಾನು ಆಲೋಚಿಸಿದ್ದೇನೆ. ನನಗೆ ಕಂಡ ಕಾರಣಗಳು ಹೀಗಿವೆ:

ಮೊದಲನೆಯದಾಗಿ, ಪ್ರಾಣಿ-ಪಕ್ಷಿಗಳಿಗೆ, ಗಿಡ-ಮರ-ಬಳ್ಳಿಗಳಿಗೆ ಆಲೋಚಿಸುವ ಶಕ್ತಿಯಿಲ್ಲ; ವಿವೇಚನಾ ಶಕ್ತಿಯಿಲ್ಲ. ಇವೆಲ್ಲ ಇರುವುದು ಬುದ್ಧಿವಂತರಾದ ನಮಗೆ, ಅಂದರೆ ಮನುಷ್ಯರಿಗೆ, ಮಾತ್ರ. ಆದ್ದರಿಂದ ಮಾನವರಾದ ನಾವು ಈ ಭೂಮಿ ಮತ್ತು ಅದರ ಅಸಹಾಯಕ ಜೀವಸಂಕುಲವನ್ನು ಉಳಿಸಲು ಪ್ರಕೃತಿಯನ್ನು ಸಂರಕ್ಷಿಸಬೇಕು ಎಂಬುದನ್ನು ಎಲ್ಲರೂ ಒಪ್ಪತಕ್ಕ ವಿಷಯ.

ಅದಕ್ಕಿಂತ ಮುಖ್ಯವಾದ ಕಾರಣ ಮತ್ತೊಂದಿದೆ. ಈ ಭೂಮಿಯ ಮೇಲಿನ ಪರಿಸರ ಹಾಳಾಗಿರುವುದು ಮತ್ತು ಅದು ಹಾಗಾಗಲು ಮುಖ್ಯ ಕಾರಣ ಮನುಷ್ಯರೇ. ನೂರಾರು ವರ್ಷಗಳಿಂದ ಪ್ರಕೃತಿಯ ಮೇಲೆ ನಾವು ಮಾಡಿರುವ ಅವ್ಯಾಹತ ದುರಾಚಾರಗಳಿಂದ, ನಮ್ಮ ಸ್ವಾರ್ಥ, ದುರಾಸೆ ಮತ್ತು ಕ್ರೌರ್ಯಗಳಿಗೆ ಭೂಮಿ ಹದಗೆಟ್ಟಿದೆ; ದಿಕ್ಕುತಪ್ಪಿದೆ; ನೆಲ, ಜಲ, ವಾಯು ಮಾಲಿನ್ಯ ಹೆಚ್ಚುತ್ತಿದೆ. ಅದನ್ನೆಲ್ಲ ಸರಿಗಟ್ಟಬೇಕಾಗಿರುವುದು ನಾವಲ್ಲದೆ ಮತ್ಯಾರು? ಅದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ ಕೂಡ ಅಲ್ಲವೆ?

ಆದರೆ ಇವೆಲ್ಲಕ್ಕಿಂತ ಮಿಗಿಲಾದ ಮತ್ತೊಂದು ಕಾರಣವಿದೆ: ಈವತ್ತು ನಾವು ಭೂಮಿ-ಪರಿಸರ-ಪ್ರಕೃತಿಯನ್ನು ಕಾಪಾಡಬೇಕಾಗಿರುವುದು ಬೇರೆ ಯಾವ ಕಾರಣಕ್ಕೂ ಅಲ್ಲ. ಅದು ನಮ್ಮ ಸ್ವಂತ ಉಳಿವಿಗಾಗಿಯೇ! ಏಕೆಂದರೆ, ಈ ಹಿಂದೆಯೂ ಭೂಮಿಯ ಮೇಲೆ ನಾಲ್ಕು ಬಾರಿ ಭಾರಿ ಪ್ರಮಾಣದ ಪ್ರಳಯಗಳಾಗಿವೆ. ಹೀಗೆ ಆದಾಗಲೆಲ್ಲ ಅಸಂಖ್ಯ ಜೀವಿಗಳು ನಶಿಸಿಹೋಗಿವೆ. ಆದರೆ ಕೆಲವೇ ದಶಕಗಳಲ್ಲಿ ಏನೂ ಆಗಿಲ್ಲವೇನೋ ಎಂಬಂತೆ ಎಲ್ಲವೂ ಹಿಂದಿರುಗಿದೆ. ಜೀವವಿಕಾಸದ ಪ್ರಕ್ರಿಯೆ ಯಾವ ಹಂತದಲ್ಲಿಯೂ ನಿಂತಿಲ್ಲ. ಇದರ ಅರ್ಥ ಪ್ರಕೃತಿಯನ್ನು ಯಾರೂ ಸಂರಕ್ಷಿಸಬೇಕಿಲ್ಲ; ನಿಸರ್ಗದ ರಕ್ಷಣೆಯ ಮಾರ್ಗ ಅದಕ್ಕೇ ಗೊತ್ತಿದೆ ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲದು ಎಂದಾಯಿತು.

ಮಾನವನ ಜೊತೆಯಲ್ಲೇ ಈ ಭೂಮಿಯ ಮೇಲೆ ವಿಕಾಸ ಹೊಂದಿದ ಇತರ ಯಾವ ಮಾನವ ಪ್ರಬೇಧಗಳೂ ಈವತ್ತು ನಮ್ಮೊಂದಿಗೆ ಜೀವಿಸುತ್ತಿಲ್ಲ. ನಮ್ಮ ಹತ್ತಿರದ ದಾಯಾದಿಗಳು ಯಾರೂ ಇಲ್ಲವಾಗಿದ್ದಾರೆ. ಇಡೀ ಭೂಮಿಯ ಮೇಲೆ ನಾವು ಇಂದು ಒಂಟಿಯಾಗಿಬಿಟ್ಟಿದ್ದೇವೆ. ಬಹು ದೂರದ ಸಂಬಂಧಿಗಳು ಯಾರಾದರೂ ಇದ್ದರೆ ಅದು ಚಿಂಪಾಂಜಿ, ಗೊರಿಲ್ಲ, ಗಿಬ್ಬನ್‌ಗಳು ಮಾತ್ರ! 

ಭೂಮಿಗೇ ಭಾರವಾಗುತ್ತಿರುವ ನಮ್ಮ ಜನಸಂಖ್ಯೆ, ನಮ್ಮ ಆರಾಮಕರ ಜೀವನ ಶೈಲಿ, ಆಹಾರ ಪದ್ಧತಿ, ಕ್ಷಿಪ್ರವಾಗಿ ಬದಲಾಗುತ್ತಿರುವ ನಮ್ಮ ಜೀವನ ಪದ್ಧತಿಗಳು, ಇಂತಹ ಎಲ್ಲ ಬದಲಾವಣೆಗಳಿಂದ ನಮ್ಮ ರೋಗನಿರೋಧಕ ಶಕ್ತಿಯೂ ಕುಂಠಿತಗೊಂಡಿದೆ. ನಾವಿಂದು ಪ್ರಪಂಚದಲ್ಲಿಯೇ ಅತ್ಯಂತ ದುರ್ಬಲ ಜೀವಿಗಳಾಗಿದ್ದೇವೆ. ಹಾಗಾಗಿ ವಿನಾಶ ಹೊಂದುತ್ತಿರುವ ಜೀವಿಗಳ ಪಟ್ಟಿಯಲ್ಲಿ ನಾವೇ ಮೊದಲಿಗರಾಗಿದ್ದೇವೆ. ಈ ವಿಷವರ್ತುಲದಿಂದ ಹೊರಬರಲು ಮಾರ್ಗವಿದೆಯೇ?

ಬನ್ನಿ, ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.

ವಂದನೆಗಳು.           
ಡಾ. ಎಸ್. ವಿ. ನರಸಿಂಹನ್

ಈ ವರ್ಷದ ವಿಶೇಷ ವನ್ಯಜೀವಿ ಸಂದೇಶವಾಹಕ

ಬಿಳಿಹುಬ್ಬಿನ ದೇವನಕ್ಕಿ: ಜೊಂಡು, ಕೊಳದಾವರೆ ಮುಂತಾದ ಜಲಸಸ್ಯಗಳಿಂದಾವೃತವಾದ ಜೌಗು-ಹೂಳು ಪ್ರದೇಶದಲ್ಲಿ ವಾಸಿಸುವ ಅತ್ಯಂತ ಸುಂದರವಾದ ಹಕ್ಕಿ. ಹೊಳೆಯುವ ಕಂಚು-ಹಸಿರು ರೆಕ್ಕೆಗಳು ಮತ್ತು ಕಣ್ಣಿನ ಮೇಲೆ ಅಗಲವಾದ ಬಿಳಿ ಹುಬ್ಬು, ಹಕ್ಕಿಯನ್ನು ಗುರುತು ಹಿಡಿಯಲು ಇಷ್ಟೇ ಸಾಕು! ಎಲ್ಲಕ್ಕಿಂತ ವಿಶೇಷವಾಗಿ ದೇವನಕ್ಕಿಗಳ ಕಾಲ್ಬೆರಳುಗಳು ಜೇಡರ ಹುಳುವಿಗಿರುವಂತೆ ಉದ್ದ ಹಾಗೂ ಸಪೂರ. ಇದರಿಂದ ನಡೆಯುವಾಗ ದೇಹದ ಭಾರ ಇವುಗಳ ಉದ್ದ-ಬಲಿಷ್ಠ ಕಾಲು ಹಾಗೂ ಬೆರಳುಗಳ ಮೇಲೆ ಹಂಚಿಹೋಗುವುದರಿಂದ ಕೊಳದಲ್ಲಿ ಬೆಳೆದ ತಾವರೆ ಮುಂತಾದ ಜಲಸಸ್ಯಗಳ ಮೇಲೆ ನಿರಾಯಾಸವಾಗಿ ಓಡಾಡುತ್ತವೆ. ಗಾತ್ರದಲ್ಲಿ ತುಸು ದೊಡ್ಡದಾದ ಹೆಣ್ಣು ಹಕ್ಕಿ ಬಹುಪತಿತ್ವವನ್ನು ಅನುಸರಿಸುತ್ತದೆ. ಸ್ವಲ್ಪ ಆಪತ್ತಿನ ಸೂಚನೆ ಕಂಡುಬಂದರೂ ಓಡಿ ಜೊಂಡುಹುಲ್ಲಿನ ನಡುವೆ ಅವಿತುಕೊಳ್ಳುತ್ತವೆ. ಸದ್ದಿಲ್ಲದೆ, ಸಣ್ಣ ಗುಂಪಿನಲ್ಲಿ ನಿಧಾನವಾಗಿ ಚಲಿಸುತ್ತ ಆಹಾರವನ್ನು ಅರಸುತ್ತವೆ. ಗೆಡ್ಡೆ-ಬೀಜ, ಕೀಟ-ಮೃದ್ವಂಗಿಗಳೇ ಇವುಗಳ ಆಹಾರ. ಇವುಗಳ ಕೂಗು ಕೊಳವೆಯಲ್ಲಿ ಊದಿದಂತೆ ಸೀಕ್..ಈಕ್.. ಸೀಕ್.. ಈಕ್... ಶಬ್ದ. ಇವು ನೀರಿನ ಮೇಲೆ ಅಥವಾ ಕೆರೆ ಬದಿಯಲ್ಲಿ ಎಲೆ-ಕಡ್ಡಿಗಳಿಂದ ಕೂಡಿದ ತೇಲುವ ಗೂಡು ಕಟ್ಟುತ್ತವೆ.

ಕೈಯಲ್ಲೇ ಚಿತ್ರಿಸಿದ ಒಟ್ಟು ಸಂದೇಶಪತ್ರಗಳ ಸಂಖ್ಯೆ: ಈ ವರ್ಷ ೧೯೩೦; ಕಳೆದ ೩೧ ವರ್ಷಗಳಲ್ಲಿ ೬೨,೪೨೦.
ಸಂದೇಶಪತ್ರಗಳನ್ನು ಪಡೆದವರು: ಈ ವರ್ಷ ೧,೨೨೦; ಕಳೆದ ೩೧ ವರ್ಷಗಳಲ್ಲಿ ೧೦,೪೪೩.
ಹಿಂದಿನ ವರ್ಷಗಳ ಸಂದೇಶಗಳಿಗಾಗಿ ಇಲ್ಲಿ ಭೇಟಿ ನೀಡಿ: