Tuesday, October 6, 2020

ಗಾಂಧೀಜಿಯವರ ರಾಮರಾಜ್ಯದ ಕಲ್ಪನೆ

 ಗಾಂಧೀಜಿಯವರ ರಾಮರಾಜ್ಯದ ಕಲ್ಪನೆ

ಮಹಾತ್ಮಾ ಗಾಂಧೀಜಿಯವರು ಸ್ವಾತಂತ್ರಕ್ಕೆ ಮುನ್ನ ಭಾರತದಲ್ಲಿ ರಾಮರಾಜ್ಯವನ್ನು ಕಟ್ಟುವ ಅಭಿಲಾಶೆಯನ್ನು ಇಟ್ಟುಕೊಂಡಿದ್ದರು. ನಮ್ಮ ದೇಶ ಸ್ವಾತಂತ್ರ್ಯ ಕಂಡು ಇಂದಿಗೆ ಎಪ್ಪತ್ತ ಮೂರು ವರ್ಷಗಳು ಕಳೆದಿವೆ. ಮಹಾತ್ಮರ ರಾಮರಾಜ್ಯದ ಕನಸು ಈಡೇರಿದೆಯೆ ಎಂದು ನಾವು ಆತ್ಮಾವಲೋಕನೆ ಮಾಡಿಕೊಳ್ಳುವ ಕಾಲ ಬಂದಿದೆ. 

ಗಾಂಧೀಜಿಯವರ ರಾಮರಾಜ್ಯ ಎಂದರೆ, ಅದು ಗ್ರಾಮರಾಜ್ಯವಾಗಿತ್ತು. ಈವತ್ತೂ ನಾವು ನಮ್ಮ ದೇಶ ಎಂದರೆ, ಅದು ಹಳ್ಳಿಗಳಿಂದ ಕೂಡಿದ ದೇಶ, ಜನಪದ ಸಂಗೀತ, ಕರಕುಶಲ ಕಲೆ, ಗ್ರಾಮ್ಯ ಭಾಷೆಯ ಸೊಗಡು, ಇವೆಲ್ಲ ನಮ್ಮ ದೇಶದ ಬೆನ್ನೆಲುಬು ಎಂದೆಲ್ಲ ಭಾವಿಸುತ್ತಾ ಬಂದಿದ್ದೇವೆ. ಆದರೆ ಇವು ಎಷ್ಟರ ಮಟ್ಟಿಗೆ ಸರಿ?

ಬ್ರಿಟಿಷರು ನಮ್ಮ ದೇಶವನ್ನು ಸುಮಾರು ಒಂದೂವರೆ ಶತಕಗಳ ಕಾಲ ಆಳಿದರು. ದೇಶವನ್ನು, ದೇಶದ ಜನರನ್ನು ಒಡೆದು, ಜನರ ಒಗ್ಗಟ್ಟನ್ನು ಛಿದ್ರ ಮಾಡಿ, ಆ ಮೂಲಕ ಇಡೀ ದೇಶದ ಜನರಲ್ಲಿ ಪರಸ್ಪರ ದ್ವೇಷದ ಬೀಜವನ್ನು ಬಿತ್ತಿದರು. ಹೀಗೆ ಭಾರತವನ್ನು ಅವರ ರಾಜಕೀಯ ಇಚ್ಛಾಶಕ್ತಿಗೆ ಪೂರಕವಾಗಿ ಬಳಸಿಕೊಂಡರು. ಈ ಒಡೆದಾಳುವ ನೀತಿಯನ್ನೇ, ಸ್ವಾತಂತ್ಯಾ ನಂತರ ದೇಶವನ್ನಾಳಿದ ಎಲ್ಲಾ ರಾಜಕೀಯ ಪಕ್ಷಗಳು ಮುಂದುವರಿಸಿಕೊಂಡು ಬಂದಿವೆ.

ಹಿಂದೆ, ಅಂದರೆ, ಜಾತಿಯ ವಿಷವೃಕ್ಷ ಮೊಳಕೆಯೊಡೆಯುವ ಮುನ್ನ, ಒಂದು ಹಳ್ಳಿಯಲ್ಲಿ ರೈತ, ಹರಿಜನ, ಕುಂಬಾರ, ಕಂಬಾರ, ಪೂಜಾರಿ, ಜೌಳಿಗ, ಗೌಳಿಗ, ಕ್ಷೌರಿಕ, ದರ್ಜಿ, ಚಿನಿವಾರ, ಚಮ್ಮಾರ, ಬಳೆಗಾರ, ಜಾಡಮಾಲಿ, ದನಗಾಹಿ, ಕುರಿಗಾಹಿ ಮುಂತಾದವರು ತಮ್ಮ ಬಗೆಬಗೆಯ ಕುಲಕಸುಬನ್ನು ಮಾಡಿಕೊಂಡು ತಮ್ಮ ಬದುಕನ್ನು ಕಂಡುಕೊಂಡಿದ್ದರು. ಅವರ ದೈನಂದಿನ ಕಾರ್ಯಗಳು ಮತ್ತು ಉತ್ಪನ್ನಗಳು ಆಯಾ ಗ್ರಾಮದ ಮಂದಿಗೆ ಪೂರೈಕೆಯಾಗುತ್ತಿದ್ದವು. ಕಾಲಾಕಾಲಕ್ಕೆ ಜರುಗುತ್ತಿದ್ದ ಹಬ್ಬ-ಹರಿದಿನಗಳಲ್ಲಿ, ಜಾತ್ರೆಗಳಲ್ಲಿ ಎಲ್ಲರೂ ಒಂದುಗೂಡಿ ಸಂತೋಷದಿಂದ ಸಂಭ್ರಮಿಸುತ್ತಿದ್ದರು. ಜನಪದ ಪ್ರತಿಭೆಗಳು ಆ ಸಮಯಗಳಲ್ಲಿ ವಿಜ್ರಂಭಿಸಿದವು. ಅವರ ವಿವಿಧ ವೃತ್ತಿಗಳು ಇಡೀ ಹಳ್ಳಿಯನ್ನು ಒಂದುಗೂಡಿಸಿತ್ತು. ದಿನನಿತ್ಯದ ಬದುಕಿಗೆ ಒಬ್ಬೊಬ್ಬರ ವೃತ್ತಿಯೂ ಆ ಹಳ್ಳಿಗೆ ಸೀಮಿತಗೊಂಡಿತ್ತು ಮತ್ತು ಪ್ರತಿಯೊಬ್ಬರೂ ಮತ್ತೊಬ್ಬರಿಗೆ ಅನಿವಾರ್ಯವಾಗಿದ್ದರು. ಹಳ್ಳಿಯಲ್ಲಿ ಪ್ರತಿಯೊಂದು ವೃತ್ತಿಯವರಿಗೂ ವಿಶಿಷ್ಟ ಸ್ಥಾನ ಹಾಗೂ ಗೌರವವಿತ್ತು. ಜಾನಪದ ಹಾಡುಗಳಲ್ಲಿ, ಸಾಂಸ್ಕೃತಿಕ ಪರಂಪರೆ-ಆಚರಣೆಗಳಲ್ಲಿ ಅದನ್ನು ಇಂದೂ ನಾವು ಕಾಣಬಹುದಾಗಿದೆ.

ಅವರ ಒಂದೊಂದು ಕುಲವೃತ್ತಿಯೂ ತಲೆತಲಾಂತರದಿಂದ ವಂಶವಾಹಿನಿಯಲ್ಲಿ ಹರಿದು ಅದು ಅವರಲ್ಲಿ ರಕ್ತಗತವಾಗಿ, ಒಬ್ಬೊಬ್ಬರೂ ಅವರವರ ವೃತ್ತಿಯಲ್ಲಿ ಪ್ರವೀಣರೂ, ವಿಶೇಷಜ್ಞರೂ ಆಗಿದ್ದರು! ಅದು ಅವರ ಆತ್ಮವಿಕಾಸಕ್ಕೂ, ಸ್ವಾಭಿಮಾನಕ್ಕೂ ಆತ್ಮನಿರ್ಭರತೆಗೂ ಪೂರಕವಾಗಿತ್ತು. ಹೀಗೆ ಪ್ರತಿಯೊಂದು ಗ್ರಾಮವೂ ಸ್ವಯಂಪೂರ್ಣವಾದ, ಸ್ವಾವಲಂಬನೆಯ, ಸ್ವರಾಜ್ಯವಾಗಿತ್ತು.

ನಾವು ಇಲ್ಲಿ ಒಂದು ವಿಷಯವನ್ನು ಗಂಭೀರವಾಗಿ ಗಮನಿಸಬೇಕು: ಮೇಲೆ ಹೇಳಿದ ಯಾರೂ ಕೂಡ ಇಂದಿನ ಆಧುನಿಕ ಪದ್ಧತಿಯ ವಿದ್ಯಾಭ್ಯಾಸವನ್ನೂ ಮಾಡಿರಲಿಲ್ಲ, ಯಾರೂ ಯಾವ ಡಿಗ್ರಿ ಪ್ರಶಸ್ತಿ ಪತ್ರವನ್ನೂ ಪಡೆದಿರಲಿಲ್ಲ. ಆದರೆ, ಅವರೆಲ್ಲ ಅವರವರ ವೃತ್ತಿಯಲ್ಲಿ ಸಂಪೂರ್ಣ ನಿಪುಣರಾಗಿದ್ದರು. ಮತ್ತು ಅವರೆಲ್ಲ ಅವರ ಕಾರ್ಯ ಚಟುವಟಿಕೆಗಳಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಮೈಗೂಡಿಸಿಕೊಂಡಿದ್ದರು. ಒಂದು ದೃಷ್ಟಿಯಿಂದ ನೋಡುವುದಾದರೆ, ಅವರೆಲ್ಲ ವಿಜ್ಞಾನಿಗಳೇ ಆಗಿದ್ದರು! ಹಳ್ಳಿಯ ವಿಶಾಲ ಹೊಲ-ಗದ್ದೆ, ಬೆಟ್ಟ-ಗುಡ್ಡ, ಹಸು-ಕುರಿ ಕೊಟ್ಟಿಗೆಗಳೇ ಅವರ ಪ್ರಯೋಗಾಲಯ! ಹಾಗಿಲ್ಲದಿದ್ದಲ್ಲಿ, ಈಗ ನಾವು ಕಾಣುತ್ತಿರುವ ನೂರಾರು ತಳಿಯ ಭತ್ತ, ಜೋಳ, ಗೋಧಿ, ಹಸು, ಕೋಳಿ, ಕುರಿ ಮುಂತಾದುವುಗಳು ಇರುತ್ತಿರಲಿಲ್ಲ. ನಿಮಗೆ ಆಶ್ಚರ್ಯವಾಗಬಹುದು: ಇವು ಯಾವುವೂ ಆಧುನಿಕ ವಿಜ್ಞಾನಿಗಳಿಂದ ಪ್ರಯೋಗಾಲಯಗಳಲ್ಲಿ ಸಂಶೋಧಿಸಲ್ಪಟ್ಟ ಆವಿಷ್ಕಾರಗಳೇ ಅಲ್ಲ!

ಇಂದು ಪ್ರತಿಯೊಂದು ಕುಲ ವೃತ್ತಿಯೂ ಮಣ್ಣುಪಾಲಾಗಿವೆ. ಪ್ರತಿಯೊಂದು ಕುಲಕಸುಬೂ ಕೂಡ ಒಂದೊಂದು ಜಾತಿಯಾಗಿ ಪರಿವರ್ತಿತಗೊಂಡಿದೆ. ನೂರಾರು ವರ್ಷಗಳಿಂದ ಅನುಕ್ರಮವಾಗಿ ಬಂದಂತಹ ಸರ್ಕಾರಗಳು ಈ ಎಲ್ಲ ನಾಗರಿಕರನ್ನೂ ಒಬ್ಬರಿಂದ ಮತ್ತೊಬ್ಬರನ್ನು ಸಮರ್ಥಕವಾಗಿ ಬೇರ್ಪಡಿಸಿದರು. ಎಲ್ಲರನ್ನು ತುಚ್ಛವಾಗಿ, ಕೀಳಾಗಿ ಕಂಡರು. ಅಷ್ಟೇ ಅಲ್ಲ, ಈ ಎಲ್ಲ ವೃತ್ತಿಗಳೂ ಕೀಳು ಎಂಬ ಭಾವನೆ ಅವರಲ್ಲಿ ಆಳವಾಗಿ ಬೇರೂರುವಂತೆ ಮನಗೆಡಿಸಿದರು! ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಪ್ರತಿಯೊಂದು ಜಾತಿಯೂ ಇಂದು ಹರಿದು ಹಂಚಿಹೋಗಿದೆ. 

ಅಷ್ಟೇ ಅಲ್ಲ, ಹೀಗೆ ಭಾರತ ದೇಶವಾಸಿಗಳನ್ನೆಲ್ಲ ಹಿಂದುಳಿದವರು, ತುಳಿತಕ್ಕೊಳಪಟ್ಟವರು, ದಲಿತರು, ನಿರ್ಗತಿಕರು ಎಂದು ಅವರನ್ನು ಪ್ರತಿಬಿಂಬಿಸಲ್ಪಟ್ಟಿದೆ. ಪ್ರತಿಯೊಂದು ಜಾತಿಯೂ, ಅವರವರ ಜನಸಂಖ್ಯೆಯ ಆಧಾರದಲ್ಲಿ, ಎಷ್ಟೆಷ್ಟು ಕೀಳು ಎಂದು ಪಟ್ಟಿ ಮಾಡಲಾಗಿದೆ. ಈ ಹಣೆಪಟ್ಟಿ ಹಚ್ಚುವುದಲ್ಲದೆ, ಎಲ್ಲರಿಗೂ ಜಾತಿ ಸರ್ಟಿಫ಼ಿಕೇಟನ್ನು ಕೊಡಲಾಗಿದೆ. ಇದು ವ್ಯವಸ್ಥಿತವಾಗಿ ತಲೆತಲಾಂತರಕ್ಕೂ ಮುಂದುವರೆಯುವಂತೆ ನೋಡಿಕೊಂಡಿದ್ದಾರೆ. ಇದರೊಂದಿಗೆ ಭಾರತೀಯರೇ ಆದ ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಕ್ಕರು, ಜೈನರು ಮುಂತಾದ ವಿವಿಧ ಮತದವರನ್ನು ಅಲ್ಪಸಂಖ್ಯಾತರು ಎಂದು ಒಡೆಯಲಾಗಿದೆ.

ಸಾಮಾಜಿಕ ನಿಚ್ಚಣಿಕೆಯಲ್ಲಿ ಅವರೆಲ್ಲ ಬಹಳ ಕೆಳ ಮೆಟ್ಟಿಲುಗಳಲ್ಲಿದ್ದಾರೆ ಎಂಬ ಭ್ರಮೆ ಹುಟ್ಟಿಸಿ, ಅವರನ್ನು ಸಾಮಾಜಿಕವಾಗಿ ಮೇಲೆತ್ತುವ ಪ್ರಕ್ರಿಯೆ ಎಡೆಬಿಡದೆ ಸಾಗಿದೆ. ಇದೊಂದು ರಾಜಕೀಯ ನಾಟಕವಷ್ಟೆ. ಮೇಲೆತ್ತುವುದು ಎಂದರೆ, ಅವರನ್ನೆಲ್ಲ ವೈದ್ಯರು, ಇಂಜಿನಿಯರುಗಳು, ಹಾಗೂ ವಿವಿಧ ಕಾಲೇಜು-ಶಿಕ್ಷಣವನ್ನು ಪಡೆದು ವಿವಿಧ ಡಿಗ್ರಿಗಳನ್ನು ಪಡೆದ ಪದವೀಧರರನ್ನಾಗಿ ಮಾಡುವುದು, ಸರ್ಕಾರದ ಹುದ್ದೆಗಳನ್ನು ಅಲಂಕರಿಸುವುದು ಎಂದರ್ಥ! ಹೀಗೆ, ದೊಡ್ಡ ದೊಡ್ಡ ಪದವಿ ಪಡೆಯುವುದೇ, ಸರ್ಕಾರಿ ಹುದ್ದೆಯನ್ನು ಪಡೆಯುವುದೇ ಒಬ್ಬ ವ್ಯಕ್ತಿಯ ಜೀವನದ ಗುರಿ, ಹಾಗಾದರೆ ಮಾತ್ರ ಅವನಿಗೆ ಸಮಾಜದಲ್ಲಿ ಗೌರವ ಎಂಬ ಭಾವನೆ ಈಗ ಎಲ್ಲರ ಮನದಲ್ಲಿಯೂ ತಳವೂರಿಬಿಟ್ಟಿದೆ! 

ಇದರೊಂದಿಗೆ ಮತ್ತೊಂದು, ಮತ್ತು ಅಷ್ಟೇ ಹೀನ, ಸಂಸ್ಕೃತಿ ಕಂಡುಬರುತ್ತಿದೆ. ಇವರನ್ನೆಲ್ಲ ರಾಜಕೀಯ ದಾಳಗಳನ್ನಾಗಿಸಿ, ಪ್ರತಿಯೊಂದು ಜಾತಿಯೂ ವೋಟ್-ಬ್ಯಾಂಕ್‌ಗಳನ್ನಾಗಿ ಪರಿವರ್ತಿತಗೊಳಿಸುವ ಪ್ರಕ್ರಿಯೆ ಸಮರ್ಥವಾಗಿ ನಡೆಯುತ್ತಿದೆ! ಭಾರತದ ಸಂವಿಧಾನದಲ್ಲಿ ನಮ್ಮದು ಜಾತ್ಯಾತೀತ ದೇಶ ಎಂದು ದಪ್ಪನಾದ ಅಕ್ಷರದಲ್ಲಿ ಬರೆದಿದ್ದರೂ, ಸ್ವಾತಂತ್ರ್ಯ ದೊರಕಿ ಏಳೆಂಟು ದಶಕಗಳು ಕಳೆದರೂ ಜಾತಿ ವೈಷಮ್ಯಗಳು, ವೈಪರೀತ್ಯಗಳು ಒಂದಿಷ್ಟೂ ಬದಲಾಗಿಲ್ಲ ಮತ್ತು ಈ ಪರಿಸ್ಥಿತಿ ಹೆಚ್ಚುತ್ತಿರುವದನ್ನೇ ನಾವು ಕಾಣುತ್ತಿದ್ದೇವೆ. ಇಂದು ಪ್ರತಿಯೊಂದು ಜಾತಿಯೂ ರಾಜಕೀಯ ಲಾಭವನ್ನು ಪಡೆಯಲು, ಹೆಚ್ಚು ಹೆಚ್ಚು ಹಿಂದುಳಿಯಲು ಪ್ರಯತ್ನಿಸುತ್ತಿವೆ! ತಮ್ಮ ಮುಂದಿನ ಪೀಳಿಗೆಗಳಿಗೂ ಎಲ್ಲ ಸರಕಾರದ ಸವಲತ್ತುಗಳು ದೊರಕಬೇಕೆಂಬ ನಿಟ್ಟಿನಲ್ಲಿ ಎಲ್ಲರಲ್ಲಿಯೂ ತಾವು ಹಿಂದುಳಿಯಬೇಕೆಂಬುದೇ ಧ್ಯೇಯವಾಗಿಬಿಟ್ಟಿದೆ. 

ನಾವೆಲ್ಲ ಭಾರತೀಯರು, ದೇಶವನ್ನು ಎಲ್ಲರೂ ಒಂದುಗೂಡಿ ಮುಂದಕ್ಕೆ ತರಬೇಕು ಎಂಬ ವಿಚಾರವೇ ನೇಪಥ್ಯಕ್ಕೆ ಸರಿದಿದೆ. ರಾಷ್ಟ್ರಭಕ್ತಿ, ದೇಶಪ್ರೇಮ ಮುಂತಾದ ಆದರ್ಶಗಳು ಮಾಯವಾಗಿವೆ. ಹಣ ಗಳಿಸುವುದೇ ರಾಜಕೀಯದ ಉದ್ದೇಶವಾದ್ದರಿಂದ ಎಲ್ಲ ಆಡಳಿತ ನಡೆಸುವ ಅಧಿಕಾರ ವ್ಯವಸ್ಥೆಗಳಲ್ಲಿ ಮೋಸ, ಲಂಚಗುಳಿತನ, ತಾಂಡವವಾಡುತ್ತಿದೆ. ಗೂಂಡಾಗಿರಿ, ಕ್ರೌರ್ಯ, ಸಮಾಜಘಾತುಕತನ ಇವೇ ಇಂದು ಯುವ ನಾಯಕತ್ವದ ಗುಣಗಳಾಗಿವೆ! ದೇಶದ ನಾಗರಿಕರ ಮೂಲ ಅವಶ್ಯಕತೆಗಳಾದ ವಿದ್ಯಾಭ್ಯಾಸ, ಆರೋಗ್ಯ, ಎಲ್ಲವೂ ರಾಜಕೀಯ ವ್ಯಕ್ತಿಗಳ ಕೌಟುಂಬಿಕ ವ್ಯವಹಾರಗಳಾಗಿವೆ.

ಈ ಎಲ್ಲ ದುರ್ವ್ಯವಹಾರಗಳೂ ದೊಡ್ಡ ದೊಡ್ಡ ನಗರಗಳಲ್ಲಿ ಹುಟ್ಟಿ, ಗ್ರಾಮಗಳಿಗೆ ಪಸರಿಸುತ್ತಿವೆ. ಪಟ್ಟಣಗಳು ಸುತ್ತಮುತ್ತಲ ಹಳ್ಳಿಗಳನ್ನು ನುಂಗಿ ಯಾವುದೇ ಎಗ್ಗಿಲ್ಲದೆ ಬೆಳೆಯುತ್ತಿವೆ. ದೊಡ್ಡ ದೊಡ್ಡ ಉದ್ಯಮಗಳು ತಲೆಯೆತ್ತುತ್ತಿವೆ. ಇದರಿಂದ ಗ್ರಾಮೋದ್ಯೋಗಗಳು ಮಾಯವಾಗಿ, ಗ್ರಾಮಾಂತರ ಜೀವನಗಳು ನಿರ್ಭರವಾಗುತ್ತಿದೆ. ಹಳ್ಳಿಗರು ತಮ್ಮ ಕುಲಕಸುಬನ್ನು ಬಿಟ್ಟು, ಆಸ್ತಿಯನ್ನು ಬಂಡವಾಳಶಾಹಿಗಳಿಗೆ ಮಾರಿ, ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕರಾಗುತ್ತಿದ್ದಾರೆ. ಗ್ರಾಮ ಸಂಸ್ಕೃತಿ, ಗುಡಿ ಕೈಗಾರಿಕೆಗಳು ಮಾಯವಾಗಿವೆ. ಹಳ್ಳಿಯ ಯುವಕರು ಯಾವುದೇ ಕೆಲಸವಿಲ್ಲದೆ, ಯಾವುದೇ ವೃತ್ತಿಯಲ್ಲೂ ಪ್ರಣೀತರಾಗದೆ, ಪುಂಡ ಪೋಕರಿಗಳಾಗಿ, ವಿವಿಧ ವ್ಯಸನಿಗಳಾಗಿ, ಸರ್ಕಾರ ನೀಡುವ ಉಚಿತ ಸೌಲಭ್ಯಗಳನ್ನು ಪಡೆದು, ಸೋಮಾರಿಗಳಾಗಿ, ಅಡ್ಡದಾರಿ ಹಿಡಿದು ದೇಶಕ್ಕೆ ಮಾರಕರಾಗುತ್ತಿದ್ದಾರೆ.

ಈ ಎಲ್ಲ ಪರಿಸ್ಥಿತಿಯನ್ನು ಹಿಮ್ಮೊಗವಾಗಿ ತಿರುಗಿಸಲು ಸಾಧ್ಯವೆ? ಇವಕ್ಕೆ ಪರಿಹಾರಗಳೇನು? 

೧. ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಗೆ ಕಡಿವಾಣ ಹಾಕಬೇಕು. 

೨. ಸರ್ಕಾರವು ಉಚಿತ ಪಡಿತರ ಮುಂತಾದ ಸಾಮಗ್ರಿಗಳನ್ನು ನೀಡುವುದು ತಪ್ಪಬೇಕು.

೩. ಕಾರ್ಮಿಕರಿಗೆ, ಆರ್ಥಿಕವಾಗಿ ಹಿಂದುಳಿದ ಜನರಿಗೆ, ಅವರ ವೃತ್ತಿಗೆ ಅವಶ್ಯವಾದ ಸಾಮಗ್ರಿಗಳನ್ನು ನೀಡಿ, ಕೆಲಸ ಮಾಡಲು ಪ್ರೋತ್ಸಾಹಿಸಬೇಕು.  

೪. ಜಾತಿ ವ್ಯವಸ್ಥೆ ದೇಶಕ್ಕೇ ಮಾರಕ. ಇದು ಯುವಕರ ಸ್ವಾಭಿಮಾನ, ಆತ್ಮಸ್ಥೈರ್ಯಗಳನ್ನು ಕುಗ್ಗಿಸಿದೆ. ಇದನ್ನು ಮೊದಲು ತೊಡೆಯಬೇಕು.

೫. ಕುಲಕಸುಬು-ವೃತ್ತಿಧರ್ಮಗಳನ್ನು ಎಲ್ಲರೂ ಗೌರವಿಸುವಂತಾಗಬೇಕು. ಸರ್ಕಾರದಿಂದ ಅವುಗಳಿಗೆ ಪ್ರೋತ್ಸಾಹ, ಸವಲತ್ತುಗಳು ದೊರಕಬೇಕು. 

೬. ಪ್ರತಿಯೊಂದು ಹಳ್ಳಿಯಲ್ಲಿಯೂ ನಮಗೀಗ ಉತ್ತಮ ನಡೆವಳಿಕೆಯ, ದೇಶದ ಬಗ್ಗೆ ಕಳಕಳಿಯುಳ್ಳ, ನಿಸ್ವಾರ್ಥ ಯುವ ಕಟ್ಟಾಳುಗಳು ಬೇಕಿದ್ದಾರೆ.

೭. ಇಂತಹ ಯುವ ನಾಯಕರನ್ನು ಗ್ರಾಮದ ಹಿರಿಯರು ಪ್ರೋತ್ಸಾಹಿಸಿ, ಬೆಳೆಸಬೇಕು. ಗ್ರಾಮದ ಪುಂಡರನ್ನು, ನಿಷ್ಪ್ರಯೋಜಕರನ್ನು ತಿರಸ್ಕರಿಸಬೇಕು. 

೮. ಗ್ರಾಮಾಂತರ ಪ್ರದೇಶಗಳ ಗಡಿಗಳನ್ನು ಗುರುತಿಸಿ, ಉಳಿಸಬೇಕು ಮತ್ತು ಅವು ಪರರ ಪಾಲಾಗುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು.

೯. ಅದರಲ್ಲೂ ಕೃಷಿಭೂಮಿಯನ್ನು, ವಾಣಿಜ್ಯದ ಉದ್ದೇಶಕ್ಕೆ ಪರಿವರ್ತಿಸುವ ಆದೇಶ ಖಂಡಿತ ನಿಲ್ಲಬೇಕು.

೧೦. ಜನ ಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಂಡು, ಪ್ರಾಮಾಣಿಕ ಯುವಕರೊಡಗೂಡಿ, ಗ್ರಾಮಾಭಿವೃದ್ಧಿಗೆ ನಿಷ್ಠೆಯಿಂದ ಕೈಜೋಡಿಸಬೇಕು.

ಹೀಗೆ ಆದಾಗ ಮಾತ್ರ ನಾವು ಗಾಂಧೀಜಿಯವರ ರಾಮರಾಜ್ಯ, ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತ್ ಮುಂತಾದ ಕನಸುಗಳನ್ನು ನನಸಾಗಿಸಲು ಮತ್ತು ನಮ್ಮ ದೇಶವನ್ನು ಪ್ರಪಂಚದ ಮುಂಚೂಣಿಗೆ ತರಲು ಸಾಧ್ಯ.



No comments: