Friday, October 5, 2012

ಶುಕ್ರ ಸಂಭ್ರಮ

ಜೂನ್ ಆರರಂದು ಘಟಿಸಿದ ಶುಕ್ರ ಸಂಕ್ರಮದ ವಿಚಾರವಾಗಿ ಬರೆಯಬೇಕೆಂದು ಬಹಳ ಹಿಂದೆಯೇ ಅಂದುಕೊಂಡಿದ್ದೆ. ಆದರೆ ಸಣ್ಣ ಅಪಘಾತದಲ್ಲಿ ಬಲಗೈಯ ಮೊಣಕೈ ಮೂಳೆ ಮುರಿದುಕೊಂಡಿದ್ದರಿಂದ ಸಾಧ್ಯವಾಗಲಿಲ್ಲ. ಡಾ. ಬಿಶನ್ ನನ್ನ ಅಂಗೈ, ಮಣಿಕಟ್ಟು, ಮುಂಗೈ ಎಲ್ಲಾ ಸೇರಿಸಿ ಗಾರೆ ಕಲಸಿ ಮೆತ್ತಿಬಿಟ್ಟಿದ್ದ! ಕಳೆದ ಒಂದೂವರೆ ತಿಂಗಳು ನಿಸ್ಸಹಾಯಕನಾದ ವಿಕಲಾಂಗ ಚೇತನನಾಗಿಬಿಟ್ಟಿದ್ದೆ.

        ಶುಕ್ರಗ್ರಹಣ ನಮ್ಮ ಊರಿನ ಮಟ್ಟಿಗೆ ಅತ್ಯಂತ ನೀರಸವಾದ ವಿದ್ಯಮಾನವಾಗಿತ್ತು. ಕೊಡಗಿನಲ್ಲಿ ಜೂನ್ ಐದರಿಂದಲೇ ಮಳೆಗಾಲ ಶುರುವಾಗಿಬಿಟ್ಟಿತ್ತು.  ಮಾರನೆ ದಿವಸ ಸೂರ್ಯನಿಗೂ ನಮಗೂ ಮಧ್ಯೆ ಮೋಡದ ಬೃಹತ್ ಗೋಡೆಯೇ ಸಿದ್ಧವಾಗಿತ್ತು. ಆಕಾಶ ಹೋಗಲಿ, ಎದುರುಗಡೆಯ ಬೆಟ್ಟವೂ ಮೋಡದಿಂದ ಮುಸುಕಿಹೋಗಿತ್ತು! ಎರಡು ಶಾಲೆಗಳಲ್ಲಿ ಈ ಅಪರೂಪದ ಸನ್ನಿವೇಶವನ್ನು ವಿದ್ಯಾರ್ಥಿಗಳಿಗೆ ತೋರಿಸಲೆಂದು ವಿಶೇಷ  ಕನ್ನಡಕಗಳೊಂದಿಗೆ, ಸಕಲ ವ್ಯವಸ್ಥೆಗಳನ್ನೂ ಮಾಡಿಕೊಂಡಿದ್ದರು. ಕೆಲವು ಮಕ್ಕಳಿಗಂತೂ ಏನು ನಡೆಯುತ್ತಿದೆಯೆಂದೇ ಗೊತ್ತಿರಲಿಲ್ಲ. ಮಳೆಯಲ್ಲಿಯೇ ಕೊಡೆ ಹಿಡಿದುಕೊಂಡು ಆಕಾಶ ನೋಡುತ್ತಿದ್ದರು. ಆದರೆ ಒಂದಿನಿತೂ ಶುಕ್ರಗ್ರಹಣದ ದರ್ಶನವಾಗಲೇ ಇಲ್ಲ. ಕೊನೆಗೆ ಎಲ್ಲಾ ಮುಗಿದ ಮೇಲೆ ಹತ್ತೂವರೆ ಗಂಟೆಗೆ, ನಮ್ಮನ್ನು ಕೆಣಕಲೆಂದೇ, ಒಂದಷ್ಟು ಘಳಿಗೆ ಸೂರ್ಯ ಇಣುಕಿದ!

        ದೃಶ್ಯ ಮಾಧ್ಯಮಗಳಲ್ಲಿ ಒಂದು ಕ್ಷಣವೂ ಬಿಡದಂತೆ ಬೇರೆ ಬೇರೆ ನಗರಗಳಲ್ಲಿ ನಡೆಯುತ್ತಿದ್ದ ಗ್ರಹಣದ ಚಿತ್ರಗಳನ್ನು ತೋರಿಸುತ್ತಿದ್ದರು. ಹಲವಾರು ವಿಜ್ಞಾನಿಗಳು, ಸಂಪನ್ಮೂಲ ವ್ಯಕ್ತಿಗಳು, ನಿರಂತರ ಮಾಹಿತಿ ನೀಡುತ್ತಿದ್ದರು. ಇಂತಹ ಸಂದರ್ಭಗಳಲ್ಲಿ ಟಿವಿಯವರು ಇವರೊಂದಿಗೆ ಗಿಣಿಶಾಸ್ತ್ರ ಹೇಳುವ ಭಯಂಕರ ಬುರುಡೆ ದಾಸಯ್ಯರನ್ನೂ ಬಿಡದೆ ಕರೆತಂದುಬಿಡುತ್ತಾರೆ. ಅವರಂತೂ ಬಣ್ಣಬಣ್ಣದ ದಿರಿಸಿನಲ್ಲಿ ಮೈಯ್ಯೆಲ್ಲಾ ವಿಭೂತಿ, ಕುಂಕುಮ ಹಚ್ಚಿಕೊಂಡು, ಎಲ್ಲಾ ಗ್ರಹಗಳೂ ತಮ್ಮ ಕೈಯ್ಯಲ್ಲೇ ಇವೆಯೇನೋ ಎಂಬಂತೆ, ರೋಚಕವಾದ ಮಾತುಗಳಿಂದ ಸಾಮಾನ್ಯ ಜನರ ದಿಕ್ಕು ತಪ್ಪಿಸುತ್ತಿರುತ್ತಾರೆ. ಆದರೆ ಆಕಾಶ ತೋರಿಸಿಕೊಂಡು ಬರೇ ವಿಜ್ಞಾನ ಮಾತ್ರ ಹೇಳುತ್ತಿದ್ದರೆ, ಆ ಚಾನಲ್‌ನ ಟಿಆರ್‌ಪಿ ಬಿದ್ದುಹೋಗುವುದಿಲ್ಲವೆ? ಆದ್ದರಿಂದ ಸಿನೆಮಾ-ನಾಟಕಗಳಲ್ಲಿ ವಿದೂಷಕರಂತೆ ಅವರೂ ಮುಖ್ಯ ಅಂದುಕೊಳ್ಳಬೇಕು!

        ಈ ಬಾರಿ ಜರುಗಿದ ಅಮೋಘ ಶುಕ್ರಗ್ರಹಣದ ಬಗ್ಗೆ ಸವಿವರವಾಗಿ, ಮನಮುಟ್ಟುವಂತೆ, ಅತ್ಯಂತ ಪ್ರಬುದ್ಧವಾಗಿ ಮೈಸೂರಿನ ಪ್ರೊ. ಎಸ್. ಎನ್. ಪ್ರಸಾದ್‌ರವರು ತಮ್ಮ ಬ್ಲಾಗ್‌ನಲ್ಲಿ ಎರಡು ವಾರಗಳ ಕಂತುಗಳಲ್ಲಿ ವಿವರಿಸಿದ್ದಾರೆ. ದಯವಿಟ್ಟು ಓದುಗರು ಅವರ ಬ್ಲಾಗ್‌ಗೆ ತೆರಳಲು ಇಲ್ಲಿ ಕ್ಲಿಕ್ ಮಾಡಿ.

        ಶುಕ್ರಗ್ರಹವು ಸೂರ್ಯನ ಸುತ್ತ ೨೨೫ ದಿನಗಳಿಗೊಮ್ಮೆ ಸುತ್ತುತ್ತದೆ. ಆದರೆ ಭೂಮಿಗೂ ಸೂರ್ಯನಿಗೂ ಮಧ್ಯೆ ಪ್ರತಿ ಸಾರಿ ಹಾದು ಹೋಗುವಾಗಲೂ ಗ್ರಹಣವಾಗುವುದಿಲ್ಲ. ಏಕೆಂದರೆ ಪ್ರತೀ ಬಾರಿಯೂ ನಮ್ಮ ಮತ್ತು ಶುಕ್ರನ ಪಥಗಳು ಒಂದೇ ಸಮತಲ ಮಟ್ಟದಲ್ಲಿ ಇರುವುದಿಲ್ಲ. ಆದ್ದರಿಂದ ಶುಕ್ರಗ್ರಹ ಸಾಮಾನ್ಯವಾಗಿ ಸೂರ್ಯನ ಉತ್ತರಕ್ಕೋ-ದಕ್ಷಿಣಕ್ಕೋ ಹಾದುಹೋಗುತ್ತದೆ. ನಮ್ಮಗಳ ಗಾತ್ರಕ್ಕೆ ಹೋಲಿಸಿದರೆ ನಮ್ಮ-ನಮ್ಮ ನಡುವೆ ಪರಸ್ಪರ ದೂರ ಊಹಿಸಲೂ ಆಗದಷ್ಟು ಅಗಾಧ! ಸೂರ್ಯ-ಶುಕ್ರ-ಭೂಮಿ ಮೂವರೂ ಒಂದೇ ಮಟ್ಟದಲ್ಲಿ ಬಂದಾಗ ಮಾತ್ರ ಹೀಗೆ ಗ್ರಹಣವಾಗುತ್ತದೆ. ಹೀಗೆ ಸೂರ್ಯನ ಮುಂದುಗಡೆಯಲ್ಲೇ ಶುಕ್ರಗ್ರಹ ಹಾದು ಹೋಗುವಾಗ ಸೂರ್ಯನ ಮೇಲೆ ಒಂದು ಸಣ್ಣ ಚುಕ್ಕೆ ನಿಧಾನವಾಗಿ ಅಡ್ಡಡ್ಡಕ್ಕೆ ಚಲಿಸಿದಂತೆ ತೋರುತ್ತದೆ.



        ಆಕಾಶದಲ್ಲಿ ಈ ಗ್ರಹಗಳು, ನಕ್ಷತ್ರಗಳು ಮತ್ತು ವಿವಿಧ ಆಕಾಶಕಾಯಗಳು ನಿರಂತರವಾಗಿ ಆಡುವ ಜೂಟಾಟ, ಕಣ್ಣಾಮುಚ್ಚಾಲೆ ಆಟಗಳನ್ನು ನೋಡುವುದೇ ಚಂದ! ಅದೊಂದು ವಿಶಿಷ್ಟ ಅನುಭವ. ಮೇಲ್ನೋಟಕ್ಕೆ ನೋಡಲು ಯರ್ರಂಬಿರ್ರಿಯಾಗಿ ಕಂಡರೂ ಈ ಆಟಗಳಲ್ಲಿ ಒಂದು ರೀತಿಯ ವ್ಯವಸ್ಥಿತ ಚಕ್ರಗಳಿವೆಯೆಂಬುದನ್ನು ಶುಕ್ರಗ್ರಹದಲ್ಲಿ ಬಹಳ ಚೆನ್ನಾಗಿ ಕಾಣುತ್ತೇವೆ.

        ಶುಕ್ರ ಸಂಕ್ರಮ ಎನ್ನುವುದು ಸರಿಯಾಗಿ ನೂರಾಐದೂವರೆ ವರ್ಷ - ನೂರ ಇಪ್ಪತ್ತೊಂದೂವರೆ ವರ್ಷಗಳಿಗೊಂದು ಸಾರಿ ಜರುಗುವ ಕೌತುಕ. ಮತ್ತು ಹೀಗೆ ಪ್ರತಿ ಸಾರಿ ಬಂದಾಗ ಎಂಟು ವರ್ಷಗಳ ಅಂತರದಲ್ಲೇ ಎರಡು ಬಾರಿ ಸೂರ್ಯನ ಮುಂದೆ ಹಾದುಹೋಗುತ್ತದೆ. ಸರಿಸುಮಾರು ಶತಮಾನಕ್ಕೊಂದು ಬಾರಿ ಜರುಗುವ ಈ ವಿಸ್ಮಯ ಒಂದು ರೀತಿಯ ಡಬಲ್ ಧಮಾಕ! ಮೊನ್ನೆ, ಜೂನ್ ೬, ೨೦೧೨ ಕ್ಕೆ ಮುಂಚೆ ಜೂನ್ ೮, ೨೦೦೪ರಂದೂ ಶುಕ್ರ ಗ್ರಹಣವಾಯಿತು. ಅದಕ್ಕೂ ಮುಂಚೆ ಶುಕ್ರಗ್ರಹಣವಾದದ್ದು ೧೮೮೨ನೇ ಇಸವಿಯಲ್ಲಿ! ಹೀಗೆ ಸೂರ್ಯನ ಮುಂದೆ ಶುಕ್ರನ ಮೆರವಣಿಗೆ ನಡೆದ ಕಾಲಗಳನ್ನು ಹೇಳಿದರೆ ನಿಮಗೆ ಈ ವಿಷಯ ಇನ್ನೂ ವಿಶದವಾಗುತ್ತದೆ. ಆಧುನಿಕ ವಿಜ್ಞಾನ ಯುಗದಲ್ಲಿ ಮೊದಲನೆ ಬಾರಿಗೆ ೧೬೩೯ರ ಗ್ರಹಣದ ಬಗ್ಗೆ ಭವಿಷ್ಯ ನುಡಿದದ್ದು ಇಂಗ್ಲೆಂಡಿನ ಜೆರೆಮಿಯಾ ಹೊರ್ರಾಕ್ಸ್ ಎಂಬುವವನು.

ಸರದಿ-ಸರಣಿ:

(+121.5) 26-05-1518 ಮತ್ತು 23-05-1526
(+105.5) 07-12-1631 ಮತ್ತು 04-12-1639
(+121.5) 06-06-1761 ಮತ್ತು 03-06-1769
(+105.5) 09-12-1874 ಮತ್ತು 06-12-1882
(+121.5) 08-06-2004 ಮತ್ತು 06-06-2012
(+105.5) 11-12-2117 ಮತ್ತು 08-12-2125
(+121.5) 11-06-2247 ಮತ್ತು 09-06-2225
(+105.5) 13-12-2360 ಮತ್ತು 10-12-2368
(+121.5) 12-06-2490 ಮತ್ತು 10-06-2498 ......

ಇದರೊಂದಿಗೆ ಕೆಲವು ಸ್ವಾರಸ್ಯಕರ ಘಟನೆಗಳನ್ನು ನೋಡಿ:

* ಬುಧ-ಶುಕ್ರ ಇಬ್ಬರೂ ಸೂರ್ಯನ ಮುಂದೆ ಹಾದುಹೋಗುವ ದೃಶ್ಯ ಭೂಮಿಯಿಂದ ಕಾಣಬಹುದೆ? ಹೌದು. ಇದು ನಡೆದದ್ದು ಕ್ರಿಸ್ತಪೂರ್ವ 22ನೇ ಸೆಪ್ಟೆಂಬರ್ 3,73,173ರಂದು. ಮತ್ತೊಂದು ಬಾರಿ ಇದು ಕ್ರಿಸ್ತಶಕ 26 ಸೆಪ್ಟೆಂಬರ್ 69,163ರಂದು ಜರುಗಲಿದೆ! ಬದುಕಿದ್ದರೆ ನೀವೂ ನೋಡಬಹುದು.

* ಸೂರ್ಯಗ್ರಹಣವಾದಂದೇ ಶುಕ್ರಗ್ರಹಣವೂ ಆಗಬಹುದೇ? ಹೌದು. ಇದು ಕ್ರಿಸ್ತಪೂರ್ವ 1ನೇ ನವೆಂಬರ್ 15,607ರಂದು ನಡೆದಿತ್ತು ಮತ್ತು 5ನೇ ಏಪ್ರಿಲ್ 15,232ರಂದು ನಿಮ್ಮ ಮರಿ-ಮರಿ-ಮರಿ.... ಮಕ್ಕಳು ನೋಡಿ ಆನಂದಿಸಬಹುದು!

* ಜೂನ್ 3, 1769ರಂದು ಶುಕ್ರಗ್ರಹಣವಾಯ್ತಲ್ಲ, ಅದರ ಮಾರನೇ ದಿನವೇ ಸಂಪೂರ್ಣ ಸೂರ್ಯಗ್ರಹಣವೂ ಆಗಿತ್ತು!

        ಈಗ ಬಿಡಿ, ಕಂಪ್ಯೂಟರ್ ತಂತ್ರಜ್ಞಾನ ಮುಂದುವರಿದಂತೆ ಸೌರಮಂಡಲದ, ಒಂದು ಕೋಟಿ ನಕ್ಷತ್ರಗಳ, ಲಕ್ಷಾಂತರ ಬ್ರಹ್ಮಾಂಡಗಳ, ಒಂದು ಲಕ್ಷ ವರ್ಷ ಆಚೆ-ಈಚೆ ನಡೆದ-ನಡೆಯುವ ವೃತ್ತಾಂತಗಳ ಅತ್ಯಂತ ನಿಖರವಾದ ಮಾಹಿತಿಯುಳ್ಳ ಖಗೋಳ ತಂತ್ರಾಂಶವೂ ಬಂದಿದೆ!



     
        ಮೊನ್ನೆ ಟಿವಿ ಕಾರ್ಯಕ್ರಮದಲ್ಲಿ, ಶುಕ್ರ ಸಂಕ್ರಮದ ಈ ವಿಚಾರವೆಲ್ಲ ಪುರಾತನ ಭಾರತೀಯ ಜ್ಯೋತಿಶ್ಶಾಸ್ತ್ರಜ್ಞರಿಗೆ ಮೊದಲೇ ಗೊತ್ತಿತ್ತು ಅಂತ ಒಬ್ಬ ಬೃಹಸ್ಪತಿ ಬೊಗಳೆ ಬಿಟ್ಟಿದ್ದ! ಇದು ನಿಜವೇ? ಈ ವಿಚಾರವನ್ನು ತಿಳಿದುಕೊಳ್ಳಲು ನಾನು ನನಗೆ ಪರಿಚಯವಿದ್ದ, ಜ್ಯೋತಿಷದ ಬಗ್ಗೆ ಶಾಸ್ತ್ರೀಯವಾಗಿ ಓದಿ-ತಿಳಿದುಕೊಂಡಿದ್ದ, ಮೂರು ಪಂಡಿತರನ್ನು ವಿಚಾರಿಸಿದೆ. ಅವರಲ್ಲು ಕಾರ್ಪೊರೇಷನ್ ಬ್ಯಾಂಕ್‌ನ ಶ್ರೀ ಗೋಪಾಲಕೃಷ್ಣ ಭಟ್ಟರು, “ಭಾರತೀಯ ಖಗೋಳ ವಿಜ್ಞಾನದಲ್ಲಿ ಶುಕ್ರಗ್ರಹದ ಪಥದ ಬಗ್ಗೆ ಅಮೂಲಾಗ್ರವಾದ, ಕರಾರುವಾಕ್ಕಾದ ಲೆಕ್ಕಾಚಾರವಿದೆಯೇ ವಿನಃ ಗ್ರಹಣದ ಬಗ್ಗೆ ಮಾಹಿತಿಯಾಗಲೀ ಸೂತ್ರಗಳಾಗಲೀ ಇಲ್ಲ,” ಎಂದು ಖಚಿತವಾಗಿ ಹೇಳಿದರು.

        ಆದರೆ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ಬಗ್ಗೆ ಅತ್ಯಂತ ನಿಖರವಾದ ಲೆಕ್ಕಾಚಾರವನ್ನು ಸಾವಿರಾರು ವರ್ಷಗಳಿಂದ ಭಾರತದ ಜ್ಯೋತಿಷಿಗಳು ಮಾಡುತ್ತಲೇ ಬಂದಿರುವುದನ್ನು ನಾವು ಮಹಾಭಾರತದ ಕಾಲದಿಂದಲೂ ನೋಡುತ್ತೇವೆ. ನೀವು ಈವತ್ತು ಯಾವುದೇ ಪಂಚಾಂಗ ತೆರೆದು ನೋಡಿ. ಈ ಗ್ರಹಣಗಳ ವಿಚಾರವಾಗಿ ನಿಮಗೆ ವಿವರಗಳು ದೊರಕುತ್ತವೆ. ಒಂದು ಗ್ರಹಣವಾದರೆ ಅದು ಯಾವ ಊರಿನಲ್ಲಿ, ಹಿಡಿಯುವುದು ಯಾವಾಗ, ಬಿಡುವುದು ಎಷ್ಟು ಹೊತ್ತಿಗೆ ಎಂಬಿತ್ಯಾದಿ ವಿವರಗಳನ್ನು ನೋಡುವಾಗ ನಿಮಗೇ ಅಶ್ಚರ್ಯವಾಗಬಹುದು. ಇಲ್ಲಿ ಅವುಗಳು ಹಿಡಿಯುವ-ಬಿಡುವ ವೇಳೆಗಳು ಡೆಲ್ಲಿಗೆ ಬೇರೆ, ಕಾಶಿಗೆ ಬೇರೆ, ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಹಾಸನ, ಮಡಿಕೇರಿ ಎಲ್ಲವೂ ಬೇರೆ ಬೇರೆ! ಈ ಲೆಕ್ಕಾಚಾರಗಳನ್ನು ಮಾಡುವಾಗ ಈ ನಗರಗಳಿಗಿರುವ ಪರಸ್ಪರ ದೂರವನ್ನು ಅಳೆಯುವುದಿಲ್ಲ ಬದಲಿಗೆ ಅವುಗಳ ನಡುವಣ ಕೋನಗಳನ್ನು ಪರಿಗಣಿಸುತ್ತಾರೆ ಎನ್ನುವುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಅಂದರೆ ಅಯಾ ನಗರಗಳ ಅಕ್ಷಾಂಶ-ರೇಖಾಂಶ ಬಹಳ ಮುಖ್ಯ. ಯಾವಾಗ ನೀವು ಕೋನಗಳನ್ನು ಬಳಸಿಕೊಂಡು ಲೆಕ್ಕಾಚಾರ ಶುರು ಮಾಡಿದಿರೋ ಆಗಲೇ ನೀವು ಟ್ರಿಗ್ನಾಮೆಟ್ರಿ ಬಳಸಲು ತೊಡಗಿದಿರಿ ಎಂದರ್ಥ! ಪೈ, ಸೈನ್, ಕಾಸ್, ತೀಟ.. ಈ ಪಾಠಗಳೆಲ್ಲ ಆವತ್ತೇ ಭಾರತೀಯ ಜ್ಯೋತಿಷಿಗಳಿಗೆ ಆಗಿತ್ತು ಎಂಬುದು ನಿಜ. ಆಶ್ಚರ್ಯದ ವಿಚಾರ ಏನೆಂದರೆ ಆ ಕಾಲದ ಕೋಷ್ಟಕಗಳು, ಸೂತ್ರಗಳು ಈವತ್ತಿಗೂ ಬದಲಾಗಿಲ್ಲ. ಸಾವಿರಾರು ವರ್ಷಗಳಲ್ಲಿ ಖಗೋಳದಲ್ಲಾಗಬಹುದಾದ ಸಣ್ಣ-ಪುಟ್ಟ ಬದಲಾವಣೆಗಳನ್ನೆಲ್ಲ ಆ ಸೂತ್ರಗಳಲ್ಲೇ ಅಳವಡಿಸಿದ್ದರು!

        ಭಾರತೀಯ ಜ್ಯೋತಿಷವನ್ನು ವಿಜ್ಞಾನ ಎಂದು ಕರೆಯಬೇಕೆ ಅಥವಾ ಅದೊಂದು ಟೊಳ್ಳು ಕವಡೆ-ಗಿಣಿ ಶಾಸ್ತ್ರವೇ? ಈ ವಿಚಾರವನ್ನು ನೀವು ತಿಳಿಯಬೇಕಾದರೆ ಪ್ರಾತಃಸ್ಮರಣೀಯರಾದ ಪ್ರೊ. ಜಿ. ಟಿ. ನಾರಾಯಣರಾವ್‌ರವರ ‘ಜಾತಕ ಮತ್ತು ಭವಿಷ್ಯ’ ಪುಸ್ತಕವನ್ನು ಓದಬೇಕು. ಪುಸ್ತಕದ ಗಾತ್ರ ಸಣ್ಣದಾಗಿದ್ದರೂ ಅದರೊಳಗಿನ ಹೂರಣ ಅಮೃತ ರಸಪಾನ! ಭಾರತೀಯ ಜ್ಯೋತಿಶ್ಶಾಸ್ತ್ರದಲ್ಲಿ ಒಟ್ಟು ನವಗ್ರಹಗಳಿವೆ. ಆ ಗ್ರಹಗಳು ಬೇರೆ, ಆಧುನಿಕ ವಿಜ್ಞಾನದಲ್ಲಿ ಹೇಳುವ ಗ್ರಹಗಳು ಬೇರೆ. ಆಲ್ಲಿ ಸೂರ್ಯ, ಚಂದ್ರರೂ ಗ್ರಹಗಳೇ! ಇಂದು ಅವುಗಳ ಬದಲಿಗೆ ಭೂಮಿ, ಯುರೇನಸ್, ನೆಪ್ಟ್ಯೂನ್‌ಗಳು ಸೇರಿ ಒಟ್ಟು ಎಂಟು ಗ್ರಹಗಳು. (ಮೂರ್ನಾಲ್ಕು ವರ್ಷಗಳ ಹಿಂದೆ ಇಲ್ಲಿಯೂ ನವ-ಗ್ರಹಗಳೇ ಇದ್ದವು. ಪ್ಲೂಟೋವನ್ನು ಆ ಪಟ್ಟಿಯಿಂದ ತೆಗೆದುಹಾಕಿದ ಮೇಲೆ ಈಗ ಎಂಟಾಗಿವೆ). ಅಲ್ಲಿ ಜೊತೆಗೆ ಎರಡು ವಿಶೇಷ ಜೋಡಿ ಗ್ರಹಗಳು: ರಾಹು ಮತ್ತು ಕೇತು! ಪ್ರಪಂಚದ ಇನ್ನಾವುದೇ ಖಗೋಳ ಪದ್ಧತಿಯಲ್ಲಿಯೂ ಇಲ್ಲದ ಈ ಗ್ರಹಗಳಾವುವು?

        ಪ್ರೊ. ಜಿಟಿಎನ್ ಮಾತುಗಳಲ್ಲಿಯೇ ಕೇಳೋಣ. “ರಾಹು ಮತ್ತು ಕೇತು ಎಂಬ ನಿರ್ದಿಷ್ಟ ನೆಲೆಗಳಿಗೆ- ಅಲ್ಲಿ ಬೊಟ್ಟು ಮಾಡಿ ತೋರಿಸಲು ಯಾವುದೇ ಭೌತಕಾಯ ಇಲ್ಲದಿದ್ದರೂ- ಇತರ ಗ್ರಹಗಳಷ್ಟೆ ಪ್ರಾಮುಖ್ಯ ಒದಗಿತು. (ತುಸು ಹೆಚ್ಚಾಗಿ ಕೂಡ: ದುಷ್ಟರಿಗೆ ಮೊದಲ ಮಣೆ!) ಇವು ಸೂರ್ಯ ಅಥವಾ ಚಂದ್ರನಿಗೆ ಛಾಯೆ ಬಳಿಯುವುದರಿಂದಲೂ ಸ್ವತಃ ಇವುಗಳಿಗೆ ಘನ ಅಸ್ತಿತ್ವ ಇಲ್ಲದಿರುವುದರಿಂದಲೂ ಛಾಯಾಗ್ರಹಗಳೆಂದೇ (ಕು)ಪ್ರಸಿದ್ಧವಾದುವು.”



        ಸೂರ್ಯನ ಸುತ್ತ ಸುತ್ತುತ್ತಿರುವ ಭೂಮಿಯ ಪಥಕ್ಕೆ ಕ್ರಾಂತಿವೃತ್ತ ಎನ್ನುತ್ತಾರೆ. ಭೂಮಿಯ ಸುತ್ತ ತಿರುಗುತ್ತಿರುವ ಚಂದ್ರನ ಪಥಕ್ಕೆ ಚಾಂದ್ರಕಕ್ಷೆ ಎನ್ನುತ್ತಾರೆ. ಇವುಗಳ ಕಕ್ಷೆಗಳು ಪರಸ್ಪರ ಸಂಧಿಸುವ ಪಾತಬಿಂದುಗಳೇ ರಾಹು ಮತ್ತು ಕೇತು! ಭೂಮಿ ಮತ್ತು ಚಂದ್ರರು ಅವರವರ ಕಕ್ಷೆಯಲ್ಲಿ ಸುತ್ತುತ್ತಿದ್ದಂತೆ, ಈ ರಾಹು-ಕೇತುಗಳ ನೆಲೆಗಳೂ ನಿರಂತರವಾಗಿ ದಲಾಗುತ್ತಿರುತ್ತವೆ. ನೆನಪಿಡಿ: ಆಕಾಶದಲ್ಲಿ ಕ್ರಾಂತಿವೃತ್ತವಾಗಲೀ, ಚಾಂದ್ರಕಕ್ಷೆಯಾಗಲೀ ಕಣ್ಣಿಗೆ ಕಾಣುವ ಗೆರೆಗಳಲ್ಲ! ಅಲ್ಲಿ ರಾಹು-ಕೇತುಗಳು ಬರಿಗಣ್ಣಿಗೆ ಕಾಣದ ನೆಲೆಗಳು. ಗ್ರಹಣದ ಲೆಕ್ಕಾಚಾರಗಳಿಗೆ ಇವು ಬಹು ಮುಖ್ಯ.

        ಚಾಂದ್ರಕಕ್ಷೆಯ ಮೇಲೆ ತಿಂಗಳಿಗೊಮ್ಮೆ ಚಂದ್ರನು, ಭೂಮಿ ಮತ್ತು ಸೂರ್ಯನ ನಡುವೆ ಬರುತ್ತಾನೆ, ಆವತ್ತು ಅಮಾವಾಸ್ಯೆ. ಹದಿನೈದು ದಿನಗಳ ನಂತರ ಅವನು ಭೂಮಿಯ ಇನ್ನೊಂದು ಬದಿಗೆ ಬರುತ್ತಾನೆ, ಆವತ್ತು ಹುಣ್ಣಿಮೆ. ಮೂವರೂ ಪ್ರತಿ ತಿಂಗಳೂ ಎರಡು ಬಾರಿ ಸಾಲಾಗಿ ಬರುವುದರಿಂದ ಪ್ರತಿ ಅಮಾವಾಸ್ಯೆಯ ದಿನ ಚಂದ್ರ ಸೂರ್ಯನನ್ನು ಹಾದು ಹೋಗಬೇಕು, ಅಂದರೆ ಸೂರ್ಯಗ್ರಹಣವಾಗಬೇಕು. ಹಾಗೆಯೇ ಪ್ರತಿ ಹುಣ್ಣಿಮೆಯಂದೂ ಭೂಮಿಯ ನೆರಳು ಚಂದ್ರನ ಮೇಲೆ ಹಾದುಹೋಗಬೇಕು, ಅಂದರೆ ಚಂದ್ರಗ್ರಹಣವಾಗಬೇಕು. ಆದರೆ ಇದು ನಡೆಯುವುದಿಲ್ಲವಲ್ಲ?

        ಇದು ಏಕೆಂದರೆ ಪ್ರತಿ ಬಾರಿ ಈ ಮೂವರೂ ಒಂದೇ ಸಮ ಮಟ್ಟದಲ್ಲಿರುವುದಿಲ್ಲ. ಈ ಆಕಾಶಕಾಯಗಳ ಗಾತ್ರಕ್ಕೆ ಹೋಲಿಸಿದರೆ ಅವುಗಳ ಪರಸ್ಪರ ದೂರ ಅತ್ಯಂತ ಅಗಾಧ! ಕ್ರಾಂತಿವೃತ್ತ ಮತ್ತು ಚಾಂದ್ರಕಕ್ಷೆ ಒಂದೇ ಸಮಮಟ್ಟದಲ್ಲಿದ್ದರೆ, ಮಾತ್ರ ಗ್ರಹಣಗಳು ಸಂಭವಿಸುತ್ತವೆ.

        ಇಷ್ಟೆಲ್ಲಾ ಏಕೆ ಹೇಳಿದೆನೆಂದರೆ, ಭಾರತೀಯ ಖಗೋಳಶಾಸ್ತ್ರಜ್ಞರು ಚಂದ್ರಗ್ರಹಣ-ಸೂರ್ಯಗ್ರಹಣಗಳ ಬಗ್ಗೆ ಖಡಾಖಂಡಿತವಾದ ಮಾಹಿತಿ ನೀಡುತ್ತಿದ್ದ ಹಾಗೆ ಉಳಿದ ಗ್ರಹಗಳು ಸೂರ್ಯನನ್ನು ಹಾದು ಹೋಗುವ ವಿಚಾರ ಹೇಳಿಯೇ ಇಲ್ಲ! ನೀವು ಸರಿಯಾಗಿ ಗಮನಿಸಿದರೆ ಬುಧ ಮತ್ತು ಶುಕ್ರ ಗ್ರಹಗಳ ಪಥಗಳು ಭೂಮಿಯ ಪಥದ ಒಳಗಡೆಯಿರುವುದರಿಂದ, ಅವು ಮಾತ್ರ ಸೂರ್ಯನ ಮುಂದೆ ಹಾದು ಹೋಗುವ ದೃಶ್ಯ ನಮಗೆ ಕಾಣಬಹುದು. ಮಂಗಳನಾಗಲೀ, ಗುರುವಾಗಲೀ, ಶನಿಯಾಗಲೀ ಸೂರ್ಯನ ಹಿಂದುಗಡೆಯಿಂದ ಹಾದುಹೋಗಿಬಿಡುತ್ತವೆ. ಅವು ಸುತಾರಾಂ ನಮಗೆ ಕಾಣುವುದೇ ಇಲ್ಲ.

        ಸೂರ್ಯ-ಭೂಮಿ-ಚಂದ್ರ ಈ ಮೂವರ ಜೊತೆಗೆ ರಾಹು ಮತ್ತು ಕೇತು, ಒಟ್ಟು ಐದು ಮಂದಿ ಸಂಧಿಸುವ ಸಂದರ್ಭಗಳನ್ನು ಹೆಚ್ಚು ನಿಖರವಾಗಿ ಲೆಕ್ಕಾಚಾರ ಹಾಕಬಹುದು. ಉಳಿದ ಗ್ರಹಗಳಿಗೆ ರಾಹು-ಕೇತುಗಳನ್ನು ಕಲ್ಪಿಸಲು ಸಾಧ್ಯವಿಲ್ಲ. ಹಾಗಾಗಿ ಅವುಗಳ ಗ್ರಹಣದ ಬಗೆಗೂ ಲೆಕ್ಕಾಚಾರವಿಲ್ಲ.

        ಭಾರತೀಯ ಖಗೋಳ ವಿಜ್ಞಾನ ಒಂದು ಕಾಲಘಟ್ಟದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಇತಿಹಾಸದಲ್ಲಿ ದೇಶವು ಅನೇಕ ಧಾಳಿಗಳಿಗೆ ತುತ್ತಾಗಿ, ಅವರುಗಳ ಆಡಳಿತದಲ್ಲಿ ರಾಜಾಶ್ರಯ ಕಳೆದುಕೊಂಡು ತನ್ನ ಅಸ್ತಿತ್ವವನ್ನೇ ಕಳೆದುಕೊಂಡುಬಿಟ್ಟಿದೆ. ನಮ್ಮ ಶಾಲಾವಿದ್ಯಾರ್ಥಿಗಳ ಪಠ್ಯಗಳಲ್ಲಿ ಈ ಬಗ್ಗೆ ಒಂದಿಷ್ಟೂ ಮಾಹಿತಿ ಇಲ್ಲದಿರುವುದರಿಂದ ಅವರಿಗೆ ನಮ್ಮ ದೇಶದ ಪುರಾತನ ವಿಜ್ಞಾನಿಗಳ ವಿಚಾರ ಒಂದಿನಿತೂ ಗೊತ್ತೇ ಇಲ್ಲ. ಇಂತಹ ವಿಚಾರಗಳನ್ನೆಲ್ಲ ನಮ್ಮ ವಿದ್ಯಾರ್ಥಿಗಳು ತಿಳಿದುಕೊಳ್ಳದಿದ್ದರೇ ದೇಶ ಹೆಚ್ಚು ಸುರಕ್ಷಿತ ಎಂದು ಪಠ್ಯರಚನಾ ಪಂಡಿತರು ಭಾವಿಸಿದಂತಿದೆ. ಸಾವಿರಾರು ವರ್ಷಗಳ ಹಿಂದೆ ಈ ಋಷಿ-ಮುನಿಗಳು ಪ್ರಶಾಂತವಾದ ವನಗಳಲ್ಲಿ ಕುಟೀರಗಳನ್ನು ಕಟ್ಟಿಕೊಂಡು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದುರಿಂದ ಅವರನ್ನೆಲ್ಲ ಕಾಡುಮನುಷ್ಯರು ಎಂದೂ ಕರೆದಿದ್ದಾರೆ! ಇಂತಹ ಶೋಚನೀಯ ಪರಿಸ್ಥಿತಿಯಲ್ಲಿ ನಾವು ನಮ್ಮ ಮಕ್ಕಳಲ್ಲಿ ದೇಶಾಭಿಮಾನ, ರಾಷ್ಟ್ರಭಕ್ತಿ ಇವನ್ನೆಲ್ಲ ನಿರೀಕ್ಷಿಸುವುದಾದರೂ ಹೇಗೆ?








Wednesday, October 3, 2012

Wildlife Messages 2012



Life on Earth – a Large Extended Family

   Sunday, 30 September 2012

ArÉÇ oÉlkÉÑUrÉqÉç lÉåÌiÉ aÉhÉlÉÉ sÉbÉÑcÉãiÉxÉÉÇ |
ESÉUcÉËUiÉÉlÉÉÇ iÉÑ uÉxÉÑkÉæuÉ MÑüOÒÇûoÉMüqÉç  ||

Only small men discriminate and say ‘One is a relative; the other is a stranger’. For those who live magnanimously the entire world constitutes but a family.                                                                  
                                                      - Maha Upanishad (Chapter 6, Verse 72-73)

Dear friend,

This time I will tell you about the special medicinal plant that is traditionally used in my district. Aaati soppu or Madd Topp (Justicia wynaadensis) is a plant that is one of the nearly 260 species of plants that belong to Acanthaceae family. This plant grows only in the rain forests of Kodagu, S Canara, Wynaad and Nilgiri districts in western ghats of India. Every year on the 18th day of month of Cancer, that falls on 2nd or 3rd of  August, it is believed that this plant accumulates exceptional medicinal properties and exudes a special fragrance all around.




Kodavas traditionally collect the leaves and tender stem of this plant, extract the juice and prepare special sweet dishes. Popular belief is that, consuming this on the auspicious occasion keeps them away from diseases for the whole year. Many scientists have studied Madd Topp extensively in different laboratories and institutions. They have discovered some amazing scientific facts regarding this plant.

According to them, the plant on the particular day, accumulates many chemicals that include 8 types of Anti-oxidants, Poly-phenols, Flavanoids, 24 types of Phyto-chemicals and enzymes like catalases and peroxidases. These chemicals increase the immunity status in the body and effectively keep viruses and bacteria at bay, reduce bad cholesterol in the blood. Some of these chemicals also prevent cancer, bleeding tendencies, inflammation, and protect us from atherosclerosis and osteoarthritis, and lastly prevent degeneration of nerve cells that cause Alzheimer’s disease, thus keep the body ever healthy.



I strongly feel that this property is not confined to just Madd Topp, but to all members of the plant kingdom. It may be in the flowers or fruits, leaves or bark or roots, it appears that every plant displays its medicinal properties during a specific season of the year to its greatest possible level.  But why do they offer them to us and other animals? Every plant has learnt from instinctive experience that for its own well being and survival it is equally important that all animals have to be healthy at the same time. Plants and animals have learnt to appreciate the mutual needs and necessities, and have understood their responsibilities for their own healthy existence. Don’t you think that in its story, Madd Topp has a lesson for us?

Let us join hands to make our only Earth, a place where all elements of life can live in health, happiness and harmony.

Thank you.                                         

Special Wildlife Messenger of This Year

The Indian Pitta (Pitta brachyura) is a medium-sized, stubby-tailed bird that is mostly seen on the floor of forests or under dense undergrowth, foraging on insects in leaf litter often more easily detected by their calls. Indian Pittas breed mainly in the Himalayan foothills from northern Pakistan in the west and possibly up to Sikkim in the east. They also breed in the hills of central India and in the northern Western Ghats. They migrate to all parts of peninsular India and Sri Lanka in winter. Their seasonal movements are associated with the monsoon rains.

Total of hand-painted cards made: this year 1270; in 28 years 56,590. Total recipients: this year 1010; in 28 years 8340.

The Wildlife Message Cards are individually hand-painted and sent free to individuals throughout the world to mark the Wildlife Week. 




ಜೀವಸಂಕುಲ - ಒಂದು ವಿಸ್ತೃತ ಕುಟುಂಬ

ಭಾನುವಾರ, ೩೦ ಸೆಪ್ಟೆಂಬರ್ ೨೦೧೨

ಅಯಂ ಬನ್ಧುರಯಮ್ ನೇತಿ ಗಣನಾ ಲಘುಚೇತಸಾಂ |
ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್  ||
                                                     
                                                                                                       -  ಮಹಾ ಉಪನಿಷತ್, ೬: ೭೨-೭೩

ಮಿತ್ರರೆ,

ಈ ಬಾರಿ ನಿಮಗೆ ನಮ್ಮ ಕೊಡಗಿನಲ್ಲಿ ನೂರಾರು ವರ್ಷಗಳಿಂದ ಬಹು ಶ್ರದ್ಧೆಯಿಂದ, ಸಂಭ್ರಮ-ಸಡಗರದಿಂದ ನಾಡಹಬ್ಬದ ರೀತಿಯಲ್ಲಿ ಬಳಸಲ್ಪಡುತ್ತಿರುವ ಆಟಿಸೊಪ್ಪು ಅಥವಾ ಮದ್ದ್‌ತೊಪ್ಪ್ ಎಂಬ ವಿಶಿಷ್ಟ ಗಿಡದ ಬಗ್ಗೆ ಹೇಳುತ್ತೇನೆ. ಈ ಮದ್ದ್‌ತೊಪ್ಪ್ (Justicia wynaadensis) ಎಂಬ ಔಷಧೀಯ ಗಿಡ ಸುಮಾರು ೨೬೦ ಸಸ್ಯ ಪ್ರಬೇಧಗಳನ್ನೊಳಗೊಂಡ ಅಕೇಂಥೇಸಿ (Acanthaceae) ಕುಟುಂಬಕ್ಕೆ ಸೇರಿದೆ. ಇದು ಭಾರತದ ಪಶ್ಚಿಮಘಟ್ಟಗಳ ದಕ್ಷಿಣ ಕನ್ನಡ, ಕೊಡಗು, ವೈನಾಡು, ನೀಲಗಿರಿ ಪ್ರದೇಶಗಳಿಗೆ ಸೇರಿದ ಮಳೆಗಾಡುಗಳಲ್ಲಿ ಮಾತ್ರ ಬೆಳೆಯುತ್ತದೆ. ಕರ್ಕಾಟಕ ಮಾಸದ ೧೮ನೇ ದಿನ, ಅಂದರೆ, ಪ್ರತಿ ವರ್ಷ ಆಗಸ್ಟ್ ೨-೩ರಂದು ಈ ಗಿಡವು ಹಲವಾರು ಔಷಧೀಯ ಗುಣಗಳನ್ನು ಮೈಗೂಡಿಸಿಕೊಂಡು ವಿಶೇಷವಾದ ಪರಿಮಳವನ್ನು ಬೀರುತ್ತದೆ. 

ಸಾಂಪ್ರದಾಯಿಕವಾಗಿ ಕೊಡಗಿನಲ್ಲಿ ಈ ಸಮಯದಲ್ಲಿ ಮದ್ದ್‌ತೊಪ್ಪಿನ ಎಲೆ ಮತ್ತು ಕಾಂಡಗಳನ್ನು ಸಂಗ್ರಹಿಸಿ ಅದನ್ನು ನೀರಿನಲ್ಲಿ ಅಥವಾ ಹಾಲಿನಲ್ಲಿ ಕುದಿಸಿ, ಇದರಿಂದ ಹಲವಾರು ಸಿಹಿ ಖಾದ್ಯಗಳನ್ನು ತಯಾರಿಸಿ ಸಂಭ್ರಮದಿಂದ ಹಂಚಿಕೊಂಡು ತಿನ್ನುತ್ತಾರೆ. ವರ್ಷಕ್ಕೊಂದು ಬಾರಿ ಹೀಗೆ ಮದ್ದ್‌ತೊಪ್ಪಿನ ಖಾದ್ಯವನ್ನು ಸೇವಿಸುವುದರಿಂದ ಮುಂದಿನ ಒಂದು ವರ್ಷದವರೆಗೆ ಯಾವುದೇ ರೋಗಗಳೂ ತಮ್ಮನ್ನು ಕಾಡುವುದಿಲ್ಲ ಎಂಬುದು ಜನಪದದ ನಂಬಿಕೆ. ವೈಜ್ಞಾನಿಕವಾಗಿ ಮದ್ದ್‌ತೊಪ್ಪಿನ ಬಗ್ಗೆ ಹಲವು ವಿಶ್ವವಿದ್ಯಾಲಯಗಳ ಪ್ರಯೋಗಾಲಯಗಳಲ್ಲಿ, ಹಲವು ವಿಜ್ಞಾನಿಗಳು ಸಂಶೋಧನಾತ್ಮಕ ಅಧ್ಯಯನವನ್ನು ನಡೆಸಿದ್ದಾರೆ. ಈ ಸಂಶೋಧನೆಗಳಿಂದ ಪ್ರಪಂಚವೇ ಬೆರಗಾಗುವ ಅದ್ಭುತ ಸಂಗತಿಗಳು ಹೊರಬಿದ್ದಿವೆ. 

ವಿಜ್ಞಾನಿಗಳ ಪ್ರಕಾರ ಆಗಸ್ಟ್ ಮೊದಲ ವಾರದ ಸಮಯದಲ್ಲಿ ಮದ್ದ್‌ತೊಪ್ಪಿನಲ್ಲಿ ಅನೇಕ ಗುಣಗಳುಳ್ಳ ರಾಸಾಯನಿಕ ದ್ರವ್ಯಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಇವುಗಳಲ್ಲಿ ಮುಖ್ಯವಾದ ರಾಸಾಯನಿಕಗಳು, ೮ ವಿಧದ ಆಂಟಿ-ಆಕ್ಸಿಡೆಂಟ್‌ಗಳು, ಪಾಲಿ ಫೀನಾಲ್‌ಗಳು, ಫ್ಲೇವನಾಯ್ಡ್‌ಗಳು, ೨೪ ವಿಧದ ಫೈಟೋ ರಾಸಾಯನಗಳು ಮತ್ತು ಕಿಣ್ವಗಳಾದ ಕ್ಯಾಟಲೇಸ್‌ಗಳು, ಪೆರಾಕ್ಸಿಡೇಸ್‌ಗಳು. ಈ ವಿಶೇಷ ಔಷಧೀಯ ಗುಣಗಳು ದೇಹಕ್ಕೆ ಕೆಡುಕನ್ನುಂಟು ಮಾಡುವ ವೈರಸ್, ಬ್ಯಾಕ್ಟೀರಿಯಾ ಮುಂತಾದ ರೋಗಾಣುಗಳನ್ನು ದೂರವಿರಿಸುತ್ತವೆ, ಕೊಲೆಸ್ಟೆರಾಲ್ ಅಂಶವನ್ನು ರಕ್ತದಲ್ಲಿ ಕಡಿಮೆಮಾಡುತ್ತವೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ, ಕ್ಯಾನ್ಸರ್, ರಕ್ತಸ್ರಾವ, ಉರಿಯೂತ ಮುಂತಾದ ರೋಗಗಳನ್ನು ತಡೆಗಟ್ಟುತ್ತದೆ, ರಕ್ತನಾಳಗಳಲ್ಲಿ ಕೊಬ್ಬಿನ ಅಂಶ ಶೇಖರವಾಗುವ ಅಥೆರೋಸ್ಕ್ಲೀರೋಸಿಸ್, ಕೀಲುಗಳಲ್ಲಿ ಉಂಟಾಗುವ ಆಸ್ಟಿಯೋ-ಆರ್ಥ್ರೈಟಿಸ್ ಹಾಗೂ ಮುಪ್ಪಿನಲ್ಲಿ ಮೆದುಳಿನ ನರಗಳ ಶಿಥಿಲತೆಯಿಂದ ಉಂಟಾಗುವ ಆಲ್ಜೀಮರ್‍ಸ್ ರೋಗ ಇವೆಲ್ಲವನ್ನೂ ತಡೆಗಟ್ಟುತ್ತದೆ. ಈ ಎಲ್ಲ ಗುಣಗಳುಳ್ಳ ಮದ್ದ್‌ತೊಪ್ಪನ್ನು ವರ್ಷಕ್ಕೊಮ್ಮೆ ಸೇವಿಸುವುದರಿಂದ ಮನುಷ್ಯನ ಆಯುಷ್ಯವೃದ್ಧಿಯಾಗುತ್ತದೆ. 



ಈ ಸ್ವಭಾವ ಬರೇ ಮದ್ದ್‌ತೊಪ್ಪಿಗೆ ಮಾತ್ರವಲ್ಲ, ಇಡೀ ಸಸ್ಯರಾಶಿಗೇ ಅನ್ವಯಿಸುತ್ತದೆ ಎಂದು ನನಗನ್ನಿಸುತ್ತದೆ. ಒಂದು ಗಿಡದ ಹೂವು-ಹಣ್ಣೇ ಇರಲಿ, ಸೊಪ್ಪು, ಕಾಂಡ, ಬೇರು, ಗೆಡ್ಡೆಯೇ ಇರಲಿ, ಪ್ರಾಕೃತಿಕವಾಗಿ ಬೆಳೆಯುವ ಪ್ರತಿಯೊಂದು ಸಸ್ಯಕ್ಕೂ ಅದರ ಗುಣವಿಶೇಷಗಳು ಒಂದು ನಿರ್ದಿಷ್ಟ ಋತುಮಾನದಲ್ಲಿ ಗರಿಷ್ಠ ಪ್ರಮಾಣದಲ್ಲಿ ಪ್ರಕಟವಾಗುತ್ತದೆಯೆಂದು ತೋರುತ್ತದೆ. ಅಷ್ಟಕ್ಕೂ ಈ ಸಸ್ಯಗಳು ಔಷಧಿಗಳನ್ನು ತಯಾರು ಮಾಡಿ ಪ್ರಾಣಿಗಳಿಗೆ ಉಣಬಡಿಸುವುದಾದರೂ ಏಕೆ?  ಜಗತ್ತಿನ ಪ್ರಾಣಿಸಂಕುಲ ಆರೋಗ್ಯದಿಂದ ಇದ್ದರೆ ಮಾತ್ರ ತಾನು ಸಮೃದ್ಧಿಯಿಂದ ಬಾಳಬಹುದು ಎಂಬ ಸತ್ಯವನ್ನು ಸಸ್ಯಗಳು ಅರಿತಿವೆ. ಇದು ಪರಸ್ಪರ ಒಬ್ಬರನ್ನೊಬ್ಬರು ಅನುಸರಿಸಿ ಜವಾಬ್ದಾರಿಯಿಂದ ಜೀವನ ನಡೆಸುವ ಒಂದು ಸುಖೀ ಸಂಸಾರದ ಒಳಗುಟ್ಟು. ಇದರಲ್ಲಿ ಇಡೀ ಕುಟುಂಬದ ಸ್ವಾಸ್ಥ್ಯದ ಹೊಣೆಗಾರಿಕೆಯೂ ಅಡಗಿದೆ. ಪ್ರಕೃತಿಯಲ್ಲಿ ನಾವು ಕಾಣುವ ಈ ವಿಶಾಲ ತತ್ತ್ವ, ನಮಗೆಲ್ಲ ಪಾಠವಲ್ಲವೆ?

ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.

ವಂದನೆಗಳು.
                          
ಈ ವರ್ಷದ ವಿಶೇಷ ವನ್ಯಜೀವಿ ಸಂದೇಶವಾಹಕ

ನವರಂಗ : ಕೆಂಪು, ಹಸಿರು, ನೀಲಿ, ಕಂದು, ಬಿಳಿ, ಬೂದು, ಕಪ್ಪು, ಹಸಿರುಗಂದು, ಹೀಗೆ ಹಲವು ಬಣ್ಣಗಳಿಂದ ಕೂಡಿದ ಸುಂದರವಾದ ನವರಂಗ ಒತ್ತಾದ ನೆರಳಿರುವೆಡೆಗಳಲ್ಲಿ ನೆಲದ ಮೇಲೆ ತರಗೆಲೆಗಳನ್ನು ಮೊಗಚುತ್ತಾ, ತನ್ನ ಮೊಂಡು ಬಾಲವನ್ನು ಮೇಲಕ್ಕೂ-ಕೆಳಕ್ಕೂ ಆಡಿಸುತ್ತಾ, ನಿಶ್ಶಬ್ದವಾಗಿ ಬೇಟೆ ಹುಡುಕುವುದನ್ನು ನೋಡುವುದು ಬಹಳ ಆಹ್ಲಾದಕರ. ಮುಂಜಾವು-ಮುಸ್ಸಂಜೆ ವೇಳೆ ಎರಡು ಸ್ವರದ ವೀ.. ಪ್ಯೂ.. ಕರೆಯಿಂದ ಗುರುತು ಹಿಡಿಯಬಹುದು.

ಕೈಯಲ್ಲೇ ಚಿತ್ರಿಸಿದ ಒಟ್ಟು ಸಂದೇಶಪತ್ರಗಳ ಸಂಖ್ಯೆ: ಈ ವರ್ಷ ೧೨೭೦; ಕಳೆದ ೨೮ ವರ್ಷಗಳಲ್ಲಿ ೫೬,೫೯೦.
ಸಂದೇಶಪತ್ರಗಳನ್ನು ಪಡೆದವರು: ಈ ವರ್ಷ ೧,೦೧೦; ಕಳೆದ ೨೮ ವರ್ಷಗಳಲ್ಲಿ ೮,೩೪೦.

ದಯವಿಟ್ಟು ಹೆಚ್ಚುಹೆಚ್ಚು ಅಂಚೆಚೀಟಿಗಳನ್ನು ಕಳುಹಿಸಿ, ನನ್ನ ಅಂಚೆವೆಚ್ಚವನ್ನು ತಗ್ಗಿಸಲು ಸಹಕರಿಸಿ.















Wednesday, November 2, 2011

ಕನ್ನಡ ಕಂದಮ್ಮಗಳ ಕಷ್ಟಕಾರ್ಪಣ್ಯಗಳು ಮತ್ತು ಪರಿಹಾರೋಪಾಯಗಳು

ಕನ್ನಡ ಕಂದಮ್ಮಗಳ ಕಷ್ಟಕಾರ್ಪಣ್ಯಗಳು ಮತ್ತು ಪರಿಹಾರೋಪಾಯಗಳು

ನಾಡಿನ ಸಮಸ್ತ ಓದುಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು!


ಈ ಹಿಂದೆ ನವಂಬರ್ ಒಂದನೇ ತಾರೀಕು ಬರಬರುತ್ತಿದ್ದಂತೆಯೇ ನಮ್ಮ ಮೈಯ್ಯಲ್ಲೆಲ್ಲಾ ಒಂದು ರೀತಿಯ ಪುಳಕ ಉಕ್ಕುತ್ತಿತ್ತು. ನಮ್ಮ ಹೃದಯ ‘ಲಬ್ ಡಬ್’ ಎನ್ನುವುದನ್ನು ಬಿಟ್ಟು ‘ಕನ್ನಡ ಕನ್ನಡ’ ಎಂದು ಹೊಡೆದುಕೊಳ್ಳುತ್ತಿದ್ದವು. ದುರದೃಷ್ಟವಶಾತ್ ಇತ್ತೀಚಿನ ವರ್ಷಗಳಲ್ಲಿ ಈ ಹುರುಪು ಗಮನೀಯವಾಗಿ ಇಳಿಮುಖವಾಗುತ್ತಿರುವುದನ್ನೂ ನೀವು ಗಮನಿಸುತ್ತಿರಬಹುದು. ಚೌತಿಯಲ್ಲಿ ಗಣಪತಿಯನ್ನು ಕೂರಿಸಲು ಇರುವ ಉತ್ಸಾಹವೂ ರಾಜ್ಯೋತ್ಸವದಂದು ಇಲ್ಲದಾಗಿದೆಯಲ್ಲ? ನೋಡುನೋಡುತ್ತಿದ್ದಂತೆಯೇ ಕನ್ನಡ ಕಣ್ಮಣಿಗಳು ಕನ್ನಡದಿಂದ ವಿಮುಖರಾಗುತ್ತಿರುವರಲ್ಲ, ಇದಕ್ಕೆ ಕಾರಣಗಳೇನು ಎಂಬುದನ್ನು ಕಂಡುಹಿಡಿದು, ಇದಕ್ಕೆ ಪರಿಹಾರೋಪಾಯಗಳೇನಾದರೂ ಇರಬಹುದೇ ಎಂಬ ಬಗ್ಗೆ ನಾನು ಆಲೋಚಿಸಿದ್ದೇನೆ. ನನ್ನ ಪ್ರಕಾರ ಹೀಗೆ ಕನ್ನಡಕ್ಕೆ ಕೊಡಲಿ ಪೆಟ್ಟು ಬಿದ್ದಿರುವುದು ನಮ್ಮ ಇಂಗ್ಲೀಷ್ ವ್ಯಾಮೋಹದಿಂದಲೇ ಅನ್ನಿಸುತ್ತದೆ. ಎಲ್ಲಿ ನೋಡಿದರಲ್ಲಿ ಇಂಗ್ಲೀಷ್ ಶಾಲೆಗಳು, ಪೋಷಕರಲ್ಲಿ ತಮ್ಮ ಮಕ್ಕಳಿಗೆ ಅದೇ ಶಾಲೆಗಳಿಗಲ್ಲಿ ಸೀಟು ಗಿಟ್ಟಿಸಿ ಕೊಡಬೇಕೆಂಬ ತವಕ, ಅದಕ್ಕಾಗಿ ಸಾಲ ಮಾಡಿದರೂ ಅಡ್ಡಿಯಿಲ್ಲವೆಂಬ ಹತಾಶೆ... ಏನಾಗುತ್ತಿದೆ? ಇದು ಹೀಗೇ ಮುಂದುವರಿದರೆ ಕನ್ನಡ ಭುವನೇಶ್ವರಿಯ ಗತಿಯೇನು?

ವಿದ್ಯೆ ಅಂದರೆ ಈವತ್ತು ಇಂಗ್ಲೀಷ್ ಶಾಲೆಗಳಲ್ಲಿ ಮಕ್ಕಳು ಏನನ್ನು ಕಲಿಯುತ್ತಾರೋ ಅದೇ ಎಂದಾಗಿದೆ! ಹೀಗಾಗಿ ವಿದ್ಯೆ ಶ್ರೀಮಂತರ, ಬಲಿತವರ, ಅಲ್ಪರ, ಅಲ್ಪಸಂಖ್ಯಾತರ ಪಾಲಾಗುತ್ತಿದೆ. ಇಂಗ್ಲಿಷ್ ಶಾಲೆಗಳಿಗೆ ಪರವಾನಗಿ ಪಡೆದು ಹಣ ಮಾಡಿಕೊಳ್ಳುತ್ತಿರುವವರೂ ಅವರೇ! ಕರುನಾಡಿನ ಬೆನ್ನೆಲುಬಾಗಿರುವ ಹಳ್ಳಿಯ ಮಕ್ಕಳು ಏನಾಗಬೇಕು? ಇತ್ತೀಚೆಗೆ ನೋಡಿದರೆ ಕರ್ನಾಟಕದ ಸರ್ಕಾರಕ್ಕೂ ಈ ವಿಚಾರದಲ್ಲಿ ದಿಗಿಲು ಹತ್ತಿರುವಂತಿದೆ. ಎಲ್ಲಿ ತನ್ನ ಮಣ್ಣಿನ ಮಕ್ಕಳೂ ಇಂಗ್ಲಿಷ್ ಕಲಿತು ಬುದ್ಧಿವಂತರಾಗಿ ಬಿಡುತ್ತಾರೋ, ಎಲ್ಲಿ ಕೆಲಸವನ್ನು ಹುಡುಕಿಕೊಂಡು ಕರ್ನಾಟಕವನ್ನು ಬಿಟ್ಟು ಓಡಿಬಿಡುತ್ತಾರೋ, ಹೀಗೆ ಕರ್ನಾಟಕವೇ ಖಾಲಿಯಾಗಿ ಕೊನೆಗೆ ಎಲ್ಲಿ ತಾವೆಲ್ಲ ಮಣ್ಣು ತಿನ್ನಬೇಕಾಗುತ್ತದೋ ಎಂದು ಆಲೋಚಿಸಿ ಕಂಡಕಂಡಲ್ಲಿ ಕನ್ನಡ ಶಾಲೆಗಳನ್ನು ತೆರೆದು, ಎಲ್ಲರಿಗೂ ಬಿಟ್ಟಿ ಊಟ, ಬಟ್ಟೆ, ಪುಸ್ತಕ, ಅಲ್ಲದೆ ಮಲಗಲು ವಸತಿ ಒದಗಿಸಿ, ಖನ್ನಡವನ್ನು ಖಡ್ಡಾಯ ಮಾಡಿ ಉಳಿದವರು ಎಲ್ಲಾದರೂ ಹಾಳಾಗಿ ಹೋಗಲಿ, ಆರಕ್ಕೆ ಕನಿಷ್ಟ ನಾಲ್ಕು ಕೋಟಿಯಷ್ಟದರೂ ಹಳ್ಳಿಗಳಲ್ಲಿ ಜನ ಓಟು ಕೊಡಲು ಉಳಿದರೆ ಸಾಕು ಎಂದು ಆಲೋಚಿಸುತ್ತಿದ್ದಾರೆ.

ಎರಡೂವರೆ ಸಾವಿರ ವರ್ಷಗಳು, ಅಂದರೆ ಸುಮಾರು ಹನ್ನೆರಡು ಸಾವಿರ ತಲೆಮಾರುಗಳು, ಕನ್ನಡದ ಮಕ್ಕಳಿಗೆ ಕಲಿಯಲು ಯಾವುದೇ ತಂಟೆ ತಕರಾರುಗಳು ಇದ್ದಿಲ್ಲ. ಅದು ಇದ್ದಕ್ಕಿದ್ದಂತೆ ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿದೆ! ಇಷ್ಟಕ್ಕೂ ಕನ್ನಡದಲ್ಲಿಲ್ಲದ್ದು ಇಂಗ್ಲೀಷಿನಲ್ಲೇನಿದೆ? ನಮ್ಮ ಮಕ್ಕಳು ‘ಅ’ ಕಲಿಯುವುದಕ್ಕೆ ಮುಂಚೆಯೇ ‘ಎ’ ಕಲಿಯುತ್ತವಲ್ಲ, ಏನಿದರ ಮರ್ಮ? ಕನ್ನಡದಲ್ಲಾದರೆ ಒಂದೊಂದು ಅಕ್ಷರವನ್ನೂ ಬಳಪ-ಸ್ಲೇಟು ಸವೆಯುವವರೆಗೂ, ಕೈ ನೋವು ಬರುವವರೆಗೂ ತೀಡಿ-ತಿದ್ದಿ ಕಲಿಯಬೇಕು. ಅಡ್ಡಂಬಡ್ಡ, ಸೊಟ್ಟಸೊಟ್ಟ, ಸುರುಳಿಸುರುಳಿಯಾಕಾರದ ಅಕ್ಷರಗಳು, ಜೊತೆಗೆ ಐವತ್ತು ಅಕ್ಷರಗಳ ಮೇಲೆ-ಕೆಳಗೆ, ಅಕ್ಕ-ಪಕ್ಕ ಬಾಲಗಳು, ಕೊಂಬುಗಳು, ಒತ್ತುಗಳು... ಕನ್ನಡವನ್ನು ಕಲಿಯಲು ಯಾಕಿಷ್ಟು ಕಷ್ಟಕರವಾಗಿ ಮಾಡಿದರು? ಪ್ಯೂರ್ ಕಮ್ಯುನಿಸ್ಟರ ಭಾಷೆಯಲ್ಲಿ ಹೇಳಬೇಕೆಂದರೆ, ಇದು ನಿಸ್ಸಂಶಯವಾಗಿ ದಲಿತರು, ಕಾರ್ಮಿಕರು ಮತ್ತು ತುಳಿತಕ್ಕೊಳಗಾದವರು ಎಲ್ಲಿ ವಿದ್ಯೆ ಕಲಿತು ಬಂಡವಾಳಶಾಹಿಗಳಾಗಿ ಬಿಡುತ್ತಾರೋ ಎಂದು ಬೂರ್ಜ್ವಾಗಳು ಮಾಡಿಕೊಂಡ ಪುರೋಹಿತಶಾಹೀ ವ್ಯವಸ್ಥೆ! (ಅವರ ಪದಭಂಡಾರದ ಎಲ್ಲಾ ಪದಗಳನ್ನೂ ಬಳಸಿದ್ದೇನೆಂದು ಭಾವಿಸುತ್ತೇನೆ)

ಆದರೆ ಇಂಗ್ಲಿಷ್ ಎಷ್ಟು ಸುಲಭ! ಆಹಾ! ಎಂಥ ಚೆಂದ! ಚುಟುಕಾದ, ಮುದ್ದಾದ ಇಪ್ಪತ್ತಾರು ಅಕ್ಷರಗಳು! ಒಂದು ಸಾರಿ ನೋಡಿದರೇ ಸಾಕು, ತಲೆಯಲ್ಲಿ ನಿಂತುಬಿಡುತ್ತದೆ! ಇದನ್ನು ಭಾರತಕ್ಕೆ ಕಲಿಸಿದ ಆ ಆಂಗ್ಲರು ಎಷ್ಟು ಚತುರರು! ಅವರು ಅಷ್ಟು ಕಷ್ಟಪಟ್ಟು ಕಂಡುಹಿಡಿಯದೇ ಹೋಗಿದ್ದರೆ ಪಂಚ ದ್ರಾವಿಡ ಭಾಷೆಗಳು ಇವೆಯೆಂದು ನಮಗೆ ತಿಳಿಯುತ್ತಿತ್ತೇ? ಈವತ್ತು ಪರಿಶುದ್ಧ ದ್ರಾವಿಡರು ಎಲ್ಲಿದ್ದಾರೆ ಸ್ವಾಮಿ?

ಸಾವಿರಾರು ವರ್ಷಗಳ ಹಿಂದೆ ಆರ್ಯರು ನಮ್ಮ ದೇಶದ ಮೇಲೆ ಧಾಳಿಮಾಡಿದಾಗ, ಭಾರತದ ಆ ತುದಿಯಲ್ಲಿ ಅಪ್ಪಳಿಸಿದ ಸುನಾಮಿಯ ಅಲೆಗೆ ಕೊಚ್ಚಿಕೊಂಡು ಬಂದು ಈ ತುದಿಯಲ್ಲಿ ಮುಮ್ಮೂಲೆ ಪಾಲಾಗಿ ಬಿದ್ದಿರುವರಲ್ಲ ಆ ತಮಿಳರೇ ಅಲ್ಲವೆ ನಿಜ ದ್ರಾವಿಡರು! ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಲು ತಮಿಳರೇ ಅಲ್ಲವೆ ನಮಗೆಲ್ಲ ಪ್ರೇರಕರು! ಅಲ್ಲಿಯ ಮಕ್ಕಳು ತಮಿಳು ಮತ್ತು ಇಂಗ್ಲಿಷ್ ಭಾಷೆಗಳನ್ನು ಸರಿಸಮಾನವಾಗಿ ಕಲಿಯುತ್ತಿದ್ದಾರೆಂದರೆ ಅದಕ್ಕೊಂದು ಭರ್ಜರಿಯಾದ ಕಾರಣ ಇದ್ದೇ ಇದೆ. ಅದೇನೆಂದರೆ ಎಲ್ಲರೂ ತಮಿಳನ್ನು ಸುಲಭವಾಗಿ ಕಲಿಯಲು, ಅವರು ಆ ಭಾಷೆಯಲ್ಲಿ ಮಾಡಿದ ಮಾರ್ಪಾಡುಗಳು! ಆದ್ದರಿಂದ ನಮ್ಮ ಭಾಷೆಯನ್ನು ಮೂಲಭೂತವಾಗಿ ಪರಿಷ್ಕರಿಸುವ ಕಾಲ ಕೂಡಿಬಂದಿದೆ.

ಒಂದು ಭಾಷೆಯನ್ನು ಹೀಗೆ ಮ್ಯುಟೇಶನ್‌ಗೆ ಒಳಪಡಿಸಬೇಕಾದರೆ ಮೊದಲಿಗೆ ಆ ಭಾಷೆಯ ವರ್ಣಮಾಲೆಯನ್ನು ಸರಳೀಕರಣಗೊಳಿಸಬೇಕು. ಇದು ನಮ್ಮ ಮೊದಲ ಹೆಜ್ಜೆ. ನೀವು ನರ್ಸರಿ ಶಾಲೆ ಪಾಸು ಮಾಡಿದ ಮೇಲೆ, ನಮ್ಮ ವರ್ಣಮಾಲೆಯನ್ನು ಯಾವಾಗಲಾದರೂ ಕಣ್ಣೆತ್ತಿ ನೋಡಿದ್ದೀರಾ? ಬರೋಬ್ಬರಿ ಐವತ್ತು ಅಕ್ಷರಗಳು! ಅವಷ್ಟೇ ಕಲಿತರೆ ಸಾಕೆ? ಅದಾದ ಮೇಲೆ ಕಾಗುಣಿತ, ಒತ್ತಕ್ಷರಗಳು. ಒಟ್ಟು ಅಂದಾಜು ಆರು ನೂರ ಅರವತ್ತೆರಡು ವಿವಿಧ ಶೈಲಿಗಳ ಕಲೆಸು ಮೇಲೋಗರ. ಅದರಲ್ಲಿ ಯಾವ ಉಪಯೋಗಕ್ಕೂ ಬಾರದ ಸವಕಲು ಅಕ್ಷರಗಳೇ ಹೆಚ್ಚು! ಹಿಪ್ಪಿಗಳಂತೆ ತಲೆಗೂದಲು, ಗಡ್ಡ ಬೆಳೆದು ಕನ್ನಡದಲ್ಲಿ ಕಸವೇ ಹೆಚ್ಚಾಗಿ ಹೋಗಿದೆ. ಇದನ್ನು ಟ್ರಿಮ್ ಮಾಡಬೇಕೆಂದರೆ ಬರೇ ಕತ್ತರಿ-ಚಾಕು ಸಾಲದು, ಕೊಡಲಿಯೇ ಬೇಕು!

ನಾವು ಸ್ವರಗಳಿಂದ ಶುರು ಮಾಡೋಣ. ಅ, ಆ, ಇ, ಈ, ಉ, ಊ, ಋ, ೠ, ಎ, ಏ, ಐ, ಒ, ಓ, ಔ, ಅಂ, ಅಃ .... ಇವುಗಳಲ್ಲಿ ಋ ಮತ್ತು ೠ ಈಗಾಗಲೇ ಬಹಳ ಚರ್ಚೆಗೊಳಗಾಗಿ ಅಸ್ಪೃಶ್ಯ ಸ್ಥಾನವನ್ನು ಗಳಿಸಿವೆ. ಇನ್ನು ಅಯ್, ಅವ್, ಅಮ್, ಅಹ ಇವು ನನ್ನ ಪ್ರಕಾರ ಶುದ್ಧ ಸ್ವರಗಳೇ ಅಲ್ಲ. ಅಂದಮೇಲೆ ಅವುಗಳನ್ನು ನಿಸ್ಸಂಕೋಚವಾಗಿ ಕೈಬಿಡಬಹುದು. ಹೀಗಾಗಿ ನಮಗೆ ಉಳಿಯುವುದು ಹತ್ತು ಸ್ವರಗಳು ಮಾತ್ರ!

ಇನ್ನು ವ್ಯಂಜನಗಳ ಭಾಗ್ಯ. ಢಂ-ಭಂ, ಛಟ್-ಫಟ್, ಮುಂತಾದ ಉದ್ಗಾರ-ಉದ್ಘೋಷಗಳನ್ನು ಬಿಟ್ಟರೆ ಕನ್ನಡದಲ್ಲಿ ಮಹಾಪ್ರಾಣಗಳಿರುವ ಎಲ್ಲಾ ಪದಗಳೂ ಸಂಸ್ಕೃತಮೂಲದಿಂದಲೇ ಬಂದಿವೆ. ಸರಳವಾಗಿ, ಸೌಮ್ಯವಾಗಿ, ಶ್ವಾಸಕೋಶಗಳಿಗೆ ಹೆಚ್ಚು ಶ್ರಮವಾಗದಂತೆ ಕಲಿಯಬೇಕಾದರೆ ಈ ಮಹಾಪ್ರಾಣಿಗಳನ್ನು ದೂರ ಮಾಡಬೇಕು. ಮಕ್ಕಳ ಹಾರ್ಟಿಗೂ ಒಳ್ಳೆಯದು! ಆದ್ದರಿಂದ ಕನ್ನಡ ವರ್ಣಮಾಲೆಯಿಂದ ಖ, ಘ, ಛ, ಮುಂತಾದ ಅಕ್ಷರಗಳನ್ನು ಸಾರಾಸಗಟಾಗಿ ಕಿತ್ತುಹಾಕಬಹುದು. ಇದರಿಂದ ವ್ಯಂಜನಗಳ ಸಂಖ್ಯೆ ಏಕಾಏಕಿ ಅರ್ಧದಷ್ಟಾಗಿ ಬಿಡುತ್ತದೆ. ಉಳಿದಂತೆ ಙ, ಞ ಗಳು ಹೇಳಿ-ಕೇಳಿ ಯೂಸ್‌ಲೆಸ್ ಅಕ್ಷರಗಳು. ಅವಕ್ಕೆ ಹೆಚ್ಚು ಮಾತಿಲ್ಲದೆ ಗೇಟ್‌ಪಾಸ್ ಕೊಡಬಹುದು! ಇನ್ನು ‘ನ’ ಮತ್ತು ‘ಣ’ ತೆಗೆದುಕೊಳ್ಳೋಣ. ಕಲಿಯುವ ಹಸುಳೆಗಳು ಣ ಎನ್ನಲು ಹೇಳಿದರೆ ನ ಎನ್ನುವುದಿಲ್ಲವೆ? ‘ಬಣ್ಣ’ ಎಂದರೆ ‘ಬನ್ನ’ ಎಂದು ಹೇಳುವುದಿಲ್ಲವೆ? ಣ..ಣ..ಣ.. ಎಂದು ಹೇಳಲು ಆಗ್ರಹಿಸಿದರೆ ಯಾವ ಮಗುವಿಗೆ ತಾನೇ ಕಲಿಯುವ ಆಸಕ್ತಿಯಿರುತ್ತದೆ? ಹಾಗಾಗಿ ನಾವು ‘ಣ’ವನ್ನೂ ಕನ್ನಡ ವರ್ಣಮಾಲೆಯಿಂದ ತೆಗೆದುಹಾಕಬಹುದು. ಅಂತೂ ಈ ಪ್ರಕ್ರಿಯೆಯ ನಂತರ ನಮಗೆ ಉಳಿಯುವ ವ್ಯಂಜನಗಳು ಹನ್ನೆರಡು!

ಕೊನೆಯಲ್ಲಿ ಯ, ರ, ಲ, ವ, ಶ, ಷ, ಸ, ಹ, ಳ. ಇವುಗಳಲ್ಲಿ ‘ಶ’ ಮತ್ತು ‘ಷ’ಗಳು ಮಕ್ಕಳ ನಾಲಿಗೆಯ ಮೇಲೆ ಹೊರಳುವುದೇ ಕಷ್ಟ. ಈ ಅಕ್ಷರಗಳಿಗೆ ಬದಲಾಗಿ ‘ಸ’ ಒಂದನ್ನೇ ಬಳಸಬಹುದಾಗಿದೆ. ನಾವು ಹಿಂದೆ ವಿಶ್ಲೇಷಿಸಿದ ನ-ಣ ಪ್ರಮೇಯ ‘ಲ’ ಮತ್ತು ‘ಳ’ಗೂ ಅನ್ವಯಿಸುತ್ತದೆ. ಅಲ್ಲದೆ ಮೂಲ ಸಂಸ್ಕೃತದಲ್ಲೂ, ಗಮ್ಯ ಇಂಗ್ಲೀಷಿನಲ್ಲೂ ಇಲ್ಲದ ಳ ಕನ್ನಡಕ್ಕೇಕೆ? ಅದ್ದರಿಂದ ಳ ಬದಲು ಲವನ್ನು ಮಾತ್ರ ಉಳಿಸಿಕೊಳ್ಳಬಹುದು.

ಇದಾದ ಮೇಲೆ ನಿಮಗೆ ಒಂದು ಪ್ರಾಕ್ಟಿಕಲ್ ಪ್ರಯೋಗ: ನಿಮ್ಮ ಅಂಗೈಯನ್ನು ಬಾಯಿಯ ಮುಂದೆ ಹಿಡಿದು ಒಂದು ಸಾರಿ ಜೋರಾಗಿ ‘ಹ’ ಎಂದು, ನಂತರ ಉಸಿರೆಳೆದುಕೊಳ್ಳಿ. ಮೂಗಿಗೆ ಮಣ್ಣಿನ ವಾಸನೆ ಬಂತೆ? ಬರಲಿಲ್ಲ, ಅಲ್ಲವೆ? ಮತ್ತೊಂದು ಬಾರಿ ಪ್ರಯತ್ನಿಸಿ. ನೀವೆಷ್ಟೇ ಸಾರಿ ಪ್ರಯತ್ನಿಸಿದರೂ ‘ಹ’ಕ್ಕೆ ಮಣ್ಣಿನ ವಾಸನೆಯಿಲ್ಲ! ನೀವೇನೇ ಹೇಳಿ, ನಮ್ಮ ಅಳ್ಳಿಯ ಐಕಳು ಅಸು ಆಲನ್ನು ಕುಡಿದು ಆಡು ಆಡ್ಕೊಂಡು, ಆಟಾಡ್ಕೊಂಡು ಇದ್ದರೇ ಚೆನ್ನ ಅಲ್ಲವೆ? ಹೀಗಿರುವಾಗ ‘ಹ’ವನ್ನೂ ಬಿಟ್‌ಹಾಕಿ! ಇಷ್ಟೆಲ್ಲ ಪ್ರಯತ್ನದಿಂದ ನಮಗೆ ಉಳಿಯುವುದು ಯ, ರ, ಲ, ವ, ಸ.

ಕೊನೆಗೆ ಎಣ್ಣಿಸಿ: ಅ ಆ ಇ ಈ ಉ ಊ ಎ ಏ ಒ ಓ, ಕ ಗ ಚ ಜ ಟ ಡ ತ ದ ನ ಪ ಬ ಮ, ಯ ರ ಲ ವ ಸ. ಕನ್ನಡ ವರ್ಣಮಾಲೆಯಲ್ಲಿ ನೈಜ ಗುಣವುಳ್ಳ ಅಕ್ಷರಗಳು ಇಪ್ಪತ್ತೇಳು! ಬರೇ ಇಪ್ಪತ್ತೇಳು. ಇದು ಇಂಗ್ಲೀಷಿಗಿಂತ ಒಂದೇ ಅಕ್ಷರ ಹೆಚ್ಚು! ಪರವಾಗಿಲ್ಲ ಬಿಡಿ, ಕನ್ನಡ ಭಾಷೆ ಹೀಗೇ ‘ಬೆಳೆದರೆ’ ಇಂಗ್ಲೀಷನ್ನೂ ಮೀರುವ ಕಾಲ ದೂರವಿಲ್ಲ.

ಅಕ್ಷರಗಳ ಸಂಖ್ಯೆ ಕಡಿಮೆ ಮಾಡಿದ್ದಾಯಿತು. ಆದರೆ ಡೊಂಕು-ಸೊಂಕಾದ, ಉರುಟು-ಸುರುಳಿಗಳಿರುವ ಅಕ್ಷರಗಳನ್ನು ಕನ್ನಡ ಕಂದಮ್ಮಗಳು ಹೇಗೆ ಕಲಿತಾವು? ಅದಕ್ಕೊಂದು ಸುಲಭೋಪಾಯವನ್ನು ಕಂಡು ಹಿಡಿದಿದ್ದೇನೆ. ಎಲ್ಲಾ ಇಪ್ಪತ್ತೇಳು ಅಕ್ಷರಗಳನ್ನೂ ಒಂದೊಂದು ಸಣ್ಣ ಹಾಳೆಯಲ್ಲಿ ಬರೆದು, ಒಟ್ಟಿಗೆ ಪೇರಿಸಿ ಒಂದು ಟೇಬಲ್ಲಿನ ಮೇಲಿಡಿ. ಅದರ ಮೇಲೆ ಒಂದು ಕಾಟನ್ ಕರವಸ್ತ್ರವನ್ನು ಹರಡಿ ಮುಚ್ಚಿ. ನಿಮ್ಮ ಮನೆಯ ಇಸ್ತ್ರಿ ಪೆಟ್ಟಿಗೆಯನ್ನು ಕೆಂಪಗೆ ಕಾಯಿಸಿ ಅದರಿಂದ ಶಕ್ತಿ ಬಿಟ್ಟು ಒತ್ತಿ ಕನ್ನಡ ಅಕ್ಷರಗಳನ್ನು ಇಸ್ತ್ರಿ ಮಾಡಿ. ಈಗ ನೋಡಿ! ಕನ್ನಡದ ವರ್ಣಮಾಲೆ ಇಂಗ್ಲೀಷಿನ ಅಕ್ಷರಗಳಂತೆ ಹೇಗೆ ಮುದ್ದು ಮುದ್ದಾಗಿ ಒಣ ಕಡ್ಡಿಗಳ ಹಾಗೆ ಮೆರೆಯುತ್ತಿವೆ!

ಇನ್ನು ಬಿಡಿ. ಯಾವ ಮಗುವೂ ಇಂಗ್ಲೀಷನ್ನು ತಲೆಯೆತ್ತಿಯೂ ನೋಡುವುದಿಲ್ಲ. ಕಲಿಯಲು ಸುಲಭವಾದ, ಯಾವುದೇ ಕಷ್ಟವಿಲ್ಲದೆ ನೆನಪಿನಲ್ಲಿಟ್ಟುಕೊಳ್ಳಬಹುದಾದ ಮಿನಿ ಕನ್ನಡ ನಮ್ಮದಾಗುವ ಕಾಲ ದೂರವಿಲ್ಲ.

ಮತ್ತೊಮ್ಮೆ ನಿಮಗೆಲ್ಲ ರಾಜ್ಯೋತ್ಸವದ ಶುಭಾಶಯಗಳು.

ಜೈ ಭುವನೇಶ್ವರಿ! ಸಿರಿಗನ್ನಡಮ್ ಗೆಲ್ಗೆ!




Friday, October 7, 2011

ವನ್ಯಜೀವಿ ಸಂದೇಶಗಳು ೨೦೧೧

Judicious use of Natural Wealth


Friday, 30 September 2011


Dear friend,




Man has considered himself as having the capacity for thought and a high degree of reasoning when compared to all other lifeforms on this Earth. But greed has overtaken all his virtues. Today, everyone wants to be acknowledged in the society as rich. A rich man is regarded as one who has accumulated a vast amount of wealth in terms of gold, silver, pearls, diamonds and such other jewels and precious stones. Richness is measured in terms of one’s abundance of material possessions. Afterall, these metals and stones are dug out of earth. None of this natural wealth can possibly be produced in a large-scale industrial operation by humans.







Another, more serious matter bothers me. The world population has already crossed seven billion mark and it is true that everyone needs a home. We are flaunting huge houses with more number of rooms than necessary and we also construct such homes at different places beyond our needs. Progress and development have become synonymous with constructing buildings! Cities are getting converted into sheer concrete jungles. The raw materials that go in to build them include stones, steel, cement, sand and lots of wood. And all of them are exhaustible substances.





We have to realise that we could somehow plant and grow trees. Is it possible to grow steel and sand, stones and lime?


Let us join hands to make our only Earth, a place where all elements of life can live in health, happiness and harmony.


Thank you.


Dr. S V Narasimhan VIRAJPET 571 218 India.


drnsimhan@yahoo.com 9480730884


Special Wildlife Messenger of This year

Monal Pheasant (Lophophorus impeyanus) is the national bird of Nepal, where it is known as the Danfe, and the state bird of Himachal Pradesh and Uttarakhand. The males are adorned with beautiful metallic colors of green, purple, red and blue; the breast and underparts are black and the tail is copper; also have a very long crest, much like a peacock. They live in the Himalayas among the rhododendron and open conifers forests. The population of this species in most of its range is threatened due to poaching and deforestation.



Total of hand-painted cards made: this year 1450; in 27 years 55,320.


Total recipients: this year 1020; in 27 years 7910.




The Wildlife Message Cards are individually hand-painted and sent free to individuals throughout the world to mark the Wildlife Week.


Please send more stamps to reduce my burden on postage.





ಸಂಪತ್ತಿನ ಸದ್ಬಳಕೆ
ಶುಕ್ರವಾರ, ೩೦ ಸೆಪ್ಟೆಂಬರ್ ೨೦೧೧ ಮಿತ್ರರೆ,

ಪ್ರಪಂಚದಲ್ಲಿ ಇನ್ನಾವುದೇ ಜೀವಿಗೂ ಇಲ್ಲದ ವಿಶೇಷ ಗುಣಗಳನ್ನು ಮನುಷ್ಯನಲ್ಲಿ ಕಾಣುತ್ತೇವೆ. ನೈಸರ್ಗಿಕವಾಗಿ ಬಂದ ಈ ಚತುರ ಸಾಮರ್ಥ್ಯವನ್ನು ತನ್ನ ಆವಾಸವಾದ ಭೂಮಿಗೇ ಹಾನಿಯಾಗುವ ನಿಟ್ಟಿನಲ್ಲಿ ಆತ ಬಳಸಿಕೊಳ್ಳುತ್ತಿದ್ದಾನೆ. ಇಂದು ತಾನೊಬ್ಬ ಶ್ರೀಮಂತನೆಂದು ಕರೆಸಿಕೊಳ್ಳಬೇಕೆಂಬ ತವಕ ಪ್ರತಿಯೊಬ್ಬನಲ್ಲಿಯೂ ತುಡಿಯುತ್ತಿದೆ. ಅತಿ ಶೀಘ್ರ ಕಾಲದಲ್ಲಿ ಹೆಚ್ಚು ಹೆಚ್ಚು ಐಶ್ವರ್ಯವಂತನಾಗುವ ಹುಚ್ಚು ದಿನೇ ದಿನೇ ಮಿತಿ ಮೀರುತ್ತಿರುವುದನ್ನು ನಾವೆಲ್ಲ ಗಮನಿಸುತ್ತಿದ್ದೇವೆ.

ಯಾರಲ್ಲಿ ಹೇರಳವಾಗಿ ಅಮೂಲ್ಯವಾದ ಚಿನ್ನ, ಬೆಳ್ಳಿ, ಮುತ್ತು-ರತ್ನ, ವಜ್ರ-ವೈಢೂರ್ಯ ಮುಂತಾದುವು ಶೇಖರವಾಗಿರುವುದೋ ಅವನೇ ಈವತ್ತು ಐಶ್ವರ್ಯವಂತ. ಇವೇ ಮಾನವನ ಶ್ರೀಮಂತಿಕೆಯನ್ನು ಅಳೆಯುವ ಅಳತೆಗೋಲು. ಅವನ ಸ್ವಾರ್ಥ, ದುರಾಸೆ, ಕ್ರೌರ್ಯಗಳಿಗೆ ಈ ವಸ್ತುಗಳೇ ದಾರಿದೀಪಗಳು! ಯಾವುದೇ ಹೆಚ್ಚಿನ ಪ್ರಯೋಜನಕ್ಕೂ ಬಾರದ ಈ ಲೋಹಗಳು ಮತ್ತು ವಿವಿಧ ಶಿಲೆಗಳು ಇವೆಲ್ಲ ಬರುವುದಾದರೂ ಎಲ್ಲಿಂದ? ಎಲ್ಲವೂ ಭೂಮಿಯೊಳಗಿನಿಂದಲೇ ಅಗೆದು ತೆಗೆದದ್ದಲ್ಲವೆ? ಸಂಪದ್ಭರಿತ ಪ್ರಕೃತಿಯನ್ನೇ ಕೊಳ್ಳೆ ಹೊಡೆದು ಸಂಗ್ರಹಿಸುವ ಈ ವಸ್ತುಗಳಲ್ಲಿ ಯಾವುದನ್ನೂ ಕಾರ್ಖಾನೆಗಳಲ್ಲಿ ತಯಾರಿಸಲು ಸಾಧ್ಯವಿಲ್ಲ!

ಇದಕ್ಕಿಂತ ಮಹತ್ವದ ಮತ್ತೊಂದು ವಿಚಾರ ನನ್ನನ್ನು ಕಾಡುತ್ತಿದೆ. ಪ್ರಪಂಚದ ಜನಸಂಖ್ಯೆ ಏಳು ನೂರು ಕೋಟಿ ಮೀರಿದೆ. ಎಲ್ಲರಿಗೂ ಬದುಕಲು ಮನೆ ಬೇಕು. ಒಂದೊಂದು ಮನೆ ಕಟ್ಟಲು ಅವಶ್ಯವಾದ ಕಚ್ಚಾ ಸಾಮಾನು ಸರಂಜಾಮುಗಳು ಕಡಿಮೆಯೇನು? ಮರಳು, ಜಲ್ಲಿ, ಕಲ್ಲು, ಕಬ್ಬಿಣ, ಮರ-ಮಟ್ಟು ಇವೆಲ್ಲ ಸೇರಿ ತಾನೇ ಒಂದು ಮನೆ ಕಟ್ಟಲು ಸಾಧ್ಯ? ಆದರೆ ವಾಸಿಸಲು ಆವಶ್ಯಕತೆಗಿಂತ ದೊಡ್ಡ ಮನೆ ನಮಗೆ ಬೇಕೆ? ನಾವೀಗ ನಮ್ಮ ವೈಭವವನ್ನು ತೋರ್ಪಡಿಸಿಕೊಳ್ಳಲು ಐಶಾರಾಮೀ ಸೌಧಗಳನ್ನು ಕಟ್ಟಿಕೊಳ್ಳುತ್ತಿದ್ದೇವೆ. ಒಂದೊಂದು ಮನೆಯಲ್ಲೂ ಹತ್ತಾರು ಅನವಶ್ಯಕ ಕೋಣೆಗಳು! ಇದು ಸಾಲದೆಂಬಂತೆ ಒಂದಕ್ಕಿಂತ ಹೆಚ್ಚು ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದೇವೆ. ಇವೆಲ್ಲ ನಿಜಕ್ಕೂ ಅಗತ್ಯವೇ? ಪ್ರಗತಿ, ಅಭಿವೃದ್ಧಿ ಎಂದರೆ ದೊಡ್ಡ ದೊಡ್ಡ ಭವನಗಳನ್ನು, ಗಗನಚುಂಬಿ ಕಟ್ಟಡಗಳನ್ನು ಕಟ್ಟುವುದು ಎಂದೇ ಆಗಿಬಿಟ್ಟಿದೆ.

ಒಂದು ವಿಷಯವನ್ನು ಮಾತ್ರ ನಾವು ನೆನಪಿಟ್ಟುಕೊಳ್ಳಬೇಕು: ಕಟ್ಟಡಗಳನ್ನು ಕಟ್ಟಲು ಅವಶ್ಯವಾದ ಮರಗಳನ್ನು ಎಲ್ಲಾದರೊಂದೆಡೆ ನೆಟ್ಟಾದರೂ ಬೆಳೆಸಿಕೊಳ್ಳಬಹುದು. ಆದರೆ ಕಲ್ಲು-ಕಬ್ಬಿಣ, ಮರಳು-ಸುಣ್ಣ ನೆಟ್ಟು ಬೆಳೆಸಲು ನಮ್ಮಿಂದ ಸಾಧ್ಯವೆ?

ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.

ವಂದನೆಗಳು.
ಡಾ. ಎಸ್. ವಿ. ನರಸಿಂಹನ್ ವಿರಾಜಪೇಟೆ 571 218


ಈ ವರ್ಷದ ವಿಶೇಷ ವನ್ಯಜೀವಿ ಸಂದೇಶವಾಹಕ

ಮೋನಾಲ್: ಕೋಳಿ ಮತ್ತು ನವಿಲಿನ ಕುಟುಂಬಕ್ಕೆ ಸೇರಿದ ಮೋನಾಲ್ ಭಾರತದ ಹಿಮಾಲಯದಲ್ಲಿ ವಾಸಿಸುವ ಅತಿ ಸುಂದರ ಹಕ್ಕಿ. ನೇಪಾಳದ ರಾಷ್ಟ್ರಪಕ್ಷಿ ಮತ್ತು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಗಳ ರಾಜ್ಯಪಕ್ಷಿ. ನೀಲಿ, ನೇರಳೆ, ಹಸಿರು, ಕೆಂಪು, ಕೇಸರಿ, ಕಂದು, ಹಳದಿ, ಬಿಳಿ ಮತ್ತು ಕಪ್ಪು ಹೀಗೆ ನವರಂಗಗಳಿಂದ ಕೂಡಿದ ಗಂಡು ಹಕ್ಕಿಗೆ ತಲೆಯ ಮೇಲೆ ಅಷ್ಟೇ ಆಕರ್ಷಕವಾದ ಕಿರೀಟ! ಇಂದು ನಿರಂತರವಾದ ಅರಣ್ಯ ನಾಶ ಮತ್ತು ಕಳ್ಳಬೇಟೆಯಿಂದ ಈ ಹಕ್ಕಿಯ ಸಂತತಿ ನಿರ್ನಾಮವಾಗುತ್ತಿದೆ.


ಕೈಯಲ್ಲೇ ಚಿತ್ರಿಸಿದ ಒಟ್ಟು ಸಂದೇಶಪತ್ರಗಳ ಸಂಖ್ಯೆ: ಈ ವರ್ಷ ೧೪೫೦; ಕಳೆದ ೨೭ ವರ್ಷಗಳಲ್ಲಿ ೫೫,೩೨೦.
ಸಂದೇಶಪತ್ರಗಳನ್ನು ಪಡೆದವರು: ಈ ವರ್ಷ ೧,೦೨೦; ಕಳೆದ ೨೭ ವರ್ಷಗಳಲ್ಲಿ ೭,೯೧೦.
ದಯವಿಟ್ಟು ಹೆಚ್ಚುಹೆಚ್ಚು ಅಂಚೆಚೀಟಿಗಳನ್ನು ಕಳುಹಿಸಿ, ನನ್ನ ಅಂಚೆವೆಚ್ಚವನ್ನು ತಗ್ಗಿಸಲು ಸಹಕರಿಸಿ.


Saturday, July 2, 2011

ಚುಟಕ ಬ್ರಹ್ಮನ ಕನ್ನಡ ವೈಭವ

ಮಾನ್ಯ ಶಿವರಾಮ ಭಟ್ಟರು ನಿಮಗೆಲ್ಲ ಪರಿಚಿತರಲ್ಲದಿರಬಹುದು. ಎಲ್‌ಐಸಿ ಅಧಿಕಾರಿಯಾಗಿ ನಿವೃತ್ತರಾಗಿ ಈಗ ಉಡುಪಿಯಲ್ಲಿ ನೆಲೆಸಿದ್ದಾರೆ. ಶಿವರಾಮ ಭಟ್ಟರ ವಿಶೇಷತೆ ಏನಪ್ಪಾ ಎಂದರೆ, ಅವರು ಒಂದು ಗುಂಡುಕಲ್ಲನ್ನಾದರೂ ಮಾತನಾಡಿಸಿ ಸ್ನೇಹ ಸಂಪಾದಿಸಿಬಿಡುತ್ತಾರೆ! ಅದೇನು ಮಹಾ, ಎಷ್ಟೋ ಮಂದಿ ಇಂತಹ ಹರಟೆಮಲ್ಲರನ್ನು ನಾವು ಕಂಡಿದ್ದೇವೆ ಎಂದು ನೀವು ಹೇಳಬಹುದು. ಆದರೆ ಶಿವರಾಮ್‌ರವರ ಸ್ನೇಹ ಶೀಘ್ರದಲ್ಲಿ ಬಿಟ್ಟು ಹೋಗುವಂತಹದ್ದಲ್ಲ. ಒಂದು ಸಾರಿ ನೀವು ಅವರ ಸ್ನೇಹಿತರಾಗಿಬಿಟ್ಟರೆ ಅದು ವಜ್ರದಂತೆ ಉಳಿಯುವ ನಿರಂತರ ಗೆಳೆತನ! ಗೆಳೆತನವನ್ನು ಸಂಪಾದಿಸುವುದು ಎಷ್ಟು ಮುಖ್ಯವೋ ಅದನ್ನು ಉಳಿಸಿಕೊಳ್ಳುವುದೂ ಅಷ್ಟೇ ಮುಖ್ಯ. ಅವರು ನಮ್ಮೂರಿನ ಎಲ್‌ಐಸಿ ಆಫೀಸನ್ನು ಬಿಟ್ಟು ಹತ್ತು ವರ್ಷಗಳ ನಂತರವೂ ಉಡುಪಿಯ ತಮ್ಮ ತಮ್ಮನ ಮನೆ ಒಕ್ಕಲಿಗೆ ಆಮಂತ್ರಣ ಕಳುಹಿಸಿದ್ದು ಆ ಸ್ಥಿರವಾದ ಗೆಳೆತನದಿಂದಲೇ!


ಗೃಹಪ್ರವೇಶ ಕಾರ್ಯಕ್ರಮಕ್ಕೆ ಹೋಗಲು ಆಗಿಂದಾಗಲೇ ತೀರ್ಮಾನಿಸಿಬಿಟ್ಟೆ. ಇಲ್ಲಿಂದ ಇನ್ನೂರು ಕಿಲೋಮೀಟರ್ ದೂರದ ಊರಿಗೆ ಹೋಗಲು ಮತ್ತೊಂದು ಕಾರಣ ಅವರ ತಮ್ಮ ಡುಂಡಿರಾಜ ಭಟ್ಟರು. ನನ್ನಲ್ಲಿರುವ ಡುಂಡಿರಾಜರ ಹನಿಗವನಗಳ ಹಲವು ಪುಸ್ತಕಗಳನ್ನು ಓದಿದ್ದೆನೇ ವಿನಃ ಅವರನ್ನು ಕಂಡಿರಲಿಲ್ಲ. ಅಲ್ಲಿ ಅಷ್ಟೇ ಗಟ್ಟಿತನದ ಡುಂಡಿರಾಜರ ಸ್ನೇಹವೂ ದೊರಕಿತು.


ನಮ್ಮೂರಿನ ಹತ್ತಿರವಿರುವ ಅರಮೇರಿ ಗ್ರಾಮದ ಕಳಂಚೇರಿ ಮಠದಲ್ಲಿ ಅಲ್ಲಿನ ಯುವ ಸ್ವಾಮೀಜಿಯವರು ಪ್ರತಿ ತಿಂಗಳ ಮೊದಲ ಭಾನುವಾರ ‘ಹೊಂಬೆಳಕು’ ಎಂಬ ಮಾಸಿಕ ತತ್ತ್ವಚಿಂತನ ಗೋಷ್ಠಿಯನ್ನು ಕಳೆದ ನೂರು ತಿಂಗಳುಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಧರ್ಮ, ತತ್ತ್ವ, ವಿಜ್ಞಾನ, ಪರಿಸರ, ಖಗೋಳ ಮುಂತಾದ ವಿವಿಧ ವಿಷಯಗಳಲ್ಲದೆ, ನೃತ್ಯ, ಸಂಗೀತ, ಭಾಷೆ, ಸಾಹಿತ್ಯ, ಸಂಸ್ಕೃತಿ ಹೀಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಕಂಡಿದ್ದೇವೆ, ಕೇಳಿದ್ದೇವೆ ಮತ್ತು ಅನುಭವಿಸಿದ್ದೇವೆ. ಇಂತಹ ಒಂದು ಭಾನುವಾರ ಡುಂಡಿರಾಜರನ್ನೂ ಕರೆಸಿದ್ದರು. ಆ ಕಾರ್ಯಕ್ರಮದ ಉದ್ಘಾಟನಾ ಭಾಷಣದಲ್ಲಿ ನಾನು ಡುಂಡಿರಾಜರ ಹನಿಗವನಗಳನ್ನೇ ಆಧಾರವಾಗಿಟ್ಟುಕೊಂಡು ಕನ್ನಡ ಎಷ್ಟೊಂದು ಸುಂದರ ಭಾಷೆ ಎಂಬುದನ್ನು ತೋರಿಸಲು ಪ್ರಯತ್ನಿಸಿದ್ದೇನೆ.


ಹನಿಗವನಗಳ ರಚನೆಯಲ್ಲಿ ವಿಶಿಷ್ಟವಾದ ಮೊನಚಿನಿಂದ ಹಾಸ್ಯದ ಲೇಪನ ಮಾಡಿ ಅರ್ಥವನ್ನು ಫಳಕ್ಕನೆ ಮಿಂಚಿಸುತ್ತ ಬರೆಯುವವರಲ್ಲಿ ಡುಂಡಿರಾಜರು ಪ್ರಸಿದ್ಧರು. ಅವರು ಈ ಸಾಹಿತ್ಯಪ್ರಕಾರದಲ್ಲಿ ಕನ್ನಡ ಭಾಷೆಯ ಪದಗಳನ್ನು ಎಷ್ಟು ನಿಷ್ಕೃಷ್ಟವಾಗಿ ಉಪಯೋಗಿಸಿಕೊಂಡಿದ್ದಾರೆಂಬುದನ್ನು ಅವರ ಚುಟಕಗಳಲ್ಲಿ ನಾವು ಗಮನಿಸಬಹುದು. ಅದಕ್ಕಿಂತಲೂ ಹೆಚ್ಚಾಗಿ ಚುಟಕ ಸಾಹಿತ್ಯಕ್ಕೆ ಕನ್ನಡ ಭಾಷೆ ಎಷ್ಟು ಸಮರ್ಥವಾದ ಅಡಿಪಾಯ ಹಾಕಿಕೊಡಬಲ್ಲದು ಎಂಬುದೂ ನಮಗೆ ವೇದ್ಯವಾಗುತ್ತದೆ!


ಪ್ರಾಸ:
ಇದು ಎಲ್ಲ ಚುಟಕ ಸಾಹಿತ್ಯದಲ್ಲೂ ಅತ್ಯವಶ್ಯ. ಅಡಿ, ಕಡಿ, ಬಡಿ, ಮಡಿ ..., ಆಟ, ಪಾಟ, ಮಾಟ, ಲೋಟ ..., ಇವೆಲ್ಲ ಪ್ರಾಸಗಳು. ಹೀಗಾಗಿ ಪ್ರಾಸಬದ್ಧ ಚುಟಕಗಳಿಗೆ ನಾನು ವಿಶೇಷ ಉದಾಹರಣೆ ನೀಡುವ ಅವಶ್ಯಕತೆಯೇ ಇಲ್ಲ.


ಪದಲೋಪ:
ಮನೆಮುರುಕರನ್ನು ನೀವು ಕಂಡಿರಬಹುದು; ಮನೆ ಮುರಿದರೆ ನಿಮಗೆ ಆಗುವುದು ನಷ್ಟವೇ! ಆದರೆ ಒಂದು ಕನ್ನಡ ಪದವನ್ನು ಮುರಿದು, ಒಂದು ಅಕ್ಷರವನ್ನು ಕಿತ್ತುಹಾಕಿ, ಉಳಿದ ಭಾಗವನ್ನು ಹೊಸ ಅರ್ಥದೊಂದಿಗೆ ಬಳಸಿಕೊಂಡು ರಚಿಸಿದ ಚುಟಕ ಹೀಗಿದೆ:


ಅಯ್ಯಾ ಕುಮಾರವ್ಯಾಸ
ನಾನು ನಿನ್ನ ದಾಸ
ನೀನು ಬರೆದದ್ದು
ಭಾಮಿನಿ
ನನ್ನದು ಬರೇ
ಮಿನಿ!


ಪದಬಂಧ:
ಇದು ಮೊದಲ ಸನ್ನಿವೇಶಕ್ಕೆ ವಿರುದ್ಧ. ಅಲ್ಲಿ ಪದವನ್ನು ಮುರಿದಿರಿ. ಇಲ್ಲಿ ಎರಡು ಪದಗಳನ್ನು ಜೋಡಿಸಿ ಸಿಗುವ ಹೊಸ ಅರ್ಥದ ಪದವನ್ನು ಬಳಸಿಕೊಂಡು ಹೇಗೆ ಚುಟಕವನ್ನು ರಚಿಸಬಹುದು ಎಂಬುದಕ್ಕೆ ಉದಾಹರಣೆ:


ಬರೆದೂ ಬರೆದೂ
ಕನ್ನಡ ಕವನ
ಪಡೆದೆನು
ಕನ್ನಡಕವನ್ನ!


ಪದಭಂಗ:
ಒಂದು ಪದವನ್ನು ಕತ್ತರಿಸಿ ಆ ಎರಡೂ ಭಾಗಗಳನ್ನು ಬಳಸಿ ಹನಿಗವನ ರಚಿಸಿದರೆ ಹೇಗಿರುತ್ತದೆ, ಎನ್ನುವುದಕ್ಕೆ ತಗೊಳ್ಳಿ ಈ ಮಿನಿ ಕವನ:


ಏನೆಂದೆ ಪ್ರಿಯಾ?
ನಾನು ಸದಾ ನಗಬೇಕು ಅಂದೆಯಾ?
ನಗಬೇಕಾದರೆ ನನಗೆ
ಮೈತುಂಬ ನಗ
ಬೇಕು!


ಮತ್ತೊಂದು:


"ನನ್ನೊಲವಿನ ದೀಪಾ!
ಆಗು ನನ್ನ ಬಾಳಿಗೆ ನಂದಾದೀಪ"
ಎಂದೆಲ್ಲ ಪ್ರೇಮ ಪತ್ರ
ಬರೆದಿದ್ದ ಹುಡುಗ
ಕೇಳುತ್ತಿದ್ದಾನಂತೆ ಈಗ
"ಆ ಪತ್ರ ನನ್ದಾ ದೀಪಾ?"


ಆಗಮ:
ಸಂದಿ-ಸಮೋಸಗಳನ್ನೆಲ್ಲ ನೀವು ಹೈಸ್ಕೂಲಿನಲ್ಲಿ ಸವಿದಿರಬಹುದು. ನನಗೂ ಮರೆತು ಹೋಗಿದೆ. ಒಂದು ಪದಕ್ಕೆ ಮತ್ತೊಂದು ಅಕ್ಷರವನ್ನು ತಂದು ಜೋಡಿಸಿ ಅದರಿಂದ ಉದ್ಭವವಾದ ಹೊಸ ಪದದಿಂದ ಇಗೊಳ್ಳಿ ಚಾರ್ಲಿ ಚಾಪ್ಲಿನ್‌ನ ಹಾಸ್ಯವನ್ನು ನೆನಪಿಸುವಂತಹ ಉದಾಹರಣೆ:


ಹೊರಗಡೆ ಭರ್ಜರಿ
ಬಣ್ಣದ ಅಂಗಿ
ಹರಿದಿದೆ ಒಳಗಿನ
ಬನಿಯನ್ನು.
ಹೂತಿಡುವೆನು ನಗೆ
ಮಾತುಗಳೊಳಗೆ
ನೋವು ವಿಷಾದ ಕಂ-
ಬನಿಯನ್ನು!


ಆಮದು/ರಫ್ತು:
ಕೆಲವು ಕನ್ನಡ ಪದಗಳಿವೆ. ಅವುಗಳ ಉಚ್ಛರಣೆ ಮತ್ತೊಂದು ಭಾಷೆಯ ಪದವೂ ಆಗಿರುತ್ತದೆ. ಅಂತಹ ಸಂದರ್ಭವನ್ನು ಬಳಸಿಕೊಂಡು ರಚಿಸಿದ ಚುಟಕ ಹೀಗಿದೆ:


ಇದೇ ಕವನಗಳನ್ನು ಈ ಹಿಂದೆ
ಇದೇ ಬುದ್ಧಿಜೀವಿ ಗೆಳೆಯರ ಮುಂದೆ
ಓದಿದಾಗ ಅಷ್ಟೊಂದು
ಪರಿಣಾಮ ಬೀರಿರಲಿಲ್ಲ.
ಯಾಕೆಂದರೆ ಅಲ್ಲಿ
ಬೀರಿರಲಿಲ್ಲ.


ಮತ್ತೊಂದು:


ತಿಂಗಳ ಮೊದಲು

ಸಾಲರಿ

ತಿಂಗಳ ಕೊನೆಯಲ್ಲಿ

ಸಾಲ ರೀ!


ಪದವ್ಯತ್ಯಯ:
ಪದದ ಒಂದು ಅಕ್ಷರವನ್ನು ಅತ್ಯಲ್ಪ ಬದಲಾಯಿಸಿ ದೊರಕುವ ಹೊಸ ಪದದ ಆವಿಷ್ಕಾರ ಹೇಗಿರಬಹುದು ಎನ್ನುವುದಕ್ಕೆ ಈ ಎರಡು ಹನಿಗವನಗಳನ್ನು ಗಮನಿಸಿ:


ಬಡವನಾದರೂ ಪ್ರಿಯೆ
ಹೃದಯ ಸಂಪತ್ತಿನಲ್ಲಿ
ನಾನೂ ಟಾಟಾ ಬಿರ್ಲಾ
ಎಂದ ತಕ್ಷಣ
ಹುಡುಗಿ ಹೇಳಿದಳು -
ಹಾಗಾದ್ರೆ ಟಾಟಾ ! ಬರ್ಲಾ ?


ಮತ್ತೊಂದು:


ಹಾಸ್ಯ ಕವನ
ಓದುವಾಗ ಜನ
ಬಿದ್ದು ಬಿದ್ದು ನಕ್ಕರು
ಕವಿಗೆ ಗೊತ್ತೇ ಇಲ್ಲ
ಪಂಚೆ ಜಾರಿ ಹೋಗಿ
ತೋರುತ್ತಿತ್ತು ನಿಕ್ಕರು!


ದ್ವಂದ್ವಾರ್ಥ:
ಹಾಗೆಂದೊಡನೆ ನಮಗೆ ನೆನಪಾಗುವುದು ಅಶ್ಲೀಲ ಸಾಹಿತ್ಯ. ಸಿನೆಮಾ-ನಾಟಕಗಳಲ್ಲಿ ನೀವು ಕೇಳಿರಬಹುದು. ಆದರೆ ಒಂದೇ ಪದಕ್ಕೆ ಬೇರೆ ಬೇರೆ ಎರಡು ಅರ್ಥಗಳಿರುವಂತಹ ಸನ್ನಿವೇಶಗಳು ಕನ್ನಡದಲ್ಲಿ ಹೇರಳವಾಗಿವೆ. ಅಂತಹ ಪದಗಳನ್ನು ಬಳಸಿಯೂ ಹನಿಗವನ ರಚಿಸಬಹುದೆಂದು ಈ ಉದಾಹರಣೆಗಳನ್ನು ನೋಡಿದರೆ ನಿಮಗೆ ತಿಳಿಯುತ್ತದೆ: ನವೆಂಬರ್ ಬಂತೆಂದರೆ ಎಲ್ಲರಿಗೂ ಎಲ್ಲಿಲ್ಲದ ಹುರುಪು! ಎಲ್ಲೆಲ್ಲೂ ಕನ್ನಡ ಪತಾಕೆ, ಎಲ್ಲೆಲ್ಲೂ ಕನ್ನಡಮ್ಮನ ಗಾನ, ಜೊತೆಗೆ ಕನ್ನಡ ಕಾರ್ಯಕ್ರಮಗಳಿಗೆ ಗಲ್ಲಿಗಲ್ಲಿಗಳಲ್ಲಿ ಚಂದಾ ವಸೂಲಿ!


ಕನ್ನಡಕ್ಕೆ ಹೋರಾಡುವ ನೀನು
ನಿಜಕ್ಕೂ ಕನ್ನಡದ ಕಲಿ!
ಆದರೂ ಒಂದೆರಡು
ಕನ್ನಡ ಅಕ್ಷರ ಕಲಿ!


ಇದು ಬಿ ಆರ್ ಎಲ್‌ರವರ ಹನಿಗವನ. ಮತ್ತೊಂದು ಡುಂಡಿರಾಜರದ್ದು:


ಗೆಳೆಯಾ ಒಪ್ಪಿದೆ
ನೀನು ನುಡಿದರೆ
ಮುತ್ತಿನ ಹಾರದಂತೆ!
ಆದರೂ ತುಸು
ಎಚ್ಚರ ವಹಿಸು
ಎಂಜಲು ಹಾರದಂತೆ!


ಯದಾರ್ಥ:
ಕೊನೆಗೆ ಒಂದು ಕನ್ನಡ ಪದ. ಇದಕ್ಕೆ ಯಾವ ದ್ವಂದ್ವಾರ್ಥವೂ ಇಲ್ಲ, ಯಾವ ಬದಲಾವಣೆಯೂ ಇಲ್ಲ. ಇರುವುದಿದ್ದಂತೆಯೇ ಬರೆದು ಅದಕ್ಕೆ ಎರಡು ಅರ್ಥ ಬರುವಂತೆ ಮಾಡಲು ಸಾಧ್ಯವೆ? ಅಕ್ಟೋಬರ್ ೨ರಂದು ನೀವು ತೆಗೆದುಕೊಳ್ಳಬಹುದಾದ ಪ್ರತಿಜ್ಞೆ:


ಗಾಂಧಿ ತಾತಾ
ನೀನು ಹೇಳಿದಂತೆ
ಮಾಡುತ್ತೇವೆ.
ಕೆಟ್ಟದ್ದನ್ನು ಕೇಳುವುದಿಲ್ಲ,
ಕೆಟ್ಟದ್ದನ್ನು ನೋಡುವುದಿಲ್ಲ,
ಕೆಟ್ಟದ್ದನ್ನು ಆಡುವುದಿಲ್ಲ.
ಮಾಡುತ್ತೇವೆ!


ಡುಂಡಿರಾಜರ ಈ ಪದ ಚಮತ್ಕಾರಗಳನ್ನು ಓದಿದಾಗ ನಮಗೆಲ್ಲ ಸ್ವಾಭಾವಿಕವಾಗಿಯೇ ಇಂತಹ ಚುಟಕಗಳನ್ನು ಬರೆಯುವ ಚಪಲ ಉಂಟಾಗುತ್ತದೆ. ಇದೇನು ಮಹಾ, ನಮಗೂ ಕನ್ನಡ ಬರುವುದಿಲ್ಲವೆ? ಅದೇನು ಭಾರಿ ವಿದ್ಯೆಯೇ ಎಂದು ಅನ್ನಿಸುವುದೂ ಸಹಜವೆ. ನೀವೂ ಚುಟಕಗಳನ್ನು ಧಾರಾಳವಾಗಿ ಬರೆಯಲು ಪ್ರಯತ್ನಿಸಬಹುದು. ನಾನೂ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಅದಕ್ಕಾಗಿ ಕನ್ನಡ ನಿಘಂಟೊಂದನ್ನು ಎದುರಿಗಿಟ್ಟುಕೊಂಡು ಈ ಸಾಧನೆ ಮಾಡಲು ಹೊರಟೆ. ನಿಘಂಟಿನಲ್ಲಿ ‘ಅ’ಯಿಂದ ‘ಳ’ವರೆಗೆ ಒಂದೊಂದೇ ಪದವನ್ನು ಅಗೆದು-ಬಗೆದು, ಕತ್ತರಿಸಿ-ಮೊಟಕಾಯಿಸಿ, ಸಂಕಲನ-ವ್ಯವಕಲನ, ಹೀಗೆ ಎಷ್ಟೆಲ್ಲ ಸರ್ಕಸ್ ಮಾಡಿದರೂ ನನ್ನ ನಿಘಂಟು ಚಿಂದಿ-ಚಿತ್ರಾನ್ನವಾಯಿತೇ ವಿನಃ ಒಂದು ಚುಟಕ ಹುಟ್ಟಲಿಲ್ಲ!


ಡುಂಡಿರಾಜರ ಹನಿಗವನಗಳನ್ನು ಇತರೆ ಜನರಿಗೂ ತಿಳಿಹೇಳಬೇಕು, ತಿಳಿಹಾಸ್ಯದ ಚುಟಕಗಳನ್ನು ಕೇಳಿ ಎಲ್ಲರೂ ನಗಬೇಕು, ಇವರ ಅಪ್ರತಿಮ ಪ್ರತಿಭೆಯನ್ನು ದೇಶದ ಎಲ್ಲೆಡೆ ಸಾರಬೇಕೆಂದು ಅನ್ನಿಸುತ್ತದೆ. ಆದರೆ ಒಂದು ಭಾಷೆಯ ಸೊಗಡು ಆ ಭಾಷೆಗೇ ಸೀಮಿತವಾದ್ದರಿಂದ ಅವರ ಹನಿಗವನಗಳನ್ನು ಬೇರೆ ಭಾಷೆಗಳಿಗೆ ತರ್ಜುಮೆ ಮಾಡುವುದು ದುಃಸ್ಸಾಧ್ಯ.


ಡುಂಡಿರಾಜರು ಬರೇ ಹನಿಗವನಗಳ ಕರ್ತೃವಲ್ಲ. ಅವರೊಬ್ಬ ನಾಟಕಕಾರ, ಒಬ್ಬ ಕಲಾವಿದ ಮತ್ತು ಒಬ್ಬ ಸಾಹಿತ್ಯ ವಿಮರ್ಶಕರೂ ಹೌದು. ಇದು ಚುಟಕ ಬ್ರಹ್ಮ ಡುಂಡಿರಾಜರ ಕಿರು ಪರಿಚಯ.



ಮತ್ತು ಕನ್ನಡ ಬಹ್ಮಾಂಡದ ಅಣುದರ್ಶನ!


















Thursday, June 2, 2011

ನಮ್ಮ ಹೋಮ್ ಥಿಯೇಟರ್

ನಮ್ಮ ಹೋಮ್ ಥಿಯೇಟರ್


ಇತ್ತೀಚೆಗೆ ನನ್ನಣ್ಣ ಅವನ ಮನೆಗೆ ಹೊಸ ೪೦ ಇಂಚಿನ ಎಲ್ಇಡಿ ಟೀವಿ ಕೊಂಡುಕೊಂಡಿದ್ದ. ನೇರವಾಗಿ ಅದನ್ನು ಗೋಡೆಗೆ ನೇತುಹಾಕಿತ್ತು. ಅದರಲ್ಲಿ ಟಿವಿ ಪ್ರೋಗ್ರಾ∫ಮ್ಸ್ ನೋಡಿದರೆ ಸಿನೆಮಾ ನೋಡಿದ ಅನುಭವವಾಗುತ್ತಿತ್ತು. ನನ್ನ ಹತ್ತಿರವೂ ಎಲ್‍‍ಸಿಡಿ ಪ್ರೊಜೆಕ್ಟರ್ ಇದೆ. ಶಾಲಾ ಕಾಲೇಜುಗಳಲ್ಲಿ ಪವರ್ ಪಾ~ಯ್೦ಟ್ ಪ್ರೆಸೆಂಟೇಶನ್ ಗಳಿಗೆ ಲಾ∫ಪ್ ಟಾ~ಪ್ ನೊಂದಿಗೆ ಬಳಸುತ್ತೇನೆ. ವಿಜ್ಞಾನದಲ್ಲಿ ಹೊಸಹೊಸ ಆವಿಷ್ಕಾರಗಳು ಆದಂತೆಲ್ಲ ಮನೆಗಳಲ್ಲಿ ಹೊಸಹೊಸ ಗಾ∫ಡ್ಜೆಟ್ಸ್ ಹೇಗೆ ಸೇರ್ಪಡೆಯಾಗುತ್ತವೆ!

ಇವನ್ನೆಲ್ಲ ನೋಡಿದಾಗ, ನಾವು ಹುಡುಗರಾಗಿದ್ದಾಗ ನಾವೇ ತಯಾರು ಮಾಡಿದ ಹೋಮ್ ಥಿಯೇಟರ್ ನೆನಪಾಗುತ್ತದೆ. ಬೇಸಿಗೆ ರಜ ಬಂದೊಡನೆ ಇಂತಹ ಎಕ್ಸ್ಟ್ರಾಕರಿಕ್ಯುಲರ್ ಚಟುವಟಿಕೆಗಳು ಚಿಗುರೊಡೆಯುತ್ತಿದ್ದವು. ಮನೆಯ ಸುತ್ತುಮುತ್ತಲ ಓರಗೆಯ ಮಕ್ಕಳೊಂದಿಗೆ ಬೆಳಗಿನಿಂದ ರಾತ್ರಿಯವರೆಗೆ ವಿವಿಧ ರೀತಿಯ ಆಟ, ತಿರುಗಾಟ, ಹೊಡೆದಾಟ ಮುಂತಾದುವುಗಳೊಂದಿಗೆ ಕೆಲವು ಕ್ರಿಯೇಟಿವ್ ಕಾರ್ಯಗಳೂ ಇರುತ್ತಿದ್ದವು! ಅವುಗಳಲ್ಲಿ ಮನೆಯಲ್ಲೇ ಸಿನೆಮಾ ತೋರಿಸುವ ಕಾರ್ಯಕ್ರಮ ಬಹಳ ಜನಪ್ರಿಯವಾಗಿತ್ತು.

ನಮ್ಮ ಹೋಮ್ ಥಿಯೇಟರ್ ನನ್ನ ತಮ್ಮ ನಾರಾಯಣ ಮತ್ತು ನಾನು ಇಬ್ಬರೂ ಸೇರಿ ನಡೆಸುತ್ತಿದ್ದ ಸಿನೆಮಾ. ಆಗ ಅವನು ನಾಲ್ಕನೇ ಕ್ಲಾಸು, ನಾನು ಆರನೇ ಕ್ಲಾಸು. ನಮಗೆ ಈ ಸಿನೆಮಾ ಹುಚ್ಚು ಬಂದಿದ್ದು ನಮ್ಮ ಗುರು ವಿಜಯನಿಂದ. ವಿಜಯ ನಮಗಿಂತ ವಯಸ್ಸಿನಲ್ಲಿ ದೊಡ್ಡವನು, ಹೈಸ್ಕೂಲು. ಆಗಾಗ ಮೈಸೂರಿಗೆ ಹೋಗಿ ಇಂಗ್ಲಿಷ್ ಸಿನೆಮಾಗಳನ್ನೂ ನೋಡಿ ಬರುತ್ತಿದ್ದ. ಆ ಕಥೆಗಳನ್ನು, ಅದರಲ್ಲೂ ಜೇಮ್ಸ್ ಬಾ~೦ಡ್ ಚಿತ್ರಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದ.

ಅವನ ಭಾವ ನಮ್ಮೂರಿನಲ್ಲಿದ್ದ ಚಿತ್ರಮಂದಿರದಲ್ಲಿ ಆಪರೇಟರ್ ಆಗಿದ್ದರು. ಮೊದಲ ಬಾರಿಗೆ ವಿಜಯ ನಮ್ಮನ್ನು ಪಿಕ್ಚರ್ ಥಿಯೇಟರ್‍‍ನ ಕಾ∫ಬಿನ್‍ಗೆ ಕರೆದುಕೊಂಡು ಹೋಗಿದ್ದ! ಅಲ್ಲಿ ಭೂತಾಕಾರದ ಯಂತ್ರದಂತಿದ್ದ ಪ್ರೊಜೆಕ್ಟರ್, ಧೂಳು ಮತ್ತು ಬೀಡಿ ಹೊಗೆಯ ಮಧ್ಯೆ ಚೆಲ್ಲಾಪಿಲ್ಲಿಯಾಗಿ ಹರಡಿಹೋಗಿದ್ದ ಇಗ್ನಿಶನ್ ಕಡ್ಡಿಗಳು, ರಾಶಿರಾಶಿ ಫಿಲ್ಮ್ ರೋಲ್‍ಗಳು ಇವೆಲ್ಲ ನೋಡಿ ದಂಗು ಬಡಿದುಹೋಯಿತು! ನಮ್ಮೂರಿಗೆ ಒಂದು ಸಿನೆಮಾ ಬರಬೇಕಾದರೆ ಅದು ನೂರಾರು ಕಡೆ ಸಾವಿರಾರು ಶೋಗಳನ್ನು ಕಂಡಿರಲೇಬೇಕು. ಹಾಗಾಗಿ ಫಿಲ್ಮ್ ನ ಅಂಚುಗಳು ಎಷ್ಟೋ ಜಾಗಗಳಲ್ಲಿ ಹರಿದು ಹೋಗಿರುತ್ತಿದ್ದವು. ಒಬ್ಬ ಹುಡುಗ ಕುಳಿತುಕೊಂಡು ಸ್ಪೂಲ್‍ನಿಂದ ಫಿಲ್ಮ್ ನಿಧಾನವಾಗಿ ಬಿಡಿಸಿ ಕೆಟ್ಟುಹೋದ ಭಾಗಗಳನ್ನು ಕತ್ತರಿಸಿ ಅಂಟಿಸುತ್ತಿದ್ದ.

ಈ ಸಂದರ್ಭದಲ್ಲಿ ನಮಗೆ ಒಂದು ವಿಚಾರ ಮನದಟ್ಟಾಯಿತು. ಅದೇನೆಂದರೆ, ಮನೆಯಲ್ಲಿ ನಮಗೆ ’ಮೂವಿ’ ಸಿನೆಮಾ ತೋರಿಸಲು ಸಾಧ್ಯವಿಲ್ಲ. ಏಕೆಂದರೆ ಅದಕ್ಕೆ ವಿಶೇಷವಾದ ಯಂತ್ರವೇ ಬೇಕು. ಆದರೆ ನಮ್ಮದೇ ಡಬ್ಬಾ ಪ್ರೊಜೆಕ್ಟರ್ ಮೂಲಕ ’ಸ್ಟಿಲ್ಸ್’ ತೋರಿಸಬಹುದು. ವಿಜಯನ ಭಾವನ ಪರಿಚಯವಾದ ಮೇಲೆ ಅಲ್ಲಿಂದ ಮುಂದೆ ನಾವಿಬ್ಬರೆ ಹೋಗಿ ಅಲ್ಲಿ ಇಲ್ಲಿ ಬಿದ್ದಿದ್ದ ತುಂಡು ಫಿಲ್ಮ್ ಗಳನ್ನು ಸಂಗ್ರಹಿಸುತ್ತಾ ಹೋದೆವು. ಅದರಲ್ಲಿ ವಿವಿಧ ಭಾಷೆಗಳ, ಬೇರೆ ಬೇರೆ ಸಿನೆಮಾಗಳ, ಬೇರೆ ಬೇರೆ ಆ∫ಕ್ಟರ್‍‍ಗಳ ದೊಡ್ಡ ಕಲೆಕ್ಷನ್ನೇ ನಮ್ಮಲ್ಲಿ ಬೆಳೆಯಿತು. ಬಹಳ ಹಳೇ ಕಾಲ ಚಿತ್ರವಾದರೆ ನಮಗೆ ಆ ಚಿತ್ರದ ಹೆಚ್ಚು ಕಟ್‍ಪೀಸ್‍ಗಳು ಸಿಕ್ಕುತ್ತಿದ್ದವು. ಮಹಾಭಾರತ್ ಹಿಂದಿ ಚಿತ್ರದ ಎಲ್ಲಾ ಸೀನುಗಳೂ ಸಿಕ್ಕಿದ್ದವು! ಅವುಗಳಲ್ಲಿ ಅತ್ಯುತ್ತಮವಾದ ಒಂದೊಂದೇ ಪೀಸ್ ಕತ್ತರಿಸಿ ತೆಗೆದು, ಫಿಲ್ಮ್ ಅಳತೆಯ ಕಿಟಕಿಯುಳ್ಳ ಸಣ್ಣ ಸಣ್ಣ ರಟ್ಟುಗಳ ಮಧ್ಯೆ ಅದನ್ನಿಟ್ಟು ನೂರಾರು ಸ್ಲೈಡ್‍ಗಳನ್ನು ತಯಾರಿಸಿದ್ದೆವು.

ಇನ್ನು ನಮ್ಮ ಹಾ∫೦ಡ್ ಮೇಡ್ ಸ್ಲೈಡ್ ಪ್ರೊಜೆಕ್ಟರ್ ನ ಕಥೆಯೇ ಬೇರೆ! ವಿಜಯನ ಹತ್ತಿರ ಆ ಕಾಲದಲ್ಲೇ ಒಂದು ಲೆನ್ಸ್ ಇತ್ತು. ಒಂದು ರಟ್ಟಿನ ಡಬ್ಬಕ್ಕೆ ಅದನ್ನು ಸಿಕ್ಕಿಸಿ ಪ್ರೊಜೆಕ್ಟರ್ ಮಾಡಿದ್ದ. ನಮ್ಮ ಬಳಿ ಪೀನ ಮಸೂರವೇ ಇಲ್ಲವಲ್ಲ? ಕೊನೆಗೆ ನಮಗೆ ದೊರಕಿದ್ದು ಥಾಮಸ್ ಆಲ್ವ ಎಡಿಸನ್ನನ ಎಲೆಕ್ಟ್ರಿಕ್ ಬಲ್ಬ್. ಒಂದು ಲೈಟ್ ಬಲ್ಬಿನ ಒಳಗೆ ಖಾಲಿ ಮಾಡಿ ಅದರಲ್ಲಿ ನೀರು ತುಂಬಿದರೆ ಅತ್ಯುತ್ತಮ ಲೆನ್ಸ್ ತಯಾರಾಗುವುದೆಂದು ತಿಳಿಯಿತು. ಆದರೆ ಈ ಖಾಲಿ ಮಾಡುವ ಕೆಲಸ ಬಹಳ ನಾಜೂಕು. ಬಲ್ಬ್ ‍ನ ಮಧ್ಯದಲ್ಲಿ ವೈರ್ ಮತ್ತು ಟಂಗ್‍ಸ್ಟನ್ ಎಳೆವನ್ನು ಹಿಡಿದಿಟ್ಟುಕೊಳ್ಳಲು ಮೇಲಿನಿಂದ ಇಳಿಬಿಟ್ಟಂತೆ ಒಂದು ಗಾಜಿನ ವ್ಯವಸ್ಥೆಯಿರುತ್ತದೆ. ಇದನ್ನು ಹೊರಗಿನ ಗಾಜು ಬುರುಡೆಗೆ ಅಂಟಿಸಿರುವುದಿಲ್ಲ. ಹೊರಗೆ-ಒಳಗೆ ಅವೆಲ್ಲ ಒಂದೇ ಗಾಜಿನ ತುಂಡು. ಅದರ ಹೋಲ್ಡರ್ ಮಾತ್ರ ಲೋಹದ್ದು.






ಮೊದಲು ಹೋಲ್ಡರ್‍ ನ ಒಳಗಡೆ ತುಂಬಿಸಿರುವ ಅರಗನ್ನು ಕೊರೆದು ತೆಗೆಯಬೇಕು. ಇದು ಸುಲಭದ ಕಾರ್ಯ. ಮುಂದಿನ ಕೆಲಸ ಬಹಳ ಕಷ್ಟಕರವಾದದ್ದು. ಸ್ಕ್ರೂಡ್ರೈವರ್ ನಿಂದ ಮೆತ್ತಗೆ ಟ‘ರ್ಮಿನಲ್ಸ್, ವೈರ್ ಮತ್ತು ಟಂಗ್‍ಸ್ಟನ್ ಸಮೇತ ಒಳಗಿನ ಗಾಜನ್ನು ಒಟ್ಟಾಗಿ ಒಡೆದು ಹೊರತೆಗೆಯಬೇಕು. ಈ ಹಂತದಲ್ಲಿ ಬಹಳಷ್ಟು ಸಾರಿ ಹೋಲ್ಡರ್ ಕಿತ್ತು ಬರುವುದು, ಅದರೊಂದಿಗೆ ಬಲ್ಬಿನ ತೆಳುವಾದ ಗಾಜು ಕ್ರಾ∫ಕ್ ಬಂದು ಒಡೆದುಹೋಗುವುದು, ಕೈಗೆ ಗಾಯ ಆಗುವುದು ಸಾಮಾನ್ಯ. ಹೀಗೆ ಹತ್ತಾರು ಬಲ್ಬುಗಳನ್ನು ಹಾಳು ಮಾಡಿದ ನಂತರ ನಮಗೆ ಸಿಕ್ಕಿದ್ದು ಅಬ್ರಹಮ್. ಅವನು ಎಸ್ಸೆಸ್ಸಲ್ಸಿ. ರಜಾ ಟೈಮಿನಲ್ಲಿ ತಂದೆಯ ಜೊತೆ ಅಂಗಡಿಗೂ ಹೋಗುತ್ತಿದ್ದ. ಹೀಗಾಗಿ ಬಹಳ ಬಿಜಿ ಮನುಷ್ಯ. ಹಲವು ಬಾರಿ ಅವನ ಮನೆಗೆ ತಿರುಗಿ, ಪುಸಲಾಯಿಸಿ ಕೆಲಸ ಮಾಡಿಸಿಕೊಳ್ಳಬೇಕು. ಇಷ್ಟಾಗಿಯೂ ಅವನದ್ದೇನೂ ನೂರು ಪರ್ಸೆಂಟ್ ಸಕ್ಸೆಸ್ಸ್ ರೇಟ್ ಅಲ್ಲ. ನಾವು ಕಷ್ಟಪಟ್ಟು ರಾ∫ಗ್ ಪಿಕ್ಕಿಂಗ್ ಮಾಡಿ ಸಂಪಾದಿಸಿ ಕೊಟ್ಟ ಹತ್ತು ಬಲ್ಬುಗಳಲ್ಲಿ ಏಳು ಮಾತ್ರ ನಮಗೆ ಸಿಗುತ್ತಿತ್ತು. ಉಳಿದವು ಅವನ ಕೈಯ್ಯಲ್ಲೂ ಒಡೆದು ಹೋಗುತ್ತಿದ್ದವು. ಕೇಳಿದರೆ “ಅಮ್‍ರ್ ಬಿಟ್ಟೆ” ಎನ್ನುತ್ತಿದ್ದ. ಅವನಿಗೆ ಅಮರ್ ಅಬ್ರಹಮ್ ಎಂತಲೇ ಹೆಸರಾಗಿದ್ದು ಹೀಗೆ!

ನಂತರ ನಮ್ಮ ಪ್ರೊಜೆಕ್ಟರ್. ಒಂದು ಚಿಕ್ಕ ರಟ್ಟಿನ ಡಬ್ಬಕ್ಕೆ ಹಿಂದುಗಡೆ ಫಿಲ್ಮಿನ ಅಳತೆಗೆ ಸರಿಯಾಗಿ ಕಿಂಡಿಯನ್ನು ಕತ್ತರಿಸಿ, ಮುಂದುಗಡೆ ಚಿತ್ರ ಹಾದು ಹೋಗಲು ತಕ್ಕ ಗಾತ್ರದ ತೂತವನ್ನು ಕತ್ತರಿಸಿ, ನೀರು ತುಂಬಿದ ಬಲ್ಬನ್ನು ಮಧ್ಯೆ ನೇತು ಹಾಕಿದರೆ ಮುಗಿಯಿತು. ನೇತು ಹಾಕಿದ ಬಲ್ಬನ್ನು ಒಂದು ಸಣ್ಣ ಕೋಲಿಗೆ ಕಟ್ಟಿ ಆ ಕಡ್ಡಿಯನ್ನು ಮುಂದಕ್ಕೋ ಹಿಂದಕ್ಕೋ ಮೆತ್ತಗೆ ತಳ್ಳಿದರೆ ಗೋಡೆಯ ಮೇಲೆ ಚಿತ್ರ ಫೋಕಸ್ ಆಗುತ್ತದೆ.





ಇನ್ನು ಉಳಿದಿದ್ದು ಮುಖ್ಯವಾದ ಭಾಗ, ಸಿನೆಮಾ ತೋರಿಸುವುದು. ನಮ್ಮ ಮನೆಯ ಹಾಲಿನ ಪಕ್ಕ ಎರಡು ದೊಡ್ಡ ಕೋಣೆಗಳಿವೆ. ಮುಂದುಗಡೆ ಆ~ಫೀಸ್‍ರೂಮ್ ಮತ್ತು ಅದಕ್ಕೆ ಸೇರಿದ ಹಾಗೆ ನಾವು ಮಲಗುವ ಬೆಡ್‍ರೂಮ್. ಈ ಕೋಣೆಗೆ ಆ~ಫೀಸ್‍ರೂಮ್ ಮತ್ತು ಹಾಲ್, ಎರಡು ಕಡೆಯಿಂದಲೂ ಬಾಗಿಲುಗಳಿವೆ. ಮಲಗುವ ಕೋಣೆಯೇ ನಮ್ಮ ಥಿಯೇಟರ್. ಅದರ ಕಿಟಕಿಗೆ ಕಂಬಳಿ ಹೊದಿಸಿ, ಹೊರ ಬಾಗಿಲು ಹಾಕಿದರೆ, ಕತ್ತಲು ಕೋಣೆ ರೆಡಿ. ಮೊದಲು ಬೀದಿಯ ಕಡೆಯಿಂದ ಸೂರ್ಯನ ಬೆಳಕನ್ನು ಒಂದು ಕನ್ನಡಿಯ ಮೂಲಕ ಆ~ಫೀಸ್‍ರೂಮಿನೊಳಕ್ಕೆ ಬಿಡಬೇಕು. ನಮಗೆ ಇದಕ್ಕೇ ಹೇಳಿ ಮಾಡಿಸಿದ ಹಾಗೆ ಸಿಕ್ಕಿದ್ದು ನಮ್ಮ ತಂದೆ ದಿನಾ ಶೇವ್ ಮಾಡಿಕೊಳ್ಳಲು ಬಳಸುತ್ತಿದ್ದ ಕನ್ನಡಿ. ಏಕೆಂದರೆ ಅಗಲವಾಗಿದ್ದ ಆ ಕನ್ನಡಿಯನ್ನು ಹೊರಗಿನ ಕಾಂ~ಪೌಂಡ್ ಮೇಲೆ ಹೇಗೆ, ಯಾವ ಆಂ∫ಗಲ್‍ನಲ್ಲಿ ಬೇಕಾದರೂ ಹೆಚ್ಚು ಶ್ರಮವಿಲ್ಲದೆ ಇರಿಸಬಹುದಾಗಿತ್ತು. ಈ ಬೆಳಕನ್ನು ನಮ್ಮ ಪ್ರೊಜೆಕ್ಟರ್ ಡಬ್ಬದ ಮೇಲೆ ಬೀಳುವಂತೆ ಟೇಬಲ್ ಮೇಲೆ ಜೋಡಿಸಿದೆವು. ಎರಡು ಕೋಣೆಗಳಿಗೂ ಮಧ್ಯೆ ಇದ್ದ ಬಾಗಿಲನ್ನು ನಡುವೆ ಚಿತ್ರದ ಬಿಂಬ ಹೋಗಲು ಮಾತ್ರ ತಕ್ಕಷ್ಟು ಜಾಗ ಬಿಟ್ಟು ಮುಚ್ಚಿದೆವು.

ಇನ್ನು ಸೌಂಡ್ ಸಿಸ್ಟಮ್‍ನ ತಯಾರಿ. ಇದು ನಾರಾಯಣನ ಸುಪರ್ದಿಗೆ ಬಿಟ್ಟಿದ್ದು. ಅವನು ಆಗಲೇ ಚೆನ್ನಾಗಿ ಹಾಡುತ್ತಿದ್ದ. ಜೊತೆಗೆ ಅಣಕು ಪರಿಣತ. ಕನ್ನಡ, ತಮಿಳು, ಹಿಂದಿ ಚಿತ್ರಗಳ ಆ∫ಕ್ಟರ್ ಗಳನ್ನು ಚೆನ್ನಾಗಿಯೇ ಮಿಮಿಕ್ ಮಾಡುತ್ತಿದ್ದ. ಬಚ್ಚಲು ಮನೆಯಿಂದ ಕತ್ತರಿಸಿದ ರಬ್ಬರ್ ಪೈಪನ್ನು ತಂದು ಅದರ ಒಂದು ತುದಿ ನಮ್ಮ ಪ್ರೊಜೆಕ್ಟರ್ ರೂಮ್‍ನ ಟೇಬಲ್ ಕೆಳಗಿಟ್ಟು, ಅದರ ಇನ್ನೊಂದು ತುದಿಯನ್ನು ಒಂದು ಅಲ್ಯುಮಿನಿಯಮ್ ಡಬ್ಬದೊಳಗಿಟ್ಟು ಅದನ್ನು ಥಿಯೇಟರ್ ರೂಮ್‍ನ ಮಂಚದ ಕೆಳಗಿಟ್ಟಿದ್ದ. ಈ ತುದಿಯಲ್ಲಿ ಮಾತನಾಡಿದರೆ ಮತ್ತೊಂದು ತುದಿಯಲ್ಲಿ ’ಭಂ’ ಎಂದು ಕೇಳಿಸುತ್ತಿತ್ತು.

ಆಯಾ ದಿನ ಶೋಗೆ ಅವಶ್ಯವಾದ ಸ್ಲೈಡ್‍ಗಳನ್ನು ಮೊದಲೇ ಅನುಕ್ರಮವಾಗಿ ಜೋಡಿಸಿಕೊಳ್ಳುತ್ತಿದ್ದೆ. ಪ್ರತಿ ಶೋಗೂ ಒಂದೊಂದು ಥೀಂ ಇರುತ್ತಿತ್ತು. ಬೆಳಕು, ಪ್ರೊಜೆಕ್ಟರ್, ಫೋಕಸ್ ಎಲ್ಲವನ್ನೂ ಮೊದಲೇ ಅಡ್ಜಸ್ಟ್ ಮಾಡಿ ನಂತರ ಪ್ರೇಕ್ಷಕರನ್ನು ಕರೆಯುತ್ತಿದ್ದೆವು. ನಮ್ಮ ಗೌರವಾನ್ವಿತ ಆಡಿಯೆನ್ಸ್ ಯಾರಪ್ಪಾ ಎಂದರೆ, ನಮ್ಮ ಮನೆಯ ಎದುರು ಸಾಲಿನಲ್ಲಿ ಈ ತುದಿಯಿಂದ ಸಾರಂಬಿಯವರ ಮಕ್ಕಳಾದ ಬಾಷ, ನಜೀರ್, ಮೆಹರ್ ಬಾನು ಮತ್ತು ಬೀಬಿ; ಕೊಂಕಣಿಯವರ ಮನೆಯಿಂದ ವಿನುತ ಮತ್ತು ಗಿರೀಶ; ಡ್ರೈವರ್ ಗಣಪಯ್ಯನವರ ಮಕ್ಕಳಾದ ನಟರಾಜ, ನಳಿನಾಕ್ಷ, ಜಲ ಮತ್ತು ಜಯಿ; ಟೈಲರ್ ಮೀನಾಕ್ಷಮ್ಮನವರ ಮನೆಯಿಂದ ಸುಮಾ, ಪ್ರಸಾದಿ ಮತ್ತು ತಾರಾಮಣಿ; ಅವರ ಮನೆಗೆ ಸಮ್ಮರ್ ಹಾ~ಲಿಡೇಸ್ ಗೆ ಬಂದಿರಬಹುದಾದ ನೆಂಟರ ಮಕ್ಕಳು . ಹೀಗೆ ಸುಮಾರು ನರ್ಸರಿ ಕ್ಲಾಸ್‍ನಿಂದ ಐದನೇ ಕ್ಲಾಸ್‍ವರೆಗಿನ ೧೨-೧೪ ಜನ.

ನಮ್ಮ ಬಳಿ ವಿಶೇಷ ಸಂದರ್ಭಗಳಿಗೆ ಕೆಲವು ಸ್ಪೆಶಲ್ ಸ್ಲೈಡ್‍ಗಳಿದ್ದವು. ಶುರುವಿನಲ್ಲಿ ವೆಲ್ ಕಂ, ಸುಸ್ವಾಗತ; ನಂತರ ಇಂಟರ್ವಲ್, ಮಧ್ಯಂತರ; ಕೊನೆಗೆ ಶುಭಂ, ದಿ ಎಂಡ್, ಸಮಾಪ್ತ್, ನಮಸ್ಕಾರ, ಹೀಗೆ. ಇದಲ್ಲದೆ, ನಡುನಡುವೆ ಸೂರ್ಯನ ಬೆಳಕು ಚಲಿಸಿ, ಪ್ರೊಜೆಕ್ಟರ್ ನಿಂದ ಹೊರಗೆ ಹೋಗಿ ಬಿಡುತ್ತಿತ್ತು. ಆಗ ನಾರಾಯಣ ಓಡಿ ಹೋಗಿ ಕನ್ನಡಿಯನ್ನು ಪುನಃ ಸರಿಯಾಗಿಟ್ಟು ಬರುತ್ತಿದ್ದ. ಆ ಸಮಯದಲ್ಲಿ ರೀಲ್ ಚೇಂಜ್, ಸೈಲೆನ್ಸ್ ಪ್ಲೀಸ್ ಎಂಬ ಸ್ಲೈಡನ್ನು ತೋರಿಸುತ್ತಿದ್ದೆ.

ನಮ್ಮ ಶೋ ಘಂಟಸಾಲನ ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂನಿಂದ ಶುರುವಾಗುತ್ತಿತ್ತು. ಆಯಾ ಸೀನ್ ಗೆ ತಕ್ಕಂತೆ ನಾರಾಯಣ ತನ್ನ ಮಿಮಿಕ್ರಿ ಸಮೇತ ಕಾಮೆಂಟರಿ ಕೊಡುತ್ತಿದ್ದ. ಕನ್ನಡವಾದರೆ ಕನ್ನಡ, ತಮಿಳಾದರೆ ತಮಿಳು, ಹಿಂದಿಯಾದರೆ ಹಿಂದಿ ಅದೇನು ಗೊತ್ತಿತ್ತೋ ಅದೇ ಹರುಕುಮುರುಕು ಭಾಷೆಯಲ್ಲಿ. ಡಿಶ್ಯುಂ..ಡಿಶ್ಯುಂ.. ಹೊಡೆದಾಟದ ಸ್ಲೈಡ್ ಗಳು, ಯುದ್ಧ, ಸಸ್ಪೆನ್ಸ್ ಸೀನುಗಳು ವಿವಿಧ ಅಡಿಯೋ ಇಫೆಕ್ಟ್ಸ್ ಗಳಿಂದ ಬಹಳ ರೋಚಕವಾಗಿರುತ್ತಿದ್ದವು. ಅದರಲ್ಲೂ ನರಸಿಂಹರಾಜು, ತಾಯ್ ನಾಗೇಶ್, ಜಾ~ನಿವಾಕರ್ ಸೀನುಗಳು ಬಂತೆಂದರೆ ಟ್ರಾಂ∫..ಟ್ರ.ಡಾ∫..ನ್ ! ಆಡಿಟೋರಿಯಂನಲ್ಲಿ ಎಲ್ಲರಿಗೂ ಕರೆಂಟು ಹೊಡೆದಂತೆ ಮಿಂಚಿನ ಸಂಚಾರ! ಶಾಲೆಯಲ್ಲಿ ನಾವೆಲ್ಲ ಇಂಗ್ಲಿಷ್ ಮೀಡಿಯಮ್ಮೇ ಆದರೂ ನಮಗೆ ಯಾರಿಗೂ ಅಷ್ಟು ಚೆನ್ನಾಗಿ ಇಂಗ್ಲಿಷ್ ಮಾತನಾಡಲು ಬರುತ್ತಿಲ್ಲ. ಇಂಗ್ಲಿಷ್ ಸ್ಲೈಡ್ ಹಾಕಿದ ಸಂದರ್ಭಗಳಲ್ಲಿ ಡಿಯೋಟ್ರ್.. ಬಾಂ~ಕೊರಾ∫ಟ್ರುಶ್.. ಮ‘ಶ್ಟ್ರಾ∫ಕ್ಯುಲಾ∫ಟ್.. ಅಂತ ಏನಾದರೂ ಹೊಡೆಯುತಿದ್ದ. ಇಂಟರ್ವಲ್‍ನಲ್ಲಿ ಎಲ್ಲರೂ ಹೊರಗೆ ಹೋಗಿ ಅವರವರ ಮನೆಯಲ್ಲಿಯೋ, ಅಥವಾ ಮುಂದುಗಡೆಯ ಚರಂಡಿಯಲ್ಲಿಯೋ ಸಾಲಾಗಿ ಒಂದ ಮಾಡಿ ಬರುತ್ತಿದ್ದರು. ಕೊನೆಗೆ ಭಾರತದ ಬಾವುಟವಿದ್ದ ಚಿತ್ರ: ಆಗ ತಪ್ಪದೆ ಎಲ್ಲರೂ ಎದ್ದು ನಿಂತು ಜನಗಣಮನ ಹಾಡುತ್ತಿದ್ದರು.

ಅಲ್ಲಿಂದಾಚೆಗೆ ಎಲ್ಲರ ಬಾಯಲ್ಲೂ ಆ ದಿನ ಪೂರ್ತಿ ಆ ಸಿನೆಮಾ ಶೋವಿನದೇ ಮಾತು! ಅದನ್ನೇ ನೆನಸಿ ನೆನಸಿ ನಗುವುದು, ಕುಣಿಯುವುದು!

ಆಗ ವಿಶೇಷ ಬೇಸಿಗೆ ಶಿಬಿರಗಳಿಲ್ಲ, ಸಮ್ಮರ್ ಕೋಚಿಂಗ್ ಕಾಂ∫ಪ್ ಗಳಿಲ್ಲ, ನಮ್ಮ ತಂದೆ-ತಾಯಿಗೆ ಮಕ್ಕಳು ಎಲ್ಲಿ-ಏನಾಗಿ ಬಿಡುತ್ತಾರೋ ಎಂಬ ಆತಂಕವಿಲ್ಲ, ಎಲ್ಲಕ್ಕಿಂತ ಮುಖ್ಯವಾಗಿ ಒಂದಿಷ್ಟೂ ಖರ್ಚಿಲ್ಲ. ಶಾಲೆಯ ಪರೀಕ್ಷೆಗಳು ಮುಗಿಯುತ್ತಿದ್ದಂತೆ ನಮ್ಮದೇ ಪ್ರೋಗ್ರಾ∫ಮ್ಸ್ ಇರುತ್ತಿದ್ದವು. ಕಾಡು ಸುತ್ತುವುದು, ವಾಕಿಂಗ್ ಹೋಗುವುದು, ಪುಸ್ತಕ ಓದುವುದು…. ಒಟ್ಟಿನಲ್ಲಿ ಬೆಳಿಗ್ಗೆ ತಿಂಡಿ ತಿಂದು ಹೊರಟರೆ, ಮಧ್ಯಾಹ್ನ ಊಟದ ಸಮಯಕ್ಕೆ ಮತ್ತು ಸಂಜೆ ಬೀದಿ ದೀಪ ಹತ್ತುವುದರ ಒಳಗೆ ಮನೆಯಲ್ಲಿ ಹಾಜರಿರಬೇಕೆಂಬುದು ರೂಲ್ಸ್. ಆ ಕಾಲದಲ್ಲಿ ಟೆಲಿವಿಷನ್ ಎಂಬ ಹೆಸರೇ ಕೇಳಿಲ್ಲದ ನಾವು ಎಷ್ಟು ಪುಣ್ಯವಂತರು!




Sunday, October 3, 2010

Wildlife Messages 2010




DO WE HAVE A FUTURE ON THIS EARTH ?





Wednesday, 29 September 2010



Dear friend,

Today we are proud that we are the most evolved creatures to be born on the Earth. Having the capability for thought and reason, we have excelled all other co-inhabitants and reign them.

With our sheer intelligence, we have built huge bridges across rivers and attained self-sufficiency in foodgrains. We have converted nuclear power to run our powerful machines and to show our strength to our neighbours. Today we can travel on land, navigate in water, fly like a bird in the air and even gone out to explore and exploit our neighbouring planets. We can speak to anybody, in any corner of the world at the touch of a button. In short, we have intelligently utilised all the naturally available materials and converted them for our own use.

All for our selfish goals, to accomplish our greed and to show out might!

But on this very Earth, from minute Bacteria to giant Sequoia, from tiny Amoebas to mighty Whales, each and every lifeform has contributed to the sustenance and equilibrium of all lifeforms on this Earth. It is only we, the humans, who have not participated in this essential and responsible activity. Throughout our existence, we have assumed that all the living and the non-living things on this Earth are meant for our own use and delectation. As though we did not belong to this Earth!

Now the time has come for us to introspect. Scientists say that nearly 99 percent of all the life that evolved on this Earth are extinct today. This is beacause either they were not naturally selected or were unfit to survive or perhaps they did not return anything back to nature. I have a feeling that, even now if we do not mend our ways, if we do not stop abusing nature, soon nature will treat us accordingly and push us towards extermination.

Let us join hands to make our only Earth, a place where all elements of life can live in health, happiness and harmony.

Thank you.

Dr. S V Narasimhan
VIRAJPET 571 218 India.
drnsimhan@yahoo.com
9480730884

The Wildlife Message Cards are individually hand-painted and sent free to individuals throughout the world to mark the Wildlife Week.
Total of hand-painted cards made: this year 2050; in 26 years 53,870.
Total recipients: this year 1130; in 26 years 7460.
Please send more stamps to reduce my burden on postage.



ಭೂಮಿಯ ಮೇಲೆ ಮಾನವನಿಗೆ ಭವಿಷ್ಯವಿದೆಯೆ?


ಬುಧವಾರ, ೨೯ ಸೆಪ್ಟೆಂಬರ್ ೨೦೧೦

ಮಿತ್ರರೆ,

ಇಂದು ಇಳೆಯ ಮೇಲೆ ಜನಿಸಿದ ಎಲ್ಲಾ ಜೀವಿಗಳಿಗಿಂತ ಹೆಚ್ಚು ವಿಕಾಸ ಹೊಂದಿದ ಪ್ರಾಣಿಗಳು ನಾವು ಎಂದು ಹೆಮ್ಮೆಯಿಂದ ಬೀಗುತ್ತೇವೆ. ಆಲೋಚಿಸುವ, ಪ್ರಶ್ನಿಸುವ, ವಿಶ್ಲೇಷಿಸುವ ಶಕ್ತಿಯುಳ್ಳ ನಾವು ಉಳಿದೆಲ್ಲ ಜೀವಿಗಳನ್ನೂ ಮೀರಿ ಅವುಗಳನ್ನು ಆಳುತ್ತಿದ್ದೇವೆ.

ನಮ್ಮ ಬುದ್ಧಿವಂತಿಕೆಯಿಂದ ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿ ನಮ್ಮ ಆಹಾರದ ಪೂರೈಕೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿದ್ದೇವೆ. ಅಣುಶಕ್ತಿಯಿಂದ ವಿದ್ಯುತ್ತಿನ ಉತ್ಪಾದನೆಯಲ್ಲದೆ, ಪರಸ್ಪರ ಶಕ್ತಿ ಪ್ರದರ್ಶನಕ್ಕೂ ಬಳಸುತ್ತಿದ್ದೇವೆ. ನೆಲ, ನೀರು ಹಾಗೂ ಆಕಾಶದಲ್ಲಿ ಲೀಲಾಜಾಲವಾಗಿ ಓಡಾಡುವುದಲ್ಲದೆ, ಇತರ ಗ್ರಹಗಳಲ್ಲಿಯೂ ನಮ್ಮ ಕಾಲಿಟ್ಟಿದ್ದೇವೆ. ಈವತ್ತು ಪ್ರಪಂಚದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯನ್ನು ಕ್ಷಣಾರ್ಧದಲ್ಲಿ ಸಂಪರ್ಕಿಸಬಹುದಾಗಿದೆ. ಒಟ್ಟಿನಲ್ಲಿ ನಮ್ಮ ಬೌದ್ಧಿಕ ನಿಪುಣತೆಯಿಂದ ಭೂಮಿಯ ಮೇಲೆ ದೊರಕುವ ಎಲ್ಲ ನೈಸರ್ಗಿಕ ಸಂಪತ್ತನ್ನು ನಮ್ಮ ಸ್ವಂತಕ್ಕೆ ಉಪಯೋಗಿಸಿಕೊಳ್ಳಲು ಸಮರ್ಥರಾಗಿದ್ದೇವೆ.

ಎಲ್ಲವೂ ನಮ್ಮ ಸ್ವಾರ್ಥಕ್ಕಾಗಿ, ನಮ್ಮ ನಮ್ಮ ದುರಾಸೆಗಳ ಪೂರೈಕೆಗಾಗಿ ಮತ್ತು ನಮ್ಮ ಕ್ರೌರ್ಯದ ಬಲ ಪ್ರದರ್ಶನಕ್ಕಾಗಿ!

ಆದರೆ ಇದೇ ಭೂಮಿಯ ಮೇಲಿರುವ ಇತರ ಜೀವಿಗಳನ್ನು ನೋಡಿ! ಅತಿ ಸೂಕ್ಷ್ಮ ಬ್ಯಾಕ್ಟೀರಿಯಾದಿಂದ ಹಿಡಿದು ದೈತ್ಯ ಸಿಕೋಯಾ ಮರದವರೆಗೆ, ಅಮೀಬಾದಿಂದ ಹಿಡಿದು ತಿಮಿಂಗಿಲದವರೆಗೆ, ಪ್ರತಿಯೊಂದು ಜೀವಿಯೂ ಪ್ರಕೃತಿಯನ್ನು ಪೋಷಿಸಲು ಮತ್ತು ಅದರ ಸಮತೋಲನವನ್ನು ಕಾಪಾಡಲು ತಮ್ಮ ನಿರಂತರ ಕೊಡುಗೆಯನ್ನು ನೀಡುತ್ತಲೇ ಬಂದಿವೆ. ಈ ಅತ್ಯಗತ್ಯ ಮತ್ತು ಜವಾಬ್ದಾರಿಯುತ ಪ್ರಕ್ರಿಯೆಯಲ್ಲಿ ಭಾಗವಹಿಸದವರು ನಾವು -ಮನುಷ್ಯರು- ಮಾತ್ರ! ಬದುಕಿನುದ್ದಕ್ಕೂ ಭೂಮಿಯ ಮೇಲಿರುವ ಎಲ್ಲ ಚರಾಚರ ವಸ್ತುಗಳೂ ಕೇವಲ ನಮ್ಮ ಉಪಯೋಗಕ್ಕಾಗಿ ಮತ್ತು ನಮ್ಮ ಭೋಗಲಾಲಸೆಗಾಗಿ ಎಂದೇ ಭಾವಿಸಿಕೊಂಡು ಬಂದಿದ್ದೇವೆ. ನಾವು ಈ ಭೂಮಿಗೇ ಸೇರಿದವರಲ್ಲವೇನೋ ಎಂಬಂತೆ!

ಆತ್ಮವಿಮರ್ಶೆ ಮಾಡಿಕೊಳ್ಳುವ ಸಮಯ ಬಂದಿದೆ. ಪ್ರಪಂಚದ ಮೇಲೆ ವಿಕಾಸಗೊಂಡ ಜೀವಿಗಳಲ್ಲಿ ಇಂದು ಶೇಕಡ ೯೯ರಷ್ಟು ಜೀವಿಗಳು ಅಳಿದುಹೋಗಿವೆಯೆಂದು ವಿಜ್ಞಾನಿಗಳು ಹೇಳುತ್ತಾರೆ. ಇದಕ್ಕೆ ಕಾರಣ, ಅವುಗಳ ನೈಸರ್ಗಿಕ ಆಯ್ಕೆ ತಪ್ಪಾಗಿರಬಹುದು, ಅಥವಾ ಅವು ಜೀವಿಸಲು ಅಯೋಗ್ಯವಾಗಿರಬಹುದು, ಅಥವಾ ಅವೂ ಕೂಡ ಪ್ರತಿಯಾಗಿ ಪ್ರಕೃತಿಗೆ ಏನನ್ನೂ ನೀಡಿಲ್ಲದೆ ಇರಬಹುದು. ಈಗಲೂ ಕೂಡ ನಾವು ತಿದ್ದಿಕೊಳ್ಳದಿದ್ದರೆ, ನೈಸರ್ಗಿಕ ಸಂಪತ್ತಿನ ದುರ್ಬಳಕೆಯನ್ನು ನಿಲ್ಲಿಸದಿದ್ದರೆ, ಶೀಘ್ರದಲ್ಲಿಯೇ ಪ್ರಕೃತಿಯು ನಾವು ಈ ಭೂಮಿಗೆ ಭಾರ ಎಂದು ತೀರ್ಮಾನಿಸಿ, ನಮ್ಮನ್ನೂ ವಿನಾಶದ ಅಂಚಿಗೆ ದೂಡಿಬಿಡುವ ಸಾಧ್ಯತೆ ಇದೆ ಎಂದು ನನಗನ್ನಿಸುತ್ತದೆ.

ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.

ವಂದನೆಗಳು.

ಡಾ. ಎಸ್. ವಿ. ನರಸಿಂಹನ್
ವಿರಾಜಪೇಟೆ ೫೭೧ ೨೧೮
ದೂರವಾಣಿ: ೯೪೮೦೭೩೦೮೮೪

ಕೈಯಲ್ಲೇ ಚಿತ್ರಿಸಿದ ಒಟ್ಟು ಸಂದೇಶಪತ್ರಗಳ ಸಂಖ್ಯೆ: ಈ ವರ್ಷ ೨೦೫೦; ಕಳೆದ ೨೬ ವರ್ಷಗಳಲ್ಲಿ ೫೩,೮೭೦.
ಸಂದೇಶಪತ್ರಗಳನ್ನು ಪಡೆದವರು: ಈ ವರ್ಷ ೧,೧೩೦; ಕಳೆದ ೨೬ ವರ್ಷಗಳಲ್ಲಿ ೭,೪೬೦.
ದಯವಿಟ್ಟು ಹೆಚ್ಚುಹೆಚ್ಚು ಅಂಚೆಚೀಟಿಗಳನ್ನು ಕಳುಹಿಸಿ, ನನ್ನ ಅಂಚೆವೆಚ್ಚವನ್ನು ತಗ್ಗಿಸಲು ಸಹಕರಿಸಿ.