Sunday, February 22, 2026

ಬೀಗವಿಲ್ಲದ ಮನೆಗಳು

ಬೀಗವಿಲ್ಲದ ಮನೆಗಳು

ರಜ ಬಂತೆAದರೆ, ನನಗೆ ನನ್ನ ಬಾಲ್ಯದ ನೆನಪುಗಳು ಕಾಡುತ್ತವೆ. ಬೇಸಿಗೆ ರಜೆಯಲ್ಲಿ ಮೊಮ್ಮಕ್ಕಳೆಲ್ಲ ಬೇರೆ ಬೇರೆ ಊರುಗಳಿಂದ ಚಾಮರಾಜನಗರದ ನಮ್ಮ ಅಜ್ಜನ ಮನೆಗೆ ಹೋಗುತ್ತಿದ್ದೆವು. ಎಲ್ಲರೂ ಸೇರಿದೆವೆಂದರೆ, ಅದೊಂದು ದೊಡ್ಡ ಸಂಭ್ರಮದ ಸಂತೆ! ರಜಾ ಮುಗಿಯುವ ವೇಳೆಗೆ, ಸರಿಯಾಗಿ ಬಿಳಿಗಿರಿರಂಗನ ಬೆಟ್ಟದ ಜಾತ್ರೆಯಾಗುತ್ತಿತ್ತು. ದೊಡ್ಡವರು, ಮಕ್ಕಳು, ಮೊಮ್ಮಕ್ಕಳಾದಿಯಾಗಿ ಎಲ್ಲರೂ ಅಲ್ಲಿಗೆ ಪ್ರಯಾಣ ಮಾಡುತ್ತಿದ್ದೆವು. ಅಲ್ಲಿ ಜಾತ್ರೆ ಮುಗಿದ ನಂತರ ಎಲ್ಲರೂ ಅವರವರ ಊರಿಗೆ ವಾಪಸ್ಸು. ಪುನಃ ಶಾಲಾರಂಭ.

ನಮಗೆ ಶಾಲೆಯಿರುವಾಗ ಅಲ್ಲಿಯ ಸವಿಸ್ತಾರವಾದ ಆಟದ ಮೈದಾನದಲ್ಲಿ ಹಾಕಿ, ಫುಟ್‌ಬಾಲ್, ವಾಲಿಬಾಲ್, ಕಬಡ್ಡಿ ಮುಂತಾದ ಆಟಗಳನ್ನು ಆಡಿಸುತ್ತಿದ್ದರು. ಅವೇನಿದ್ದರೂ ಶಾಲೆಯಲ್ಲಿ ಆಡುವ ಆಟಗಳು. ನಮ್ಮ ಶಾಲೆಗಳಿಗೆ ದಸರಾ, ಕ್ರಿಸ್ಮಸ್ ರಜಗಳಲ್ಲದೆ, ಕೊಡಗಿಗೇ ವಿಶೇಷವಾದ ಮಳೆಗಾಲದ ರಜವಿರುತ್ತಿತ್ತು. ಶಾಲೆ ಬಿಟ್ಟ ಮೇಲೆ ಮತ್ತು ರಜಾ ದಿನಗಳಲ್ಲಿ ವಿವಿಧ ಆಟಗಳಿರುತ್ತಿದ್ದವು. ಬುಗುರಿ, ಚಿಣ್ಣಿ-ದಾಂಡು, ಲಗೋರಿ, ಗೋಲಿ, ಮರಕೋತಿ, ಐಸ್‌ಪೈಸ್ ಮುಂತಾದ ಆಟಗಳು. ಇವುಗಳೆಲ್ಲದರ, ಮಧ್ಯೆ ಒಂದೆರಡು ವಾರಗಳ ಕಾಲ ಗಾಳಿಪಟ ಹಾರಿಸುವ ಸಮಯ!

ಸಂಜೆ ಶಾಲೆ ಬಿಟ್ಟೊಡನೆ ಮನೆಗೆ ಬಂದು ಬಟ್ಟೆ ಬದಲಿಸಿ, ಆಟ ಆಡಲು ಓಡಿದೆವೆಂದರೆ, ಹಿಂದಿರುಗುತ್ತಿದ್ದುದು ಊರಿನ ಬೀದಿಯ ಕಂಬಗಳಲ್ಲಿ ವಿದ್ಯುದ್ದೀಪಗಳು ಹತ್ತಿದಾಗಲೇ! ಇದು ಆಟಗಳ ಪೂರ್ಣವಿರಾಮಕ್ಕೆ ಎಚ್ಚರಿಕೆಯ ಸೈರನ್! ಆಡುತ್ತಿದ್ದ ಆಟಗಳನ್ನು ಅಲ್ಲಿಗಲ್ಲಿಯೇ ನಿಲ್ಲಿಸಿ, ಮನೆಗೆ ದೌಡಾಯಿಸುತ್ತಿದ್ದೆವು. ಕೈಕಾಲು ತೊಳೆದುಕೊಂಡು, ದೇವರ ಸ್ತೋತ್ರಗಳನ್ನು ಹೇಳಿ, ಶಾಲೆಯಲ್ಲಿ ಕೊಟ್ಟ ಹೋಂವರ್ಕ್ ಮಾಡಿ, ಸ್ವಲ್ಪ ಹೊತ್ತು ಓದಿದ ನಂತರ ಊಟ. ರಾತ್ರಿ ಒಂಬತ್ತೂವರೆಗೆ ಮಲಗುವ ಸಮಯ.

ನಾವು ಆಡುತ್ತಿದ್ದ ಆಟಗಳು ಸರದಿಯಂತೆ, ಒಂದಾದ ಮೇಲೊಂದು, ಪ್ರತಿಯೊಂದೂ ಸುಮಾರು ನಾಲ್ಕಾರು ವಾರಗಳ ಸಮಯ ಇರುತ್ತಿದ್ದವು. ಬುಗುರಿ ಆಟವೆಂದರೆ, ಎಲ್ಲರ ಕೈಯ್ಯಲ್ಲೂ ಬುಗುರಿ, ಎಲ್ಲೆಡೆ ಬುಗುರಿಯದ್ದೇ ಆಟಾಟೋಪ! ಆ ಸಮಯದಲ್ಲಿ ಅಂಗಡಿಗಳಲ್ಲಿ ಬರೇ ಬುಗುರಿಗಳನ್ನು ಮಾತ್ರ ಮಾರುತ್ತಿದ್ದರು. ಅಲ್ಲದೆ, ಕತ್ತಿಯಿಂದ ಸೀಬೆ ಮರದ ತುಂಡನ್ನು ಹೆರೆದು, ಅದಕ್ಕೊಂದು ಮೊಳೆ ಹೊಡೆದು, ನಾವೇ ಬುಗುರಿ ಮಾಡಿಕೊಳ್ಳುತ್ತಿದ್ದೆವು. ಅದಕ್ಕೆ ಬೂತಾಳೆ ನಾರಿನಿಂದ ಹೊಸೆದ ದಾರ! ಅಂಗಡಿಯಿAದ ಕೊಂಡುಕೊAಡ ಬುಗುರಿಗಳು ಎರಡು ದಿನ ನೆಲದ ಮೇಲೆ ಹೊರಳಾಡಿದರೆ, ಅವುಗಳ ಬಣ್ಣ ಮಣ್ಣುಪಾಲು. ಅವುಗಳ ಆಯಸ್ಸೂ ಕಡಿಮೆಯೇ; ಸೀಬೆ ಮರದ ಬುಗುರಿಯಿಂದ ಸರಿಯಾಗಿ ಗುನ್ನಾ ಹೊಡೆದರೆ, ಅವು ಅಲ್ಲೇ ಎರಡು ಪಾಲು!

ಬುಗುರಿಯಾಟದ ಸೀಸನ್ ಮುಗಿದ ಮೇಲೆ, ಅದು ತನ್ನಂತಾನೇ ಗೋಲಿ ಆಟಕ್ಕೆ ತಿರುಗುತಿತ್ತು. ಅಲ್ಲಿಂದ ಮುಂದೆ, ಎಲ್ಲರ ಜೇಬಿನಲ್ಲಿಯೂ ಬಣ್ಣಬಣ್ಣದ ಗೋಲಿಗಳು! ಕೆಲವರಿಗೆ ಕಾಡಿನಲ್ಲಿ ಕೆಳಕ್ಕೆ ಬಿದ್ದ ಚಿಟ್ಟಿ ಮರದ, ಉರುಟಾದ ಬೀಜಗಳೇ ಆಟದ ಗೋಲಿಗಳು! ಈ ಗೋಲಿಗಳು ವಜ್ರದಂತೆ ಗಟ್ಟಿ; ಕಲ್ಲಿನಿಂದ ಚಚ್ಚಿದರೂ ಒಡೆಯುತ್ತಿರಲಿಲ್ಲ.

ನನಗಿನ್ನೂ ಅರ್ಥವಾಗದ ಒಂದು ವಿಚಾರ ಏನೆಂದರೆ, ಆ ಆಟದ ಋತುಮಾನ ಮುಗಿಯಿತು, ಇನ್ನು ಈ ಆಟ ಎಂದು ಎಲ್ಲರಿಗೂ ಹೇಗೆ ಗೊತ್ತಾಗುತ್ತಿತ್ತು? ಪ್ರಾರಂಭ ಎಲ್ಲಿಂದ? ಅದನ್ನು ಮೊದಲು ಶುರು ಮಾಡುತ್ತಿದ್ದವರು ಯಾರು? ಅಥವಾ ಅಂಗಡಿಯವರೇ ‘ಬುಗುರಿಗಳೆಲ್ಲಾ ಮುಗಿದು ಹೋದವು, ಗೋಲಿಗಳಿವೆ, ಕೊಡುತ್ತೇನೆ. ಇನ್ನು ಎಲ್ಲರೂ ಅದನ್ನೇ ಆಡಬೇಕು’ ಎಂದು ಅವರೇ ನಾಂದಿ ಹಾಡುತ್ತಿದ್ದರೆ?

ಗಾಳಿಪಟ ಹಾರಿಸುವ ಸಮಯವಂತೂ ಬಹಳ ಚೇತೋಹಾರಿಯಾದ ಆಟ. ಏಕೆಂದರೆ, ಆ ಕಾಲದಲ್ಲಿ ಅಂಗಡಿಗಳಲ್ಲಿ ಗಾಳಿಪಟಗಳನ್ನು ಮಾರುತ್ತಿರಲಿಲ್ಲ. ಬಣ್ಣದ ಕಾಗದ, ಬಿದಿರು ಕಡ್ಡಿ, ಗೋಂದು, ದಾರವನ್ನು ಬಳಸಿಕೊಂಡು ನಾವೇ ಮನೆಯಲ್ಲಿ ಗಾಳಿಪಟ ತಯಾರು ಮಾಡುತ್ತಿದ್ದೆವು. ಅದಕ್ಕೆ ಸೂತ್ರ, ಬಾಲಂಗೋಚಿ ಕಟ್ಟುವುದೇ ಒಂದು ವಿಶಿಷ್ಟ ಕಲೆ! ಅವು ಸರಿಯಿಲ್ಲವೆಂದರೆ, ಇಡೀ ದಿನದ ನಮ್ಮ ಪ್ರಯತ್ನವೇ ಗೋತಾ ಹೊಡೆದುಬಿಡುತ್ತಿತ್ತು.

ಪ್ರತಿ ವರ್ಷವೂ ಈ ಆಟಗಳ ಪುನರಾವರ್ತನೆಯಾಗುತ್ತಿತ್ತು. ಆದರೆ, ಅವು ಅದೇ ಸರದಿಯಲ್ಲಿ ಬರಬೇಕೆಂದಿರಲಿಲ್ಲ.

ಶಾಲೆಗಾಗಲಿ, ಆಟಕ್ಕಾಗಲೀ ನಾವು ಏನಿದ್ದರೂ ಮನೆಯಿಂದ ಹಿಂಬದಿಯ ಕಾಂಪೌAಡ್ ಮತ್ತು ಅರಳಿಕಟ್ಟೆ ಹಾರಿಯೇ ಹೋಗುತ್ತಿದ್ದೆವು. ಯಾರೂ ಮುಂದಿನ ಬಾಗಿಲು, ಗೇಟು ದಾಟಿ ಹೋದದ್ದೇ ನೆನಪಿಲ್ಲ.

ಚಿಕ್ಕಂದಿನ ಆ ದಿನಗಳಲ್ಲಿ ಮತ್ತೊಂದು ವಿಚಾರ ನನ್ನನ್ನು ಯಾವಾಗಲೂ ಕಾಡುತ್ತದೆ. ನಮ್ಮ ಮನೆಗಳ ಬಾಗಿಲುಗಳನ್ನು ಮುಂಜಾನೆ ತೆಗೆದರೆ, ಅವನ್ನು ಮುಚ್ಚುತ್ತಿದ್ದುದು ರಾತ್ರಿಯೇ! ಇದು ನಮ್ಮ ಮನೆಯಲ್ಲಿ ಮಾತ್ರವಲ್ಲ. ಎಲ್ಲರ ಮನೆಗಳ ಬಾಗಿಲುಗಳೂ ಹಗಲಿನಲ್ಲಿ ತೆರೆದೇ ಇರುತ್ತಿದ್ದವು. ಎಲ್ಲೆಡೆ ಇದೇ ಪದ್ಧತಿ. ಆಟದ ಸಮಯದಲ್ಲಿ, ಅದರಲ್ಲೂ ಕಣ್ಣಮುಚ್ಚಾಲೆ ಆಟ ಆಡುವಾಗ, ಅಕ್ಕಪಕ್ಕದ ಮನೆಗಳಿಗೆ ಯಾವಾಗ ಬೇಕೆಂದಾಗ ನುಗ್ಗಿ, ಎಲ್ಲೆಂದರಲ್ಲಿ ಅವಿತುಕೊಳ್ಳುತ್ತಿದ್ದೆವು.

ನಮ್ಮ ಊರಿನಲ್ಲಿ ಕಳ್ಳತನ ಎಂಬುದು ಬಹಳ ಅಪರೂಪದ ಸಂಗತಿ. ಯಾರಾದರೂ ಕಳ್ಳತನ ಮಾಡಿದರೆ, ಅವನು ಬೇರೆ ಊರಿನವನೇ ಆಗಿರಬೇಕು! ಏಕೆಂದರೆ, ನಮ್ಮೂರಿನ ಸರಿಸುಮಾರು ಎಲ್ಲರೂ ಪರಿಚಿತರೇ! ಒಂದು ಸಾರಿ ಒಬ್ಬ ಕಳ್ಳನನ್ನು ಪೋಲಿಸರು ಹಿಡಿದುಕೊಂಡು ಶಾಲೆಯ ರಸ್ತೆಯಲ್ಲಿ ಹೋಗುತ್ತಿದ್ದರು. ನಾವು ಆಟ-ಪಾಠಗಳನ್ನು ಬಿಟ್ಟು, ಓಡಿ ಹೋಗಿ ಸಾಲಾಗಿ ನಿಂತು ನೋಡಿದ್ದೆವು. ಆ ಕಳ್ಳನ ಎರಡೂ ಕೈಗಳನ್ನು ಮುಂದಕ್ಕೆ ಸೇರಿಸಿ ಕೋಳ ಹಾಕಿ, ಎರಡೂ ಕಡೆ ಅದರ ಸರಪಣಿಯನ್ನು ಇಬ್ಬರು ಪೋಲಿಸರು ಹಿಡಿದುಕೊಂಡು ಹೋಗುವ ದೃಶ್ಯ ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ!

ಮತ್ತೊAದು ಸಾರಿ ನಮ್ಮ ಅಜ್ಜ ಊರಿಗೆ ಬಂದಿದ್ದಾಗ ನಡೆದ ಘಟನೆ. ಅವರು ಸಂಧ್ಯಾವAದನೆಗೆAದು ಒಂದು ಬೆಳ್ಳಿ ಲೋಟವನ್ನು ತೆಗೆದುಕೊಂಡವರು ಅದನ್ನು ಅಂಗಳದಲ್ಲಿಯೇ ಮರೆತು ಬಿಟ್ಟಿದ್ದರು. ಅದು ಅವರಿಗೆ ನೆನಪಾದದ್ದು ಅವರು ಊರಿಗೆ ಹಿಂದಿರುಗಿದ ನಂತರವೇ! ಅಲ್ಲಿಂದ ಅವರು ಪತ್ರ ಬರೆದು ಅದು ನಮಗೆ ತಲುಪುವುದರೊಳಗೆ ಐದಾರು ದಿನಗಳೇ ಕಳೆದಿದ್ದವು. ಹೋಗಿ ನೋಡಿದರೆ, ಆ ಬೆಳ್ಳಿಲೋಟ ತುಳಸೀಕಟ್ಟೆಯ ಕೆಳಗೇ ಇತ್ತು!

ಊರಿನಲ್ಲಿ ಮನೆಗಳ ಬಾಗಿಲುಗಳನ್ನು ಹೊರಗಡೆಯಿಂದ ಬೀಗ ಹಾಕುವ ಪ್ರಮೇಯವಂತೂ ಬಹಳ ಅಪರೂಪ. ಮನೆಯವರೆಲ್ಲ ನೆಂಟರ ಮದುವೆಗೋ, ಯಾರದ್ದಾದರೂ ಸಾವಿಗೋ ಹೋಗುವ ಸಮಯದಲ್ಲಿ ಮಾತ್ರ ಬೀಗ ಹಾಕುತ್ತಿದ್ದೆವು. ಅದಕ್ಕಿಂತ ಮುಖ್ಯವಾಗಿ ನಮ್ಮ ಯಾರ ಮನೆಯಲ್ಲಿಯೂ ಬೀಗವೇ ಇರಲಿಲ್ಲ. ಇಡೀ ವಠಾರದಲ್ಲಿ ಇದ್ದದ್ದು ಒಂದೇ ಬೀಗ! ಅದೂ ಎದುರು ಮನೆಯ ಬಾಷನ ಮನೆಯಲ್ಲಿ. ಅವನ ಅಪ್ಪ ಕೋರ್ಟಿನಲ್ಲಿ ಆಮೀನರಾಗಿದ್ದರು.

ನಮಗೆ ಅವಶ್ಯವಿದ್ದಾಗ ಆ ಬೀಗವನ್ನು ಬಾಷನ ಮನೆಯಿಂದ ತರಬೇಕು. ಈ ಕೆಲಸವನ್ನು ಯಾರು ಮಾಡಬೇಕು ಎಂಬ ವಿಚಾರದಲ್ಲಿ ನನ್ನ ತಮ್ಮನಿಗೂ ನನಗೂ ಪ್ರತಿ ಸಾರಿ ಜಗಳ. ಏಕೆಂದರೆ, ಬಾಷನ ಮನೆಯಲ್ಲಿ ಆ ಬೀಗ ಮತ್ತು ಬೀಗದ ಕೈ ತುಕ್ಕು ಹಿಡಿಯದಿರಲೆಂದು ಅವುಗಳ ತೂತುಗಳಿಗೆ ಸೀಮೆಣ್ಣೆ ಹೊಯ್ದು ಇಡುತ್ತಿದ್ದರು. ಅವನ್ನು ಒಂದು ಬಟ್ಟೆಯಲ್ಲಿ ಸುತ್ತಿ, ಬಚ್ಚಲು ಮನೆಯ ಗೂಡಿನಲ್ಲಿ ಇಟ್ಟಿದ್ದರು. ಅಗತ್ಯವಿದ್ದಾಗ ಅವರನ್ನು ಕೇಳಿ ನಾವೇ ಹೋಗಿ ತೆಗೆದುಕೊಳ್ಳಬೇಕಾಗಿತ್ತು. ಅದನ್ನು ಒಂದು ಬಾರಿ ಮುಟ್ಟಿದರೆ ಸಾಕು, ಕೈಯ್ಯನ್ನು ಎಷ್ಟು ಸೋಪು ಹಾಕಿ ತೊಳೆದುಕೊಂಡರೂ ಎರಡು-ಮೂರು ದಿನಗಳ ಕಾಲ ಅದರ ಸೀಮೆಣ್ಣೆ ವಾಸನೆ ಹೋಗುತ್ತಿರಲಿಲ್ಲ!

ಇವೆಲ್ಲ ಆ ಕಾಲಘಟ್ಟದ ಮಧುರವಾದ ನೆನಪುಗಳು. ಆವಾಗ ಟಿವಿ ಇರಲಿಲ್ಲ; ಲ್ಯಾಪ್‌ಟಾಪ್ ಇರಲಿಲ್ಲ ಅಥವಾ ಮೊಬೈಲ್ ಇರಲಿಲ್ಲ. ನಮಗಿದ್ದುದು ವಿಶಾಲವಾದ ಆಟದ ಮೈದಾನ, ಕಣ್ಮನ ತಣಿಸುವ ಪ್ರಕೃತಿ. ಜೊತೆಗೆ ಚಂದಮಾಮಾ, ಬಾಲಮಿತ್ರ, ಸುಧಾ ಪತ್ರಿಕೆಗಳು; ಪುಟ್ಟಣ್ಣಯ್ಯ, ಭಾರತೀಸುತ, ರಾಜರತ್ನಂ ಮತ್ತಿತರ ಕನ್ನಡ ಪುಸ್ತಕಗಳು! ಇವೆಲ್ಲಕ್ಕೂ ಮೇಲೆ ನಿರಾಡಂಬರ-ನಿಶ್ಕಲ್ಮಷ ಮನಸುಗಳು!

- ಡಾ| ಎಸ್. ವಿ. ನರಸಿಂಹನ್, ವಿರಾಜಪೇಟೆ.

No comments: