Sunday, February 22, 2026

ಭೀಮಯ್ಯ

 ಭೀಮಯ್ಯ

ನಲವತ್ತೆöÊದು ವರ್ಷಗಳ ಹಿಂದೆ ನಾನು ನಮ್ಮ ಸಣ್ಣ ಊರಿನಲ್ಲಿ, ನನ್ನ ತಂದೆಯವರ ಕ್ನಿನಿಕ್‌ನಲ್ಲಿಯೇ ಪ್ರಾಕ್ಟಿಸ್ ಶುರು ಮಾಡಿದೆ. ಸುತ್ತಮುತ್ತಲ ಸುಮಾರು ಇಪ್ಪತ್ತು-ಇಪ್ಪತ್ತೆöÊದು ಗ್ರಾಮಗಳಿಂದ ರೋಗಿಗಳು ನಮ್ಮಲ್ಲಿಗೆ ಚಿಕಿತ್ಸೆಗೆ ಬರುತ್ತಿದ್ದರು. ಆ ಕಾಲದಲ್ಲಿ ರಸ್ತೆಯಲ್ಲಿ ನಡೆದಾಡುವ ಸರಿಸುಮಾರು ಎಲ್ಲರೂ ಪರಿಚಯವಿದ್ದರು. ನನ್ನ ತಂದೆ ಹಳೆಯ ತಲೆಮಾರಿನ ಡಾಕ್ಟರು. ಒಬ್ಬೊಬ್ಬ ರೋಗಿಯನ್ನೂ ಮಲಗಿಸಿ, ಒಂದು ಸ್ಟೂಲಿನ ಮೇಲೆ ಕುಳಿತು ಏನಿಲ್ಲವೆಂದರೂ ಇಪ್ಪತ್ತು-ಇಪ್ಪತ್ತೆöÊದು ನಿಮಿಷ ಪರೀಕ್ಷೆ ಮಾಡುತ್ತಿದ್ದರು; ಎಲ್ಲರ ಯೋಗಕ್ಷೇಮವನ್ನೂ ಕೂಲಂಕಶವಾಗಿ ವಿಚಾರಿಸುತ್ತಿದ್ದರು. ಮೃದುವಾಗಿ ಮಾತನಾಡುತ್ತಿದ್ದ ರೀತಿ, ಸೇವಾ ಮನೋಭಾವ ಇವೆಲ್ಲದರಿಂದ ಅವರು ಜನಾನುರಾಗಿಯಾಗಿದ್ದರು.

ಈಗ ಕಾಲ ಸರಿದಿದೆ; ಊರು ನಗರವಾಗಿದೆ; ಜನಸಂಖ್ಯೆ ಹೆಚ್ಚಾಗಿದೆ; ಸಂಬAಧಗಳು ಸಡಿಲವಾಗಿವೆ; ಮೌಲ್ಯಗಳು ಬದಲಾಗಿವೆ; ಎಲ್ಲರ ಜೇಬಿನಲ್ಲೂ ಈವತ್ತು ಹಣವಿದೆ; ಆದರೆ ಯಾರಿಗೂ ಹೆಚ್ಚು ಮಾತನಾಡಲು ಸಮಯವಿಲ್ಲ!

ಎರಡು ತಿಂಗಳ ಹಿಂದೆ ನಡೆದ ಘಟನೆ. ಕರೋನಾ ರೋಗ ದೂರವಾಗುತ್ತಿರುವ ಲಕ್ಷಣಗಳು ಎಲ್ಲರನ್ನೂ ಧೈರ್ಯದಿಂದ ಓಡಾಡುವಂತೆ ಮಾಡಿತ್ತು. ಆವತ್ತು ನಮ್ಮೂರಿನಲ್ಲಿ ಸಂತೆಯ ದಿನ, ಮಧ್ಯಾಹ್ನ ಸುಮಾರು ಎರಡು ಗಂಟೆಯ ಸಮಯ. ನನಗೂ ಹಗಲು ಹೊತ್ತಿನ ರೋಗಿಗಳು ಮುಗಿದು, ಊಟಕ್ಕೆ ಮನೆಗೆ ಹೊರಡಲು ಅಣಿಯಾಗುತ್ತಿದ್ದೆ. ಜನಜಂಗುಳಿ ಕಡಿಮೆಯಾಗಿತ್ತು.

ಅಷ್ಟರಲ್ಲಿ ನನ್ನ ದೃಷ್ಟಿ ರಸ್ತೆಯಲ್ಲಿ ನಡೆದು ಬರುತ್ತಿದ್ದ ಒಬ್ಬ ವ್ಯಕ್ತಿಯ ಮೇಲೆ ನೆಟ್ಟಿತು. ಎಲ್ಲಿಯೋ ಕಂಡ ಹಾಗಿದೆ ಎಂದುಕೊಳ್ಳುತ್ತಿದ್ದAತೆಯೇ ಆ ವ್ಯಕ್ತಿ ನೇರವಾಗಿ ನನ್ನತ್ತಲೇ ಬಂದ.

ಭೀಮಯ್ಯ!

ಈತ ಪಕ್ಕದ ಬೆಳ್ಳುಮಾಡು ಗ್ರಾಮದವನು. ಯಾವುದೇ ಸಮಸ್ಯೆಯಿದ್ದರೂ ಇಡೀ ಸಂಸಾರ ನನ್ನಲ್ಲಿಗೇ ಬರುತ್ತಿತ್ತು. ನಲವತ್ತು ವರ್ಷಗಳ ಹಿಂದೆ, ಭೀಮಯ್ಯನದು ಟಿಪಿಕಲ್ ನಡಿಗೆ. ಎಡದ ಹೆಗಲ ಮೇಲೆ ಸಣ್ಣ ಮಗನನ್ನು ಕೂರಿಸಿಕೊಂಡು ಮತ್ತೊಬ್ಬ ಮಗನನ್ನು ಬಲದ ಕೈಯ್ಯಲ್ಲಿ ಹಿಡಿದು ನಡೆಸಿಕೊಂಡು ಬರುತ್ತಿದ್ದ. ಜೊತೆಗೆ ಹೆಂಡತಿ, ಒಬ್ಬ ಮಗಳು ಮತ್ತು ಚಿಗುರು ಮೀಸೆಯ ಮತ್ತೊಬ್ಬ ಮಗ.

ಅವನನ್ನು ನೋಡಿಯೇ ಬಹಳ ವರ್ಷಗಳಾಗಿದ್ದವು. ಈಗ ಭೀಮಯ್ಯನಿಗೂ ಎಂಭತ್ತು ವಯಸ್ಸು ಮೀರಿದೆ. ಅದೇಕೋ ಬಹಳ ಕೃಶನಾಗಿದ್ದ. ಬಟ್ಟೆಯೂ ಅಲ್ಲಲ್ಲಿ ಹರಿದು ಹೋಗಿದ್ದವು. ಏನಾಯಿತು, ಇವನಿಗೆ? ನಾನೇ ಹೋಗಿ ಅವನ ಕೈಹಿಡಿದು, ಒಳಗಡೆ ಕರೆತಂದೆ.

‘ಏನು ಭೀಮಯ್ಯನವರೆ, ಯಾಕೆ ಇಳಿದುಹೋಗಿದ್ದೀರಿ? ಏನು ಬಂದಿರಿ?’

‘ಏನಿಲ್ಲ ಸ್ವಾಮಿ, ಊಟ ಮಾಡಲು ಸ್ವಲ್ಪ ದುಡ್ಡು ಬೇಕಿತ್ತು!’ ಎಂದ. ಅವನ ಧ್ವನಿ ನಡುಗುತ್ತಿತ್ತು. ತುಟಿಗಳು ಅದುರುತ್ತಿದ್ದವು. ಕೇಳಲು ಬಹಳ ಸಂಕೋಚ ಪಡುತ್ತಿದ್ದ.

ನನಗೆ ಒಂದು ಕ್ಷಣ ದಂಗು ಬಡಿದಂತಾಯ್ತು. ಒಂದು ಕಾಲದಲ್ಲಿ ನನಗೆ ಅನ್ನ ಕೊಡುತ್ತಿದ್ದ ಕೈಗಳು ಈವತ್ತು ನನ್ನನ್ನೇ ಭಿಕ್ಷೆ ಬೇಡುತ್ತಿವೆ! ಇವನಿಗೆ ಅಂತಹ ಪರಿಸ್ಥಿತಿ ಬರಲು ಕಾರಣವೇನು? ಬೆಂಚಿನ ಮೇಲೆ ಕೂರಿಸಿಕೊಂಡು ನಾನೂ ಪಕ್ಕದಲ್ಲಿ ಕುಳಿತೆ.

ಅವನ ಹೆಂಡತಿ ಮತ್ತು ದೊಡ್ಡ ಮಗ ತೀರಿಕೊಂಡಿದ್ದರು. ಮಗಳು ಗಂಡನ ಮನೆ ಸೇರಿದ್ದಳು. ಸಣ್ಣ ಮಗ ಮದುವೆಯಾಗಿ ಮೈಸೂರಿನಲ್ಲಿ ನೆಲೆಸಿದ್ದ. ಎರಡನೆಯ ಮಗ, ಈ ಭೀಮಯ್ಯನ ಮನೆಯಲ್ಲಿಯೇ ಇದ್ದಾನೆ. ಆತ ಕುಡುಕ. ವಯಸ್ಸಾದ ತಂದೆಯನ್ನು ಹೊಡೆದು ಬಡಿದು, ಮನೆಯಿಂದ ಹೊರಗೆ ಅಟ್ಟಿದ್ದಾನೆ.

ನನ್ನ ಮನಸ್ಸಿಗೆ ಬಹಳ ಸಂಕಟವಾಯಿತು. ಹೇಗಿದ್ದವ ಹೇಗಾದ! ಈಗ ನಾನು ಅವನಿಗೆ ಈ ಹೊತ್ತಿನ ಊಟಕ್ಕೆ ಸ್ವಲ್ಪ ಹಣ ಕೊಟ್ಟರೆ ಅವನ ಕಷ್ಟ ಮುಗಿಯುವುದೆ? ಮುಂದಿನ ಗತಿ ಏನು? ತಕ್ಷಣ ಒಂದು ನಿರ್ಧಾರಕ್ಕೆ ಬಂದೆ. ಭೀಮಯ್ಯನನ್ನು ಎಬ್ಬಿಸಿಕೊಂಡು ಕಾರಿನಲ್ಲಿ ಕೂರಿಸಿಕೊಂಡೆ.

ನೇರವಾಗಿ ನನ್ನ ಮನೆಗೆ ಹೋದೆ. ಬೀರುವಿನಿಂದ ಒಂದೆರಡು ಪ್ಯಾಂಟು, ಶರಟು, ಟೀ ಶರಟುಗಳನ್ನು ಒಂದು ಕೈಚೀಲದಲ್ಲಿ ತುರುಕಿಕೊಂಡು, ಬಿಟ್ಟ ಬಾಣದ ಹಾಗೆ ಹೊರಬಂದೆ. ಅಲ್ಲಿಂದ ಬೆಳ್ಳುಮಾಡು ಗ್ರಾಮಕ್ಕೆ ಹೋದೆವು. ಭೀಮಯ್ಯನೇ ಮನೆ ತೋರಿಸಿದ. ಅವನನ್ನು ಕಾರಿನಲ್ಲಿಯೇ ಕುಳ್ಳಿರಿಸಿ ನಾನು ಅವನ ಮನೆಗೆ ಹೋದೆ.

ಒಳ ನುಗ್ಗಿದವನೇ ಅಲ್ಲಿಯೇ ಇದ್ದ ಒಂದು ಕುರ್ಚಿಯನ್ನು ಎಳೆದುಕೊಂಡು ಕುಳಿತೆ. ಅದೊಂದು ಒಂದೇ ಕೋಣೆಯ ಮನೆ. ಒಂದು ಮೂಲೆಯಲ್ಲಿ ಅಡುಗೆ ಒಲೆ-ಪಾತ್ರೆಗಳು, ಇನ್ನೊಂದು ಮೂಲೆಯಲ್ಲಿ ಮಲಗಲು ಮಂಚ, ಮತ್ತೊಂದು ಮೂಲೆಯಲ್ಲಿ ಟೇಬಲ್ಲು ಕುರ್ಚಿ, ಹಿತ್ತಲ ಕಡೆಗೊಂದು ಬಾಗಿಲು! ಭೀಮಯ್ಯನ ಸೊಸೆ ಮನೆಯನ್ನು ಬಹಳ ಚೊಕ್ಕಟವಾಗಿ ಇಟ್ಟುಕೊಂಡಿದ್ದಳು. ಅಲ್ಲಿಯೇ ಇದ್ದ ಅವಳು ಇದ್ದಕ್ಕಿದ್ದಂತೆ ಒಳನುಗ್ಗಿದ ನನ್ನನ್ನು ಕಂಡು ಗಾಬರಿಯಾದರೂ, ತಕ್ಷಣದಲ್ಲಿ ನನ್ನನ್ನು ಗುರುತಿಸಿದಳು.

‘ಏನು ಸ್ವಾಮಿ, ಡಾಕ್ಟರೆ? ಏನಾಯಿತು?’ ಎಂದು ಆತಂಕದಿAದ ಕೇಳಿದಳು.

‘ನಿನ್ನ ಗಂಡ ಎಲ್ಲಿ ತಾಯಿ? ಅವನ ಹೆಸರೇನು? ಈವತ್ತು ಸಂತೆಗೆ ಹೋಗಿದ್ದಾನೇನು? ನಿನ್ನ ಮಾವ ಭೀಮಯ್ಯ ಎಲ್ಲಿ, ಕಾಣುತ್ತಿಲ್ಲ?’, ಎಂದು ಒಂದಷ್ಟು ಪ್ರಶ್ನೆಗಳನ್ನು ಕೇಳಿದೆ.

‘ಗಂಡನ ಹೆಸರು ಸುರೇಶ ಅಂತ ಸ್ವಾಮಿ. ಕುಡಿದು ಕುಡಿದು, ಕೆಲಸಕ್ಕೆ ಹೋಗಿಯೇ ವಾರ ಆಯ್ತು. ನಾನೂ ಸಣ್ಣ ಮಗುವನ್ನು ನೋಡಿಕೊಂಡು ಮನೆಯಲ್ಲಿಯೇ ಇದ್ದೇನೆ. ಇನ್ನು ಸಂತೆಗೆ ಹೋಗಿ ಮಾಡುವುದೇನು? ಅವನು ಇಲ್ಲಿಯೇ ಹೊರಗೆಲ್ಲಿಯೋ ಇದ್ದಾನೆ. ಮಾವನಿಗೂ ತುಂಬ ಹೊಡೆದುಬಿಟ್ಟಿದ್ದಾನೆ, ಅವರು ಮನೆ ಬಿಟ್ಟು ಒಂದು ತಿಂಗಳಾಯಿತು. ಎಲ್ಲಿ ಹೋದರೆಂದೇ ಗೊತ್ತಿಲ್ಲ’, ಎಂದು ಕಣ್ಣು ಒರೆಸಿಕೊಂಡಳು.

ನಾನು ಹೋಗಿ ಕಾರಿನಲ್ಲಿದ್ದ ಭೀಮಯ್ಯನನ್ನು ಮನೆಯೊಳಗೆ ಕರೆತಂದೆ. ಅಲ್ಲಿಯೇ ಇದ್ದ ಮೊಮ್ಮಗು ಓಡಿ ಬಂದು ತಾತ ತಾತ ಎಂದು ಅಜ್ಜನಿಗೆ ಅಂಟಿಕೊAಡಿತು. ‘ನೋಡಮ್ಮ, ನೋಡು ಹೇಗಾಗಿದ್ದಾರೆ! ಮೊದಲು ಮಾವನಿಗೆ ತಿನ್ನಲು ಊಟ ಕೊಡು’, ಎಂದು ಒತ್ತಾಯಿಸಿದೆ. ತಟ್ಟೆಯಲ್ಲಿ ಉಳಿದಿದ್ದ ಅನ್ನ-ಸಾರು ಬಡಿಸಿಕೊಂಡು ಮಾವನಿಗೆ ಕೊಟ್ಟಳು. ಭೀಮಯ್ಯ ಅಲ್ಲಿಯೇ ಕುಳಿತು, ಮೊಮ್ಮಗುವಿಗೂ ತಿನ್ನಿಸುತ್ತ ತಾನೂ ತಿನ್ನತೊಡಗಿದ. ಆಗಾಗ ನನ್ನತ್ತ ದೃಷ್ಟಿ ಬೀರುತ್ತಿದ್ದ ಆತನ ಕಣ್ಣುಗಳಲ್ಲಿ ಆವಾಗ ಯಾವ ಭಾವನೆ ಇತ್ತೆಂದು ನಾನು ಹೇಳಲಾರೆ.

ಅಷ್ಟರಲ್ಲಿ ಸುರೇಶನೂ ಬಂದ. ಅವನೂ ಕೂಡ ರೋಗಿಯಂತೆ ಸೊರಗಿಹೋಗಿದ್ದ. ಹಣವಿಲ್ಲದ್ದರಿಂದ, ಆವತ್ತು ಕುಡಿದಿರಲಿಲ್ಲ. ನನ್ನನ್ನು ಕಂಡವನೇ ಕೈ ಮುಗಿದು, ಪ್ರಶ್ನಾರ್ಥಕವಾಗಿ ನನ್ನತ್ತ ನೋಡಿದ.

‘ಸುರೇಶ, ನೋಡು! ನಿನ್ನ ಅಪ್ಪನನ್ನು ಹುಡುಕಿ ಕರೆದುಕೊಂಡು ಬಂದಿದ್ದೇನೆ’.

ಅಪ್ಪನನ್ನು ನೋಡಿದೊಡನೆ ಸುರೇಶ ತಲೆ ತಗ್ಗಿಸಿ, ಹೆಂಡತಿಯ ಕಡೆಗೆ ನೋಡಿದ.

‘ಇಲ್ಲಿ ಬಾ ಸುರೇಶ’, ಎಂದು ಅವನನ್ನು ಹಿಡಿದು ಪಕ್ಕದಲ್ಲಿ ಕುಳ್ಳಿರಿಸಿಕೊಂಡೆ. ಅವನ ಎರಡೂ ಕೈಗಳನ್ನು ಹಿಡಿದುಕೊಂಡು, ‘ಸುರೇಶ, ಲೋಕದಲ್ಲಿ ಹೆಂಡ ಕುಡಿಯದವರು ಯಾರಿದ್ದಾರೆ ಹೇಳು? ಎಲ್ಲರೂ ಕುಡಿಯುತ್ತಾರೆ. ಆದರೆ ಅದಕ್ಕೊಂದು ಲಿಮಿಟ್ಟಿರಬೇಕು, ಅಲ್ಲವೆ? ಕುಡಿದ ಅಮಲಿನಲ್ಲಿ ಹೆತ್ತ ಅಪ್ಪನನ್ನೇ ಮನೆಯಿಂದ ಓಡಿಸಿದೆಯಲ್ಲ! ಇದು ನಿನಗೆ ಸರಿಯೇ? ನಿನ್ನ ತಂದೆ ತಾಯಿ ಚಿಕ್ಕವರಾಗಿದ್ದಾಗ ನಿಮ್ಮನ್ನೆಲ್ಲ ಎಷ್ಟು ಚೆನ್ನಾಗಿ ಸಾಕಿದ್ದಾರೆ ಅಂತ ನನಗೆ ಗೊತ್ತು! ನಾಳೆ ನಿನಗೂ ವಯಸ್ಸಾದಾಗ, ನಿನ್ನ ಮಕ್ಕಳು ನಿನ್ನನ್ನು ಹೀಗೆ ನಡೆಸಿಕೊಂಡರೆ ನಿನಗೆ ಸರಿ ಅನ್ನಿಸುತ್ತದೆಯೆ? ಇನ್ನು ಹೀಗೆಲ್ಲ ಮಾಡಬೇಡ. ತಂದೆಯನ್ನು ಚೆನ್ನಾಗಿ ಸಾಕು. ಹಗಲು ಹೊತ್ತಿನಲ್ಲಿ ಭೀಮಯ್ಯ ಮಗುವನ್ನು ನೋಡಿಕೊಂಡಿದ್ದರೆ, ನಿನ್ನ ಹೆಂಡತಿಯೂ ನಿನ್ನೊಂದಿಗೆ ಕೆಲಸಕ್ಕೆ ಹೋಗಬಹುದು, ಅಲ್ಲವೆ’.

ಅವನನ್ನು ಎಬ್ಬಿಸಿ, ಅಲ್ಲಿಯೇ ಇದ್ದ ದೇವರ ¥s಼ೆÇÃಟೋ ಮುಂದೆ ನಿಲ್ಲಿಸಿ, ‘ಇನ್ನು ಮುಂದೆ ಹೀಗಾಗುವುದಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡು’ ಎಂದು ಆಗ್ರಹಿಸಿದೆ. ಈ ವಿಚಾರದಲ್ಲಿ ಸುರೇಶನೂ ಬಹಳ ನೊಂದಿದ್ದಾನೆAದು ಅನ್ನಿಸಿತು. ಅವನೊಂದಿಗೆ, ಅವನ ಹೆಂಡತಿಯೂ ಬಂದು ಕೈ ಮುಗಿದು ನಿಂತಳು.

ಹೊರಡುವಾಗ ಮಗುವಿನ ಕೈಯ್ಯಲ್ಲಿ ನೂರು ರೂಪಾಯಿಯನ್ನಿಟ್ಟು ಅಜ್ಜ, ಅಪ್ಪ, ಅಮ್ಮನನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿ ಮನೆಯತ್ತ ಕಾರು ಚಲಾಯಿಸಿದೆ. ಮನಸ್ಸಿನಲ್ಲಿ ಸಣ್ಣದೊಂದು ಸತ್ಕಾರ್ಯ ಮಾಡಿದ ತೃಪ್ತಿ ಇತ್ತು. ಜೀವನವನ್ನು ಸಂಭ್ರಮಿಸಲು ಇಂತಹ ಸಣ್ಣ ಕಾರಣಗಳೇ ಸಾಕಲ್ಲವೆ?

_ ಡಾ. ಎಸ್. ವಿ. ನರಸಿಂಹನ್. ವಿರಾಜಪೇಟೆ. ೯೪೮೦೭೩೦೮೮೪

೧೭ ¥s಼Éಬ್ರವರಿ ೨೦೨೨

No comments: