Sunday, February 22, 2026

‘ಅವ್ವ’- ನಮ್ಮೆಲ್ಲರ ಅಮ್ಮ- ಪುಸ್ತಕ ವಿಮರ್ಶೆ:

 ‘ಅವ್ವ’- ನಮ್ಮೆಲ್ಲರ ಅಮ್ಮ

ಪುಸ್ತಕ ವಿಮರ್ಶೆ:

‘ಅವ್ವ’: ಕೊಡಗಿನ ಕೂತಂಡ ಪಾರ್ವತಿ ಪೂವಯ್ಯನವರ ಗೌರವಾರ್ಥ, ಅವರ ಜೀವನ ಮತ್ತು ಕೃತಿಗಳ ಕುರಿತಾದ ನುಡಿ ಕಾಣಿಕೆ

ಲೇಖಕಿ: ಡಾ| ನಯನಾ ಕಶ್ಯಪ್

ಪ್ರಕಾಶನ: ವರ್ಡ್ ಸ್ಟೋರ್ ಪಬ್ಲಿಕೇಶನ್ಸ್, ಮಡಿಕೇರಿ. ಪ್ರಕಟಣೆ: ೨೦೨೪

ಶ್ರೀಮತಿ ಕೂತಂಡ ಪಾರ್ವತಿ ಪೂವಯ್ಯನವರು ಇಪ್ಪತ್ತನೆಯ ಶತಮಾನದಲ್ಲಿ ಕೊಡಗು ಕಂಡ ಒಬ್ಬ ಅದ್ವಿತೀಯ ಆದರ್ಶ ಮಹಿಳೆ. ಮೂಲತಃ ನೆರವಂಡ ಕುಟುಂಬದ ನಂಜಪ್ಪ ಮತ್ತು ಶ್ರೀಮತಿ ಮಾಯಮ್ಮ ದಂಪತಿಗಳ ಆರನೆಯ ಕುಡಿ. ತಾಯಿ, ಶ್ರೀ ಹರದಾಸ ಅಪ್ಪಚ್ಚ ಕವಿಯ ಅಪ್ಪನೆರವಂಡ ಕುಟುಂಬಕ್ಕೆ ಸೇರಿದವಳು. ಮಡಿಕೇರಿಯಲ್ಲಿಯೇ ಸಮಗ್ರ ಶಿಕ್ಷಣವನ್ನು ಪಡೆದು ಪಾಲಿಬೆಟ್ಟದ ಕೂತಂಡ ಶ್ರೀ ಪೂವಯ್ಯನವರನ್ನು ವಿವಾಹವಾಗಿ ಅಲ್ಲಿಯೇ ತನ್ನ ಬದುಕನ್ನು ಕಟ್ಟಿಕೊಂಡ ಗೃಹಿಣಿ.

ಒಬ್ಬ ವಿದ್ಯಾವಂತ ಮಹಿಳೆ, ಆ ಕಾಲದಲ್ಲಿ ಪಾಲಿಬೆಟ್ಟದಂತಹ ಸಣ್ಣ ಹಳ್ಳಿಯಲ್ಲಿ ಎಸ್ಟೇಟು ಜೀವನವನ್ನು ನಡೆಸುವುದೆಂದರೆ, ಒಂದು ಹಕ್ಕಿಗೆ ಹಾರಿ ಆಕಾಶವನ್ನು ಮುಟ್ಟಲು ಕಲಿಸಿ, ಆ ಹಕ್ಕಿಯನ್ನು ಒಂದು ಪಂಜರದಲ್ಲಿ ಬಿಟ್ಟಂತೆ! ಆದರೆ ಶ್ರೀಮತಿ ಪಾರ್ವತಿಯವರು ಆ ಸವಾಲನ್ನು ಪರಿಸ್ಥಿತಿಗೆ ತಕ್ಕಂತೆ ಸಮರ್ಥವಾಗಿ ಸದ್ಬಳಸಿಕೊಂಡು ಕುಟುಂಬವನ್ನು ನಿರ್ವಹಿದ ರೀತಿ ಎಲ್ಲರಿಗೂ ಮಾರ್ಗದರ್ಶನ!

‘ಸೂರ್ಯ ಮುಳುಗಿದನೆಂದು ಕಣ್ಣೀರಿಡುತ್ತ ಕುಳಿತರೆ ನಕ್ಷತ್ರಗಳನ್ನು ಕಾಣುವ ಭಾಗ್ಯವೂ ಇಲ್ಲದಾಗುವುದು’, ಎನ್ನುವ ಶ್ರೀಮತಿ ಪಾರ್ವತಿಯವರ ಮಾತುಗಳು ಅಕ್ಷರಶಃ ಅವರಿಗೇ ಅನ್ವಯಿಸುತ್ತದೆ!

ಶ್ರೀಮತಿ ಪಾರ್ವತಿಯವರಿಗೆ ಸಂಗೀತ, ಸಾಹಿತ್ಯ, ಸಂಸ್ಕೃತಿಗಳಲ್ಲಿ ಅಪಾರ ಆಸಕ್ತಿಯಿದ್ದುದರಿಂದ ಅವರಿಗೆ ಚಿತ್ರಕಲೆ, ಹಾಡುಗಾರಿಕೆ, ನೃತ್ಯ, ಬರವಣಿಗೆ, ತೋಟಗಾರಿಕೆ, ಅಡಿಗೆ, ಆತಿಥ್ಯ, ಎಲ್ಲವೂ ಕರಗತವಾಗಿತ್ತು. ಗಾಂಧೀಜಿಯವರಿAದ ಪ್ರೇರಿತರಾದ ಅವರು ಸರಳತೆಯ ಸಾಕಾರವಾಗಿದ್ದರು. ಹೀಗಾಗಿ ಅವರೊಬ್ಬ ಸುಶಿಕ್ಷಿತ, ರಚನಾತ್ಮಕ, ಸುಸಂಸ್ಕೃತ, ಸ್ವತಂತ್ರ ಹಾಗೂ ಎಲ್ಲರ ಮಮತೆಯ ಗೃಹಿಣಿಯಾಗಿ ಬಾಳುವೆ ನಡೆಸಿದರು.

“ನನ್ನ ಈ ಕೈಗಳಿಗೆ ಬರವಣಿಗೆಯಂತಹ ಪವಿತ್ರ ಕಲೆಯಲ್ಲಿ ಅನುಭವವಿಲ್ಲ. ನನ್ನೆಲ್ಲ ಸಣ್ಣ ಸಣ್ಣ ಕತೆಗಳು ಹಾಗೂ ಕವನಗಳು ಬಿಡುವಿನ ವೇಳೆ ನನ್ನ ಮನಃಸಂತೋಷಕ್ಕಾಗಿ ಬರೆದವುಗಳಾಗಿವೆ. ನನ್ನಲ್ಲಿ ಸಮರ್ಥ ಬರವಣಿಗೆಯ ಸಹಜ ಪ್ರವೃತ್ತಿಯನ್ನು ಪೋಷಿಸಿದವರೇ ಕೊಡಗಿನ ಆದಿಕವಿ ಶ್ರೀ ಹರದಾಸ ಅಪ್ಪಚ್ಚಕವಿ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ.” - ಇದು ಪುಸ್ತಕದ ನಾಯಕಿ ಶ್ರೀಮತಿ ಕೂತಂಡ ಪಾರ್ವತಿ ಪೂವಯ್ಯನವರು ತನ್ನ ಮನದಂತರಾಳದಿAದ ಹೇಳುವ ಮಾತುಗಳು.

ಕೊಡಗಿನ ಸಣ್ಣ ಕತೆ ಮತ್ತು ಕವನಗಳು, ಕೊಡಗಿನ ಕತೆಗಳು, ಭುಗಿಲ ಗೊಂಚಲು (೩೬ ಸಣ್ಣ ಕತೆಗಳೂ ಹಾಗೂ ೩೦ ಕವನಗಳ ಸಂಗ್ರಹ), ಭೈರವಿ, ವಿಧಿವಿಲಾಸ, ಅಲ್ಲದೆ ಅಪರೂಪ, ಕನ್ಯಾಬಲಿ, ಕೃತಘ್ನ ಮುಂತಾದ ಕಾದಂಬರಿಗಳು ಮತ್ತು ಅನೇಕ ಅಪ್ರಕಟಿತ ಬರಹಗಳ ಲೇಖಕಿಯಾದ ಶ್ರೀಮತಿ ಕೂತಂಡ ಪಾರ್ವತಿ ಪೂವಯ್ಯನವರು, ಕೊಡಗಿನ ಗೌರಮ್ಮ, ಬುಟ್ಟಿಯಂಡ ದೇವಕಿಯಮ್ಮ, ಡಾ| ಮುಕ್ಕಾಟಿರ ನೀಲಮ್ಮ ಮುಂತಾದವರ ಸಾಲಿಗೆ ಸೇರುತ್ತಾರೆ.

ಅವರಿಗೆ ಆರು ಮಕ್ಕಳು. ಕೂತಂಡ ಉತ್ತಪ್ಪ (ಜಪ್ಪು) ಕೊಡಗಿನ ಸುಪರಿಚಿತ ಸಮಾಜ ಸೇವಕ ಮತ್ತು ಭಾರತೀಯ ವಿದ್ಯಾ ಭವನದ ರೂವಾರಿ. ಐವರು ಹೆಣ್ಣು ಮಕ್ಕಳು- ಗಂಗಮ್ಮ (ಶಾಂತಿ), ಕಾವೇರಿ (ರಾಧ), ಕಾಮವ್ವ (ಯಶ್), ಮಾಯಮ್ಮ (ಸಾವಿತ್ರಿ) ಮತ್ತು ಅಕ್ಕಮ್ಮ (ಮಧು). ಎಲ್ಲರೂ ಕಾಲೇಜು ಶಿಕ್ಷಣವನ್ನು ಪಡೆದು, ತಾಯಿಯ ಆದರ್ಶಗಳನ್ನು ಮೈಗೂಡಿಸಿಕೊಂಡು ಇಂದು ಸಮಾಜಕ್ಕೆ ಆದರ್ಶಪ್ರಾಯರೇ ಆಗಿದ್ದಾರೆ.

ಪುಸ್ತಕದಲ್ಲಿ ಶ್ರೀಮತಿ ಕೂತಂಡ ಪಾರ್ವತಿ ಪೂವಯ್ಯನವರ ಬಿಡುಗಡೆ, ದಿವ್ಯ ದರ್ಶನ ಮತ್ತು ವಿಚಿತ್ರ ಘಟನೆ _ ಈ ಮೂರು ಕತೆಗಳ ಇಂಗ್ಲೀಷ್ ಭಾವಾನುವಾದವಿದೆ. ಅಲ್ಲದೆ ಶ್ರೀಮತಿ ಪಾರ್ವತಿಯವರ ಬಗ್ಗೆ ಹಿರಿಯರಾದ ಜಿ. ಪಿ. ರಾಜರತ್ನಂ, ಡಾ| ತೀತಿರ ರೇಖಾ ವಸಂತ, ಶ್ರೀ ಉಳ್ಳಿಯಡ ಪೂವಯ್ಯ ಮತ್ತು ಅವರ ಮಕ್ಕಳು ಹಾಗೂ ವಿವಿಧ ಬಂಧುಗಳು ಬರೆದ ಲೇಖನಗಳಿವೆ.

ಪುಸ್ತಕದ ಲೇಖಕಿ ಡಾ| ನಯನಾ ಕಶ್ಯಪ್‌ರವರಾದರೋ ಅಷ್ಟೇ ಸರಳ, ಪ್ರತಿಭಾವಂತ, ಸಹೃದಯ ಗೃಹಿಣಿ. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರು; ಕರ್ನಾಟಕದ ಸುಪ್ರಸಿದ್ಧ ಲೇಖಕಿಯಾದ ಶ್ರೀಮತಿ ವೈದೇಹಿಯವರ ಮಗಳು ಹಾಗೂ ಕುಂದಾಪುರದ ಸುಪರಿಚಿತ ವಕೀಲರೂ, ಕನ್ನಡ ಲೇಖಕರೂ, ಉತ್ತಮ ವಾಗ್ಮಿಯೂ ಆದ ಶ್ರೀ ಎಎಸ್‌ಎನ್ ಹೆಬ್ಬಾರರ ಸೋದರ ಸೊಸೆ; ಬರಹದ ಮತ್ತು ವಾಗ್ಮಯದ ಕಲೆ ಶ್ರೀಮತಿ ನಯನಾರವರಲ್ಲಿ ರಕ್ತಗತವಾಗಿದೆ. ಹಾಗಾಗಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪರಿಣತಿ ಹೊಂದಿದ್ದಾರೆ. ಲೀಲಾಜಾಲವಾಗಿ ಕನ್ನಡದ ಒಳಹೊಕ್ಕು ಅಷ್ಟೇ ಲೀಲಾಜಾಲವಾಗಿ ಇಂಗ್ಲೀಷಿನಿAದ ಹೊರಬಲ್ಲ ಚಾಕಚಕ್ಯತೆ ಅವರಲ್ಲಿದೆ!

ನನ್ನಮ್ಮ ಹೆಚ್ಚು ಓದಿಲ್ಲದೆ ಇರಬಹುದು; ಶ್ರೀಮಂತ ಕುಟುಂಬದ ವಾತಾವರಣದಲ್ಲಿ ಬೆಳೆದಿಲ್ಲದಿರಬಹುದು, ಆದರೆ ಪುಸ್ತಕದ ಪ್ರತಿಯೊಂದು ಪುಟದಲ್ಲಿಯೂ ಅವಳ ನೆನಪು ಕಾಡುತ್ತದೆ. ಮಕ್ಕಳನ್ನು ಸುತ್ತಲೂ ಕೂಡಿಸಿಕೊಂಡು ಕೈತುತ್ತು ಭೋಜನ ಮಾಡಿಸಿದ್ದು; ಸಂಜೆ ದೇವರ ಮುಂದೆ ಸ್ತೋತ್ರಗಳನ್ನೂ, ದೇವರನಾಮಗಳನ್ನೂ ಹಾಡಿಸಿದ್ದು; ದೋಸೆಗೆ ಅಕ್ಕಿ ಕಡೆಯುವಾಗ ಮಗ್ಗಿ, ಕೋಷ್ಟಕಗಳನ್ನು ಹೇಳಿಕೊಟ್ಟಿದ್ದು; ಮನೆಯ ಅಂಗಳದಲ್ಲಿ ಮತ್ತು ಹಿತ್ತಲಲ್ಲಿ ಅಗೆದು, ಹೂ-ತರಕಾರಿ ಗಿಡಗಳನ್ನು ನೆಡಲು ಹೇಳಿಕೊಟ್ಟಿದ್ದು ಎಲ್ಲವೂ ನಮಗೆ ಅರಿವಿಲ್ಲದಂತೆ ನೆನಪಿಗೆ ಬರುತ್ತವೆ!

ಪುಸ್ತಕವನ್ನು ಓದುತ್ತ ಹೋದಂತೆ ನೀವೊಂದು ಆಂಗ್ಲ ಪುಸ್ತಕವನ್ನು ಓದುತ್ತಿರುವಿರೆಂದೇ ನಿಮಗೆ ಅನ್ನಿಸುವುದಿಲ್ಲ. ಅದೊಂದು ಕೊಡಗಿನ ಕಿತ್ತಳೆ ಹಣ್ಣಿನಂತೆ: ಅತಿ ಸುಲಭವಾಗಿ ಸುಲಿದು ಬಿಡಬಹುದಾದ ಇಂಗ್ಲೀಷ್ ಹೊದಿಕೆ, ಅದರೊಳಗೆ ಅತ್ಯಂತ ಮಧುರವಾದ ಕನ್ನಡ ಹೂರಣ!

‘ಅವ್ವ’ ಎಲ್ಲರ ಹೃದಯವನ್ನು ಮುಟ್ಟುವ, ಅತ್ಯಂತ ಮನೋಜ್ಞವಾದ; ಮುಂದಿನ ಪೀಳಿಗೆಗೆ ಸಮರ್ಥ ಮಾರ್ಗದರ್ಶನವನ್ನು ನೀಡಬಲ್ಲ; ಇಂಗ್ಲೀಷ್ ಬಲ್ಲ ಎಲ್ಲ ಕನ್ನಡಿಗರ ಮನೆಯಲ್ಲಿಯೂ ಇರಲೇ ಬೇಕಾದಂತಹ ಪುಸ್ತಕವಾಗಿದೆ.

- ಡಾ| ನರಸಿಂಹನ್, ವಿರಾಜಪೇಟೆ. ೯೪೮೦೭೩೦೮೮೪

No comments: