ಕೊಡಗು: ನೆಲೆ ಮತ್ತು ಜೀವವೈವಿಧ್ಯತೆ
ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ|
ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ ನಿಂದಳೋ||
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ|
ಎಲ್ಲಿ ನೆಲವನು ತಣಿಸಿ, ಜನಮನ ಹೊಲದ ಕಳೆ ಕಳೆ ಕಳೆವಳೋ||
ಎಂಬ ಕವಿವಾಣಿಯಂತೆ, ಪ್ರಕೃತಿಮಾತೆ ತನ್ನ ಇಚ್ಛೆಯ ತಾಣವನ್ನಾಗಿ ಆರಿಸಿಕೊಂಡ ಪ್ರದೇಶವೇ ಕೊಡಗು. ಕರ್ನಾಟಕದ ಇಪ್ಪತ್ತೇಳು ಜಿಲ್ಲೆಗಳಲ್ಲಿ, ಬರೀ ೪,೧೦೦ ಚದರ ಕಿ.ಮೀ. ವಿಸ್ತೀರ್ಣವುಳ್ಳ ಜಿಲ್ಲೆಯಾದ ಕೊಡಗಿನಲ್ಲಿ ಮೂರು ತಾಲ್ಲೂಕುಗಳು: ಉತ್ತರದಲ್ಲಿ, ಮಡಿಕೇರಿ ಹಾಗೂ ಸೋಮವಾರಪೇಟೆ; ದಕ್ಷಿಣದಲ್ಲಿ ವಿರಾಜಪೇಟೆ. ಜಿಲ್ಲೆಯ ಬಹುಭಾಗ, ಪ್ರಪಂಚದಲ್ಲಿಯೇ ಜೀವವೈವಿಧ್ಯತೆಗೆ ಹೆಸರಾದ ಪಶ್ಚಿಮಘಟ್ಟಗಳಿಂದಾವೃತವಾಗಿದೆ.
ಕಾವೇರಿಮಾತೆಯ ಜನ್ಮಸ್ಥಳ ತಲಕಾವೇರಿ. ಕಾವೇರಿಯ ಉಪನದಿಗಳಾದ ಲಕ್ಷ÷್ಮಣತೀರ್ಥ, ಬರಪೊಳೆ ಮತ್ತು ಹಾರಂಗಿ ಅಲ್ಲದೆ ಹೇಮಾವತಿ ಮತ್ತು ಅಸಂಖ್ಯಾತ ಝರಿ-ತೊರೆಗಳು ಪಶ್ಚಿಮಘಟ್ಟಗಳ ಕಣಿವೆಗಳಲ್ಲಿ ಹರಿದು ಕೊಡಗಿನ ನೆಲವನ್ನು ಪಾವನಗೊಳಿಸುತ್ತವೆ. ಈ ಗಿರಿಶಿಖರಗಳ ಮಧ್ಯೆಯಿರುವ ಕಮರಿ-ಕಣಿವೆಗಳೆಷ್ಟೋ!
ಬಹುಭಾಗ ನೀರೆಲ್ಲ ಹರಿದುಹೋಗುವುದರಿಂದ, ಕೊಡಗಿನಲ್ಲಿ ದೊಡ್ಡ ಜಲಾಶಯಗಳಿಲ್ಲ; ಸಣ್ಣ ಕೆರೆಗಳನ್ನು ಮಾತ್ರ ಕಾಣಬಹುದು. ನದಿ, ಕಾಲುವೆ, ಕೆರೆಗಳ ತೀರದಲ್ಲಿ ಜೌಗುಪ್ರದೇಶಗಳಿವೆ. ಇಲ್ಲಿ ಸೊಂಪಾಗಿ ಬೆಳೆದ ಹುಲ್ಲು, ಜೊಂಡು ಮತ್ತು ಬಿದಿರು ಕಾಡುಗಳನ್ನು ಕಾಣುತ್ತೇವೆ. ಬೆಟ್ಟಗಳ ಬುಡದಲ್ಲಿರುವ ಸಮತಟ್ಟು ಪ್ರದೇಶಗಳಲ್ಲಿ ರೈತರು ಭತ್ತ ಬೆಳೆಯುತ್ತಾರೆ. ವರ್ಷದಲ್ಲಿ ಮಳೆಗಾಲದ ಒಂದೇ ಬೆಳೆ ಬೆಳೆಯುವುದರಿಂದ, ನಾಡಿನ ಎಲ್ಲ ಹಬ್ಬ-ಹರಿದಿನಗಳೂ ಪ್ರಕೃತಿಯ ವಾರ್ಷಿಕ ಚಕ್ರವನ್ನವಲಂಬಿಸಿ, ಭತ್ತದ ಬೆಳೆಯೊಂದಿಗೆ ಹೆಣೆದುಕೊಂಡಿವೆ. ಬೆಟ್ಟಗಳ ಇಳಿಜಾರು ಪ್ರದೇಶಗಳಲ್ಲಿ ವಿಫುಲವಾಗಿ ಕಾಫಿû, ಮೆಣಸು ಮತ್ತು ಏಲಕ್ಕಿ ತೋಟಗಳನ್ನು ಕಾಣಬಹುದು. ಈ ಎಸ್ಟೇಟುಗಳಲ್ಲಿರುವ ನೆರಳು ಮರಗಳೇ ಅಸಂಖ್ಯ ಜೀವಿಗಳಿಗೆ ಆಶ್ರಯ ನೀಡುತ್ತವೆ.
ಕಣ್ಣಿಗೆ ಹಬ್ಬವನ್ನುಂಟುಮಾಡುವ ಪಶ್ಚಿಮಘಟ್ಟಗಳ ಸಾಲು, ಕಾಫಿû-ಏಲಕ್ಕಿ ಎಸ್ಟೇಟುಗಳು, ದಿಗಂತದವರೆಗೂ ಪಸರಿಸಿರುವ ಭತ್ತದ ಗದ್ದೆಗಳು, ಕೊಡಗಿನ ನೆಲದ ಫಲವತ್ತತೆಗೆ ಸಾಕ್ಷಿ. ಇಲ್ಲಿ ನಾಲ್ಕು ರೀತಿಯ ಕಾಡುಗಳನ್ನು ಕಾಣಬಹುದು: ಕೊಡಗಿನ ಪಶ್ಚಿಮದಲ್ಲಿ, ಸೂರ್ಯರಶ್ಮಿಯೂ ನೆಲಕ್ಕೆ ತಾಗದಂತೆ ಎತ್ತರವಾಗಿ, ಒತ್ತಾಗಿ ಬೆಳೆದ ಅರೆ-ನಿತ್ಯ ಮತ್ತು ನಿತ್ಯಹರಿದ್ವರ್ಣ ಕಾಡುಗಳು ಕಣ್ಣಿಗೆ ತಂಪನ್ನೆರೆಯುತ್ತವೆ. ಉತ್ತರ, ಮಧ್ಯ ಹಾಗೂ ದಕ್ಷಿಣ ಕೊಡಗಿನಲ್ಲಿ ಒಣ ಮತ್ತು ಶೀತ ಉದುರೆಲೆ ಕಾಡುಗಳಿವೆ. ಈ ಕಾಡುಗಳಲ್ಲಿ ಬೀಟೆ, ನಂದಿ, ಸಂಪಿಗೆ, ಹಲಸು, ಹೆಬ್ಬಲಸು, ಮತ್ತಿ, ಮಾವು, ಧೂಪ, ದೇವದಾರು, ಗೋಳಿ, ಹೊನ್ನೆ, ಕರ್ಪಚೆಕ್ಕೆ, ಹಿಪ್ಪೆ, ಅಶೋಕ, ಬಿಳಿನಂದಿ, ಗೇರು, ಆಲ-ಅತ್ತಿ ಮುಂತಾದ ಮರಗಳೂ, ನೆಟ್ಟುಬೆಳೆಸಿದ ತೇಗದ ಕಾಡುಗಳೂ ಇವೆ. ಅಲ್ಲದೆ ಶೀತಗಾಡುಗಳಲ್ಲಿ ನಾನಾಬಗೆಯ ಬೆತ್ತಗಳು, ವಿವಿಧ ಜಾತಿಯ ಜರಿಗಿಡಗಳು, ಅಸಂಖ್ಯ ಬಳ್ಳಿ, ಬಿದಿರುಗಳು, ಪಾಚಿ ಮತ್ತು ಆರ್ಕಿಡ್‌ಗಳೂ ಬೆಳೆಯುತ್ತವೆ.
ಪಶ್ಚಿಮ ಘಟ್ಟಗಳ ಕಣಿವೆ ಪ್ರದೇಶಗಳಲ್ಲಿ ಶೋಲಾ ಹಸಿರುಗಾಡುಗಳಿದ್ದರೆ, ಇಳಿಜಾರು ಪ್ರದೇಶಗಳಲ್ಲಿರುವ ಒತ್ತಾದ, ವಿಶಾಲವಾದ ಹುಲ್ಲುಕಾಡುಗಳು ವಿಶೇಷ ಸ್ಥಾನವನ್ನೇ ಪಡೆದಿವೆ. ಇವು ಸ್ಪಂಜಿನAತೆ ಮಳೆನೀರನ್ನು ಹೀರಿಕೊಂಡು, ನೆಲದಲ್ಲಿ ಇಂಗಲು ಸಹಾಯ ಮಾಡುವುದಲ್ಲದೆ, ಭೂ ಸವಕಳಿ ತಡೆಗಟ್ಟುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ.
ಜಿಲ್ಲೆಯ ಪೂರ್ವದಲ್ಲಿ ಪ್ರಸ್ಥಭೂಮಿಯನ್ನು ಕಾಣಬಹುದು. ಇಲ್ಲಿ ಸೀಗೆ, ಲಾಂಟಾನ, ಇನ್ನಿತರ ಮುಳ್ಳು ಪೊದೆಗಳ ಕುರುಚಲು ಕಾಡು ಹಾಗೂ ವಿರಳ ಕಾಡುಗಳಿವೆ. ವಿಶಾಲವಾದ ಬಯಲು ಪ್ರದೇಶಗಳಲ್ಲಿರುವ ಹಳ್ಳಿಗಳಲ್ಲಿ ರೈತಾಪಿ ಜನರ ಹೊಲ-ತೋಪುಗಳಿವೆ. ಕೊಡಗಿನ ವಿವಿಧ ನೆಲೆ-ಆವಾಸಗಳ ಸವಿವರವುಳ್ಳ ಭೂಪಟಕ್ಕೆ ಪುಟ ೨ ನೋಡಿ.
ಸಂರಕ್ಷಿತ ಪ್ರದೇಶಗಳು:
ಕೊಡಗಿನ ಪ್ರಕೃತಿ ಸೌಂದರ್ಯದ ಖನಿಯನ್ನು ಉಳಿಸಿ, ಬೆಳೆಸಲು ಹಲವೆಡೆ ಘೋಷಿತ ರಕ್ಷಿತಾರಣ್ಯಗಳಿವೆ. ಉತ್ತರದಲ್ಲಿ ತಲಕಾವೇರಿ, ಪುಷ್ಪಗಿರಿ ಮತ್ತು ಬ್ರಹ್ಮಗಿರಿ ರಕ್ಷಿತಾರಣ್ಯಗಳು ಹಾಗೂ ದಕ್ಷಿಣದಲ್ಲಿ ನಾಗರಹೊಳೆ (ರಾಜೀವ್ ಗಾಂಧಿ) ರಾಷ್ಟಿçÃಯ ಉದ್ಯಾನವನ ಇವುಗಳಲ್ಲಿ ಪ್ರಮುಖವಾದುವು. ಈ ಅರಣ್ಯಗಳು ಲಕ್ಷೋಪಲಕ್ಷ ಜೀವಿಗಳಿಗೆ ಆಶ್ರಯ ತಾಣವಾಗಿರುವುದಲ್ಲದೆ, ಜೀವವೈವಿಧ್ಯತೆಯ ಆಗರಗಳಾಗಿವೆ. ಸಸ್ಯಾಹಾರಿ ಪ್ರಾಣಿಗಳ ವರ್ಗಕ್ಕೆ ಸೇರಿದ ಆನೆ, ಕಾಡೆಮ್ಮೆ, ಹುಲ್ಲೆ, ಹುಲ್ಲೆಯ ಜಾತಿಗೆ ಸೇರಿದ ನಾಲ್ಕು ಕೊಂಬಿನ ಕೊಂಡುಕುರಿ ಮತ್ತು ಕಾಡುಹಂದಿಗಳಲ್ಲದೆ, ಜಿಂಕೆಯ ಜಾತಿಗೆ ಸೇರಿದ ಕಡವೆ, ಸಾರಂಗ, ಕಾಡುಕುರಿ, ಹಾಗೂ ಬೆಕ್ಕಿನ ಗಾತ್ರದ ಕೂರಹಂದಿ ಇವೆಲ್ಲ ಸೇರಿವೆ.
ಮಾಂಸಾಹಾರಿಗಳ ಗುಂಪಿನಲ್ಲಿ ಮಾರ್ಜಾಲಗಳಾದ ಹುಲಿ, ಚಿರತೆ, ಕಾಡುಬೆಕ್ಕು, ಹುಲಿಬೆಕ್ಕು, ಅಲ್ಲದೆ ಕಬ್ಬೆಕ್ಕು, ಮುಂಗುಸಿ ಮತ್ತು ಅಪರೂಪದ ಮರನಾಯಿಗಳು; ಬೇಟೆಗಾರ ಪ್ರಾಣಿಗಳಾದ ಕತ್ತೆಕಿರುಬ, ತೋಳ, ಕೆನ್ನಾಯಿ, ನೀರ್ನಾಯಿ, ಅಲ್ಲದೆ ಮುಳ್ಳುಹಂದಿ, ಕೀಟಭಕ್ಷಕ ಚಿಪುö್ಪಹಂದಿ ಮತ್ತು ಕರಡಿಗಳಿವೆ.
ಇನ್ನು ವಾನರರ ವರ್ಗದಲ್ಲಿ ಕೋತಿ, ಮುಚ್ಚ, ನೀಲಗಿರಿ ಮುಚ್ಚ, ಮುಸುವ, ಕಾಡುಪಾಪ ಮತ್ತು ಅಪರೂಪದ ಸಿಂಗಲೀಕ ಸೇರಿವೆ. ಈ ಪ್ರಾಣಿಗಳಲ್ಲದೆ, ಮೊಲ, ಹಾರುವ ಅಳಿಲು, ಕೆಂಚಳಿಲು, ಮುಂತಾದ ವಿಶಿಷ್ಟ ಪ್ರಾಣಿಗಳೂ ಈ ಕಾಡುಗಳಲ್ಲಿವೆ.
ಉರಗಸಂಕುಲಕ್ಕೆ ಸೇರಿದ ಹಲವಾರು ವಿಷ-ವಿಷರಹಿತ ಹಾವುಗಳು, ಮೊಸಳೆ, ಉಡಗಳೂ ಇಲ್ಲಿವೆ. ಹಂದಿಮೀನು (ಮಹಶೀರ್), ಕಾರ್ಪ್, ಮ್ಯೂರೆಲ್ ಮುಂತಾದ ಮೀನುಗಳು ಮತ್ತು ಹುಲ್ಲುಕಪ್ಪೆ, ಗೂಳಿಕಪ್ಪೆ ಮುಂತಾದ ಕಪ್ಪೆಯ ವಿವಿಧ ಪ್ರಭೇದಗಳಿವೆ. ಮೆದುಚಿಪ್ಪಿನ ಆಮೆ, ಕರಿ ಆಮೆ, ಟ್ರಾವಂಕೂರ್ ಆಮೆ, ಬೆಳುವಾಮೆ, ಬೆತ್ತದಾಮೆ ಮುಂತಾದ ಕೂರ್ಮವರ್ಗದ ಪ್ರಾಣಿಗಳಿವೆ. ಇನ್ನು ಕೀಟ ವಿಜ್ಞಾನಿಗಳಿಗೆ-ಪಕ್ಷಿತಜ್ಞರಿಗೆ ಹಾಗೂ ಪಕ್ಷಿವೀಕ್ಷಕರಿಗೆ ಚಿಟ್ಟೆ-ಪತಂಗ-ಹಕ್ಕಿಗಳಿAದ ತುಂಬಿ ತುಳುಕುತ್ತಿರುವ ಈ ಕಾಡುಗಳು ಸ್ವರ್ಗಸಮಾನವಾಗಿವೆ.
ಇಂದು ವಿಜ್ಞಾನದ ಹೊಸ ಆವಿಷ್ಕಾರವಾದ ಡಿ.ಎನ್.ಎ. ಬೆರಳಚ್ಚು ತೆಗೆಯುವ ವಿಧಾನದಿಂದ ಸಕಲ
ಸಸ್ಯ-ಪ್ರಾಣಿಗಳ ಪ್ರಭೇದಗಳನ್ನು ಕರಾರುವಾಕ್ಕಾಗಿ ಗುರುತುಹಿಡಿಯಲು ಸಾಧ್ಯವಾಗಿದೆ. ಅಲ್ಲದೆ ಈ ಕ್ರಮ ಪಶ್ಚಿಮಘಟ್ಟಗಳ ಜೀವಿವೈವಿಧ್ಯತೆಯ ಹೊಸ ಭಂಡಾರವನ್ನೇ ತೆರೆದಿದೆ.
ದೇವರಕಾಡು: ಸಂರಕ್ಷಣೆಯ ಸಂಪ್ರದಾಯ
ಸಸ್ಯಸAಕುಲಗಳನ್ನು, ಪ್ರಾಣಿಪಕ್ಷಿಗಳನ್ನು ದೇವರ ಹೆಸರಿನಲ್ಲಿ ಪೂಜಿಸಿ, ರಕ್ಷಿಸುವ ಸಂಪ್ರದಾಯಗಳು ಪ್ರಪಂಚದ ನಾನಾ ಭಾಗಗಳಲ್ಲಿ ಆಚರಣೆಯಲ್ಲಿವೆ. ಭಾರತದಲ್ಲಿ, ಅದರಲ್ಲಿಯೂ ಕರ್ನಾಟಕದ ಕೊಡಗಿನಲ್ಲಿ ದೇವಕಾಡ್ ಅಥವಾ ದೇವರಕಾಡುಗಳೆಂದು ಕರೆಯಲ್ಪಡುವ ಪವಿತ್ರವನಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಪ್ರತಿ ಹಳ್ಳಿಯಲ್ಲಿ ಒಂದಕ್ಕಿAತ ಹೆಚ್ಚು ದೇವರಕಾಡುಗಳನ್ನು ನಾವು ಕಾಣಬಹುದು. ಸಣ್ಣಸಣ್ಣ ಕಾಡುಗಳನ್ನು ಪೂಜಾಸ್ಥಾನಗಳಾಗಿ ಪರಿವರ್ತಿಸಿ, ಅವುಗಳನ್ನು ರಕ್ಷಿಸುವ ಕಾರ್ಯ ಒಂದು ವಿಶೇಷ ಪದ್ಧತಿಯಾಗಿ ಇಲ್ಲಿಯ ಜನರಲ್ಲಿ ಬೆಳೆದುಬಂದಿದೆ. ಸುಮಾರು ೧,೨೧೪ ಇಂತಹ ದೇವರಕಾಡುಗಳು ೩,೬೫೦ ಚದರ ಕಿ.ಮೀ. ವಿಸ್ತೀರ್ಣದಲ್ಲಿದೆ! ಇತ್ತೀಚೆಗೆ ಅರಣ್ಯ ಇಲಾಖೆ, ಸರ್ಕಾರೇತರ ಸ್ವಯಂಸೇವಾಸAಸ್ಥೆಗಳು ಹಾಗೂ ಹಲವಾರು ಸಂಶೋಧನಾ ಕೇಂದ್ರಗಳು ದೇವರಕಾಡು ಸಂರಕ್ಷಣೆಗಾಗಿ ಸ್ಥಳೀಯ ಸಮುದಾಯದೊಂದಿಗೆ ಕೈಜೋಡಿಸಿದ್ದಾರೆ. ಇವು ವನ್ಯಜೀವಿಗಳಿಗೆ ಸುರಕ್ಷಿತ ಸ್ಥಾನಗಳಲ್ಲದೆ, ಸಂಶೋಧನೆಗಳಿಗೂ ಉತ್ತಮ ತಾಣಗಳಾಗಿವೆ. ಈ ದೇವರಕಾಡುಗಳ ಬಗ್ಗೆ ಜನರಲ್ಲಿ ಇತ್ತೀಚೆಗೆ ಇನ್ನೂ ಹೆಚ್ಚಿನ ಕಳಕಳಿ, ಉತ್ಸಾಹ ಕಂಡುಬರುತ್ತಿರುವುದು ಮತ್ತೊಂದು ಉತ್ತಮ ಬೆಳವಣಿಗೆ. ಯಾವುದೇ ಶುಭ್ರವಾದ ಮುಂಜಾನೆ ನೀವು ಒಂದು ದೇವರಕಾಡಿನಲ್ಲಿ ಪಕ್ಷಿವೀಕ್ಷಣೆ ಮಾಡಿದಲ್ಲಿ ನೀವು ಅಲ್ಲಿ ಏನಿಲ್ಲವೆಂದರೂ ೩೦-೪೦ ಪ್ರಭೇದದ ಹಕ್ಕಿಗಳನ್ನು ಕಾಣಬಹುದು!
ಹೀಗೆ, ವಿಸ್ತಾರವಾದ ಕಾಫಿû. ಏಲಕ್ಕಿ ಎಸ್ಟೇಟುಗಳು, ಅವುಗಳಲ್ಲಿರುವ ಅಸಂಖ್ಯಾತ ನೆರಳು ಮರಗಳು, ಮನೆಗಳ ಸುತ್ತಮುತ್ತ ಅಂಗಳದಲ್ಲಿ ವಿಶೇಷವಾಗಿ ಬೆಳೆಸಿರುವ ಹಣ್ಣು ಹಾಗೂ ಹೂದೋಟಗಳು, ಇವೆಲ್ಲ ಕೊಡಗನ್ನು ಸಮೃದ್ಧಿಗೊಳಿಸಿವೆ. ಹೀಗೆ ಕೊಡಗಿನಲ್ಲಿರುವ, ಬೇರೆಲ್ಲಿಯೂ ಕಾಣದ, ವೈವಿಧ್ಯಮಯ ಆವಾಸಸ್ಥಾನಗಳು ಇಲ್ಲಿಯ ಸಮೃದ್ಧ ಜೀವವೈವಿಧ್ಯತೆಗೆ ಕಾರಣವಾಗಿ ಒಟ್ಟಿನಲ್ಲಿ ಪ್ರಕೃತಿಮಾತೆಯ ಹೆಮ್ಮೆಯ ತಾಣವನ್ನಾಗಿಸಿವೆ.
ಹಕ್ಕಿಗಳು ಸ್ವಾತಂತ್ರ÷್ಯ, ಶಾಂತಿ ಮತ್ತು ಸೌಂದರ್ಯದ ಪ್ರತಿನಿಧಿಗಳು. ಅವು, ಅಪರಿಮಿತ ನೈಸರ್ಗಿಕ ವೈಭವವುಳ್ಳ ಕೊಡಗಿನ ಸೊಬಗನ್ನು ಇಮ್ಮಡಿಗೊಳಿಸಿವೆ. ಕೊಡಗಿನಲ್ಲಿ ಕಂಡುಬರುವ ಪಕ್ಷಿವೈವಿಧ್ಯತೆ ಅಪೂರ್ವ. ಕೊಡಗಿನ ಅರಣ್ಯ ಪ್ರದೇಶಗಳಲ್ಲಿ, ಎಸ್ಟೇಟುಗಳಲ್ಲಿ, ಹಣ್ಣು-ಹೂದೋಟಗಳ ನಡುವೆ ಸುತ್ತಾಡುತ್ತಾ, ಪ್ರಕೃತಿಯ ಮಡಿಲಲ್ಲಿ ಚಿಲಿಪಿಲಿಗುಟ್ಟುತ್ತಾ ಹಾರಾಡುವ ಹಕ್ಕಿಗಳನ್ನು ನೋಡುವುದು, ಮನಸ್ಸಿಗೆ ಅನಿರ್ವಚನೀಯ ಆನಂದವನ್ನು ನೀಡುತ್ತದೆ!
ನೂರಾರು ವರ್ಷಗಳ ಹಿಂದಿನ ಇತಿಹಾಸದಲ್ಲೂ, ಬ್ರಿಟಿಷ್ ಆಡಳಿತದ ಸಮಯದಲ್ಲೂ ಕೊಡಗಿಗೆ ಒಂದು ಪ್ರತ್ಯೇಕ ಹಾಗೂ ವಿಶಿಷ್ಟ ಸ್ಥಾನವಿತ್ತು. ಇಂದಿಗೂ ಪಶ್ಚಿಮಘಟ್ಟಗಳ ಸಾಲಿನಲ್ಲಿ ಬರುವ ಇತರ ಜಿಲ್ಲೆಗಳನ್ನು ಗಮನಿಸಿದಲ್ಲಿ ಕೊಡಗು ಈ ವಿಶೇಷತೆಯನ್ನು ಉಳಿಸಿಕೊಂಡು ಬಂದಿದೆ. ಇಲ್ಲಿಯ ಜನಜೀವನ, ಭಾಷೆ, ವೇಷ-ಭೂಷಣ, ಸಾಂಸ್ಕöÈತಿಕ ಪರಂಪರೆ, ಎಲ್ಲವೂ ವಿಭಿನ್ನ ಹಾಗೂ ವಿಶಿಷ್ಟ. ಅಲ್ಲದೆ ಇಲ್ಲಿರುವ ವೈವಿಧ್ಯಮಯ ಪ್ರಾಕೃತಿಕ ಆವಾಸಗಳು ಇಲ್ಲಿಯ ಸಮೃದ್ಧ ಜೀವವೈವಿಧ್ಯತೆಗೆ ಕಾರಣ. ಒಂದು ದೇಶದ ಅತಿ ಪುಟ್ಟ ಭೂವಿಸ್ತೀರ್ಣದಲ್ಲಿ ಆ ದೇಶದ ಶೇಕಡ ೨೫ಕ್ಕೂ ಹೆಚ್ಚು ಪ್ರಭೇದದ ಹಕ್ಕಿಗಳು ಮನೆಮಾಡಿವೆ ಎಂದರೆ ಈ
ನಾಡಿನ ಉತ್ಕöÈಷ್ಟತೆಯನ್ನು ನಾವು ಮನಗಾಣಬಹುದು. ಆದರೆ ಇಲ್ಲಿರುವ ಅತ್ಯಪೂರ್ವ ಪಕ್ಷಿಸಂಕುಲದ ಬಗ್ಗೆ ಸಮಗ್ರ ಮಾಹಿತಿಯುಳ್ಳ ಗ್ರಂಥ ಇಲ್ಲಿಯವರೆಗೆ ಲಭ್ಯವಿರಲಿಲ್ಲ ಮತ್ತು ಈ ಕೊರತೆ ಎದ್ದುಕಾಣುತ್ತಿತ್ತು.
ಆದ್ದರಿಂದ ಭಾರತದೇಶದಲ್ಲಿಯೇ ಅತಿ ವಿಶಿಷ್ಟವಾದ ಕೊಡಗಿನ ಖಗರತ್ನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವುದೇ ಈ ಪುಸ್ತಕದ ಉದ್ದೇಶ. ಪಕ್ಷಿಗಳ ಮಾಹಿತಿಗಳುಳ್ಳ, ಕ್ಷೇತ್ರ-ಮಾರ್ಗದರ್ಶಕದಂತೆ ಇರುವ, ಇತರ ಪುಸ್ತಕಗಳ ಧಾಟಿಯಲ್ಲಿಯೇ ಈ ಹೊತ್ತಗೆಯೂ ರೂಪುಗೊಂಡಿದೆ. ಕೊಡಗಿನ ಒಟ್ಟು ೩೧೦ ಪಕ್ಷಿಪ್ರಭೇದಗಳ ಚಿತ್ರಗಳು ಮತ್ತು ಮಾಹಿತಿಗಳನ್ನು, ಜೊತೆಜೊತೆಯಲ್ಲಿ ಒತ್ತಟ್ಟಿಗೆ ಕಾಣಬಹುದು. ಇದು ಆಯಾ ಕುಟುಂಬದ ಹಕ್ಕಿಗಳನ್ನು ಹೋಲಿಸಿ ನೋಡಲು ಮತ್ತು ಹೆಚ್ಚು ಶ್ರಮವಿಲ್ಲದೆ ಓದಲು ಅನುಕೂಲವಾಗುವುದು. ಪ್ರತಿಯೊಂದು ಹಕ್ಕಿಯ ಆಕಾರ, ರೂಪುರೇಷೆ, ಆವಾಸಸ್ಥಾನ, ನಡವಳಿಕೆ, ಆಹಾರ, ಗೂಡಿನ ರಚನೆ, ಮೊಟ್ಟೆಗಳ ವಿವರಗಳನ್ನು ಇಂಗ್ಲಿಷಿನಲ್ಲಿ ಬರೆಯಲಾಗಿದೆ. ಇಂಗ್ಲಿಷ್ ಮತ್ತು ಕನ್ನಡ ಈ ಎರಡೂ ಭಾಷೆಗಳಲ್ಲಿ ಪಠ್ಯವಿದ್ದರೂ, ಅದು ಒಂದರ ಮತ್ತೊಂದು ಭಾಷಾಂತರವಲ್ಲ. ಸ್ವಾರಸ್ಯಕರ, ಮುಖ್ಯ ಹಾಗೂ ವಿಶಿಷ್ಟ ವಿಚಾರಗಳು ಕನ್ನಡದಲ್ಲಿ ಕಾಣಬಹುದು. ಹಕ್ಕಿಗಳ ಕೊಡವ ಹೆಸರು ಇದ್ದಲ್ಲಿ ಅವುಗಳನ್ನು ಆವರಣದಲ್ಲಿ ನೀಡಲಾಗಿದೆ. ನಿರ್ದಿಷ್ಟವಾಗಿ ಹೇಳದಿದ್ದಲ್ಲಿ, ಚಿತ್ರವು ಗಂಡುಹಕ್ಕಿಯದ್ದೆAದೇ ತಿಳಿಯತಕ್ಕದ್ದು.
ಕೊಡಗಿನಲ್ಲಿ ವಾಸವಿರುವ ಸಕಲ ಪಕ್ಷಿಗಳ ಬಗ್ಗೆ ಸಪ್ರಮಾಣವಾದ, ವಿಶ್ವಾಸಾರ್ಹವಾದ ಮಾಹಿತಿಯನ್ನೂ ಒಂದೇ ಹೊತ್ತಗೆಯಲ್ಲಿ ಕ್ರೋಢೀಕರಣಗೊಳಿಸಲು ಪ್ರಯತ್ನಿಸಲಾಗಿದೆ. ಆದ್ದರಿಂದ ಪಕ್ಷಿಗಳ ಬಗ್ಗೆ ಕುತೂಹಲ, ಅಭಿರುಚಿ, ಕಳಕಳಿಯಿರುವ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಈ ಪುಸ್ತಕ ಉಪಯುಕ್ತವಾಗುವುದರಲ್ಲಿ ಸಂಶಯವಿಲ್ಲ.
ಎಷ್ಟೋ ಅಂತರರಾಷ್ಟಿçÃಯ ನಿಯಮಗಳು, ನಿಬಂಧನೆಗಳು, ಕಟ್ಟುಪಾಡುಗಳಿದ್ದರೂ, ಮಾನವನ ದುರಾಸೆ, ಸ್ವಾರ್ಥ, ಕ್ರೌರ್ಯದ ಮುಂದೆ ಈ ಸಂಪತ್ತನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳೂ ನಿಷ್ಫಲವಾಗಿವೆ.
ನಮ್ಮ ದೇಶವು ಪ್ರಕೃತಿಯೊಂದಿಗೆ ಅವಿನಾಭಾವ ಸಂಬAಧ ಹೊಂದಿರುವ ಸಂಸ್ಕöÈತಿಯುಳ್ಳದ್ದಾಗಿದೆ. ಪಕ್ಷಿಗಳ ಬಗ್ಗೆ ಆಸಕ್ತಿಯಿರುವ ಸುಮಾರು ಹದಿನಾರು ಸಾವಿರಕ್ಕೂ ಹೆಚ್ಚು ಪಕ್ಷಿವೀಕ್ಷಕರು ಭಾರತದಲ್ಲಿದ್ದಾರೆ. ಪ್ರಪಂಚದಾದ್ಯAತ ಪಕ್ಷಿಸಂಕುಲ ನಾಶವಾಗುತ್ತಿರುವ ಬಗ್ಗೆ ಆತಂಕಕಾರಿ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ, ಹಲವಾರು ಸಂಘ-ಸAಸ್ಥೆಗಳು ಈ ಬಗ್ಗೆ ವಿದ್ಯಾರ್ಥಿಗಳಲ್ಲಿ, ಜನಸಾಮಾನ್ಯರಲ್ಲಿ, ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇದು ಒಂದು ಆಶಾದಾಯಕ ಬೆಳವಣಿಗೆಯಾಗಿದೆ. ಪಕ್ಷಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದರ ಮೂಲಕ, ಅಳಿವಿನ ಅಂಚಿಗೆ ತಲುಪಿರುವ ಪಕ್ಷಿಪ್ರಭೇದಗಳ ವಿವರಗಳನ್ನು ಪಡೆಯಲು ನೆರವಾಗುತ್ತದೆ. ಯಾವ ಪ್ರಭೇದದ ಪಕ್ಷಿಯ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕೆಂಬುದನ್ನು ತೀರ್ಮಾನಿಸಲು ಈ ಮಾಹಿತಿಗಳು ಸಹಾಯಕವಾಗುತ್ತವೆ.
ಪಕ್ಷಿಗಳು
ಹಕ್ಕಿಗಳಿಲ್ಲದ ಪ್ರಕೃತಿಯನ್ನು ಊಹಿಸಲೂ ಅಸಾಧ್ಯ. ಪಕ್ಷಿಗಳು ಮಾನವನ ವಿಕಾಸ ಮತ್ತು ಜೀವನದುದ್ದಕ್ಕೂ ಕಲೆ, ಶಿಲ್ಪ, ಸಾಹಿತ್ಯ ಮತ್ತು ಸಂಸ್ಕöÈತಿ - ಹೀಗೆ ಎಲ್ಲಾ ಸ್ತರಗಳಲ್ಲೂ ಸ್ಪೂರ್ತಿ ನೀಡಿವೆ. ವೇದ-ಉಪನಿಷತ್ತುಗಳಲ್ಲಿ ಪಕ್ಷಿಗಳು ಪ್ರಕೃತಿಯ ಅದ್ಭುತ ಸೃಷ್ಟಿಯೆಂಬ ವರ್ಣನೆಯಿದೆ. ವಾಲ್ಮೀಕಿ ರಾಮಾಯಣದ ಪ್ರಾರಂಭವೇ ಕ್ರೌಂಚ ಪಕ್ಷಿಯ ಮರಣದಿಂದ. ಮುಂದೆ ಸೀತಾಪಹರಣದ ಸಮಯದಲ್ಲಿ ಜಟಾಯು ಮತ್ತು ಸಂಪಾತಿಗಳ ವೃತ್ತಾಂತವನ್ನು ಕಾಣುತ್ತೇವೆ. ಶಿಬಿ ಮಹಾರಾಜನ ಕಥೆಯಲ್ಲಿ ಬರುವ ಕಪೋತ, ಗಿಡುಗಗಳ ವೃತ್ತಾಂತ, ನಳನ ಕಥೆಯಲ್ಲಿ ಸಂದೇಶವಾಹಕದ ದ್ಯೋತಕವಾಗಿ ಬರುವ ಹಂಸದ ವಿಚಾರ
ತಿಳಿದದ್ದೇ. ಚಾತಕ ಪಕ್ಷಿ ತಲೆಯೆತ್ತಿ ಬೀಳುತ್ತಿರುವ ಮಳೆ ನೀರನ್ನು ಮಾತ್ರ ಕುಡಿಯುತ್ತದೆ ಎಂಬ ಪ್ರತೀತಿಯೂ ಇದೆ. ಅಷ್ಟೇಕೆ, ಶ್ರೀವಿಷ್ಣು ಗರುಡವಾಹನ; ಸುಬ್ರಹ್ಮಣ್ಯನ ವಾಹನ ನವಿಲು, ಶನಿದೇವನ ವಾಹನ ಕಾಗೆ; ಅಲ್ಲದೆ ಸರಸ್ವತಿ, ಕಾಮಾಕ್ಷಿಯರೊಂದಿಗೆ ಹಂಸ ಮತ್ತು ಗಿಳಿಗಳು ಬೆಸೆದುಕೊಂಡಿವೆ. ವಿಷ್ಣುಶರ್ಮನ ಪಂಚತAತ್ರದಲ್ಲಿ ಬರುವ ಹಕ್ಕಿಗಳು ಒಂದೇ ಎರಡೇ? ಹೀಗೆ ಹಕ್ಕಿಗಳು ನಮ್ಮ ದೇಶದ ಪುರಾಣ ಕಥೆಗಳಲ್ಲೂ, ನೀತಿಕಥೆಗಳಲ್ಲೂ ಹಾಸುಹೊಕ್ಕಾಗಿವೆ. ಶಿಲ್ಪಕಲೆಯಲ್ಲಿಯೂ ನವಿಲು, ಗಿಳಿ, ಗರುಡ, ಹಂಸ ಮುಂತಾದ ಅನೇಕ ಹಕ್ಕಿಗಳನ್ನು ದೇಶದೆಲ್ಲೆಡೆ ಕಾಣಬಹುದು. ಚರಿತ್ರೆಯ ಪುಟಗಳಲ್ಲೂ ಅನೇಕ ರಾಜಮಹಾರಾಜರ ಹಕ್ಕಿ ಒಡನಾಟವನ್ನು ಓದುತ್ತೇವೆ. ಸಾಹಿತಿಗಳಿಗಂತೂ ಅವರವರ ಭೌಗೋಳಿಕ ಹಿನ್ನೆಲೆಗನುಗುಣವಾಗಿ ಹಕ್ಕಿಗಳ ಬಣ್ಣ, ರೂಪ ಮತ್ತು ಕಂಠ ಇವೆಲ್ಲವೂ ಅತ್ಯಾಕರ್ಷಕ ಹಾಗೂ ಸ್ಫೂರ್ತಿದಾಯಕ. ಕನ್ನಡದ ಆದಿಕವಿ ಪಂಪ ಬನವಾಸಿಯ ವರ್ಣನೆ ಮಾಡುವಾಗ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್ ಎಂದು ಬಣ್ಣಿಸಿದರೆ, ಮಾಸ್ತಿ ವೆಂಕಟೇಶ ಅಯ್ಯಂಗಾರರು ಯಾವ ಹಕ್ಕಿಯಾದರೇನು ಕಾಗೆಯಾಗಿಯಾದರೂ ಕನ್ನಡನಾಡಿನಲ್ಲೇ ಹುಟ್ಟಬೇಕು ಎನ್ನುತ್ತಾರೆ!
ಒಂದೇ ಮಾತಿನಲ್ಲಿ ಬಣ್ಣಿಸಬೇಕೆಂದರೆ, ಹಕ್ಕಿಗಳು ಗರಿಗಳಿರುವ ಎರಡು ಕಾಲುಗಳ ಮೇಲೆ ನಡೆಯುವ ಪ್ರಾಣಿಗಳು. ಲೋಕದ ಇನ್ನಾವುದೇ ಜೀವಿಗೂ ಗರಿಗಳಿಲ್ಲ. ಗರಿಗಳು ನಮ್ಮ ಕೂದಲಿನಂತೆ ಕಂಡರೂ ಕೂದಲಿನ ರಚನೆಯೇ ಬೇರೆ, ಗರಿಗಳ ರಚನೆಯೇ ಬೇರೆ. ಗರಿಗಳಿರುವುದು ಹಕ್ಕಿಗಳಿಗೆ ಮಾತ್ರವಾದರೆ, ಕೂದಲು ಸಸ್ತನಿಗಳಿಗೆ ಮಾತ್ರ ಇರುತ್ತದೆ. ಹಕ್ಕಿಗಳಿಗೆ ಗರಿಗಳು ಬಂದದ್ದೆಲ್ಲಿAದ?
ವಿಜ್ಞಾನಿಗಳು ಜುರಾಸಿಕ್ ಯುಗದಲ್ಲಿ ಅಂದರೆ, ೧೬.೫ ಕೋಟಿ ವರ್ಷಗಳ ಹಿಂದೆ, ಸರೀಸೃಪಗಳಿಂದ ಹಕ್ಕಿಗಳ ಉಗಮವಾಯಿತೆಂದು ಹೇಳುತ್ತಾರೆ. ನೆಲದ ಮೇಲೆ ತೆವಳುವ ಹಾವೆಲ್ಲಿ, ಸ್ವಚ್ಛಂದವಾಗಿ ಹಾರುವ ಹಕ್ಕಿಯೆಲ್ಲಿ- ಎಲ್ಲಿಂದೆಲ್ಲಿಯ ಸಂಬAಧ, ಎಂದು ನಿಮಗನ್ನಿಸಬಹುದು.
ಸರೀಸೃಪಗಳಾಗಲೀ, ಹಕ್ಕಿಗಳಾಗಲೀ, ಮೊಟ್ಟೆಯಿಂದ ಮರಿಮಾಡುವ ಪ್ರಾಣಿಗಳು. ಇನ್ನೂ ಸೂಕ್ಷ÷್ಮವಾಗಿ ಗಮನಿಸಿ: ಕೋಳಿ, ನವಿಲು ಮುಂತಾದ ಹಕ್ಕಿಗಳ ಕಾಲುಗಳಲ್ಲಿ ಹುರುಪೆಗಳಿರುವುದನ್ನು ನೀವು ಕಂಡಿರಬಹುದು. ಅದೇ ಗಿಡುಗ, ಗೂಬೆ ಮುಂತಾದ ಹಕ್ಕಿಗಳಲ್ಲಿ ಈ ಕಾಲುಗಳು ಗರಿಗಳಿಂದ ಮುಚ್ಚಿರುತ್ತವೆ. ಅಂದರೆ, ಹುರುಪೆಯಂತಹ ಚರ್ಮದಿಂದ ಗರಿಗಳು ರೂಪಾಂತರಗೊAಡು ವಿಕಾಸ ಹೊಂದಿವೆಯೆAದಾಯಿತು. ಇದೇ ರೀತಿಯ ಹುರುಪೆಗಳನ್ನು ನಾವು ಹಾವು, ಮೊಸಳೆ ಮುಂತಾದ ಸರೀಸೃಪಗಳಲ್ಲಿ ಕಾಣುತ್ತೇವೆ. ಅಲ್ಲದೆ ಹಾವುಗಳು ವರ್ಷಕ್ಕೊಂದಾವೃತ್ತಿ ಪೊರೆ ಕಳಚುವಂತೆ, ಪಕ್ಷಿಗಳೂ ಹಳೆ ಗರಿಗಳನ್ನು ತೊರೆದು ಹೊಸ ಗರಿಗಳನ್ನು ಹೊಂದುತ್ತವೆ.
ಅತೀ ಪುರಾತನ ಪಳೆಯುಳಿಕೆ, ಅರ್ಕಿಯೋಪ್ಟೆರಿಕ್ಸ್ ಲಿಥೋಗ್ರಾಫಿûಕಾ ಎಂಬ ಪ್ರಭೇದದ ಹಕ್ಕಿ ಸರೀಸೃಪಗಳಿಗೂ, ಇಂದಿನ ಹಕ್ಕಿಗಳಿಗೂ ವಿಕಾಸದ ಕೊಂಡಿಯೆನಿಸಿಕೊAಡಿದೆ. ಭೂಮಿಯ ಮೇಲೆ ವಾಸವಾಗಿರುವ ಸುಮಾರು ಎಂಟು ಸಾವಿರದ ಆರುನೂರಕ್ಕೂ ಹೆಚ್ಚು ಪ್ರಭೇದದ ಹಕ್ಕಿಗಳಲ್ಲಿ, ಎರಡು ಸಾವಿರದ ಅರವತ್ತಕ್ಕೂ ಹೆಚ್ಚು ಪ್ರಭೇದ-ಒಳಪ್ರಭೇದದ ಹಕ್ಕಿಗಳು ನಮ್ಮ ದೇಶದಲ್ಲಿವೆ. ಜಗತ್ತಿನಲ್ಲಿ ಇನ್ನೆಲ್ಲಿಯೂ ಕಂಡುಬಾರದ ಇಂತಹ ಪಕ್ಷಿವೈವಿಧ್ಯತೆಗೆ, ನಮ್ಮ ದೇಶದಲ್ಲಿರುವ ವಿವಿಧ ಭೂ ಆವಾಸಗಳೇ ಕಾರಣ ಎಂದು ಬೇರೆ ಹೇಳಬೇಕಿಲ್ಲ.
ದೇಹದ ರಚನೆ: ಪಕ್ಷಿಗಳು ಬಿಸಿರಕ್ತದ ಪ್ರಾಣಿಗಳು. ದೇಹದ ಶಾಖವನ್ನು ಒಂದೇ ಪ್ರಮಾಣದಲ್ಲಿರಿಸಲು ಹೆಚ್ಚು ಶ್ರಮಪಡಬೇಕು. ಗರಿಗಳು ದೇಹದ ಶಾಖವನ್ನು ನಷ್ಟವಾಗದಂತೆ ಉಳಿಸುತ್ತವೆ.
ದೇಹಕ್ಕೆ ಅಗತ್ಯ ಆಮ್ಲಜನಕವನ್ನು ಪೂರೈಸಲು ಉಸಿರಾಟದ ವೇಗವೂ ಹೆಚ್ಚು. ಹಕ್ಕಿಗಳ ಶ್ವಾಸಕೋಶದ ವ್ಯವಸ್ಥೆಯೇ ವಿಶಿಷ್ಟ. ಶ್ವಾಸಕೋಶದಲ್ಲಿರುವಂತೆಯೇ ಗಾಳಿಯ ಚೀಲಗಳು ದೇಹದ ಎಲ್ಲ ಅಂಗಾAಗಗಳ ನಡುವೆಯೂ ಆವರಿಸಿವೆ. ಹಾರಲು ಗಟ್ಟಿಮುಟ್ಟಾದ ಮೂಳೆ ಬೇಕು, ಆದರೆ ಭಾರವಿರಬಾರದಲ್ಲ? ಆದ್ದರಿಂದ ಅವುಗಳ ಮೂಳೆಗಳೆಲ್ಲ ಟೊಳ್ಳಾದ ನಾಳಿಗಳು. ಅವುಗಳೊಳಗೂ ಗಾಳಿಯ ಚೀಲಗಳು! ಹೀಗಾಗಿ ದೇಹದಲ್ಲೆಲ್ಲಾ ಗಾಳಿಯ ಸಂಚಾರವಾಗಿ ಸಾಕಷ್ಟು ಆಮ್ಲಜನಕವನ್ನು ಪೂರೈಸುತ್ತವೆ.
ಪಕ್ಷಿಗಳಿಗೆ ಎಲ್ಲಕ್ಕಿಂತ ಮಿಗಿಲಾದ ಅಂಗ ಅವುಗಳ ರೆಕ್ಕೆ. ಮುಂಗಾಲುಗಳು ವಿಕಾಸಹೊಂದಿ, ಗರಿಗಳಿಂದಾವೃತವಾದ ಹಗುರ, ಜಲಾಭೇದ್ಯ ರೆಕ್ಕೆಗಳು, ಲೀಲಾಜಾಲವಾಗಿ, ಎಲ್ಲೂ ತಾಗದಂತೆ ಹಾರಲು-ಇಳಿಯಲು ತಯಾರಾದ, ಪ್ರಕೃತಿಯ ಅತಿಶಯ ಕೌಶಲ್ಯದ ಕಲಾಕೃತಿಗಳು. ಈ ಗರಿಗಳ ಬಣ್ಣ ಅವುಗಳಲ್ಲಿರುವ ಮೆಲಾನಿನ್, ಕೆರೋಟಿನಾಯ್ಡ್ ಮತ್ತು ಪಾಫಿûðನ್ಸ್ ವರ್ಣದ್ರವ್ಯಗಳ ವಿವಿಧ ಛಾಯೆಗಳಿಂದ ಉಂಟಾಗಿರುತ್ತವೆ. ಹಕ್ಕಿಗಳ ಬಣ್ಣಗಳು ಪರಿಸರದಲ್ಲಿ ತಮ್ಮ ಇರವನ್ನು ಮರೆಮಾಚಲು ಮತ್ತು ಸಂತಾನಋತುವಿನಲ್ಲಿ ಪರಸ್ಪರ ಆಕರ್ಷಿಸಲು ಸಹಾಯಕ. ರೆಕ್ಕೆಗಳನ್ನು ಬಳಸಿ ಸ್ವಚ್ಛಂದವಾಗಿ ಹಾರಾಡಲು ಸಾಮರ್ಥ್ಯ ಪಡೆದಿರುವಂತೆಯೇ, ಎತ್ತರದಲ್ಲಿ ಹಾರಾಡುವ ಗಿಡುಗ, ಹದ್ದುಗಳು ಬಿಸಿಗಾಳಿಯ ಮೇಲೊತ್ತಡದ ಉಪಯೋಗವನ್ನು ಪಡೆದು ಒಂದಿಷ್ಟೂ ರೆಕ್ಕೆ ಬಡಿಯದೆ ಶಕ್ತಿಯನ್ನು ಉಳಿಸುತ್ತವೆ.
ಹಕ್ಕಿಗಳ ದೃಷ್ಟಿ ಬಹುಸೂಕ್ಷ÷್ಮ. ನಮಗಿಂತ ಇಪ್ಪತ್ತು ಪಟ್ಟು ಹೆಚ್ಚು ಸ್ಫುಟವಾಗಿ ನೋಡಲು ಅವಕ್ಕೆ ಸಾಧ್ಯ. ಅಲ್ಲದೆ ಬಣ್ಣಗಳನ್ನೂ ಗುರುತಿಸಬಲ್ಲವು. ಸಂಯುಕ್ತ ಅಕ್ಷಿಗಳಿರುವ ಕೀಟಗಳಿಗೆ ಈ ಶಕ್ತಿಯಿಲ್ಲ. ಗೂಬೆ, ಮರಕುಟ್ಟಿಗ ಮುಂತಾದ ಹಕ್ಕಿಗಳು ಮೂರು ಆಯಾಮಗಳಲ್ಲಿಯೂ ನೋಡಬಲ್ಲವು. ನಿಶಾಚರ ಹಕ್ಕಿಗಳಿಗೆ ರಾತ್ರಿ ಹೊತ್ತೂ ಕೂಡ ದೃಷ್ಟಿ ಸೂಕ್ಷ÷್ಮವಾಗಿರುತ್ತದೆ. ದೂರದ ದೃಶ್ಯದಿಂದ ಫಕ್ಕನೆ ಹತ್ತಿರದ ದೃಶ್ಯವನ್ನು ನೋಡಲು ನಮಗೆ ಸ್ವಲ್ಪ ಸಮಯ ಹಿಡಿಯುತ್ತದೆ. ಆದರೆ, ಹಕ್ಕಿಗಳಿಗೆ ಇದು ಒಂದೇ ಕ್ಷಣದ ಕೆಲಸ.
ಇನ್ನು ಶಬ್ದಗ್ರಹಣ ಶಕ್ತಿ ಹಕ್ಕಿಗಳಿಗೆ ಬಹು ತೀವ್ರವಾಗಿದೆ. ಅದರಲ್ಲೂ ರಾತ್ರಿ ವೇಳೆ ಬೇಟೆಯಾಡುವ ಹಕ್ಕಿಗಳಿಗೆ ಇದು ಅವಶ್ಯ. ಕತ್ತಲಲ್ಲಿ ಗುಹೆಗಳಲ್ಲಿ ಹಾರಾಡುವ ಕವಲುತೋಕೆ ಹಕ್ಕಿಗಳಿಗೆ ಪ್ರತಿಧ್ವನಿತ ತರಂಗಗಳಿAದ ನೆಲೆ ಗೊತ್ತುಮಾಡುವ ಶಕ್ತಿಯಿದೆ. ಇತರ ಪಕ್ಷಿಗಳ ಸ್ವರವನ್ನು ಕೇಳಿ ಅನುಕರಿಸುವ ಕಲೆಯನ್ನು ಎಲೆಹಕ್ಕಿ, ಭೀಮರಾಜ, ಶಾಮ, ಕಳಿಂಗಗಳಲ್ಲಿ ಕಾಣಬಹುದು. ಬೆಟ್ಟದ ಮೈನಾ, ಮನುಷ್ಯನ ಸ್ವರವನ್ನೂ ಅನುಕರಿಸಬಲ್ಲವು. ಹಕ್ಕಿಗಳು ಆಗಂತುಕರ ಧ್ವನಿಯನ್ನು ಬಹು ಎಚ್ಚರಿಕೆಯಿಂದ ಕೇಳಿ, ಬೇಗ ಗುರುತು ಹಿಡಿಯುತ್ತವೆ.
ಹಕ್ಕಿಗಳಿಗೆ ರುಚಿಯನ್ನು ಗ್ರಹಿಸುವ ಶಕ್ತಿ ಬಹಳ ಕಡಿಮೆಯಾದರೆ, ಘ್ರಾಣಶಕ್ತಿ ಅಥವಾ ವಾಸನೆಯನ್ನು ಗ್ರಹಿಸುವ ಶಕ್ತಿ ಇಲ್ಲವೇ ಇಲ್ಲ ಎನ್ನಬಹುದು. ಮೂಲತಃ ಹಕ್ಕಿಗಳಿಗೆ ತರ್ಕಬದ್ಧವಾಗಿ ಆಲೋಚಿಸುವ ಶಕ್ತಿಯೇನೂ ಇಲ್ಲ. ಯಾವುದನ್ನು ನಾವು ಅವುಗಳ ಬುದ್ಧಿವಂತಿಕೆಯ ನಡವಳಿಕೆಗಳು ಎಂದು ಭಾವಿಸುತ್ತೇವೋ, ಅವು ಹೆಚ್ಚಾಗಿ ಪಕ್ಷಿಗಳ ಹುಟ್ಟರಿವಿನ ಸಹಜ ಪ್ರಕೃತಿಯಾಗಿರುತ್ತವೆ.
ವಿವಿಧ ಅಂಗಗಳ ವಿಕಾಸ: ಹಕ್ಕಿಗಳ ಮುಂಗಾಲುಗಳು ರೆಕ್ಕೆಗಳಾಗಿ ಮಾರ್ಪಾಟಾಗಿರುವುದರಿಂದ, ಕೈಗಳ ಕೆಲಸವನ್ನು ಕಾಲು ಮತ್ತು ಬಾಯಿ ಮಾಡಬೇಕಾಗಿದೆ. ಇತರ ಪ್ರಾಣಿಗಳಿಗಿರುವಂತೆ ಪಕ್ಷಿಗಳಿಗೆ ಹಲ್ಲುಗಳಿಲ್ಲ. ಮೇಲ್ದವಡೆ-ಕೆಳದವಡೆ ಸೇರಿ ಕೊಕ್ಕಾಗಿದೆ. ಈ ಕೊಕ್ಕು ಬೇಟೆಯನ್ನು ಹಿಡಿಯಲು ಅಥವಾ ಆಹಾರವನ್ನು ಸೇವಿಸಲು ಮತ್ತು ಆತ್ಮರಕ್ಷಣೆಗಾಗಿ ಬಳಸಲ್ಪಡುತ್ತವೆ. ಉದಾಹರಣೆಗೆ, ಹಲವಾರು ಜಾತಿಯ ಹಕ್ಕಿಗಳಿಗೆ ಕೀಟ, ಹುಳಗಳನ್ನು ತಿನ್ನುವ ಸ್ವಭಾವ. ಆದರೆ ಅವುಗಳನ್ನು ಹಿಡಿಯುವ ವಿಧಾನ ಬೇರೆ ಬೇರೆ. ನೊಣಹಿಡುಕ, ಜೇನುಮಗರೆಗಳು ಹಾರುತ್ತಿರುವ ಕೀಟಗಳನ್ನು ಅಟ್ಟಿಸಿಕೊಂಡು ಹೋಗಿ ಹಿಡಿದರೆ, ಮೈನಾ, ಚಂದ್ರಮುಕುಟಗಳು
ನೆಲದ ಮೇಲಿಂದ ಹೆಕ್ಕಿ ತಿನ್ನುತ್ತವೆ ಹಾಗೂ ಮರಕುಟ್ಟಿಗಗಳು ಮರದ ತೊಗಟೆಯನ್ನು ಕುಕ್ಕಿ ಅದರೊಳಗಿಂದ ಕೀಟಗಳನ್ನು ಆರಿಸಿಕೊಳ್ಳುತ್ತವೆ. ಈ ಕಾರ್ಯಕ್ಕಾಗಿ, ಹಕ್ಕಿಗಳ ಕೊಕ್ಕುಗಳು ವಿವಿಧ ರೀತಿಯಲ್ಲಿ ಮಾರ್ಪಾಡಾಗಿವೆ. ಮಾಂಸವನ್ನು ಕಿತ್ತು, ಹರಿದು ತಿನ್ನಲು ಯೋಗ್ಯವಾದ ಚೂಪಾದ, ಹರಿತವಾದ, ಬಲಿಷ್ಠವಾದ, ಕೊಕ್ಕೆಯಂತೆ ಬಾಗಿರುವ ಗಿಡುಗ-ಹದ್ದು ಮುಂತಾದ ಹಿಂಸ್ರಪಕ್ಷಿಗಳ ಕೊಕ್ಕು; ಮರವನ್ನು ಕೊರೆಯಲು ಗಟ್ಟಿಮುಟ್ಟಾದ ಮರಕುಟ್ಟಿಗದ ಕೊಕ್ಕು; ಹೂಗಳ ಮಕರಂದವನ್ನು ಹೀರಲು ಉದ್ದವಾದ, ಕೆಳಕ್ಕೆ ಬಾಗಿರುವ ಸೂರಕ್ಕಿಗಳ ಕೊಕ್ಕು; ಕಾಳು-ಬೀಜಗಳನ್ನು ಒಡೆದು ತಿನ್ನಲು ರಾಟವಾಳ, ಗುಬ್ಬಚ್ಚಿಗಳ ಚೂಪಾದ, ಚಿಕ್ಕ ಕೊಕ್ಕು; ಅಗಲವಾಗಿ 'ಆ' ಎಂದು ಬಾಯ್ತೆರೆದು ಹಾರುತ್ತಿದ್ದರೆ, ಕೀಟಗಳು ತನ್ನಂತಾನೇ ಬಾಯೊಳಗೆ ಬೀಳುವ ಬಾನಾಡಿಯ ಕೊಕ್ಕು; ನೀರಿನಿಂದ ಬಸಿದು ತೆಗೆಯಲು ಜಾಲರಿಯಂತಹ ಚಮಚದ ಕೊಕ್ಕು, ಬಾತುಕೋಳಿಗಳ ಕೊಕ್ಕು; ಇನ್ನು ಎಲ್ಲಾ ರೀತಿಯ ಆಹಾರ ಬಯಸುವ ಕಾಗೆಯ ಬಹೂಪಯೋಗಿ ಕೊಕ್ಕು; ಇವೆಲ್ಲ ಉದಾಹರಣೆಗಳು.
ಹಾಗೆಯೇ ಕಾಲುಗಳು ಕೂಡ ಹಕ್ಕಿಗಳ ಓಡಾಟ, ಬೇಟೆ, ಮುಂತಾದ ಕೆಲಸಗಳಿಗೆ ತಕ್ಕಂತೆ ಮಾರ್ಪಾಡಾಗಿವೆ. ಜೌಗು ಪ್ರದೇಶಗಳಲ್ಲಿ ಆಹಾರ ಹುಡುಕುವ ಕೊಕ್ಕರೆ, ಬಕ ಮುಂತಾದ ಹಕ್ಕಿಗಳಿಗೆ ಹೂತು ಹೋಗದಂತೆ ಬಲಿಷ್ಠವಾದ ಕಾಲುಗಳು ಮತ್ತು ತೆಳುವಾದ, ಉದ್ದವಾದ, ಪಾದಗಳು; ನೀರಿನಲ್ಲಿ ಈಜಲು ಜಾಲಪಾದವಿರುವ ಹೆಜ್ಜಾರ್ಲೆ, ಬಾತುಗಳ ಕಾಲು; ಜಲಸಸ್ಯಗಳ ಮೇಲೆ ಅನಾಯಾಸವಾಗಿ ನಡೆದಾಡಲು ನೀಳ ಬೆರಳಿನ ದೇವನಕ್ಕಿಯ ಕಾಲು; ಬೇಟೆಯನ್ನು ಹಿಡಿಯಲು, ಮಾಂಸವನ್ನು ಬಗೆಯಲು ಚೂಪಾದ, ಹರಿತವಾದ ಉಗುರುಗಳಿರುವ ಹದ್ದು-ಗಿಡುಗಗಳ ಬಲಿಷ್ಠ ಕಾಲು; ನೆಲವನ್ನು ಕೆದಕಲು ತಕ್ಕ ಗೌಜುಗ, ಕೋಳಿಯ ಕಾಲು; ಓಡಲು ಗಟ್ಟಿಮುಟ್ಟಾದ ಪಾದವುಳ್ಳ ನೀಳಗಾಲು ಹಕ್ಕಿಯ ಕಾಲು; ಹತ್ತಲು-ಇಳಿಯಲು ತಕ್ಕುದಾದ ಮರಕುಟ್ಟಿಗ, ಗಿಳಿಯ ಕಾಲು; ಸಿಂಪಿಗ, ಗುಬ್ಬಚ್ಚಿ ಉಲಿಯಕ್ಕಿ ಮುಂತಾದ ಹಕ್ಕಿಗಳು ರೆಂಬೆಯ ಮೇಲೆ ಕುಳಿತುಕೊಳ್ಳಲು ತಕ್ಕುದಾದ ಸಣಕಲು ಕಾಲು ಮತ್ತು ಬೆರಳುಗಳು; ಇವೆಲ್ಲ ಉದಾಹರಣೆಗಳು.
ನೋಡಲು ಎಷ್ಟೋ ಜಾತಿಯ ಹಕ್ಕಿಗಳ ಗಂಡು-ಹೆಣ್ಣುಗಳು ವಿಭಿನ್ನವಾಗಿರುತ್ತವೆ. ಧ್ವನಿಯಲ್ಲಿ ಕೂಡ ವ್ಯತ್ಯಾಸವಿರುತ್ತದೆ. ಸಾಮಾನ್ಯವಾಗಿ ಗಂಡು ಹಕ್ಕಿ ಆಕರ್ಷಕವಾಗಿರುತ್ತದೆ. ಸಂತಾನಋತುವಿನಲ್ಲಿ ಹೆಣ್ಣುಹಕ್ಕಿಯನ್ನು ಆಕರ್ಷಿಸಲು ಗಂಡುಹಕ್ಕಿಯು ಮಾಡುವ ನರ್ತನ, ಹಾಡುವಿಕೆ ಮತ್ತು ಇತರ ಅಂಗಚೇಷ್ಟೆಗಳನ್ನು ಕಾಣುತ್ತೇವೆ. ಒಂದು ಹಕ್ಕಿಗೆ ಒಂದಕ್ಕಿAತ ಹೆಚ್ಚು ಸಂಗಾತಿಗಳು ಸಾಮಾನ್ಯ. ಕೆಲವು ಪ್ರಭೇದಗಳಲ್ಲಿ ಆಜನ್ಮ ಜೋಡಿಗಳನ್ನೂ ಕಾಣಬಹುದು.
ಸಂತಾನೋತ್ಪತ್ತಿ: ಗೂಡುಕಟ್ಟುವ ಕ್ರಿಯೆಯಲ್ಲಾಗಲಿ, ಮೊಟ್ಟೆಗಳಿಗೆ ಕಾವುಕೊಟ್ಟು, ಮರಿಗಳಿಗೆ ಗುಟುಕು ನೀಡಿ ಬೆಳೆಸುವ ಕಾರ್ಯದಲ್ಲಿಯೇ ಆಗಲಿ ಸಾಮಾನ್ಯವಾಗಿ ಎರಡೂ ಹಕ್ಕಿಗಳು ಕೆಲಸವನ್ನು ಹಂಚಿಕೊಳ್ಳುವುದನ್ನು ಕಾಣುತ್ತೇವೆ. ಅಪವಾದಗಳು ಇಲ್ಲದಿಲ್ಲ.
ಹಕ್ಕಿಗಳು ಗೂಡುಕಟ್ಟುವುದು ವಾಸಮಾಡಲಿಕ್ಕಲ್ಲ - ಅದು, ಮೊಟ್ಟೆಯಿಟ್ಟು, ಮರಿಮಾಡಿ, ಬೆಳೆಸುವ ಸಲುವಾಗಿ ಮಾತ್ರ. ಹಕ್ಕಿಗಳು ಗೂಡುಕಟ್ಟುವ ವಾಸ್ತುಶಿಲ್ಪ ಒಂದು ಅದ್ಭುತವಾದ, ವಿಶಿಷ್ಟವಾದ, ಹುಟ್ಟರಿವಿನಿಂದ ಬಂದ ಸಹಜ ಪ್ರವೃತ್ತಿ. ಗುಬ್ಬಚ್ಚಿ, ಗಿಳಿ, ಮೈನಾಗಳು ಮರ, ಕಟ್ಟಡ, ಅಥವಾ ಇತರ ಹಕ್ಕಿಗಳು ಮಾಡಿದ ರಂಧ್ರಗಳಲ್ಲಿ ಗೂಡು ಕಟ್ಟಿದರೆ, ನೀಳಗಾಲು, ಟಿಟ್ಟಿಭಗಳು ಯಾವುದೇ ಗೂಡು ಕಟ್ಟದೆ, ಮೊಟ್ಟೆಗಳನ್ನು ನೇರವಾಗಿ ನೆಲದ ಮೇಲೇ ಇಟ್ಟು ಕಾಪಾಡುತ್ತವೆ. ಬರೇ ಕಸ, ಒಣ ಕಡ್ಡಿ-ರೆಂಬೆಗಳಿAದ ತಯಾರಿಸಿದ ಅಟ್ಟಣಿಗೆ ಗೂಡುಗಳಿಂದ ಹಿಡಿದು, ತಟ್ಟೆ-ಕಪ್‌ನಂತೆ ಒಣ ಹುಲ್ಲು, ಎಲೆ, ಹತ್ತಿಗಳಿಂದ ತಯಾರಾದ ಮೆದುವಾದ ಗೂಡುಗಳವರೆಗೆ; ಮರ-ಬದುಗಳನ್ನು ಕೊರೆದು ಸುರಂಗದAತೆ ಮಾಡಿದ ಗೂಡುಗಳಿಂದ ಹಿಡಿದು, ನಾರು-ಬೇರು, ಮೃದುವಾದ ಹತ್ತಿಯಿಂದ ನಾಜೂಕಾಗಿ ನೇಯ್ದ ಗೂಡುಗಳವರೆಗೆ, ಸಾಮಾನ್ಯವಾಗಿ ಎಲ್ಲ ಹಕ್ಕಿಗಳು ತಮ್ಮ ಗೂಡನ್ನು ತಾವೇ ಕಟ್ಟಿಕೊಳ್ಳುತ್ತವೆ. ಬಾನಾಡಿಗಳು ಮಣ್ಣು, ಎಲೆಗಳನ್ನು ಎಂಜಲಿನೊAದಿಗೆ ಅರೆದು
ಮೆತ್ತಿದರೆ, ಮಂಗಟ್ಟೆಹಕ್ಕಿಗಳು ಹೆಣ್ಣುಹಕ್ಕಿಯನ್ನು ಪೊಟರೆಯೊಳಗೆ ಕುಳ್ಳಿರಿಸಿ, ಬರೇ ಕೊಕ್ಕು ಹೊರಗೆ ಕಾಣುವಂತೆ ಮಣ್ಣಿನಿಂದ ಮುಚ್ಚಿಬಿಡುತ್ತದೆ. ಇನ್ನು ಸಿಂಪಿಗ ಎರಡು ಎಲೆಗಳನ್ನು ಜೋಡಿಸಿ ಹೊಲೆದು ಗೂಡುಕಟ್ಟಿದರೆ, ನಾರು, ಹುಲ್ಲು-ಹತ್ತಿಯಿಂದ ರಚಿತವಾದ ಗೀಜಗನ ಗೂಡು ಪ್ರಸಿದ್ಧವಾಗಿದೆ. ಹಲವಾರು ಹಕ್ಕಿಗಳು ಒಟ್ಟಿಗೆ, ಸಮೂಹವಾಗಿ ಕಾಲೊನಿಯನ್ನು ಕಟ್ಟಿಕೊಳ್ಳುವುದೂ ಉಂಟು.
ಸಾಮಾನ್ಯವಾಗಿ ಹೆಣ್ಣುಹಕ್ಕಿ ಗೂಡು ಕಟ್ಟುವ ಕಾರ್ಯ ಮಾಡಿದರೆ, ಗಂಡುಹಕ್ಕಿ ಅಗತ್ಯ ಸಾಮಗ್ರಿಗಳನ್ನು ತಂದು ಪೂರೈಸುವ ಕೆಲಸ ವಹಿಸಿಕೊಳ್ಳುತ್ತದೆ. ಇವೆಲ್ಲಕ್ಕಿಂತ ವಿಚಿತ್ರವೆಂದರೆ, ಕೋಗಿಲೆಯ ಕುಟುಂಬಕ್ಕೆ ಸೇರಿದ ಹಕ್ಕಿಗಳು, ಗೂಡುಕಟ್ಟಿ, ಮೊಟ್ಟೆಯಿಟ್ಟು, ಕಾವುಕೊಟ್ಟು, ಗುಟುಕುನೀಡಿ, ಮರಿಗಳನ್ನು ಸಾಕಿ ಸಲಹುವ ಯಾವುದೇ ಗೋಜಿಗೆ ಹೋಗದೆ, ಉಪಾಯದಿಂದ ಹರಟೆಮಲ್ಲಗಳ ಗೂಡಿನಲ್ಲಿ ತಮ್ಮ ಮೊಟ್ಟೆಗಳನ್ನಿಟ್ಟು ನಿಶ್ಚಿಂತೆಯಿAದ ಇದ್ದುಬಿಡುತ್ತವೆ!
ಇಷ್ಟೆಲ್ಲ ಪಾಡುಪಟ್ಟು, ಗೂಡು ಕಟ್ಟಿ ಮರಿಗಳನ್ನು ಬೆಳೆಸುವ ಕಾರ್ಯ ಹಕ್ಕಿಗಳ ವಾರ್ಷಿಕ ಜೀವನಚಕ್ರದಲ್ಲಿ ಅತಿ ಮುಖ್ಯವಾದ ಭಾಗ. ಮೊಟ್ಟೆಯಿಟ್ಟು, ಕಾವುಕೊಟ್ಟು, ಮರಿಗಳಿಗೆ ಗುಟುಕು ನೀಡಿ ಬೆಳೆಸುವುದು ಸಾಮಾನ್ಯ ಕೆಲಸವೇನಲ್ಲ. ಇಷ್ಟಾದರೂ ಕ್ರೂರ ಪಕ್ಷಿ-ಪ್ರಾಣಿಗಳ ಹಸಿದ ಬಾಯಿಂದ, ನೈಸರ್ಗಿಕ ಪ್ರಕೋಪಗಳಿಂದ ಬದುಕಿ ಉಳಿಯುವ ಮರಿಗಳ ಸಂಖ್ಯೆ ಬಹಳ ಕಡಿಮೆ.
ಒಂದು ಗೂಡಿಗೆ ಎರಡರಿಂದ ಎಂಟು ಮೊಟ್ಟೆಗಳು ಸಾಮಾನ್ಯ. ಮರಿಹಕ್ಕಿಗಳಿಗೆ ಸಾಧಾರಣವಾಗಿ ಮೈಮೇಲೆ ರೆಕ್ಕೆಗಳು ಬೆಳೆದಿರುವುದಿಲ್ಲ, ಕಣ್ಣುಗಳು ಕಾಣಿಸುವುದಿಲ್ಲ- ಬಹಳ ನಾಜೂಕು ಮತ್ತು ಅಸಹಾಯಕ ಜೀವಿಗಳು. ಹೆತ್ತವರ ರಕ್ಷಣೆ-ಪೋಷಣೆ, ಬಹು ಅಗತ್ಯ. ಇವು ಪ್ರತಿದಿನ ತಮ್ಮ ದೇಹದ ಭಾರಕ್ಕಿಂತ ಹೆಚ್ಚು ಆಹಾರವನ್ನು ತಿಂದು ಬೆಳೆಯುತ್ತವೆ. ಎರಡು-ಮೂರು ವಾರಗಳಲ್ಲಿ ನಡೆಯಲು, ಕುಪ್ಪಳಿಸಲು, ಹಾರಲು, ಆಹಾರವನ್ನು ತಾವೆ ಸಂಪಾದಿಸಲು ಕಲಿಯುತ್ತವೆ.
ಪಕ್ಷಿಗಳಿಂದ ನಮಗಾಗುವ ಪ್ರಯೋಜನಗಳೇನು?
ಉತ್ತರದಲ್ಲಿ ಹಿಮಾಲಯ, ಪಶ್ಚಿಮದಲ್ಲಿ ಥಾರ್ ಮರುಭೂಮಿ, ಪೂರ್ವದಲ್ಲಿ ಸುಂದರಬನ, ದಕ್ಷಿಣದಲ್ಲಿ ನಿತ್ಯಹರಿದ್ವರ್ಣ ಕಾಡುಗಳು, ಸುಂದರ ಗಂಗಾನದಿಯ ಬಯಲು, ಇವುಗಳಿಂದೊಡಗೂಡಿದ ಭಾರತ ದೇಶ, ಪ್ರಪಂಚದ ಕಾಲುಭಾಗಕ್ಕಿಂತಲೂ ಹೆಚ್ಚು ಪ್ರಭೇದದ ಪಕ್ಷಿಗಳಿಗೆ ಆಶ್ರಯತಾಣವಾಗಿದೆ. ನಮ್ಮ ದೇಶದಲ್ಲಿ ಒಟ್ಟು ಸುಮಾರು ೨,೦೬೦ಕ್ಕೂ ಹೆಚ್ಚು ಬಗೆಯ ಪಕ್ಷಿಗಳಿವೆ. ಈ ಹಕ್ಕಿಗಳ ಜೀವನಚಕ್ರಗಳು ಪರಿಸರದ ಎಲ್ಲ ಗಿಡಮರಬಳ್ಳಿಗಳ ಜೀವನಚಕ್ರದೊಂದಿಗೆ ಬೆಸೆದುಕೊಂಡು ಪ್ರಕೃತಿಯ ಸಮತೋಲನವನ್ನು ಕಾಪಾಡುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.
ಎಲ್ಲಿ ಪಕ್ಷಿಗಳು ಸಂತೋಷದಿAದ, ಸ್ವಚ್ಛಂದವಾಗಿ ಹಾಡಿಕೊಂಡು, ಹಾರಾಡಿಕೊಂಡಿರುತ್ತವೆಯೋ ಅದು ಆರೋಗ್ಯಕರ-ಪರಿಸರ ಮತ್ತು ಪರಿಸರ-ಸಮತೋಲನದ ಸಾಕ್ಷಿ. ಪರಿಸರದಲ್ಲಿ ಉಂಟಾಗುವ ಏರುಪೇರುಗಳು ಹಕ್ಕಿಗಳ ಜೀವನದ ಮೇಲೆ ನೇರ ಪರಿಣಾಮವನ್ನು ಬೀರುತ್ತವೆ. ಈ ದುಷ್ಪರಿಣಾಮಗಳು ಮುಂದೆ ಮನುಷ್ಯನ ಮೇಲೂ ಕಂಡುಬರುವುದು ನಿಸ್ಸಂಶಯ. ಉದಾಹರಣೆಗೆ, ಇತ್ತೀಚೆಗೆ ಅತಿಯಾಗಿ ಬಳಸುತ್ತಿರುವ ರಸಗೊಬ್ಬರಗಳು, ಕೀಟನಾಶಕ ಹಾಗೂ ಕ್ರಿಮಿನಾಶಕಗಳು ನಮ್ಮ ಆಹಾರ ಪದಾರ್ಥಗಳನ್ನು ವಿಷಪೂರಿತಗೊಳಿಸುತ್ತಿವೆ. ನಾವು ತಿಂದು ಬಿಸಾಡುವ ಆಹಾರ ಪದಾರ್ಥಗಳನ್ನೇ ತಿಂದು ಜೀವಿಸುವ ಕಾಗೆ, ಗುಬ್ಬಚ್ಚಿ ಮುಂತಾದ ಪಕ್ಷಿಗಳ ಸಂಖ್ಯೆ ಇಂದು ಇಳಿಮುಖವಾಗುತ್ತಿರುವುದನ್ನು ನೀವು ಗಮನಿಸಿರಬಹುದು. ಇದು ಮನುಷ್ಯನಿಗೆ ಹಕ್ಕಿಗಳು ನೀಡುತ್ತಿರುವ ಎಚ್ಚರಿಕೆಯ ಗಂಟೆ ಎಂದು ನಾವೆಲ್ಲ ತಿಳಿಯಬೇಕು.
ಹಕ್ಕಿಗಳಿಂದ ನಮಗೆ ಅನೇಕ ಪ್ರಯೋಜನಗಳುಂಟು:
* ಭೂಮಿಗೆ ಪಕ್ಷಿಗಳಿಗಿಂತ ಮುಂಚೆ, ಅಂದರೆ ೨೫ ಕೋಟಿ ವರ್ಷಗಳ ಹಿಂದೆಯೇ, ವಿಕಾಸ ಹೊಂದಿ ಉದಿಸಿದ ಕೀಟವರ್ಗ ಸಂಖ್ಯಾಬಾಹುಳ್ಯದಲ್ಲೂ, ಒಟ್ಟು ಮೊತ್ತದಲ್ಲೂ ಬೇರೆಲ್ಲ ಸಸ್ಯ-ಪ್ರಾಣಿ ಬಾಹುಳ್ಯವನ್ನು ಮೀರುತ್ತವೆ. ಒಂದು ವರ್ಷದ ಅವಧಿಯಲ್ಲಿಯೇ ತಮ್ಮ ಸಂತತಿಯನ್ನು ಹದಿಮೂರು ತಲೆಮಾರಿನಷ್ಟು ಬೆಳೆಸುವ ಕೀಟಗಳಿವೆ. ಕೀಟಗಳು ಎಲ್ಲ ಜೀವಿಗಳಿಗೂ ಒಂದಲ್ಲ ಒಂದು ರೀತಿ ಆಹಾರವಸ್ತುವಾಗಿವೆ. ಈ ಮೂಲಕ ಅವುಗಳ ಸಂಖ್ಯೆ ನಿಯಂತ್ರಣದಲ್ಲಿದ್ದು ಪ್ರಕೃತಿಯ ಸಮತೋಲನವನ್ನು ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತಿವೆ. ಹಕ್ಕಿಗಳು ತಮ್ಮ ಜೀವನದಲ್ಲಿ ಒಂದಲ್ಲ ಒಂದು ಹಂತದಲ್ಲಿ ಕೀಟಭಕ್ಷಕಗಳಾಗಿ ಅವುಗಳನ್ನು ಸಮರ್ಥವಾಗಿ ಹತೋಟಿಯಲ್ಲಿಡುತ್ತವೆ. ಪೂರ್ಣ ಸಸ್ಯಾಹಾರೀ ಹಕ್ಕಿಗಳೂ ಕೀಟಗಳನ್ನು ಹಿಡಿದು ತಮ್ಮ ಮರಿಗಳಿಗೆ ಉಣಿಸುವುದನ್ನು ಕಾಣಬಹುದು. ಅಲ್ಲದೆ, ನಿರಂತರವಾಗಿ ಹಾರಾಟದಲ್ಲಿರುವ ಹಕ್ಕಿಗಳಿಗೆ ಹೆಚ್ಚು ಶಕ್ತಿ ವ್ಯಯವಾಗುವುದರಿಂದ ಅದನ್ನು ಪುನಃ ಅರ್ಜಿಸಲು ಕೀಟಭಕ್ಷಣೆ ಉತ್ತಮ ಮಾರ್ಗವಾಗಿ ಪರಿಣಮಿಸಿದೆ. ಒಂದು ಸಂಜೆಯಲ್ಲಿ ಬಾನಾಡಿ ಹಕ್ಕಿಯು ಸುಮಾರು ೧೫೦೦ ಕೀಟಗಳನ್ನು ತನ್ನ ತೆರೆದ ಬಾಯಿಯಿಂದ ಹಿಡಿದು ನುಂಗಿಬಿಡುತ್ತದೆ! ಹೊಲ-ಗದ್ದೆಗಳಲ್ಲಿ ನಷ್ಟವನ್ನುಂಟುಮಾಡುವ ಕ್ರಿಮಿ-ಕೀಟಗಳನ್ನು, ನೊಣಹಿಡುಕ, ಬೇಲಿಚಟಕ, ಕಾಜಾಣ, ಕಳಿಂಗ ಮುಂತಾದ ಹಕ್ಕಿಗಳು ತಿಂದು ಹತೋಟಿಯಲ್ಲಿಡುತ್ತವೆ. ಮರದ ಕಾಂಡ ಕೊರೆಯುವ ಕೀಟ, ಗೆದ್ದಲು ಮುಂತಾದ ಹುಳಗಳನ್ನು, ಅವುಗಳ ಮೊಟ್ಟೆ, ಮರಿಹುಳಗಳನ್ನೂ ತಿಂದು ಮರಕುಟ್ಟಿಗ ತಿಂದು ವೃಕ್ಷದ ಆರೋಗ್ಯವನ್ನು ರಕ್ಷಿಸಿದರೆ, ಕಾಡುಕೋಳಿ ಮರದ ಬೇರನ್ನು ನಾಶಮಾಡುವ ಕೀಟಗಳನ್ನು ತಿನ್ನುತ್ತದೆ. ಆದ್ದರಿಂದ ಕೀಟನಿಯಂತ್ರಣ, ಹಕ್ಕಿಗಳ ಅತಿಮುಖ್ಯ ಕಾರ್ಯವೆಂದು ಹೇಳಬಹುದು.
* ಗುಡುಗಾಡು ಹಕ್ಕಿಗಳು ಹೊಲ-ಗದ್ದೆಗಳಲ್ಲಿ ಬೆಳೆಯುವ ಕಳೆ ಬೀಜಗಳನ್ನು ತಿಂದು ರೈತನಿಗೆ ಕಳೆಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ.
* ಸಸ್ಯಗಳ ಸಂತಾನೋತ್ಪತ್ತಿಯಲ್ಲಿ ಪರಾಗಸ್ಪರ್ಶ ಅತಿ ಮಹತ್ತರವಾದ ಘಟ್ಟ. ಇದಕ್ಕೆ ಪೂರಕವಾಗಿ ಮರ-ಗಿಡಗಳು ಬಣ್ಣಬಣ್ಣದ ಹೂತಳೆದು, ಪರಿಮಳ ಮತ್ತು ಮಕರಂದವನ್ನು ಸೂಸಿ, ಹಕ್ಕಿಗಳನ್ನು ಆಕರ್ಷಿಸುತ್ತವೆ. ಗಾಳಿ, ಕೀಟಗಳು, ಸ್ತನಿಗಳು ಇನ್ನಿತರ ಜೀವಿಗಳು ಪರಾಗಸ್ಪರ್ಶಕ್ರಿಯೆಯಲ್ಲಿ ಭಾಗವಹಿಸಿದರೂ ಹಕ್ಕಿಗಳ ಪಾತ್ರ ಮಹತ್ತರವಾದದ್ದು. ಹಕ್ಕಿಗಳ ಕೊಕ್ಕಿನ ಮೇಲಿರುವ ಕುಂಚದAತಹ ಗರಿಗಳ ಮೇಲೆ ಪರಾಗಗಳು ಅಂಟಿಕೊಳ್ಳುತ್ತವೆ. ಸೂರಕ್ಕಿ, ಬಾಳೆಗುಬ್ಬಿ ಮುಂತಾದ ಹಕ್ಕಿಗಳ ಬಾಗಿದ ಕೊಕ್ಕು ಮತ್ತು ಕೊಳವೆಯಂತಹ ನಾಲಿಗೆ ಈ ಕಾರ್ಯಕ್ಕೆ ತಕ್ಕ ಹಾಗೆ ಮಾರ್ಪಾಡಾಗಿವೆ. ಅಲ್ಲದೆ, ಮÊನಾಹಕ್ಕಿ, ಎಲೆಹಕ್ಕಿ, ಗಿಣಿ ಮುಂತಾದ ಅನೇಕ ಪ್ರಭೇದದ ಪಕ್ಷಿಗಳು ಹೂವುಗಳ ಮಕರಂದ ಕುಡಿಯುವ ನೆಪದಲ್ಲಿ ಅಸಂಖ್ಯ ಪರಾಗಗಳನ್ನು ಇತರ ಹೂವುಗಳಿಗೆ ಹರಡುವುದರ ಮೂಲಕ ಪರಾಗಸ್ಪರ್ಶದಲ್ಲಿ ಭಾಗವಹಿಸಿ, ಸಸ್ಯ ಸಂಪತ್ತು ಹೆಚ್ಚುವುದಕ್ಕೆ ಕಾರಣವಾಗುತ್ತವೆ.
* ಸ್ವಭಾವತಃ ಚಲನಾಶಕ್ತಿಯಿಲ್ಲದ ಮರ-ಗಿಡ ಸಸ್ಯಗಳು ತಮ್ಮ ಸಂತಾನೋತ್ಪತ್ತಿಗಾಗಿ ಅವಶ್ಯವಿರುವ ಬೀಜಪ್ರಸರಣ ಕಾರ್ಯಕ್ಕಾಗಿ ಇತರ ಜೀವಿಗಳನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ. ಇದಕ್ಕಾಗಿ ವಿವಿಧ ಬಣ್ಣಗಳಿಂದ ಕೂಡಿದ, ರುಚಿಕರವಾದ, ಸುಗಂಧಯುಕ್ತ ಮತ್ತು ಇವೆಲ್ಲಕಿಂತ ಮಿಗಿಲಾಗಿ ಎಲ್ಲ ಪೌಷ್ಟಿಕ ಅಂಶಗಳಿAದಲೂ ಕೂಡಿದ ಸುಮಧುರ ಹಣ್ಣುಗಳ ಮೂಲಕ ಆಕರ್ಷಿಸುತ್ತವೆ. ಈ ಕಾರ್ಯದಲ್ಲಿ ಕೂಡ ಉಳಿದ ಜೀವಿಗಳಿಗಿಂತ ಹಕ್ಕಿಗಳ ಪಾತ್ರ ಗಮನೀಯ. ತಿಂದ ಹಣ್ಣಿನ ಬೀಜವನ್ನು ದೂರದೂರದೆಡೆಗಲ್ಲಿ ಉಗಿಯುವುದು ಒಂದು ರೀತಿಯಾದರೆ, ತಿಂದ ಹಣ್ಣಿನ ಬೀಜ ಹಕ್ಕಿಯ ಉದರ ಸೇರಿ, ಹಿಕ್ಕೆಯ ಮೂಲಕವೂ ಹರಡಬಲ್ಲದು. ಮತ್ತೊಂದು ಅಂಶವೆAದರೆ, ಕೆಲವು ಬೀಜಗಳಿಗೆ ಕಠಿಣವಾದ ಹೊರಕವಚವಿದ್ದು ಇವು ಪಕ್ಷಿಗಳ ಜಠರದಲ್ಲಿ ಪಚನವಾಗಿ ಕರಗುವುದರಿಂದ ಭೂಮಿಯ ಮೇಲೆ ಮೊಳಕೆಯೊಡೆಯಲು ಸಾಧ್ಯವಾಗುತ್ತದೆ. ಹೀಗೆ ಬೀಜ
ಪ್ರಸರಣಕ್ರಿಯೆಯಲ್ಲಿ ಅನೇಕ ಪಕ್ಷಿಗಳು ಪಾಲ್ಗೊಂಡು ತಿಂದ ಹಣ್ಣಿನ ಬೀಜಗಳನ್ನು ದೂರದೂರದ ಸ್ಥಳಗಳಲ್ಲಿ ಉಗಿದು ಅಥವಾ ಹಿಕ್ಕೆಗಳ ಮೂಲಕ ಹಾಕಿ ಹೊಸ ಮರಗಿಡಗಳ ಹುಟ್ಟಿಗೆ, ಕಾಡು-ವನಗಳ ಬೆಳವಣಿಗೆಗೆ ಕಾರಣವಾಗುತ್ತವೆ.
* ನಮ್ಮ ದೇಶದ ಆಹಾರ ಧಾನ್ಯಗಳ ಉತ್ಪತ್ತಿಯಲ್ಲಿ ಶೇಕಡ ಹತ್ತು-ಹದಿನೈದರಷ್ಟು ಪಾಲು ದಂಶಕಗಳ ಕುಟುಂಬಕ್ಕೆ ಸೇರಿದ ಇಲಿ-ಹೆಗ್ಗಣಗಳ ಪಾಲಾಗುತ್ತಿದೆ ಎಂಬುದು ತಜ್ಞರ ಅಂದಾಜು. ಸುಗ್ಗಿಯ ಸಮಯದಲ್ಲಿ ಈ ಪ್ರಾಣಿಗಳ ಸಂತಾನೋತ್ಪತ್ತಿಯೂ ಅಷ್ಟೇ ವೇಗ. ಅಲ್ಲದೆ ಇವುಗಳಿಂದ ರೋಗ-ರುಜಿನಗಳೂ ಹರಡುತ್ತವೆ. ಇಂತಹ ವಿನಾಶಕಾರಿ ಜಂತುಗಳನ್ನು ತಿಂದು ಅವುಗಳ ಸಂಖ್ಯೆಯನ್ನು ಹತೋಟಿಯಲ್ಲಿಡುವ ಕೆಲಸ ಸಾಮಾನ್ಯವೇನಲ್ಲ. ದಂಶಕಗಳಲ್ಲದೆ ಮೊಲ ಮುಂತಾದ ಪ್ರಾಣಿಗಳನ್ನು ಹದ್ದು, ಗೂಬೆ ಇನ್ನಿತರ ಬೇಟೆಪಕ್ಷಿಗಳು ತಿಂದು ನಿಯಂತ್ರಣದಲ್ಲಿಡುತ್ತವೆ. ಒಂದು ಗೂಬೆ ಒಂದೇ ರಾತ್ರಿಯಲ್ಲಿ ನಾಲ್ಕರಿಂದ ಎಂಟು ಇಲಿಗಳನ್ನು ಕೊಂದು ತಿನ್ನುತ್ತದೆ!
* ಕಾಡಿನಲ್ಲಿ ಪ್ರಾಣಿ-ಪಕ್ಷಿಗಳು ಸಾಯುವುದೇ ಇಲ್ಲವೆ? ಸತ್ತರೆ, ಅವುಗಳ ಕೊಳೆತ ವಾಸನೆ ಎಲ್ಲಿಯೂ ಕಾಣಿಸುವುದಿಲ್ಲವಲ್ಲ? -ಇದು ಸಾಮಾನ್ಯವಾಗಿ ಎಲ್ಲರೂ ಕೇಳುವ ಪ್ರಶ್ನೆ. ನಿಜ, ಕಾಡಿನಲ್ಲಿ ಯಾರೂ ಮೂಗು ಮುಚ್ಚಿಕೊಂಡು ಸುತ್ತುವ ಪ್ರಮೇಯವೇ ಇಲ್ಲ; ಅಲ್ಲೇನಿದ್ದರೂ ಹೂ-ಹಣ್ಣುಗಳ ಪರಿಮಳಯುಕ್ತ ಪರಿಸರ! ಸತ್ತು ಕೊಳೆಯುವ ಪ್ರಾಣಿಗಳನ್ನು ರಣಹದ್ದು, ಗಿಡುಗ, ಕಾಗೆಗಳು ಆಗಿಂದಾಗ್ಯೆ ತಿಂದು ಕಾಡಿನ ವಾತಾವರಣವನ್ನು ನಿರ್ಮಲವಾಗಿಡುವುವು. ಅಲ್ಲದೆ, ಊರ ಹೊರಗಿನ ಕಸದ ತೊಟ್ಟಿಗಳನ್ನು ಸ್ವಚ್ಛವಾಗಿರಿಸಲೂ ಈ ಹಕ್ಕಿಗಳು ಸಹಾಯ ಮಾಡುತ್ತವೆ. ಹೀಗೆ ಸಾಂಕ್ರಾಮಿಕ ರೋಗಗಳು ಹರಡುವುದನ್ನು ಈ ಹಕ್ಕಿಗಳು ಸಮರ್ಥವಾಗಿ ತಡೆಗಟ್ಟುತ್ತವೆ.
* ಸಮುದ್ರ ತೀರದಲ್ಲಿ ಅಗಾಧ ಪ್ರಮಾಣದಲ್ಲಿ ಸಂಗ್ರಹವಾಗುವ ಮೀನು ಹಿಡಿಯುವ ಹಕ್ಕಿಗಳ ಹಿಕ್ಕೆ, ಸಾರಯುಕ್ತ ನೈಸರ್ಗಿಕ ರಸಗೊಬ್ಬರ ಕೂಡ. ಅರಣ್ಯದಲ್ಲಿ ಕೂಡ ಅಸಂಖ್ಯ ಹಕ್ಕಿಗಳ ಹಿಕ್ಕೆ ನೆಲದ ಸಾರವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ.
* ಮಾಂಸ-ಮೊಟ್ಟೆಗಾಗಿ, ಬಾತುಕೋಳಿ, ಕೋಳಿ ಇತ್ಯಾದಿ ಪಕ್ಷಿಗಳ ಸಾಕಣೆ, ಅನೇಕ ಜನಗಳಿಗೆ ಉದ್ಯೋಗವನ್ನು ಒದಗಿಸಿಕೊಟ್ಟಿದೆ. ಇಂದು ಪ್ರಪಂಚದಾದ್ಯAತ ಬೆಳೆಸುತ್ತಿರುವ ಸಾಕು ಕೋಳಿಗಳಿಗೆಲ್ಲ ಭಾರತದ ಉತ್ತರ ಮತ್ತು ಪೂರ್ವಭಾಗದ ಒತ್ತಾದ ಕಾಡುಗಳಲ್ಲಿ ವಾಸವಾಗಿರುವ ಕೆಂಪು ಕಾಡುಕೋಳಿಯ ಸಂತತಿಯೇ ಮೂಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು!
* ಅರಣ್ಯದಲ್ಲಿ ಹಲವು ಪ್ರಾಣಿಗಳು ಹಕ್ಕಿಗಳನ್ನು ತಮ್ಮ ಆಹಾರವನ್ನಾಗಿಸಿಕೊಂಡು ಬೆಳೆಯುತ್ತವೆ. ಅಲ್ಲದೆ ಸತ್ತ ಹಕ್ಕಿಗಳೂ ಇತರ ನಿಕೃಷ್ಟ ಜೀವಿಗಳಿಗೆ ಆಹಾರವಾಗುತ್ತವೆ.
* ಇವೆಲ್ಲಕ್ಕೂ ಮಿಗಿಲಾಗಿ, ಪಕ್ಷಿಗಳ ಮಧುರಧ್ವನಿ, ಚಿತ್ತಾಕರ್ಷಕ ಬಣ್ಣಗಳು ಪ್ರಕೃತಿಯ ಸೊಬಗಿಗೆ ಕಿರೀಟಪ್ರಾಯವಾಗಿದೆ.
ಅಂಗೈ ಅಗಲದ ಕಾಡು ಬೆಳೆಸಲು ನಾವು ಹಾಕುವ ಯೋಜನೆಗಳೇನು? ಖರ್ಚೇನು? ಶ್ರಮವೇನು? ಆದರೆ ಪ್ರಪಂಚದ ಮೂರನೇ ಎರಡು ಭೂಭಾಗದಷ್ಟು ವಿಶಾಲವಾದ, ಸಮೃದ್ಧವಾದ, ವೈವಿಧ್ಯಮಯ ಕಾಡನ್ನು ಬೆಳೆಸಲು ಹಕ್ಕಿಗಳು ಮತ್ತು ಅವುಗಳಂತಹ ಇತರ ಸಣ್ಣಸಣ್ಣ ಜೀವಿಗಳೇ ಕಾರಣ ಎಂಬುದನ್ನು ನಾವು ಅರಿಯಬೇಕು. ಇವೆಲ್ಲವೂ, ಪಕ್ಷಿಗಳು ಪ್ರತಿದಿನ ನಾಲ್ಕಾರು ಹನಿ ಮಕರಂದ ಕುಡಿದು, ಹತ್ತಾರು ಕಾಡು ಹಣ್ಣುಗಳನ್ನು ತಿಂದು ಆ ಮೂಲಕ ಬೆಳೆಸಿದ ಅತ್ಯಪೂರ್ವ ಸಸ್ಯಸಂಪತ್ತು!
ಹೀಗೆ ಹಲವು ಜಾತಿಗಳ ಹಕ್ಕಿಗಳ ಜೀವನಶೈಲಿಯನ್ನು ನಾವು ಗಮನಿಸಿದಾಗ ಅವುಗಳಿಂದ ಕಲಿಯಬೇಕಾದುದು ಬಹಳಷ್ಟಿದೆಯೆಂದು ನಮಗೆ ಅರಿವಾಗುತ್ತದೆ. ಎಚ್ಚರಿಕೆಯಿಂದ ನಿರ್ವಹಿಸಿದ ದೀರ್ಘಾವಧಿಯ ಪಕ್ಷಿವೀಕ್ಷಣೆ ಮತ್ತು ಅದರ ಅಧ್ಯಯನ ಯಾವತ್ತೂ ಆಹ್ಲಾದಕರ, ಆನಂದದಾಯಕ. ಹಾಗಾಗಿ, ಪಕ್ಷಿವೀಕ್ಷಣೆ ಎಂಬುದು ಒಂದು ಉತ್ತಮ ಹವ್ಯಾಸವಾಗಿದೆ.
ಪಕ್ಷಿವೀಕ್ಷಣೆ
ಆಕಾಶವನ್ನೇ ತಮ್ಮ ಸಾಮ್ರಾಜ್ಯನ್ನಾಗಿಸಿಕೊಂಡಿರುವ ಪಕ್ಷಿಗಳು, ಜೀವವಿಕಾಸದಲ್ಲಿ ಕೋಟ್ಯಾಂತರ ವರ್ಷಗಳ ಹಿಂದೆಯೇ ಬಹು ದೊಡ್ಡ ಸಾಧನೆ ಮಾಡಿವೆ ಎಂದರೂ ತಪ್ಪಿಲ್ಲ. ಜ್ಞಾನಾರ್ಜನೆಯಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು ಇಂದಿನ ವಿದ್ಯಾರ್ಥಿಗಳಿಗೆ ಬಹು ಮುಖ್ಯ. ಅದರಲ್ಲೂ ಪ್ರಕೃತಿಯಲ್ಲಿ ಕಂಡುಬರುವ ವಿಸ್ಮಯಕರ ಹಾಗೂ ಮನೋಲ್ಲಾಸಕರ ಸಂಗತಿಗಳನ್ನು ಸ್ವತಃ ತಾವೇ ನಡೆದು, ನೋಡಿ, ಕೇಳಿ, ಓದಿ ತಿಳಿದುಕೊಳ್ಳಬಯಸುವ ವಿದ್ಯಾರ್ಥಿಗಳಿಗೆ ಇದು ಬಹು ಮಹತ್ತ÷್ವವುಳ್ಳ ವಿಚಾರವಾಗಿದೆ. ಪರಿಸರ ರಕ್ಷಣೆಯ ಬಗ್ಗೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಇವು ಬಹಳ ಸಹಕಾರಿಯಾಗಿವೆ. ಪಕ್ಷಿವೀಕ್ಷಣೆ ಸುಲಭವೂ, ರೋಮಾಂಚನಕಾರಿಯೂ ಆದ ಹವ್ಯಾಸವಾಗಿದೆ.
ಪಕ್ಷಿಗಳು ಪ್ರಕೃತಿಯ ಒಂದು ಅವಿಭಾಜ್ಯ ಅಂಗ. ಅವು ನಮ್ಮ ಸುತ್ತಮುತ್ತಲ ಹೊಲ-ಗದ್ದೆಗಳಲ್ಲಿ, ಮನೆಗಳಲ್ಲಿ, ಕೆರೆಗಳಲ್ಲಿ, ನದಿ-ನಾಲೆಗಳ ಸುತ್ತಮುತ್ತಲಿನ ಜಾಗಗಳಲ್ಲಿ ಕಾಣಸಿಗುತ್ತವೆ. ಅಂದರೆ ಪಕ್ಷಿಗಳ ಜೀವನಚಕ್ರಗಳು ಹೆಚ್ಚಾಗಿ ಮನುಷ್ಯನ ದೈನಂದಿನ ಜೀವನ, ಆಹಾರ ಪದ್ಧತಿ ಮತ್ತು ಋತುಮಾನದ ಬದಲಾವಣೆಗಳೊಂದಿಗೆ ಹಾಸುಹೊಕ್ಕಾಗಿವೆ. ಆದ್ದರಿಂದ ಪಕ್ಷಿವೀಕ್ಷಣೆಯನ್ನು ಎಲ್ಲಿ ಬೇಕಾದರೂ ಸುಲಭವಾಗಿ ಮಾಡಬಹುದು. ಹೆಚ್ಚಿನ ಬಗೆಯ ಹಕ್ಕಿಗಳು ನಮ್ಮ ಊರಿನ ಸುತ್ತಮುತ್ತಲ ಪ್ರದೇಶಗಳಲ್ಲಿಯೇ ಇರುವುದರಿಂದ ಅವುಗಳನ್ನು ನಾವು ನಮ್ಮ ಮನೆಯ ಕಿಟಕಿ-ಬಾಗಿಲಿನ ಮೂಲಕವೇ ನೋಡಬಹುದಾದರೂ, ಹಲವು ಬಾರಿ ಪಕ್ಷಿವೀಕ್ಷಣೆ ನಮ್ಮನ್ನು ಮನೆಯಿಂದ ಹೊರಗೆ ಬರುವಂತೆ ಮಾಡುತ್ತದೆ. ಅದರಲ್ಲಿಯೂ ಎಸ್ಟೇಟುಗಳಲ್ಲಿ, ಅರಣ್ಯಗಳಲ್ಲಿ ಮರಗಳು ಹೂವು-ಹಣ್ಣುಗಳನ್ನು ತಳೆದು, ಸಾವಿರಾರು ಹಕ್ಕಿಗಳನ್ನು ಆಕರ್ಷಿಸುವ ಸನ್ನಿವೇಶಗಳು ಪಕ್ಷಿವೀಕ್ಷಕರಿಗೆ ರಸದೌತಣವನ್ನು ನೀಡುತ್ತವೆ. ದಟ್ಟವಾದ ಅರಣ್ಯ ಪ್ರದೇಶ ಪಕ್ಷಿವೀಕ್ಷಣೆಗೆ ನಿರಾಶಾದಾಯಕ ಜಾಗ; ಎಷ್ಟು ಸುತ್ತಿದರೂ ಒಂದೂ ಹಕ್ಕಿ ಕಾಣಸಿಗದಿರಬಹುದು. ಯಾವುದೋ ಒಂದು ತಿರುವಿನಲ್ಲಿ, ಕಾಡು ವಿರಳವಾದಾಗ, ಇದ್ದಕ್ಕಿದ್ದಂತೆ ಎಲ್ಲಿಂದಲೋ ಹಲವಾರು ಜಾತಿಯ ಹಕ್ಕಿಗಳು ಒಮ್ಮೆಲೇ ದೊಡ್ಡ ಅಲೆಯಂತೆ ಧಾಳಿಯಿಡುತ್ತವೆ. ಕೀಟ, ಮಕರಂದ, ಹಣ್ಣು ಮುಂತಾದ ಆಹಾರವನ್ನರಸಿ ಬರುವ ಈ ಮಿಶ್ರಪಕ್ಷಿಬೇಟೆಯನ್ನು ನಿಯತವಾಗಿ ಪ್ರತಿದಿನ ಕಾಣಬಹುದು.
ಪಕ್ಷಿವೀಕ್ಷಣೆ ಮಾಡುವುದು ಹೇಗೆ?
ಪಕ್ಷಿಗಳು ನಮ್ಮ ಸುತ್ತಮುತ್ತಲ ಎಲ್ಲಾ ಪರಿಸರದಲ್ಲೂ ವಾಸಿಸುವುದರಿಂದ ಅವುಗಳನ್ನು ಗಮನಿಸುವುದು ಬಹಳ ಸುಲಭ. ಪ್ರಾರಂಭದಲ್ಲಿ ಬರಿಗಣ್ಣಿನಿಂದಲೇ ಹಕ್ಕಿಗಳನ್ನು ಗುರುತಿಸಿ ಅವುಗಳ ಚಲನವಲನಗಳನ್ನು ಗಮನವಿಟ್ಟು ನೋಡುವ ಅಭ್ಯಾಸ ಮಾಡಿಕೊಳ್ಳಬೇಕು. ಇದರೊಂದಿಗೆ, ಅವುಗಳ ಧ್ವನಿಯನ್ನು ಕೇಳಿ ನೆನೆಪಿನಲ್ಲಿಟ್ಟುಕೊಳ್ಳುವುದು ಅವಶ್ಯ. ನಾವು ಭೇಟಿ ನೀಡುವ ಸ್ಥಳದಲ್ಲಿ ಯಾವ ಯಾವ ಪ್ರಭೇದದ
ಪಕ್ಷಿಗಳನ್ನು ನಿರೀಕ್ಷಿಸಬಹುದು ಎಂಬ ಅರಿವು ನಮಗೆ ಮೊದಲೇ ಇದ್ದಲ್ಲಿ, ಅವುಗಳನ್ನು ಗುರುತು ಹಿಡಿಯುವುದು ಸಲೀಸಾಗುತ್ತದೆ.
ಪಕ್ಷಿವೀಕ್ಷಣೆ ಮಾಡುವಾಗ ನಾವು ಗಮನದಲ್ಲಿರಿಸಬೇಕಾದ ಸಂಗತಿಗಳು:
* ತಿಳಿಬಣ್ಣದ ಬಟ್ಟೆಗಳನ್ನೇ ಧರಿಸಬೇಕು. ಕಣ್ಣಿಗೆ ರಾಚುವಂತಹ ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳಬಾರದು.
* ೨-೩ ಜನರಿರುವ ಸಣ್ಣ ಗುಂಪು ಪಕ್ಷಿವೀಕ್ಷಣೆಗೆ ಸೂಕ್ತ.
* ಪಕ್ಷಿಗಳನ್ನು ವೀಕ್ಷಿಸುವಾಗ ಆದಷ್ಟೂ ನಿಶ್ಶಬ್ದವಾಗಿರಬೇಕು. ಓಡಾಡುವಾಗ ಚರಪರ ಶಬ್ದ ಮಾಡಬಾರದು. ಹಕ್ಕಿಗಳು ಆಗಂತುಕರನ್ನು ಬಹು ಬೇಗ ಪತ್ತೆ ಮಾಡುತ್ತವೆ!
* ಮುಂಜಾನೆ ಹಕ್ಕಿಗಳು ತಮ್ಮ ನೆಲೆಯಿಂದ ಹೊರಬರುವ, ಹಾಗೂ ಸಂಜೆ ಪುನಃ ಹಿಂದಿರುಗುವ ಸಮಯ, ಪಕ್ಷಿವೀಕ್ಷಣೆಗೆ ಸೂಕ್ತ.
* ಪಕ್ಷಿಗಳ ಚಟುವಟಿಕೆಗಳಿಗೆ ಭಂಗಬಾರದAತೆ, ದೂರದಿಂದಲೇ ಅವುಗಳನ್ನು ಗಮನಿಸಬೇಕು. ಪೊದೆ-ಎಲೆ, ಗಿಡಗಂಟಿಗಳೊಳಗಿನ ಸಣ್ಣ ಅಲುಗಾಟಗಳನ್ನು ನಾವು ನೇರವಾಗಿ ನೋಡುವುದಕ್ಕಿಂತ, ಕಣ್ಣಂಚಿನಿAದಲೇ ಅರಿಯುವ ಅಭ್ಯಾಸ ಮಾಡಿಕೊಳ್ಳಬೇಕು.
* ಹಕ್ಕಿಗಳ ಗೂಡು ಕಂಡಲ್ಲಿ, ಪಕ್ಷಿಗಳಿಗೆ ಮತ್ತು ಮೊಟ್ಟೆ ಹಾಗೂ ಮರಿಗಳಿಗೆ ತೊಂದರೆಯಾಗದAತೆ ಬಹಳ ಎಚ್ಚರವಹಿಸಬೇಕು. ನಿಮ್ಮನ್ನು ಹಿಂಬಾಲಿಸುತ್ತಿರುವ ಕಾಗೆಗಳು ಇಂತಹ ಗೂಡುಗಳನ್ನು ಗುರುತಿಟ್ಟುಕೊಂಡು ನಂತರ ನಾಶ ಮಾಡುತ್ತವೆ.
* ನಿಮ್ಮದು ಬರೇ ಪಕ್ಷಿವೀಕ್ಷಣೆಯಾಗಿರಲಿ, ಅಥವಾ ಹಕ್ಕಿಗಳ ಛಾಯಾಗ್ರಹಣ, ಧ್ವನಿಗ್ರಹಣ, ವೈಜ್ಞಾನಿಕ ಅನ್ವೇಷಣೆ, ಅಥವಾ ಇನ್ನಾವುದೇ ನಿರ್ದಿಷ್ಟ ವಿಷಯವಿರಲಿ, ಹಕ್ಕಿಗಳ ಹಿತವನ್ನು ಕಾಯುವುದೇ ನಿಮ್ಮ ಲಕ್ಷ÷್ಯವಾಗಿರಬೇಕು.
* ಪ್ಲಾಸ್ಟಿಕ್ ಚೀಲಗಳನ್ನು ಕೊಂಡೊಯ್ದ ಪಕ್ಷದಲ್ಲಿ ಅವನ್ನು ಕಂಡಲ್ಲಿ ಬಿಸಾಡದೆ, ವಾಪಾಸ್ ಹಿಂತರಲು ಮರೆಯಬೇಡಿ.
ಪಕ್ಷಿವೀಕ್ಷಣೆಗೆ ಬೇಕಾಗುವ ಸಾಮಗ್ರಿಗಳು:
ಪಕ್ಷಿವೀಕ್ಷಣೆಯ ಅವಧಿಯಲ್ಲಿ ನಾವು ನೋಡುವ ಎಲ್ಲಾ ಹಕ್ಕಿಗಳನ್ನು ಮತ್ತು ವಿಚಾರಗಳನ್ನು ವಿವರವಾಗಿ ನೆನಪಿಡಲು ಅಸಾಧ್ಯ. ಆದ್ದರಿಂದ ನಾವು ನೋಡುವ ಸಂಗತಿಗಳನ್ನು ಆಗಿಂದಾಗಲೇ ಗುರುತಿಸಿಕೊಳ್ಳಲು ಒಂದು ಕಿರು ಪುಸ್ತಕ ಹಾಗು ಚಿಕ್ಕ ಪೆನ್ಸಿಲ್ ಅಥವಾ ಪೆನ್ನು ಯಾವಾಗಲೂ ಕಿಸೆಯಲ್ಲಿಟ್ಟುಕೊಂಡಿರಬೇಕು. ಹೀಗೆ ಮಾಡುವುದರಿಂದ ಮುಂದೆ ಈ ಮಾಹಿತಿಗಳು ಪುನಃ ಆ ಹಕ್ಕಿಗಳನ್ನು ಗುರುತಿಸುವಲ್ಲಿ ಸಹಾಯ ಮಾಡುತ್ತವೆ.
ಪಕ್ಷಿವೀಕ್ಷಣೆಯಲ್ಲಿ ಅತ್ಯಂತ ಉಪಯೋಗವಾಗುವ ಮತ್ತೊಂದು ಸಾಮಗ್ರಿ, ಬೈನಾಕ್ಯುಲರ್ ಅಥವಾ ದುರ್ಬೀನು. (ಪುಟ ೧೨ರ ಚಿತ್ರ ನೋಡಿ). ಇದರಿಂದ ಪಕ್ಷಿಗಳನ್ನು ಕರಾರುವಾಕ್ಕಾಗಿ ಗುರುತುಹಿಡಿಯಲು ಹಾಗೂ ಅದರ ದೇಹದ ವಿವರಗಳನ್ನು ಸ್ಪಷ್ಟವಾಗಿ ತಿಳಿಯಲು ಅನುಕೂಲವಾಗುತ್ತದೆ. ಹೆಗಲಿಗೆ ಭಾರವಲ್ಲದ, ಹಗುರವಾದ ದುರ್ಬೀನನ್ನು ಆಯ್ದುಕೊಳ್ಳಿ. ಒಬ್ಬೊಬ್ಬರಿಗೆ ಒಂದೊAದು ಬೈನಾಕ್ಯುಲರ್ ಬೇಕೇ ಬೇಕು. ಇವೆರಡು ಸಾಮಗ್ರಿಗಳಲ್ಲದೆ, ಪಕ್ಷಿವೀಕ್ಷಣೆಗೆ ಹೋಗುವಾಗ ಹಕ್ಕಿಗಳ ಬಗ್ಗೆ ವಿವರಣೆ ಹಾಗೂ ಮಾಹಿತಿಗಳುಳ್ಳ ಕೈಪಿಡಿಯನ್ನು ಕೊಂಡೊಯ್ಯಲು ಮರೆಯಬಾರದು.
ಪಕ್ಷಿಗಳ ವರ್ಣನೆಯನ್ನು ದಾಖಲಿಸಬೇಕಾದ ಕ್ರಮ:
ದಿನಚರಿಯನ್ನು ಪ್ರಾರಂಭಿಸುವ ಮುನ್ನ ಈ ಮುಂದಿನ ಸಂಗತಿಗಳನ್ನು ನಿಮ್ಮ ಕಿರು ಪುಸ್ತಕದಲ್ಲಿ ದಾಖಲಿಸಿ. ದಿನಾಂಕ, ಪಕ್ಷಿವೀಕ್ಷಣೆಯನ್ನು ಮಾಡುತ್ತಿರುವ ಊರು ಅಥವಾ ಜಾಗದ ಹೆಸರು, ಸಮಯ, ಋತು: ಚಳಿಗಾಲವೇ? ಬೇಸಿಗೆಯೇ? ಮಳೆಗಾಲವೇ? ವಿವಿಧ ಋತುಗಳಲ್ಲಿ ಕೆಲವು ಜಾಗಗಳಿಗೆ ಪಕ್ಷಿಗಳು ಸಂತಾನಾಭಿವೃದ್ಧಿಗೆ ಮತ್ತು ಆಹಾರಾನ್ವೇಷಣೆಯಲ್ಲಿ ವಲಸೆ ಬರುತ್ತವೆ ಎಂಬುದನ್ನು ನೆನಪಿಡಿ. ಈ ವಿವರಗಳನ್ನು ಕೈಪಿಡಿಗಳಲ್ಲಿ ಓದಿ ತಿಳಿಯಿರಿ.
ಇವಿಷ್ಟಾದ ನಂತರ, ನೀವು ಗುರುತಿಸಿದ ಪ್ರತಿಯೊಂದು ಪಕ್ಷಿಯ ವಿವರಗಳನ್ನು ಈ ಕೆಳಕಂಡ ರೀತಿಯಲ್ಲಿ ಬರೆಯಿರಿ. ಹಕ್ಕಿಯ ದೇಹದ ವಿವಿಧ ಭಾಗಗಳನ್ನು ಚಿತ್ರ ನೋಡಿ ಮನದಟ್ಟು ಮಾಡಿಕೊಳ್ಳಿ. (ಪುಟ ೧೨ ನೋಡಿ)
ಗಾತ್ರ: ಒಂದು ಪಕ್ಷಿಯ ಕೊಕ್ಕಿನಿಂದ ಅದರ ಬಾಲದ ತುದಿಯವರೆಗಿನ ಉದ್ದ, ಆ ಪಕ್ಷಿಯ ಗಾತ್ರವನ್ನು ಸೂಚಿಸುತ್ತದೆ, ಆದರೆ, ಪಕ್ಷಿಯನ್ನು ವೀಕ್ಷಿಸುವಾಗ ಈ ಉದ್ದವನ್ನು ನಾವು ನಿಖರವಾಗಿ ಅಳೆಯಲು ಸಾಧ್ಯವಿಲ್ಲ. ಆದ್ದರಿಂದ ಕೆಲವು ಸಾಮಾನ್ಯ ಹಕ್ಕಿಗಳನ್ನು ಹೋಲಿಕೆಗೆ ಮಾಪನವಾಗಿ ಇಟ್ಟುಕೊಂಡಿದ್ದೇವೆ: ಗುಬ್ಬಚ್ಚಿ - ೧೫; ಬುಲ್‌ಬುಲ್ - ೨೦; ಮೈನಾ - ೨೫; ಕಾಗೆ - ೪೫; ಗಿಡುಗ - ೬೦; ಬಾತು - ೬೫; ಕೋಳಿ - ೭೫; ರಣಹದ್ದು - ೯೦ ಸೆಂಟಿಮೀಟರುಗಳು. ನೀವು ಕಂಡ ಒಂದು ಪಕ್ಷಿಯು ಮೈನಾಗಿಂತ ಸ್ವಲ್ಪ ದೊಡ್ಡದಾಗಿದ್ದರೆ, ಅದನ್ನು ಮೈನಾ+ ಎಂದೂ, ಕೋಳಿಗಿಂತ ಚಿಕ್ಕದಾಗಿದ್ದರೆ, ಕೋಳಿ- ಎಂದೂ ಗುರುತಿಸಬಹುದು.
ಅದಾದ ಮೇಲೆ, ಪ್ರಮುಖ ವೈಶಿಷ್ಟ÷್ಯಗಳು ಅಂದರೆ ಆ ಹಕ್ಕಿಯಲ್ಲಿ ನಿಮ್ಮ ಗಮನವನ್ನು ಸೆಳೆದ ವಿಶೇಷ ಲಕ್ಷಣಗಳನ್ನು ಗುರುತು ಮಾಡಿ. ಉದಾ: ಬಣ್ಣ-ಬಣ್ಣದ ಬಾಲ, ಉದ್ದವಾದ ಕಾಲು, ಪುಕ್ಕವಿಲ್ಲದ ಕತ್ತು, ಬಾಗಿರುವ ಕೊಕ್ಕು ಇತ್ಯಾದಿ. ಅಥವಾ ಆ ಹಕ್ಕಿಯ ನಡವಳಿಕೆಯಲ್ಲಿ ನಿಮ್ಮ ಗಮನ ಸೆಳೆದ ವಿಶಿಷ್ಟ ಗುಣಗಳು, ಉದಾ: ಕ್ಷಣ-ಕ್ಷಣಕ್ಕೂ ಬಾಲವನ್ನು ಮೀಟುವ ಮಡಿವಾಳ, ರೆಕ್ಕೆಯನ್ನು ಹರಡಿ ಒಣಗಿಸಿಕೊಳ್ಳುತ್ತಿರುವ ನೀರುಕಾಗೆ ಇತ್ಯಾದಿ.
ಬಣ್ಣ: ಪಕ್ಷಿಗಳಲ್ಲಿ ಯಾವುದಾದರೂ ಒಂದು ಬಣ್ಣ ಎದ್ದು ಕಾಣುತ್ತದೆ. ಆ ಬಣ್ಣ ನೀವು ನೋಡಿದ ಪಕ್ಷಿಯ ಮೈಯಲ್ಲಿ ಎಲ್ಲೆಲ್ಲಿ ಕಂಡುಬರುತ್ತದೆ ಎಂದು ಬರೆಯಿರಿ. ಉದಾ: ಕೆಂಬೂತದ ಮೈ ಕೂಡ ಕಾಗೆಯಂತೆ ಕಪುö್ಪ, ಆದರೆ ಅದರ ರೆಕ್ಕೆ ಉಜ್ವಲ ಕೆಂಗAದು ಬಣ್ಣದ್ದು. ಅಲ್ಲದೆ, ಋತುಮಾನಗಳಿಗೆ ಅನುಗುಣವಾಗಿ ಕೆಲವು ಪಕ್ಷಿಗಳ ಬಣ್ಣ ಬದಲಾಗುತ್ತವೆ.
ಧ್ವನಿ: ಪಕ್ಷಿಗಳ ಧ್ವನಿಗಳಲ್ಲಿ ಎರಡು ವಿಧ: ಅವುಗಳ ಕರೆ ಒಂದು ಬಗೆಯಾದರೆ, ಹಾಡು ಮತ್ತೊಂದು ಬಗೆ. ಈ ಧ್ವನಿಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ. ಇನ್ನೊಮ್ಮೆ ಅದೇ ಧ್ವನಿಯನ್ನು ಕೇಳಿದಾಗ, ಪಕ್ಷಿಯನ್ನು ನೋಡದೆಯೇ ಗುರುತಿಸಬಹುದು. ಹಕ್ಕಿಗಳು ಹಾಡುವ ಧ್ವನಿಯನ್ನು ಕೇಳಿ ಅವುಗಳ ಸ್ವರಗಳನ್ನು ಬರೆಯುವುದು ಆಗದ ಕೆಲಸ. ಆದರೂ ಆ ಧ್ವನಿಗೆ ಅತಿ ಹತ್ತಿರವಾದ ಸ್ವರಗಳನ್ನು ಶಬ್ದಗಳಲ್ಲಿ ಬರೆಯಲು ಪ್ರಯತ್ನಿಸಬಹುದು. ಉದಾ: ಕೋಗಿಲೆಯ ಕುಹೂ ..ಕುಹೂ..., ಕುಟ್ರುಹಕ್ಕಿಯ ಕುಟ್ರೂ... ಕುಟ್ರೂ..., ಇತ್ಯಾದಿ. ಅಲ್ಲದೆ ಕಳಿಂಗ, ಕಾಜಾಣ ಹಕ್ಕಿಗಳು ಇತರ ಪಕ್ಷಿಗಳ ಧ್ವನಿಯನ್ನು ಅಣಕವಾಡಬಲ್ಲವು. ನೀವು ನಿರೀಕ್ಷಿಸಿರದ ಯಾವುದೋ ಹಕ್ಕಿಯ ಸ್ವರವನ್ನು ಕೇಳಿ ನೀವು ಗೊಂದಲಗೊಳ್ಳುವ ಸಂದರ್ಭವೂ ಉಂಟು! ವಿವಿಧ ಪ್ರಾಂತ್ಯಗಳಲ್ಲಿ ನಾವು ಕನ್ನಡವನ್ನೇ ವಿವಿಧ ಆಡುಭಾಷೆಗಳಲ್ಲಿ ಮಾತನಾಡುವಂತೆ, ಒಂದೇ ಪ್ರಭೇದದ ಹಕ್ಕಿಗೂ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಆಡುಭಾಷೆಯಿದೆ ಎಂಬುದನ್ನು ನೆನಪಿಡಿ.
ಗಂಡು ಅಥವಾ ಹೆಣ್ಣು: ಅನೇಕ ಗಂಡು ಮತ್ತು ಹೆಣ್ಣು ಹಕ್ಕಿಗಳ ಆಕಾರ, ಬಣ್ಣ ಮುಂತಾದುವುಗಳಲ್ಲಿ ವ್ಯತ್ಯಾಸವಿರುತ್ತದೆ. ಉದಾಹರಣೆಗೆ, ಗುಬ್ಬಚ್ಚಿ, ಗಿಳಿ. ಇವುಗಳ ವಿವರಗಳನ್ನು ಕೈಪಿಡಿಗಳಲ್ಲಿ ಆಗಾಗ ಓದಿ ತಿಳಿಯಿರಿ.
ಪಕ್ಷಿಯ ನಡವಳಿಕೆ : ನೀವು ಆ ಪಕ್ಷಿಯನ್ನು ನೋಡಿದಾಗ ಆದು ಏನುಮಾಡುತ್ತಿತ್ತು? ಮರ/ಗಿಡದ ಮೇಲೆ ಕುಳಿತು ಹೊಂಚುಹಾಕುತ್ತಿತ್ತೇ? ಹಾಡುತ್ತಿತ್ತೇ? ಆಕಾಶದಲ್ಲಿ ಕೀಟಗಳನ್ನು ಹಿಡಿಯುತ್ತಿತ್ತೇ? ಸಂಗಾತಿಯೊಡನೆ ವ್ಯವಹರಿಸುತ್ತಿತ್ತೇ? ಅಥವಾ ಮರಿಗಳಿಗೆ ಗುಟುಕು ನೀಡುತ್ತಿತ್ತೇ? ಹಕ್ಕಿಗಳು ಹಾರುವಾಗ, ರೆಕ್ಕೆ ಬಡಿಯುವ, ತೇಲುವ, ಹೊರಳುವ ಶೈಲಿ ಒಂದೊAದು ಹಕ್ಕಿಗೂ ವಿಭಿನ್ನ. ಈ ಹಾರುವ ರೀತಿಯಿಂದಲೇ ಅವುಗಳನ್ನು ಗುರುತು ಹಿಡಿಯಬಹುದು.
ಎಲ್ಲಿ ನೋಡಿದಿರಿ? ನೀರಿನಲ್ಲಿ, ಮರದ ಮೇಲೆ, ನೆಲದ ಮೇಲೆ, ಗಾಳಿಯಲ್ಲಿ ... ಇತ್ಯಾದಿ ವಿವರಗಳನ್ನು ಗುರುತಿಸಿಕೊಳ್ಳಿ.
ಗೂಡುಗಳ ರಚನೆ ಹಾಗೂ ವಿವರ : ಉದಾಹರಣೆಗೆ, ಗೀಜಗನ ಗೂಡನ್ನು ನೀವೆಲ್ಲ ಕಂಡೇ ಇದ್ದೀರ. ಸಿಂಪಿಗ, ಎರಡು ಎಲೆಗಳನ್ನು ಹೊಲೆದು ಗೂಡು ಮಾಡುತ್ತದೆ, ಮರಕುಟ್ಟಿಗ ಮರದಮೇಲೆ ಪೊಟರೆಗಳೊಳಗೆ ಗೂಡುಕಟ್ಟಿದರೆ, ಹದ್ದಿನಂತಹ ಹಕ್ಕಿಗಳು ಮರದ ಕೊಂಬೆಯ ಕವಲುಗಳ ನಡುವೆ ಅಟ್ಟಣಿಗೆ ಗೂಡುಕಟ್ಟುತ್ತವೆ. ಪ್ರತಿಯೊಂದು ಪಕ್ಷಿಯೂ ತನ್ನದೇ ಆದ ವಿಶಿಷ್ಟವಾದ ರೀತಿಯಲ್ಲಿ ಗೂಡುಕಟ್ಟಬಲ್ಲದು.
ಮೊಟ್ಟೆ ಮತ್ತು ಮರಿಗಳ ಬಣ್ಣ ಹಾಗೂ ಆಕಾರ : ಹಲವು ಬಾರಿ ಮರಿಗಳು ತಮ್ಮ ತಂದೆ-ತಾಯಿಯನ್ನು ಬಣ್ಣದಲ್ಲಿಯೇ ಆಗಲಿ, ಆಕಾರದಲ್ಲಿಯೇ ಆಗಲಿ ಹೋಲುವುದೇ ಇಲ್ಲ. ಕೈಪಿಡಿಗಳನ್ನು ನೋಡಿ ಇದನ್ನು ಗುರುತಿಸಿ.
ಈ ಮೇಲಿನ ವಿವರಗಳನ್ನಲ್ಲದೇ ಒಂದು ಹಕ್ಕಿಯ ಕೊಕ್ಕು, ಕಣ್ಣು, ಗರಿಗಳ ರಚನೆ, ಬಾಲದ ಆಕಾರ ಇವೆಲ್ಲವನ್ನೂ ಸೂಕ್ಷ÷್ಮವಾಗಿ ಗಮನಿಸಿ, ವಿವರಗಳನ್ನು ಬರೆಯಿರಿ. ಸಾಧ್ಯವಾದರೆ, ಆ ಪಕ್ಷಿಯ ಚಿತ್ರವನ್ನೂ ಬರೆಯಿರಿ. ಹಕ್ಕಿಗಳು ಬಲು ನಾಜೂಕು; ಅದರಲ್ಲೂ ಮರಿಗಳು ಅತ್ಯಂತ ನಾಜೂಕು. ಆದ್ದರಿಂದ ಅವುಗಳನ್ನು ಮುಟ್ಟಬಾರದು, ಹೆದರಿಸಲೂಬಾರದು. ಸಣ್ಣ ಹಕ್ಕಿಗಳು ಅತಿ ದುರ್ಬಲ ಮತ್ತು ಅವುಗಳ ಎದೆಯ ಮೇಲೆ ಸ್ವಲ್ಪ ಒತ್ತಡ ಬಿದ್ದರೂ ಸತ್ತೇ ಹೋಗುವ ಪ್ರಮೇಯವಿದೆ. ಗಾಯಗೊಂಡ ಹಕ್ಕಿಗಳ ಶುಶ್ರೂಷೆಗೆ ಅಥವಾ ಇನ್ನಾವುದೇ ಕಾರಣಕ್ಕಾಗಿ ಅವುಗಳನ್ನು ಹಿಡಿಯುವುದು ಅನಿವಾರ್ಯವಾದಲ್ಲಿ ಬಹು ಎಚ್ಚರದಿಂದ ತೋರುಬೆರಳು ಮತ್ತು ಮಧ್ಯದ ಬೆರಳುಗಳ ನಡುವೆ ಹಕ್ಕಿಯ ಕತ್ತು ಬರುವಂತೆ, ಅಂಗೈಯಲ್ಲಿ ಅವುಗಳ ರೆಕ್ಕೆ ಮುದುಡದ ಹಾಗೆ ಹಗುರವಾಗಿ ಎತ್ತಿ ಹಿಡಿದು ಪರೀಕ್ಷಿಸಬೇಕು. ಅವು ಬೆನ್ನಿನ ಮೇಲೆ ಮಲಗಿರುವವರೆಗೂ ತಟಸ್ಥವಾಗಿರುತ್ತವೆ. ಪುನಃ ಅವುಗಳನ್ನು ಹಾರಿಸಲು ಹಿಡಿತವನ್ನು ಹಿಂದಿರುಗಿಸಿ ನಂತರ ಬಿಡಬೇಕು.
ಪ್ರಾರಂಭದಲ್ಲಿ ಪುಸ್ತಗಳ ನೆರವಿನಿಂದ ಸಾಮಾನ್ಯವಾಗಿ ಸುತ್ತಮುತ್ತ ಕಾಣುವ ಪಕ್ಷಿಗಳನ್ನು ಗುರುತಿಸಬೇಕು. ಹಕ್ಕಿಗಳು ಎಲೆಗಳ ನಡುವೆ ಅವಿತಿರುವಾಗ, ಕುಳಿತಲ್ಲಿ ಕೂರದೆ ಹಾರುತ್ತಿರುವಾಗ, ಸೂರ್ಯನ ಪ್ರಭೆಗೆ, ಅಥವಾ ನೆರಳಿನಲ್ಲಿ, ಅವುಗಳನ್ನು ಸುಲಭವಾಗಿ, ಸ್ಪಷ್ಟವಾಗಿ ಗುರುತಿಸಲು ಕಷ್ಟಸಾಧ್ಯ. ಇಂತಹ ಸಂದರ್ಭಗಳಲ್ಲಿ ಅವುಗಳ ಬಣ್ಣ ಮಾತ್ರದಿಂದಲ್ಲದೆ, ಕೊಕ್ಕು, ಜುಟ್ಟು, ಕಾಲುಗಳು, ಬಾಲ ಮುಂತಾದ ಚಹರೆ ಮತ್ತು ಅವುಗಳ ಚಲನವಲನ, ಹಾರಾಟದ ವೈಖರಿ, ಅಲ್ಲದೆ ಅವುಗಳ ಕೂಗು ಮತ್ತು ಇಂಚರದಿAದ ಆ ಹಕ್ಕಿಯನ್ನು ಕಂಡುಹಿಡಿಯಬಹುದು.
ವಿವಿಧ ಪ್ರದೇಶದಲ್ಲಿ ವಾಸಿಸುವ ಹಕ್ಕಿಗಳ ಜೀವನ ಚರಿತ್ರೆಯನ್ನು ತಿಳಿದು, ಅವು ಇತರ ಜೀವಿಗಳೊಡನೆ ಹೊಂದಿರುವ ನಿಕಟ ಸಂಬAಧವನ್ನು ಅರಿಯುವುದು ಪಕ್ಷಿವೀಕ್ಷಣೆಯ ಒಂದು ಉದ್ದೇಶ. ಈ ಕಾರ್ಯಕ್ಕೆ ಹೆಚ್ಚಿನ ತಾಳ್ಮೆ ಮತ್ತು ಸಾಧನೆ ಅಗತ್ಯ. ಪಕ್ಷಿವೀಕ್ಷಣೆಯನ್ನು ನೀವು ಎರಡು ರೀತಿ ಮಾಡಬಹುದು: ೧. ಒಂದು ನಿರ್ದಿಷ್ಟ ಸ್ಥಳಕ್ಕೆ ವರ್ಷಪೂರ್ತಿ ಭೇಟಿ ನೀಡಿ, ಪಕ್ಷಿಗಳ ಚಲನವಲನ, ನಡವಳಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು. ೨. ದೇಶದ ವಿವಿಧೆಡೆ ಸುತ್ತಾಡಲು ಅವಕಾಶ, ಆಸಕ್ತಿ ಮತ್ತು ಸಮಯವಿರುವವರು ಬೇರೆ ಬೇರೆ ಆವಾಸಗಳಲ್ಲಿರುವ ವಿವಿಧ ಪ್ರಭೇದದ ಹಕ್ಕಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು. ಇವೆಲ್ಲವೂ ಮುಂದೆ ನಿಮ್ಮ ಪರಿಶೀಲನೆಗೆ ಸಹಾಯವಾಗುವುದು. ವಿವಿಧ ಸ್ಥಳಗಳಲ್ಲಿ, ವಿವಿಧ ಋತುಗಳಲ್ಲಿ ಹಕ್ಕಿಗಳ ಜಾತಿ ಮತ್ತು ಸಂಖ್ಯೆ ಬದಲಾಗುತ್ತದೆ. ಪ್ರತಿಯೊಂದು ಹಕ್ಕಿಯಲ್ಲೂ ಒಂದು ನಿರ್ದಿಷ್ಟ ಜೀವನ ಚಕ್ರವನ್ನು ನಾವು ಕಾಣುತ್ತೇವೆ. ಈ ಚಕ್ರದಲ್ಲಿ ಏನಾದರೂ ಬದಲಾವಣೆಯಾದಲ್ಲಿ - ಅದು ಎಷ್ಟೇ ಚಿಕ್ಕದಾದರೂ - ಅದಕ್ಕೊಂದು ಕಾರಣವಿರುತ್ತದೆ ಎಂಬುದನ್ನು ಮನಗಾಣಬೇಕು.
ನೀವು ಶ್ರದ್ಧೆಯಿಂದ, ಲಕ್ಷ÷್ಯವಿಟ್ಟು ಗಮನಿಸಿದ ವಿಷಯಗಳನ್ನು ಕ್ಲಿಪ್ತವಾಗಿ, ಪ್ರಾಮಾಣಿಕವಾಗಿ ಬರೆದಿಟ್ಟುಕೊಂಡಲ್ಲಿ, ಮುಂದೆ ಅದು ಪಕ್ಷಿಗಳ ನಡವಳಿಕೆ, ಆವಾಸ, ಸಂಖ್ಯೆ ಮುಂತಾದುವುಗಳ ಬಗ್ಗೆ ವಿಶ್ವಾಸಾರ್ಹವಾದ ದಾಖಲೆ ಅಥವಾ ಮಾಹಿತಿಯಾಗುತ್ತದೆ. ನಿಮ್ಮ ಈ ಸಮೀಕ್ಷೆಗಳನ್ನು ಇತರ ಪಕ್ಷಿವೀಕ್ಷಕರೊಂದಿಗೆ, ಪಕ್ಷಿತಜ್ಞರೊಂದಿಗೆ ಪತ್ರಮುಖೇನ, ವಿವಿಧ ನಿಯತಕಾಲಿಕಗಳ ಮೂಲಕ ಅಥವಾ ಅಂತರ್ಜಾಲದ ಮೂಲಕ ಪರಸ್ಪರ ವಿಚಾರ ವಿನಿಮಯ ಮಾಡಬಹುದು.
ಇದೇ ರೀತಿ, ಈ ಹಿಂದಿನ ಪಕ್ಷಿವೀಕ್ಷಕರೂ, ಪಕ್ಷಿತಜ್ಞರೂ ಕೂಡಿಟ್ಟ ಮಾಹಿತಿಯ ಆಧಾರದಿಂದಲೇ ಇಂದು ಪಕ್ಷಿಲೋಕದ ಅದ್ಭುತಗಳ ಪರಿಚಯ ನಮಗಾಗಿರುವುದು! ನೀವು ಕಂಡ ಹೊಸ ವಿಚಾರವು ಪಕ್ಷಿತಜ್ಞರಿಗೆ ಬಹುಮುಖ್ಯ ವೈಜ್ಞಾನಿಕ ಸಂಶೋಧನಾ ವಿಷಯವಾಗಬಲ್ಲದು.
ಹೀಗೆ ಪಕ್ಷಿವೀಕ್ಷಣೆ ಎಂಬ ಹವ್ಯಾಸ, ಮನಸ್ಸಿಗೆ ಆಹ್ಲಾದಕರವೂ, ದೇಹಕ್ಕೆ ವ್ಯಾಯಾಮವೂ, ಸಮಾಜಕ್ಕೆ ಉಪಯುಕ್ತವೂ ಆಗಿರುವುದಲ್ಲದೆ, ಅನೇಕ ವೈಜ್ಞಾನಿಕ ಸಂಶೋಧನೆಗಳಿಗೂ ಅಡಿಪಾಯವಾಗುತ್ತವೆ. ಆದ್ದರಿಂದಲೇ, ಇದನ್ನು ಒಂದು ಪರಿಪೂರ್ಣ ಹವ್ಯಾಸ ಎಂದು ಕರೆಯಬಹುದು.
ಪಕ್ಷಿಗಳ ವಲಸೆ
ಹಕ್ಕಿಗಳ ವಲಸೆ, ಪಕ್ಷಿಶಾಸ್ತçಗಳಲ್ಲೆಲ್ಲಾ ಅತಿ ರೋಮಾಂಚನಕಾರಿಯಾದ ವಿಷಯ. ಅವುಗಳ ಹಾರಾಟದ ದೂರ, ಕರಾರುವಾಕ್ಕಾದ ಹಾಗೂ ಶಿಸ್ತಾದ ಓಡಾಟ, ಇವು ವರ್ಷದ ಋತುಗಳನ್ನೂ ಮೀರಿಸುತ್ತವೆ. ಮನುಷ್ಯನ ಕುತೂಹಲವನ್ನು ಯುಗಯುಗಗಳಿಂದಲೂ ಪಕ್ಷಿಗಳ ವಲಸೆ ಹೆಚ್ಚಿಸುತ್ತಲೇ ಇದೆ. ರೆಡ್ ಇಂಡಿಯನ್ನರು ಅವರ ತಿಂಗಳುಗಳನ್ನು ಹಕ್ಕಿಗಳ ಆಗಮನದಿಂದಲೇ ಹೆಸರಿಸುತ್ತಿದ್ದರಂತೆ.
ವೈಜ್ಞಾನಿಕ ಬೆಳವಣಿಗೆಯೊಂದಿಗೆ, ಹಕ್ಕಿಗಳ ವಲಸೆಯ ಬಗ್ಗೆ ಎಷ್ಟೋ ವಿಚಾರಗಳು ಇಂದು ನಮಗೆ ತಿಳಿದಿವೆಯಾದರೂ ಇನ್ನೆಷ್ಟೋ ವಿಚಾರಗಳು ಇನ್ನೂ ನಿಗೂಢವಾಗಿವೆ. ಸಾಮಾನ್ಯವಾಗಿ ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಬಾಲಾಡಿ, ಸುವರ್ಣ, ಕೊಕ್ಕರೆ ಮುಂತಾದ ಹಕ್ಕಿಗಳು ಇದ್ದಕ್ಕಿದ್ದಂತೆ ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಕಾಣಿಸಿಕೊಳ್ಳುವುದನ್ನು ನಾವೆಲ್ಲಾ ಗಮನಿಸಿದ್ದೇವೆ. ಕೆಲವೇ ದಶಕಗಳ ಹಿಂದೆ, ಬಾಲಾಡಿ, ಕೋಗಿಲೆ ಮುಂತಾದ ಹಕ್ಕಿಗಳು ಎಲ್ಲೋ ಹಿಮಗಳ ಮಧ್ಯೆ ಉಳಿದ ಪ್ರಾಣಿಗಳಂತೆ ನಿಶ್ಚೇಷ್ಟವಾಗಿರುತ್ತವೆಂದು ಜನ ನಂಬಿದ್ದರು.
ವಲಸೆಯೆAದರೆ, ಉತ್ತಮ ಪರಿಸರವನ್ನು ಹೊಂದಲು, ಒಂದೆಡೆಯಿAದ ಮತ್ತೊಂದೆಡೆಗೆ, ಮತ್ತೆ ಅಲ್ಲಿಗೇ ಹಿಂದಿರುಗುವAತೆ, ಪಕ್ಷಿಗಳು ನಡೆಸುವ ನಿಯತಕಾಲಿಕ ಓಡಾಟ. ಗಡಿಯಾರದ ಲೋಲಕದಂತೆ ವರ್ಷ ವರ್ಷ ನಡೆಯುವ ಈ ಸಂಚಾರ, ಪ್ರಪಂಚದ ಎಷ್ಟೋ ಸಸ್ತನಿಗಳಲ್ಲಿ ಹಾಗು ಜಲಚರಗಳಲ್ಲಿಯೂ ಇದೆ. ಆದರೂ ಪಕ್ಷಿಗಳ ಬಿಸಿರಕ್ತದ ಒಡಲು, ಗರಿಗಳಿಂದಾವೃತವಾದ ದೇಹ ಮತ್ತು ಹಾರಾಟದ ಶಕ್ತಿ ಇವುಗಳಿಂದಾಗಿ ಪಕ್ಷಿಗಳಲ್ಲಿ ವಲಸೆ ಹೋಗುವ ಸ್ವಭಾವ ಗರಿಷ್ಟ ಪ್ರಮಾಣದಲ್ಲಿ ಎದ್ದುಕಾಣುತ್ತದೆ. ಹಕ್ಕಿಗಳಿಗೆ, ಸ್ವಾಭಾವಿಕವಾಗಿಯೇ ನೈಸರ್ಗಿಕ ಕಷ್ಟಾವಸ್ಥೆಗಳನ್ನು ತಡೆದುಕೊಳ್ಳುವ ಶಕ್ತಿಯಿದೆ. ಆದರೂ, ಅತಿ ಶೀತ ಪ್ರದೇಶಗಳಲ್ಲಿ ವರ್ಷದ ಹಲವು ತಿಂಗಳು ಹಿಮಪಾತವಾಗುವುದರಿಂದ ಆಹಾರದ ಕೊರತೆ ಉದ್ಭವಿಸುತ್ತದೆ. ಹೀಗಾಗಿ ಆಹಾರದ ಅನ್ವೇಷಣೆಯಲ್ಲಿ ವಲಸೆ ಹೋಗುವುದು ಅನಿವಾರ್ಯವಾಗುತ್ತದೆ.
ವರ್ಷದ ಒಂದೇ ಸಮಯದಲ್ಲಿ, ಭೂಮಿಯ ಎರಡು ಪ್ರದೇಶಗಳಲ್ಲಿ ಋತುಗಳಿಗನುಸಾರವಾಗಿ ಒಂದು ಕಡೆ ವಿಷಮ ಪರಿಸ್ಥಿತಿಯೂ ಮತ್ತೊಂದೆಡೆ ಅನುಕೂಲಕರವಾದ ಪರಿಸ್ಥಿತಿಯೂ ಇರುವುದರಿಂದ ಈ ಗುಣಗಳನ್ನು ಪಕ್ಷಿಗಳು ತಮ್ಮ ಬದುಕಿಗೆ ಸಮರ್ಥವಾಗಿ ಬಳಸಿಕೊಳ್ಳುತ್ತವೆ.
ಒಂದು ಹಕ್ಕಿಯ ವಲಸೆಯಲ್ಲಿ ಎರಡು ನಿರ್ದಿಷ್ಟ ಗಮ್ಯಸ್ಥಾನಗಳಿವೆ. ಒಂದು, ಪಕ್ಷಿಗಳು ಗೂಡುಕಟ್ಟಿ ಮರಿಮಾಡುವ ತಾಣ. ಇದನ್ನು ಹಕ್ಕಿಗಳ ಮನೆಯೆನ್ನಬಹುದು. ಎರಡು, ಆಹಾರವನ್ನು ಸಂಗ್ರಹಿಸುವ ಮತ್ತು ವಿಶ್ರಾಂತಿ ಪಡೆಯುವ ತಾಣ.
ಪಕ್ಷಿಗಳು ವಲಸೆ ಹೋಗುವ ದೂರ ಹಲವು ಹತ್ತು ಕಿ.ಮೀಗಳಿಂದ ಸಾವಿರಾರು ಕಿ.ಮೀ.ವರೆಗೂ ಇರುತ್ತದೆ. ಉದಾಹರಣೆಗೆ, ಭಾರತದ ಗಂಗಾಬಯಲಿನಲ್ಲಿ ವಾಸಿಸುವ ಕೆಲವು ಹಕ್ಕಿಗಳು ಹಿಮಾಲಯದ ತಪ್ಪಲಿಗೆ ವಲಸೆ ಹೋದರೆ, ಮತ್ತೆ ಕೆಲವು ಹಕ್ಕಿಗಳು ಸಾವಿರಾರು ಕಿ.ಮೀ ದಾಟಿ ಭಾರತಕ್ಕೆ ಬರುತ್ತವೆ. ಪ್ರಪಂಚದಲ್ಲಿಯೇ ಅತಿ ದೂರ ವಲಸೆ ಪ್ರಯಾಣ ಮಾಡುವ ಹಕ್ಕಿ ಆರ್ಕ್ಟಿಕ್ ಟರ್ನ್. ಇದು ಉತ್ತರ ಧ್ರುವ ಪ್ರದೇಶದಿಂದ ವಲಸೆ ಹೊರಟು ಭೂಗೋಳವನ್ನೇ ಸವೆಸಿ, ದಕ್ಷಿಣ ಧ್ರುವ ಪ್ರದೇಶವನ್ನು ಬೇಸಿಗೆಯಲ್ಲಿ ತಲುಪುತ್ತದೆ. ನಂತರ, ಪುನಃ ಉತ್ತರ ಧ್ರುವಕ್ಕೆ ವಾಪಸಾಗುತ್ತದೆ. ವರ್ಷಂಪ್ರತಿ ಈ ಹಕ್ಕಿಗಳು ವಲಸೆ ಹೋಗುವ ಒಟ್ಟು ದೂರ ೩೫,೦೦೦ ಕಿ.ಮೀಗಳು!
ಪಕ್ಷಿಗಳ ವಲಸೆ ಸಾಧಾರಣವಾಗಿ ಉತ್ತರದಿಂದ ದಕ್ಷಿಣಕ್ಕೆ ಇರುವುದಾದರೂ, ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಕೂಡಾ ಕೆಲವು ಹಕ್ಕಿಗಳು ವಲಸೆ ಹೋಗುತ್ತವೆ. ಪೂರ್ವದಿಂದ ಪಶ್ಚಿಮಕ್ಕೆ ವಲಸೆ ಹೋಗುವ ಹಕ್ಕಿಗಳಲ್ಲಿ ಒಂದು ಸೋಜಿಗದ ಸಂಗತಿಯನ್ನು ಕಾಣಬಹುದು. ಇಲ್ಲಿ ಕೆಲವು ಪಕ್ಷಿಗಳು ತಾವಿರುವ ತಾಣದಿಂದ ಅದೇ ರೀತಿ ಹವಾಮಾನವಿರುವ ಇನ್ನೊಂದು ಪ್ರದೇಶಕ್ಕೆ ಅಥವಾ ಕೆಲವೇ ಕಿ.ಮೀ ದೂರವಿರುವ ಪ್ರದೇಶಕ್ಕೆ ವಲಸೆ ಹೋಗುತ್ತವೆ. ಹೀಗೆ ಸ್ಥಳೀಯ ವಲಸೆ ಕ್ರಮಗಳು ಹೇಗೆ ಉಪಯುಕ್ತ ಅಥವಾ ಅವುಗಳ ಜೀವನಕ್ಕೆ ಹೇಗೆ ಮುಖ್ಯ ಎಂಬುದನ್ನು ಅರಿಯಲು ಇನ್ನೂ ಸಾಧ್ಯವಾಗಿಲ್ಲ. ಉದಾಹರಣೆಗೆ, ಸುವರ್ಣಪಕ್ಷಿ ಮತ್ತು ನೊಣಹಿಡುಕಗಳು ಮಳೆಗಾಲದಲ್ಲಿ ಪಶ್ಚಿಮ ಭಾರತದ ಪಟ್ಟಣಗಳನ್ನು ತ್ಯಜಿಸಿ ಮಧ್ಯ ಭಾರತದ ಒಳನಾಡು ಮತ್ತು ದಕ್ಷಿಣ ಪ್ರಸ್ಥಭೂಮಿಯೆಡೆಗೆ ಹೋಗಿ, ಸೆಪ್ಟೆಂಬರ್ ತಿಂಗಳಲ್ಲೇ ಹಿಂದಿರುಗುತ್ತವೆ.
ಹಕ್ಕಿಗಳು ವಲಸೆ ಹೋಗುವುದು ಏಕೆ ಮತ್ತು ಹೇಗೆ ಎಂಬ ವಿಚಾರದಲ್ಲಿ ಅನೇಕ ವೈಜ್ಞಾನಿಕ ಸಿದ್ಧಾಂತಗಳು ಇದ್ದರೂ ಯಾವೊಂದು ಸಿದ್ಧಾಂತವೂ ಸಮರ್ಪಕವಾಗಿ ಉತ್ತರಿಸಲು ಸಾಧ್ಯವಾಗಿಲ್ಲ. ಹಕ್ಕಿಗಳ ವಲಸೆಯ ಬಗ್ಗೆ ಹೇಳುವಾಗ ನಾವು ಕೆಲವೊಂದು ವಾಸ್ತವಾಂಶಗಳನ್ನು ಮನಗಾಣಬಹುದು. ೧. ಧ್ರುವ
ಪ್ರದೇಶಗಳಲ್ಲಿ ಹಕ್ಕಿಗಳು ಚಳಿ ಮತ್ತು ಹಿಮಗಾಳಿಯನ್ನು ತಪ್ಪಿಸಿಕೊಳ್ಳಬೇಕಾಗುವುದು. ೨. ಕೆಲವು ತಿಂಗಳ ಕಾಲ ಇಂತಹ ಪ್ರದೇಶಗಳಲ್ಲಿ ಹಗಲು ಕಡಿಮೆಯಿರುವುದರಿಂದ ಆಹಾರ ಹುಡುಕಲು ಕಷ್ಟವಾಗುವುದು. ೩. ಹೆಪುö್ಪಗಟ್ಟಿದ ವಾತಾವರಣದಲ್ಲಿ ಆಹಾರದ ಕೊರತೆಯೂ ಕಂಡುಬರುವುದು. ಈ ಕುಂದುಕೊರತೆಗಳನ್ನೆಲ್ಲಾ ಅವು ಮತ್ತೊಂದು ಗಮ್ಯಸ್ಥಾನದಲ್ಲಿ ನೀಗಿಕೊಳ್ಳಬಲ್ಲವು.
ದೂರ ಪ್ರಯಾಣ ಆರಂಭಿಸುವುದಕ್ಕೆ ಮುಂಚೆ, ವಲಸೆಹೋಗುವ ಪಕ್ಷಿಗಳು ಅನೇಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತವೆ. ಪ್ರಯಾಣದ ಸಮಯದಲ್ಲಿ ಪೋಷಕವಾಗುವಂತೆ, ಹೆಚ್ಚು ಹೆಚ್ಚು ತಿಂದು ಒಂದು ಪದರು ಅಧಿಕ ಕೊಬ್ಬನ್ನು ದೇಹದಲ್ಲಿ ಶೇಖರಿಸಿಕೊಳ್ಳುತ್ತವೆ; ವೃತ್ತಾಕಾರವಾಗಿ ಅಥವಾ ಗುಂಪಾಗಿ ಹಾರುವುದನ್ನು ಅಭ್ಯಾಸ ಮಾಡಿಕೊಳ್ಳುತ್ತವೆ. ವಲಸೆಯಲ್ಲಿ ಹೆಚ್ಚಿನ ಹಕ್ಕಿಗಳು ದೊಡ್ಡ ಇಲ್ಲವೆ ಸಣ್ಣ ಗುಂಪಾಗಿ ಹಾರಿದರೆ, ಕೆಲವು ಪ್ರಭೇದದ ಹಕ್ಕಿಗಳು ಒಂಟಿಯಾಗಿಯೇ ಹಾರುತ್ತವೆ. ಸಣ್ಣ ಪಕ್ಷಿಗಳು ಗಂಟೆಗೆ ಸುಮಾರು ಮೂವತ್ತು ಕಿ.ಮೀ ಹಾರಿದರೆ, ದೊಡ್ಡ ಹಕ್ಕಿಗಳು ಎಂಭತ್ತು ಕಿ.ಮೀ ವೇಗದಲ್ಲಿ ಹಾರಬಲ್ಲವು. ಸಾಮಾನ್ಯವಾಗಿ ಎಲ್ಲಾ ಪಕ್ಷಿಗಳು ದಿನಕ್ಕೆ ಎಂಟು ತಾಸು ಪ್ರಯಾಣ ಮಾಡಬಲ್ಲವು.
ಸಮುದ್ರವನ್ನು ದಾಟಬೇಕಾದಲ್ಲಿ ಬಹುದೂರ ಸಾಗಬೇಕಾದ್ದು ಅನಿವಾರ್ಯವಾದಾಗ ಕೆಲವು ಹಕ್ಕಿಗಳು ಅವಿಶ್ರಾಂತವಾಗಿ ೩೫ರಿಂದ ೩೮ ಗಂಟೆ ಹಾರುವ ಸಂದರ್ಭವೂ ಇದೆ. ಅಲ್ಲದೆ, ಹಕ್ಕಿಗಳು ಅಲ್ಲಲ್ಲಿ ತಂಗುವ ಸ್ಥಳಗಳಲ್ಲಿ ಪ್ರತಿಕೂಲ ವಾತಾವರಣಕ್ಕೂ, ರಭಸದ ಗಾಳಿಗೂ ಸಿಲುಕಿ ಸಾವು-ನೋವುಗಳು ಅಧಿಕವಾಗುವ ಸಂಭವವೂ ಇದೆ. ಹೀಗಾಗಿ, ವಲಸೆ ಪ್ರಯಾಣ ಬಹಳ ಕಷ್ಟದಾಯಕವೂ, ಶ್ರಮಭರಿತವೂ ಅಲ್ಲದೆ ಅನೇಕ ವೇಳೆ ಅಪಾಯಕಾರಿಯೂ ಹೌದು.
ಹಗಲು ಹೊತ್ತು ವಲಸೆ ಹಾರುವ ಹಕ್ಕಿಗಳಿಗೆ ಸೂರ್ಯನೇ ದಿಕ್ಸೂಚಿಯಾಗಿರುತ್ತಾನೆ. ಆಕಾಶದಲ್ಲಿ ಸೂರ್ಯನಿರುವ ಕೋನವನ್ನನುಸರಿಸಿ ವಲಸೆ ಪಕ್ಷಿಗಳು ತಮ್ಮ ಪ್ರಯಾಣವನ್ನು ಮುಂದುವರಿಸುತ್ತವೆ. ಮಂಜು-ಮೋಡ ಮುಸುಕಿದ ವಾತಾವರಣದಲ್ಲಿ ಅವು ದಾರಿತಪುö್ಪತ್ತವೆಂದು ತಿಳಿದಿದೆ. ಆದರೆ ಒಂದು ಸಾರಿ ಸೂರ್ಯನು ಮೋಡಗಳಿಂದ ಹೊರಬಂದರೆ, ಅವು ತಮ್ಮ ದಿಕ್ಕನ್ನು ಸರಿಪಡಿಸಿಕೊಳ್ಳುತ್ತವೆ.
ರಾತಿ ್ರವೇಳೆಯ ಪ್ರಯಾಣ ಹೆಚ್ಚು ಸುರಕ್ಷಿತ. ಈ ವೇಳೆಯಲ್ಲಿ ಇತರ ಪ್ರಾಣಿಗಳಿಂದ ಜೀವಕ್ಕೆ ತೊಂದರೆಯಿಲ್ಲದಿರುವುದೇ ಇದಕ್ಕೆ ಕಾರಣ. ರಾತ್ರಿವೇಳೆ ನಕ್ಷತ್ರಗಳು ಹಾಗೂ ನಕ್ಷತ್ರಪುಂಜಗಳೇ ಈ ಹಕ್ಕಿಗಳಿಗೆ ಮಾರ್ಗದರ್ಶಿ.
ವಲಸೆ ಪ್ರಕ್ರಿಯೆಯಲ್ಲಿ ಒಟ್ಟು ಮೂರು ವಿಚಾರಗಳನ್ನು ನಾವು ಗಮನಿಸಬಹುದು: ೧. ವಲಸೆ ಹೋಗಲು ಅಧಿಸೂಚನೆ ೨. ಗಮ್ಯಸ್ಥಾನದ ದಾರಿಸೂಚಿ ೩. ಮತ್ತೆ ಹೊರಟ ಸ್ಥಳಕ್ಕೆ ವಾಪಸಾಗಲು ಅಧಿಸೂಚನೆ.
ವಲಸೆ ಹೋಗುವ ಸಮಯ ಬಂದಾಗ ಹಕ್ಕಿಗೆ ಮತ್ತೊಂದು ಪ್ರದೇಶಕ್ಕೆ ಹೋಗಲು ಹೇಗೆ ತಿಳಿಯುತ್ತದೆ? ಇದು ಬಹಳ ಕ್ಲಿಷ್ಟವಾದ ಪ್ರಶ್ನೆ. ವಿಜ್ಞಾನಿಗಳು ಎಷ್ಟೋ ರೀತಿ ಉತ್ತರಿಸಲು ಪ್ರಯತ್ನಿಸಿದರೂ ಒಂದು ಒಮ್ಮತಕ್ಕೆ ಬಂದಿಲ್ಲ. ಧ್ರುವಪ್ರದೇಶಗಳಲ್ಲಿ, ಆ ಕಾಲಕ್ಕೆ ಪ್ರತಿದಿನ ಬೇಗನೆ ಕತ್ತಲು ಕವಿಯುವುದರಿಂದ, ಹಗಲು ಸಣ್ಣದಾಗುತ್ತ ಹೋಗುವುದು. ಅದೇ ವೇಳೆಗೆ ಹೆಣ್ಣು ಹಕ್ಕಿಯು ಗರ್ಭ ಧರಿಸಲು ತಯಾರಾಗುವುದು ಮತ್ತೊಂದು ಕಾರಣ. ಏಕೆಂದರೆ ಗರ್ಭ ಧರಿಸದ ಹಕ್ಕಿಯಲ್ಲಿ ವಲಸೆ ಹೋಗುವ ಪ್ರವೃತ್ತಿ ಇಲ್ಲದಿರುವುದು ಮೇಲಿನ ಕಾರಣಕ್ಕೆ ಸಮರ್ಥನೆ ನೀಡುತ್ತದೆ.
ಇನ್ನು ಆ ಹಕ್ಕಿಗಳಿಗೆ ಗಮ್ಯಸ್ಥಾನ ಹಾಗೂ ಅಲ್ಲಿಗೆ ತಲುಪುವ ದಾರಿ ತಿಳಿಯುವುದಾದರೂ ಹೇಗೆ?
ಇದು ಮತ್ತೊಂದು ಕಠಿಣ ಪ್ರಶ್ನೆ. ವಸಂತಋತುವಿನಲ್ಲಿ ಮೊದಲು ಬಂದು ತಲುಪುವುದು ಗಂಡು ಹಕ್ಕಿಗಳು. ನಂತರ ಹೆಣ್ಣುಹಕ್ಕಿಗಳೂ, ಕೊನೆಯಲ್ಲಿ ಮರಿಹಕ್ಕಿಗಳೂ ಬರುತ್ತವೆ. ಚಳಿಗಾಲದಲ್ಲಿ ಹಕ್ಕಿಗಳು ಹಿಂದಿರುಗುವಾಗ ಈ ಕ್ರಮ ವಿರುದ್ಧವಾಗುವುದನ್ನು ನಾವು ಕಾಣುತ್ತೇವೆ. ಅಂದರೆ, ಹಿಂದಿರುಗುವಾಗ ಉಳಿದ ಹಕ್ಕಿಗಳಿಗೆ ಮಾರ್ಗದರ್ಶಕರಾಗಿ ಮರಿಹಕ್ಕಿಗಳು ಹೋದರೆ, ಕೊನೆಯಲ್ಲಿ ಗಂಡುಹಕ್ಕಿಗಳು ತಲುಪುತ್ತವೆ! ಆಶ್ಚರ್ಯಕರ ವಿಚಾರವೆಂದರೆ, ಹಿಂದಿರುಗುವಾಗ ಮರಿಹಕ್ಕಿಗಳು, ಅಂದರೆ, ಇದೇ ಮೊದಲ ಬಾರಿಗೆ ವಲಸೆ ಹಾರುತ್ತಿರುವ ಮರಿಹಕ್ಕಿಗಳಿಗೆ ತಮ್ಮ ಪೋಷಕರು ಮೊದಲು ಹೊರಟ ಸ್ಥಳವನ್ನೇ ನೇರವಾಗಿ ತಲುಪಲು ಹೇಗೆ ಸಾಧ್ಯ? ಅಲ್ಲದೆ, ೬೦೦ರಿಂದ ೧,೨೦೦ ಮೀಟರ್ ಎತ್ತರದಲ್ಲಿ ಹಾರುತ್ತಿರುವಾಗ ಭೂಮಿಯ ಮೇಲಿನ ಸಣ್ಣ-ಪುಟ್ಟ ಹೆಗ್ಗುರುತುಗಳು ಈ ಹಕ್ಕಿಗಳಿಗೆ ಸಹಾಯಕಾರಿಯಾಗುವ ಸಂಭವವೇ ಇಲ್ಲವೆನ್ನಬಹುದು. ಈ ವಿಸ್ಮಯಕರ ಕಾರ್ಯಕ್ಕೆ ಕಾರಣ ಸಾವಿರಾರು ವರ್ಷಗಳಿಂದ ಅನುವಂಶೀಯವಾಗಿ ಈ ಹಕ್ಕಿಗಳಲ್ಲಿ ಬಂದAತಹ ಹುಟ್ಟರಿವು ಎಂಬುದು ನಿಸ್ಸಂಶಯ. ಇದಕ್ಕೆ ಪೂರಕವಾಗಿ ಹಕ್ಕಿಗಳ ಮೆದುಳಿನಲ್ಲಿರುವ ಅಯಸ್ಕಾಂತೀಯ ಶಕ್ತಿಯೂ ದಿಕ್ಸೂಚಿಯಂತೆ ಕೆಲಸ ನಿರ್ವಹಿಸುತ್ತದೆ. ಹುಟ್ಟಿನಿಂದಲೇ ಬರುವ ಇಂತಹ ಸಹಜ ಪ್ರವೃತ್ತಿಯನ್ನು ಹಕ್ಕಿಗಳು ಗೂಡುಕಟ್ಟುವ ವಿಚಾರದಲ್ಲಿಯೂ ನಾವು ಕಾಣಬಹುದು. ಗೀಜಗ, ಸಿಂಪಿಗ ಮುಂತಾದ ಪಕ್ಷಿಗಳು ಯಾವುದೇ ಸಹಾಯ, ಹಿಂದಿನ ಅನುಭವ ಅಥವಾ ತರಬೇತಿಯಿಲ್ಲದೆಯೇ ಅಚ್ಚುಕಟ್ಟಾಗಿ ಅವುಗಳ ಗೂಡನ್ನು ಕಟ್ಟಬಲ್ಲವು.
ತಮ್ಮ ಮೂಲಸ್ಥಾನಕ್ಕೆ ಹಿಂದಿರುಗುವ ವಿಚಾರದಲ್ಲಿಯೂ ಹಕ್ಕಿಗಳು ಅಷ್ಟೇ ನಿಖರವಾಗಿ ನಿರ್ದಿಷ್ಟ ದಿಕ್ಕಿನಲ್ಲಿ ಪ್ರಯಾಣ ಮಾಡುತ್ತವೆ. ಸರಿಸುಮಾರು ಪ್ರತಿಬಾರಿಯೂ ಅದೇ ಸ್ಥಳವನ್ನು ಮಾತ್ರವಲ್ಲದೆ ಅದೇ ಮರದ ಮೇಲೆ ಕಳೆದ ವರ್ಷದ ಗೂಡನ್ನೇ ಆಶ್ರಯಿಸುವುದು ಮತ್ತೊಂದು ಸೋಜಿಗದ ಸಂಗತಿ. ತಮ್ಮ ಹಳೆಯ ಜಾಗವನ್ನು ಈ ಹಕ್ಕಿಗಳು ನೆನಪಿನಲ್ಲಿಟ್ಟುಕೊಳ್ಳಬಲ್ಲವೆಂಬುದು ಇದರಿಂದ ಸಾಬೀತಾಗುವುದು.
ಪ್ರತಿವರ್ಷ ತಪ್ಪದೆ ಅದೇ ದಿನ, ಅದೇ ಸ್ಥಳಕ್ಕೆ, ಕರಾರುವಾಕ್ಕಾಗಿ ಒಂದು ಹಕ್ಕಿ ನಿರ್ದಿಷ್ಟ ದಾರಿಯನ್ನನುಸರಿಸಿ, ಸಾವಿರಾರು ಕಿ.ಮೀಗಳ ಪ್ರಯಾಣವನ್ನು ಮಾಡಿ ತಲುಪುತ್ತದೆ ಎನ್ನುವುದು ಯಾರಿಗೂ ಆಶ್ಚರ್ಯವನ್ನುಂಟುಮಾಡದಿರದು. ಉದಾಹರಣೆಗೆ, ಚಳಿಗಾಲದಲ್ಲಿ, ಕೇರಳದಲ್ಲಿ ಉಂಗುರ ಹಾಕಿದ ಒಂದು ಹಳದಿ ಬಾಲಾಡಿ, ಮುಂದಿನ ವಸಂತದಲ್ಲಿ ಕಾಬುಲ್ ಮತ್ತು ಅ¥s಼Á್ಘನಿಸ್ತಾನದಲ್ಲಿ ಕಾಣಸಿಕ್ಕಿದೆ. ಹಿಮಾಲಯದ ಯಾವುದೋ ಭಾಗದಲ್ಲಿ ಮರಿಮಾಡುವ ಬೂದುಬಾಲಾಡಿ, ಸುಮಾರು ೨,೦೦೦ ಕಿಮೀ ದೂರ ಹಾರಿ ಪ್ರತಿವರ್ಷ ಸೆಪ್ಟೆಂಬರ್ ೬ನೇ ತಾರೀಕು ನಮ್ಮ ಮನೆಯ ತೋಟಕ್ಕೆ ಬರುವುದನ್ನು ನಾನು ಕಳೆದ ಹನ್ನೊಂದು ವರ್ಷಗಳಿಂದ ನೋಡುತ್ತಿದ್ದೇನೆ.
ಭಾರತದಲ್ಲಿ ಅತಿ ಹೆಚ್ಚು ವಲಸೆ ಹಕ್ಕಿಗಳ ಬಗ್ಗೆ ಸಂಶೋಧನೆ ನಡೆಸಲ್ಪಡುವ ಸ್ಥಳ, ರಾಜಾಸ್ತಾನದ ಭರತ್‌ಪುರ. ಇಲ್ಲಿ ಪ್ರತಿವರ್ಷ ಆಗಸ್ಟ್ನಲ್ಲಿ ಸೈಬೀರಿಯನ್ ಕೊಕ್ಕರೆಗಳ ಆಗಮನದೊಂದಿಗೆ, ಚಳಿಗಾಲದ ಹಕ್ಕಿವಲಸೆ ಪ್ರಾರಂಭವಾಗುತ್ತದೆ. ಪ್ರಪಂಚದಾದ್ಯAತ ವಿಜ್ಞಾನಿಗಳು ಈ ಅದ್ಭುತ ದೃಶ್ಯವನ್ನು ನೋಡಲು ಹಲವು ವಾರಗಳ ಮುಂಚಿತವಾಗಿ ಬಿಡಾರ ಹೂಡುತ್ತಾರೆ. ಸೈಬೀರಿಯನ್ ಕೊಕ್ಕರೆಗಳು ೪,೬೦೦ ಕಿ.ಮೀ. ದೂರದ ಸೈಬೀರಿಯದಿಂದ ಹಾರಿ ಇಲ್ಲಿಗೆ ವಲಸೆ ಬರುತ್ತವೆ. ಬಹಳ ಅಪರೂಪದ ಈ ಹಕ್ಕಿಗಳ ಸಂಖ್ಯೆ ಇಂದು ಕೇವಲ ೨೦೦ ಎಂದು ಅಂದಾಜು ಮಾಡಲಾಗಿದೆ. ಹತ್ತು ವರ್ಷಗಳ ಹಿಂದೆ ಭರತ್‌ಪುರಕ್ಕೆ ಒಂದೇ ಒಂದು ಸೈಬೀರಿಯನ್ ಕೊಕ್ಕರೆಯೂ ಬರಲಿಲ್ಲ. ಇದು ವಿಜ್ಞಾನಿಗಳಿಗೆ ಬಹು ದಿಗಿಲು ಹುಟ್ಟಿಸಿತ್ತು. ಭರತ್‌ಪುರಕ್ಕೆ ಆಗಮಿಸುವ ವಲಸೆ ಹಕ್ಕಿಗಳ ವಾಪಸಾತಿ ಮಾರ್ಚ್ ತಿಂಗಳಿನಿAದ ಶುರುವಾಗುತ್ತದೆ.
ಭಾರತದ ಒಟ್ಟು ೨,೦೬೦ ಪ್ರಭೇದ ಮತ್ತು ಒಳಪ್ರಭೇದದ ಪಕ್ಷಿಗಳಲ್ಲಿ ಸುಮಾರು ೩೪೪ ಪ್ರಭೇದದ ಹಕ್ಕಿಗಳು ವಲಸೆ ಹೋಗುತ್ತವೆ. ಈ ಹಕ್ಕಿಗಳು ಹೆಚ್ಚಾಗಿ ಉತ್ತರ ಯುರೋಪ್ ಮತ್ತು ಏಷ್ಯಾ ಖಂಡಗಳಿಗೆ
ಸೇರಿದುವಾಗಿವೆ. ಬೇಸಿಗೆಯ ಕಾಲದಲ್ಲಿ, ಅಂದರೆ, ಮೇ ತಿಂಗಳಿನಿAದ ಜುಲೈವರೆಗೆ, ಈ ಪಕ್ಷಿಗಳು ಹಿಮಾಲಯದಿಂದ ಉತ್ತರಕ್ಕಿರುವ ಪರ್ವತ ಪ್ರದೇಶಗಳಲ್ಲಿ ಗೂಡುಕಟ್ಟಿ ಮರಿಮಾಡುತ್ತವೆ. ಆ ಪ್ರದೇಶಗಳಲ್ಲಿ ಚಳಿಗಾಲ ಶುರುವಾದೊಡನೆ (ಜುಲೈ-ಆಗಸ್ಟ್ ತಿಂಗಳಲ್ಲಿ) ಇವು ದಕ್ಷಿಣದೆಡೆಗೆ, ಅಂದರೆ ಪಶ್ಚಿಮ ಆಫಿû್ರಕದಿಂದ ಪೂರ್ವ ಏಷ್ಯಾ, ಭಾರತ ಮತ್ತು ಆಸ್ಟೆçÃಲಿಯ-ನ್ಯೂಜಿûಲ್ಯಾಂಡ್ ಕಡೆಗೆ ವಲಸೆ ಬರುತ್ತವೆ.
ವಲಸೆ ಬರುವ ಹಕ್ಕಿಗಳನ್ನು ಮತ್ತು ಅವು ಹಿಡಿಯುವ ದಾರಿಯನ್ನು ಕಂಡುಹಿಡಿಯುವುದು ಹೇಗೆ? ಇದಕ್ಕಾಗಿ ವಿಜ್ಞಾನಿಗಳು ಹಾಗೂ ಹವ್ಯಾಸಿ ಪಕ್ಷಿವೀಕ್ಷಕರ ತಂಡವೇ ಭಾಗವಹಿಸುತ್ತದೆ. ಅನೇಕ ಹಕ್ಕಿಗಳನ್ನು ಬಲೆಬೀಸಿ ಹಿಡಿದು, ಅವುಗಳ ಕಾಲಿಗೆ ಅಲ್ಯುಮಿನಿಯಂ ಅಥವಾ ಪ್ಲಾಸ್ಟಿಕ್ಕಿನ ಪಟ್ಟಿಯನ್ನು ಸುತ್ತಿ ಕಟ್ಟುತ್ತಾರೆ. ಇವುಗಳನ್ನು ರಿಂಗಿAಗ್ ಅಥವಾ ಬ್ಯಾಂಡಿAಗ್ ಎನ್ನುತ್ತೇವೆ. ಈ ಪಟ್ಟಿಯಲ್ಲಿ ಹಕ್ಕಿಯ ಸಂಖ್ಯೆ, ವಿವರಗಳನ್ನು ತಿಳಿಸಬೇಕಾದ ವಿಳಾಸ, ಮುಂತಾದುವುಗಳನ್ನು ದಾಖಲು ಮಾಡಲಾಗಿರುತ್ತದೆ.
ಮುಂದೆ ಈ ಹಕ್ಕಿಗಳು ಯಾರಿಗಾದರೂ ದೊರಕಿದಲ್ಲಿ, ಇಲ್ಲವೆ ಕಂಡಲ್ಲಿ, ಗುರುತು ಮಾಡಲಾದ ವಿಳಾಸಕ್ಕೆ ಸಂಪರ್ಕಿಸಿ ವಿವರ ತಿಳಿಸುತ್ತಾರೆ. ಇದಲ್ಲದೆ, ವಲಸೆಹಕ್ಕಿಗಳ ಬಗ್ಗೆ ತಿಳಿಯಲು, ಇತ್ತೀಚಿನ ದಿನಗಲ್ಲಿ ಹೊಸ ಹೊಸ ವೈಜ್ಞಾನಿಕ ಸಾಧನಗಳನ್ನು ಉಪಯೋಗಿಸಲಾಗುತ್ತದೆ.
೧. ರೇಡಿಯೋ ಟೆಲಿಮೆಟ್ರಿ: ಇದರಲ್ಲಿ ಒಂದು ಅತಿ ಚಿಕ್ಕ, ಅಷ್ಟೇ ಪ್ರಬಲ ರೇಡಿಯೋ ಟ್ರಾನ್ಸಿ÷್ಮಟರ್‌ನ್ನು ಹಕ್ಕಿಯ ದೇಹದ ಒಂದು ಭಾಗದಲ್ಲಿ ಭದ್ರವಾಗಿ ಲಗತ್ತಿಸಿ ಹಕ್ಕಿಯು ಹಾರಿದಂತೆಲ್ಲ ಅದರ ಇರವನ್ನು ರೇಡಿಯೋ ತರಂಗಗಳ ಮೂಲಕ ಗುರುತಿಸಲಾಗುತ್ತದೆ. ದೊಡ್ಡ ಹಕ್ಕಿಗಳು ಮತ್ತು ಕಾಡು ಪ್ರಾಣಿಗಳಲ್ಲಿ ಇದನ್ನು ಸಾಮಾನ್ಯವಾಗಿ ಉಪಯೋಗಿಸುತ್ತಾರೆ. ಆದರೆ, ಸಾವಿರಾರು ಕಿ.ಮೀ ದೂರಗಳಿಗೆ ಈ ವಿಧಾನವನ್ನು ಉಪಯೋಗಿಸಲಾಗುವುದಿಲ್ಲ.
೨. ಉಪಗ್ರಹ ಬಳಕೆ: ಇದರಲ್ಲಿ ಒಂದು ಬಗೆಯ, ಉಪಗ್ರಹದೊಂದಿಗೆ ಸಂಪರ್ಕವಿರುವ ಟ್ರಾನ್ಸಿಸ್ಟರ್‌ನ್ನು ಹಕ್ಕಿಯಲ್ಲಿ ಅಳವಡಿಸಿ ಆ ಮೂಲಕ ಹಕ್ಕಿಯು ಹಾರುವ ದಾರಿಯನ್ನು ಗುರುತುಮಾಡಿಕೊಳ್ಳಲಾಗುವುದು. ಸೈಬೀರಿಯನ್ ಕೊಕ್ಕರೆಗಳಲ್ಲಿ ಈ ವಿಧಾನವನ್ನು ಉಪಯೋಗಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ವಿಧಾನವನ್ನು ಹೆಚ್ಚಾಗಿ ಬಳಸಲಾಗುತ್ತಿದೆ.
೩. ರಡಾರ್‌ಗಳ ಬಳಕೆ: ಇಲ್ಲಿಯೂ ರೇಡಿಯೋ ತರಂಗಗಳ ಬದಲಿಗೆ ರಡಾರ್‌ಗಳನ್ನು ಬಳಸಿ ಹಕ್ಕಿಗಳ ಇರವನ್ನು, ಅವು ವಲಸೆ ಹೋಗುವ ದಾರಿಯನ್ನು ಪತ್ತೆಹಚ್ಚಿ, ಗುರುತಿಸಲಾಗುತ್ತದೆ.
೧೯೫೯ರಿಂದ ನಮ್ಮ ದೇಶದ ಬಾಂಬೇ ನ್ಯಾಚುರಲ್ ಹಿಸ್ಟರಿ ಸೊಸೈಟಿಯವರು ಪರಿಣಾಮಕಾರಿಯಾಗಿ ವಲಸೆ ಪಕ್ಷಿಗಳಿಗೆ ಉಂಗುರ ತೊಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಹೆಸರಾಂತ ಪಕ್ಷಿವಿಜ್ಞಾನಿ ಡಾ. ಸಲೀಂ ಆಲಿಯವರ ನೇತೃತ್ವದಲ್ಲಿ ಪ್ರಾರಂಭಗೊAಡ ಈ ಕಾರ್ಯಕ್ರಮ ಇಂದು ಯಶಸ್ವಿಯಾಗಿ ಮುಂದುವರೆದಿದೆ. ಈ ಪರಿಶ್ರಮದಿಂದ ಇಂದು ವಲಸೆ ಪಕ್ಷಿಗಳ ಬಗ್ಗೆ ವಿಜ್ಞಾನಿಗಳಿಗೆ ಬಹಳಷ್ಟು ಮಾಹಿತಿ ದೊರಕಿದೆ.
ಪ್ರತಿವರ್ಷ ವಲಸೆ ಹೋಗುವ ಚಲನವಲನವನ್ನು ದಾಖಲಿಸುವ ಕಾರ್ಯದಲ್ಲಿ ಕೆಲವು ಮುಖ್ಯ ಅಂಶಗಳನ್ನು ಗಮನದಲ್ಲಿರಿಸಬೇಕು. ವಾಡಿಕೆಯಂತೆ, ವಲಸೆ ಬರುವ ಹಕ್ಕಿ ಬಾರದಿದ್ದಲ್ಲಿ ಅಥವಾ ಹೊಸ ಹಕ್ಕಿಯೊಂದು ನಮ್ಮ ಸುತ್ತ-ಮುತ್ತ ಕಾಣಿಸಿಕೊಂಡಾಗ ಈ ಗೈರುಹಾಜರಿಗಾಗಲೀ, ಆಗಮನಕ್ಕಾಗಲೀ, ಹಲವಾರು ಕಾರಣಗಳಿರಬಹುದು. ದಾರಿಯಲ್ಲಿ ಆಹಾರದ ಕೊರತೆಯುಂಟಾಗಿ, ಹಕ್ಕಿಯು ಬೇರೆ ಮಾರ್ಗವನ್ನು
ಹಿಡಿದಿರಬಹುದು ಅಥವಾ ವಿಷಪೂರಿತ ಆಹಾರ ಸೇವಿಸಿ ಹಕ್ಕಿಗಳು ಮರಣ ಹೊಂದಿರುವ ಸಾಧ್ಯತೆಯೂ ಇದೆ; ಇಲ್ಲವೇ ಆ ಹಕ್ಕಿಗಳ ಬೇಟೆಯಾಗಿರಬಹುದು. ಇದಲ್ಲದೆ, ದಾರಿಯಲ್ಲಿ ಯಾವುದೇ ನೈಸರ್ಗಿಕ ಪ್ರಕೋಪಗಳಿಗೆ ಬಲಿಯಾಗಿರುವ ಸಾಧ್ಯತೆಗಳನ್ನೂ ಉಪೇಕ್ಷಿಸುವಂತಿಲ್ಲ. ಮತ್ತಾವುದೋ ಸ್ಥಳದಲ್ಲಿ ವಿಕೋಪವುಂಟಾಗಿ ಬೇರೆಡೆ ಹೋಗಬೇಕಾಗಿದ್ದ ಇತರ ಹಕ್ಕಿಗಳು ದಾರಿ ಬದಲಿಸಿ ಇತ್ತ ಹಾರಿ ಬಂದಿರಲೂಬಹುದು.
ವಲಸೆ ಹೋಗುವ ಹಕ್ಕಿಗಳ ಮನೆ ಮತ್ತು ಗಮ್ಯಸ್ಥಾನಗಳಲ್ಲಿ ಅಥವಾ ಇವು ವಲಸೆ ಹೋಗುವ ದಾರಿಯಲ್ಲಿ ಯಾವುದೇ ಗುರುತರವಾದ ಪ್ರಾಕೃತಿಕ ಬದಲಾವಣೆಗಳಾದರೂ ಅವು ಈ ಪಕ್ಷಿಗಳ ಮೇಲೆ ಪರಿಣಾಮವನ್ನು ಬೀರುತ್ತವೆ. ಈ ಪರಿಣಾಮ ಮುಂದೆ ಇತರ ಜೀವಿಗಳ ಮೇಲೂ, ಕೊನೆಯಲ್ಲಿ ಮನುಷ್ಯನ ಮೇಲೂ ಪ್ರಭಾವ ಬೀರಬಹುದು. ಪಕ್ಷಿಗಳ ಒಡನಾಟ, ನಮ್ಮ ಜೀವನದಲ್ಲಿ ಅನಿವಾರ್ಯ ಹಾಗೂ ಅವಶ್ಯಕ. ಹೀಗೆ ಹಕ್ಕಿಗಳ ವಲಸೆಯೆಂಬುದು ಬರೀ ರೋಮಾಂಚಕಾರಿ ವಿಷಯವಷ್ಟೇ ಅಲ್ಲದೆ, ಪರಿಸರ ವಿಜ್ಞಾನಿಗಳಿಗೂ ಬಹು ಉಪಯುಕ್ತವಾಗಿದೆ.
ಪಕ್ಷಿವೀಕ್ಷಣೆ ಏಕೆ?
ಪಕ್ಷಿಗಳು ಒಂದು ಭೂ ಆವಾಸದ ವಸ್ತುಸ್ಥಿತಿಯ ಕನ್ನಡಿಯಿದ್ದಂತೆ. ಮಾನವನ ಸ್ವಾರ್ಥ, ದುರಾಸೆ, ಕ್ರೂರತೆಯಿಂದಾಗಿ ಇಂದು ಎಷ್ಟೋ ಜೀವಿಗಳು ಕಣ್ಮರೆಯಾಗಿವೆ. ಜನಸಂಖ್ಯಾ ಸ್ಫೋಟ, ನಗರೀಕರಣ, ಔದ್ಯೋಗೀಕರಣ, ಆಧುನಿಕ ಬೇಸಾಯದಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆ, ರಾಸುಗಳ ಮೇವಿಗೆ ಕಾಡುಗಳ ಬಳಕೆ, ಪ್ರಾಣಿಹತ್ಯೆ ಮುಂತಾದ ದುಷ್ಪರಿಣಾಮಗಳಿಂದ ಇಂದು ಎಷ್ಟೋ ಪಕ್ಷಿಸಂಕುಲಗಳು ವಿನಾಶದ ಹಾದಿ ಹಿಡಿದಿವೆ. ವೇಗವಾಗಿ ನಡೆಯುತ್ತಿರುವ ಈ ಬದಲಾವಣೆಗಳನ್ನು ಸೈರಿಸಿಕೊಂಡು ಬಾಳುವ ಶಕ್ತಿ ಕೆಲವು ಹಕ್ಕಿಗಳಿಗಿದ್ದರೂ, ಅನೇಕ ಪಕ್ಷಿಗಳಿಗೆ ಇದು ದುಸ್ಸಾಹಸವಾಗಿ ತೋರುತ್ತದೆ. ಪರಿಸರದಲ್ಲಿ ಕನಿಷ್ಟ ಬದಲಾವಣೆಗಳಾದರೂ ಇಂತಹ ಹಕ್ಕಿಗಳ ಸಂಖ್ಯೆ ಮತ್ತು ನಡವಳಿಕೆಯಲ್ಲಿ ಗಣನೀಯ ವ್ಯತ್ಯಾಸಗಳಾಗಿ ಬಿಡುತ್ತವೆ. ಆರೋಗ್ಯಕರ ನೈಸರ್ಗಿಕ ವಾತಾವರಣದ ಸೂಚಕಗಳಾಗಿರುವ ಈ ಹಕ್ಕಿಗಳು ಪರಿಸರ ಸಂರಕ್ಷಣೆಯ ಕೀಲಿಕೈಗಳು.
ಭೂ ಆವಾಸಗಳಲ್ಲಿ ಯಾವುದೇ ಬದಲಾವಣೆಯಾದರೂ, ಅದು ಜೀವವೈವಿಧ್ಯತೆಯ ಮೇಲೆ ನೇರ ಪರಿಣಾಮ ಬೀರುವುದು ಕಂಡುಬರುತ್ತದೆ. ಹಕ್ಕಿಗಳು ಪರಿಸರ ವೈಪರೀತ್ಯಗಳಿಗೆ ಬಹು ಸೂಕ್ಷ÷್ಮವಾಗಿ ಸ್ಪಂದಿಸುತ್ತವೆ. ಇಂತಹ ವಾತಾವರಣದಲ್ಲಿ ವಾಸಿಸುವ ಪಕ್ಷಿಗಳ ಸಂಖ್ಯೆ ಮತ್ತು ನಡವಳಿಕೆಯ ಏರುಪೇರುಗಳ ಅಧ್ಯಯನ ಹಾಗೂ ಅರಿವು ಆ ಪರಿಸರದಲ್ಲಿ ಉಂಟಾಗಿರುವ ದುಷ್ಪರಿಣಾಮಗಳ ಆಳವನ್ನು ತೋರಿಸುತ್ತದೆ. ಪರಿಸರದ ಆರೋಗ್ಯ-ಅನಾರೋಗ್ಯಗಳಿಗೆ ಪಕ್ಷಿಗಳು ಅದ್ಭುತವಾದ ದಿಕ್ಸೂಜಿಗಳೆಂದು ವಿಜ್ಞಾನಿಗಳು ಪರಿಗಣಿಸಿದ್ದಾರೆ. ಕೊಡಗಿನಲ್ಲಿ ಇಂತಹ ಕೀಲಿಕೈ ಪಕ್ಷಿಗಳು ಬಹಳಷ್ಟು ಇವೆ. ಅವು ಯಾವುವೆಂದರೆ, ಕಾಕರಣೆ ಹಕ್ಕಿ, ಹೆಮ್ಮರಕುಟ್ಟಿಗ, ಸರಳು ಸಿಳ್ಳಾರ, ದಾಸಮಂಗಟ್ಟೆ, ನೀಲಗಿರಿ ಪಾರಿವಾಳ, ನೀಲಿಗಿಳಿ, ಬೂದುತಲೆ ಪಿಕಳಾರ, ಬಿಳಿಹೊಟ್ಟೆಯ ಮಟಪಕ್ಷಿ, ನೀಲಗಿರಿ ಮತ್ತು ಬಿಳಿಹೊಟ್ಟೆಯ ನೊಣಹಿಡುಕಗಳು, ಕರಿಗಿಡುಗ, ಮಂಡೂಕಮುಖ ಹಾಗೂ ವೈನಾಡ್, ನೀಲಗಿರಿ ಮತ್ತು ಬೂದು-ಎದೆಯ ನಗೆಮಲ್ಲಗಳು.
ಪ್ರಾಕೃತಿಕ ಸಂಪತ್ತನ್ನು ಉಳಿಸಬೇಕು, ಪರಿಸರವನ್ನು ರಕ್ಷಿಸಬೇಕು ಮುಂತಾದ ಕೂಗು ಈಗ ಎಲ್ಲೆಡೆ ಕೇಳಿಬರುತ್ತಿದೆ. ಈ ದಿಶೆಯಲ್ಲಿ ಸರಕಾರ ಮತ್ತು ಅನೇಕ ಸಂಘ-ಸAಸ್ಥೆಗಳು ಹಲವು ಹತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು, ಅದರಲ್ಲೂ ಯುವಕ-ಯುವತಿಯರು ಹೆಚ್ಚಿನ ಕಳಕಳಿ ತೋರುತ್ತಿರುವುದು ಬಹಳ ಸಮಾಧಾನದ ವಿಷಯ. ಪಕ್ಷಿವೀಕ್ಷಣೆ ಮತ್ತು ಅವುಗಳ ಆವಾಸಗಳ ಅಧ್ಯಯನವೂ ಪ್ರಕೃತಿಯನ್ನು ವಿಸ್ತಾರವಾಗಿ-
ಆಳವಾಗಿ ಅರಿಯಲು ಮಾತ್ರವಲ್ಲದೆ, ಆರೋಗ್ಯಪೂರ್ಣ ಪರಿಸರದ ಕಲ್ಪನೆ ಮತ್ತು ಜೀವವೈವಿಧ್ಯತೆಯ ವಿವಿಧ ಕೊಂಡಿಗಳ ತಿಳಿವಳಿಕೆ ಹೆಚ್ಚುವಲ್ಲಿಯೂ ಸಹಾಯ ಮಾಡುವುದು.
ಕೊಡಗು ಸಾಮಾಜಿಕ, ಸಾಂಸ್ಕöÈತಿಕ, ವಾಣಿಜ್ಯ, ವಿದ್ಯೆ ಮುಂತಾದ ಎಲ್ಲ ಕ್ಷೇತ್ರಗಳಲ್ಲಿಯೂ ಮುಂದುವರಿದ ಜಿಲ್ಲೆಯಾಗಿದೆ. ಕೊಡಗಿನ ಪಕ್ಷಿಸಂಕುಲದ ಬಗ್ಗೆ ಬರೆದಿರುವ ನನ್ನ ಚೊಚ್ಚಲ ಹೊತ್ತಗೆಯನ್ನು ಎಲ್ಲರೂ ತೆರೆದ ಹೃದಯದಿಂದ ಸ್ವೀಕರಿಸಿ, ಇದರ ಪ್ರಯೋಜನವನ್ನು ಪಡೆದು, ಪಕ್ಷಿವೀಕ್ಷಣೆ, ತನ್ಮೂಲಕ ಪರಿಸರ ಸಂರಕ್ಷಣೆಯ ದಿಕ್ಕಿನಲ್ಲಿ ಆಲೋಚಿಸುವರೆಂದು ನಂಬಿದ್ದೇನೆ. ಈ ಪುಸ್ತಕ ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು, ಯುವಜನಾಂಗವನ್ನು ಪಕ್ಷಿವೀಕ್ಷಣೆಯೆಂಬ ಹವ್ಯಾಸದಲ್ಲಿ ತೊಡಗುವಂತೆ ಪ್ರೇರೇಪಿಸಿ, ಪ್ರೋತ್ಸಾಹಿಸಿ, ಅವರು ಪ್ರಕೃತಿ ರಕ್ಷಕರೆಂಬ ಹೆಗ್ಗಳಿಕೆಗೆ ಪಾತ್ರರಾಗಲೆಂದು ಹಾರೈಸುತ್ತೇನೆ.
_ ಡಾ| ಎಸ್. ವಿ. ನರಸಿಂಹನ್

No comments:
Post a Comment