Tuesday, October 6, 2020

ಕಂಕಣ ಸೂರ್ಯಗ್ರಹಣ 2019

 "ಕಂಕಣ ಸೂರ್ಯಗ್ರಹಣ"

ವಿ. ಸೂ: ಗ್ರಹಣಗಳ ಬಗ್ಗೆ ವಿಶ್ವವಿಖ್ಯಾತರಾಗಿರುವ ಫ಼್ರೆಡ್ ಎಸ್ಪನ್ಯಾಕ್ ಎಂಬುವವರ ಕರಾರುವಕ್ಕಾದ ಲೆಕ್ಕಾಚಾರವನ್ನು ಈ ಲೇಖನದಲ್ಲಿ ಬಳಸಲಾಗಿದೆ.

ಇದೇ ಡಿಸೆಂಬರ್ ೨೬ನೇ ತಾರೀಕು, ಗುರುವಾರ ಬೆಳಿಗ್ಗೆ ಕೊಡಗಿನಲ್ಲಿ ಅತ್ಯಂತ ಅಪರೂಪವಾದ ಸಂಪೂರ್ಣ (ಖಗ್ರಾಸ) ಸೂರ್ಯಗ್ರಹಣ ಘಟಿಸಲಿದೆ. ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣವಾಗುತ್ತದೆ ಮತ್ತು ಆಗ ಚಂದ್ರನು ಸೂರ್ಯನ ಮುಂದೆ ಹಾದು ಹೋಗುತ್ತಾನೆಂದು ನಿಮಗೆಲ್ಲ ಗೊತ್ತೇ ಇದೆ. ಈ ಬಾರಿಯ ವಿಶೇಷ ಗ್ರಹಣವನ್ನು "ಕಂಕಣ ಸೂರ್ಯಗ್ರಹಣ" ಎನ್ನುತ್ತಾರೆ. 

"ಕಂಕಣ ಸೂರ್ಯಗ್ರಹಣ" ಎಂದರೇನು?

ಆಕಾಶದಲ್ಲಿ ನಾವು ನೋಡುವಾಗ, ಸೂರ್ಯ ಮತ್ತು ಚಂದ್ರ, ಇಬ್ಬರ ಗಾತ್ರವೂ ’ತಟ್ಟೆ’ಯ ರೀತಿ, ಒಂದೇ ಸಮನಾಗಿ ತೋರುತ್ತದಲ್ಲವೆ? ಖಗ್ರಾಸ ಸೂರ್ಯಗ್ರಹಣವಾದಾಗ, ಚಂದ್ರ ಸೂರ್ಯನ ಮುಂಭಾಗದಲ್ಲಿ ಹಾದುಹೋಗುತ್ತದೆ. ಇಲ್ಲಿ ನಾವೆಲ್ಲ ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ: 

೧. ಮೊದಲಿಗೆ ಸೂರ್ಯ-ಚಂದ್ರರ ಪರಸ್ಪರ ಗಾತ್ರ: ಸೂರ್ಯನ ವ್ಯಾಸ ಅಂದಾಜು ೧೪ ಲಕ್ಷ ಕಿಮೀ ಮತ್ತು ಚಂದ್ರನ ವ್ಯಾಸ ಬರೇ ಮೂರೂವರೆ ಸಾವಿರ ಕಿಮೀ. ಇನ್ನು ಭೂಮಿಯಿಂದ ಸೂರ್ಯ-ಚಂದ್ರರ ಪರಸ್ಪರ ದೂರ: ಸೂರ್ಯ ನಮ್ಮಿಂದ ಸುಮಾರು ೧೫ ಕೋಟಿ ಕಿಮೀ ದೂರದಲ್ಲಿದ್ದರೆ, ಚಂದ್ರನ ದೂರ ಬರೇ ೩ ಲಕ್ಷದ ೭೫ ಸಾವಿರ ಕಿಮೀಗಳು. ಸೂರ್ಯ-ಚಂದ್ರರ ಗಾತ್ರ ಮತ್ತು ಅವರು ನಮ್ಮಿಂದ ಇರುವ ಪರಸ್ಪರ ದೂರ ಇವುಗಳನ್ನು ತಾಳೆ ಹಾಕಿದರೆ ಒಂದು ಆಶ್ಚರ್ಯಕರ ಸಂಗತಿ ನಮ್ಮ ಗಮನಕ್ಕೆ ಬರುತ್ತದೆ. ಅದೇನೆಂದರೆ, ಸೂರ್ಯ-ಚಂದ್ರರ ಗಾತ್ರ ಮತ್ತು ಅವರಿಬ್ಬರು ನಮ್ಮಿಂದ ಇರುವ ದೂರ ಎರಡೂ ಕೂಡ ಪರಸ್ಪರ ೪೦೦ ಪಟ್ಟು ಹೆಚ್ಚು! (೧೪,೦೦,೦೦೦ % ೩೫೦೦ = ೪೦೦ ಮತ್ತು ೧೫,೦೦,೦೦,೦೦೦ % ೩,೭೫,೦೦೦ = ೪೦೦!) ಹೀಗಾಗಿ ನಮಗೆ ಆಕಾಶದಲ್ಲಿ ಇಬ್ಬರೂ ಒಂದೇ ಗಾತ್ರದಲ್ಲಿ ಅಂದರೆ, ಅರ್ಧ ಡಿಗ್ರಿ ಅಳತೆಯ ಬಿಲ್ಲೆಗಳಂತೆ ಕಾಣಿಸುತ್ತಾರೆ.

೨. ಸೂರ್ಯ ಗ್ರಹಣದ ದಿನ ಅಮಾವಾಸ್ಯೆ. ವರ್ಷದಲ್ಲಿ ತಿಂಗಳಿಗೊಂದರಂತೆ ೧೨-೧೩ ಅಮಾವಾಸ್ಯೆಗಳಿರುತ್ತವೆ. ಎಲ್ಲ ಅಮಾವಾಸ್ಯೆಯ ದಿನಗಳಂದೂ ಗ್ರಹಣ ಸಂಭವಿಸುವುದಿಲ್ಲ. ಏಕೆಂದರೆ, ಭೂಮಿಯು ಸೂರ್ಯನನ್ನು ಸುತ್ತುವ ಕಕ್ಷೆ (ಕ್ರಾಂತಿವೃತ್ತ) ಮತ್ತು ಚಂದ್ರನು ಭೂಮಿಯನ್ನು ಸುತ್ತುವ ಕಕ್ಷೆ (ಚಾಂದ್ರಕಕ್ಷೆ) ಇವೆರಡೂ ಪರಸ್ಪರ ೫ ಡಿಗ್ರಿ ೭ ನಿಮಿಷ ವಾಲಿಕೊಂಡಿವೆ. ಯಾವ ಅಮಾವಾಸ್ಯೆಯಂದು ಸೂರ್ಯ-ಭೂಮಿ-ಚಂದ್ರ ಅವರವರ ಪಥದಲ್ಲಿ ಚಲಿಸುತ್ತಿರುವಾಗ, ಮೂವರೂ ಒಂದೇ ಮಟ್ಟದಲ್ಲಿ ಬಂದಾಗ
ಮಾತ್ರ ಸೂರ್ಯಗ್ರಹಣವಾಗುತ್ತದೆ.

೩. ಗ್ರಹಣ ಸಂಭವಿಸುತ್ತಿರುವಾಗ ಸೂರ್ಯನ ಬಿಂಬ ಸ್ವಲ್ಪ ಸ್ವಲ್ಪವಾಗಿ ಮುಚ್ಚುತ್ತಾ ಹೋದಂತೆ, ಅದು ಚಂದ್ರನಿಂದಾಗುತ್ತಿರುವ ಪ್ರಕ್ರಿಯೆ ಎಂದು ನಮಗೆ ಗೊತ್ತಿದ್ದರೂ, ನಂಬಲು ಸಾಧ್ಯವಾಗುವುದಿಲ್ಲ. ಸೂರ್ಯನ ಪ್ರಖರ ಬೆಳಕಿನಲ್ಲಿ ನಮಗೆ ಆ ಜಾಗದಲ್ಲಿ ಚಂದ್ರನಿದ್ದಾನೆ ಎಂದು ಎಷ್ಟು ಪ್ರಯತ್ನ ಪಟ್ಟರೂ ಅಲ್ಲಿ ಚಂದ್ರನು ನಮಗೆ ಕಾಣುವುದಿಲ್ಲ. 

೪. ನೋಡಲು ಇಬ್ಬರ ಗಾತ್ರವೂ ಒಂದೇ ಆಗಿರುವುದರಿಂದ, ಸೂರ್ಯನ ಬಿಂಬವನ್ನು ಚಂದ್ರನು ಸಂಪೂರ್ಣವಾಗಿ ಮುಚ್ಚಿ, ಸ್ವಲ್ಪ ಸಮಯ ಕತ್ತಲು ಆವರಿಸುತ್ತದೆ! ಇದೊಂದು ಅನಿರ್ವಚನೀಯ ಅನುಭವ! ಪ್ರಕೃತಿಯ ಈ ಅದ್ಭುತ ಸನ್ನಿವೇಶಕ್ಕೆ ಎಲ್ಲ ಜೀವರಾಶಿಗಳೂ ಪ್ರತಿಕ್ರಯಿಸುತ್ತವೆ! 

೫. ಹಾಗೆಂದ ಮಾತ್ರಕ್ಕೆ ಪ್ರತಿಯೊಂದು ಖಗ್ರಾಸ ಗ್ರಹಣವೂ ಒಂದೇ ರೀತಿ ಇರುವುದಿಲ್ಲ. ಗ್ರಹಣ ಘಟಿಸುವ ಸಮಯ, ಗ್ರಹಣದ ಸ್ಥಳ, ಅವಧಿ, ಎಲ್ಲವೂ ವ್ಯತ್ಯಾಸವಾಗುತ್ತವೆ. ಇದಕ್ಕೆ ಕಾರಣ, ಭೂಮಿ-ಸೂರ್ಯನ ಸುತ್ತ ಮತ್ತು ಚಂದ್ರ-ಭೂಮಿಯ ಸುತ್ತ ಪರಿಭ್ರಮಿಸುವ ಪಥ ವೃತ್ತಾಕಾರವಾಗಿ ಇರುವುದಿಲ್ಲ. ಅದನ್ನು ದೀರ್ಘವೃತ್ತ ಎನ್ನುತ್ತೇವೆ. ಹಾಗೆಂದರೆ ವರ್ಷದ ಕೆಲವು ದಿನಗಳು ಭೂಮಿ ಸೂರ್ಯನ ಹತ್ತಿರವಾಗಿಯೂ (ಪುರರವಿ), ಇನ್ನು ಕೆಲವು ದಿನ ಸೂರ್ಯನಿಂದ ದೂರವಾಗಿಯೂ (ಅಪರವಿ) ಇರುತ್ತದೆ. ಸ್ವಾಭಾವಿಕವಾಗಿಯೇ ಯಾವಾಗ ಭೂಮಿ ಸೂರ್ಯನ ಹತ್ತಿರವಾಗುತ್ತದೆಯೋ ಆವಾಗ ಸೂರ್ಯನ ಗಾತ್ರ ನಮಗೆ ಸ್ವಲ್ಪ ದೊಡ್ಡದಾಗಿಯೂ, ಯಾವಾಗ ದೂರವಾಗಿರುತ್ತದೆಯೋ ಆವಾಗ ಅದರ ಗಾತ್ರ ಸ್ವಲ್ಪ ಸಣ್ಣದಾಗಿಯೂ ಕಾಣುತ್ತದೆ. ಈ ವ್ಯತ್ಯಾಸ ಬರೇ ೭% ಆಗಿರುವುದರಿಂದ ಬರಿಗಣ್ಣಿಗೆ ನಮಗೆ ಈ ವ್ಯತ್ಯಾಸ ಗೊತ್ತಾಗುವುದೇ ಇಲ್ಲ. ಇದು ಭೂಮಿಯ ಸುತ್ತ ಪರಿಭ್ರಮಿಸುತ್ತಿರುವ ಚಂದ್ರನಿಗೂ ಅನ್ವಯಿಸುತ್ತದೆ. 

ಮುಂದಿನ ವಾರ, ಅಂದರೆ ಡಿಸೆಂಬರ್ ೨೬ರಂದು ಘಟಿಸುವ ಸಂಪೂರ್ಣ ಸೂರ್ಯ ಗ್ರಹಣವು ಈ ವಿಚಾರದಲ್ಲಿ ವಿಶೇಷತೆಯನ್ನು ಪಡೆದಿದೆ. ಅಂದು ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಯಿಂದ ಸ್ವಲ್ಪ ಹೆಚ್ಚು ದೂರದಲ್ಲಿ ಇರುತ್ತಾನಾದ್ದರಿಂದ ಅವನ ಗಾತ್ರ ತುಸು ಸಣ್ಣದಾಗಿ ಗೋಚರಿಸುತ್ತದೆ. ಸೂರ್ಯನ ಬಿಂಬವನ್ನು ಆವರಿಸಿದಾಗ ಚಂದ್ರನ ತಟ್ಟೆ ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚುವುದಿಲ್ಲ. ಹಾಗಾಗಿ ಚಂದ್ರನು ಸೂರ್ಯನ ಮಧ್ಯೆ ಬಂದಾಗ ನಡುವಿನಲ್ಲಿ ಕಪ್ಪನೆಯ ಚಂದ್ರನೂ, ಅವನ ಸುತ್ತಲೂ ಸೂರ್ಯನ ಬೆಳಕಿನ ವೃತ್ತವೂ ಕಾಣಿಸುತ್ತದೆ. ಗ್ರಹಣದ ಮಧ್ಯಕಾಲದಲ್ಲಿ ಇದು ಸುಂದರವಾದ ಬಳೆಯ ಹಾಗೆ ಕಂಡುಬರುವುದರಿಂದ, ಈ ಗ್ರಹಣವನ್ನು ಕಂಕಣ ಸೂರ್ಯಗ್ರಹಣ ಎನ್ನುತ್ತಾರೆ.   

ಕಟ್ಟೆಚ್ಚರಿಕೆ!

ಗ್ರಹಣವಾಗುವ ಯಾವುದೇ ಸಮಯದಲ್ಲೂ ಬರಿಗಣ್ಣಿನಿಂದ ಸೂರ್ಯನನ್ನು ನೋಡಲೇಬೇಡಿ. ಹಗಲಿನ ಯಾವುದೇ ಸಮಯದಲ್ಲಿಯೂ ಸೂರ್ಯನನ್ನು ನೇರವಾಗಿ ನೋಡಬಾರದು. ಸಾಮಾನ್ಯವಾಗಿ ನಾವು ಯಾರೂ ಕಣ್ಣೆತ್ತಿ ಸೂರ್ಯನನ್ನು ನೋಡುವುದೇ ಇಲ್ಲ. ಏಕೆಂದರೆ ಯಾವಾಗಲೂ ಸೂರ್ಯ ಅಲ್ಲಿದ್ದೇ ಇರುತ್ತಾನೆ, ಅವನಲ್ಲಿ ಯಾವ ವಿಶೇಷತೆ? ಆದರೆ, ಒಂದು ಗ್ರಹಣದ ದಿವಸ ಆಕಾಶದಲ್ಲಿ ಒಂದು ವಿಶೇಷ ಘಟನೆ ಸಂಭವಿಸುತ್ತದೆ ಎನ್ನುವ ಅಂಶ, ನಮ್ಮ ದೃಷ್ಟಿಯನ್ನು ಅತ್ತ ನೋಡುವಂತೆ ಮಾಡುತ್ತದೆ. ಆದರೆ ಹಾಗೆ ನೇರವಾಗಿ ಸೂರ್ಯನನ್ನು ನೋಡುವುದು ಅಪಾಯ. ಸನ್‌ಗ್ಲಾಸ್ ಅಥವಾ ತಂಪು ಕನ್ನಡಕ ಹಾಕಿಕೊಂಡು ನೋಡುವುದೂ ಅಪಾಯ! ಹಾಗೆ ನೋಡುವುದರಿಂದ ಕಣ್ಣಿನ ರೆಟಿನಾ ಪರದೆ ಸುಟ್ಟುಹೋಗುವ ಸಾಧ್ಯತೆಯಿದೆ. ಗ್ರಹಣವನ್ನು ವಿಶೇಷ ಕನ್ನಡಕವನ್ನು ಬಳಸಿಯೇ ನೋಡಬೇಕು. ಪಿನ್‌ಹೋಲ್‌ನಿಂದ ಅಥವಾ ಎಕ್ಸ್‌ರೇ ಹಾಳೆಯನ್ನು ಮೂರು ಮಡಿಕೆ ಮಡಿಸಿ ನೋಡಬಹುದು. ಪರೋಕ್ಷವಾಗಿ ನೋಡಬಹುದಾದ ರೀತಿಗಳು: ಹಂಚಿನ-ಹುಲ್ಲಿನ ಮನೆಗಳಲ್ಲಿ ಮೇಲೆ, ಸೂರಿನ ಸಣ್ಣ ಸಂದುಗಳಿಂದ ಒಳಬರುವ ಸೂರ್ಯನ ಕಿರಣಗಳು ಗೋಡೆಯ ಮೇಲೆ ಬಿದ್ದಾಗ ಅದು ಗ್ರಹಣದ ರೂಪವನ್ನೇ ಪಡೆದಿರುತ್ತದೆ. ಗಾಢಬಣ್ಣದ ನೀರಿನಲ್ಲಿ ಅಥವಾ ಸೆಗಣಿಯ ನೀರಿನಲ್ಲಿ ಸೂರ್ಯನ ಪ್ರತಿಫಲನವನ್ನು ನೋಡುವುದರಲ್ಲಿ ಯಾವುದೇ ಅಪಾಯವಿಲ್ಲ.

ಸಾಮಾನ್ಯವಾಗಿ ಯಾವುದೇ ಖಗ್ರಾಸ ಸೂರ್ಯಗ್ರಹಣದಲ್ಲಿಯೂ ಚಂದ್ರನ ಬಿಂಬ ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚುವ ಕಾಲ ಅತ್ಯಲ್ಪ, ಅಂದರೆ ಒಂದು-ಒಂದೂವರೆ ನಿಮಿಷ. ಬಹಳ ಹೆಚ್ಚೆಂದರೆ ಏಳೂವರೆ ನಿಮಿಷ. ಮತ್ತು ಈ ಅಪೂರ್ವ ಗ್ರಹಣ ಭೂಮಿಯ ಮೇಲೆ ಬರೇ ಅರ್ಧ ಕಿಲೋಮೀಟರ್ ವಿಸ್ತಾರದ ಪಟ್ಟಿಯಲ್ಲಿ ಮಾತ್ರ ಕಂಡುಬರುತ್ತದೆ. ಚಂದ್ರನ ಬಿಲ್ಲೆ ಸೂರ್ಯನದಕ್ಕಿಂತ ಚಿಕ್ಕದಾಗಿರುವುದರಿಂದ ಈ ವಿಸ್ತಾರ ಹೆಚ್ಚುತ್ತದೆ. ಡಿಸೆಂಬರ್ ೨೬ರಂದು ಬೆಳಿಗ್ಗೆ ಅಂದಾಜು ೮.೦೫ಕ್ಕೆ ಪ್ರಾರಂಭವಾಗಿ, ಹಗಲು ೧೦.೦೩ಕ್ಕೆ ಮುಕ್ತಾಯಗೊಳ್ಳುವ ಈ ಗ್ರಹಣ, ಕೊಡಗಿನ ಮಟ್ಟಿಗೆ, ಉತ್ತರದಲ್ಲಿ ಮಡಿಕೇರಿಯಿಂದ ಮತ್ತು ದಕ್ಷಿಣದಲ್ಲಿ ಕುಟ್ಟದವರೆಗೆ ಕಾಣಬಹುದು. ಆದರೆ, ಸುಮಾರು ೪೦ ಕಿಮೀ ಅಗಲದ ಈ ಪಟ್ಟಿಯಲ್ಲಿ ಕೊಡಗಿನ ಕೂಡಿಗೆ, ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲೀಪೇಟೆ ನಗರಗಳು ಈ ಬಾರಿಯ ಸಂಪೂರ್ಣ ಗ್ರಹಣದಲ್ಲಿ ಕಾಣುವುದಿಲ್ಲ. 

ಕಂಕಣ ಸೂರ್ಯಗ್ರಹಣವಾದಾಗ ಚಂದ್ರನು ಪೂರ್ವದ ಕಡೆಯಿಂದ ನಿಧಾನವಾಗಿ ಸೂರ್ಯನ ಬಿಂಬವನ್ನು ಮುಚ್ಚುತ್ತಾ
ಪಶ್ಚಿಮದೆಡೆಗೆ ಹಾದು ಹೋಗುವುದನ್ನು ಕಾಣುವಿರಿ. ಗ್ರಹಣದ ಮಧ್ಯ ಸಮಯದಲ್ಲಿ ಚಂದ್ರನ ತಟ್ಟೆ ಸೂರ್ಯನ ದಕ್ಷಿಣ ಭಾಗವನ್ನು ಸಂಪೂರ್ಣವಾಗಿ ಮುಚ್ಚುತ್ತದೆ. ಆ ಸಮಯ ಇಡೀ ವಾತಾವರಣದಲ್ಲಿ ತುಸು ಮಬ್ಬುಗತ್ತಲು ಆವರಿಸುತ್ತದೆ. ಹೆಚ್ಚೆಂದರೆ ಸೂರ್ಯನ ಪೂರ್ವಕ್ಕೆ ಗುರುಗ್ರಹ, ಅಥವಾ ಪೂರ್ವ ದಿಗಂತದಲ್ಲಿ ಆಗ ತಾನೇ ಉದಯಿಸುತ್ತಿರುವ ಶುಕ್ರಗ್ರಹ ಕಾಣಬಹುದು. ಉಳಿದಂತೆ ಆ ಬೆಳಕಿನಲ್ಲಿ ಆಕಾಶದಲ್ಲಿರುವ ಬುಧನಾಗಲೀ, ಶನಿಗ್ರಹವಾಗಲೀ ಕಾಣುವುದಿಲ್ಲ.  

ಇಷ್ಟೆಲ್ಲ ಆದರೂ ನಾವು ಗಮನಿಸಬೇಕಾದ ಮತ್ತೊಂದು ಅಂಶವೇನೆಂದರೆ, ಕೊಡಗಿನಲ್ಲಿ ಈ ಗ್ರಹಣದ ನಡುಮಧ್ಯ ರೇಖೆ ಹಾದು ಹೋಗುವುದಿಲ್ಲ. ಅಂದರೆ, ಚಂದ್ರನು ಸೂರ್ಯನ ನಡುಮಧ್ಯೆ ಬಂದು ನಿಲ್ಲುವುದಿಲ್ಲ. ಈ ನಡುಮಧ್ಯ ರೇಖೆ ಕರ್ನಾಟಕದ ಇನ್ನೂ ದಕ್ಷಿಣಕ್ಕೆ ಅಂದರೆ, ಕೇರಳದ ನೀಲೇಶ್ವರ, ಪೇರಾವೂರು, ವೈನಾಡ್ ಅಲ್ಲಿಂದ ತಮಿಳುನಾಡಿನ ಗುಡಲೂರು, ಕೊಯಮತ್ತೂರಿನ ಮೂಲಕ ಹಾದು ಹೋಗುತ್ತದೆ. (ಚಿತ್ರ ನೋಡಿ).

ಇಲ್ಲಿಯವರೆಗೆ ಕೊಡಗಿನಲ್ಲಿ ಯಾವೊಂದು ಸಂಪೂರ್ಣ ಸೂರ್ಯಗ್ರಹಣವೂ ಘಟಿಸಿದ ಉಲ್ಲೇಖವೇ ಇಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಮುಂದಿನ ಹಲವು ಶತಮಾನಗಳವರೆಗೆ ಮತ್ತೊಂದು ಸಂಪೂರ್ಣ ಸೂರ್ಯಗ್ರಹಣ ಕೊಡಗಿನಲ್ಲಿ ಕಾಣಲಾಗುವುದಿಲ್ಲ. ಹಾಗಾಗಿ ಕೊಡಗಿನ ಮಟ್ಟಿಗೆ ಡಿಸೆಂಬರ್ ೨೬ರ ಕಂಕಣ ಸೂರ್ಯಗ್ರಹಣ ಅಪೂರ್ವ ಘಟನೆ ಎಂದೇ ಹೇಳಬಹುದು. 

ಸಾರ್ವಜನಿಕರು, ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಸೂರ್ಯಗ್ರಹಣದ ವೈಭವವನ್ನು ನೋಡಿ ಆನಂದಿಸಬೇಕು. ಈ ವಿಶೇಷ ಜನಜಾಗೃತಿಯ ಕಾರ್ಯಕ್ರಮದಲ್ಲಿ ಕರ್ನಾಟಕ ಶಿಕ್ಷಣ ಇಲಾಖೆ, ವಿಜ್ಞಾನ ಪರಿಷದ್ ಕೈಗೂಡಿಸುತ್ತಿದ್ದಾರೆ.  ಎಲ್ಲರೂ ಮನೆಯಿಂದ ಹೊರಬಂದು ಈ ಗ್ರಹಣವನ್ನು ಅನುಭವಿಸಬೇಕು. ದಯವಿಟ್ಟು ಯಾರೂ ಕೂಡ ನೇರವಾಗಿ ಸೂರ್ಯನನ್ನು ದೃಷ್ಟಿಸಿ ನೋಡಲೇಬಾರದು. 

ಡಿಸೆಂಬರ್ 26ನೇ 2019 ರಂದು (ಗುರುವಾರ) ಬೆಳಿಗ್ಗೆ 8.05 ರಿಂದ 11.05 ಗಂಟೆಯವರೆಗೆ  ಕೊಡಗಿನಲ್ಲಿ ಹೆಚ್ಚು ಸಂಭವಿಸಿ  ಗೋಚರಿಸಲಿರುವ  ಅಪರೂಪದ ಹಾಗೂ ಕೌತುಕ ಸನ್ನಿವೇಶದ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ರೋಟರಿ ಕ್ಲಬ್  ಹಾಗೂ ಮತ್ತಿತರ ಸಂಸ್ಥೆಗಳ ವತಿಯಿಂದ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಗ್ರಹಣ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸೌರ ಕನ್ನಡಕಗಳನ್ನು ವಿಜ್ಞಾನ ಪರಿಷತ್ತಿನ ವತಿಯಿಂದ ಪೂರೈಸಲು ಕ್ರಮ ವಹಿಸಲಾಗಿದೆ. ಸೌರ ಕನ್ನಡಕಗಳು ಫಿಲ್ಟರ್ ಸಾಮರ್ಥ್ಯಕ್ಕೆ ಅನುಗುಣವಾಗಿ ರೂ.15, 20 & 25 ರೂ ಗಳಲ್ಲಿ ದೊರೆಯಲಿವೆ. ಹಾಗೆಯೇ, ಗ್ರಹಣ ಹೆಚ್ಚು ಪ್ರಮಾಣದಲ್ಲಿ ಸಂಭವಿಸಲಿರುವ ಕುಟ್ಟ ಸಮೀಪದ ಕಾಯಿಮನಿ ಎಂಬ ಸ್ಥಳದಲ್ಲಿ ಗ್ರಹಣ ವೀಕ್ಷಣೆಗೆ ರಾಜ್ಯ ವಿಜ್ಞಾನ ಪರಿಷತ್ತು ಮೈಸೂರಿನ ಸೈನ್ಸ್ ಪೌಂಡೇಶನ್, ಪುಣೆಯ ಂಈಟ್ಟೀ ಸಂಸ್ಥೆಯ ಸಹಯೋಗದಲ್ಲಿ ಸ್ಥಳೀಯರ ಸಹಯೋಗದಲ್ಲಿ ಏರ್ಪಡಿಸಲಾಗಿದೆ.


No comments: