Sunday, October 25, 2020

ಕರೋನಾ ವಿರುದ್ಧ ಹೋರಾಡಿ ಜಯ ಗಳಿಸಿದ ವೈದ್ಯ

 ಕರೋನಾ ವಿರುದ್ಧ ಹೋರಾಡಿ ಜಯ ಗಳಿಸಿದ ವೈದ್ಯ

ಕರೋನಾ ರೋಗ ಪ್ರಪಂಚದಾದ್ಯಂತ ಹರಡಿ ಫ಼ೆಬ್ರವರಿಯಿಂದ ಸೆಪ್ಟೆಂಬರ್‌ವರೆಗೆ ಏಳು ತಿಂಗಳುಗಳು ಕಳೆದಿದ್ದವು. ಈ ಸಮಯದಲ್ಲಿ ನಾನು ನನ್ನ ಕ್ನಿನಿಕ್ಕನ್ನು ಯಾವತ್ತೂ ಮುಚ್ಚಿಯೇ ಇರಲಿಲ್ಲ. ಮುಖಕ್ಕೆ ಮಾಸ್ಕ್, ಕೈಗೆ ಸ್ಯಾನಿಟೈಸರ್ ಬಳಸುತ್ತಿದ್ದೆ. ಅದು ಬಿಟ್ಟರೆ, ಪ್ರತಿಯೊಂದು ರೋಗಿಯನ್ನೂ ಪರೀಕ್ಷೆ ಮಾಡಲೇ ಬೇಕಾದ್ದರಿಂದ, ಅಂತರ ಕಾಯ್ದುಕೊಳ್ಳುವುದಕ್ಕೆ ಸಾಧ್ಯವಿರಲಿಲ್ಲ. ಆದರೂ ನನಗೆ ಈ ಖಾಯಿಲೆ ಅಂಟಿರಲಿಲ್ಲ. ಎರಡು ಬಾರಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಾಗಲೂ ನೆಗೆಟಿವ್ ಬಂದಿತ್ತು. ನನಗೂ ಕರೋನಾ ರೋಗ ಬರುತ್ತದೆಂದು ನಾನು ಎಣಿಸಿಯೇ ಇರಲಿಲ್ಲ!

ಇದೆಲ್ಲ ಶುರುವಾದದ್ದು ನಮ್ಮ ತಾಯಿ ತೀರಿಕೊಂಡ ನಂತರ. ಕುಟುಂಬದ ಹಿರಿಯ ಮಗನಾದ ನನ್ನ ಅಣ್ಣ ದೂರದ ಬ್ರುನೈ ದೇಶದಲ್ಲಿದ್ದು, ಅಲ್ಲಿಂದ ಯಾವುದೇ ವಿಮಾನ ಪ್ರಯಾಣಕ್ಕೂ ನಿರ್ಬಂಧವಿದ್ದುದರಿಂದ, ನಾನು ಮತ್ತು ನನ್ನ ತಮ್ಮ ಸೇರಿ ಅಮ್ಮನ ಮುಂದಿನ ಕೆಲಸಗಳನ್ನು ಮಾಡಬೇಕಾಯಿತು. ಅವರ ಅಂತ್ಯಕ್ರಿಯೆ ವಿರಾಜಪೇಟೆಯಲ್ಲಿಯೇ ಆಯಿತು. ಅದಾದ ಮಾರನೆಯ ದಿನ ಅಸ್ತಿ ಸಂಗ್ರಹ ಹಾಗೂ ಕಾವೇರಿ ನದಿಯಲ್ಲಿ ವಿಸರ್ಜನೆ ಆಯಿತು.

ನಮ್ಮ ಸಂಪ್ರದಾಯದಲ್ಲಿ, ಅಲ್ಲಿಂದ ಮುಂದೆ ಹನ್ನೆರಡನೆಯ ದಿನದವರೆಗೆ ಅಪರಕ್ರಿಯೆ ನಡೆಯುತ್ತದೆ. ಹದಿಮೂರನೆಯ ದಿನ ಶುಭಸ್ವೀಕಾರ. ಆವತ್ತು ಹಬ್ಬದ ಅಡಿಗೆ ಮಾಡಿ ನೆಂಟರಿಷ್ಟರನ್ನು ಕರೆದು ಔತಣವೀಯುತ್ತೇವೆ. ಕರೋನಾ ಕಾಟವಿದ್ದುದರಿಂದ ನಾವು ಹೆಚ್ಚು ಜನರನ್ನು ನಿರೀಕ್ಷಿಸುವಂತಿರಲಿಲ್ಲ. ಈ ಎಲ್ಲ ಕಲಾಪಗಳಿಗೆ ಪುರೋಹಿತರು, ಬಂಧು-ಬಳಗದವರೆಲ್ಲ ವಿರಾಜಪೇಟೆಯವರೆಗೆ ಬರುವುದಕ್ಕಿಂತ ಮೈಸೂರಿನಲ್ಲಿಯೇ, ನಮ್ಮ ತಂಗಿಯ ಮನೆಯಲ್ಲಿಯೇ, ಮಾಡುವುದೆಂದು ತೀರ್ಮಾನಿಸಿದೆವು.

ಎಂಟನೆಯ ದಿನ ಬೆಳಿಗ್ಗೆ ನನ್ನಕ್ಕ, ನನ್ನ ಪತ್ನಿ ಜೊತೆಯಲ್ಲಿ ಕಾರಿನಲ್ಲಿ ಮೈಸೂರು ತಲುಪಿದೆವು. ಆ ಮಧ್ಯಾಹ್ನ ಮಾರ್ಕೆಟ್ಟಿನಲ್ಲಿ ವಿಶೇಷ ದಿನಗಳಿಗೆ ಬೇಕಾದ ಸಾಮಾನುಗಳನ್ನು ತರಲು ಸುತ್ತಿದೆವು. ಒಂಭತ್ತನೆಯ ದಿನ ಸಂಜೆ ನನಗೆ ಸ್ವಲ್ಪ ಜ್ವರ ಕಾಣಿಸಿಕೊಂಡಿತು. ಬಹುಶಃ ಅದು ಶುರು!

ಪ್ರತಿದಿನ ನನಗೆ ಜ್ವರ ಬರುತ್ತಲೇ ಇತ್ತು. ಬೆಳಿಗ್ಗೆ ಸ್ವಲ್ಪ ಕಡಿಮೆಯೆಂದು ತೋರುತ್ತಿದ್ದುದರಿಂದ ಕೆಲಸ-ಕಾರ್ಯಗಳಿಗೆ ಅಡ್ಡಿಯಾಗಲಿಲ್ಲ. ಆದರೆ, ಸಂಜೆಯಾಗುತ್ತಿದ್ದಂತೆ ಮೈಕೈ ನೋವು, ಜ್ವರ ಹೆಚ್ಚುತ್ತಿತ್ತು. ಇದು ಸಾಮಾನ್ಯ ಶೀತಜ್ವರವಿರಬಹುದೆಂದು ಎರಡು ದಿನ ನಾನು ಮಾತ್ರೆಗಳನ್ನು ತೆಗೆದುಕೊಂಡು ತಳ್ಳಿದೆ. 

ಮೈಸೂರಿಗೆ ಹೋದ ಮೂರನೆಯ ದಿನ ಮಧ್ಯಾಹ್ನ ಇದ್ದಕ್ಕಿದ್ದಂತೆ ಯಾವ ವಾಸನೆಯೂ ತಿಳಿಯದಾಯಿತು! ನನಗೆ ಸಂಶಯವಾಯಿತು, ಇದೇನಾದರೂ ಕರೋನಾ ಖಾಯಿಲೆಯೇ? ಈ ಸಮಯದಲ್ಲಿ ಕೋವಿಡ್-೧೯ರ ಪರೀಕ್ಷೆ ಮಾಡಿಸಿಕೊಂಡು ಏನಾದರೂ ಇದೆಯೆಂದಾದರೆ ಕಾರ್ಯಗಳೂ ನಿಂತುಹೋಗಬಹುದು ಎಂದು ಸುಮ್ಮನಾದೆ. ಆ ಸಂಜೆಯೂ ಜ್ವರವಿತ್ತು, ಆದರೆ ಹಸಿವೆಯೇನೂ ಇಂಗಿರಲಿಲ್ಲ. ತಡ ಮಾಡದೆ ಕ್ರಮಪ್ರಕಾರ ಕೋವೀಡ್-೧೯ರ ಔಷಧಿಗಳನ್ನು ತರಿಸಿಕೊಂಡು ನುಂಗತೊಡಗಿದೆ. ಕಿರಿಯ ಮಗಳು ಜ್ವರಕ್ಕೆ ಇಂಜೆಕ್ಷನ್ ಕೊಟ್ಟಳು. ಹೆಚ್ಚಿನ ಸಮಯ ಮಲಗಿಯೇ ಇರುತ್ತಿದ್ದೆ. ದಿನಕ್ಕೆ ಎರಡು ಸಾರಿ ಆವಿಯನ್ನು ಮೂಗು-ಬಾಯಿಯಿಂದ ತೆಗೆದುಕೊಂಡೆ. ಪ್ರತಿದಿನ ಎರಡು-ಮೂರು ಬಾರಿ ಸ್ನಾನ, ಒದ್ದೆ ಬಟ್ಟೆಯಲ್ಲಿಯೇ ಕಲಾಪಗಳು...... ಸದ್ಯ, ಇನ್ನೆರಡು ದಿನಗಳನ್ನು ಹೇಗಾದರೂ ಕಳೆದರೆ, ಮೈಸೂರಿನ ಕಾರ್ಯಕ್ರಮಗಳು ಮುಗಿಯುತ್ತವೆ. ಅಲ್ಲಿಯವರೆಗೆ ಎಚ್ಚರದಿಂದ ಇರಲು ತೀರ್ಮಾನಿಸಿದೆ.

ಮನೆಯಲ್ಲೂ ಮುಖಕ್ಕೆ ಮಾಸ್ಕ್ ಧರಿಸತೊಡಗಿದೆ. ಯಾರನ್ನೂ ಹತ್ತಿರದಿಂದ ಮಾತನಾಡಿಸಲಿಲ್ಲ. ಬರಬರುತ್ತ ಸುಸ್ತು ಅಧಿಕವಾಗತೊಡಗಿತು. ಕರೋನಾ ಪೀಡೆಯಿದ್ದುದರಿಂದ ಹೆಚ್ಚು ನೆಂಟರನ್ನು ಆಹ್ವಾನಿಸಿರಲಿಲ್ಲ. ಆದರೂ ಹದಿಮೂರನೆಯ ದಿನದ ಕಾರ್ಯಕ್ರಮಕ್ಕೆ ಸುಮಾರು ೬೦-೭೦ ಜನ ಸೇರಿದ್ದರು. ಏನಾದರಾಗಲಿ, ವಿರಾಜಪೇಟೆಗೆ ಹಿಂದಿರುಗಬೇಕು ಎನ್ನುವ ಚಡಪಡಿಕೆ ಶುರುವಾಯಿತು. ಒಬ್ಬ ಬಾಡಿಗೆ ಡ್ರೈವರ್‌ನನ್ನು ಕರೆದುಕೊಂಡು ಊರು ಸೇರಬೇಕೆಂಬ ತವಕದಿಂದ ನನ್ನ ಭಾವನಿಗೆ ಹೇಳಿದೆ. ಅರೆಮನಸ್ಸಿನಿಂದಲೇ ಗೊತ್ತು ಮಾಡಿಕೊಟ್ಟರು.

ಡ್ರೈವರ್ ಬರುವಾಗಲೇ ಕತ್ತಲೆಯಾಗಿತ್ತು. ಆದರೂ ತಡ ಮಾಡದೆ ಹೊರಟೆವು. ರಾತ್ರಿ ಅವನಿಗೆ ಹಿಂದಿರುಗಲು ಬಸ್ ಸೌಕರ್ಯದ ಬಗ್ಗೆ ವಿಚಾರಿಸಿದೆ. ರಾತ್ರಿ ಹತ್ತು ಗಂಟೆಗೆ ಕೊನೆಯ ಬಸ್ ಇತ್ತಾದರೂ ಆ ರಾತ್ರಿ ವೇಳೆ ನಂಬುವಂತಿರಲಿಲ್ಲ. ಆದ್ದರಿಂದ ಅವನನ್ನು ಗೋಣಿಕೊಪ್ಪಲಿನಲ್ಲಿ ಇಳಿಸಿ, ನಾನೇ ಡ್ರೈವ್ ಮಾಡಿಕೊಂಡು ಊರನ್ನು ತಲುಪಿದೆ. 

ಮನೆಯೊಳಗೆ ಬಂದ ಕೂಡಲೇ ಸುಸ್ತು ಬಹಳ ಅಧಿಕವಾಯಿತು, ಅಲ್ಲದೆ ಇದ್ದಕ್ಕಿದ್ದಂತೆ ಉಸಿರಾಡಲೂ ಕಷ್ಟವೆನಿಸತೊಡಗಿತು. ತಡ ಮಾಡದೆ, ಡಾ. ಕಾರಿಯಪ್ಪ ಹಾಗೂ ಡಾ. ದೀಪಕ್‌ರವರಿಗೆ ಫೋನ್ ಮಾಡಿದೆ. ಒಡನೆ ಸರ್ಕಾರಿ ಆಸ್ಪತ್ರೆಯ ಡಾ. ವಿಶ್ವನಾಥ ಶಿಂಪಿಯವರು ಅಲ್ಲಿಂದಲೇ ತುರ್ತು ವಾಹನವನ್ನು ಕಳುಹಿಸಿದರು. ಅದರೊಂದಿಗೆ ಬಂದ ಸಿಬ್ಬಂದಿ ಕೋವಿಡ್-೧೯ ಪರೀಕ್ಷಾ ಕಿಟ್‌ನ್ನು ತಂದಿದ್ದ. ಪರೀಕ್ಷೆ ಮಾಡಿದಾಗ ಕೋವಿಡ್-೧೯ ಪಾಸಿಟಿವ್ ಎಂದು ತಿಳಿಯಿತು. ಅದೇ ವ್ಯಾನ್‌ನಲ್ಲಿ ನೇರವಾಗಿ ಮಡಿಕೇರಿಯ ಕೋವಿಡ್ ಆಸ್ಪತ್ರೆ ತಲುಪಿದೆ. ಕರೋನಾ ರೋಗ ಇಷ್ಟು ತೀವ್ರಗತಿಯಲ್ಲಿ, ಈ ಮಟ್ಟಕ್ಕೆ ಉಲ್ಬಣವಾಗುತ್ತದೆಂದು ನಾನು ಎಣಿಸಿಯೇ ಇರಲಿಲ್ಲ!

ನನ್ನ ಜೀವನದ ೬೫ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆಸ್ಪತ್ರೆಯ ವಾಸ ನನಗೆ ಒದಗಿ ಬಂದಿತು!

ಕರೋನಾ ವೈರಸ್ ಮತ್ತು ಕೋವಿಡ್-೧೯

ವೈರಸ್ ಅಥವಾ ವೈರಾಣುಗಳು ಭೂಮಿಯ ಮೇಲೆ ವಿಕಾಸ ಹೊಂದಿದ ಮೊದಮೊದಲ ಜೀವಿಗಳು. ಭೂಮಿಯಲ್ಲಿ ನಡೆದ ಹಲವಾರು ಅತ್ಯಂತ ಭಯಂಕರ ಆಘಾತ-ಆಪತ್ತು ಮತ್ತು ಉಪಪ್ಲವ-ದುರಂತಗಳನ್ನು ಎದುರಿಸಿ ಬದುಕಿ ಉಳಿದಿವೆ! ಇದು ವೈರಾಣುಗಳಿಗಿರುವ ಎರಡು ವಿಶೇಷ ಗುಣಗಳಿಂದ ಸಾಧ್ಯವಾಗಿದೆ. 

೧. ವೈರಸ್‌ಗಳು ಏಕಾಣುಜೀವಿಗಳು ಮತ್ತು ಅವುಗಳ ದೇಹ ಯಃಕಶ್ಚಿತ್ ಜೀವದ ಮೂಲದ್ರವ್ಯದಿಂದ ಕೂಡಿದೆ. ಸಂತಾನವೃದ್ಧಿಗೆ ಅವಶ್ಯವಾದ ಜೀವದ್ರವ್ಯಗಳನ್ನು ತಯಾರು ಮಾಡಿಕೊಳ್ಳುವ ಸಾಮರ್ಥ್ಯ ಅವುಗಳಿಗಿಲ್ಲ. ಆದ್ದರಿಂದ ಆ ಜೀವದ್ರವ್ಯಗಳನ್ನು ಪಡೆದುಕೊಳ್ಳಲು ಅವು ಯಾವುದಾದರೂ ಇತರ ಜೀವಿಗಳ ಜೀವಕೋಶವನ್ನು ಅವಲಂಬಿಸಿರುತ್ತವೆ. ಆ ನಿರ್ದಿಷ್ಟ ಜೀವಕೋಶದ ಒಳಹೊಕ್ಕು, ಅದನ್ನು ನಾಶಮಾಡಿ, ತಮಗೆ ಅವಶ್ಯವಿರುವ ಜೀವದ್ರವ್ಯವನ್ನು ಪಡೆದುಕೊಂಡು ಬೆಳೆಯುತ್ತವೆ! ಹಾಗಾಗಿ ಸಾಮಾನ್ಯ ನೆಗಡಿ, ದಢಾರದಿಂದ, ಪೋಲಿಯೋ, ಸರ್ಪಸುತ್ತು, ಏಯ್ಡ್ಸ್, ಡೆಂಗಿಯವರೆಗೆ ಎಲ್ಲ ವೈರಸ್ ರೋಗಗಳೂ ನಮ್ಮ ದೇಹದ ಪ್ರತ್ಯೇಕ ಜೀವಕೋಶವನ್ನು ಧಾಳಿ ಮಾಡುತ್ತವೆ.

೨. ವೈರಾಣುಗಳಿಗೆ ಅವುಗಳ ದೇಹದ ಮೇಲ್ಮೈ ಅಥವಾ ಜೀವದ್ರವ್ಯದ ರೂಪಾಂತರ ಹೊಂದುವ ಗುಣವಿದೆ. ಇದರಿಂದಾಗಿ ಅದೇ ವೈರಸ್ ಸೋಂಕು ಮತ್ತೊಮ್ಮೆ ತಟ್ಟಿದರೆ, ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಗೆ ಅದನ್ನು ಪತ್ತೆ ಹಿಡಿಯಲು ಸಾಧ್ಯವಾಗುವುದಿಲ್ಲ!

ಕೋವಿಡ್-೧೯ ಎಂಬುದು ಕರೋನಾ ವೈರಸ್ ಕುಟುಂಬಕ್ಕೆ ಸೇರಿದ ಹೊಸ ತಳಿ! 

ಚೀನಾ ದೇಶದ ವುಹಾನ್ ನಗರದಲ್ಲಿ ನವೆಂಬರ್-ಡಿಸೆಂಬರ್ ೨೦೧೯ರಲ್ಲಿ ಉದ್ಭವವಾಗಿ, ಇಂದು ಇಡೀ ವಿಶ್ವವನ್ನು ಆವರಿಸಿಕೊಂಡಿದೆ. 

ಕೋವಿಡ್-೧೯ ವೈರಾಣು ಮನುಷ್ಯನ ಶ್ವಾಸಕೋಶದ ಜೀವಕೋಶಗಳನ್ನು ಆಕ್ರಮಿಸುತ್ತವೆ. 

ಮನುಷ್ಯನಿಂದ ಮನುಷ್ಯನಿಗೆ, ಸೀನಿದಾಗ-ಕೆಮ್ಮಿದಾಗ ಉಂಟಾಗುವ ತುಂತುರು ಹನಿಗಳಿಂದ, ಈ ಸಾಂಕ್ರಮಿಕ ರೋಗ ಹರಡುತ್ತದೆ. ಮತ್ತು ಅವು ಆರು ಅಡಿಗಳಿಗಿಂತ ಹೆಚ್ಚು ದೂರ ಹಾರುವುದಿಲ್ಲ. 

ಆದರೆ, ಸುತ್ತಮುತ್ತಲ ವಸ್ತುಗಳ ಮೇಲೆ ಬಿದ್ದು ಅಲ್ಲಿಯೇ ೨-೩ ದಿನಗಳ ಕಾಲ ಜೀವಂತವಾಗಿರುತ್ತವೆ. 

ಒಂದು ಬಾರಿ ನಮ್ಮ ದೇಹವನ್ನು ಹೊಕ್ಕರೆ, ೨ರಿಂದ ೧೪ ದಿನಗಳಲ್ಲಿ ರೋಗದ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ.

ಅತ್ಯಂತ ಶೀಘ್ರವಾಗಿ ವೈರಾಣುಗಳು ಶ್ವಾಸಕೋಶವನ್ನು ನಾಶ ಮಾಡುತ್ತವೆ.

ಕರೋನಾ ರೋಗಲಕ್ಷಣಗಳು:

ಜಿಲ್ಲಾ ಕೋವಿಡ್ ಆಸ್ಪತ್ರೆ

೩೫೦ ಹಾಸಿಗೆಗಳಿರುವ ಮಡಿಕೇರಿಯ ಸರ್ಕಾರಿ ಅಸ್ಪತ್ರೆ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧನಾ ಕೇಂದ್ರವಾಗಿದೆ. ಈ ಅಸ್ಪತ್ರೆಯನ್ನು ಈಗ ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು ಮಾಡಲಾಗಿದೆ. ಕರೋನಾ ರೋಗದ ನಿಯಂತ್ರಣಕ್ಕಾಗಿ ಈ ಆಸ್ಪತ್ರೆಯನ್ನು ಅತ್ಯಂತ ಸಮರ್ಥವಾಗಿ ಸುಸಜ್ಜಿತಗೊಳಿಸಲಾಗಿದೆ. ಒಂದು ಕೋಣೆಯಲ್ಲಿ ನಾಲ್ಕು ರೋಗಿಗಳಿರುವ ೨೦ ಐಸಿಯು ಹಾಸಿಗೆಗಳು, ಎಂಟೆಂಟು ಹಾಸಿಗೆಗಳಿರುವ ಸಾಮಾನ್ಯ ವಾರ್ಡ್‌ಗಳು, ಅಲ್ಲದೆ ವಿಶೇಷ ವಾರ್ಡ್‌ಗಳೂ ಇವೆ. 

ನಾನು ಆಸ್ಪತ್ರೆಯನ್ನು ತಲುಪುವಾಗ ರಾತ್ರಿ ೧೧.೩೦ ದಾಟಿತ್ತು. ಉಸಿರಾಡಲು ನನಗೆ ಬಹಳ ಕಷ್ಟವಾಗುತ್ತಿತ್ತು. ಆ ವೇಳೆಗಾಗಲೇ ಡಾ. ಸಿಂಪಿಯವರು ಇಲ್ಲಿಯ ಮುಖ್ಯಸ್ಥ ಡಾ. ರಶೀದ್ ಹಾಗೂ ಡ್ಯೂಟಿ ವೈದ್ಯರಿಗೆ ನನ್ನ ಬಗ್ಗೆ ಹೇಳಿದ್ದರು. ಹೋದೊಡನೆ ನನ್ನ ಎದೆಯ ಸಿ.ಟಿ. ಸ್ಕ್ಯಾನ್ ಮಾಡಿ, ನಂತರ ನೇರವಾಗಿ ಐಸಿಯುಗೆ ನನ್ನನ್ನು ಅಡ್ಮಿಟ್ ಮಾಡಿದರು. ಐಸಿಯು ವಾರ್ಡ್‌ಗಳಲ್ಲಿ ಯಾವುದೇ ಹಾಸಿಗೆಯೂ ಖಾಲಿ ಇರಲಿಲ್ಲವಾದ್ದರಿಂದ, ಅದರ ಪಕ್ಕದಲ್ಲಿಯೇ ಇದ್ದ ಒಂದು ಕೋಣೆಯನ್ನು ನನಗಾಗಿ ಪರಿವರ್ತನೆಗೊಳಿಸಿ ಸುಸಜ್ಜಿತಗೊಳಿಸಲಾಗಿತ್ತು. ಡಾ. ಶ್ರೀಧರ್ ಮೊದಲು ಬಂದು ನನಗೆ ಧೈರ್ಯ ಹೇಳಿ, ಎಲ್ಲ ಏರ್ಪಾಡುಗಳನ್ನು ಒಂದು ಸಾರಿ ಪರಿಶೀಲಿಸಿದರು. ನನ್ನ ಮೂಗಿಗೆ ಆಮ್ಲಜನಕದ ಮಾಸ್ಕ್ ಹಾಕಿದ ನಂತರ ಜೀವ ಬಂದಂತಾಯಿತು! ರಾತ್ರಿಯಿಡೀ ನನಗೆ ಜ್ವರವಿತ್ತೆಂದು ಕಾಣುತ್ತದೆ.

ಪಿಎಂ ಕೇರ್‍ಸ್ (PM Cares)

ಆಸ್ಪತ್ರೆಯಲ್ಲಿ ಕೋವಿಡ್ ರೋಗಕ್ಕೆ ಸಂಬಂಧಪಟ್ಟ ಎಲ್ಲ ಉಪಕರಣಗಳೂ ಪಿಎಂ ಕೇರ್‍ಸ್ ನಿಧಿಯಿಂದಲೇ ಬಂದಿವೆ! ಇದನ್ನು ನೋಡಿದಾಗ ನನಗೆ ಬಹಳ ಹೆಮ್ಮೆಯಾಯಿತು. ನಾವು ನಿಧಿಗೆ ಕಳುಹಿಸಿದ ಹಣ ವ್ಯರ್ಥವಾಗಿಲ್ಲ! 

ಈ ಹಿಂದೆ, ಮಾರ್ಚ್ ತಿಂಗಳಲ್ಲಿ, ಕೊಡಗಿನ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲ ವೈದ್ಯರುಗಳನ್ನೂ ಕರೆಸಿ ಒಂದು ಸಭೆ ನಡೆಸಿದ್ದರು. ಆಗ ಅವರು “ಎಲ್ಲ ವೈದ್ಯಕೀಯ ಮಿತ್ರರೂ ಕರೋನಾ ಪಿಡುಗನ್ನು ಎದುರಿಸಬೇಕು, ಆ ನಿಟ್ಟಿನಲ್ಲಿ ನೇರವಾಗಿ ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕು, ನಿಮ್ಮ ಯಾವುದೇ ಯೋಜನೆಗೂ ಸರ್ಕಾರದಲ್ಲಿ ಹಣವಿದೆ. ಒಂದು ಬಿಡಿಗಾಸೂ ಪೋಲಾಗುವುದಿಲ್ಲ” ಎಂದು ಹೇಳಿದ ಮಾತು ನಿಜವೆನ್ನಿಸಿತು. ಅದಾದ ಒಂದೇ ವಾರದಲ್ಲಿ ಇಡೀ ಆಸ್ಪತ್ರೆಯನ್ನು ಕೋವಿಡ್ ಕೇಂದ್ರವನ್ನಾಗಿ ಬದಲಾಗಿಸಲಾಗಿತ್ತು! ಸರ್ಕಾರದ ವ್ಯವಸ್ಥೆಯ ಎಲ್ಲ ಇಲಾಖೆಗಳೂ ಒಂದೇ ಉದ್ದೇಶದಿಂದ ಮನಸ್ಸು ಮಾಡಿದರೆ, ಯಾವ ಯೋಜನೆಯನ್ನೂ ಕರಗತಗೊಳಿಸಬಹುದು ಎಂಬುದಕ್ಕೆ ಇದೊಂದು ನಿದರ್ಶನ. ಇದು ಹೇಳುವಷ್ಟು ಸುಲಭವಾದ ವಿಷಯವಲ್ಲ. ಏಕೆಂದರೆ, ಇಡೀ ಆಸ್ಪತ್ರೆಯ ಪ್ರತಿ ಕೋಣೆಗೂ ಆಮ್ಲಜನಕದ ಕೊಳವೆಗಳನ್ನು ಎಳೆದು ತಂದು, ಪ್ರತಿಯೊಂದು ಹಾಸಿಗೆಗೂ ಆಮ್ಲಜನಕದ ಸರಬರಾಜಿನ ವ್ಯವಸ್ಥೆ ಮಾಡಬೇಕಾಗುತ್ತದೆ. ಅಷ್ಟಲ್ಲದೆ, ಉಳಿದ ಎಲ್ಲ ವೈದ್ಯಕೀಯ ಶಾಖೆಗಳನ್ನು ಮಡಿಕೇರಿಯ ಅಶ್ವಿನೀ ಅಸ್ಪತ್ರೆಗೆ ಸ್ಥಳಾಂತರಗೊಳಿಸಲಾಗಿತ್ತು.

ಕೋವಿಡ್-೧೯ ಪಾಸಿಟಿವ್ ಇರುವ ಎಲ್ಲಾ ರೋಗಿಗಳನ್ನೂ ಆಸ್ಪತ್ರೆಗೆ ಸೇರಿಸಿಕೊಳ್ಳಲಾಗುವುದಿಲ್ಲ. ಹೆಚ್ಚಿನ ಮಂದಿ ಮನೆಯಲ್ಲಿಯೇ ಪ್ರತ್ಯೇಕವಾಗಿ ಇದ್ದು, ಯಾರೊಂದಿಗೂ ಬೆರೆಯದೆ, ೧೦ ದಿನಗಳ ಕಾಲ ‘ಸಂಪರ್ಕ ನಿಷೇಧ’ದಲ್ಲಿ ಇದ್ದು ನಿಯಮಿತವಾಗಿ ಔಷಧಿಗಳನ್ನು ಸೇವಿಸಬಹುದು. ಉಸಿರಾಟದ ತೊಂದರೆ ಮತ್ತು ಇನ್ನಾವುದೇ ಕೇಡು ರೋಗಗಳಿದ್ದಲ್ಲಿ ಮಾತ್ರ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಆದರೆ, ಒಂದು ಸಾರಿ ಕೋವಿಡ್-೧೯ ಆಸ್ಪತ್ರೆಗೆ ಸೇರಿದ ನಂತರ, ಅಲ್ಲಿಂದ ಬಿಡುಗಡೆ ಹೊಂದುವ ತನಕ ರೋಗಿಯನ್ನು ಭೇಟಿ ಮಾಡಲು ಯಾರನ್ನೂ ಆಸ್ಪತ್ರೆಯ ಒಳಗೆ ಬಿಡುವುದಿಲ್ಲ.

ಕರೋನಾ ರೋಗದಿಂದ ಆಪತ್ತು ಯಾರಿಗೆ? 

ಕೋವಿಡ್-೧೯ರ ಬಗ್ಗೆ ಜನಸಾಮಾನ್ಯರು ಭಯ ಪಡಬೇಕಾದ ಪ್ರಮೇಯವೇ ಇಲ್ಲ. ಮಕ್ಕಳಲ್ಲಿ ಹಾಗೂ ಯುವವಯಸ್ಸಿನವರಿಗೆ ಈ ರೋಗ ಹೆಚ್ಚಾಗಿ ಬಾಧಿಸುವುದಿಲ್ಲ. ಆದರೆ, ಅಂತಹವರಿಂದ ಅವರ ಸಂಪರ್ಕದಲ್ಲಿರುವ ವಯಸ್ಸಾದವರಿಗೆ ಆಪತ್ತು ತಪ್ಪಿದ್ದಲ್ಲ.

ಉಬ್ಬಸ, ಕ್ಷಯ, ಹಾಗೂ ಆಗಾಗ ಶ್ವಾಸಕೋಶದ ಯಾವುದೇ ತೊಂದರೆಯನ್ನು ಅನುಭವಿಸುತ್ತಿರುವವರಿಗೆ                                      ರಕ್ತದೊತ್ತಡ ಮತ್ತು ಇತರ ಹೃದಯ ಸಂಬಂಧದ ರೋಗವಿರುವವರಿಗೆ                                                                                  ಮಧುಮೇಹ ರೋಗಿಗಳಿಗೆ                                                                                                                                        ಮೂತ್ರಪಿಂಡಗಳ ವಿಫಲತೆ ಇರುವ ರೋಗಿಗಳಿಗೆ                                                                                                                            ನಿಶ್ಶಕ್ತಿ ಮತ್ತು ರಕ್ತಹೀನತೆಯಿಂದ ಬಳಲುತ್ತಿರುವವರಿಗೆ

ಮುಂಜಾಗ್ರತಾ ಕ್ರಮಗಳು:

ಅನವಶ್ಯವಾಗಿ, ಯಾವುದೇ ಕೆಲಸವಿಲ್ಲದೆ, ಮನೆಯಿಂದ ಹೊರಗೆ ಬೀದಿ ಸುತ್ತಲು ಹೋಗಕೂಡದು.                                    ಹೊರಗೆ ಯಾವಾಗಲೂ ಮುಖಕ್ಕೆ ಮಾಸ್ಕ್ ಹಾಕಿಕೊಂಡಿರಬೇಕು.                                                                                                    ಕನಿಷ್ಟ ಆರು ಅಡಿಗಳ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು.                                                                              ಮನೆಯಿಂದ ಹೊರಗೆ ಹೋದಲ್ಲಿ, ಯಾವುದೇ ವಸ್ತುವನ್ನು, ಮುಖ್ಯವಾಗಿ ಟೇಬಲ್, ಕುರ್ಚಿ, ಕಂಬಗಳು, ಸರಪಣಿ-ಕಂಬಿಗಳು, ಮುಂತಾದುವುಗಳನ್ನು ಅನವಶ್ಯವಾಗಿ ಮುಟ್ಟಕೂಡದು.                                                                                                                  ಕೈಗಳನ್ನು ಆಗಾಗ ಸ್ಯಾನಿಟೈಸರ್‌ನಿಂದ ಶುದ್ಧವಾಗಿಟ್ಟುಕೊಳ್ಳಬೇಕು.                                                                                                  ಮನೆಗೆ ಹಿಂದಿರುಗಿದ ನಂತರ ಮೊದಲು ಉಡುಪುಗಳನ್ನು ಬದಲಿಸಿ, ಕೈಕಾಲುಮುಖ ತೊಳೆದುಕೊಂಡು ನಂತರವೇ ಉಳಿದ ಕೆಲಸ!

ಮೊದಲ ದಿನ: ಸುಸ್ತು ಮತ್ತು ಉಸಿರಾಟದ ತೊಂದರೆಯಿಂದಾಗಿ ಇಡೀ ರಾತ್ರಿ ನಿದ್ದೆ ಬಂದಿರಲಿಲ್ಲ. ಬೆಳಿಗ್ಗೆ ಆರು ಗಂಟೆಗೆ ನನಗೆ ಕ್ರಮಬದ್ಧವಾಗಿ ಕೋವಿಡ್-೧೯ರ ಔಷಧಿಗಳನ್ನು ಕೊಡಲು ಶುರುಮಾಡಿದರು. ನನಗೆ ಎದ್ದು ನಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಹಲ್ಲುಜ್ಜಲು ಎದ್ದು, ಅಲ್ಲಿಯೇ ಇದ್ದ ಸಿಂಕಿನ ಹತ್ತಿರ ಹೋದರೂ, ಮರುಕ್ಷಣವೇ ಏದುಸಿರು ಬಂದು, ಹಿಂದಿರುಗಿ ಮೂಗಿಗೆ ಆಮ್ಲಜನಕದ ಮಾಸ್ಕ್ ಹಾಕಿಕೊಳ್ಳಬೇಕಾಯಿತು! ಒಂದೊಂದು ಬಾರಿ ಮಗ್ಗಲು ಬದಲಾಯಿಸುವಾಗಲೂ ಸುಸ್ತಾಗಿ ಸುಧಾರಿಸಿಕೊಳ್ಳಲು ಒಂದೆರಡು ನಿಮಿಷಗಳೇ ಬೇಕಾಗುತ್ತಿತ್ತು. ಹಾಗೂ ಹೀಗೂ ಮುಂಜಾನೆಯ ಆಹ್ನಿಕಗಳನ್ನು ಮುಗಿಸಿದೆ.

ಬೆಳಿಗ್ಗೆ ಸುಮಾರು ಎಂಟು ಗಂಟೆಗೆ ದೋಸೆಯನ್ನು ನೀಡಿದರು. ಉಸಿರಾಡಲು ಬಹಳ ಕಷ್ಟವಾಗುತ್ತಿದ್ದುದರಿಂದ ನನಗಂತೂ ಆ ಪರಿಸ್ಥಿತಿಯಲ್ಲಿ ಮಾಸ್ಕ್ ತೆಗೆದು ತಿನ್ನಲು ಕಷ್ಟವೇ ಅಯಿತು. ದೋಸೆಯೊಂದಿಗೆ ಸಾಂಬಾರ್ ಮತ್ತು ಚಟ್ನಿಯಿತ್ತು. ನನಗೆ ಅವುಗಳ ರುಚಿ-ವಾಸನೆ ಒಂದಿಷ್ಟೂ ತಿಳಿಯಲಿಲ್ಲ!

ನಾವು ಉಸಿರಾಡುವಾಗ, ಗಾಳಿಯಿಂದ ಎಷ್ಟು ಆಮ್ಲಜನಕವನ್ನು ನಮ್ಮ ದೇಹ ಹೀರಿಕೊಂಡಿದೆ, ನಮ್ಮ ರಕ್ತದಲ್ಲಿ ಎಷ್ಟು ಆಮ್ಲಜನಕ ಹರಿಯುತ್ತಿದೆ ಎಂಬುದನ್ನು SpO2 ಮಾಪನದಿಂದ ಆಳೆಯಲಾಗುತ್ತದೆ. ಆಕ್ಸಿಮೀಟರ್ ಎಂಬ ಸಣ್ಣದೊಂದು ಯಂತ್ರದಲ್ಲಿ ಕೈಬೆರಳಿನ ತುದಿಯನ್ನು ಇಟ್ಟು ಆ ಮೂಲಕ SpO2ವನ್ನು ತಿಳಿಯಲಾಗುತ್ತದೆ. ಶ್ವಾಸಕೋಶದ ಯಾವುದೇ ರೋಗದಿಂದ ಬಳಲುತ್ತಿರುವ ಒಬ್ಬ ರೋಗಿಯ SpO2 ಶೇಕಡಾ ೯೦ಕ್ಕಿಂತ ಕಡಿಮೆಯಿದ್ದರೆ, ಉಸಿರಾಡಲು ಕಷ್ಟವಾಗುತ್ತಿದೆ ಎಂದರ್ಥ. ನೆನ್ನೆ ನಾನು ಆಸ್ಪತ್ರೆಯನ್ನು ಸೇರುವಾಗ ಇದು ೮೩% ಇತ್ತು ಎಂದರೆ, ನನಗಿದ್ದ ಕರೋನಾ ರೋಗದ ತೀವ್ರತೆ ನಿಮಗೆ ಅರ್ಥವಾಗಬಹುದು! ಆಮ್ಲಜನಕದ ಮಾಸ್ಕ್‌ನ್ನು ನಾನು ಬಳಸುವಾಗಲೂ ೯೨-೯೩% ದಾಟಲಿಲ್ಲ ಮತ್ತು ನಾಡಿ ಬಡಿತದ ವೇಗ ೧೦೦ರಷ್ಟಿತ್ತು. ಐಸಿಯುಗಳಲ್ಲಿ ಒಬ್ಬೊಬ್ಬ ರೋಗಿಯ ಹಾಸಿಗೆಗೂ SpO2, ರಕ್ತದೊತ್ತಡ, ನಾಡಿ ಬಡಿತ, ಇಸಿಜಿ, ಮತ್ತು ಇತರ ವಿವಿಧ ಮೌಲ್ಯಗಳನ್ನು ಅಳೆಯುವ ಮಾನಿಟರ್ ಯಂತ್ರವನ್ನು ಅಳವಡಿಲಾಗಿರುತ್ತದೆ.  
ಹನ್ನೊಂದು ಗಂಟೆಯ ವೇಳೆಗೆ ವೈದ್ಯರ ಮೊದಲನೆ ಸುತ್ತಿನ ರೌಂಡ್ಸ್. ಕೋವಿಡ್ ಆಸ್ಪತ್ರೆಯಲ್ಲಿ ನುರಿತ ಹಾಗೂ ದಕ್ಷ ವೈದ್ಯರುಗಳ ಒಂದು ತಂಡ ನಿಯತವಾಗಿ ಕೆಲಸ ಮಾಡುತ್ತದೆ. ಕೋವಿಡ್-೧೯ ಶ್ವಾಸಕೋಶದ ಖಾಯಿಲೆಯಾದುದರಿಂದ ಈ ತಂಡದಲ್ಲಿ ಮುಖ್ಯವಾಗಿ ಒಬ್ಬ ಅರಿವಳಿಕೆ ತಜ್ಞರು ಇದ್ದೇ ಇರುತ್ತಾರೆ. ನನಗೆ ಚಿಕಿತ್ಸೆ ನೀಡುತ್ತಿದ್ದ ತಂಡದಲ್ಲಿ ಡಾ. ಕಸ್ತೂರಿಯವರಿದ್ದರು. ಅವರು ಈ ಮೊದಲು ವಿರಾಜಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರ ಪರಿಚಯವಿತ್ತು. ಅದೇ ಆಸ್ಪತ್ರೆಯಲ್ಲಿ ನಾನು ದಂತವೈದ್ಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತೇನೆ, ಅಲ್ಲದೆ ಭಾರತೀಯ ವೈದ್ಯಕೀಯ ಸಂಸ್ಥೆಯ ಶಾಖೆಯ ಕಾರ್ಯದರ್ಶಿ ಮತ್ತು ಅಧ್ಯಕ್ಷನಾಗಿದ್ದಾಗ ಅವರು ನಮ್ಮ ಕಾರ್ಯಕ್ರಮಗಳಿಗೆ ಬರುತ್ತಿದ್ದರು. 

ಡಾ. ಗುರುದತ್ತ: ಕೋವಿಡ್-೧೯ ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಯರು ಮತ್ತು ಇತರ ಸಿಬ್ಬಂದಿಗಳೆಲ್ಲರೂ ಒಂದೇ ರೀತಿಯ ವೈಯ್ಯಕ್ತಿಕ ರಕ್ಷಣಾ ಉಡುಪು, PPE, ಧರಿಸುವುದರಿಂದ ಸುಲಭವಾಗಿ ಗುರುತು ಹಚ್ಚುವುದು ಸಾಧ್ಯವಿಲ್ಲ. ಡಾ. ಕಸ್ತೂರಿಯವರೇ ತಮ್ಮ ಪರಿಚಯ ಮಾಡಿಕೊಂಡರು. ಆಶ್ಚರ್ಯದ ಸಂಗತಿಯೇನೆಂದರೆ, ಸ್ನಾತಕೋತ್ತರ ಪದವಿ ಕಾಲೇಜಿನಲ್ಲಿ ಪ್ರೊ. ಗುರುದತ್ತರವರು ಕಸ್ತೂರಿಯವರ ಗುರುಗಳಾಗಿದ್ದರಂತೆ!

ಕ್ಯಾಪ್ಟನ್ ಪ್ರೊಫೆಸರ್ ಗುರುದತ್ತ, ನನ್ನ ಮೈಸೂರು ಮೆಡಿಕಲ್ ಕಾಲೇಜಿನ ಸಹಪಾಠಿ. ನೂರಾರು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದ, ವಿಷಯಪಾಂಡಿತ್ಯ, ಶಿಸ್ತು, ನಮ್ರತೆ ಹಾಗೂ ಮಾನವೀಯ ಗುಣಗಳುಳ್ಳ, ದೇಶದಾದ್ಯಂತ ಹೆಸರುವಾಸಿಯಾದ, ಅರಿವಳಿಕೆ ತಜ್ಞ. ನನ್ನ ಪರಿಸ್ಥಿತಿಯನ್ನು ಡಾ. ಕಸ್ತೂರಿಯವರು ಅವನಿಗೆ ಹೇಳಿದ್ದರೆಂದು ತೋರುತ್ತದೆ. ಮಾರನೆಯ ರಾತ್ರಿ ಫೋನ್ ಮಾಡಿ ನನ್ನೊಡನೆ ಮಾತನಾಡಿದ. ಕೋವಿಡ್-೧೯ರ ಅಪಾಯದ ಬಗ್ಗೆ ವಿವರವಾಗಿ ಹೇಳಿ, ನನ್ನಲ್ಲಿ ಧೈರ್ಯ ತುಂಬಿ, ಉಸಿರಾಟದ ಹಲವು ವಿಧಾನಗಳನ್ನು ಹೇಳಿಕೊಟ್ಟ. ಆ ವಿಧಾನಗಳು ಮುಂದೆ ನನಗೆ ಬಹಳ ಸಹಾಯಕ್ಕೆ ಬಂದವು. ಆತ ನನ್ನ ಸ್ನೇಹಿತ ಎನ್ನುವುದೇ ಹೆಮ್ಮೆ! ಗುರು, ಈಗ ಮೈಸೂರಿನ ಜೆ.ಎಸ್.ಎಸ್. ಮೆಡಿಕಲ್ ಕಾಲೇಜಿನಲ್ಲಿ ಅರಿವಳಿಕೆ ವಿಭಾಗದ ಮುಖ್ಯಸ್ಥನಾಗಿದ್ದಾನೆ. ಆತನ ಉಳಿದ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ:
<https://www.google.com/url?sa=t&source=web&rct=j&url=https://m.youtube.com/watch%3Fv%3D-B-frU_IZlw&ved=2ahUKEwj-8M3wwcfsAhWEYysKHeiSARgQjjgwAHoECAEQAQ&usg=AOvVaw0yyQjgqbkYr4U3EHko7WXL&cshid=1603346529265>

ಆ ರಾತ್ರಿ ಡಾ. ಅಯ್ಯಪ್ಪನವರು ರೌಂಡ್ಸ್ ಬಂದಿದ್ದಾಗ ನನ್ನ ಸಿಟಿ ಸ್ಕ್ಯಾನ್ ತಂದು ತೋರಿಸಿ ವಿವರಿಸಿದರು. ಅವರು ಹೇಳಿದ ವಿಷಯ ಭಯವನ್ನೇ ಉಂಟುಮಾಡುತ್ತಿತ್ತು! ಕರೋನಾ ವೈರಾಣುಗಳು ನನ್ನ ಎರಡೂ ಶ್ವಾಸಕೋಶಗಳನ್ನು, ಅದರಲ್ಲೂ ಮಧ್ಯ ಮತ್ತು ಕೆಳಭಾಗದ ಹಾಲೆಗಳನ್ನು, ತಿಂದು ಹಾಕಿದ್ದವು. ಅವರ ಪ್ರಕಾರ ಸುಮಾರು ೫೭% ಶ್ವಾಸಕೋಶ ನಾಶವಾಗಿತ್ತು. ವೈರಸ್ ನಾಶಕ ಔಷಧಗಳನ್ನು ರೋಗಿಗೆ ಕೊಟ್ಟನಂತರ, ಅದು ದೇಹದಲ್ಲಿ ಕೆಲಸ ಮಾಡಿ, ಮೊದಲು ವೈರಸ್‌ಗಳನ್ನು ಕೊಂದು, ಅವುಗಳ ವಿನಾಶಕಾರ್ಯ ಸ್ಥಗಿತಗೊಂಡ ಮೇಲೆ, ಶ್ವಾಸಕೋಶಗಳು ಚೇತರಿಸಿಕೊಂಡು ಪುನಃ ಉಸಿರಾಟದ ಕೆಲಸದಲ್ಲಿ ಭಾಗಿಯಾಗುತ್ತವೆ. ಇದಕ್ಕೆ ಏನಿಲ್ಲವೆಂದರೂ ೩-೪ ದಿನಗಳು ಹಿಡಿಸುತ್ತವೆ.

ರೋಗಿಗೆ ಈ ಮೊದಲೇ ಶ್ವಾಸಕೋಶ, ಹೃದಯ, ಮೂತ್ರಪಿಂಡಗಳಿಗೆ ಸಂಬಂಧಪಟ್ಟ ವ್ಯಾಧಿಯಿದ್ದರೆ, ಅಥವಾ ಆತನಿಗೆ ರಕ್ತದೊತ್ತಡ, ಮಧುಮೇಹ ರೋಗಗಳಿದ್ದಲ್ಲಿ, ಈ ಮೂರು ದಿನಗಳಲ್ಲಿ ಅತ್ಯಂತ ಸಂದಿಗ್ಧ, ಅಪಾಯಸಂಭವದ, ವಿಷಮಾವಸ್ಥೆಯ ಪರಿಸ್ಥಿತಿ ಒದಗಬಹುದು! ಪುಣ್ಯವಶಾತ್ ನನಗೆ ಇಂತಹ ಯಾವುದೇ ಅನಾರೋಗ್ಯಗಳು ಇರಲಿಲ್ಲ. ಆದರೂ ಒಂದು ರೀತಿಯ ಭಯ ನನ್ನನ್ನು ಕಾಡುತ್ತಲೇ ಇತ್ತು. ಒಂದೊಂದು ಉಸಿರನ್ನೂ ತೂಕಮಾಡಿ ಎಳೆದುಕೊಳ್ಳುತ್ತಿದ್ದೆ ಎನಿಸುತ್ತಿತ್ತು! 

ಊಟದ ವ್ಯವಸ್ಥೆ:  ಬೆಳಿಗ್ಗೆ ೮.೩೦ಕ್ಕೆ ಸರಿಯಾಗಿ ಎಲ್ಲ ರೋಗಿಗಳಿಗೂ ಉಪಹಾರ                                                                              ಸುಮಾರು ೧೧-೧೧.೩೦ಕ್ಕೆ ಹಣ್ಣು ಮತ್ತು ಕುಡಿಯಲು ಗಂಜಿ ಅಥವಾ ಸೂಪ್                                                                        ಮಧ್ಯಾಹ್ನ ೧.೩೦ಕ್ಕೆ ಪುಷ್ಕಳವಾದ ಊಟ; ಜೊತೆಗೆ ಮೊಟ್ಟೆ                                                                                                     ಸಂಜೆ ಕಾಫಿ-ಟೀ ಬಿಸ್ಕೆಟ್                                                                                                                                                                    ರಾತ್ರಿ ಎಂಟು ಗಂಟೆಗೆ ಊಟ                                                                                                                                                                ರಾತ್ರಿ ೧೦ ಗಂಟೆಗೆ ಹಾಲು.                                                                                                                                                                   ಇದು ಎಲ್ಲ ಸರ್ಕಾರಿ ಕೋವಿಡ್ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಬರಾಜಾಗುವ ಆಹಾರದ ಪಟ್ಟಿ! ಇದರ ಜೊತೆಗೆ ನರ್ಸ್‌ಗಳಿಂದ ಎಲ್ಲ ರೋಗಿಗಳಿಗೂ ಏನನ್ನೂ ಬಿಸಾಡದೆ, ಹೊಟ್ಟೆತುಂಬಾ ತಿನ್ನಲು ತಾಕೀತು! 

ಎರಡನೆಯ ದಿನ: ನನ್ನ ಉಸಿರಾಟದ ಪರಿಸ್ಥಿತಿಯಲ್ಲಿ ಹೆಚ್ಚು ಬದಲಾವಣೆಗಳಾಗಿರಲಿಲ್ಲ. ಎದ್ದು ಕೂರಲು, ಆಚೀಚೆ ಮಗ್ಗಲು ತಿರುಗಲು ಬುಸುಗುಟ್ಟುತ್ತಿದ್ದೆ. ನಿಧಾನವಾಗಿ ಉಸಿರಾಡುತ್ತ ಮಲಗಿದ್ದಲ್ಲಿ, ದೇಹದಲ್ಲಿ ಮತ್ತಾವುದೇ ಸಮಸ್ಯೆಯೂ ಇರಲಿಲ್ಲ. ಆದರೆ ಸ್ವಲ್ಪ ಹೆಚ್ಚಾಗಿ ಶ್ವಾಸ ಎಳೆದುಕೊಂಡರೂ ಉಸಿರುಗಟ್ಟುತ್ತಿತ್ತು. ಆಸ್ಪತ್ರೆಗೆ ಸೇರುವ ತುರಾತುರಿಯಲ್ಲಿ, ಬರುವಾಗ ಅಗತ್ಯವಾದ ಬಟ್ಟೆಗಳನ್ನು ತಂದಿರಲಿಲ್ಲ. ಮಡಿಕೇರಿಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿತ್ತು. ಅಲ್ಲದೆ ನನ್ನ ಕೋಣೆಯ ಎಲ್ಲ ಕಿಟಕಿಗಳನ್ನು ಮುಚ್ಚಿದ್ದರೂ ಸುಂಯ್ ಎಂದು ಛಳಿ ಗಾಳಿ ಬೀಸುತ್ತಿತ್ತು.

ಡಾ. ಪ್ರಿಯದರ್ಶಿನಿಯವರು ಮಡಿಕೇರಿ ಸರ್ಕಾರಿ ಅಸ್ಪತ್ರೆಯಲ್ಲಿ ರೋಗಲಕ್ಷಣಶಾಸ್ತ್ರ (Pathology) ತಜ್ಞೆ. ಅವರು ವಿರಾಜಪೇಟೆಯ ಖ್ಯಾತ ದಂತವೈದ್ಯರಾದ ಡಾ. ಮಾದಂಡ ಉತ್ತಯ್ಯನವರ ಸೊಸೆ. ವಿರಾಜಪೇಟೆಯಿಂದ ಪ್ರತಿದಿನ ಮಡಿಕೇರಿಗೆ ಹೋಗಿ ಬರುತ್ತಿದ್ದರು. ಅವರಿಗೆ ಫೋನ್ ಮಾಡಿ ನಮ್ಮ ಮನೆಯಿಂದ ನನಗೆ ಕೆಲವು ವಸ್ತುಗಳನ್ನು ತರಲು ಸಾಧ್ಯವೆ ಎಂದು ಕೇಳಿದೆ. ಸಂತೋಷದಿಂದ ಎರಡು ಮಾತನಾಡದೆ ಒಪ್ಪಿಕೊಂಡರು. ಮಾರನೆಯ ದಿನ, ನನ್ನ ಅವಶ್ಯ ವಸ್ತುಗಳ ಜೊತೆಗೆ ಒಂದು ಉಲನ್ ತೊಪ್ಪಿಯನ್ನೂ ತಂದು ಕೊಟ್ಟರು!

ಅಲ್ಲಿಂದ ಮುಂದೆ ೨-೩ ಬಾರಿ ನನಗೆ ಸಹಾಯ ಮಾಡಿದರು. ಅಲ್ಲದೆ ಪ್ರತಿದಿನ ಬಿಡುವು ಮಾಡಿಕೊಂಡು ವಾರ್ಡಿಗೆ ಬಂದು ನನ್ನನ್ನು ಮಾತನಾಡಿಸಿ ಧೈರ್ಯ ತುಂಬಿದರು. ಅವರ ಸಹಾಯವನ್ನು ನಾನು ಜನ್ಮದಲ್ಲಿ ಮರೆಯುವಂತಿಲ್ಲ!

ಮೂರನೆಯ ದಿನ: ನಿಧಾನವಾಗಿ ಉಸಿರಾಡಲು ಅಭ್ಯಾಸ ಮಾಡಿಕೊಂಡಿದ್ದೆ. ಒಂದೊಂದು ಉಚ್ಚ್ವಾಸವನ್ನೂ ದೀರ್ಘವಾಗಿ ಎಳೆದುಕೊಂಡು ಅಷ್ಟೇ ನಿಧಾನವಾಗಿ ಬಿಡುತ್ತಿದ್ದೆ. ಇದರಿಂದ ದೇಹದ SPO2 ಮಟ್ಟ ೯೫-೯೬% ತಲಪುತ್ತಿತ್ತು. ಹೆಚ್ಚು ರಭಸದಿಂದ ಉಸಿರಾಡಲು ಇನ್ನೂ ಆಗುತ್ತಿರಲಿಲ್ಲ. ರಾತ್ರಿ ಎಷ್ಟೋ ಬಾರಿ ಏನಾಗುವುದೋ ಎಂಬ ಭಯ ಕಾಡುತ್ತಿತ್ತು. ಪ್ರತಿದಿನ ಡಾ. ಕಾರಿಯಪ್ಪ, ಡಾ. ಫಾತಿಮಾ ಮತ್ತು ಡಾ. ದೀಪಕ್ ತಪ್ಪದೆ ಫೋನ್ ಮಾಡಿ ಆರೋಗ್ಯವನ್ನು ವಿಚಾರಿಸುತ್ತಿದ್ದರು. ಫೋನ್‌ನಲ್ಲಿ ಒಂದರ್ಧ ನಿಮಿಷ ಮಾತನಾಡಬಲ್ಲವನಾಗಿದ್ದೆ. ಎದ್ದು ಸ್ವಲ್ಪ ಹೊತ್ತು ಕೂರಲು ಸಾಧ್ಯವಾಗಿತ್ತು; ಬಿಸಿ ನೀರು ತರಲು ನಾನೇ ಎದ್ದು ಹೋಗುವಂತಾಗಿದ್ದೆ; ಮಾಸ್ಕ್ ಇಲ್ಲದೆ ಅತ್ತಿತ್ತ ರೂಂನಲ್ಲಿಯೇ ಓಡಾಡಬಲ್ಲವನಾಗಿದ್ದೆ. ಈ ದಿನವನ್ನು ಕಳೆದರೆ ನಾಳೆಯಿಂದ ದೇಹ ಸ್ತಿಮಿತಕ್ಕೆ ಬರಬಹುದೆಂಬ ನಂಬಿಕೆ ಬರತೊಡಗಿತು. ಡಾ. ಕಸ್ತೂರಿಯವರು ದಿನಂಪ್ರತಿ ಒಂದು ಬಾರಿ ರೌಂಡ್ಸ್‌ಗೆ ಬರುತ್ತಿದ್ದರು. ಪ್ರತಿ ಬಾರಿಯೂ ಉಸಿರಾಟದ ವಿಧಾನಗಳನ್ನು; ಅಲ್ಲದೆ ಬೆನ್ನು ಮೇಲೆ ಮಾಡಿಕೊಂಡು ಕವುಚಿ ಮಲಗಿ, ಉಸಿರಾಡಲು ಒತ್ತಿ ಹೇಳುತ್ತಿದ್ದರು. ಇದನ್ನು ನಾನು ಎಡೆಬಿಡದೆ ಪ್ರಯತ್ನಿಸುತ್ತಲೇ ಬಂದಿದ್ದೆ. ಆವತ್ತು ಮಧ್ಯಾಹ್ನ ದಾದಿಯರು ಬಂದು, ABG ಪರೀಕ್ಷೆಯ ಸಲುವಾಗಿ, ನನ್ನ ಮಣಿಕಟ್ಟಿನ ಅಪಧಮನಿಯಿಂದ ರಕ್ತವನ್ನು ಸಂಗ್ರಹಿಸಿದರು. ಅವರು ನಾಡಿಯನ್ನು ಚುಚ್ಚುವಾಗ ಆದ ಅಷ್ಟು ತೀವ್ರವಾದ ನೋವನ್ನು ನಾನು ಈವರೆಗೆ ಅನುಭವಿಸಿರಲಿಲ್ಲ! ನಾನು ಆಸ್ಪತ್ರೆಯಲ್ಲಿದ್ದೇನೆ ಎಂಬ ವಿಚಾರ ತಿಳಿದು ಸರ್ಕಾರಿ ಆಸ್ಪತ್ರೆಯ ಹಲವು ವೈದ್ಯರು ಬಂದು ವಿಚಾರಿಸಿಕೊಂಡು ಹೋದರು. ಅವರಲ್ಲಿ ಹಲವರು ನನಗೆ ಪರಿಚಯವೇ ಇರಲಿಲ್ಲ! ಶಸ್ತ್ರತಜ್ಞ ಡಾ. ನವೀನ್ ಕುಮಾರ್, ಡಾ. ಲೋಕೇಶ್ ಮುಂತಾದವರನ್ನು ಮೊದಲ ಸಾರಿ ನಾನು ಕಂಡಿದ್ದು! 

ಪ್ರತಿದಿನ ಸಂಜೆ ಶ್ರೀ ವಿಷ್ಣು ಸಹಸ್ರನಾಮವನ್ನು ಹೇಳುವ ಪರಿಪಾಠವನ್ನು ಬೆಳೆಸಿಕೊಂಡಿದ್ದೆ. ಕಳೆದ ಎರಡು ದಿನಗಳಿಂದ ಅದು ಸಾಧ್ಯವಾಗಿರಲಿಲ್ಲ. ಈವತ್ತು ಹೇಳಲು ಸಾಧ್ಯವಾಗದಿದ್ದರೂ, ಕುಳಿತು ಕೇಳಿದೆ.

ನಾಲ್ಕನೆಯ ದಿನ: ದಿನವಿಡೀ ಉಸಿರಾಟದ ವ್ಯಾಯಾಮ ಮುಂದುವರೆಸಿದೆ. ಆಮ್ಲಜನಕದ ಮಾಸ್ಕ್‌ನೊಂದಿಗೆ, ಈಗ ಸುಲಭವಾಗಿ SpO2 ಮಟ್ಟ ೯೭-೯೮% ತಲುಪುತ್ತಿತ್ತು. ನನ್ನ ನಾಡಿ ಬಡಿತ ಕೂಡ ೬೭-೭೦ಕ್ಕೆ ಇಳಿದಿತ್ತು. ಮಾಸ್ಕ್ ಇಲ್ಲದೆಯೂ ಸ್ವಲ್ಪ ಹೊತ್ತು ಕಳೆಯಬಲ್ಲವನಾಗಿದ್ದೆ! ಸುಲಭವಾಗಿ ಕವುಚಿ ಮಲಗಿ ಉಸಿರಾಡಲು ಅಭ್ಯಾಸ ಮಾಡಿಕೊಂಡಿದ್ದೆ. ನನ್ನ ಇಷ್ಟು ದಿನಗಳ ಪ್ರಯತ್ನ ವ್ಯರ್ಥವಾಗಿರಲಿಲ್ಲ! ನನ್ನ ಶ್ವಾಸಕೋಶಗಳನ್ನು ಹಿಂದಿರುಗಿ ಪಡೆದಿದ್ದೆ! ನಾಳೆಯ ದಿನ ಐಸಿಯುನಿಂದ ವಾರ್ಡಿಗೆ ಕಳುಹಿಸಬಹುದು.

ಐದನೆಯ ದಿನ: ಅಪಾಯದ ದಿನಗಳು ಕಳೆದಿದ್ದವು. ವಾರ್ಡಿಗೆ ಶಿಫ಼್ಟ್ ಮಾಡಬಹುದೆಂದು ವೈದ್ಯರುಗಳು ತೀರ್ಮಾನಿಸಿದರು. ಅಂತೆಯೇ ಮಧ್ಯಾಹ್ನ ನಾನು ಹತ್ತಿರವೇ ಇದ್ದ ಒಂದು ಪ್ರತ್ಯೇಕ ವಾರ್ಡಿಗೆ ಬದಲಾಯಿಸಿಕೊಂಡೆ. ಮೊದಲೇ ಹೇಳಿದಂತೆ ಇಲ್ಲಿಯೂ ಆಮ್ಲಜನಕದ ಸರಬರಾಜು ಇದ್ದೇ ಇತ್ತು. ಆದರೆ ಸ್ವಲ್ಪಸ್ವಲ್ಪ ಹೊತ್ತು ಅದಿಲ್ಲದೆಯೇ ಉಸಿರಾಡಲು ಅಭ್ಯಾಸ ಮಾಡತೊಡಗಿದೆ. ಪುಣ್ಯವಶಾತ್, ಅಪಾಯದ ದಿನಗಳು ಕಳೆದಿದ್ದವು. ಡಾ. ಪ್ರಿಯದರ್ಶಿನಿಯವರು ಮನೆಯಿಂದ ಆಕ್ಸಿಮೀಟರ್ ತಂದು ಕೊಟ್ಟಿದ್ದರು. ಒಟ್ಟು ಏಳು ದಿನಗಳ ಕಾಲ ಕೋವಿಡ್-೧೯ರ ಚಿಕಿತ್ಸೆಯಿದ್ದು, ದಾದಿಯರು ಕ್ರಮಪ್ರಕಾರ ಔಷಧಿಗಳನ್ನು ಮುಂದುವರಿಸಿದರು. 

ಆರನೆಯ ದಿನ ಬೆಳಿಗ್ಗೆ ಇದ್ದಕ್ಕಿದ್ದಂತೆ ನನಗೆ ಬೆಳಗಿನ ಉಪಾಹಾರದ ವಾಸನೆ ಗಮನಕ್ಕೆ ಬಂತು! ಬರೋಬ್ಬರಿ ಹತ್ತು ದಿನಗಳ ಕಾಲ ಘ್ರಾಣಶಕ್ತಿಯನ್ನು ಕಳೆದುಕೊಂಡಿದ್ದೆ. ಏಳು-ಎಂಟನೆಯ ದಿನಗಳು ಯಾವುದೇ ವಿಶೇಷ ಘಟನೆಗಳಿಲ್ಲದೆ ಕಳೆದವು. 

ಎಂಟನೆಯ ದಿನ ಬೆಳಿಗ್ಗೆ ರೌಂಡ್ಸ್‌ಗೆ ಬಂದ ವೈದ್ಯರು “ಡಾಕ್ಟರೆ, ಈಗ ನಿಮ್ಮ ಆರೋಗ್ಯ ಬಹುತೇಕ ಸುಧಾರಿಸಿದೆ. ಇನ್ನು ನೀವು ಮನೆಗೆ ಹೋಗುತ್ತೀರಾ?” ಎಂದು ಕೇಳಿದರು. 

ನಾನು ಅವರಿಗೆ ಕೈ ಮುಗಿದು ಹೇಳಿದೆ, “ಡಾಕ್ಟರೆ, ನಾನು ನಿಮ್ಮಿಂದ ಚಿಕಿತ್ಸೆ ಪಡೆಯುತ್ತಿರುವ ರೋಗಿ. ನನ್ನ ಜೀವ ಉಳಿಸಿದ್ದೀರಿ. ನನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ, ತಿಳಿವಳಿಕೆಯಿದೆ ನಿಮಗೇ ಇದೆ. ಆದ್ದರಿಂದ ಇದನ್ನು ನೀವೇ ತೀರ್ಮಾನ ಮಾಡಬೇಕು.” 

ಆಕೆಗೆ ಏನು ಹೇಳಬೇಕೆಂದೇ ತೋಚಲಿಲ್ಲ.“ ಸರ್, ನೀವು ನನಗಿಂತ ದೊಡ್ಡವರು. ನೀವು ನನಗೆ ನಮಸ್ಕಾರ ಮಾಡಬಾರದು. ನಿಮ್ಮಂತಹ ಹಿರಿಯ ಡಾಕ್ಟರ ಸೇವೆ ಮಾಡಲು ನನಗೊಂದು ಅವಕಾಶ ಸಿಕ್ಕಿದ್ದೇ ಭಾಗ್ಯ! ಆಗಲಿ, ಈವತ್ತು ಮಧ್ಯಾಹ್ನದ ಮೇಲೆ ನಿಮ್ಮನ್ನು ಡಿಸ್ಚಾರ್ಜ್ ಮಾಡಲು ಹೇಳುತ್ತೇನೆ. ಡಿಸ್ಚಾರ್ಜ್ ಸಮ್ಮರಿ ಬರೆಯುತ್ತೇನೆ,” ಎಂದಳು. ಅವಳ ಕಣ್ಣಂಚಿನಲ್ಲಿ ನೀರು ತುಂಬಿತ್ತು!

ಅಂದು ಸಂಜೆ ಟ್ಯಾಕ್ಸಿ ಮಾಡಿಕೊಂಡು ಮನೆ ಸೇರಿದೆ. ಅಷ್ಟರಲ್ಲಿ ಡಾ. ಕಾರಿಯಪ್ಪ ಮತ್ತು ಡಾ. ಫ಼ಾತಿಮಾ ನಮ್ಮ ಮನೆಗೆ ಅವರ ಆಸ್ಪತ್ರೆಯಿಂದ ಒಂದು ಆಮ್ಲಜನಕದ ಸಿಲಿಂಡರ್‌ನ್ನು ತಂದು ಇರಿಸಿದರು: ತುರ್ತಿನ ಪರಿಸ್ಥಿತಿಗೆ ಇರಲೆಂದು. ಆದರೆ ನಾನು ಅದನ್ನು ಬಳಸುವ ಪ್ರಮೇಯವೇ ಬರಲಿಲ್ಲ. 

ಅಲ್ಲಿಂದ ಒಂದು ತಿಂಗಳ ಕಾಲ ನಾನು ಮನೆಯಲ್ಲಿಯೇ ಇರಲು ಆದೇಶ ಕೊಟ್ಟಿದ್ದರು. ಕೆಲವು ಔಷಧಿ ಮಾತ್ರೆಗಳನ್ನು ನುಂಗಲು ಹೇಳಿದ್ದರು.

ಪುನರ್ಜನ್ಮ ಪಡೆಯಲು ನಾನು ಸಾಯಲಿಲ್ಲ: ಮತ್ತೊಮ್ಮೆ ಹುಟ್ಟಿ ಬಂದೆ! ದೇವರ ಕೃಪೆಯಿಂದ ಅಥವಾ ನನ್ನ ದೃಢ ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನದಿಂದ ನಾನು ಕೋವಿಡ್-೧೯ನ್ನು ಜಯಿಸಿದೆ, ಎಂದು ನಾನು ಖಂಡಿತ ಹೇಳಲಾರೆ. ಇದಕ್ಕೆ ಆಸ್ಪತ್ರೆಯ ವೈದ್ಯರ, ದಾದಿಯರ ಮತ್ತು ಸಿಬ್ಬಂದಿಗಳ ಪ್ರಾಮಾಣಿಕ, ಪ್ರತಿಫಲಾಪೇಕ್ಷೆಯಿಲ್ಲದ, ನಿರಂತರ ಸೇವೆಯೇ ಕಾರಣ! ಮತ್ತು ಅಷ್ಟೇ ನಿಸ್ಪೃಹತೆಯಿಂದ ಈ ವ್ಯವಸ್ಥೆಯನ್ನು ನಿರ್ವಹಿಸಿದ ಸರ್ಕಾರ! ಅವರ ಈ ಉದಾರ ಹೃದಯದ ಸೇವೆಯನ್ನು ನಾನು ಮರೆಯುವಂತಿಲ್ಲ! 

ಕರೋನಾ ಬಗ್ಗೆ ಎಚ್ಚರಿಕೆಯ ನಡೆಗಳು

ಸರ್ಕಾರ ಬದಲಾಗಿದೆ, ದೇಶ ಬದಲಾಗುತ್ತಿದೆ. ಸರ್ಕಾರಿ ಕೋವಿಡ್ ಆಸ್ಪತ್ರೆಗಳು ಸಂಪೂರ್ಣವಾಗಿ ಎಲ್ಲ ಸಲಕರಣೆಗಳೊಂದಿಗೆ ಸುಸಜ್ಜಿತವಾಗಿವೆ. ಅಲ್ಲಿ ಎಲ್ಲ ವೈದ್ಯರು, ದಾದಿಯರು ಮತ್ತು ಸಿಬ್ಬಂದಿಗಳು ತಮ್ಮ ಜೀವವನ್ನು ಪಣತೊಟ್ಟು ನಿಮ್ಮ ಸೇವೆ ಮಾಡುತ್ತಿದ್ದಾರೆ.                                                                                                                                                                                  ಖಾಸಗಿ ಆಸ್ಪತ್ರೆಗಳ ಬಗ್ಗೆ ಜನರಿಗಿದ್ದ ನಂಬಿಕೆ ಕರೋನಾ ಸಂಕಷ್ಟದ ಸಮಯದಲ್ಲಿ ಅಳಿಸಿಹೋಗಿದೆ.                             ಕರೋನಾ ವಿಶ್ವಕ್ಕೆ ಮರೆಯಲಾಗದ ಪಾಠ ಕಲಿಸಿದೆ! ಸೋಂಕು ಯಾರಿಗೂ, ಯಾವತ್ತೂ, ಹೇಗೂ ಅಂಟಬಹುದು.            ಮುಖಕ್ಕೆ ಮಾಸ್ಕ್ ಧರಿಸಿ; ಕೈಗಳನ್ನು ಆಗಾಗ ಸಾಬೂನು-ಸ್ಯಾನಿಟೈಸರ್‌ನಿಂದ ತೊಳೆಯಿರಿ; ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ - ಇವು ಎಲ್ಲಕ್ಕಿಂತ ಮುಖ್ಯ!                                                                                                                            ಮಕ್ಕಳು ಹಾಗೂ ಯುವಜನತೆಗೆ ಇದು ಅಷ್ಟಾಗಿ ಬಾಧಿಸುವುದಿಲ್ಲ. ಆದರೆ, ಎಲ್ಲರೂ ಸದಾ ಎಚ್ಚರ ವಹಿಸಬೇಕು. ಮನೆಯಲ್ಲಿರುವ ವಯಸ್ಸಾದ ಮಂದಿಗೆ ಸೋಂಕು ಹರಡಬಹುದು.                                                                                          ಜ್ವರ, ಮೈ-ಕೈ ನೋವು, ಶೀತ-ನೆಗಡಿ, ಕೆಮ್ಮಲು ಬಂದರೆ ಸಮೀಪದ ಕೋವಿಡ್ ಕೇಂದ್ರಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಿ. ಅಲ್ಲಿಯ ವೈದ್ಯರ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ. ಅವರು ಸಲಹೆ ಮಾಡಿದರೆ ಜಿಲ್ಲಾ ಕೋವಿಡ್ ಕೇಂದ್ರದಲ್ಲಿ ದಾಖಲಾಗಿ.        ಸಿದ್ಧ ಆಹಾರ, ಬೇಕರಿ-ಸಿಹಿತಿಂಡಿ ಅಂಗಡಿಗಳಿಂದ ಯಾವ ವಸ್ತುವನ್ನೂ ಕೊಂಡುಕೊಳ್ಳಬೇಡಿ. ನೀವೂ ತಿನ್ನದಿರಿ, ಇತರರಿಗೂ ಹಂಚಬೇಡಿ.                                                                                                                                                                                    ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ತಾಜಾ ತರಕಾರಿ-ಹಣ್ಣುಗಳನ್ನು ಬಳಸಿ. ಅದಕ್ಕಾಗಿ ಮಾರುಕಟ್ಟೆಯಲ್ಲಿ ದೊರಕುವ ಔಷಧಿಗಳು, ಟಾನಿಕ್‌ಗಳು, ಇನ್ನಿತರ ವಸ್ತುಗಳಿಗೆ ಮಾರುಹೋಗಬೇಡಿ.                                                                        ಬಿಸಿಬಿಸಿಯಾಗಿ ಆಹಾರವನ್ನು ಸೇವಿಸಿ. ಕುಡಿಯುವ ಕಾಫಿ-ಟೀ-ಹಾಲು ಎಲ್ಲವೂ ಬಿಸಿಯಾಗಿರಲಿ.                                                    ಬಿಸಿ ನೀರಿನಿಂದ ಆಗಾಗ ಬಾಯಿ ಮುಕ್ಕಳಿಸಿ. ದಿನಕ್ಕೆರಡು ಬಾರಿ ಬಿಸಿ ಹಬೆಯನ್ನು ಮೂಗು-ಬಾಯಿಯಲ್ಲಿ ಉಸಿರಾಡಿ. ೭೦ ಛ್ನಲ್ಲಿ ಕರೋನಾ ವೈರಾಣುಗಳು ಸಾಯುತ್ತವೆ.                                                                                                                                              ವಾರಕ್ಕೆ ಒಂದು ಹೊತ್ತು ಊಟ ಬಿಟ್ಟು ಉಪವಾಸ ಮಾಡಿ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.            ಸಾಧ್ಯವಾದಷ್ಟೂ ಮನೆಯಲ್ಲಿಯೇ ಕಾಯಿಪಲ್ಲೆ, ಹಣ್ಣುಗಳನ್ನು ಬೆಳೆಯಿರಿ. ಹಾಲು-ಮೊಸರು, ಮೊಟ್ಟೆ, ಮಾಂಸ ಇವೆಲ್ಲ ಸ್ಥಳೀಯವಾಗಿಯೇ ಉತ್ಪನ್ನವಾಗಲಿ.                                                                                                                                                ಆದಷ್ಟೂ ಸ್ಥಳೀಯ ದಿನಸಿ ಅಂಗಡಿಗಳಲ್ಲಿ ವ್ಯಾಪಾರ ಮಾಡಿ. ಮಾಲ್, ಸ್ವ-ಸಹಾಯ ಅಂಗಡಿಗನ್ನು ದೂರವಿಡಿ. ಅಲ್ಲಿ ವಸ್ತುಗಳನ್ನು ಯಾರು ಯಾರೋ ಮುಟ್ಟಿರುತ್ತಾರೆ.                                                                                                                              ಮನೆಗೆ ತಂದ ಹಾಲು, ತರಕಾರಿ, ಹಣ್ಣು ಮುಂತಾದ ವಸ್ತುಗಳನ್ನು ಮೊದಲು ತೊಳೆದು ಶುದ್ಧ ಮಾಡಿ ನಂತರ ಉಪಯೋಗಿಸಿ.

                                                                                                                                                                                                           -ಡಾ.ನರಸಿಂಹನ್, ವಿರಾಜಪೇಟೆ


No comments: