Wednesday, February 25, 2026

ಪರಿಸರ ಮತ್ತು ಜೀವವಿಜ್ಞಾನ

 ಪರಿಸರ ಮತ್ತು ಜೀವವಿಜ್ಞಾನ

ಇಡೀ ಭೂಮಿಯೇ ಪ್ರಕೃತಿಯ ಪ್ರಯೋಗ ಶಾಲೆ! ಕೋಟ್ಯಂತರ ಜೀವಿಗಳು ಭೂಮಿಯ ಮೇಲೆ ವಿಕಾಸ ಹೊಂದಿ, ಏಕಾಣು ಜೀವಿಗಳಿಂದ ಬಹು ಜೀವಕೋಶಗಳುಳ್ಳ ಜೀವಿಗಳು, ನಂತರ ಸಣ್ಣ ಸಣ್ಣ ಜಲಚರಗಳು, ಹುಳಗಳು, ನೀರಿನಿಂದ ಹೊರಬಂದ ದ್ವಿಚರಿಗಳು, ಅಲ್ಲಿಂದ ಮುಂದಕ್ಕೆ ಸರೀಸೃಪಗಳು, ಹಕ್ಕಿಗಳು, ಸ್ತನಿಗಳು, ಹೀಗೆ ಮುಂದುವರೆದು, ಕಟ್ಟಕಡೆಗೆ ಭೂಮಿಯ ಮೇಲೆ ವಿಕಾಸ ಹೊಂದಿದ ಜೀವಿಗಳೇ ಮಾನವರು. ಆದ್ದರಿಂದ ಜೀವವಿಕಾಸದಲ್ಲಿ ಎಲ್ಲರಿಗಿಂತ ಪರಿಪಕ್ವವಾದ ಜೀವಿಗಳು ನಾವು!

ನಮ್ಮ ಮೆದುಳು ಇತರ ಎಲ್ಲ ಪ್ರಾಣಿಗಳಿಗಿಂತ ಅತ್ಯಂತ ವಿಕಾಸ ಹೊಂದಿದ ಅಂಗವಾಗಿದೆ. ಉಳಿದೆಲ್ಲ ಪ್ರಾಣಿಗಳಿಗಿಂತಲೂ ಅಧಿಕವಾದ ಆಲೋಚನಾ ಶಕ್ತಿ, ಬುದ್ಧಿಶಕ್ತಿ ನಮಗಿದೆ. ಜೊತೆಗೆ ವಿವೇಚನಾ ಶಕ್ತಿ, ಅಂದರೆ ಯಾವುದು ಸರಿ ಯಾವುದು ತಪುö್ಪ ಎಂದು ತಾಳೆ ಹಾಕುವ ಪರಿಜ್ಞಾನ, ನಮಗಿದೆ. ಮುಂಬರುವ ಕಷ್ಟಗಳನ್ನು ಅರಿತು, ಅವುಗಳನ್ನು ಎದುರಿಸುವ, ಬುದ್ಧಿವಂತಿಕೆಯಿAದ ಪರಿಹರಿಸಿಕೊಳ್ಳುವ ಶಕ್ತಿ ಮತ್ತು ಇತರ ಎಲ್ಲ ಜೀವಿಗಳನ್ನು ಮೀರಿ ಬದುಕುವ ಕಲೆ ನಮಗಿದೆ. ಹಾಗೆಂದು ನಾವು ಜಂಬಪಡಬೇಕಿಲ್ಲ.

ಮತ್ತು ಹೀಗೆ ವಿಕಾಸ ಹೊಂದಿದ ಜೀವಿಗಳಲ್ಲಿ ಎಲ್ಲವೂ ಈವತ್ತು ಭೂಮಿಯ ಮೇಲೆ ಇಲ್ಲ. ವಿಜ್ಞಾನಿಗಳ ಪ್ರಕಾರ ಈ ಜೀವಿಗಳಲ್ಲಿ ಶೇಕಡ ೯೯ರಷ್ಟು ಪ್ರಬೇಧದ ಜೀವಿಗಳು ಕಾಲಾಕಾಲಕ್ಕೆ ನಶಿಸಿಹೋಗಿವೆ. ಅಂದರೆ, ಭೂಮಿಯ ಮೇಲೆ ಇಂದು ನಾವು ಕಾಣುತ್ತಿರುವುದು, ವಿಕಾಸ ಹೊಂದಿದ ಬರೇ ೧% ಪ್ರಬೇಧದ ಜೀವಿಗಳನ್ನು ಮಾತ್ರ. ಉಳಿದುವು ಏನಾದವು? ಅವು ನಶಿಸಿಹೋಗಲು ಕಾರಣವೇನು?

ಒಂದು ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ: ಇಷ್ಟೊಂದು ಜೀವಿಗಳು ಈ ಭೂಮಿಗೆ ಬೇಕಿತ್ತೆ? ಜಗವ ನಿರವಿಸಿದ ಕೈಯ್ಯೊಂದಾದೊಡೆ ಏಕಿಷ್ಟು ಜೀವಗತಿ? ಎಂದು ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಕೇಳುತ್ತಾರೆ. ಜಗತ್ತಿನಲ್ಲಿ ಇಷ್ಟೊಂದು ಪ್ರಬೇಧದ ಜೀವಿಗಳು ಕಂಡುಬರಲು ಬಲಿಷ್ಟ ಕಾರಣ ಇರಲೇ ಬೇಕಲ್ಲವೆ?

ನಾವು ಒಂದು ವಿಚಾರವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ಒಂದು ಜೀವಿ ತನ್ನ ಜೀವನ ಚಕ್ರದಲ್ಲಿ, ಪ್ರಕೃತಿಯಲ್ಲಿರುವ ಅನೇಕ ವಸ್ತುಗಳನ್ನು ಬಳಸಿಕೊಳ್ಳುತ್ತದೆ. ಅದು ಆ ಜೀವಿಯ ಆಹಾರವೇ ಆಗಿರಬಹುದು ಅಥವಾ ತನ್ನ ವಾಸಕ್ಕೆ ಬೇಕಾಗುವ ಸಲಕರಣೆಗಳಿರಬಹುದು. ಈ ಕಚ್ಚಾ ವಸ್ತುಗಳನ್ನು ಬಳಸುತ್ತಾ ಹೋದರೆ, ಅವುಗಳ ಪ್ರಮಾಣ ಕಡಿಮೆಯಾಗಿ ಮುಂದೊAದು ದಿನ ಅದು ಭೂಮಿಯ ಮೇಲೆ ಲಭಿಸದೇ ಹೋಗುತ್ತದೆ. ಹಾಗಾಗಿ ಈ ವಸ್ತುಗಳು ಉಪಯೋಗಿಲ್ಪಡುತ್ತಾ ಹೋದಂತೆ, ಅವುಗಳನ್ನು ಮತ್ತೊಂದು ಎಡೆಯಿಂದ ಪುನಃ ಪೂರೈಸುತ್ತಾ ಬರುವುದು ಅನಿವಾರ್ಯವಾಗುತ್ತದೆ. ನಿರಂತರವಾದ ಈ ಪುನಃ ಪೂರೈಕೆಯ ಕಾರ್ಯ ಒಂದು ವ್ಯವಸ್ಥಿತ ರೂಪದಲ್ಲಿರಬೇಕು. ಈ ಕೆಲಸವನ್ನು ಯಾರು ಮಾಡಬೇಕು?

ಇದಕ್ಕೆ ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ: ಕಾಡಿನಲ್ಲಿ ಒಂದು ಜಿಂಕೆಯಿದೆಯೆAದು ಭಾವಿಸಿ. ಅದು ಪ್ರತಿದಿನ ಹುಲ್ಲು ತಿನ್ನುತ್ತದೆ. ಅದರ ಸಂತತಿ ಅಧಿಕವಾಗುತ್ತ ಹೋದಂತೆ, ಕಾಡಿನಲ್ಲಿ ಹುಲ್ಲಿನ ಪ್ರಮಾಣ ಬರಬರುತ್ತಾ ಕಡಿಮೆಯಾಗುತ್ತದೆ. ಕೊನೆಗೆ ಒಂದು ದಿನ ಆ ಎಲ್ಲ ಜಿಂಕೆಗಳಿಗೆ ತಿನ್ನಲು ಹುಲ್ಲೇ ಇರುವುದಿಲ್ಲ. ಅಲ್ಲದೆ, ಜಿಂಕೆಗಳ ಸಂಖ್ಯೆ ಮಿತಿ ಮೀರಿ ಒಂದು ದಿನ, ಹುಲ್ಲು ತಿಂದು ಬದುಕುವ ಉಳಿದ ಪ್ರಾಣಿಗಳು ಹಸಿವೆಯಿಂದ ನರಳುವಂತಾಗುತ್ತವೆ. ಇಂತಹ ಸಂದರ್ಭ ಬಾರದಂತಿರಲು ಕಾಡಿನಲ್ಲಿ ಎರಡು ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತದೆ: ೧. ಜಿಂಕೆಗಳ ಸಂಖ್ಯೆಯ ನಿಯಂತ್ರಣ. ೨. ಬಳಕೆಯಾದ ಹುಲ್ಲನ್ನು ಮತ್ತೊಮ್ಮೆ ಬೆಳೆಸುವುದು.

ಕಾಡಿನಲ್ಲಿ ಜಿಂಕೆಗಳ ಸಂಖ್ಯೆಯನ್ನು ನಿಯಂತ್ರಿಸಲು ಹುಲಿಯಂತಹ ಮಾಂಸಾಹಾರಿ ಪ್ರಾಣಿ ಇರಬೇಕು. ಒಂದು ಹುಲಿಯು ವಾರಕ್ಕೊಂದು ಜಿಂಕೆಯನ್ನು ತಿನ್ನುತ್ತದೆ ಎಂದಿಟ್ಟುಕೊAಡರೆ, ಅದಕ್ಕೆ ವರ್ಷಕ್ಕೆ ೫೦ ಜಿಂಕೆಗಳು ಬೇಕೆಂದಾಯಿತು. ಹಾಗಾಗಬೇಕಿದ್ದಲ್ಲಿ, ಆ ಕಾಡಿನ ವ್ಯಾಪ್ತಿಯಲ್ಲಿ ಸುಮಾರು ಐನೂರು ಜಿಂಕೆಗಳಿರಬೇಕು. ಈ ಜಿಂಕೆಗಳಿಗೆ ಹುಲ್ಲು ಮತ್ತು ಹಸಿರುಕಾಡು ಬೆಳೆಸುವವರು ಬೇಕು. ಈ ಕಾರ್ಯವನ್ನು ಸಣ್ಣ ಸಣ್ಣ ಜೀವಿಗಳಾದ ಹಾವು, ಸರೀಸೃಪಗಳು, ಮೂಷಕಗಳು, ಕಪಿ, ಹಕ್ಕಿಗಳು ಮತ್ತು ಕೀಟಗಳು ಮುಂತಾದ ಪ್ರಾಣಿಗಳು ಮಾಡುತ್ತವೆ. ಕಾಡಿನಲ್ಲಿ ನೆಲದ ಉಳುಮೆ, ಗೊಬ್ಬರದ ಪೂರೈಕೆ, ಹೂಗಳ ಪರಾಗಸ್ಪರ್ಶ, ಬೀಜ ಪ್ರಸರಣ ಮುಂತಾದ ಕ್ರಿಯೆಗಳು ಈ ಪ್ರಾಣಿಗಳಿಂದ ನಡೆಯುತ್ತದೆ. ಈ ಒಟ್ಟಾರೆ ಪ್ರಕ್ರಿಯೆಗಳಿಂದ ಗಿಡ, ಮರ, ಬಳ್ಳಿ, ಪ್ರಾಣಿ, ಪಕ್ಷಿ, ಕೀಟಗಳಿಂದ ಕಾಡು ನಳನಳಿಸುತ್ತದೆ. ಈ ಕಾಡಿನ ರಾಜ ಹುಲಿ! ಆ ಒಂದು ಹುಲಿಗಾಗಿ ಇಡೀ ಕಾಡು ತಯಾರಾಗಿರುತ್ತದೆ. ಒಂದು ವೇಳೆ ಹುಲಿ ಸತ್ತುಹೋಯಿತೆಂದು ಭಾವಿಸೋಣ. ಆ ಹುಲಿ ಇಲ್ಲದಿದ್ದರೆ, ಬರೇ ಹತ್ತು ವರ್ಷಗಳಲ್ಲಿ ಇಡೀ ಕಾಡು ನಶಿಸಿಹೋಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ!

ಹೀಗೆ ಪ್ರಕೃತಿಯಲ್ಲಿ ಎಲ್ಲ ಜೀವಿಗಳೂ ಒಂದಕ್ಕೊAದು ಅವಲಂಬಿತವಾಗಿ, ಒಂದರ ಬೇಕು ಬೇಡಗಳನ್ನು ಮತ್ತೊಂದು ಜೀವಿ ಅರಿತು, ಒಂದಕ್ಕೊAದು ಪೂರಕವಾಗಿ ತಮ್ಮ ತಮ್ಮ ಜೀವನವನ್ನು ಸಾಗಿಸುತ್ತವೆ.

ಇಲ್ಲಿ, ಹುಲಿಗೇನೂ ಹಸಿರು ಕಾಡು ಬೇಕಿರಲಿಲ್ಲ. ಅದಕ್ಕೆ ದಣಿವಾದರೆ, ಒಂದು ಹುಲಿ ಮರದ ಕೆಳಗೇನೂ ವಿಶ್ರಮಿಸುವುದಿಲ್ಲ. ಆದರೆ, ಅದೇ ಕಾಡಿನ ಅಸ್ಥಿತ್ವಕ್ಕೆ ಆ ಒಂದು ಹುಲಿ ಅನಿವಾರ್ಯ! ಇದನ್ನೇ ನಾವು “ಜೀವವೈವಿಧ್ಯ” ಎನ್ನುತ್ತೇವೆ. ಪ್ರಕೃತಿಯಲ್ಲಿ ಪ್ರತಿಯೊಂದು ಜೀವದ್ರವ್ಯವೂ ಸದಾ ಕಾಲ ದೊರಕುವಂತಾಗಲು, ಪ್ರತಿಯೊಂದು ಜೀವಿಯೂ ಮತ್ತೊಂದು ಜೀವಿಗೆ ಪೂರಕವಾಗಿ ಬಾಳನ್ನು ಸಾಗಿಸುತ್ತದೆ; ಪ್ರಕೃತಿಗೆ ತನ್ನ ಅಮೂಲ್ಯವಾದ ಕೊಡುಗೆಯನ್ನು ಹಿಂದಿರುಗಿ ಕೊಡುತ್ತದೆ. ಭೂಮಿಯ ಈ ಪ್ರಯೋಗಾಲಯದಲ್ಲಿ ಯಾವ ಜೀವಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಸಮರ್ಥವಾಗಿರುತ್ತದೆಯೋ ಅದು ಸ್ವಾಭಾವಿಕವಾಗಿ ತನ್ನಂತಾನೇ ನಶಿಸಿಹೋಗುತ್ತದೆ.

ಈ ನೈಸರ್ಗಿಕ ಪ್ರಕ್ರಿಯೆಯಲ್ಲಿ ಯಾವುದೇ ಜೀವಿಗೂ ತಾನು ಈ ಅದ್ಭುತ ಕಾರ್ಯವನ್ನು ಮಾಡುತ್ತಿದ್ದೇನೆಂದು ತಿಳಿದೇ ಇರುವುದಿಲ್ಲ. ಯಾವೊಂದು ಪ್ರಾಣಿಯೂ ತನ್ನಿಂದಲೇ ಈ ಕಾರ್ಯವಾಯಿತು ಎಂದು ಹೇಳಿಕೊಂಡು ಬೀಗುವುದಿಲ್ಲ. ನಿಸರ್ಗದ ಪ್ರತಿಯೊಂದು ಜೀವವೂ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಒಂದಕ್ಕೊAದು ಪೂರಕವಾಗಿ, ನಿಸ್ಪöÈಹತೆಯಿಂದ, ತನ್ನ ಪಾತ್ರವನ್ನು ನಿಭಾಯಿಸಿ, ಇಳೆಯ ಇಡೀ ಜೀವಸಂಕುಲ ಯಾವುದೇ ಅಡೆತಡೆಗಳಿಲ್ಲದೆ ಬಾಳಾಟ ನಡೆಸಲು ಅನುವು ಮಾಡಿ ಕೊಡುತ್ತದೆ. ಈ ರೀತಿಯ ಸಹಬಾಳ್ವೆಯಿಂದ ಪ್ರಕೃತಿಯಲ್ಲಿ ಸದಾಕಾಲ ಒಂದು ರೀತಿಯ ಸಮತೋಲನ ಉಂಟಾಗುತ್ತದೆ. 

ಭೂಮಿಯ ಮೇಲೆ ಮಾನವನದ್ದು ಎಲ್ಲರಿಗಿಂತ ವಿಕಾಸ ಹೊಂದಿದ ಜೀವ. ನಿಜಕ್ಕೂ ಇದು ಪ್ರಕೃತಿಯ ನಾನ್ನೂರು ಕೋಟಿ ವರ್ಷಗಳ ಫಲವೆಂದೇ ಹೇಳಬೇಕು. ಇಡೀ ಭೂಮಿಯನ್ನು ತನ್ನ ಪ್ರಯೋಗಾಲಯವನ್ನಾಗಿಸಿಕೊಂಡು ಬ್ಯಾಕ್ಟೀರಿಯಾ, ಅಮೀಬಾ ಮುಂತಾದ ಜೀವಿಗಳಿಂದ ಹಿಡಿದು, ಚಿರತೆ, ಚಿಂಪಾAಜಿಯವರೆಗೆ, ಮನುಷ್ಯನ ದೇಹಕ್ಕೆ ಏನೆಲ್ಲ ರಾಸಾಯನಿಕ ದ್ರವ್ಯಗಳು ಅಗತ್ಯವೋ, ಅವನ ಅಂಗಾAಗಗಳಿಗೆ ಏನೆಲ್ಲ ಗುಣವಿಶೇಷಗಳು ಮುಖ್ಯವೋ, ಅವುಗಳನ್ನೆಲ್ಲ ನಮ್ಮ ಜೀವತಂತುಗಳಲ್ಲಿ ಕ್ರೋಢೀಕರಿಸಿ, ತಯಾರಿಸಲ್ಪಟ್ಟ ಒಟ್ಟಾರೆ ಸ್ವರೂಪವೇ ನಾವು!

ಇಂದು ಪ್ರಪಂಚದಲ್ಲಿ ವಾಸವಾಗಿರುವ ಎಲ್ಲ ಜೀವಿಗಳಿಗಿಂತ ನಾವೇ ಪ್ರಜ್ಞಾವಂತರು, ಮೇಧಾವಿಗಳು ಎಂದು ಬೀಗುತ್ತೇವೆ. ಆದರೆ, ಈ ಹಿಂದೆ ಭೂಮಿಯಲ್ಲಿ ವಿಕಾಸ ಹೊಂದಿದ ಜೀವಿಗಳಿಗೆ ಹೋಲಿಸಿದರೆ, ನಾವು ಆಡುಮಾತಿನಲ್ಲಿ ‘ಎಳಸು’ಗಳು! ೪೮ ಕೋಟಿ ವರ್ಷಗಳಿಂದ ಬಾಳ್ವೆ ನಡೆಸುತ್ತಿರುವ ಕೀಟಗಳು, ೩೬ ಕೋಟಿ ವರ್ಷಗಳಿಂದ ಬಾಳ್ವೆ ನಡೆಸುತ್ತಿರುವ ಕಪ್ಪೆಗಳು, ೧೬.೫ ಕೋಟಿ ವರ್ಷಗಳಿಂದ ಬಾಳ್ವೆ ನಡೆಸುತ್ತಿರುವ ಪಕ್ಷಿಗಳು, ೬.೫ ಕೋಟಿ ವರ್ಷಗಳಿಂದ ಬಾಳ್ವೆ ನಡೆಸುತ್ತಿರುವ ಇಲಿ-ಹೆಗ್ಗಣಗಳಿಗೆ ಹೋಲಿಸಿದರೆ, ನಾವು ಬಹಳ ಇತ್ತೀಚೆಗೆ ಬಂದವರು. ಹಾಗಾಗಿ ಮನುಷ್ಯನಿಗೆ ಭೂಮಿಯ ಮೇಲೆ ಬದುಕಿಬಾಳುವ ಕಲೆ ಇನ್ನೂ ಕರಗತವಾಗಿಲ್ಲವೆಂದೇ ಹೇಳಬಹುದು! 

Survival of the fittest ಎಂದು ವಿಕಾಸವಾದದ ಪ್ರತಿಪಾದಕ ಡಾರ್ವಿನ್ ಹೇಳಿದ್ದಾನಷ್ಟೆ. ಇಲ್ಲಿ Fitnessಎಂದರೇನು? ಸಾಮಾನ್ಯವಾಗಿ ಭೂಮಿಯ ಮೇಲಿರುವ ಎಲ್ಲ ಜೀವಿಗಳಿಗಿಂತ ನಾವು ಬುದ್ಧಿಜೀವಿಗಳು, ಬಲಶಾಲಿಗಳು ಮತ್ತು ಬಲಿಷ್ಟರು ಎಂದು ಭ್ರಮಿಸಿ, ಬೀಗುತ್ತೇವೆ. ಆದರೆ, ಪ್ರಕೃತಿಯ ಪರಿಭಾಷೆಯಲ್ಲಿ Fitness ಎಂದರೆ, ಭೂಮಿಯ ಮೇಲೆ Are you fit to live ಅಥವಾ ಮನುಷ್ಯನಿಗೆ ಭೂಮಿಯ ಮೇಲೆ ಬಾಳಲು ಅರ್ಹತೆಯಿದೆಯೇ ಎಂದು ಅರ್ಥೈಸಿಕೊಳ್ಳಬೇಕು. ಈ ಅರ್ಹತೆ ಇಲ್ಲದಿದ್ದಲ್ಲಿ ಅವನು ಭೂಮಿಗೆ ಭಾರ!

ಈ ಅರ್ಹತೆ ಬರಬೇಕಾದರೆ, ನಾವು ಏನು ಮಾಡಬೇಕು? ಮೊದಲಿಗೆ ಮನುಷ್ಯರು ಭೂಮಿಯ ಮೇಲೆ ನಡೆಯುತ್ತಿರುವ ನಿರಂತರ ಬಾಳಾಟದಲ್ಲಿ ತನ್ನ ಪಾತ್ರ ಬಹಳ ಪ್ರಮುಖವಾದದ್ದು ಎಂಬುದನ್ನು ಅರಿತು, ತಾವು ಭೂಮಿಗೆ ಅನಿವಾರ್ಯ ಎಂಬುದನ್ನು ಪ್ರಕೃತಿಗೆ ಸಾಬೀತುಪಡಿಸಬೇಕು. ಸಹಜೀವಿಗಳೊಡಗೂಡಿ ಅವುಗಳ ಬಾಳಿಗೆ ಪೂರಕವಾಗಿ ಸ್ಪಂದಿಸಬೇಕು. ಹಾಗಾಗಿ, ಪ್ರಕೃತಿಯಿಂದ ಎಲ್ಲವನ್ನೂ ಪಡೆದ ನಾವು ಈವರೆಗೆ, ಪ್ರತಿಯಾಗಿ ಯಾವ ಕೊಡುಗೆಯನ್ನು ಹಿಂದಿರುಗಿಸಿ ಕೊಟ್ಟಿದ್ದೇವೆ ಎಂಬುದನ್ನು ಗಂಭೀರವಾಗಿ ಆಲೋಚಿಸಲೇ ಬೇಕಾದ ಕಾಲ ಬಂದಿದೆ.

ಏಕೆAದರೆ, ಪ್ರಪಂಚದಲ್ಲಿ ಈವತ್ತು ಪ್ರಕೃತಿಗೆ ಪೂರಕವಲ್ಲದ, ಪ್ರಕೃತಿಗೆ ಹಿಂದಿರುಗಿ ಏನನ್ನೂ ಕೊಡದಿರುವ ಜೀವಿ ನಾವೊಬ್ಬರೆ! ಇದಲ್ಲದೆ, ಭೂಮಿಯ ಮೇಲಿರುವ ಎಲ್ಲ ಮೂಲದ್ರವ್ಯ ಸಂಪತ್ತುಗಳನ್ನು ನಿರಾತಂಕವಾಗಿ, ಸ್ವೇಚ್ಛೆಯಿಂದ, ಅನವಶ್ಯಕವಾಗಿ ಮತ್ತು ಅತಿಯಾಗಿ ಬಳಸಿಕೊಳ್ಳುತ್ತಿದ್ದೇವೆ. ಸ್ವಾರ್ಥ, ದುರಾಸೆ ಮತ್ತು ಕ್ರೌರ್ಯ: ಇವು ಭೂಮಿಯಲ್ಲಿ ವಾಸಿಸುವ ಪ್ರಾಣಿಗಳಲ್ಲಿ ಮನುಷ್ಯನಲ್ಲಿ ಮಾತ್ರ ಕಂಡುಬರುವ ವಿಶೇಷ ದುರ್ಗುಣಗಳು! ಈ ದುರ್ಗುಣಗಳ ದೆಸೆಯಿಂದ ನಾವಿಂದು ಭೂಮಿಗೆ ನಿಷ್ಪçಯೋಜಕರಾಗುತ್ತಿದ್ದೇವೆ. ಪ್ರಾಣಿ ಪಕ್ಷಿಗಳ ಬಗೆಗಿರುವ ಅಸಡ್ಡೆಯಿಂದಾಗಿ, ಅವುಗಳ ಮೇಲೆ ಕೂಡ ಇದರ ದುಷ್ಪರಿಣಾಮ ಕಂಡು ಬರುತ್ತಿದೆ. ಪ್ರಾಕೃತಿಕ ಸಂಪತ್ತಿನ ಅತಿಯಾದ ದುರ್ಬಳಕೆಯಿಂದ ನಿಸರ್ಗದಲ್ಲಿ ಅಸಮತೋಲನ ಉಂಟಾಗಿದೆ. ಇದು ನಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ.

ಈ ವಿಕೃತಿಗೆ ಮತ್ತೊಂದು ಕಾರಣ ಜನಸಂಖ್ಯಾ ಸ್ಫೋಟ. ಎಗ್ಗಿಲ್ಲದೆ ಏರುತ್ತಿರುವ ಜನಸಂಖ್ಯೆಯಿAದಾಗಿ, ಪ್ರಕೃತಿ ವಿನಾಶವಾಗುತ್ತಿದೆ. ಉದಾಹರಣೆಗೆ, ಪಟ್ಟಣಗಳೆಲ್ಲ ಕಾಂಕ್ರೀಟ್ ಕಾಡುಗಳಾಗುತ್ತಿವೆ. ಕಟ್ಟಡಗಳನ್ನು ಕಟ್ಟಲು ಅವಶ್ಯವಾದ ಕಬ್ಬಿಣ, ಕಲ್ಲು, ಮರಳು ಮುಂತಾದ ಪ್ರಾಕೃತಿಕ ಸಂಪತ್ತು ನಿರಂತರವಾಗಿ ಲೂಟಿಯಾಗುತ್ತಿದೆ. ಮರಗಿಡಗಳನ್ನಾದರೂ ನೆಟ್ಟು ಬೆಳೆಸಬಹುದು. ಆದರೆ, ಖನಿಜಗಳು, ಲೋಹಗಳು ಪುನಃ ತಯಾರಾಗಬೇಕಾದರೆ, ಲಕ್ಷಾಂತರ ವರ್ಷಗಳೇ ಬೇಕಲ್ಲವೆ?


ಇವೆಲ್ಲದರೊಂದಿಗೆ ನಮ್ಮ ಬದುಕಿನೊಂದಿಗೆ ಹಾಸುಹೊಕ್ಕಾಗಿರುವ ಮತ್ತೊಂದು ಅನಿವಾರ್ಯ ವಸ್ತು, ಪ್ಲಾಸ್ಟಿಕ್. ಈ ಪ್ಲಾಸ್ಟಿಕ್ ಎನ್ನುವುದು ಪೆಟ್ರೋಲಿಯಂ ಖನಿಜದ ಉಪಪದಾರ್ಥ. ಎಲ್ಲಿಯವರೆಗೆ ನಾವು ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ಮುಂತಾವುಗಳನ್ನು ಬಳಸುತ್ತೇವೆಯೋ ಅಲ್ಲಿಯವರೆಗೆ ಪ್ಲಾಸ್ಟಿಕ್ ಕೂಡ ನಮ್ಮೊಂದಿಗಿರುತ್ತದೆ! ಆದ್ದರಿಂದ ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಿ, ಅದರ ಮರುಬಳಕೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಹೆಚ್ಚು ಹೆಚ್ಚು ಕಾಲ ಸವೆಯದೆ, ಬಾಳುವಂತೆ ಇರಬೇಕು ಎಂದು ನಾವು ಬಯಸುವ ಮನೆ, ಬಹುಮಹಡಿ ಕಟ್ಟಡಗಳು, ರಸ್ತೆ, ಸೇತುವೆ, ಮುಂತಾದುವುಗಳ ನಿರ್ಮಾಣದಲ್ಲಿ, ಕೆಲವು ರಾಸಾಯನಿಕ ಬದಲಾವಣೆಗಳೊಂದಿಗೆ ವ್ಯಾಪಕವಾಗಿ ಪ್ಲಾಸ್ಟಿಕ್‌ನ್ನು ಬಳಸಬಹುದು.  

ಈ ಎಲ್ಲ ಕಾರಣಗಳಿಂದ ಈವತ್ತು ಭೂಮಿಯಿಂದ ನಶಿಸಿಹೋಗುವ ಜೀವಿಗಳ ಪಟ್ಟಿಯಲ್ಲಿ ನಾವೇ ಮೊದಲಿಗರಾಗಿ ನಿಂತಿದ್ದೇವೆ. ನಮಗೆ ದೇಹದ ರೋಗನಿರೋಧಕ ಶಕ್ತಿ ಉಳಿದ ಜೀವಿಗಳಷ್ಟು ಬೆಳೆದಿಲ್ಲ. ಆದ್ದರಿಂದ ಅತ್ಯಂತ ದುರ್ಬಲರಾದ ನಮಗೆ ಯಾವ ಹೊಸ ರೋಗವನ್ನೂ ತಡೆದುಕೊಳ್ಳುವ ಶಕ್ತಿಯಿಲ್ಲ. ಇದಲ್ಲದೆ, ನಾವು ಪ್ರಪಂಚದ ಎಲ್ಲೆಡೆ ವಾಸವಾಗಿದ್ದೇವೆ. ಪ್ರಪಂಚದಲ್ಲಿ ಒಂದೆಡೆಯಿAದ ಮತ್ತೊಂದೆಡೆಗೆ ನಾವು ಅತಿ ವೇಗದಿಂದ ನೆಲ, ಜಲ ಮತ್ತು ಆಕಾಶದಲ್ಲಿ ಪ್ರಯಾಯಾಣಿಸುವುದರಿಂದ ರೋಗಗಳನ್ನು ಅಷ್ಟೇ ವೇಗವಾಗಿ ಎಲ್ಲೆಡೆ ಹರಡುತ್ತಿದ್ದೇವೆ. ಇದರಿಂದ ಮನುಷ್ಯನಿಂದ ಮನುಷ್ಯನಿಗೆ ಸುಲಭವಾಗಿ ರೋಗ ಹರಡುತ್ತಿದೆ.

ಮಾನವನ ಸ್ವಾರ್ಥ, ದುರಾಸೆ ಮತ್ತು ಕ್ರೌರ್ಯದಿಂದಾಗಿ ಇಂದು ಎಷ್ಟೋ ಜೀವಿಗಳು ಕಣ್ಮರೆಯಾಗಿವೆ. ಜನಸಂಖ್ಯಾ ಸ್ಫೋಟ, ನಗರೀಕರಣ, ಔದ್ಯೋಗೀಕರಣ, ಆಧುನಿಕ ಬೇಸಾಯದಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆ, ರಾಸುಗಳ ಮೇವಿಗೆ ಕಾಡುಗಳ ಬಳಕೆ, ಪ್ರಾಣಿಹತ್ಯೆ ಮುಂತಾದ ದುಷ್ಪರಿಣಾಮಗಳಿಂದ ಇಂದು ಎಷ್ಟೋ ಜೀವಿಗಳು ವಿನಾಶದ ಹಾದಿ ಹಿಡಿದಿವೆ. ವೇಗವಾಗಿ ನಡೆಯುತ್ತಿರುವ ಈ ಬದಲಾವಣೆಗಳನ್ನು ಸೈರಿಸಿಕೊಂಡು ಬಾಳುವ ಶಕ್ತಿ ಕೆಲವು ಪ್ರಾಣಿಗಳಿಗಿದ್ದರೂ, ಕೆಲವು ಜೀವಿಗಳಿಗೆ ಇದು ದುಸ್ಸಾಹಸವಾಗಿ ತೋರುತ್ತದೆ. ಭೂ ಆವಾಸಗಳಲ್ಲಿ ಯಾವುದೇ ಬದಲಾವಣೆಯಾದರೂ, ಅದು ಜೀವವೈವಿಧ್ಯದ ಮೇಲೆ ನೇರ ಪರಿಣಾಮ ಬೀರುವುದು ಕಂಡುಬರುತ್ತದೆ. ಕೆಲವು ಜೀವಿಗಳ ಸಂಖ್ಯೆ ಮತ್ತು ನಡವಳಿಕೆಯಲ್ಲಿ ಗಣನೀಯ ವ್ಯತ್ಯಾಸಗಳಾಗಿ ಬಿಡುತ್ತವೆ. ಆರೋಗ್ಯಕರ ನೈಸರ್ಗಿಕ ವಾತಾವರಣದ ಸೂಚಕಗಳಾಗಿರುವ ಈ ಜೀವಿಗಳು ಪರಿಸರ ಸಂರಕ್ಷಣೆಯ ಕೀಲಿಕೈಗಳು. ಅವುಗಳ ಅಧ್ಯಯನ ಹಾಗೂ ಅರಿವು ಆ ಪರಿಸರದಲ್ಲಿ ಉಂಟಾಗಿರುವ ದುಷ್ಪರಿಣಾಮಗಳ ಆಳವನ್ನು ತೋರಿಸುತ್ತದೆ. ಪರಿಸರದ ಆರೋಗ್ಯ-ಅನಾರೋಗ್ಯಗಳಿಗೆ ಈ ಜೀವಿಗಳು ಅದ್ಭುತವಾದ ದಿಕ್ಸೂಚಿಗಳೆಂದು ವಿಜ್ಞಾನಿಗಳು ಪರಿಗಣಿಸಿದ್ದಾರೆ.

ಈ ದುಷ್ಪರಿಣಾಮಗಳು ಮುಂದೆ ಮನುಷ್ಯನ ಮೇಲೂ ಕಂಡುಬರುವುದು ನಿಸ್ಸಂಶಯ. ಉದಾಹರಣೆಗೆ, ಇತ್ತೀಚೆಗೆ ಅತಿಯಾಗಿ ಬಳಸುತ್ತಿರುವ ರಸಗೊಬ್ಬರಗಳು, ಕೀಟನಾಶಕ ಹಾಗೂ ಕ್ರಿಮಿನಾಶಕಗಳು ನಮ್ಮ ಆಹಾರ ಪದಾರ್ಥಗಳನ್ನು ವಿಷಪೂರಿತಗೊಳಿಸುತ್ತಿವೆ. ನಾವು ತಿಂದು ಬಿಸಾಡುವ ಆಹಾರ ಪದಾರ್ಥಗಳನ್ನೇ ತಿಂದು ಜೀವಿಸುವ ಕಾಗೆ, ಗುಬ್ಬಚ್ಚಿ ಮುಂತಾದ ಪಕ್ಷಿಗಳ ಸಂಖ್ಯೆ ಇಂದು ಇಳಿಮುಖವಾಗುತ್ತಿರುವುದನ್ನು ನೀವು ಗಮನಿಸಿರಬಹುದು. ಇದು ಮನುಷ್ಯನಿಗೆ ಹಕ್ಕಿಗಳು ನೀಡುತ್ತಿರುವ ಎಚ್ಚರಿಕೆಯ ಗಂಟೆ ಎಂದು ನಾವೆಲ್ಲ ತಿಳಿಯಬೇಕು. 

ಎಷ್ಟೋ ಅಂತರರಾಷ್ಟಿçÃಯ ನಿಯಮಗಳು, ನಿಬಂಧನೆಗಳು, ಕಟ್ಟುಪಾಡುಗಳಿದ್ದರೂ, ಮಾನವನ ದುರಾಸೆ, ಸ್ವಾರ್ಥ ಮತ್ತು ಕ್ರೌರ್ಯದ ಮುಂದೆ ಈ ಸಂಪತ್ತನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳೂ ನಿಷ್ಫಲವಾಗುತ್ತಿವೆ. ಪ್ರಾಕೃತಿಕ ಸಂಪತ್ತನ್ನು ಉಳಿಸಬೇಕು, ಪರಿಸರವನ್ನು ರಕ್ಷಿಸಬೇಕು ಮುಂತಾದ ಕೂಗು ಈಗ ಎಲ್ಲೆಡೆ ಕೇಳಿಬರುತ್ತಿದೆ. ಈ ದಿಶೆಯಲ್ಲಿ ಸರಕಾರ ಮತ್ತು ಅನೇಕ ಸಂಘ-ಸAಸ್ಥೆಗಳು ಹಲವು ಹತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು, ಅದರಲ್ಲೂ ಯುವಕ-ಯುವತಿಯರು ಹೆಚ್ಚಿನ ಕಳಕಳಿ ತೋರುತ್ತಿರುವುದು ಬಹಳ ಸಮಾಧಾನದ ವಿಷಯ. ಪ್ರಕೃತಿವೀಕ್ಷಣೆ ಮತ್ತು ಅವುಗಳ ಆವಾಸಗಳ ಅಧ್ಯಯನವೂ ಪ್ರಕೃತಿಯನ್ನು ವಿಸ್ತಾರವಾಗಿ-ಆಳವಾಗಿ ಅರಿಯಲು ಮಾತ್ರವಲ್ಲದೆ, ಆರೋಗ್ಯಪೂರ್ಣ ಪರಿಸರದ ಕಲ್ಪನೆ ಮತ್ತು ಜೀವವೈವಿಧ್ಯದ ವಿವಿಧ ಕೊಂಡಿಗಳ ತಿಳಿವಳಿಕೆ ಹೆಚ್ಚುವಲ್ಲಿಯೂ ಸಹಾಯ ಮಾಡುವುದು. 

ಪ್ರಾಕೃತಿಕ ಸೌಂದರ್ಯದ ಉಸಿರಾಗಿರುವ ವನ್ಯಜೀವಿ ಸಂಪತ್ತಿನ ಭವಿಷ್ಯ ಇಂದು ಕವಲುಹಾದಿಯಲ್ಲಿದೆ. ಒಂದು ಬದಿಯಲ್ಲಿ, ಜಾಗತಿಕ ಮಟ್ಟದಲ್ಲಿ ದೇಶದ ಸಾಂಸ್ಕöÈತಿಕ ಸಂಪತ್ತು ಹಾಗೂ ಪ್ರಕೃತಿ ಸಂಪತ್ತನ್ನು ಮುಂದಿನ ತಲೆಮಾರುಗಳಿಗೆ ಉಳಿಸಬೇಕು, ಎಂದು ಹಪಹಪಿಸುವ ಮಂದಿ ಮತ್ತು ಅವರೊಂದಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೈಜೋಡಿಸಿರುವ ಪ್ರಕೃತಿಪ್ರೇಮಿಗಳು; ಮತ್ತೊಂದು ಬದಿಯಲ್ಲಿ ವನ್ಯಸಂಪತ್ತು ಇರುವುದೇ ಹಣಗಳಿಸಲಿಕ್ಕಾಗಿ ಎಂದು ಭಾವಿಸುವ ಮತ್ತು ಕಳ್ಳಬೇಟೆ, ಮರ ವ್ಯಾಪಾರ, ಗಣಿಗಾರಿಕೆ, ಇಕೋ-ಟೂರಿಸಂ ಮುಂತಾದ ದಂಧೆ ನಡೆಸುವ ಹಾಗೂ ಅದರಲ್ಲಿಯೇ ಅಭಿವೃದ್ಧಿ ಇದೆ, ಇವೆಲ್ಲ ಜನರ ಉನ್ನತಿಗಾಗಿ ಮಾಡುತ್ತಿರುವ ಹೋರಾಟ ಎಂಬ ಭ್ರಮೆ ಹುಟ್ಟಿಸುವ ಮಂದಿ, ಅಲ್ಲದೆ ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಅವರೊಂದಿಗೆ ಬೆನ್ನೆಲುಬಾಗಿ ನಿಂತಿರುವ ಸ್ವಯಂಘೋಷಿತ ಬುದ್ಧಿಜೀವಿಗಳು ಮತ್ತು ಢೋಂಗೀ ಜನಸೇವಕರು. ಇವೆರಡರ ನಡುವೆ ಸಮನ್ವಯದ ಸಮತೋಲನ ಸಾಧ್ಯವಾಗಬೇಕು.

- ಡಾ| ಎಸ್. ವಿ. ನರಸಿಂಹನ್, ವಿರಾಜಪೇಟೆ


No comments: